ಬಿಹಾರ ವಿಧಾನಸಭಾ ಚುನಾವಣೆಯಲ್ಲಿ137 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಕೇವಲ ಒಂದು ಸ್ಥಾನ ಪಡೆದಿರುವ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು ನವೆಂಬರ್ ಅಂತ್ಯದಲ್ಲಿ ‘ಧನ್ಯವಾದ ಯಾತ್ರೆ’ ಕೈಗೊಳ್ಳಲಿದ್ದಾರೆ. ರಾಜ್ಯಾದ್ಯಂತ ‘ಬಿಹಾರ ಮೊದಲು, ಬಿಹಾರಿ ಮೊದಲು’ ಎಂಬ ಅಭಿಯಾನವನ್ನು ಬೆಂಬಲಿಸಿದ್ದಕ್ಕಾಗಿ ಮತದಾರರಿಗೆ ಧನ್ಯವಾದ ಸಲ್ಲಿಸಲು ಈ ಯಾತ್ರೆ ನಡೆಸುವುದಾಗಿ ತಿಳಿಸಿದ್ದಾರೆ.
31 ಕ್ಷೇತ್ರಗಳಲ್ಲಿಎಲ್‌ಜೆಪಿಯು ಮಹಾಘಟಬಂಧನ್ ಅಭ್ಯರ್ಥಿ ಮತ್ತು ಜನತಾದಳ (ಯುನೈಟೆಡ್) ನಡುವಿನ ಗೆಲುವಿನ ಅಂತರಕ್ಕಿಂತ ಹೆಚ್ಚಿನ ಮತ ಗಳಿಸಿದೆ. ಒಟ್ಟು ಎಲ್‌ಜೆಪಿ 25 ಲಕ್ಷ ಮತಗಳನ್ನು ಪಡೆದಿದೆ.
“ನಮ್ಮ ಪಕ್ಷ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಡಲು ನಿರ್ಧರಿಸಿದ್ದು ಇದೇ ಮೊದಲು. ನಮ್ಮ ‘‘ಬಿಹಾರ ಮೊದಲು, ಬಿಹಾರಿ ಮೊದಲು’ ಎಂಬ ಅಭಿಯಾನಕ್ಕೆ 25 ಲಕ್ಷ ಬಿಹಾರ ಮತದಾರರ ಪ್ರೀತಿ ಮತ್ತು ಬೆಂಬಲ ಸಿಕ್ಕಿದೆ. ಜನರು ನೀಡಿದ ಬೆಂಬಲಕ್ಕೆ ಧನ್ಯವಾದ ಹೇಳಲು ನಾನು ರಾಜ್ಯದ ಪ್ರತಿಯೊಂದು ಜಿಲ್ಲೆಗೆ ಭೇಟಿ ನೀಡಲಿದ್ದೇನೆ ”ಎಂದು ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರ: ನಿತೀಶ್ ಪಕ್ಷವನ್ನು ಸೋಲಿಸುವುದೇ ನನ್ನ ಗುರಿಯಾಗಿತ್ತು- ಚಿರಾಗ್ ಪಾಸ್ವಾನ್!
ಎಲ್‌ಜೆಪಿಯನ್ನು ಜೆಡಿಯು ಬಹಿರಂಗವಾಗಿಯೇ ಟೀಕಿಸುತ್ತಿರುವ ಈ ಸಮಯದಲ್ಲಿ ಚಿರಾಗ್ ಪಾಸ್ವಾನ್ ಧನ್ಯವಾದ ಯಾತ್ರೆಗೆ ಮುಂದಾಗಿದ್ದಾರೆ. ನವೆಂಬರ್ 20ರ ನಂತರ ಬಿಹಾರ ಖತ್ ಹಬ್ಬ ಮುಗಿದ ಬಳಿಕ ಯಾತ್ರೆ ಪ್ರಾರಂಭವಾಗಲಿದೆ.
137 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸಿದ್ದ ಚಿರಾಗ್ ಪಾಸ್ವಾನ್ ಕೇವಲ 1 ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿದ್ದಾರೆ. ಆದರೆ ಇವರ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದ ಕನಿಷ್ಟ 20 ಕ್ಷೇತ್ರಗಳಲ್ಲಿ ಜೆಡಿಯು ಸೋತಿರುವುದು ಗಮನಾರ್ಹ. ಆದರೆ ಈ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಈ ನಡೆಯಿಂದಾಗಿ ಸುಮಾರು 40 ಸ್ಥಾನಗಳನ್ನು ಜೆಡಿಯು ಕಳೆದುಕೊಂಡಿರಬಹುದು. “ಈ ಚುನಾವಣೆಯಲ್ಲಿ ಜೆಡಿಯು ಪಕ್ಷವನ್ನು ಸೋಲಿಸುವುದೇ ನನ್ನ ಗುರಿಯಾಗಿತ್ತು” ಎಂದು ಚಿರಾಗ್ ಪಾಸ್ವಾನ್ ಹೇಳಿದ್ದರು.
2015ರ ಚುನಾವಣೆಯಲ್ಲಿ 71 ಕ್ಷೇತ್ರಗಳಲ್ಲಿ ಗೆದ್ದಿದ್ದ ಜೆಡಿಯು ಈ ಚುನಾವಣೆಯಲ್ಲಿ 43 ಸ್ಥಾನಗಳಿಗೆ ಕುಸಿದಿದ್ದರೆ, ಆಗ 53 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ ಈಗ ತನ್ನ ಗೆಲುವನ್ನು 74ಕ್ಕೆ ಹೆಚ್ಚಿಸಿಕೊಂಡಿದೆ. ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾದಳ 75 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.


