Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆ’ದೇಸಿ ಮಾರ್ಗ' ಎಂಬ ’ದಲಿತ ಮಾರ್ಗ'

’ದೇಸಿ ಮಾರ್ಗ’ ಎಂಬ ’ದಲಿತ ಮಾರ್ಗ’

- Advertisement -
- Advertisement -

ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು
ನೀನೆನ್ನ ಜರಿದೊಮ್ಮೆ ನುಡಿಯದಿರ!
ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ! ರಾಮನಾಥ

ವಿಜ್ಞಾನದ ವಿಸ್ಮಯಕಾರಿ ಅನ್ವೇಷಣೆಗಳು, ಊಹಿಸಲಸಾಧ್ಯವಾಗಿ ಬೆಳೆದು ನಿಂತ ಮಾಹಿತಿ ತಂತ್ರಜ್ಞಾನ, ನಮ್ಮ ದೇಶ ಶ್ರೀಮಂತವಾಗಿದೆ ಎಂದು ಸಾಕ್ಷ್ಯ ನುಡಿಯಲು ಬಿಂಬಿಸುವ ಲಕ್ಷಲಕ್ಷ ಕೋಟಿ ರೂಪಾಯಿಗಳ ಶ್ರೀಮಂತ ಒಡೆಯರ ಪಟ್ಟಿಗಳು.. ಇವೆಲ್ಲವುಗಳ ನಡುವೆ ಬದುಕಿರುವ ನಮ್ಮ ಈ ದಿನದಲ್ಲೂ ಒಂಬೈನೂರು ವರ್ಷಗಳ ಹಿಂದೆ ಜೇಡರ ದಾಸಿಮಯ್ಯ ತನ್ನೆದೆಯಿಂದಲೇ ಗೀಚಿದಂತಿರುವ ಮೇಲ್ಕಂಡ ವಚನ ಯಾಕಾಗಿ ನಮ್ಮೆದೆಗಳನ್ನು ತೇವಗೊಳಿಸುತ್ತಿದೆ?

ಯಾಕೆಂದರೆ ದಿನಬೆಳಗಾದರೆ ಪತ್ರಿಕೆಗಳಲ್ಲಿ, ಇಪ್ಪತ್ತನಾಲ್ಕು ತಾಸು ಕಿರುಚುವ ಟಿವಿಗಳಲ್ಲೂ ನಮ್ಮ ದೇಶಗಳ ಶ್ರೀಮಂತಿಕೆಯೇ ಬಹುಪಾಲು ಬಿತ್ತರವಾಗುತ್ತಿರುವಾಗ ಸಾಕವ್ವನ ಮಕ್ಕಳಿಗೆ ಉಣ್ಣಲು ಅನ್ನವಿಲ್ಲ, ದುಡಿಯಲು ಕೆಲಸವಿಲ್ಲ. ನೆಲೆಸಲು ಜಾಗವಿಲ್ಲ, ನೆರಳಿಲ್ಲ, ಸಿಕ್ಕ ಚೂರು ತಂದರೂ ಅದನ್ನು ಜೀರ್ಣಿಸಿ ವಿಸರ್ಜಿಸಲು ಸ್ಥಳವಿಲ್ಲ, ವಿಸರ್ಜಿಸಿದರೆ ಆ ಜಾಗದ ವಾರಸುದಾರರಿಂದ ಜೀವ ಉಳಿಯುವುದಿಲ್ಲ. ಇದು ದೇವನೂರರ ’ಒಡಲಾಳ’ದ ಕಥೆಯಲ್ಲ, ನಮ್ಮ ದೇಶದ ನಿತ್ಯದೊಡಲ ಕಥೆ.

ಬಡತನ, ಬಡತನದ ಅನ್ವರ್ಥವಾದ ಹಸಿವು, ಜಾತಿಕಾರಣಕ್ಕಾಗಿನ ಅವಮಾನ, ಹಿಂಸೆ ಇವು ನಮ್ಮ ದೇಶದ ಚರಿತ್ರೆ ಮತ್ತು ವರ್ತಮಾನ. ಬಡತನ ಮತ್ತು ಜಾತಿಕ್ರೌರ್ಯ ನಮ್ಮ ದೇಶದ ಸುಡು ವಾಸ್ತವ. ನಮ್ಮ ಜನರನ್ನು ಸುಡುತ್ತಿರುವ ವಾಸ್ತವ. ವಿಶಾಲಾರ್ಥದಲ್ಲಿ ಬಡತನ ಮತ್ತು ಜಾತಿಯ ಕಾರಣಕ್ಕಾಗಿ ಅಂದರೆ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಶೋಷಣೆಗೆ ಒಳಗಾದ ಎಲ್ಲಾ ಜಾತಿಯ ಬಡವರನ್ನು ’ದಲಿತರು’ ಎಂದು ಗುರುತಿಸಲಾಗುತ್ತದೆ. ಆರ್ಥಿಕ ಆಯಾಮವನ್ನು ಹೊರಗಿಟ್ಟು ದಲಿತರನ್ನು ಗುರುತಿಸುವುದೇ ಹೆಚ್ಚು. ಅಂದರೆ ಸಾವಿರಾರು ವರ್ಷಗಳಿಂದ ಎಲ್ಲಾ ಬಗೆಯ ಶೋಷಣೆಗೆ ಒಳಗಾಗಿ ಮುಟ್ಟಿಸಿಕೊಳ್ಳಲು ಅನರ್ಹರೆಂದು ಪರಿಗಣಿತರಾದ ಅಸ್ಪೃಶ್ಯರು.

ದಲಿತರನ್ನು ಸಾಮಾಜಿಕ ಮತ್ತು ಸಾಹಿತ್ಯಿಕ ದೃಷ್ಟಿಕೋನಗಳಲ್ಲಿ ವಿಶ್ಲೇಷಿಸುವ ಕೃತಿ ಡಾ.ಕೆ.ಆರ್. ದುರ್ಗಾದಾಸ್ ಅವರ ’ದೇಸಿ ಮಾರ್ಗ’. ದಲಿತರಿಗೂ-ಜಾನಪದಕ್ಕೂ ಬೇರ್ಪಡಿಸಲಾಗದ ಸಂಬಂಧ. ಜಾನಪದದ ಸೃಷ್ಟಿಯಲ್ಲಿ ದಲಿತರದೇ ಹೆಚ್ಚಿನ ಪಾಲು. ದಲಿತೇರರು ಜಾನಪದ ಸಾಹಿತ್ಯವನ್ನು ಸೃಷ್ಟಿಸಿದರೂ ಸಾಮಾಜಿಕ ಕಾರಣಕ್ಕಾಗಿ ಅವರು ಬೇಗನೆ ಅಕ್ಷರಪ್ರಪಂಚವನ್ನು ಪ್ರವೇಶಿಸಿ ಶಿಷ್ಟ ಸಾಹಿತ್ಯದತ್ತ ಹೊರಳಿದರು. ಆದರೆ ಸಮಾಜ ದಲಿತರನ್ನು ಅಕ್ಷರಪ್ರಪಂಚದಿಂದ ಬಹುಕಾಲ ದೂರವಿಟ್ಟರೂ ಮೌಖಿಕ ಸಾಹಿತ್ಯವನ್ನು ಸೃಷ್ಟಿಸಲು ಅವರಿಗೆ ತಡೆಯೊಡ್ಡಲು ಸಾಧ್ಯವಾಗಲಿಲ್ಲ. ದಲಿತರನ್ನು ಕುರಿತಂತೆಯೇ ಜಾನಪದವನ್ನೂ ಕುರಿತು ಈ ಕೃತಿ ಹಲವು ಆಯಾಮಗಳಲ್ಲಿ ಚರ್ಚಿಸುತ್ತದೆ, ಚಿಂತಿಸುತ್ತದೆ. ಇಂತಹ ಚರ್ಚೆ ಮತ್ತು ಚಿಂತನೆಗಳಿಗೆ ಆಕರವಾಗಿರುವುದು ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಸಾಹಿತ್ಯ, ಪುರಾಣಗಳು, ಜನಪದ ಕಾವ್ಯ, ಆಹಾರ ಪದ್ಧತಿ, ಸಮಾಜ ಸುಧಾರಕರು, ಭಾರತೀಯ ಕಾವ್ಯ ಮೀಮಾಂಸೆ ಮತ್ತು ಸಮಕಾಲೀನ ಮುಖ್ಯ ಆಗುಹೋಗುಗಳು, ಪ್ರಾಚೀನ ಮತ್ತು ಮಧ್ಯಕಾಲೀನ ಸಾಹಿತ್ಯದಲ್ಲಿ ಪಂಪ, ವಚನಕಾರರು, ರಾಘವಾಂಕ, ಕನಕದಾಸರು, ಸಂತ ಶಿಶುನಾಳ ಷರೀಫರ ಸಾಹಿತ್ಯ ಚರ್ಚೆಗೆ ಒಳಗಾಗಿದ್ದರೆ ಹೊಸಗನ್ನಡದಲ್ಲಿ ಕುವೆಂಪು, ಬೇಂದ್ರೆ, ದೇವನೂರು ಮಹಾದೇವ, ಅರವಿಂದ ಮಾಲಗತ್ತಿ ಅವರ ಸಾಹಿತ್ಯದ ಕುರಿತು ಹಾಗೂ ಸತ್ಯಾನಂದ ಪಾತ್ರೋಟ, ಬಿ.ಎ.ಸನದಿ, ಭಗವಾನ್ ಮತ್ತು ಬಾಳಾಸಾಹೇಬ್ ಲೋಕಾಪುರ ಅವರ ಕೆಲವು ಕೃತಿಗಳ ಕುರಿತು ವಿಮರ್ಶೆಯಿದೆ. ಸಮಾಜ ಸುಧಾರಕರಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್ ಮತ್ತು ಕುವೆಂಪು ಮತ್ತೆಮತ್ತೆ ಕೃತಿಯ ಚಿಂತನೆಯಲ್ಲಿ ಪ್ರವೇಶಿಸುತ್ತಾರೆ.

ಕೃತಿಯ ಶೀರ್ಷಿಕೆ ’ದೇಸಿ ಮಾರ್ಗ’. ಸಾಹಿತ್ಯದ ನೆಲೆಯಲ್ಲಿ ನೋಡುವಾಗ ದೇಸಿ ಮತ್ತು ಮಾರ್ಗಗಳು ಎರಡು ವಿಭಿನ್ನ ಕಾವ್ಯ ಪರಂಪರೆಗಳು. ’ದೇಸಿ’ ಮತ್ತು ’ಮಾರ್ಗ’ಕ್ಕೆ ನಿರ್ದಿಷ್ಟ ವ್ಯಾಖ್ಯಾನಗಳಿದ್ದರೂ ಕನ್ನಡದ ಸಂದರ್ಭದಲ್ಲಿ ಸರಳವಾಗಿ ಗ್ರಹಿಸುವಾಗ ’ದೇಸಿ’ಯನ್ನು ಕನ್ನಡ ಮತ್ತು ಜಾನಪದಕ್ಕೂ, ’ಮಾರ್ಗವನ್ನು ಸಂಸ್ಕೃತ ಮತ್ತು ಶಿಷ್ಟ ಸಾಹಿತ್ಯಕ್ಕೂ ಸಮೀಕರಿಸಲಾಗುತ್ತದೆ. ಪಂಪ, ಮಾರ್ಗ ಮತ್ತು ದೇಸಿ ಎರಡನ್ನೂ ಸಮನ್ವಯಿಸಿಕೊಂಡು ತನ್ನ ಕೃತಿಗಳನ್ನು ರಚಿಸಿದ್ದಾನೆ. ಅದನ್ನು ’ಬಗೆ ಪೊಸತಪ್ಪುದಾಗಿ ಮೃದು ಬಂಧದೊಳೊಂದುವುದೊಂದು ದೇಸಿಯೊಳ್ ಪುಗುವುದು, ಪೊಕ್ಕ ಮಾರ್ಗದೊಳೆ ತಳ್ವುದು ತಳ್ತೊಡೆ ಕಾವ್ಯ ಬಂಧಮೊಪ್ಪುಗುಮ್’ ಎಂದು ತನ್ನ ಕಾವ್ಯದಲ್ಲೂ (ಪಂಪ ಭಾರತ) ಹೇಳಿಕೊಂಡಿದ್ದಾನೆ. ಪ್ರತಿಭಾನ್ವಿತ ಕವಿಗಳು ಪಂಪನಂತೆ ದೇಸಿ ಮತ್ತು ಮಾರ್ಗ ಎರಡರ ಸತ್ವಗಳನ್ನು ತಮ್ಮ ಕಾವ್ಯದಲ್ಲಿ ಬಳಸಿಕೊಳ್ಳುತ್ತಾರೆ, ಬಳಸಿಕೊಂಡಿದ್ದಾರೆ. ಆದರೆ ಈ ರೀತಿ ’ದೇಸಿ’ಯನ್ನು ಹೇಗೆ ಬಳಸಿಕೊಂಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸುಲಭಕ್ಕೆ ಸಿಗುವುದಿಲ್ಲ. ಈ ಕುರಿತು ಆಳವಾದ ಅಧ್ಯಯನದ ಅಗತ್ಯವಿದೆ. ಈ ಅಧ್ಯಯನಕ್ಕೆ ಜಾನಪದ ಹಿನ್ನೆಲೆಯವರಿದ್ದರೆ ಅಧ್ಯಯನ ಹೆಚ್ಚು ಫಲಿತಗಳನ್ನು ಕೊಡುತ್ತದೆ. ಹಿರಿಯ ಲೇಖಕರಾದ ಡಾ.ಕೆ.ಆರ್ ದುರ್ಗಾದಾಸ್ ಅವರ ’ದೇಸಿ ಮಾರ್ಗ’ ಕೃತಿ ಮೇಲ್ಕಂಡ ಅಂಶಗಳಿಂದ ಮಿಳಿತವಾಗಿರುವುದರಿಂದ ಸಹಜವಾಗಿಯೇ ದೇಸಿ ಮತ್ತು ಮಾರ್ಗಗಳ ಕುರಿತ ಚಿಂತನೆಗಳು ತಾಜಾ ಎನಿಸುತ್ತವೆ.

ಜಾನಪದದಿಂದಲೇ ಶಕ್ತಿ ಪಡೆದು ಅದನ್ನೇ ಅನಾದರದಿಂದ ನೋಡುವ ಶಿಷ್ಟಸಾಹಿತ್ಯದ ಕುರಿತ ಸಿಟ್ಟು ಈ ಕೃತಿಯಲ್ಲಿರುವುದು ಆಕಸ್ಮಿಕವಲ್ಲ. ಜಾನಪದವು ಹೆಚ್ಚಿನ ಮಾನ್ಯತೆ ಪಡೆಯದಿರುವುದರ ಹಿಂದೆ ತನ್ನ ಅಸ್ತವ್ಯಸ್ತತೆ ಹಾಗೂ ಲಕ್ಷಣಾ ರಹಿತ ಧಾಟಿಗಳ ಕಾರಣ ಒಂದಷ್ಟು ಇರುವುದು ಹೌದು. ಅದರೆ ಅದಕ್ಕಿಂತ ಮುಖ್ಯವಾಗಿರುವ ಕಾರಣಗಳನ್ನು ಲೇಖಕರು ಗುರುತಿಸುತ್ತಾರೆ. ಅವೆಂದರೆ ಸಾಮಾಜಿಕ ಹಾಗೂ ರಾಜಕೀಯ ಕಾರಣಗಳು. ’ಸಮಾಜವನ್ನು ಹಲವು ಜಾತಿಗಳಾಗಿ ಒಡೆದ ಬ್ರಾಹ್ಮಣರು ವಿದ್ಯೆ ಬುದ್ಧಿಗಳನ್ನು ತಮ್ಮ ಕಕ್ಷೆಯಲ್ಲಿಟ್ಟುಕೊಂಡು ಬಹುಪಾಲು ಜನರನ್ನು ಅಜ್ಞಾನದ ಕತ್ತಲಲ್ಲಿಟ್ಟರು. ಜೀವನದ ಸಾಧಾರಣ ಕಸುಬುಗಳಾದ ಬೇಸಾಯ, ವ್ಯಾಪಾರ, ಕಲೆ ಮತ್ತು ಕರಕುಶಲ ಕರ್ಮಗಳಲ್ಲಿ ನಿರತರಾಗುವುದು ತಮ್ಮ ಘನತೆಗೆ ಕುಂದೆಂದು ಭಾವಿಸಿದ ಅವರು ಬದುಕಲು ಶಬ್ದಗಳನ್ನೇ ಬಂಡವಾಳ ಮಾಡಿಕೊಂಡರು. ತಾವೇ ರಚಿಸಿಕೊಂಡ ರಚನಾ ಸೂತ್ರಗಳ ಬೆಂಬಲದಿಂದ ಗ್ರಾಂಥಿಕ ಸಾಹಿತ್ಯದ ವಾರಸುದಾರರಾದರು’ ಎಂದು ಲೇಖಕರು ಅಭಿಪ್ರಾಯ ಪಡುತ್ತಾರೆ.

ಈ ಕೃತಿ ಜಾನಪದ ಮತ್ತು ಶಿಷ್ಟವನ್ನು ಕುರಿತಂತೆ ಮುಖ್ಯವಾದ ಕೆಲವು ಗ್ರಹಿಕೆಗಳನ್ನು ಮಂಡಿಸುತ್ತದೆ. ಅವುಗಳೆಂದರೆ:

1. ಜಾನಪದಕ್ಕೆ ಶಿಸ್ತಿನ ಚೌಕಟ್ಟಿಲ್ಲ. ಅಸ್ತವ್ಯಸ್ತತೆ ಮತ್ತು ಲಕ್ಷಣಾರಹಿತ ಧಾಟಿಗಳೇ ಅದರ ಮೂಲ. ಆದರೆ ಇದು ಜಾನಪದದ ಕೊರತೆಯೇನಲ್ಲ, ಇದು ಅದರ ವಿಶಿಷ್ಟತೆ.

2. ಹಳತರ ಪೊರೆ ಕಳಚಿಕೊಳ್ಳುತ್ತಾ ಹೊಸದನ್ನು ಮೈಗೂಡಿಸಿಕೊಳ್ಳುವುದು ಜಾನಪದ. ಇದೊಂದು ಬತ್ತದ ಸೆಲೆ. ಇಂತಹ ಜಾನಪದ ಶಿಷ್ಟ ಸಾಹಿತ್ಯಕ್ಕೆ ಜೀವಸತ್ವ ನೀಡಿತು.

3. ಶಿಷ್ಟ ಜಾನಪದಕ್ಕೆ ತದ್ವಿರುದ್ಧ. ಪ್ರಾಚೀನ ಸಾಹಿತ್ಯ ಹೇಳಿ ಕೇಳಿ ರಾಜರು ಮತ್ತು ಪುರೋಹಿತರ ಸಾಹಿತ್ಯ. ಇವರಿಬ್ಬರ ಮೇಲ್ಮೈಯನ್ನು ಸಾರುವುದೇ ಅದರ ಗುರಿ.

4. ಜಾನಪದವನ್ನು ಹೊರತುಪಡಿಸಿ ಶಿಷ್ಠಪದ ಪ್ರತ್ಯೇಕ ಅಸ್ತಿತ್ವ ಹೊಂದಿರಲಾರದು.

5. ಜಾನಪದ ಸಾಹಿತ್ಯ ಅನಾದರಣೆಗೆ ಗುರಿಯಾಗುವಲ್ಲಿ ಮತ್ತು ಇದಕ್ಕೆ ವ್ಯತಿರಿಕ್ತವಾಗಿ ಶಿಷ್ಟ ಸಾಹಿತ್ಯ ಪ್ರತಿಷ್ಟಿತ ಸ್ಥಾನ ಗಳಿಸುವಲ್ಲಿ ಸಾಮಾಜಿಕ ಹಾಗೂ ರಾಜಕೀಯ ಕಾರಣಗಳಿವೆ.

ಜಾನಪದದ ಮಿತಿಗಳೇ ಅದರ ಶಕ್ತಿಯೂ ಹೌದು ಎನ್ನುವ ವಿಶಿಷ್ಟ ಗ್ರಹಿಕೆ ಇಲ್ಲಿದೆ. ಜಾನಪದ ಸಾಹಿತ್ಯ ಅನಾದರಣೆಗೆ ಗುರಿಯಾಗುವಲ್ಲಿ ಸಾಮಾಜಿಕ ಹಾಗೂ ರಾಜಕೀಯ ಕಾರಣಗಳಿವೆ ಎನ್ನುವ ಅಂಶ ಹೊಸಬಗೆಯಲ್ಲಿ ಚಿಂತಿಸುವಂತೆ ಮಾಡಿದೆ. ರಾಜಾಶ್ರಯವನ್ನು ನೆಚ್ಚಿಕೊಂಡಿದ್ದರಿಂದ ರಾಜನನ್ನು ವೈಭವೀಕರಿಸುವುದೂ, ಕಾವ್ಯದ ನಾಯಕರ ಜೊತೆ ತಮಗೆ ಆಶ್ರಯವಿತ್ತ ರಾಜನನ್ನು ಸಮೀಕರಿಸುವುದು ಅನಿವಾರ್ಯವಾಗಿತ್ತೆಂಬ ಅಂಶವನ್ನು ವಿವರಿಸಲಾಗಿದೆ. ಹೀಗಿದ್ದರೂ ಪ್ರಾಚೀನ ಸಾಹಿತ್ಯದ ಗುರಿ ರಾಜರು ಮತ್ತು ಪುರೋಹಿತರ ಮೇಲ್ಮೈಯನ್ನು ಸಾರುವುದು ಎನ್ನುವುದರಲ್ಲಿ ಆಂಶಿಕ ಸತ್ಯ ಮಾತ್ರವಿದೆ.

’ವಡ್ಡಾರಾಧನೆ’, ’ಪಂಚತಂತ್ರ’ದಂತಹ ಕೃತಿಗಳು ಕಂಠಸ್ಥ ಸಂಪ್ರದಾಯದ ಕಥಾರೂಪಗಳ ನೇರ ಪ್ರಭಾವಕ್ಕೆ ಒಳಗಾಗಿರುವುದನ್ನು ಗುರುತಿಸುವ ಲೇಖಕರು ಬಹುಮುಖ್ಯವಾಗಿ ನಿರೂಪಣಾ ಶೈಲಿಯ ಜೊತೆ ಸಂವಾದ ಶೈಲಿಯೂ ಬೆರೆತಿರುವ ಕಡೆ, ಆಡುಮಾತಿನ ಕಾಕು, ಗಾದೆ, ನುಡಿಗಟ್ಟುಗಳನ್ನು ಹೊಂದಿಸಿಕೊಂಡ ಸಂಭಾಷಣೆಯ ಜೊತೆಗೆ ಆ ಭಾಷೆಯನ್ನಾಡುವ ಜನಗಳ ಸ್ವಭಾವವೂ ಕೂಡಿಯೇ ದಾಖಲುಗೊಂಡಿರುವುದನ್ನು ಕಾಣಿಸುತ್ತಾರೆ.


ಮಾರ್ಗ ಸಾಹಿತ್ಯದಲ್ಲಿ ಅಂತರ್ಗತವಾಗಿರುವ ಜಾನಪದೀಯ ಅಂಶಗಳನ್ನು ಶೋಧಿಸಿ ಇಲ್ಲಿ ವಿವರಿಸಲಾಗಿದೆ. ತಾಯಿ-ಮಗ, ಅಣ್ಣ-ತಮ್ಮಂದಿರು, ಗೆಳೆತನ, ಮಗ-ತಾಯಿ, ಸವತಿ ಮತ್ಸರ, ಮದುವೆ, ದಾಂಪತ್ಯ, ವೇಶ್ಯೆಯರು, ಕುಡಿತ, ಬೇಟೆ ಈ ವಿಷಯಗಳನ್ನು ನಿರ್ವಹಿಸುವಾಗ ಮಾರ್ಗ ಸಾಹಿತಿಗಳು ಜಾನಪದೀಯ ಅಂಶಗಳನ್ನು ತೆಗೆದುಕೊಂಡು ಕಾವ್ಯಕಟ್ಟಿದ ಸಂದರ್ಭಗಳನ್ನು ಆಯ್ದು ನೀಡಿದ್ದು ಉಪಯುಕ್ತವಾಗಿವೆ. ಇದರೊಂದಿಗೆ ಜನಪದರು ಸಾಹಿತ್ಯ ಸೃಷ್ಟಿಸುವಾಗ ಬಳಸುವ ತಂತ್ರ, ರೂಪ, ಶೈಲಿಗಳಿಂದ ಮಾರ್ಗ ಸಾಹಿತಿಗಳು ಪ್ರೇರಣೆಗೊಂಡಿದ್ದನ್ನು ಉದಾಹರಣೆ ಸಮೇತ ವಿವರಿಸಲಾಗಿದೆ.

ಜಾನಪದ ಸಾಹಿತ್ಯವನ್ನು ಕುರಿತು ಹಿಂದಿನಿಂದಲೂ ನಿರಾಕರಣೆಯ ಧೋರಣೆ ಕಂಡುಬಂದಿದ್ದು ಅದನ್ನು ಪ್ರತಿಭಟಿಸುವ ಮತ್ತು ಜಾನಪದ ಸಾಹಿತ್ಯವು ತಾನು ಬದುಕನ್ನು ನೋಡುವ ಬಗೆ, ಪ್ರತಿಪಾದಿಸುವ ಜೀವನಮೌಲ್ಯ, ಪ್ರಕೃತಿಯೊಂದಿಗೆ ಬದುಕುವ ರೀತಿ ಇತ್ಯಾದಿಗಳ ಮೂಲಕ ಶಿಷ್ಟ ಸಾಹಿತ್ಯಕ್ಕೆ ಪ್ರಭಾವ ಬೀರಿರುವುದನ್ನು ಪ್ರಾಚೀನ, ಮಧ್ಯಕಾಲೀನ ಶಿಷ್ಟ ಸಾಹಿತ್ಯದ ಹಲವು ಉದಾಹರಣೆಗಳ ಮೂಲಕ ಕೃತಿ ಮಂಡಿಸುತ್ತದೆ. ಬೇಂದ್ರೆ ತಮ್ಮ ಕಾವ್ಯಕ್ಕೆ ಜನಪದ ಸಾಹಿತ್ಯದಿಂದ ಮುಖ್ಯಪ್ರೇರಣೆಯನ್ನು ಪಡೆದಿದ್ದನ್ನು ಕೃತಿಯಲ್ಲಿ ಚರ್ಚಿಸಲಾಗಿದೆ.

’ಕುವೆಂಪು ಕಾದಂಬರಿಗಳಲ್ಲಿ ದಲಿತ ಜೀವನ ಚಿತ್ರಣ’ ಎಂಬ ದಲಿತ ಸಂಘರ್ಷ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಬಿ.ಕೃಷ್ಣಪ್ಪನವರ ಲೇಖನ ಹಲವು ಬಗೆಯ ಚರ್ಚೆಗಳನ್ನು ಹುಟ್ಟುಹಾಕಿತ್ತು. ’ಕುವೆಂಪು ತಮ್ಮ ಕಾದಂಬರಿಗಳಲ್ಲಿ ದಲಿತರ ಪರಿಸ್ಥಿತಿಗಳನ್ನು ವರ್ಣಿಸುತ್ತಾರಾದರೂ ಅವರ ಅಂತಃಕರಣವೆಲ್ಲ ಊಳಿಗಮಾನ್ಯ ಜಮೀನುದಾರರ, ಗೌಡರ ಪರವಾಗಿದ್ದು ಬ್ರಾಹ್ಮಣ ವಿರೋಧಿಯಾಗಿದೆಯೇ ಹೊರತು ದಲಿತರ ಪರವಾಗಿಲ್ಲ’ ಎನ್ನುವ ಅಭಿಪ್ರಾಯವನ್ನು ಕೃಷ್ಣಪ್ಪನವರು ವ್ಯಕ್ತಪಡಿಸಿದ್ದರು. ಕುವೆಂಪು ಅವರ ಎರಡು ಕಾದಂಬರಿಗಳನ್ನು ಮೇಲ್ನೋಟಕ್ಕೆ ಓದಿದಾಗ ಕೃಷ್ಣಪ್ಪನವರ ಅಭಿಪ್ರಾಯ ಒಪ್ಪಿಕೊಳ್ಳುವಂತಹದು ಎನಿಸುತ್ತದೆ. ಮುಖ್ಯವಾಗಿ ದಲಿತ ಪಾತ್ರಗಳ ಸಂದರ್ಭದಲ್ಲಿ ಅವರು ಬಳಸುವ ಭಾಷೆ, ಕೆಲವೆಡೆ ದಲಿತರ ಮನೋಲೋಕವನ್ನು ಚಿತ್ರಿಸುವಾಗ ಇದು ಕಾಣುತ್ತದೆ. ಆದರೆ ಅವರ ಕಾದಂಬರಿಗಳ ಒಟ್ಟು ಧ್ವನಿ ದಲಿತರ ಪರವಾಗಿಯೇ ಇದೆ. ಈ ಅಂಶವನ್ನು ಲೇಖಕರು ಕಾದಂಬರಿಗಳಲ್ಲಿ
ಬರುವ ದಲಿತ ಪಾತ್ರ ಚಿತ್ರಣ, ಕಾದಂಬರಿಕಾರ ಈ ಪಾತ್ರಗಳ ಅಂತರಂಗ ಪ್ರವೇಶಿಸಿ ಅವುಗಳ ಮಾನಸಿಕ ತುಮುಲಗಳನ್ನು ಸೂಕ್ಷ್ಮವಾಗಿ ಅಭಿವ್ಯಕ್ತಪಡಿಸುವುದನ್ನು ಸಮರ್ಥ ಉದಾಹರಣೆಗಳೊಂದಿಗೆ ನೀಡುತ್ತಾರೆ. ತಿಮ್ಮಿ ಓಡಿಹೋದ ಕಾರಣಕ್ಕೆ ಸಣ್ಣ ಬೀರನನ್ನು ಅಮಾನುಷವಾಗಿ ದಂಡಿಸುವ ಧಣಿಗಳ ಕ್ರೌರ್ಯವನ್ನು ವರ್ಣಿಸುವುದು, ಈ ಸಂದರ್ಭದಲ್ಲಿಯೇ ಸಣ್ಣ ಬೀರನ ತಾಯಿ ಸೇಸಿ, ಗೌಡರು ತನ್ನ ಮಗನಿಗೆ ’ಹೊನ್ನಾಳಿ ಹೊಡ್ತ’ ಕೊಡಿಸಿದಾಗ ಅದರ ವಿರುದ್ಧ ತೋರುವ ದಿಟ್ಟತನ, ಮುಕುಂದಯ್ಯ ನಾಯಿ ಹುಲಿಯನನ್ನು ಗುತ್ತಿಯಿಂದ ಪಡೆದಾಗ ಅದಕ್ಕೆ ಪ್ರತಿಫಲವಾಗಿ ಕೆಲವು ವಸ್ತುಗಳನ್ನು ನೀಡಿದ ಸಂದರ್ಭದಲ್ಲಿ ಗುತ್ತಿ ತೋರುವ ನೈತಿಕ ನಿಲುವುಗಳು ಎಲ್ಲವೂ ಸಮರ್ಥ ಸಾಕ್ಷ್ಯಗಳಾಗಿವೆ.

’ಕುವೆಂಪು ಕಾದಂಬರಿಗಳ ವಿಮರ್ಶೆ: ಭಗವಾನ್ ಅವರ ದೃಷ್ಟಿ’ ಎಂಬ ಲೇಖನದಲ್ಲಿ ಭಗವಾನ್ ಅವರು ಕುವೆಂಪು ಕಾದಂಬರಿಗಳನ್ನು ಕುರಿತು ಮಾಡಿದ ವಿಮರ್ಶೆಯ ಸಮರ್ಥನೆಯಿದೆ. ಆದರೆ ಒಂದು ವಿಷಯದ ಕುರಿತು ಎಚ್ಚರಿಕೆಯ ಮಾತಿದೆ. ಆ ಮಾತು ಹೀಗಿದೆ: ’ಲೇಖನದ ಕೆಲವು ಭಾಗಗಳಂತೂ ಕುವೆಂಪು ಅವರ ಸಮರ್ಥನೆಗೆ ಮೀಸಲಾಗಿವೆ ಎಂಬ ಭಾವನೆ ಬರುತ್ತದೆ’ ಈ ಮಾತು ಸ್ವತಃ ಈ ಲೇಖಕರ ’ಕುವೆಂಪು
ಕಾದಂಬರಿಗಳಲ್ಲಿ ದಲಿತಲೋಕ’ ಎಂಬ ಲೇಖನಕ್ಕೂ ಸ್ವಲ್ಪಮಟ್ಟಿಗೆ ಅನ್ವಯವಾಗುವಂತಿದೆ!

’ದಲಿತ ಬಂಡಾಯ’ ಮತ್ತು ’ಬಂಡಾಯ ದಲಿತ’ ಎನ್ನುವ ಪದಪ್ರಯೋಗ ಕುರಿತಂತೆ ಜಿ.ಎಸ್. ಶಿವರುದ್ರಪ್ಪ, ಪುರುಷೋತ್ತಮ ಬಿಳಿಮಲೆ ಮತ್ತು ಬರಗೂರು ರಾಮಚಂದ್ರಪ್ಪ ಅವರ ವಿಭಿನ್ನ ಅಭಿಪ್ರಾಯಗಳನ್ನು ಚರ್ಚೆಗೆ ತೆಗೆದುಕೊಳ್ಳಲಾಗಿದೆ. ಅಂತಿಮವಾಗಿ ದಲಿತ ಸಾಹಿತ್ಯದಿಂದ ಬಂಡಾಯ ಸಾಹಿತ್ಯ ಪ್ರತ್ಯೇಕವಾಗಿ ನಿಲ್ಲಲು ಏಕೆ ಹವಣಿಸುತ್ತಿದೆ ಎಂಬ ಕುರಿತು ಎರಡು ಅನುಮಾನಗಳನ್ನು ವ್ಯಕ್ತಪಡಿಸಲಾಗಿದೆ. 1. ದಲಿತ ಸಾಹಿತ್ಯ ಮತ್ತು ಚಳವಳಿಯ ಉದ್ದೇಶಗಳು ಕೆಲವು ಬಂಡಾಯ ಲೇಖಕರನ್ನು ದಿಗಿಲುಗೊಳಿಸಿರಬಹುದೇ? 2. ದಲಿತರನ್ನು ಕುರಿತು ಬರೆಯುವುದರಿಂದ ನಾವೆಲ್ಲ ದಲಿತರೆಂದು ಗುರುತಿಸಲ್ಪಟ್ಟರೆ ಹೇಗೆ? ಎಂಬ ಅಳುಕು ಇವರನ್ನು ಕಾಡಿರಬಹುದೇ? ವಚನ ಚಳವಳಿ ಮತ್ತು ಕುವೆಂಪು ಸಾಹಿತ್ಯದಿಂದ ಪ್ರೇರಣೆ ಪಡೆದು ಹೊರಹೊಮ್ಮಿದ ದಲಿತ ಬಂಡಾಯ ಸಾಹಿತ್ಯ ಚಳುವಳಿಗಳೊಳಗೆ ಜಾತಿ ಸಂಬಂಧಿತ ಎಂತಹ ಸಂಕೀರ್ಣ ನೆಲೆಗಳು ಇದ್ದವು ಎನ್ನುವುದನ್ನು ಈ ಅನುಮಾನಗಳು ಸೂಚಿಸುತ್ತವೆ. ಈ ಅನುಮಾನಗಳು ವಾಸ್ತವದಲ್ಲಿ ನಿಜವಾಗಿದ್ದವೋ ಇಲ್ಲವೋ, ಆದರೆ ಆವರೆಗೂ ಜಾತಿಕಾರಣಕ್ಕಾಗಿ ಅವಮಾನ, ಹಿಂಸೆಗಳನ್ನು ಅನುಭವಿಸುತ್ತ ಬಂದ ದಲಿತಮನಸ್ಸುಗಳು ಪ್ರತಿಯೊಂದು ಬೆಳವಣಿಗೆಯನ್ನು, ಪ್ರತಿಕ್ರಿಯೆಯನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತಿದ್ದವು ಎನ್ನುವುದನ್ನು ತಿಳಿಸುತ್ತಿವೆ.

ವ್ಯವಸ್ಥಿತವಾಗಿ ಹಿಂದಿನಿಂದಲೂ ಜನರ ಮನಸ್ಸಿನಲ್ಲಿ ಬಿತ್ತಲಾದ ಹುಸಿ ನಂಬಿಕೆಗಳು, ಇಪ್ಪತ್ತೊಂದನೆಯ ಶತಮಾನದ ಆಧುನಿಕ ಪ್ರಜ್ಞೆಯನ್ನು ರೂಪಿಸುವ ಹಂಬಲದ ವಿಶ್ವವಿದ್ಯಾಲಯಗಳನ್ನೂ ಆವರಿಸುವುದರ ಬಗ್ಗೆ ಕೃತಿ ಕಳವಳ ವ್ಯಕ್ತಪಡಿಸುತ್ತದೆ. ಪ್ರತಿಭೆ ಎನ್ನುವುದು ದೈವದತ್ತವಾದದ್ದು. ಅದು ಪೂರ್ವ ಜನ್ಮ ಸಂಸ್ಕಾರಗಳಿಂದ ಬರುತ್ತದೆ ಎಂಬಂತಹ ಮಾತುಗಳು ಸಂಸ್ಕೃತ ಕಾವ್ಯ ಮೀಮಾಂಸೆಯಲ್ಲಿ ಪ್ರತಿಪಾದಿಸಲ್ಪಟ್ಟಿವೆ. ಇದರ ಹಿಂದಿರುವ ಜಾತಿಗ್ರಸ್ತ ಮನಸ್ಸುಗಳ ಹುನ್ನಾರವನ್ನು ಗುರುತಿಸಲಾಗಿದೆ. ವಿಶ್ವವಿದ್ಯಾಲಯಗಳು ವಿದ್ಯಾಸಂಸ್ಥೆಗಳೇ ಅಥವಾ ಮತಧರ್ಮ ಪ್ರಸಾರಣೆಯ ಮಠಗಳೇ ಎಂಬ ಆಕ್ರೋಶ ಇಲ್ಲಿದೆ. ತನ್ನ ಜಾತಿ ಸುತ್ತಮುತ್ತಲೇ ಸಂಶೋಧನೆ ಮಾಡುವಂತೆ ಸಂಶೋಧನಾ ವಿದ್ಯಾರ್ಥಿಯನ್ನು ಒತ್ತಾಯಿಸುವ ಹಿಂದಿನ ಪ್ರಾಧ್ಯಾಪಕ ಮನಸ್ಸುಗಳ ಹಿಂದಿನ ಜಾತಿಪ್ರಜ್ಞೆ ಕುರಿತು ವಿಷಾದ ವ್ಯಕ್ತವಾಗಿದೆ.

ಪ್ರಾಚೀನ-ಆಧುನಿಕ ಸಾಹಿತ್ಯ, ಪುರಾಣ-ಜಾನಪದದ ಕುರಿತು ಚಿಕಿತ್ಸಕ ದೃಷ್ಟಿಕೋನವಿರುವ, ದಲಿತರ ಪರಿಸ್ಥಿತಿಯನ್ನು ರೂಪಿಸುವಲ್ಲಿ ಇವುಗಳ ಪಾತ್ರಗಳ ಬಗ್ಗೆ ಎಚ್ಚರವಿರುವ, ಇದರ ಜತೆಜತೆಗೆ ವರ್ತಮಾನದ ದಲಿತರ ಒಟ್ಟು ಸ್ಥಿತಿಗೆ ದಲಿತರನ್ನೂ ಒಳಗೊಂಡಂತೆ ಕಾರಣವಾದ ಅಂಶಗಳ ಕುರಿತು ಸಮಚಿತ್ತದ ದಲಿತಪ್ರಜ್ಞೆಯೊಂದು ಸ್ವಗತದಲ್ಲಿ ಮಾತನಾಡಿದಂತೆ ’ದೇಸಿ ಮಾರ್ಗ’ ಕೃತಿಯಿದೆ. ಕೃತಿಯ ಬಹುಪಾಲು ಲೇಖನಗಳು ದಲಿತ ತಾತ್ವಿಕತೆಯನ್ನು ಹೊಂದಿದ್ದು ’ಹರ್ಮನ್ ಮೋಗ್ಲಿಂಗ್, ’ಡಾ.ಆರ್‍ವಿಯಸ್ ಸುಂದರಮ್’ (ಈ ಲೇಖನ ಆರ್‍ವಿಯಸ್ ಅವರ ಜಾನಪದ ಕೃತಿಗಳ ಬಗ್ಗೆಯೇ ಒತ್ತು ನೀಡಿದ್ದರೆ ಲಗತ್ತಾಗುತ್ತಿತ್ತು) ಹೀಗೆ ಕೆಲವು ಲೇಖನಗಳು ಭಿನ್ನವಾಗಿ ನಿಲ್ಲುತ್ತವೆ. ದಲಿತ ತಾತ್ವಿಕತೆಯನ್ನು ಪ್ರಧಾನವಾಗಿ ಹೊಂದಿದ ಈ ಕೃತಿಯನ್ನು ’ದೇಸಿ ಮಾರ್ಗ’ ಎನ್ನುವುದಕ್ಕಿಂತ ’ದಲಿತ ಮಾರ್ಗ’ ಎಂದು ಹೆಸರಿಸಿದ್ದರೆ ಸೂಕ್ತವೆನಿಸುತ್ತಿತ್ತೇನೋ ಎನಿಸುತ್ತದೆ.

ಡಾ. ಸರ್ಜಾಶಂಕರ ಹರಳಿಮಠ

ಡಾ. ಸರ್ಜಾಶಂಕರ ಹರಳಿಮಠ
ಲೇಖಕ, ಕವಿ ಸರ್ಜಾಶಂಕರ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹರಳಿಮಠ ಗ್ರಾಮದವರು. ’ಅಂತರಾಳ’, ’ಬೆಚ್ಚಿ ಬೀಳಿಸಿದ ಬೆಂಗಳೂರು’, ’ಬಾರಯ್ಯ ಬೆಳದಿಂಗಳೇ’, ’ಸುಡುಹಗಲ ಸೊಲ್ಲು’ ಅವರ ಕೆಲವು ಪ್ರಕಟಿತ ಪುಸ್ತಕಗಳು.


ಇದನ್ನೂ ಓದಿ: ಶೋಷಿತರ ಪ್ರಬಲ ಮಿತ್ರ ಅವರದ್ದೇ ಆದ ಸಂಘಟನೆ: ಜಸ್ಟೀಸ್ ಕೆ.ಚಂದ್ರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -