ಕೃತಕ ಬಹುಮತವನ್ನು ಸೃಷ್ಟಿಮಾಡಲು ದೊಡ್ಡ ಅನುಕೂಲ ಕಲ್ಪಿಸುವ, ಒಂದೇ ಓಟು ಹೆಚ್ಚು ಪಡೆದವರು ಗೆದ್ದರು ಎನ್ನುವ ಚುನಾವಣಾ ಪದ್ಧತಿ ಚಳವಳಿಗಳಿಗೆ ಮುಳುವಾಗಿದೆ.
ಇದು ನಮ್ಮ ದೇಶದ ಆಳುವವರು ಆಯ್ಕೆ ಮಾಡಿಕೊಂಡ ಚುನಾವಣಾ ಪದ್ಧತಿ. ಇದಕ್ಕೆ first past the post system ಎಂದು ಕರೆಯುತ್ತಾರೆ ಎಂದು ಹಿಂದೆಯೇ ಹೇಳಿದ್ದೇನೆ. ಈ ಪದ್ಧತಿಗೆ ಕುದುರೆ ರೇಸ್ ಪದ್ಧತಿ ಎಂದೂ ಅಡ್ಡಹೆಸರಿದೆ. ಸುಳ್ಳು ಬಹುಮತ ಸೃಷ್ಟಿಸುವ ಪದ್ಧತಿ ಎಂದೂ ಕರೆಯಲ್ಪಟ್ಟಿದೆ.
ಈ ಪದ್ಧತಿಯಲ್ಲಿ ಗೆದ್ದವರಿಗೆ ಕೊಟ್ಟ ಮತಗಳಿಗೆ ಮಾತ್ರ ಬೆಲೆ. ಸೋತ ಉಳಿದವರಿಗೆ ನೀಡಲ್ಪಟ್ಟ ಮತಗಳು ಲೆಕ್ಕಕ್ಕೆ ಬರುವುದಿಲ್ಲ. ಜನರು ಹೇಳುವಂತೆ ಅವೆಲ್ಲ ವೇಸ್ಟ್. ಒಂದು ಮತಕ್ಷೇತ್ರದಲ್ಲಿ ನಾಲ್ಕೈದು ಅಭ್ಯರ್ಥಿಗಳು ಗಣನೀಯ ಮತಗಳನ್ನು ಪಡೆದಿದ್ದರೆ ಆಗ ಕೇವಲ ಶೇ.20-25ರಷ್ಟು ಮತಗಳನ್ನು ಪಡೆದವರೂ ಗೆಲ್ಲುತ್ತಾರೆ. ಅಂದರೆ ಈ ಅಭ್ಯರ್ಥಿ ಜನರನ್ನು ಪ್ರತಿನಿಧಿಸಲು ಸೂಕ್ತವಲ್ಲ ಎಂದು ಶೇ.75-80 ಜನ ಮತದಾರರು ತಿರಸ್ಕರಿಸಿದ್ದಾರಲ್ಲವೇ? ಅಂದರೆ ಬಹುಸಂಖ್ಯೆಯ ಜನರು ತಿರಸ್ಕರಿಸಿದ ಅಭ್ಯರ್ಥಿಯೇ ಗೆಲ್ಲುತ್ತಾನೆ. ಅಲ್ಲದೆ ಉಳಿದವರಿಗೆ ಹಾಕಿದ ಶೇ.75 ಮತದಾರರು ತಮ್ಮ ಮತಗಳ ಮೂಲಕ ಹೇಳುತ್ತಿರುವುದೇನು ಎಂಬುದಕ್ಕೆ ಬೆಲೆಯೇ ಇಲ್ಲವೆಂದರ್ಥ. ಇದೇ ಉದಾಹರಣೆಯನ್ನು ಇಡೀ ರಾಜ್ಯದ ವಿಧಾನಸಭಾ ಅಥವಾ ದೇಶದ ಲೋಕಸಭಾ ಚುನಾವಣೆಗೆ ಅನ್ವಯಿಸಿದರೆ ಒಟ್ಟಾರೆಯಾಗಿ ಶೇ.30ರಷ್ಟು ಮತಗಳನ್ನು ಪಡೆದ ಪಕ್ಷ ಬಹುಮತ ಗಳಿಸಿ ಆಡಳಿತ ನಡೆಸಲು ಅಧಿಕಾರ ಪಡೆಯುತ್ತದೆ.
ಹೀಗೆ ನಮ್ಮ ದೇಶದ ಪದ್ಧತಿಯಲ್ಲಿ ಜನರ ನಿಜ ಅಭಿಮತವನ್ನು ಗಾಳಿಗೆ ತೂರಲಾಗುತ್ತದೆ. ಪ್ರಜಾಪ್ರಭುತ್ವದ ಮುಖ್ಯ ಅವಶ್ಯಕತೆಯೇ ಜನರ ಅಭಿಪ್ರಾಯ ಅಥವಾ ಜನಮತ. ಜನರ ನಿಜ ಅಭಿಪ್ರಾಯಕ್ಕೆ ಬೆಲೆ ಸಿಗುವುದಿಲ್ಲವೆಂದಾದರೆ ಅಂತಹ ಚುನಾವಣಾ ಪದ್ಧತಿಯ ಮೇಲೆ ಹಿಡಿಯುವ ಅಧಿಕಾರ ಪ್ರಜಾಪ್ರಭುತ್ವ ಬದ್ಧವಲ್ಲ ಎಂದಾಗುತ್ತದೆ. ಸ್ವಾತಂತ್ರ್ಯ ಬಂದಾಗಿನಿಂದ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ಪ್ರಜಾಪ್ರಭುತ್ವವಲ್ಲದ ಸರ್ಕಾರಗಳು ಅಧಿಕಾರ ನಡೆಸಿವೆ.
ಗೆಲ್ಲಬಹುದೆನ್ನುವ ಅಭ್ಯರ್ಥಿಗಳ ಗೆಲುವು ಈ ಪದ್ಧತಿಯಲ್ಲಿ ಗೆದ್ದವರಿಗೆ ನೀಡಿದ ಮತ ಹೊರತುಪಡಿಸಿ ಉಳಿದೆಲ್ಲ ಮತಗಳಿಗೆ ಬೆಲೆ ಇಲ್ಲದಿರುವುದರಿಂದ ಮತದಾರರು ತಮ್ಮ ಮತ ವೇಸ್ಟ್ ಆಗುವುದು ಬೇಡವೆಂದುಕೊಳ್ಳುವುದು ಸಹಜ. ಗೆಲ್ಲುವ ಸಾಧ್ಯತೆ ಯಾರಿಗಿದೆ ಎಂದು ಸಾಮಾನ್ಯವಾಗಿ ಜನರೆಲ್ಲ ಭಾವಿಸುತ್ತಾರೋ ಅಥವಾ ಭಾವಿಸುವಂತೆ ಮಾಡಲಾಗುತ್ತದೋ ಅವರಿಗೆ ಇಷ್ಟವಿಲ್ಲವಾದರೂ ಓಟು ಚಲಾಯಿಸುತ್ತಾರೆ. ಬಹಳಷ್ಟು ಬಾರಿ ಇದು, ಒಬ್ಬ ಅಥವಾ ಆತನ ಪಕ್ಷ ಆಯ್ಕೆ ಆಗಬೇಕೆಂದು ಇಷ್ಟಪಟ್ಟು ಹಾಕಿದ ಮತಗಳಾಗಿರುವುದಿಲ್ಲ. ಇವರು ಕ್ಷೇತ್ರವನ್ನು ಪ್ರತಿನಿಧಿಸಲು ತಕ್ಕವರೆಂದಾಗಲೀ, ದೇಶವನ್ನಾಳಲು ಯೋಗ್ಯರೆಂದಾಗಲಿ ಅಲ್ಲ. ಒಟ್ಟಿನಲ್ಲಿ ಮೇಲಿನ ಉದಾಹರಣೆಯಂತೆ ಗೆದ್ದ ಪಕ್ಷ ಪಡೆದ ಶೇ.30ರಷ್ಟು ಜಾತಿ, ಮತ, ಹಣದ ಪ್ರಭಾವಿಲ್ಲದೆ ಚಲಾಯಿಸಿದ ಮತಗಳೆಂದು ಒಂದು ಗಳಿಗೆ ಭಾವಿಸಿದರೂ ಅವು ಕೂಡಾ ನೈಜ ಮತಗಳಲ್ಲ. ಜಾತಿ, ಮತ, ಹಣದ ಹಿಡಿತದಿಂದ ಪಡೆದ ಮತಗಳನ್ನೂ ಕಳೆದರೆ ಎಲ್ಲಿಯ ಜನಾಭಿಪ್ರಾಯ, ಎಲ್ಲಿಯ ಬಹುಮತ!
ಜನರಲ್ಲಿ ಮೂಡುವ ಅಭಿಪ್ರಾಯದಲ್ಲಿ ಯಾರು ಸೂಕ್ತ ಎನ್ನುವುದಕ್ಕಿಂತ, ಗೆಲ್ಲುವ ಅಭ್ಯರ್ಥಿ ಮುಖ್ಯ ಎಂದಾಯಿತು. ಹಾಗಾದರೆ ಗೆಲ್ಲುವ ಅಭ್ಯರ್ಥಿ ಎಂದು ಜನರಲ್ಲಿ ಅಭಿಪ್ರಾಯ ಮೂಡುವುದು ಹೇಗೆ?
ಇದರಲ್ಲಿಯೇ ರಾಜಕೀಯ ಪಕ್ಷಗಳ ಪಾತ್ರ ಮುಖ್ಯವಾಗುವುದು. ರಾಷ್ಟ್ರೀಯ ರಾಜಕೀಯ ನಾಯಕರುಗಳು ಸಾಮಾನ್ಯವಾಗಿ ಯಾವ ರಾಜಕೀಯ ತಿಳುವಳಿಕೆ ಇಲ್ಲದವರಾಗಿರುತ್ತಾರೆ. ಅವರಿಗೆ ನೀತಿ, ಆಡಳಿತದ ಬಗ್ಗೆ ಏನೋ ಒಂಚೂರು ಜನಜನಿತವಾಗಿ ಗೊತ್ತಿರುತ್ತದೆ. ಚುನಾವಣಾ ಅವಧಿಯಲ್ಲಿ ಮಾಧ್ಯಮಗಳು ತಮ್ಮನ್ನು ತಾವೇ ಮಾರಿಕೊಂಡು ಪಕ್ಷಗಳ ಹಾಗೂ ನಾಯಕರ ಹೆಸರನ್ನು ಬೊಬ್ಬಿರಿದು ಜನರಿಗೆ ಮುಟ್ಟಿಸುತ್ತವೆ. ಅದಕ್ಕೆ ತಕ್ಕ ಬೆಲೆಯನ್ನೂ ಪಡೆಯುತ್ತವೆ. ಆದರೆ ಅದಕ್ಕಿಂತ ಮುಖ್ಯವಾದದ್ದು ಚುನಾವಣಾ ಸಮಯದ ಹೊರಗೆ ಪಕ್ಷಗಳಿಗೆ ಮಾಧ್ಯಮಗಳು ನೀಡುವ ಪ್ರಚಾರ ಸಾವಿರಾರು ಕೋಟಿ ಮೌಲ್ಯದ್ದು. ಮಾಧ್ಯಮಗಳ ಒಡೆಯರು ಯಾರು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ದೇಶಾದ್ಯಂತ ಪ್ರಸಾರ ಜಾಲ ಹೊಂದಿರುವ ಮಾಧ್ಯಮಗಳಲ್ಲಿ ಸಾವಿರಾರು ಕೋಟಿ ಹೂಡಿರುವ ಕಾರ್ಪೊರೇಟ್ ಒಡೆಯರು ಯಾರು ತಮಗೆ ಅನುಕೂಲವಾಗಿರುತ್ತಾರೋ, ತಮ್ಮ ಲಾಭ, ದುರ್ಲಾಭಗಳನ್ನು ಬೆಳೆಸಲು ಸಹಾಯಕರಾಗಿರುತ್ತಾರೋ ಅವರಿಗೆ ಈ ಬಿಟ್ಟಿ ಪ್ರಚಾರ ಎಂಬ ದೇಣಿಗೆ ನೀಡುತ್ತಾರೆ.
ಸಾಮಾನ್ಯವಾಗಿ ದೇಶದಲ್ಲಿ ಮಾಧ್ಯಮಗಳೆಂದರೆ ಸುದ್ದಿಯನ್ನು ಪ್ರಾಮಾಣಿಕವಾಗಿ ಮುಟ್ಟಿಸುವವರು ಎಂಬ ಮೂಢನಂಬಿಕೆ ಇದೆ. ಈ ಹೊಸ ಕಾಲದ ಮೂಢನಂಬಿಕೆ ಜನರನ್ನು ಹಳ್ಳಕ್ಕೆ ದೂಡಿ ಅವರ ಬದುಕನ್ನೇ ಬರ್ಬಾದು ಮಾಡುತ್ತಾ ಬಂದಿದೆ. ಇದು ಸ್ವಾತಂತ್ರ್ಯ ಬಂದಾಗಿನಿಂದಲೇ ನಡೆಯುತ್ತಿರುವ ವಿದ್ಯಮಾನ. ಕೇವಲ ಪತ್ರಿಕೆಗಳು ಮಾತ್ರ ಇದ್ದ ಕಾಲದಲ್ಲಿ ಒಂದು ಊರಿಗೆ ಎರಡೋ ಮೂರೋ ಪತ್ರಿಕೆಗಳು ಮಾತ್ರ, ಅದೂ ಶ್ರೀಮಂತರ ಮನೆಯಲ್ಲಿ ಕಾಣುತ್ತಿದ್ದವು. ಕೇವಲ ಅಕ್ಷರಸ್ಥರ ತಿಳಿವಳಿಕೆಯ ಸಾಧನವಾಗಿದ್ದವು. ಆಗ ಜನಗಳನ್ನು ಕರಪತ್ರ, ಪೋಸ್ಟರ್, ಮನೆಮನೆ ಪ್ರಚಾರ ಇವುಗಳ ಮೂಲಕ ತಲುಪುವುದಿತ್ತು. 90ರ ದಶಕದ ನಂತರ ಟಿವಿಗಳು ಅಸ್ತಿತ್ವಕ್ಕೆ ಬಂದ ಕಾಲದಲ್ಲಿ ಅವು ಮನೆಮನೆಗೂ ಮುಟ್ಟಿವೆ. ದೇಶದ ದೊಡ್ಡ ಪಕ್ಷಗಳ ನಾಯಕರು, ಅವರ ಮಾತುಗಳು, ಮೂತಿಗಳು ಪ್ರತಿ ಮನೆಯವರಿಗೆ ಪ್ರತಿ ದಿನ ದರ್ಶನ ನೀಡುತ್ತಿವೆ. ಉಳಿದ ಹಳೆಯ ಪ್ರಚಾರ ಸಾಧನಗಳು ಇವುಗಳ ಮುಂದೆ ನಗಣ್ಯವಾಗುತ್ತವೆ. ಮತದಾರರ ಮನಸ್ಸಿನ ಮೇಲೆ ಛಾಪು ಮೂಡಿಸಲು ಕಷ್ಟವೆನ್ನುವ ಪರಿಸ್ಥಿತಿ ಒದಗಿದೆ. ಈಗ ಮೋದಿ ಕಾಲದಲ್ಲಂತೂ ಒಂದು ಕಡೆ ಸರ್ಕಾರಿ ಜಾಹೀರಾತುಗಳ ಪ್ರಮಾಣವನ್ನು ಹಿಂದೆಂದೂ ಇಲ್ಲದಂತೆ ಹೆಚ್ಚಿಸಲಾಗಿದೆ. ಇದರಿಂದ ಸಣ್ಣ ಬಂಡವಾಳದ ಪ್ರಾದೇಶಿಕ ಮಾಧ್ಯಮಗಳೂ ಜಾಹೀರಾತಿನ ಆಸೆಗೆ ಆಳುವ ಪಕ್ಷ ಹೇಳಿದಂತೆ ಕುಣಿಯುವಂತಾಗಿವೆ. ಜೊತೆಗೆ ಕಾನೂನುಗಳು, ಸಿಬಿಐ, ಆದಾಯ ತೆರಿಗೆ ಇಲಾಖೆ ಇತ್ಯಾದಿಗಳನ್ನು ಛೂಬಿಡುವ ಮೂಲಕ ಮಾಧ್ಯಮಗಳ ಮಾಲೀಕರನ್ನು ನಿಯಂತ್ರಿಸಲಾಗುತ್ತಿದೆ.
ಇಂದು ಬಹು ದೊಡ್ಡ ಪ್ರಮಾಣದಲ್ಲಿ ಆಗಿರುವ, ಆಗುತ್ತಿರುವ ಸಂಪತ್ತಿನ ಕೇಂದ್ರೀಕರಣ ತನ್ನ ಜೊತೆಯಲ್ಲೇ ಮಾಧ್ಯಮಗಳ ಒಡೆತನದ ಕೇಂದ್ರೀಕರಣವನ್ನೂ ಹೆಚ್ಚಿಸಿಕೊಂಡಿದೆ. ಈ ಮಾಧ್ಯಮಗಳ ಕೇಂದ್ರೀಕರಣ ಪ್ರಭಾವ ಹೇಗಿದೆಯೆಂದರೆ: ಮೋದಿ ಆಳ್ವಿಕೆಯ ಸಮಯದಲ್ಲಿ ನಡೆದ ಗುಜರಾತ್ ನರಮೇಧದ ಕ್ರೌರ್ಯದ ಬಗ್ಗೆ ಜನರಿಗಿದ್ದ ಅಸಹ್ಯ ಭಾವನೆಯನ್ನು ನಾವು ತೊಲಗಿಸುತ್ತೇವೆ; ಅಭಿವೃದ್ಧಿಯ ಹರಿಕಾರರೆಂದು ಬಿಂಬಿಸುತ್ತೇವೆ ಚಿಂತಿಸದಿರಿ ಎಂದು ಅಶ್ವಾಸನೆ ಕೊಡುವುದು ಮಾತ್ರವಲ್ಲ, ಅದರಲ್ಲಿ ಯಶಸ್ವಿಯಾಗುವಷ್ಟು.
ಇಂತಹ ಪರಿಸ್ಥಿತಿಯಲ್ಲಿ ಗೆಲ್ಲುವ ಅಭ್ಯರ್ಥಿ ಯಾರೆಂದು ಜನ ತೀರ್ಮಾನಿಸುವುದು ಟಿವಿಗಳ ಕೈಯ್ಯಲ್ಲಿದೆ ಎಂಬಂತಾಗಿದೆ. ಒಂದು ಕಡೆ ಗೆಲ್ಲುವವರಿಗೆ ಮಾತ್ರ ಮತದಾನ ಮಾಡುವ ಪದ್ಧತಿ, ಮತ್ತೊಂದು ಕಡೆ ಕಾರ್ಪೊರೆಟ್ ಮತ್ತು ಮಾಧ್ಯಮಗಳ ಕೇಂದ್ರೀಕರಣ ರಾಜಕೀಯವನ್ನು ಎರಡು ಪಕ್ಷಗಳ ಪದ್ಧತಿಯ ಕಡೆಗೆ ದೂಡುತ್ತದೆ. ಉಳಿದ ಪಕ್ಷಗಳ ಅಸ್ತಿತ್ವಕ್ಕೆ ಧಕ್ಕೆ ತರುತ್ತದೆ. ಇಂದು ನಮ್ಮ ದೇಶದಲ್ಲಿ ಹಲವು ಪಕ್ಷಗಳು ಇನ್ನೂ ಅಸ್ತಿತ್ವ ಉಳಿಸಿಕೊಂಡಿವೆ ಎಂದರೆ ಅವೂ ಕೂಡಾ ಈ ಎರಡು ಪಕ್ಷಗಳ ಪದ್ಧತಿಯ ಲಾಭ ಪಡೆದಂತಹವೇ. ಒಂದೊಂದು ರಾಜ್ಯದಲ್ಲೂ ಈ ಎರಡು ಪಕ್ಷಗಳು ಬೇರೆಬೇರೆಯವಾದ್ದರಿಂದ ರಾಷ್ಟ್ರಮಟ್ಟದಲ್ಲಿ ಹಲವು ಪಕ್ಷಗಳು ರಂಗದ ಮೇಲೆ ಕಾಣುತ್ತಿವೆ. ಆದರೆ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿರುವ ಪ್ರತಿ ರಾಜ್ಯದಲ್ಲೂ ಆ ಪ್ರಾದೇಶಿಕ ಪಕ್ಷಗಳ ಅಸ್ತಿತ್ವವನ್ನು ಇಲ್ಲದಂತೆ ಮಾಡುವ ಅನೇಕ ತಂತ್ರ, ಕುತಂತ್ರಗಳು ಮೋದಿ-ಆರೆಸ್ಸೆಸ್ ದರ್ಬಾರಿನಲ್ಲಿ ಪ್ರತಿನಿತ್ಯ ನಡೆಯುತ್ತಿದೆ. ಆ ಮೂಲಕ ದೇಶದ ಪ್ರಜಾಪ್ರಭುತ್ವವನ್ನು ಅಣಕವಾಗಿಸುವ ಪ್ರಯತ್ನ ನಡೆಯುತ್ತಿದೆ.
ಒಂದು ಓಟು ಹೆಚ್ಚು ಗಳಿಸಿದವ ಗೆದ್ದ ಎಂಬ ಪದ್ಧತಿ ಮತ್ತು ಅದರ ಪರಿಣಾಮವಾದ ಎರಡು ಪಕ್ಷಗಳ ಕಡೆಗೆ ತುಯ್ತ ಮೈತ್ರಿ ರಾಜಕೀಯಕ್ಕೆ ಇನ್ನಿಲ್ಲದ ಪ್ರಾಮುಖ್ಯತೆ ತಂದಿದೆ. ಅವರನ್ನು ಸೋಲಿಸಬೇಕಾದರೆ ಅವರ ವಿರುದ್ಧದ ಮತಗಳು ಒಡೆಯಬಾರದು ಎಂಬ ಅನಿವಾರ್ಯತೆ ಉಂಟುಮಾಡುತ್ತದೆ. ಸಣ್ಣ, ಹೊಸದಾಗಿ ಅಸ್ತಿತ್ವಕ್ಕೆ ಬರುವ, ತಮ್ಮದೇ ಸ್ವಂತದ ನೀತಿ-ಧೋರಣೆ ರೂಪಿಸಿಕೊಂಡ ಪಕ್ಷಗಳಿಗೆ ತಮ್ಮ ವಿಚಾರಗಳಿಗೆ ದೂರವಾದ ಪಕ್ಷಗಳೊಂದಿಗೆ ಒಲ್ಲದ ಮನಸ್ಸಿನಿಂದ ಮೈತ್ರಿ ಮಾಡಿಕೊಳ್ಳಬೇಕಾದ ಸಂಕಟವನ್ನು ತಂದೊಡ್ಡಿದೆ ಇದು.
ಇದು ಪಕ್ಷಗಳ ವಿಚಾರವಾದರೆ ಈ ಪಕ್ಷಗಳ ಅಭ್ಯರ್ಥಿಗಳು ಬಹಳಷ್ಟು ಬಾರಿ ಕ್ಷೇತ್ರದಲ್ಲಿನ ಬಲಾಢ್ಯ ಕುಟುಂಬಗಳಿಗೆ ಸೇರಿದವರು ಅಥವಾ ಅಲ್ಲಿ ಅತಿ ಹೆಚ್ಚು ಮತದಾರರಿರುವ ಜಾತಿಯವರು ಎಂಬ ಕಾರಣಕ್ಕೆ ಮತದಾರರಿಗೆ ಪರಿಚಯ ಇರುತ್ತಾರೆ. ಇಂತಹ ಸನ್ನಿವೇಶ ಹೊಸತಾಗಿ ಅಸ್ತಿತ್ವಕ್ಕೆ ಬಂದ ಪಕ್ಷಗಳು, ಅಭ್ಯರ್ಥಿಗಳು, ಪ್ರಗತಿಪರ ಪಕ್ಷ-ಚಳವಳಿಗಳಿಗೆ ಬಹಳ ಕಷ್ಟಕರ ಪರಿಸ್ಥಿತಿಯನ್ನು ಒಡ್ಡುತ್ತದೆ. ಚಳವಳಿಗಳು ಆಳುವ ವ್ಯವಸ್ಥೆಗೆ ಎದುರಾಳಿಯಾಗುವುದರಿಂದ, ಆ ವ್ಯವಸ್ಥೆಯ ಭಾಗವೇ ಆದ ಕಾರ್ಪೊರೆಟ್‌ಗಳ ಒಡೆತನದಲ್ಲಿರುವ ಪತ್ರಿಕೆ, ಮಾಧ್ಯಮಗಳು ಈ ಚಳವಳಿ ಹಾಗೂ ಪಕ್ಷಗಳನ್ನೂ ತಮ್ಮ ಎದುರಾಳಿ ಎಂತಲೇ ಭಾವಿಸುತ್ತವೆ.
ಚಳವಳಿಗಳು,ಚಳುವಳಿಗಾರ ಪಕ್ಷಗಳು ಈ ದೊಡ್ಡ ಸವಾಲಿನ ಸ್ವರೂಪವನ್ನು ಮೊದಲು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು, ಅಂದಾಜಿಸಬೇಕು ಮತ್ತು ಅದನ್ನು ಎದುರಿಸುವುದಕ್ಕೆ ಬೇಕಾದ ಅಪಾರ ಶಕ್ತಿಗಳಿಸಬೇಕು, ಪ್ರತಿತಂತ್ರ ಹೂಡಬೇಕು. ಚಳವಳಿಗಳು ಇಡೀ ಕ್ಷೇತ್ರದ ಜನರ ಮನಸ್ಸಿನಲ್ಲಿ ಕಾರ್ಪೊರೆಟ್ ಅಡಿಯಾಳು ಪಕ್ಷಗಳ ವಿರುದ್ಧ ಸಿಡಿದೇಳುವಂತಾಗಬೇಕು. ಟಿವಿ ಮಾಧ್ಯಮಗಳ ಪ್ರಚಾರ ಹಣ, ಜಾತಿಯ ಬಲೆಯನ್ನು ಬೇಧಿಸುವಂತಹ ಪರಿಸ್ಥಿತಿ ಉಂಟುಮಾಡಬೇಕು. ಆಗಷ್ಟೇ ನಮ್ಮ ದೇಶದಲ್ಲಿ ಇಂದು ಅಸ್ತಿತ್ವದಲ್ಲಿರುವ First past the post systemನ ಕುದುರೆ ರೇಸಿನಲ್ಲಿ ಗೆಲ್ಲಲು ಸಾಧ್ಯ.
ಇದಕ್ಕೆ ಪರ್ಯಾಯವಾಗಿ ವಿಶ್ವದಲ್ಲಿ ಬಹಳ ದೇಶಗಳು ಅನುಸರಿಸುತ್ತಿರುವ ಪ್ರತಿ ಓಟಿಗೂ ಬೆಲೆ ಕೊಡಬೇಕು ಎಂಬ, ಒಟ್ಟು ಓಟಿನ ಪ್ರಮಾಣಕ್ಕನುಗುಣವಾಗಿ ವಿಧಾನಸಭೆಯ ಸೀಟು ಎನ್ನುವ proportional representation ಪದ್ಧತಿ ಚಳವಳಿಗಳಿಗೆ ಸಹಾಯಕವಾಗುತ್ತದೆ.
ಅಂಬೇಡ್ಕರ್‌ರವರಾಗಲೀ, ನಂಜುಂಡಸ್ವಾಮಿಯವರಾಗಲೀ, ಕಾರ್ಮಿಕ ನಾಯಕ ಸೂರಿಯವರಾಗಲಿ, ಈ ಚಳವಳಿಗಳಿಗೆ ಸೇರಿದ ಇನ್ನೂ ಹತ್ತುಹಲವರಾಗಲೀ ಅಂತಹ ವ್ಯವಸ್ಥೆಯಲ್ಲಿ ವಿಧಾನಸಭೆಯಲ್ಲಿ ಸ್ಥಾನ ಗಳಿಸಲು ಸಾಧ್ಯವಾಗುತ್ತದೆ. ಚಳವಳಿಗಳಿಗಿರುವ ಜನ ಮಾನ್ಯತೆ ರಾಜಕೀಯ ಮಾನ್ಯತೆಯಾಗಲು ನೆರವಾಗುತ್ತದೆ.
**********************************************
ಮಾರ್ಚ್ 29, ಕನ್ನಡಿಗರಿಗೆ ಚಿರಪರಿಚಿತವಾಗಿರುವ ’ಚಿರಸ್ಮರಣೆ’ ಕಾದಂಬರಿಯ ಕಯ್ಯೂರು ರೈತ ಹುತಾತ್ಮರ ನೆನಪಿನ ದಿನ. ದೊಡ್ಡ ಜಮೀನುದಾರರೊಡನೆ, ಬ್ರಿಟಿಷ್ ಸರ್ಕಾರದೊಡನೆ ಸಂಘರ್ಷಕ್ಕಿಳಿದ ನಾಲ್ಕು ಜನ ರೈತರ ಮಕ್ಕಳನ್ನು ಗಲ್ಲಿಗೇರಿಸಿದ ದಿನವದು.ದೇಶದ ಹಲವು ರಾಜ್ಯಗಳಲ್ಲಿ ಹಬ್ಬಿದ ರೈತ ಚಳವಳಿಗಳ ಸಾಲಿನಲ್ಲಿ 1942-44ರ ಮಲಬಾರ್ ರೈತರ ಚಳವಳಿಯೂ ಒಂದು. ಈ ಚಳವಳಿಯ ಒಂದು ಮುಖ್ಯ ಘಟನೆ ಕಯ್ಯೂರು ರೈತರ ಹೋರಾಟ. ಈ ಹೋರಾಟದಲ್ಲಿ ಕುಞಂಬು, ಅಪ್ಪು, ಚಿರಕುಂಡ, ಅಬೂಬಕರ್ ಎಂಬ ನಾಲ್ಕು ಜನ ರೈತ ಯುವಕರು ಗಲ್ಲಿಗೇರಿಸಲ್ಪಟ್ಟರು. ಇದರ ರೋಮಾಂಚಕ ಚಿತ್ರಣ ನಿರಂಜನರ ’ಚಿರಸ್ಮರಣೆ’ ಕಾದಂಬರಿ. ನಿರಂಜನರೇ ಬರೆದ ಚಿರಸ್ಮರಣೆಯ ಕಯ್ಯೂರು ಎಂಬ ಕಿರುಪುಸ್ತಕ ಈ ಹೋರಾಟದ ಚರಿತ್ರೆಯ ವಿವರಗಳನ್ನು ನೀಡುತ್ತದೆ.
ಚಿರಸ್ಮರಣೆಯ ರೈತ ಹೋರಾಟ ಮತ್ತು ವೀರ ಯುವಕರ ಹುತಾತ್ಮರ ತ್ಯಾಗ, ಭಾರತದ ಮತ್ತು ಜಗತ್ತಿನ ಯಾವ ಐತಿಹಾಸಿಕ ಸಂದರ್ಭದಲ್ಲಿ ಯಾವ ಸಾಮಾಜಿಕ, ಆರ್ಥಿಕ ಪ್ರಕ್ರಿಯೆಯ ಭಾಗವಾಗಿ ತನ್ನ ಸಾಧ್ಯತೆಗಳನ್ನು ರೂಪಿಸಿಕೊಂಡಿತು ಎಂದು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದಾಗಲೇ ಆ ಹೋರಾಟ ನಮಗೆ ಅರ್ಥವಾಗುವುದು. ಅದರ ಅನುಭವ ನಮಗೆ ದಕ್ಕುವುದು. ಒಂದು ಕಡೆ ಮಲಬಾರ್‌ನ ಭೂ ಒಡೆತನದ ರಚನೆ ಮತ್ತು ಗೇಣಿದಾರರ ಮೇಲಿನ ದಬ್ಬಾಳಿಕೆಗಳ ಅಧ್ಯಯನ ಮತ್ತೊಂದು ಕಡೆ ಸ್ವಾತಂತ್ರ್ಯಕ್ಕೆ ಮೊದಲಿನ ಆ ವರ್ಷಗಳಲ್ಲಿ ಮೆರೆದ ತೆಲಂಗಾಣ, ತೇಭಾಗ, ವಾರಲೀ ಹೋರಾಟಗಳು ಮತ್ತಿತರ ಹೋರಾಟಗಳ ಬಗ್ಗೆ, ಅವುಗಳ ಹಿನ್ನೆಲೆ ಬಗ್ಗೆ ಅಧ್ಯಯನ ಮಾಡಬೇಕು.
ಸ್ವಾತಂತ್ರ್ಯ ಹೋರಾಟಕ್ಕೆ ದೇಶದ ರೈತರು ನೀಡಿದ ಮಹಾನ್ ಕಾಣಿಕೆಗಳು ಇವು. ಸ್ವಾತಂತ್ರ್ಯವನ್ನು ಮತ್ತಷ್ಟು ಹತ್ತಿರಕ್ಕೆ ತರಲು ಕೊಡುಗೆ ನೀಡಿದವು. ಪರಿಸ್ಥಿತಿಯಲ್ಲಿ ಬೃಹತ್ ರೈತ ಸಂಘರ್ಷದ ತುರ್ತು ಇರುವ ಇಂದಿನ ಸಂದರ್ಭದಲ್ಲಿ ಈ ಹೋರಾಟಗಳ ಅಧ್ಯಯನ ಪ್ರಸ್ತುತವಾಗಿದೆ.

ಜಿ. ಎನ್. ನಾಗರಾಜ್
ಸರ್ಕಾರಿ ಅಧಿಕಾರಿಯಾಗಿದ್ದ ಜಿ.ಎನ್. ನಾಗರಾಜ್ 80ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣಾವಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.
ಇದನ್ನೂ ಓದಿ: ಚಳವಳಿಗಾರರಿಗೇಕೆ ಚುನಾವಣೆಗಳನ್ನು ಗೆಲ್ಲುವುದು ಕಡುಕಷ್ಟ?


