ಪಂಜಾಬ್ ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷವು ರಾಜ್ಯದಿಂದ ನಿರ್ನಾಮವಾಗಲಿದೆ ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ.
ಕಾಂಗ್ರೆಸ್ ತೊರೆದು ಪಂಜಾಬ್ ಲೋಕ ಕಾಂಗ್ರೆಸ್ ಎಂಬ ಹೊಸ ಪಕ್ಷ ಸ್ಥಾಪಿಸಿರುವ ಅಮರಿಂದರ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ನನಗೆ ಪಟಿಯಾಲದಲ್ಲಿ ಗೆಲ್ಲುವುದು ಖಚಿತ, ನಾವು ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ನಾನು ಭಾವಿಸಿದ್ದೆನೆ. ಕಾಂಗ್ರೆಸ್‌ನವರು ಬೇರೆಯದೆ ಜಗತ್ತಿನಲ್ಲಿ ವಾಸಿಸುತ್ತಿದ್ದಾರೆ. ಚುನಾವಣೆ ಬಳಿಕ ಪಂಜಾಬ್‌ನಿಂದ ಕಾಂಗ್ರೆಸ್ ನಿರ್ನಾಮವಾಗಲಿದೆ” ಎಂದಿದ್ದಾರೆ.
“ಭಗವಂತ್ ಮಾನ್ ದೇಶ ವಿರೋಧಿಯಾಗಿದ್ದಾರೆ” ಎಂದಿರುವ ಅವರು, ತಮ್ಮ ಪಕ್ಷವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ, ಗ್ರೌಂಡ್ ರಿಪೋರ್ಟ್ನಲ್ಲಿ ಉತ್ತಮ ವರದಿಗಳು ಬರುತ್ತಿವೆ ಎಂದು ಪಟಿಯಾಲಾದಲ್ಲಿ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-1
ಈ ಬಾರಿ ಪಂಜಾಬ್‌ನಲ್ಲಿ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (ಎಎಪಿ), ಶಿರೋಮಣಿ ಅಕಾಲಿದಳ-ಬಹುಜನ ಸಮಾಜ ಪಕ್ಷ ಮೈತ್ರಿ, ಮತ್ತು ಭಾರತೀಯ ಜನತಾ ಪಾರ್ಟಿ-ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷದ ಒಕ್ಕೂಟವು ಈ ಬಾರಿ ಬಹುಕೋನ ಸ್ಪರ್ಧೆಗೆ ಸಾಕ್ಷಿಯಾಗಿವೆ.
ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು, ಚಮ್ಕೌರ್ ಸಾಹಿಬ್ ಮತ್ತು ಭದೌರ್ ಎಂಬ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಅಮೃತಸರದಲ್ಲಿ (ಪೂರ್ವ) ಎಸ್‌ಎಡಿಯ ಬಿಕ್ರಮ್ ಸಿಂಗ್ ಮಜಿಥಿಯಾ, ಎಎಪಿಯ ಜೀವನಜ್ಯೋತ್ ಕೌರ್ ಮತ್ತು ಬಿಜೆಪಿಯ ಜಗಮೋಹನ್ ಸಿಂಗ್ ರಾಜು ಅವರ ಪ್ರತಿಸ್ಪರ್ಧಿಯಾಗಿದ್ದಾರೆ.
ಸಂಗ್ರೂರ್‌ನ ಎಎಪಿ ಲೋಕಸಭಾ ಸಂಸದ ಮತ್ತು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾದ ಭಗವಂತ್ ಮಾನ್ ಧುರಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಪಂಜಾಬ್ ಲೋಕ ಕಾಂಗ್ರೆಸ್ ಮುಖ್ಯಸ್ಥ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಟಿಯಾಲ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದಾರೆ.
ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಶಿರೋಮಣಿ ಅಕಾಲಿದಳದ ಹಿರಿಯ ನಾಯಕ ಪ್ರಕಾಶ್ ಸಿಂಗ್ ಬಾದಲ್ ಲಂಬಿ ಕ್ಷೇತ್ರದಿಂದ ಕಣದಲ್ಲಿದ್ದು, ಎಸ್‌ಎಡಿ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಜಲಾಲಾಬಾದ್‌ನಿಂದ ಚುನಾವಣಾ ಸ್ಪರ್ಧೆಯಲ್ಲಿದ್ದಾರೆ. ಬಿಜೆಪಿ ತನ್ನ ಪಂಜಾಬ್ ಘಟಕದ ಮುಖ್ಯಸ್ಥ ಅಶ್ವನಿ ಕುಮಾರ್ ಶರ್ಮಾ ಅವರನ್ನು ಪಠಾಣ್‌ಕೋಟ್ ಕ್ಷೇತ್ರದಿಂದ ಕಣಕ್ಕಿಳಿಸಿದೆ.
ಪಂಜಾಬ್‌ನ 117 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆದಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ಬಿಜೆಪಿಯ ಜನವಿರೋಧಿ ನೀತಿಗಳ ವಿರುದ್ಧ ಅಭಿಯಾನ: ಉದ್ಧವ್ ಠಾಕ್ರೆ ಭೇಟಿಯಾದ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್


