Homeಸಿನಿಮಾಕ್ರೀಡೆಉದ್ಯಮವಾಗಿ ರೂಪುಗೊಳ್ಳುತ್ತಿರುವ ಕ್ರಿಕೆಟ್ ಮೈದಾನಗಳು

ಉದ್ಯಮವಾಗಿ ರೂಪುಗೊಳ್ಳುತ್ತಿರುವ ಕ್ರಿಕೆಟ್ ಮೈದಾನಗಳು

- Advertisement -
- Advertisement -

ಮನುಷ್ಯನಿಗೆ ದೈಹಿಕ ಆರೋಗ್ಯ ಬಹಳ ಮುಖ್ಯ. ಯಾವುದಾದರೊಂದು ಕ್ರೀಡೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದರಿಂದ ಆತ ಉಲ್ಲಸಿತನಾಗಿ ಸದಾ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ. ಕ್ರೀಡೆಗೆ ವಯಸ್ಸಿನ ಮಿತಿ ಇಲ್ಲ. ಮನುಷ್ಯ ತನ್ನೆಲ್ಲಾ ವಯಸ್ಸಿನಲ್ಲಿಯೂ ವಿಧವಿಧವಾದ ಕ್ರೀಡೆಯಲ್ಲಿ ಪಾಲ್ಗೊಳ್ಳಬಹುದು. ಆಟದ ಜೊತೆಗಿನ ಬಾಳ್ವೆ ಆತನ ಆಯುಷ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದ್ದರಿಂದ ಎಲ್ಲ ಅಡೆತಡೆಗಳನ್ನು ಮೀರಿ, ಸಾಂಸಾರಿಕ ತೊಳಲಾಟದ ಮಧ್ಯೆಯೂ, ಬಿಡುವಿಲ್ಲದ ಜಂಜಾಟಗಳ ನಡುವೆಯೂ ಆಟದಲ್ಲಿ ಆಸಕ್ತಿವಹಿಸಿ ಆಡುವುದು ಒಳ್ಳೆಯ ಜೀವನಶೈಲಿಗೆ ಅಗತ್ಯ. “ಒಂದು ಕ್ರೀಡಾಂಗಣವು ನೂರು ಆಸ್ಪತ್ರೆಗಳಿಗೆ ಸಮ” ಎನ್ನುವ ಮಾತಿದೆ.

ಆರೋಗ್ಯಕರ ಜೀವನ ಶೈಲಿಗೆ ಅನುವು ಮಾಡಿಕೊಡುವ ದೈಹಿಕ ಚಟುವಟಿಕೆಗಳಿಗೆ ಹೆಚ್ಚು ಅಗತ್ಯ ಒಳ್ಳೆಯ ಆಟದ ಮೈದಾನಗಳು. ನಗರದ ಯಾಂತ್ರಿಕ ಬದುಕಿನ ನಡುವೆ ಕ್ರೀಡೆ ಮನುಷ್ಯನಿಗೆ ಉಲ್ಲಾಸದ ಉಸಿರನ್ನು ನೀಡುತ್ತದೆ. ನಗರವಾಸಿಗಳು ಹೆಚ್ಚಾಗಿ ಕ್ರಿಕೆಟ್, ಬ್ಯಾಡ್ಮಿಂಟನ್, ಫುಟ್‌ಬಾಲ್, ಹಾಕಿ ಇಂತಹ ಕ್ರೀಡೆಗಳನ್ನು ತಮಗೆ ಅನುಕೂಲವಾಗುವ ಸಮಯದಲ್ಲಿ ಆಡಲು ಇಚ್ಚಿಸುತ್ತಾರೆ. ಪ್ರಾಕ್ಟೀಸ್ ಮಾಡುವುದರಿಂದ ಹಿಡಿದು ಅಭ್ಯಾಸ ಪಂದ್ಯಗಳು, ಟೂರ್ನಮೆಂಟುಗಳಲ್ಲಿ ಭಾಗವಹಿಸುವ ತನಕ ಅವರ ಆಸಕ್ತಿ ಹೇಳಲಸದಳವಾಗಿದೆ. ಇದಕ್ಕಾಗಿ ಸಮಾನ ಮನಸ್ಕರ ಒಂದು ತಂಡ ರಚನೆಯಾಗಿರುತ್ತದೆ. ಇದು ಒಂದು ಪ್ರದೇಶ, ವಾರ್ಡು, ಬೀದಿ, ಸಂಸ್ಥೆ ಹೀಗೆ ಅನುಕೂಲಕ್ಕೆ ತಕ್ಕ ಹಾಗೆ ಒಂದು ಗುಂಪಿನ ತಂಡವಾಗಿ ರೂಪುಗೊಳ್ಳುತ್ತದೆ. ಹೀಗೆ ನಗರದ ಬಹುಪಾಲು ಮಂದಿಯಲ್ಲಿರುವ ಈ ಬಗೆಯ ಕ್ರೀಡಾಸಕ್ತಿಯನ್ನು ಗಮನಿಸಿ ಅನೇಕ ಮೈದಾನಗಳು ತಲೆ ಎತ್ತುತ್ತಿವೆ.

ಭಾರತದಲ್ಲಿ ವಿಶೇಷವಾಗಿ ಕ್ರಿಕೆಟ್‌ನ ಬಗ್ಗೆ ಆಸಕ್ತಿ ಹೆಚ್ಚಿರುವುದರಿಂದ ಬೆಂಗಳೂರು ನಗರದ ಸುತ್ತಮುತ್ತ ಕ್ರಿಕೆಟ್ ಮೈದಾನಗಳು ಹೆಚ್ಚು ತಲೆ ಎತ್ತಿವೆ. ಸರ್ಜಾಪುರ, ಹೊಸಕೋಟೆ, ಕೆಂಗೇರಿ, ಯಲಹಂಕದ ಆಸುಪಾಸು ಇಂತಹ ಕ್ರೀಡಾಂಗಣಗಳು ಇದ್ದು ಹೆಚ್ಚು ಬೇಡಿಕೆಯನ್ನು ಸೃಷ್ಟಿಸಿವೆ. ಹೀಗಾಗಿ ನಗರದ ಹೊರವಲಯದ ಭೂಮಾಲೀಕರು ತಮ್ಮ ಜಮೀನನ್ನು ಲಾಭದ ದೃಷ್ಟಿಯಿಂದ ಕ್ರೀಡಾ ಸೌಕರ್ಯಗಳಿಗೆ ಬಾಡಿಗೆಗೆ ಅಥವಾ ಗುತ್ತಿಗೆಗೆ ಕೊಡುತ್ತಿದ್ದಾರೆ. ವ್ಯವಸಾಯದ ಭೂಮಿಯಾಗಿದ್ದರೂ, ರೈತನಿಗೆ ಕಷ್ಟ, ಸಮಸ್ಯೆಗಳನ್ನೆ ತಂದೊಡ್ಡುತ್ತಿರುವ ಬೇಸಾಯವನ್ನು ಬಿಟ್ಟು ಒಂದಷ್ಟು ಆರ್ಥಿಕ ಸಬಲತೆಯನ್ನು ತಂದುಕೊಡಬಲ್ಲ ಈ ವ್ಯವಹಾರಕ್ಕೆ ಕೈಹಾಕುತ್ತಿದ್ದಾರೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ವ್ಯವಸಾಯ ಅವರಿಗೆ
ಲಾಭತಂದುಕೊಡುತ್ತಿಲ್ಲ. “ನಾ ಸಾಯ, ನೀ ಸಾಯ, ಮನೆ ಮಂದಿಯೆಲ್ಲ ಸಾಯ ಬೇಸಾಯ” ಎಂಬ ಗಾದೆ ಮಾತಿದೆ. ರೈತನೇ ಇಡೀ ರಾಷ್ಟ್ರಕ್ಕೆ ಅನ್ನದಾತನಾಗಿದ್ದರೂ, ಆತನ ಬೆಳೆಗೆ ಸಿಗಬೇಕಾಗಿರುವ ಕನಿಷ್ಠ ಬೆಂಬಲ ಬೆಲೆಯೂ ಸಿಗುತ್ತಿಲ್ಲ. ಹೀಗಾಗಿ ರೈತನು ಇಂತಹ ಪರ್ಯಾಯ ವ್ಯವಸ್ಥೆಗೆ ಕೈ ಹಾಕುತ್ತಿದ್ದಾನೆ. ಇದು ಅವನಿಗೆ ಲಾಭದಾಯಕವೂ ಕೂಡ ಆಗಿದೆ. ಏಕೆಂದರೆ ಆತ ಇಲ್ಲಿ ಬಂಡವಾಳವನ್ನು ಹಾಕಬೇಕಾದ ಅವಶ್ಯಕತೆಯಿಲ್ಲ. ಯಾರು ಜಮೀನನ್ನು ಮೈದಾನವನ್ನಾಗಿ ಪರಿವರ್ತಿಸಲು ಹೊರಟಿರುತ್ತಾನೋ ಆತನೇ ಎಲ್ಲಾ ಖರ್ಚನ್ನು ನಿಭಾಯಿಸಬೇಕಾಗುತ್ತದೆ. ಪಿಚ್ ತಯಾರಿಕೆ, ಮೈದಾನವನ್ನು ಸಮಗೊಳಿಸುವುದು, ಮೈದಾನದಲ್ಲಿರಬಹುದಾದ ಸಣ್ಣಸಣ್ಣ ಕಲ್ಲುಗಳನ್ನು ತೆಗೆಸುವುದು, ಬೌಂಡರಿ ಗೆರೆಯನ್ನು ಹಾಕಿಸುವುದು, ಪಿಚ್ ಮೇಲೆ ಹಾಕಲು ಮ್ಯಾಟ್ ತರುವುದು ಇತ್ಯಾದಿ. ಇಂತಹ ಖರ್ಚನ್ನು ಭರಿಸಿ ಮೈದಾನವನ್ನು ಆಡುವ ಮಟ್ಟಕ್ಕೆ ಸಜ್ಜುಗೊಳಿಸಲಾಗುತ್ತದೆ. ಮುಂದೆ ಇದರಿಂದ ಲಾಭದ ನಿರೀಕ್ಷೆಯನ್ನು ಮಾಡಲಾಗುತ್ತದೆ.

ಕ್ರಿಕೆಟ್‌ನಲ್ಲಿ ಹತ್ತು, ಇಪ್ಪತ್ತು, ಐವತ್ತು ಓವರುಗಳ ಪಂದ್ಯಗಳು ನಡೆಯುತ್ತವೆ. ಇದರಲ್ಲಿ ಟೆನ್ನಿಸ್ ಬಾಲ್ ಹಾಗೂ ಲೆದರ್ ಬಾಲ್ ಕ್ರಿಕೆಟ್ ಪಂದ್ಯಗಳು ಬೇರೆಬೇರೆಯಾಗಿ ಆಯೋಜನೆಯಾಗುತ್ತವೆ. ಟೆನ್ನಿಸ್ ಬಾಲ್ ಕ್ರಿಕೆಟ್‌ನಲ್ಲಿ ಕೇವಲ ಪಂದ್ಯಾವಳಿಗಳಿಗೆ (ಟೂರ್ನ್‌ಮೆಂಟ್) ಕ್ರೀಡಾಂಗಣ ಅಥವಾ ಮೈದಾನಗಳನ್ನು ಆಯೋಜಕರು ಬಾಡಿಗೆಗೆ ಪಡೆಯುವರು. ಲೆದರ್ ಬಾಲ್ ಕ್ರಿಕೆಟ್‌ನಲ್ಲಿ ಅಭ್ಯಾಸಕ್ಕೆ, ಅಭ್ಯಾಸ ಪಂದ್ಯಕ್ಕೆ, ಟೂರ್ನ್‌ಮೆಂಟ್‌ಗಳಿಗೆ ಕ್ರೀಡಾಂಗಣಗಳನ್ನು ಬಾಡಿಗೆಗೆ ಪಡೆಯಲಾಗುತ್ತದೆ. ಕ್ರೀಡಾಂಗಣದ ಮಾಲೀಕರು ಇದಕ್ಕೆ ಬೇರೆಬೇರೆ ದರವನ್ನು ನಿಗದಿ ಮಾಡುವರು. ಸಾಮಾನ್ಯವಾಗಿ ಒಂದು ದಿನದ ಪಂದ್ಯವಾದರೆ ’ಟರ್ಫ್’ ಕ್ರಿಕೆಟ್ ಮೈದಾನಕ್ಕೆ ಹತ್ತರಿಂದ ಹದಿನೈದು ಸಾವಿರದವರೆಗೆ ದರವಿರುತ್ತದೆ. ಅದು ಸೋಮವಾರದಿಂದ ಶುಕ್ರವಾರದವರೆಗಿದ್ದರೆ ಆರರಿಂದ ಎಂಟು ಸಾವಿರದವರೆಗಿರುತ್ತದೆ. ವಾರಾಂತ್ಯದಲ್ಲಿ ಅದರ ಬೆಲೆ ಕೊಂಚ ಜಾಸ್ತಿ. ಮ್ಯಾಟ್ ಹಾಕಿರುವ ಪಿಚ್ ಆಗಿದ್ದು ಸಾಮಾನ್ಯ ಮೈದಾನವಾಗಿದ್ದರೆ ಮೂರು ಸಾವಿರದಿಂದ ಐದು ಸಾವಿರದವರೆಗೆ ಲಭ್ಯವಾಗುತ್ತದೆ. ಪ್ರತಿದಿನ ಕೆ.ಎಸ್.ಸಿ.ಎ, ಶಾಲಾ, ಕಾಲೇಜು, ಖಾಸಗಿ ಪಂದ್ಯಾಟಗಳು ಸೇರಿ ಬೆಂಗಳೂರು ಸುತ್ತಮುತ್ತ ನೂರಾರು ಪಂದ್ಯಗಳು ನಡೆಯುತ್ತವೆ.

ಕೆಲವು ಮೈದಾನಗಳಲ್ಲಿ ಉದ್ದಗಲ ಅಧಿಕವಾಗಿದ್ದರೆ, ಹೆಚ್ಚುವರಿಯಾಗಿ ಅಭ್ಯಾಸದ ನೆಟ್‌ಗಳನ್ನು ಸಹ ಹಾಕಲಾಗುತ್ತದೆ. ಅದಕ್ಕೂ ಗಂಟೆಗೆ 200ರಿಂದ 500 ರೂ.ರವರೆಗೆ ನಿಗದಿಗೊಳಿಸಲಾಗಿರುತ್ತದೆ. ಕತ್ತಲಾದ ಮೇಲೆ ಅಭ್ಯಾಸ ಮಾಡುವ ಹಾಗೆ ಹೊನಲು ಬೆಳಕಿನ ವ್ಯವಸ್ಥೆ ಮಾಡಲಾಗಿರುತ್ತದೆ. ಸಾಯಂಕಾಲದ ಮೇಲೆ ಅಭ್ಯಾಸ ಮಾಡುವವರು ಗಂಟೆಯ ಲೆಕ್ಕದಂತೆ ಬಾಡಿಗೆಗೆ ಪಡೆದು ಆಡಬಹುದು. ಇಷ್ಟೇ ಅಲ್ಲದೇ ಬೇರೆ ಬೇರೆ ವಯೋಮಾನದವರಿಗೆ ’ಕ್ರಿಕೆಟ್ ಕ್ಯಾಂಪ್’ಗಳನ್ನು ಮಾಡುವರು. ಬೇಸಿಗೆ ಶಿಬಿರ, ವಾರ್ಷಿಕ ಶಿಬಿರದಂತಹ ಕಲಿಸುವ ಶಿಬಿರಗಳನ್ನು ಏರ್ಪಡಿಸಿ ಅದರಿಂದ ಸಾಕಷ್ಟು ಲಾಭವನ್ನು ಮಾಡಿಕೊಳ್ಳುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಹೀಗೆ ಲಾಭರಹಿತವಾಗಿದ್ದ ಭೂಮಿಯಲ್ಲಿ ಫಲವತ್ತಾದ ಲಾಭವನ್ನು ಕ್ರಿಕೆಟ್ ತಂದುಕೊಡುತ್ತಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ) ಬಹುಪಾಲು ಕ್ರೀಡಾಂಗಣಗಳನ್ನು ದೀರ್ಘಕಾಲಕ್ಕೆ ಬಾಡಿಗೆಗೆ ತೆಗೆದುಕೊಳ್ಳುತ್ತದೆ. ಅದು ಕೆ.ಎಸ್.ಸಿ.ಎ. ನಿಗದಿಪಡಿಸಿರುವ ಮಾನದಂಡದ ಪ್ರಕಾರವಿದ್ದರೆ ಮಾತ್ರ ಅಂತಹ ಕ್ರೀಡಾಂಗಣವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತದೆ. ಆ ಕ್ರೀಡಾಂಗಣದ ನಿರ್ವಹಣೆಯ ಜವಾಬ್ದಾರಿಯನ್ನು ಅದೇ ವಹಿಸಿಕೊಳ್ಳುತ್ತದೆ. ಹೀಗಿದ್ದರೂ ಖಾಸಗಿಯಾಗಿ ನಿರ್ಮಿಸಿರುವ ಕ್ರೀಡಾಂಗಣದ ಮಾಲೀಕರು ಕೆ.ಎಸ್.ಸಿ.ಎ.ಗೆ ಬಾಡಿಗೆಗೆ ಕೊಡಲು ಹಿಂದೇಟು ಹಾಕುವರು. ಏಕೆಂದರೆ ಒಮ್ಮೆ ಅವರಿಗೆ ಒಪ್ಪಿಸಿಬಿಟ್ಟರೆ ಕ್ರೀಡಾಂಗಣದ ಮಾಲೀಕರು ಬೇರೆ ಯಾವ ಟೂರ್ನ್‌ಮೆಂಟ್‌ಗಳನ್ನು ನಡೆಸಲಾಗಲೀ ಅಥವಾ ಬೇರೆಯವರಿಗೆ ಬಾಡಿಗೆಗೆ ಕೊಡಲಾಗಲೀ ಆಗುವುದಿಲ್ಲ. ಹಾಗಾಗಿ ಹೆಚ್ಚು ಲಾಭಾಂಶವನ್ನು ತರುವ ಖಾಸಗಿ ಟೂರ್ನ್‌ಮೆಂಟ್‌ಗಳನ್ನು ನಡೆಸಲು ಇಷ್ಟಪಡುವರು. ಹಲವು ತಂಡಗಳು ಭಾಗವಹಿಸುವ ಈ ಟೂರ್ನಿಗಳ ಪ್ರವೇಶ ಶುಲ್ಕ ಹತ್ತು ಸಾವಿರದಿಂದ ಮೂವತ್ತು ಸಾವಿರ ರೂ.ದವರೆಗೆ ಇರುತ್ತದೆ. ಇಷ್ಟು ಶುಲ್ಕ ಕಟ್ಟಿದರೂ ವಿಜೇತ ತಂಡಕ್ಕೆ ಬಹುಪಾಲು ಟೂರ್ನಿಗಳಲ್ಲಿ ನಗದು ಬಹುಮಾನವಿರುವುದಿಲ್ಲ. ಕೇವಲ ಟ್ರೋಫಿ ಮಾತ್ರ ಕೊಡಲಾಗುತ್ತದೆ.

ಕೋವಿಡ್ ಕಾಲದಲ್ಲಿ ಕೆ.ಎಸ್.ಸಿ.ಎ. ಟೂರ್ನ್‌ಮೆಂಟುಗಳು ನಡೆಯದಿದ್ದಾಗ ಖಾಸಗಿ ಟೂರ್ನಮೆಂಟುಗಳಿಗೆ ಹೆಚ್ಚಿನ ಬೇಡಿಕೆ ನಿರ್ಮಾಣವಾಯಿತು. ಖಾಸಗಿ ಟೂರ್ನಿಗಳಿಗೆ ರಾಜ್ಯಮಟ್ಟದಲ್ಲಿ ಆಡುವ ಆಟಗಾರರು ಕೂಡ ಲಗ್ಗೆ ಇಟ್ಟರು. ಕರ್ನಾಟಕ ಕ್ರಿಕೆಟ್ ತಂಡವನ್ನು ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಪ್ರತಿನಿಧಿಸಿರುವ ಲುವ್‌ನೀತ್ ಸಿಸೋಡಿಯಾ ಇಂತಹ ಟೂರ್ನಿಯಲ್ಲಿ ಆಡಿ ನಿಗದಿತ 50 ಓವರ್‌ಗಳ ಪಂದ್ಯಾಟದಲ್ಲಿ, 129 ಎಸೆತಗಳಲ್ಲಿ 312 ರನ್‌ಗಳನ್ನು ಬಾರಿಸಿದನು. ಇದರಿಂದ ರಾಷ್ಟ್ರಮಟ್ಟದಲ್ಲಿ ಆತನ ಹೆಸರಾಯಿತು. ಈ ವರ್ಷ ನಡೆಯುವ ಐ.ಪಿ.ಎಲ್. ಆಟಗಾರರ ಆಕ್ಷನ್‌ನಲ್ಲಿ ಸಿಸೋಡಿಯಾ ಹೆಸರಿರುವುದು ಖಾಸಗಿ ಟೂರ್ನಿಗಳಿಗೆ ಒಂದು ಬೆಲೆಯನ್ನು ತಂದುಕೊಟ್ಟಿದೆ. ಇದಕ್ಕೆ ಮಹತ್ವವನ್ನು ಒದಗಿಸಿಕೊಟ್ಟಿದೆ.

ಈ ಎಲ್ಲಾ ಪಂದ್ಯಾಟಗಳ ನೇರ ಸ್ಕೋರ್ ಬೋರ್ಡ್ ತೋರಿಸುವ (CRICheroes) ಆಪ್ ಇದೆ. ಯಾರು ಬೇಕಾದರೂ ಈ ಆಪ್‌ಅನ್ನು ತಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಉಪಯೋಗಿಸಬಹುದಾಗಿದೆ. ಪಂದ್ಯ ಪ್ರಾರಂಭವಾಗುವ ಮೊದಲು ಆಡುವ ಹನ್ನೊಂದರ ಬಳಗದ ಪ್ರತಿಯೊಬ್ಬರ ಮೊಬೈಲ್ ನಂಬರನ್ನು ಎರಡು ತಂಡದವರು ನಮೂದಿಸಬೇಕು. ಹೀಗೆ ಹಾಕಿದಾಗ ಮಾತ್ರ ಪಂದ್ಯದ ಸ್ಕೋರನ್ನು ಇಲ್ಲಿ ತೋರಿಸಲು ಸಾಧ್ಯವಾಗುತ್ತದೆ. ಇದರಿಂದ ಎಲ್ಲ ರೀತಿಯ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸುವ ಆಟಗಾರರ ಕ್ರಿಕೆಟ್ ಕೆರಿಯರ್‌ನ ವಿವರಗಳು ಸೃಷ್ಟಿಯಾಗುತ್ತಾ ಹೋಗುತ್ತವೆ. ಬಹುಪಾಲು ಕ್ರಿಕೆಟ್ ಪಂದ್ಯಗಳ ನೇರ ಸ್ಕೋರ್ ವಿವರ ಇದರಲ್ಲಿ ಸಿಗುತ್ತದೆ. ಕ್ರಿಕ್‌ಹೀರೋಸ್ (CRICheroes) ಕ್ರಿಕೆಟ್ ಆಟಗಾರರ ಮೆಚ್ಚಿನ ಆಪ್ ಆಗಿದೆ. ಬೆಂಗಳೂರಿನಂತಹ ನಗರದಲ್ಲಿ ಪ್ರತಿದಿನ ನಡೆಯುವ ನೂರಾರು ಪಂದ್ಯಗಳ, ಸಾವಿರಾರು ಆಟಗಾರರ ವಿವರಗಳು ಇಲ್ಲಿ ಸಿಗುತ್ತವೆ. ಈ ಆಪ್ ಅನೇಕ ಯುವ ಆಟಗಾರರ ಆಟವನ್ನು ಉತ್ತಮಗೊಳಿಸಿಕೊಳ್ಳಲು ಒಳನೋಟಗಳನ್ನು ಕೊಡುತ್ತದೆ.

ವ್ಯಾಗನ್ ವ್ಹೀಲ್, ಅಂಕಿಅಂಶ, ಟೂರ್ನ್‌ಮೆಂಟ್ ವಿವರಗಳು, ಆಯೋಜಕರ ವಿವರ, ಪಂದ್ಯ ನಡೆಯುವ ಸ್ಥಳ, ದಿನಾಂಕ, ಲೀಡರ್ ಬೋರ್ಡ್, ಟಾಪ್ ಪರ್ಫಾರ್‌ಮೆನ್ಸ್, ಮೈ ಪರ್ಫಾರ್‌ಮೆನ್ಸ್, ಮೈ ಟೀಮ್ಸ್, ಮೈ ಸ್ಟ್ಯಾಟಿಸ್ಟಿಕ್ಸ್, ಫೈಂಡ್ ಫ್ರೆಂಡ್ಸ್, ಕ್ರಿಕೆಟ್ ಅಸೋಸಿಯೇಶನ್ಸ್, ಕ್ರಿಕೆಟ್ ಕ್ಲಬ್ಸ್, ನ್ಯೂಸ್, ಕ್ವಿಜ಼್, ಪೋಲ್ಸ್, ಮಾರ್ಕೆಟಿಂಗ್ ಅಲ್ಲದೇ ಆಂಪೈರ್‌ಗಾಗಿ ನೊಂದಾವಣಿ, ಆಟಗಾರರ ನೊಂದಾವಣಿ, ಮೈದಾನದ ಲಭ್ಯತೆ, ಆಟಗಾರರ ಲಭ್ಯತೆ, ಸ್ಕೋರರ್ ಲಭ್ಯತೆ, ಕಾಮೆಂಟೇಟರ್‍ಸ್, ಅವರನ್ನು ಸಂರ್ಪಕಿಸಬಹುದಾದ ವಿಳಾಸ ಎಲ್ಲಾ ವಿವರಗಳು ಇದರಲ್ಲಿ ಸ್ಪಷ್ಟವಾಗಿವೆ.

ಹೀಗೆ ಆನ್‌ಲೈನ್ ಸ್ಕೋರಿಂಗ್, ಮೈದಾನಗಳ ಲಭ್ಯತೆ, ಹೆಚ್ಚುಹೆಚ್ಚು ಪಂದ್ಯಾವಳಿಗಳ ಆಯೋಜನೆ ಕ್ರಿಕೆಟ್ ಆಟಗಾರರನ್ನು ಸೆಳೆಯುತ್ತಿದೆ. ಈ ಕಡೆಗೆ ಹೆಚ್ಚು ಆಕರ್ಷಿತರಾಗುವಂತೆ ಮಾಡುತ್ತಿದೆ. ಬೆಂಗಳೂರು ನಗರದ ಮಧ್ಯದಲ್ಲಿ ಆಟ ಆಡಲು ಮೈದಾನಗಳು ಸಿಗುವುದಿಲ್ಲ. ಭಾನುವಾರಗಳು ಹಾಗೂ ರಜಾದಿನಗಳಲ್ಲಿ ಕ್ರೀಡಾಪಟುಗಳು ಹಣಕೊಡದೆ ಮುಕ್ತವಾಗಿ ಆಡುವ ಆಟದ ಮೈದಾನಗಳನ್ನು ಹುಡುಕಿಕೊಂಡು ಹೋಗುವರು. ಹೀಗೆ ಹೊರಟವರಿಗೆ ಕೆಲವೇಕೆಲವು ಮೈದಾನಗಳು ಆಡಲು ಸಿಗುತ್ತವೆ. ಆದರೆ ಅಲ್ಲಿ ನೂರಾರು ಮಂದಿ ಒಂದೇ ಮೈದಾನದಲ್ಲಿ ಆಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುತ್ತದೆ. ಯಾರ ಚೆಂಡು ಎಲ್ಲಿ ಹೋಗುತ್ತಿದೆ ಎನ್ನುವುದು ಗೊತ್ತಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಅನೇಕ ಜನರಿಗೆ
ಗಂಭೀರ ಗಾಯಗಳಾಗಿರುವುದೂ ಇದೆ. ಅನೇಕರು ದೃಷ್ಟಿಹೀನರಾಗಿರುವುದು ಇದೆ. ಹೀಗಾಗಿ ಕಾಂಕ್ರೀಟ್ ಕಾಡಿನ ಮಧ್ಯೆ ಆಟದ ಮೈದಾನಗಳ ಕೊರತೆ ಎದುರಿಸುತ್ತಿರುವುದರಿಂದ ಬೆಂಗಳೂರಿನ ಹೊರವರ್ತುಲದಲ್ಲಿ ಆಟದ ಮೈದಾನಗಳು ತಲೆ ಎತ್ತುತ್ತಿರುವುದು ಆಟಗಾರರ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ.

ಡಾ. ರಿಯಾಜ್ ಪಾಷಾ

ಡಾ. ರಿಯಾಜ್ ಪಾಷ
ರಿಯಾಜ್ ಅವರು ಪ್ರಸ್ತುತ ಯಲಹಂಕದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ಜನಪದ ಸಾಹಿತ್ಯದಲ್ಲಿ ವರ್ಗ ಸಂಘರ್ಷದ ನೆಲೆಗಳು” ವಿಷಯದ ಕುರಿತು ಸಂಶೋಧನೆ ನಡೆಸಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಹೆಚ್‌ಡಿ ಪದವಿ ಪಡೆದಿದ್ದಾರೆ.


ಇದನ್ನೂ ಓದಿ: ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೊಂದು ಭರವಸೆ: 16 ನೇ ವರ್ಷಕ್ಕೆ ಜೂನಿಯರ್ ನಂ 1 ಪಟ್ಟಕ್ಕೇರಿದ ತಸ್ನಿಮ್ ಮಿರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನಕಲಿ ಫಾರ್ಮ್ 7 ಸಲ್ಲಿಕೆ ವಿರುದ್ಧ ಕ್ರಮ ತೆಗೆದುಕೊಳ್ಳಿ..’; ಅಧಿಕಾರಿಗಳಿಗೆ ತೆಲಂಗಾಣ ಸಿಇಒ ಸೂಚನೆ

ತೆಲಂಗಾಣದಲ್ಲಿ ಫಾರ್ಮ್ 7 ರ ಮೂಲಕ ಮತದಾರರ ಹೆಸರುಗಳನ್ನು ಅಕ್ರಮವಾಗಿ ಅಳಿಸುತ್ತಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ (ಡಿಇಒ) ರಾಜ್ಯದ ಮುಖ್ಯ ಚುನಾವಣಾಧಿಕಾರಿ (ಸಿಇಒ)...

ಕರ್ನಾಟಕ ಎಸ್ಐಆರ್: ಮುಸ್ಲೀಮರನ್ನು ಗುರಿಯಾಗಿಸಿ ತೀರ್ಥಹಳ್ಳಿಯಲ್ಲಿ 81 ಮತದಾರರ ಹೆಸರು ಅಳಿಸಲು ಬಿಜೆಪಿ ಮುಖಂಡರ ಮನವಿ

ಶಿವಮೊಗ್ಗ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಯುತ್ತಿರುವ ನಡುವೆಯೇ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸುರುಳಿ ಬಾಳೆಬೈಲು ಗ್ರಾಮದಲ್ಲಿ 81 ಮತದಾರರ ಹೆಸರುಗಳನ್ನು ಕರಡು ಮತದಾರರ ಪಟ್ಟಿಯಿಂದ ಅಳಿಸುವಂತೆ ಬಿಜೆಪಿ...

ಮುಸ್ಲಿಂ ಮತದಾರರ ಹೆಸರು ಡಿಲೀಟ್ ಪ್ರಕರಣ: ಬಿಜೆಪಿ ನಾಯಕ ರವಿ ಪಾಟೀಲ್‌ಗೆ ನಿರೀಕ್ಷಣಾ ಜಾಮೀನು

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮುಸ್ಲಿಂ ಮತದಾರರ ಹೆಸರುಗಳನ್ನು ಮೋಸದಿಂದ ಡಿಲೀಟ್ ಮಾಡಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿಜೆಪಿ ನಾಯಕ ಡಾ. ರವಿ ಬಸಲಿಂಗಪ್ಪಗೌಡ ಪಾಟೀಲ್ ಅವರಿಗೆ ಕರ್ನಾಟಕದ ಬೆಳಗಾವಿಯ...

ಫಾರ್ಮ್-7 ಆಕ್ಷೇಪಣೆ; ಈವರೆಗೆ ಯಾವ ಮತದಾರರ ಹೆಸರನ್ನೂ ಕೈಬಿಟ್ಟಿಲ್ಲ ಎಂದ ಅನ್ಬುಕುಮಾರ್

ಫಾರ್ಮ್-7 ಮೂಲಕ ಅರ್ಹ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಅರ್ಜಿ ಸಲ್ಲಿಸಿದ ತಕ್ಷಣ ಮತದಾರರ ಹೆಸರು ಸ್ವಯಂಚಾಲಿತವಾಗಿ ಡಿಲೀಟ್ ಆಗುವುದಿಲ್ಲ. ಇಆರ್‌ಒಗಳ ಕಡ್ಡಾಯ ಪರಿಶೀಲನೆ, ಅರ್ಜಿ ಕೊಟ್ಟವರಿಗೆ ನೋಟೀಸ್ ಮತ್ತು ವಿಚಾರಣೆ ನಡೆಸಿದ...

‘ಚುನಾವಣಾ ಆಯೋಗದ ನಿರ್ಧಾರಗಳು ಸರ್ವಾನುಮತದಿಂದಲೇ ಆಗಬೇಕು’: ಗ್ಯಾನೇಶ್ ಕುಮಾರ್ ಪ್ರಕರಣದಲ್ಲಿ ಆಯೋಗಕ್ಕೆ ಸುಪ್ರೀಂ ನೋಟಿಸ್

ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರು ಇತರ ಇಬ್ಬರು ಚುನಾವಣಾ ಆಯುಕ್ತರ ಒಪ್ಪಿಗೆಯಿಲ್ಲದೆ ಚುನಾವಣಾ ಆಯೋಗದ ಮಹತ್ವದ ನಿರ್ಧಾರಗಳನ್ನು ಏಕಪಕ್ಷೀಯವಾಗಿ ಕೈಗೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು...

ಎಸ್‌ಐಆರ್; ಮತದಾರರ ಪಟ್ಟಿ ಅಕ್ರಮದಿಂದ ಪ್ರಜಾಪ್ರಭುತ್ವ ಅಪಾಯದಲ್ಲಿದೆ: ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ನಾರಿಮನ್ ಕಳವಳ

ದೇಶದಲ್ಲಿ ಜಾರಿಯಲ್ಲಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ಅಡಿಯಲ್ಲಿ ಲಕ್ಷಾಂತರ ನಾಗರಿಕರ ಹೆಸರುಗಳನ್ನು ಅಕ್ರಮವಾಗಿ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದ್ದು, ಇದರಿಂದ "ಪ್ರಜಾಪ್ರಭುತ್ವ ಹಾಗೂ ನಾಗರಿಕರ ಮತದಾನದ ಹಕ್ಕು ತೀವ್ರ ಅಪಾಯದಲ್ಲಿದೆ" ಎಂದು...

ಕಡೂರಿನಲ್ಲಿ 30 ಅರ್ಹ ಮತದಾರರ ಹೆಸರು ಅಳಿಸಲು ಫಾರಂ-7 ಸಲ್ಲಿಕೆ: ಮಾಜಿ ಕೌನ್ಸಿಲರ್ ಮತ್ತು ಬಿಜೆಪಿಯ ಸದಸ್ಯ ಮೋಹನ್ ಕುಮಾರ್ ವಿರುದ್ಧ ಆರೋಪ

ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲು ಫಾರಂ-7 ಅರ್ಜಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ರಾಜ್ಯಾದ್ಯಂತ ತೀವ್ರಗೊಂಡಿವೆ. ಇದರ ನಡುವೆಯೇ ಚಿಕ್ಕಮಗಳೂರು ಜಿಲ್ಲೆಯ...

ಮಹಾರಾಷ್ಟ್ರದ ಆಶ್ರಮ ಶಾಲೆಗಳಲ್ಲಿ ಆದಿವಾಸಿ ವಿದ್ಯಾರ್ಥಿಗಳ ಸರಣಿ ಸಾವು ಖಂಡಿಸಿ ಬೃಹತ್ ಪ್ರತಿಭಟನೆ: ಎನ್‌ಎಸ್‌ಯುಐ ಅಧ್ಯಕ್ಷ ಸೇರಿ ಹಲವರ ಬಂಧನ, ಪೊಲೀಸ್ ಕ್ರಮದ ವಿರುದ್ಧ ಆಕ್ರೋಶ!

ಮಹಾರಾಷ್ಟ್ರದ ಸರ್ಕಾರಿ ಹಾಗೂ ಅನುದಾನಿತ ಆಶ್ರಮ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಮತ್ತು ಭದ್ರತಾ ಲೋಪ ಖಂಡಿಸಿ ಮುಂಬೈನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದ ಆದಿವಾಸಿ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜ್ಯ ಬುಡಕಟ್ಟು ಕ್ಷೇಮಾಭಿವೃದ್ಧಿ...

ಬಿಜೆಪಿ ನಾಯಕರ ದ್ವೇಷ ಭಾಷಣ, ಹಿಂಸಾಚಾರ, ಜಾಮಿಯಾ ಪೊಲೀಸ್ ದೌರ್ಜನ್ಯ: ಸ್ವತಂತ್ರ ತನಿಖೆ ಕೋರಿದ್ದ ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್

ನವದೆಹಲಿ: 2020ರ ಈಶಾನ್ಯ ದೆಹಲಿ ಹಿಂಸಾಚಾರ, 2019ರ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಪೊಲೀಸ್ ಹಿಂಸಾಚಾರ ಹಾಗೂ ಹಿಂಸಾಚಾರಕ್ಕೂ ಮುನ್ನ ನಡೆದಿದ್ದ ಎನ್ನಲಾದ ದ್ವೇಷ ಭಾಷಣಗಳ ಕುರಿತು ಸ್ವತಂತ್ರ ತನಿಖೆ ನಡೆಸಬೇಕು...

ದೆಹಲಿ ಎಸಿಪಿ ಮೇಲಿನ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಯುವತಿ ಸೇರಿದಂತೆ 18 ಮಂದಿ ಪೊಲೀಸ್ ವಶಕ್ಕೆ

ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ತಮ್ಮ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದಾರೆ ಎಂದು ಆರೋಪಿಸಿರುವ ಯುವತಿ ಸೇರಿದಂತೆ 18 ಜನರನ್ನು ದೆಹಲಿ ಪೊಲೀಸರು ಸೋಮವಾರ (ಅ.5) ವಶಕ್ಕೆ ಪಡೆದಿದ್ದಾರೆ. ಆರೋಪಿತ ಅಧಿಕಾರಿಯ ವಿರುದ್ಧ...