Homeಮುಖಪುಟಡೇರ್ ಡೆವಿಲ್ ಮುಸ್ತಾಫಾ: ’ಆತ ಮುಸ್ಲಿಮ್ ಆದ್ರೂ ಒಳ್ಳೇ ಮನುಷ್ಯ!!’

ಡೇರ್ ಡೆವಿಲ್ ಮುಸ್ತಾಫಾ: ’ಆತ ಮುಸ್ಲಿಮ್ ಆದ್ರೂ ಒಳ್ಳೇ ಮನುಷ್ಯ!!’

- Advertisement -
- Advertisement -

ನಿರ್ದೇಶಕರು ಸಮಾಜದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಕೋಮುವಾದಿಗಳು ಮತ್ತು ಮೂಲಭೂತವಾದಿಗಳ ಚಿತಾವಣೆಗಳಿಂದ, ಹರೆಯಕ್ಕೆ ಕಾಲಿಡುತ್ತಿರುವ ಯುವಜನತೆಯಲ್ಲಿ ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವ ಕೋಮುವಿಷವನ್ನು ತೊಡೆದುಹಾಕುವ ಸದುದ್ದೇಶದ ಪ್ರಯತ್ನವಾಗಿ ಈ ಸಿನಿಮಾ ಮಾಡಿದ್ದಾರೆ ಎನ್ನುವುದು ಸಿನಿಮಾದ ಹಲವು ದೃಶ್ಯಗಳಲ್ಲಿ ಕಂಡುಬರುತ್ತದೆ. ಆದರೆ ಪರಿಣಾಮ ವ್ಯತಿರಿಕ್ತವಾದಂತಿದೆ… ..

ಹಲವು ಕಾಲ ಕನ್ನಡದ ಯುವ ತಲೆಮಾರನ್ನು ದಟ್ಟವಾಗಿ ಪ್ರಭಾವಿಸಿದ, ಈಗಲೂ ತಮ್ಮ ಕೃತಿಗಳ ಬಹುಬೇಡಿಕೆಯಿಂದ ಮನೆಮಾತಾಗಿರುವ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕಥೆಯನ್ನಾಧರಿಸಿದ ಅದೇ ಹೆಸರಿನ ಸಿನಿಮಾ ’ಡೇರ್ ಡೆವಿಲ್ ಮುಸ್ತಾಫಾ’ ನೋಡಿದೆ. ತೇಜಸ್ವಿ ಅವರ ಕಥೆಯಂತೆಯೇ ಬೋರು ಹೊಡೆಸದೆ ತಮಾಷೆಯಿಂದ, ಲವಲವಿಕೆಯಿಂದ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ.

ಅಬಚೂರು ಎಂಬ ಅತ್ತ ಹಳ್ಳಿಯೂ ಅಲ್ಲದ, ಇತ್ತ ನಗರವೂ ಅಲ್ಲದ ಊರಿನಲ್ಲಿ ’ಹಿಂದೂ’ ಮತ್ತು ’ಮುಸ್ಲಿಮರ’ ನಡುವೆ ನಡೆಯುವ ಸಂಘರ್ಷದ ಎಳೆ ಸಿನಿಮಾದ ಕಥಾವಸ್ತುವಾಗಿದೆ. ಜಾತಿಧರ್ಮಗಳ ಬಗ್ಗೆ ಚಿಂತಿಸದೆ ಗೆಳೆತನ ಬೆಳೆಸುವ ವಯೋಮಾನದಲ್ಲಿರುವ ಪಿ.ಯು.ಸಿ ವಿದ್ಯಾರ್ಥಿಗಳ ನಡುವೆಯೂ ’ಧರ್ಮ’ದ ಆಧಾರದಲ್ಲಿ ಬಿರುಕು ಮೂಡಿರುವುದನ್ನು ಚಿತ್ರ ಕಾಣಿಸುತ್ತದೆ. ಆದರೆ ಈ ಬಿರುಕಿಗೆ ಹೊರನೋಟಕ್ಕೆ ’ಧರ್ಮ’ ಕಾರಣ ಎನಿಸಿದರೂ ನಿಜವಾಗಿ ಆ ವಯಸ್ಸಿನಲ್ಲಿ ಮೂಡುವ ಸಹಜ ಪ್ರೇಮ ಭಾವನೆಗಳು ಎಂಬುದನ್ನು ಸಿನಿಮಾ ನವಿರಾಗಿ ನಿರೂಪಿಸುತ್ತದೆ. ಪಿ.ಯು.ಸಿ ವಿದ್ಯಾರ್ಥಿಗಳ ನಡುವೆ ತರಗತಿಯ ಸುಂದರಿ ರಮಾಮಣಿಯನ್ನು ಒಲಿಸಿಕೊಳ್ಳುವ ಪ್ರಯತ್ನಗಳು, ಆಕೆ ಮುಸ್ಲಿಮ್ ಸಹಪಾಠಿ ಮುಸ್ತಾಫಾನತ್ತ ಆಕರ್ಷಿತಳಾಗುವುದು, ಇದು ಉಳಿದವರಲ್ಲಿ ಅಸಹನೆ, ಕೋಪ ಮೂಡಿಸುವುದು, ಇದು ಅವರ ನಡುವೆ ಸಣ್ಣಪುಟ್ಟ ಗಲಾಟೆಗಳಿಗೆ ಇಂಬು ಕೊಡುವುದು ಬಿರುಕಿನ ಹಿನ್ನಲೆಯಲ್ಲಿದೆ.

ಸಹಜ ಬದುಕಿನ ಲಯದಲ್ಲಿಯೇ ನಗೆಯುಕ್ಕಿಸಿ ಜೀವನದ ಅಸಂಗತಗಳನ್ನು, ವಿಪರ್ಯಾಸಗಳನ್ನು ಕಾಣಿಸುವ, ಬದುಕನ್ನು ನೋಡುವ ನೋಟವನ್ನು ಕಲಿಸುವ ತೇಜಸ್ವಿಯವರ ಕಥೆಗಳು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತವೆ. ತೇಜಸ್ವಿಯವರ ’ಅಬಚೂರಿನ ಪೋಸ್ಟಾಫೀಸು’ ಕಥಾಸಂಕಲನದಲ್ಲಿ ಒಟ್ಟು ಏಳು ಕಥೆಗಳಿವೆ. ಅವುಗಳೆಂದರೆ ’ಅಬಚೂರಿನ ಪೋಸ್ಟಾಫೀಸು’, ’ಅವನತಿ’, ’ಕುಬಿ ಮತ್ತು ಇಯಾಲ’, ’ತುಕ್ಕೋಜಿ’, ’ಡೇರ್ ಡೆವಿಲ್ ಮುಸ್ತಾಫಾ’, ’ತಬರನ ಕಥೆ’ ಮತ್ತು ’ತ್ಯಕ್ತ’. ಇವುಗಳಲ್ಲಿ ’ಕುಬಿ ಮತ್ತು ಇಯಾಲ’ ಹಾಗು ’ತಬರನ ಕಥೆ’ ಈಗಾಗಲೇ ದೃಶ್ಯಮಾಧ್ಯಮಕ್ಕೆ ಬಂದಿವೆ. ’ಡೇರ್ ಡೆವಿಲ್ ಮುಸ್ತಾಫಾ’ ಈಗ ಹೀಗೆ ತೆರೆಗೆ ಬಂದ ತೇಜಸ್ವಿಯವರ ಕಥೆಗಳ ಸಾಲಿಗೆ ಸೇರಿದೆ. ಈ ಸಂಕಲನದ ಹಲವು ಕಥೆಗಳು ಮನಸ್ಸಿನಲ್ಲಿ ಉಳಿದಿದ್ದವು. ಆದರೆ ’ಮುಸ್ತಾಫಾ’ ಕಥೆ ಮರೆತೇಹೋಗಿತ್ತು. ಸಿನಿಮಾ ನೋಡಿದನಂತರ ಇದಕ್ಕೆ ಮೂಲವಾದ ತೇಜಸ್ವಿ ಅವರ ಕಥೆಯನ್ನು ಓದಬೇಕೆನಿಸಿ ಓದಿದೆ.

ಸಾಮಾನ್ಯವಾಗಿ ಕಥೆ ಅಥವಾ ಕಾದಂಬರಿಯೊಂದನ್ನು ಆಧರಿಸಿ ನಿರ್ಮಾಣವಾಗುವ ಸಿನಿಮಾಗಳು ನಿರಾಶೆ ಉಂಟು ಮಾಡುವುದೇ ಹೆಚ್ಚು. ಗಿರೀಶ್ ಕಾರ್ನಾಡರು ನಿರ್ದೇಶಿಸಿದ ಕುವೆಂಪು ಅವರ ’ಕಾನೂರು ಹೆಗ್ಗಡತಿ’ ಸಿನಿಮಾ ನೋಡಿದಾಗ ನನಗೆ ಈ ಬಗೆಯ ತೀವ್ರ ನಿರಾಶೆ ಉಂಟಾಗಿತ್ತು. ಬರಹದಲ್ಲಿ ತರಬಹುದಾದ ಜೀವನದ ಸಂಕೀರ್ಣತೆಗಳನ್ನು ದೃಶ್ಯಮಾಧ್ಯಮದಲ್ಲಿ ಹಿಡಿದಿಡುವುದರಲ್ಲಿನ ತೊಡಕುಗಳು ಇದಕ್ಕೆ ಕಾರಣವಾಗಿರಬಹುದು. ಇನ್ನು ಕೆಲವು ಕಥೆ ಕಾದಂಬರಿಗಳು ಸಿನಿಮಾ ಮಾಧ್ಯಮದಲ್ಲಿ ಹೆಚ್ಚು ಪ್ರಕಾಶಿಸಿದ್ದೂ ಇದೆ. ಹಾಗೆಯೇ ತೇಜಸ್ವಿ ಅವರ ’.. ಮುಸ್ತಾಫ’ ಕಥೆ ಮತ್ತು ಅವರ ಕಥೆಯ ಎಳೆಯನ್ನಾಧರಿಸಿದ ಸಿನಿಮಾವನ್ನು ಹೋಲಿಸಿ ನೋಡಿದರೆ ಕಥೆಗಿಂತ ಸಿನಿಮಾವೇ ಹೆಚ್ಚು ಆಪ್ತವಾಯಿತೆನ್ನಬಹುದು. ಇದಕ್ಕೆ ದೃಶ್ಯಮಾಧ್ಯಮದ ಶಕ್ತಿಯೊಂದಿಷ್ಟು ಕಾರಣವಾಗಿರಬಹುದು. ನಿರ್ದೇಶಕರು ತೇಜಸ್ವಿ ಅವರ ಕಥೆಯ ಎಳೆಗೆ ಬಹಳಷ್ಟು ಮಾರ್ಪಾಟುಗಳನ್ನು ಮಾಡಿಕೊಂಡಿದ್ದಾರೆ. ತೇಜಸ್ವಿ ಕಥೆಯಲ್ಲಿ ರಮಾಮಣಿ ಇಲ್ಲ. ರಮಾಮಣಿ ಇಲ್ಲದ ಕಾರಣಕ್ಕೆ ಅವಳ ಸುತ್ತ ನಡೆಯುವ ಹುಡುಗರ ಹೊಯ್ದಾಟಗಳೂ ಇಲ್ಲ. ನಾರಾಯಣ ಅಯ್ಯಂಗಾರಿಯ ಅಕ್ಕ ರಫೀಕನನ್ನು ಪ್ರೀತಿಸಿ ಮದುವೆಯಾಗಿ ಹೋಗಿ ಅದು ಅಯ್ಯಂಗಾರಿ ಕುಟುಂಬದಲ್ಲಿ ಎಬ್ಬಿಸಿದ ಅಲ್ಲೋಲಕಲ್ಲೋಲಗಳೂ ಇಲ್ಲ. ಮುಸ್ಲಿಮ್ ಯುವಕರಿಗೂ ಕಾಲೇಜು ವಿದ್ಯಾರ್ಥಿಗಳಿಗೂ ನಡುವೆ ನಡೆಯುವ ಕಿತ್ತಾಟಗಳು, ಕ್ರಿಕೆಟ್ ಆಟದ ಸ್ಪರ್ಧೆಯೂ, ಮುಸ್ತಾಫಾ ನಿರ್ಗಮನದ ಸನ್ನಿವೇಶವೂ ಕಥೆಯಲ್ಲಿ ಇಲ್ಲ. ತೇಜಸ್ವಿ ಅವರ ಕಥೆಯಲ್ಲಿಲ್ಲದ ಈ ರೀತಿಯ ಹಲವು ಸನ್ನಿವೇಶಗಳನ್ನು ನಿರ್ದೇಶಕರು ತುಂಬ ಸೃಜನಶೀಲವಾಗಿ ಮತ್ತು ಸಹಜವಾಗಿ ಚಿತ್ರದಲ್ಲಿ ತಂದಿದ್ದಾರೆ.

ಆದರೆ ಮೂಲಕಥೆ ಮತ್ತು ಸಿನಿಮಾಕ್ಕೆ ದೊಡ್ಡದೊಂದು ಮಿತಿಯಿದೆ. ’ಡೇರ್ ಡೆವಿಲ್ ಮುಸ್ತಾಫಾ’ ಕಥೆ ಬರೆದ ಪೂರ್ಣಚಂದ್ರ ತೇಜಸ್ವಿ ಹಾಗೂ ಈ ಕಥೆಯನ್ನು ಸಿನಿಮಾ ಮಾಡಿದ ನಿರ್ದೇಶಕ ಶಶಾಂಕ್ ಸೋಗಾಲ್ ಇವರಿಬ್ಬರೂ ಭಾರತದ ಸಂದರ್ಭದ, ನಿರ್ದಿಷ್ಟವಾಗಿ ಕರ್ನಾಟಕದ ಸಂದರ್ಭದಲ್ಲಿನ ಹಿಂದೂ-ಮುಸ್ಲಿಮ್ ಸಮುದಾಯಗಳ ನಡುವಿನ ಸಂಬಂಧವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಎಡವಿರುವುದು.

ಇದನ್ನೂ ಓದಿ: ಸಿನಿಮಾ ವಿಮರ್ಶೆ; ಬಿರಿಯಾನಿ ಘಮಲಿನ ಮ್ಯಾಜಿಕ್ ಸೃಷ್ಟಿಸಲು ವಿಫಲವಾದ ’ಡೇರ್‌ಡೆವಿಲ್ ಮುಸ್ತಫಾ’

ತೇಜಸ್ವಿಯವರ ’..ಮುಸ್ತಾಫಾ’ ಕಥೆಯಲ್ಲಿ ಮುಂದಿನ ಮಾತುಗಳು ಬರುತ್ತವೆ.. ’ಮುಸಲ್ಮಾನನೊಬ್ಬ (ಮುಸ್ತಾಫಾ) ಇಷ್ಟೊಂದು ಕಳವಳಕಾರಿಯಾದ ಅಪರಿಚಿತನಾಗಲು ಇದ್ದ ಇನ್ನೊಂದು ಕಾರಣವೆಂದರೆ ಮುಸಲ್ಮಾನರಿಗೂ ಹಿಂದುಗಳಿಗೂ ಮೊಹರಂ ಹಾಗೂ ಗಣಪತಿ ಹಬ್ಬಗಳಲ್ಲಿ ನಡೆಯುತ್ತಿದ್ದ ಕೋಮು ಹೊಡೆದಾಟ. ಪ್ರತಿ ಹಿಂದೂ ಹಾಗೂ ಮುಸಲ್ಮಾನರ ಹಬ್ಬಗಳಲ್ಲೂ ಪ್ರಾಣಿಹಾನಿಯಾಗದಂತೆ ನೋಡಿಕೊಳ್ಳಲು ಪೊಲೀಸರಿಗೆ ಸಾಕುಬೇಕಾಗಿ ಹೋಗುತ್ತಿದ್ದಿತು. ಪರಸ್ಪರ ಒಬ್ಬರ ಮೇಲೊಬ್ಬರು ಮುಯ್ಯಿ ತೀರಿಸಲೆಂದೇ ಹಬ್ಬಗಳನ್ನು ಮಾಡುತ್ತಿದ್ದರು. ಹೀಗೆ ಕೋಮು ದ್ವೇಷವು ನಮ್ಮೂರಿನ ಜೀವನಕ್ರಮದಲ್ಲಿ ಒಂದು ಅಂತರ್ಗತ ಅಂಶವಾಗಿ ಹೋಗಿತ್ತು.’ (ಅಬಚೂರಿನ ಪೋಸ್ಟಾಫೀಸು, 2011, ಪು.85) ಕಥೆಯಲ್ಲಿನ ಈ ವಿವರ ನನ್ನನ್ನು ಅಚ್ಚರಿಗೆ ದೂಡಿತು.

ತೇಜಸ್ವಿ ಅವರು ’..ಮುಸ್ತಾಫಾ’ ಕಥೆ ಬರೆದದ್ದು 1973ರಲ್ಲಿ. ಆ ಸಂದರ್ಭದಲ್ಲಿಯೇ ’ಹಿಂದೂ’ ಮತ್ತು ’ಮುಸ್ಲಿಮರು’ ಎಂಬ ಎರಡು ಗುಂಪುಗಳನ್ನು ಹೆಸರಿಸಿ ಅವುಗಳು ಪರಸ್ಪರ ಕಾದಾಟಕ್ಕಿಳಿಯುತ್ತಿದ್ದು ಸಾಮಾನ್ಯವೆಂಬಂತೆ ನಿರೂಪಿಸಿರುವುದನ್ನು ಅರ್ಥ ಮಾಡಿಕೊಳ್ಳಲು ತುಸು ಕಷ್ಟವಾಗುತ್ತದೆ. ಬಹುತೇಕ ಗ್ರಾಮೀಣ ಬದುಕಿನಲ್ಲಿ, ಗಣಪತಿ ಹಬ್ಬ ಮತ್ತು ಮೊಹರಂ ಆಚರಣೆಗಳು ಎಲ್ಲರೂ ಸೇರಿ ಆಚರಿಸುವ ಹಬ್ಬಗಳೇ ಆಗಿದ್ದವು. ಮೊಹರಂ ಆಚರಣೆಯಂತೂ ತುಂಬ ವಿಶಿಷ್ಟವಾದದ್ದು! ಉತ್ತರ ಕರ್ನಾಟಕವನ್ನು ಗಮನಿಸಿದರೆ ಮುಸ್ಲಿಮರು ಇಲ್ಲದ ಹಳ್ಳಿಗಳಲ್ಲಿಯೂ ಮೊಹರಂಅನ್ನು ಹಿಂದೂಗಳೇ ಸಂಪ್ರದಾಯಬದ್ಧವಾಗಿ ಆಚರಿಸುತ್ತಾರೆ. ನಾನಾ ಹೆಸರುಗಳಿಂದ ಆ ಹಬ್ಬವನ್ನು ಆಚರಿಸುವುದಿದೆ. ಒಂದು ದಶಕದ ಹಿಂದಕ್ಕೆ ಹೊರಳಿದರೆ ಅನೇಕ ಗಣಪತಿ ಸೇವಾ ಸಂಘಗಳಿಗೆ ಮುಸಲ್ಮಾನ ಯುವಕರೇ ಅಧ್ಯಕ್ಷರಾಗುವುದೂ ಸೇರಿದಂತೆ ಪ್ರಮುಖ ಪದಾಧಿಕಾರಿಗಳಾಗಿರುತ್ತಿದ್ದುದೂ ಉಂಟು. ನನ್ನ ಹಳ್ಳಿಯೇ ಇದಕ್ಕೆ ಸಾಕ್ಷಿಯಾಗಿತ್ತು. ಗ್ರಾಮೀಣ ಬದುಕಿನ ಪ್ರಧಾನ ಕಸುಬಾದ ಕೃಷಿ ಎಲ್ಲಾ ಜಾತಿ ಜನಾಂಗದವರೂ ಅನಿವಾರ್ಯವಾಗಿ ಕೂಡಿ ಬಾಳುವಂತೆ ಮಾಡುತ್ತಿತ್ತು. ಇವರ ನಡುವಿನ ಮುನಿಸು ಜಗಳಗಳು ಸಾಮಾನ್ಯವಾಗಿ ಇವರ ಧರ್ಮಕ್ಕೆ ಸಂಬಂಧಿಸಿದ್ದಾಗುತ್ತಿರಲಿಲ್ಲ. ಇವರ ನಡುವೆ ಪ್ರತ್ಯೇಕ ಗುರುತಿಸುವಿಕೆಯನ್ನು ಆರಂಭಿಸಿದ್ದು ಹಿಂದೂ ಕೋಮುವಾದಿಗಳು ಮತ್ತು ಮುಸ್ಲಿಮ್ ಮೂಲಭೂತವಾದಿಗಳು ಬೆಳೆಯಲಾರಂಭಿಸಿದ ಮೇಲೆಯೇ. ರಾಜಕೀಯ ಕಾರಣಗಳಿಗಾಗಿ ’ಹಿಂದೂ/ಹಿಂದುತ್ವ’ ಹೆಸರಿನಡಿ ಜನಸಮುದಾಯವನ್ನು ಒಟ್ಟುಗೂಡಿಸಲು ಆರಂಭಿಸಲಾಯಿತೇ ವಿನಃ ’ಹಿಂದೂ’ ಎನ್ನುವ ಏಕಸಂಸ್ಕೃತಿ ಇಲ್ಲಿ ಇಲ್ಲ. ಅದೇ ರೀತಿ ಇಲ್ಲಿ ಮುಸ್ಲಿಮರು ಒಂದು ಜಾತಿಯಾಗಿ ಸಮಾಜದಲ್ಲಿ ಇದ್ದಾರೆಯೇ ವಿನಃ ಒಂದು ಧರ್ಮವಾಗಿ ಅಲ್ಲ. ಗಣಪತಿ ಮತ್ತು ಮೊಹರಂ ಹಬ್ಬ, ಆಚರಣೆಗಳ ಸಂದರ್ಭದಲ್ಲಿ ಗಲಭೆಯೆಬ್ಬಿಸುವವರು ಕೆಲವು ದುಷ್ಕರ್ಮಿಗಳು. ಇವರನ್ನು ಇವರು ಹುಟ್ಟಿದ ಜಾತಿ, ಧರ್ಮದ ಪ್ರತಿನಿಧಿಗಳೆಂದೂ, ಇವರು ಮಾಡುವ ದುಷ್ಕೃತ್ಯಗಳಿಗೆ ಇವರು ಹುಟ್ಟಿದ ಇಡೀ ಸಮುದಾಯವನ್ನು ಹೊಣೆಗಾರರನ್ನಾಗಿ ಮಾಡುವುದು ಅನುಚಿತವಾದದ್ದು. ತೇಜಸ್ವಿ ಅವರು ಈ ವ್ಯತ್ಯಾಸವನ್ನು ಅರಿಯದೇ ಹೋದರೆ ಎಂದು ಅಚ್ಚರಿಯಾಗುತ್ತದೆ. ಅವರ ಸಾಹಿತ್ಯದಲ್ಲಿ ’ಹಿಂದೂ’ ಮತ್ತು ’ಮುಸ್ಲಿಮ್’ ಎನ್ನುವುದನ್ನು ಧರ್ಮದ ನೆಲೆಗಳಲ್ಲಿಯೇ ಗುರುತಿಸುವುದನ್ನು ಕಾಣಬಹುದು. ಅದು ಅವರ ಪ್ರಸಿದ್ಧ ಕಾದಂಬರಿ ’ಚಿದಂಬರ ರಹಸ್ಯ’ದಿಂದ ಹಿಡಿದು ’ಡೇರ್ ಡೆವಿಲ್ ಮುಸ್ತಾಫಾ’ ಕಥೆಯ ತನಕ ವ್ಯಾಪಿಸಿದೆ. ’ಮುಸ್ತಾಫಾ’ ಸಿನಿಮಾದ ನಿರ್ದೇಶಕರು ಕೂಡ ಈ ಬಗೆಯ ಗುರುತಿಸುವಿಕೆಯನ್ನು ಒಪ್ಪಿಕೊಂಡಿರುವುದು ಸಿನಿಮಾದಲ್ಲಿ ಎದ್ದು ಕಾಣುತ್ತದೆ.

ನಿರ್ದೇಶಕರು ಚಿತ್ರಕತೆ ರೂಪಿಸುವಾಗ ಕರಾವಳಿಯಲ್ಲಿ ನಡೆಯುತ್ತಿರುವ ಕೋಮು ಧ್ರುವೀಕರಣ, ಕಾಲೇಜು ವಿದ್ಯಾರ್ಥಿಗಳೂ ಕೋಮು ನೆಲೆಯಲ್ಲಿ ವಿಭಜನೆಗೊಂಡಿರುವ ಸಂಗತಿಗಳು, ಗಾಢವಾಗಿ ಅವರ ಮನಸ್ಸಿನಲ್ಲಿತ್ತೆಂದು ತೋರುತ್ತದೆ. ಚಿತ್ರ ಅಬಚೂರು ಎಂಬ ಮಲೆನಾಡಿನ ಹೆಸರನ್ನು ಹೇಳುತ್ತಿದ್ದರೂ ಅದು ಕರಾವಳಿ ಭಾಗದ ಕಥೆಯಂತೆ ಭಾಸವಾಗುತ್ತಿದೆ. ಚಿತ್ರದಲ್ಲಿ ಗಣಪತಿ ಹಬ್ಬದ ಸಂದರ್ಭದಲ್ಲಿ ಕೆಲವು ಮುಸ್ಲಿಮ್ ಯುವಕರನ್ನು ಮುಂಜಾಗ್ರತೆಯಾಗಿ ಸ್ಟೇಷನ್‌ನಲ್ಲಿ ಬಂಧಿಸಿಟ್ಟಿರುವುದು, ಕಾಲೇಜು ವಿದ್ಯಾರ್ಥಿಗಳ ತಂಡದ ಎದುರು ತಂಡವಾಗಿ ಮುಸ್ಲಿಮ್ ಯುವಕರ ತಂಡವನ್ನು ಚಿತ್ರಿಸಿರುವ ರೀತಿ, ಮುಸ್ಲಿಮರ ಬಗ್ಗೆ ವಾಸ್ತವಕ್ಕೆ ದೂರವಾದ ಭಾವನೆಯನ್ನು ಮೂಡಿಸುವಂತಿದೆ. ಮತ್ತು ಸಂಘಪರಿವಾರ ಮುಸ್ಲಿಮರನ್ನು ಚಿತ್ರಿಸುವ ರೀತಿಯನ್ನು ಒಂದು ಮಟ್ಟದಲ್ಲಿ ಸಮರ್ಥಿಸುವಂತಿದೆ.

’..ಮುಸ್ತಾಫಾ’ ಕಥೆ ಬರೆಯುವಾಗ ಮುಸಲ್ಮಾನ ಕುಟುಂಬಗಳ ಬದುಕಿನ ಪರಿಚಯ ತಮಗೆ ಅಷ್ಟಾಗಿ ಇಲ್ಲ ಎನ್ನುವುದನ್ನು ಕಥೆಯ ಪಾತ್ರವಾದ ವಿದ್ಯಾರ್ಥಿಯೊಬ್ಬನ ನಿರೂಪಣೆಯಲ್ಲಿಯೇ ಕಥೆಗಾರರು ಸೂಚಿಸಿದ್ದಾರೆ. ’ನಮಗೆ ಅಲ್ಲಿಯವರೆಗೆ ಒಬ್ಬನೇ ಒಬ್ಬ ಮುಸಲ್ಮಾನ ಸ್ನೇಹಿತ ಇರಲಿಲ್ಲ. ಮುಸಲ್ಮಾನನೊಬ್ಬ ಹಿಂದೂಗಳಿಗೆ ಆಪ್ತನೋ, ಸ್ನೇಹಿತನೋ ಆಗಬಹುದಾದ ಸಾಧ್ಯತೆಯೇ ನಮ್ಮ ಕಲ್ಪನೆಗೆ ಮಿಕ್ಕುದಾಗಿತ್ತು.’ (ಅಬಚೂರಿನ ಪೋಸ್ಟಾಫೀಸು, 2011, ಪು.84). ಕಥೆಗಾರ ತನ್ನ ಅನುಭವಕ್ಕೆ ಬದ್ಧನಾಗಿದ್ದು ಆ ನೆಲೆಯಲ್ಲಿಯೇ ’..ಮುಸ್ತಾಫಾ’ ಕಥೆ ಮೂಡಿಬಂದಿದೆ. ಆದರೆ ಸಕಲೆಂಟು ಜಾತಿಗಳೂ ’ಹಿಂದೂ’ ಎನ್ನುವ ಧರ್ಮದಲ್ಲಿ ಒಟ್ಟುಗೊಂಡಿರುವುದೂ ಮತ್ತು ಅವರಿಗೆಲ್ಲ ಮುಸಲ್ಮಾನ ಬದುಕು ಅಪರಿಚಿತವಾಗಿರುವುದು ಸಾರ್ವತ್ರಿಕ ವಾಸ್ತವವಲ್ಲ. ಕೆಲವು ಪ್ರದೇಶಗಳಲ್ಲಿ ಹೀಗೆ ಆಗಿರುವುದು ಹೌದು. ಇದು ’ಹಿಂದೂ’ ಮತ್ತು ಮುಸಲ್ಮಾನರ ನಡುವೆ ಇರುವ ಅಪರಿಚಿತತೆ ಮಾತ್ರವಲ್ಲ. ಬ್ರಾಹ್ಮಣ-ದಲಿತ, ಲಿಂಗಾಯತ-ಒಕ್ಕಲಿಗ ಹೀಗೆ ನೂರಾರು ಜಾತಿಗಳ ನಡುವೆಯೂ ಕೆಲವೊಂದು ಕಡೆ ಅಪರಿಚಿತತೆ ಮೂಡುತ್ತದೆ. ಇದು ಅತ್ಯಂತ ಸಹಜ.

ನಿರ್ದೇಶಕರು ಸಮಾಜದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಕೋಮುವಾದಿಗಳು ಮತ್ತು ಮೂಲಭೂತವಾದಿಗಳ ಚಿತಾವಣೆಗಳಿಂದ, ಹರೆಯಕ್ಕೆ ಕಾಲಿಡುತ್ತಿರುವ ಯುವಜನತೆಯಲ್ಲಿ ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವ ಕೋಮುವಿಷವನ್ನು ತೊಡೆದುಹಾಕುವ ಸದುದ್ದೇಶದ ಪ್ರಯತ್ನವಾಗಿ ಈ ಸಿನಿಮಾ ಮಾಡಿದ್ದಾರೆ ಎನ್ನುವುದು ಸಿನಿಮಾದ ಹಲವು ದೃಶ್ಯಗಳಲ್ಲಿ ಕಂಡುಬರುತ್ತದೆ. ಆದರೆ ಪರಿಣಾಮ ವ್ಯತಿರಿಕ್ತವಾದಂತಿದೆ. ಸಿನಿಮಾದಲ್ಲಿ ’ಮುಸ್ತಾಫಾ’ನನ್ನು ಒಬ್ಬ ’ಒಳ್ಳೆಯ ಮನುಷ್ಯನಾಗಿ’ ಚಿತ್ರಿಸಲಾಗಿದೆ. ಈ ಒಳ್ಳೆಯ ಮುಸ್ಲಿಮ್ ಹುಡುಗನ ಎದುರು ಮುಸ್ಲಿಮ್ ಕೇರಿಯ ಯಾರಿಗೂ ಕ್ಯಾರೇ ಎನ್ನದ ಒರಟು ಮುಸ್ಲಿಮ್ ಯುವಕರಿದ್ದಾರೆ. ಮುಸ್ತಾಫಾನನ್ನು ಹೊರತುಪಡಿಸಿದರೆ ಸಹಜ ಪ್ರೀತಿ, ಕೋಪತಾಪಗಳಿರುವ ಇನ್ನೊಂದು ಮುಸ್ಲಿಮ್ ಪಾತ್ರ ಚಿತ್ರದಲ್ಲಿಲ್ಲ. ಸಮಾಜದಲ್ಲಿ ಇತ್ತೀಚೆಗೆ ದಟ್ಟವಾಗುತ್ತಿರುವ ’ಆತ ಮುಸ್ಲಿಮ್ ಆದ್ರೂ ಒಳ್ಳೇ ಮನುಷ್ಯ’ ಎನ್ನುವ, ಬೆರಳೆಣಿಕೆಯ ಮುಸ್ಲಿಮರಿಗೆ ವಿನಾಯ್ತಿ ನೀಡಿ ಉಳಿದಂತೆ ಸಾರ್ವತ್ರಿಕವಾಗಿ ಮುಸ್ಲಿಮರನ್ನು ದುರುಳೀಕರಿಸುವ ಅಭಿಪ್ರಾಯವನ್ನು ತನಗರಿವಿಲ್ಲದೆ ’ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾ ಮೂಡಿಸುತ್ತಿದೆಯೇನೋ ಎನ್ನುವ ಗಾಢ ಅನುಮಾನ ನನ್ನನ್ನು ಕಾಡುತ್ತಿದೆ.

ಡಾ. ಸರ್ಜಾಶಂಕರ ಹರಳಿಮಠ

ಡಾ. ಸರ್ಜಾಶಂಕರ ಹರಳಿಮಠ
ಲೇಖಕ, ಕವಿ ಸರ್ಜಾಶಂಕರ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹರಳಿಮಠ ಗ್ರಾಮದವರು. ’ಅಂತರಾಳ’, ’ಬೆಚ್ಚಿ ಬೀಳಿಸಿದ ಬೆಂಗಳೂರು’, ’ಬಾರಯ್ಯ ಬೆಳದಿಂಗಳೇ’, ’ಸುಡುಹಗಲ ಸೊಲ್ಲು’ ಅವರ ಕೆಲವು ಪ್ರಕಟಿತ ಪುಸ್ತಕಗಳು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ: ನೀವು ಭಯಪಡಬೇಕೆ? ವೈದ್ಯರು ಹೇಳುವುದೇನು?

0
ಕೋವಿಡ್ -19 ವಿರುದ್ಧದ 'ಕೋವಿಶೀಲ್ಡ್‌' ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮದ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ರಿಟಿಷ್ ಫಾರ್ಮಾ ದೈತ್ಯ ‘ಅಸ್ಟ್ರಾಜೆನೆಕಾ’  ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. TTS ಅಥವಾ...