ಮುಂಬೈ ದಾಳಿಯ (26/11) ಆರೋಪಿ ತಹವ್ವುರ್ ರಾಣಾನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಗುರುವಾರ (ಏ.10) ರಾತ್ರಿ ಭಾರತಕ್ಕೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ 18 ದಿನಗಳ ಕಾಲ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕಸ್ಟಡಿಗೆ ನೀಡಿದೆ.
ಗುರುವಾರ ರಾತ್ರಿ ಅಮೆರಿಕದಿಂದ ಬಂದ ರಾಣಾನನ್ನು ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ಎನ್‌ಐಎ ಅಧಿಕಾರಿಗಳು, ಬಳಿಕ ಭಾರೀ ಭದ್ರತೆಯೊಂದಿಗೆ ಪಟಿಯಾಲ ಹೌಸ್‌ನಲ್ಲಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಚಂದರ್ ಜಿತ್ ಸಿಂಗ್ ಮುಂದೆ ಹಾಜರುಪಡಿಸಿದ್ದರು.
ವರದಿಗಳ ಪ್ರಕಾರ, ಇಮೇಲ್ ಸಂವಹನದಂತಹ ಪ್ರಮುಖ ಸಾಕ್ಷ್ಯಗಳನ್ನು ಉಲ್ಲೇಖಿಸಿ, ಎನ್‌ಐಎ ಆರಂಭದಲ್ಲಿ ರಾಣಾನನ್ನು 20 ದಿನಗಳ ಕಾಲ ಕಸ್ಟಡಿಗೆ ನಿಡುವಂತೆ ಮನವಿ ಮಾಡಿತ್ತು.
ನ್ಯಾಯಾಲಯಕ್ಕೆ ಸಲ್ಲಿಸಿದ ತನ್ನ ಅರ್ಜಿಯಲ್ಲಿ, ಶಂಕಿತ ಪಿತೂರಿಯ ತನಿಖೆಗೆ ರಾಣಾನ ಕಸ್ಟಡಿ ವಿಚಾರಣೆ ಅತ್ಯಗತ್ಯ ಎಂದು ಎನ್‌ಐಎ ವಾದಿಸಿತ್ತು. ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಗುರಿಯನ್ನು ಹೊಂದಿರುವ ಕ್ರಿಮಿನಲ್ ಸಂಚಿನಲ್ಲಿ ರಾಣಾ ಇತರರೊಂದಿಗೆ ಸಹಕರಿಸಿದ್ದಾನೆ ಎಂದು ಆರೋಪಿಸಿತ್ತು.
ವಿಚಾರಣೆಯ ಸಮಯದಲ್ಲಿ, ರಾಣಾ ಖಾಸಗಿ ವಕೀಲರನ್ನು ನೇಮಿಸಿಕೊಳ್ಳಲು ಬಯಸುತ್ತಾರಾ? ಇಲ್ಲ ನ್ಯಾಯಾಲಯದಿಂದ ಕಾನೂನು ನೆರವು ಪಡೆಯಲು ಬಯಸುತ್ತಾರಾ? ಎಂದು ನ್ಯಾಯಾಧೀಶರು ಕೇಳಿದ್ದಾರೆ.
ಎನ್‌ಐಎ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ದಯಾನ್ ಕೃಷ್ಣನ್, ಲಭ್ಯವಿರುವ ಸಾಕ್ಷ್ಯಗಳು ಮತ್ತು ಸಂಬಂಧಿತ ವಿಷಯಗಳನ್ನು ಪರಿಶೀಲಿಸಲು ಮತ್ತು ದೃಢೀಕರಿಸಲು ರಾಣಾನನ್ನು ಕಸ್ಟಡಿಗೆ ನೀಡುವುದು ಅಗತ್ಯ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ.
ರಾಣಾ ವಿರುದ್ಧದ ಆರೋಪಗಳನ್ನು ವಿವರಿಸಿ ಮತ್ತು ನ್ಯಾಯಾಧೀಶರ ಪರಿಗಣನೆಗೆ ಸಾಕ್ಷ್ಯಗಳ ಪಟ್ಟಿಯನ್ನು ಮಂಡಿಸಿ, ಎನ್‌ಐಎ ಪರವಾಗಿ ಕೃಷ್ಣನ್ ರಿಮಾಂಡ್ ಅರ್ಜಿಯನ್ನು ಸಲ್ಲಿಸಿದ್ದಾರೆ.
ಸಂಭಾವ್ಯ ಸಮಸ್ಯೆಗಳ ನಿರೀಕ್ಷೆಯಲ್ಲಿ ಹೆಡ್ಲಿ ರಾಣಾಗೆ ತನ್ನ ಆಸ್ತಿ ಮತ್ತು ಸಂಪನ್ಮೂಲಗಳ ವಿವರವಾದ ಪಟ್ಟಿಯನ್ನು ಇಮೇಲ್ ಮಾಡಿದ್ದ ಎಂದು ಎನ್‌ಐಎ ನ್ಯಾಯಾಲಯಕ್ಕೆ ತಿಳಿಸಿದೆ. ಈ ಸಂವಹನವು ಇಲ್ಯಾಸ್ ಕಾಶ್ಮೀರಿ ಮತ್ತು ಅಬ್ದುರ್ ರೆಹಮಾನ್ ಸೇರಿದಂತೆ ಇತರ ಆರೋಪಿಗಳ ಪಾತ್ರಗಳನ್ನು ಬಹಿರಂಗಪಡಿಸಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ರಾಣಾನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಮುನ್ನ, ದೆಹಲಿ ಪೊಲೀಸರು ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಮಾಧ್ಯಮ ಪ್ರತಿನಿಧಿಗಳು ಮತ್ತು ಸಾರ್ವಜನಿಕರನ್ನು ನ್ಯಾಯಾಲಯದ ಆವರಣದಿಂದ ಹೊರಗಡೆ ಕಳಿಸಿದ್ದರು.
ಎನ್‌ಐಎ ಮಹಾನಿರ್ದೇಶಕರು, ಇಬ್ಬರು ಇನ್ಸ್‌ಪೆಕ್ಟರ್ ಜನರಲ್‌ಗಳು, ಒಬ್ಬ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಮತ್ತು ಒಬ್ಬ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ 12 ಅಧಿಕಾರಿಗಳ ಉನ್ನತಾಧಿಕಾರದ ತಂಡ ರಾಣಾನನ್ನು ವಿಚಾರಣೆಗೆ ಒಳಪಡಿಸಲಿದೆ.
ಎನ್‌ಐಎ ಮೂಲಗಳ ಪ್ರಕಾರ, ತನಿಖೆಯಲ್ಲಿ ನೇರವಾಗಿ ಭಾಗಿಯಾಗಿರುವ ಈ 12 ಅಧಿಕಾರಿಗಳಿಗೆ ಮಾತ್ರ ರಾಣಾ ಇರುವ ಸೆಲ್‌ಗೆ ಪ್ರವೇಶ ನೀಡಲಾಗುತ್ತದೆ. ಬೇರೆ ಯಾವುದೇ ಅಧಿಕಾರಿ ಸೆಲ್‌ಗೆ ಹೋರಬೇಕಾದರೆ ಪೂರ್ವಾನುಮತಿ ಬೇಕಾಗುತ್ತದೆ. ಕೋರ್ ತಂಡದಲ್ಲಿರುವವರಲ್ಲಿ ಎನ್‌ಐಎ ಡಿಜಿ ಸದಾನಂದ ದಾತೆ, ಐಜಿ ಆಶಿಶ್ ಬಾತ್ರಾ ಮತ್ತು ಡಿಐಜಿ ಜಯಾ ರಾಯ್ ಸೇರಿದ್ದಾರೆ.
ರಾಣಾಗೆ ರೆಕಾರ್ಡ್ ಮಾಡಿದ ಧ್ವನಿ ಮಾದರಿಗಳು, ಛಾಯಾಚಿತ್ರಗಳು, ವಿಡಿಯೊಗಳು ಮತ್ತು ಇಮೇಲ್ ಟ್ರೇಲ್‌ಗಳು ಸೇರಿದಂತೆ ಹಲವಾರು ವಸ್ತುಗಳನ್ನು ತೋರಿಸಲಾಗುವುದು. ಅವುಗಳಲ್ಲಿ ಕೆಲವು ಪಾಕಿಸ್ತಾನದ ಗುಪ್ತಚರ ಜಾಲ ಮತ್ತು ಭಯೋತ್ಪಾದಕರೊಂದಿಗೆ ಆತನ ಸಂಪರ್ಕವನ್ನು ಖಚಿತಪಡಿಸುವ ನಿರೀಕ್ಷೆಯಿಂದ ಎಂದು ವರದಿಗಳು ಹೇಳಿವೆ.
ರಾಣಾನನ್ನು ಅಮೆರಿಕದ ಲಾಸ್ ಏಂಜಲೀಸ್‌ನಿಂದ ಭಾರತಕ್ಕೆ ಗಡೀಪಾರು ಮಾಡಿಸಿಕೊಂಡು ತರಲಾಗಿದೆ. 16 ವರ್ಷಗಳ ವಿಚಾರಣೆ ನಂತರ ಹಸ್ತಾಂತರ ನಡೆದಿದೆ.


