ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಗೆ ಬಿಜೆಪಿ ಮಂಗಳವಾರ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಸರಿಪಡಿಸಿದ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ಯಲ್ಲಿ ಕೆಲಸ ಮಾಡುವುದು ಬಿಜೆಪಿ ನೀಡಿದ ಭರವಸೆಗಳಲ್ಲಿ ಒಂದಾಗಿದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ತಿಳಿಸಿದ್ದಾರೆ.
“ನಾವು ಅಸ್ಸಾಂನ ರಕ್ಷಣೆಗಾಗಿ ಸರಿಪಡಿಸಿದ ಎನ್‌ಆರ್‌ಸಿಯಲ್ಲಿ ಕೆಲಸ ಮಾಡುತ್ತೇವೆ. ಅಹೋಮ್ ನಾಗರಿಕತೆಯು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ನಿಜವಾದ ಭಾರತೀಯ ನಾಗರಿಕರನ್ನು ರಕ್ಷಿಸುತ್ತೇವೆ ಮತ್ತು ಒಳನುಸುಳುವವರನ್ನು ಪತ್ತೆ ಮಾಡುತ್ತೇವೆ” ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಅಸ್ಸಾಂನಲ್ಲಿ ನಡೆಸಿದ ಎನ್‌ಆರ್‌ಸಿ ವ್ಯಾಪಕ ಗೊಂದಲ, ಸಮಸ್ಯೆಗಳಿಗೆ ಕಾರಣವಾಗಿತ್ತು ಎಂಬುದನ್ನು ಇಲ್ಲಿ ಗಮನಿಸಬಹುದು.
ಗುವಾಹಟಿಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೋನೊವಾಲ್ ಮತ್ತು ರಾಜ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ ಅವರು ಪ್ರಣಾಳಿಕೆಯನ್ನು ಅನಾವರಣ ಮಾಡಿದರು.
ಸಮಗ್ರ ಅಭಿವೃದ್ಧಿಯ ಪಕ್ಷದ ಗುರಿಯ ಭಾಗವಾಗಿ ಸಂಪರ್ಕ, ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ಮಹಿಳಾ ಸಬಲೀಕರಣವನ್ನು ಬಲಪಡಿಸುವುದು ಪ್ರಣಾಳಿಕೆಯಲ್ಲಿನ ಉಪಕ್ರಮಗಳು ಎಂದು ನಡ್ಡಾ ಹೇಳಿದರು.
ಕ್ಷೇತ್ರ ಪುನರ್ವಿಂಗಡೆಯನ್ನು ಚುರುಕುಗೊಳಿಸುವುದು, 30 ಲಕ್ಷ ಅರ್ಹ ಕುಟುಂಬಗಳಿಗೆ ತಿಂಗಳಿಗೆ 3,000 ರೂ.ಗಳ ಆರ್ಥಿಕ ನೆರವು, ಯುವಕರಿಗೆ ಉದ್ಯೋಗಾವಕಾಶಗಳು, ಅಸ್ಸಾಂ ಅನ್ನು ದೇಶದ ಅತಿ ವೇಗದ ಉದ್ಯೋಗ ಸೃಷ್ಟಿಕರ್ತ ರಾಜ್ಯವನ್ನಾಗಿ ಮಾಡುವುದು ಮತ್ತು ಭೂ ಒಡೆತನದ ಹಕ್ಕುಗಳನ್ನು ನೀಡುವುದು-ಇವು ಪ್ರಣಾಳಿಕೆಯ ಮುಖ್ಯಾಂಶಗಳಾಗಿವೆ.
ಇದನ್ನೂ ಓದಿ: ಅಸ್ಸಾಂ ವಿಧಾನಸಭಾ ಚುನಾವಣೆ – ಕಾಂಗ್ರೆಸ್ ಪ್ರಣಾಳಿಕೆ ಇಂದು ಬಿಡುಗಡೆ; ನೀಡಿದ ಭರವಸೆಗಳೇನು?


