ಕರ್ನಾಟಕದ 6 ಸಾವಿರ ಗ್ರಾಮ ಪಂಚಾಯತ್‌ಗಳಿಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸುವಂತೆ ಹೈಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶಿಸಿದ್ದ ಹಿನ್ನೆಲೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ರಾಜ್ಯದಲ್ಲಿ ಎರಡು ಹಂತಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿದ್ದು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಆಯೋಗ ಸ್ಪಷ್ಟವಾಗಿ ತಿಳಿಸಿದೆ.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗುತ್ತಾರೆ. ಈ ವಿಷಯದಲ್ಲಿ ಚುನಾವಣಾಧಿಕಾರಿಗಳಿಗೆ ಮಾಹಿತಿ ಇಲ್ಲವಾದಲ್ಲಿ ಅವರು ಯಾವುದೇ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ. ಆದರೆ ಒಂದು ವೇಳೆ ವಿರೋಧಿ ಅಭ್ಯರ್ಥಿಗಳು ಈ ಬಗ್ಗೆ ಮಾಹಿತಿಯನ್ನು ಸೂಕ್ತ ದೃಢೀಕರಣದೊಂದಿಗೆ ನೀಡಿದಲ್ಲಿ ಕ್ರಮತೆಗೆದುಕೊಳ್ಳಬೇಕು ಎಂದು ಚುನಾವಣಾ ಆಯೋಗ ಸೂಚಿಸಿದೆ.
ಚುನಾವಣಾ ಆಯೋಗ ಗ್ರಾಮ ಪಂಚಾಯತ್ ಚುನಾವಣೆ ಕುರಿತು ಕೆಲವು ಸ್ಪಷ್ಟೀಕರಣಗಳನ್ನು ನೀಡಿದೆ. ಜೊತೆಗೆ ಇವುಗಳ ಕುರಿತು ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಗಂಡ ಸರ್ಕಾರಿ ನೌಕರನಾಗಿದ್ದರೆ ಹೆಂಡತಿ ಚುನಾವಣೆಗೆ ಸ್ಪರ್ಧಿಸಬಹುದು. ಅದೇ ರೀತಿ ಹೆಂಡತಿ ಸರ್ಕಾರಿ ನೌಕರಳಾಗಿದ್ದಲ್ಲಿ ಗಂಡ ಕೂಡ ಸ್ಪರ್ಧೆ ಮಾಡಬಹುದಾಗಿದೆ.
ಇದನ್ನೂ ಓದಿ: ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಹೊರಡಿಸಿದ್ದ ಮೀಸಲಾತಿ ಅಧಿಸೂಚನೆ ರದ್ದುಪಡಿಸಿದ ಹೈಕೋರ್ಟ್
ಚುನಾವಣೆಗೆ ಸಾಮಾನ್ಯ ವರ್ಗಕ್ಕೆ 200 ರೂಪಾಯಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಹಾಗೂ ಮಹಿಳಾ ಮೀಸಲು ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ 100 ರೂಪಾಯಿ ಠೇವಣಿ ನಿಗದಿ ಮಾಡಲಾಗಿದೆ. ಇನ್ನು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ಹಾಗೂ ಸೂಚಕ ಗ್ರಾಮ ಪಂಚಾಯತ್ ಮತದಾರನಾಗಿರಬೇಕು.
ಅಭ್ಯರ್ಥಿಯ ನಾಮಪತ್ರ ವಾಪಸ್ಸು ಪಡೆಯಲು ಸೂಚಕರ ಬದಲಾಗಿ ಬೇರೊಬ್ಬರನ್ನು ಕಳುಹಿಸಿದರೆ ಅದನ್ನು ಪರಿಗಣಿಸಬೇಕಿಲ್ಲ. ಅಭ್ಯರ್ಥಿ, ಸೂಚಕ ಅಥವಾ ಅವನ ಏಜೆಂಟನ ಮುಖಾಂತರ ಮಾತ್ರ ನಾಮಪತ್ರ ಹಿಂತೆಗೆದುಕೊಳ್ಳಬಹುದು. ಒಬ್ಬ ಅಭ್ಯರ್ಥಿಗೆ ಸೂಚಕರಾಗಿರುವವರು ಸಹ ಅಭ್ಯರ್ಥಿಯಾಗಲು ಅವಕಾಶವಿದೆ. ಸೂಚಕನು ಇಷ್ಟೇ ಅಭ್ಯರ್ಥಿಗಳಿಗೆ ಸೂಚಕರಾಗಿರಬೇಕೆಂಬ ನಿಯಮವಿಲ್ಲ ಎಂದು ಆಯೋಗ ಹೇಳಿದೆ.


