Homeಮುಖಪುಟನಾಟಕ ವಿಮರ್ಶೆ; ಪ್ರಭಾಸ: ಪ್ರಜ್ವಲಿಸಿದ ಪ್ರತಿಭೆ ಮೇರಿ ಕ್ಯೂರಿ

ನಾಟಕ ವಿಮರ್ಶೆ; ಪ್ರಭಾಸ: ಪ್ರಜ್ವಲಿಸಿದ ಪ್ರತಿಭೆ ಮೇರಿ ಕ್ಯೂರಿ

- Advertisement -
- Advertisement -

ಮಹಿಳೆಯರ ಪ್ರತಿಭೆ, ಚೈತನ್ಯಗಳ ಬಗ್ಗೆ ಅಜ್ಞಾನ, ಅನಾದರವಿದ್ದುದು ಭಾರತದಲ್ಲಿ ಮಾತ್ರವಲ್ಲ, ಇದೊಂದು ಜಾಗತಿಕ ವಿದ್ಯಮಾನವೇ ಆಗಿತ್ತು. ಈ ಅಜ್ಞಾನ, ಅನಾದರಗಳು ಇನ್ನೂ ಪೂರ್ಣ ಅಳಿದಿಲ್ಲ. ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಪೋಲೆಂಡಿನಲ್ಲಿ ಜನಿಸಿದ, ನಂತರ ಫ್ರಾನ್ಸಿನಲ್ಲಿ ನೆಲೆನಿಂತ ಮೇರಿ ಕ್ಯೂರಿ ಅವರೂ ಇಂತಹ ಮನೋಭಾವದ ಸಮಾಜದ ವಾತಾವರಣದಿಂದ ನಲುಗಿದವರು. ಈ ವಾತಾವರಣದಲ್ಲಿಯೂ, ಆಧುನಿಕ ಕಾಲಘಟ್ಟದಲ್ಲಿ ವ್ಯಾಪಕವಾಗಿ ಜನರನ್ನು ನರಳಿಸುತ್ತಿರುವ ಭೀಕರ ಕಾಯಿಲೆ ಕ್ಯಾನ್ಸರ್‌ನ ನಿವಾರಣೆಗೆ ಅತ್ಯುತ್ತಮ ಪರಿಹಾರವಾಗಿ ಒದಗಿರುವ ರೇಡಿಯೋ ವಿಕಿರಣ ಚಿಕಿತ್ಸೆಗೆ ಮೂಲಧಾತುವಾದ ರೇಡಿಯಂ ಧಾತುವನ್ನು ಸಂಶೋಧಿಸಿದ ವಿಜ್ಞಾನಿ ಇವರು. ಇವರ ಬದುಕು ಮತ್ತು ಸಾಧನೆಗಳನ್ನು ಆಧರಿಸಿದ ನಾಟಕ ’ಪ್ರಭಾಸ’. ಪ್ರಭಾಸ ಎಂದರೆ ಕಿರಣ ಎಂದು ಅರ್ಥ.

ಮೈಸೂರಿನ ಪರಿವರ್ತನ ರಂಗ ಸಮಾಜ, ಕಲಾಸುರುಚಿ, ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ ’ಕುತೂಹಲಿ’ ಮೈಸೂರು ವಿಜ್ಞಾನ ನಾಟಕೋತ್ಸವದಲ್ಲಿ ಪ್ರದರ್ಶಿತವಾದ ’ಪ್ರಭಾಸ’ ನಾಟಕವನ್ನು ಧಾರವಾಡದ ಅಭಿನಯ ಭಾರತಿ ರಂಗ ತಂಡದವರು ರಂಗಕ್ಕೆ ತಂದಿದ್ದಾರೆ. ಅಮೆರಿಕದ ರಂಗ ನಿರ್ದೇಶಕ ಅಲನ್ ಅಲ್ಡಾ ರಚಿಸಿದ ಮೂಲ ’ರೇಡಿಯಮ್’ ನಾಟಕವನ್ನು ಸುಮನಾ ಡಿ ಮತ್ತು ಶಶಿಧರ ಡೋಂಗ್ರೆ ಕನ್ನಡಕ್ಕೆ ತಂದಿದ್ದಾರೆ. ಮೈಸೂರಿನ ರಂಗಾಯಣದ ಕಿರುರಂಗಮಂದಿರದಲ್ಲಿ ಈ ನಾಟಕವು ಪ್ರದರ್ಶಿತಗೊಂಡಿತು.

ಮೇರಿ ಕ್ಯೂರಿ

ನಾಟಕ ಮೇರಿ ಕ್ಯೂರಿ ಅವರ ಕೌಟುಂಬಿಕ ಬದುಕು, ಅವರ ವೈಜ್ಞಾನಿಕ ಸಂಶೋಧನೆಯ ವಿವಿಧ ಹಂತದ ಏಳುಬೀಳುಗಳು, ಮಡದಿಯ ಸಾಧನೆಯಲ್ಲಿ ಸಂತೋಷ ಕಾಣುವ ಪತಿ ವಿಜ್ಞಾನಿ ಪಿಯರ್ ಕ್ಯೂರಿ ಕೌಟುಂಬಿಕ ಬದುಕು ಮತ್ತು ಸಂಶೋಧನೆಯಲ್ಲಿ ನೀಡುವ ಸಹಕಾರ, ಸಂಶೋಧನೆಯ ಪ್ರಯೋಗಕ್ಕೆ ತನ್ನನ್ನು ಒಡ್ಡಿಕೊಳ್ಳುವ ಪಿಯರ್ ಅದರಿಂದಲೇ ಅಸು ನೀಗುವುದು, ಇದು ಮೇರಿ ಕ್ಯೂರಿ ಬಾಳಿನಲ್ಲಿ ತುಂಬುವ ಶೂನ್ಯ, ಇಂತಹ ಸಂದರ್ಭದಲ್ಲಿ ಮೇರಿಯವರಿಗೆ ಬೆಂಬಲವಾಗಿ ನಿಲ್ಲುವ ಗೆಳೆಯ ಎಮೆಲ್ ಬೋರಿಲ್, ಸಂದರ್ಭದ ಸಹಜ ಬೆಳವಣಿಗೆಯಲ್ಲಿ ಪರಸ್ಪರ ಹತ್ತಿರವಾಗುವ ಎಮೆಲ್ ಮತ್ತು ಮೇರಿ ಕ್ಯೂರಿ, ಇದು ಎಮೆಲ್ ಕುಟುಂಬದಲ್ಲಿ ಎಬ್ಬಿಸುವ ಬಿರುಗಾಳಿ, ಇವುಗಳನ್ನೆಲ್ಲ ಮೀರಿ ಸಂಶೋಧನೆಯಲ್ಲಿ ತೊಡಗುವ ಮೇರಿ ಕ್ಯೂರಿ, ಯಶಸ್ವಿ ಸಂಶೋಧನೆಗೆ ದೊರಕುವ ಎರಡೆರಡು ನೊಬೆಲ್ ಪ್ರಶಸ್ತಿಗಳು, ಕೊನೆಗೆ ತನ್ನ ಸಂಶೋಧನೆಯ ರೇಡಿಯೋ ವಿಕಿರಣದಿಂದಲೇ ತನ್ನ 66ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸುವ ಮೇರಿ ಕ್ಯೂರಿ.. ಇವೆಲ್ಲವುಗಳು ನಾಟಕದಲ್ಲಿ ಸಹಜವಾಗಿ ಮೂಡಿ ಬರುತ್ತವೆ. ಈ ನಡುವೆ ನಾಟಕ ಧರ್ಮ, ದೇವರು ಮತ್ತು ವಿಜ್ಞಾನದ ನಡುವಿನ ಸಂಘರ್ಷವನ್ನೂ ನಿರೂಪಿಸುತ್ತದೆ. ಹಾಗೆ ನೋಡಿದರೆ ಇದನ್ನೊಂದು ’ವಿಜ್ಞಾನ ನಾಟಕ’ ಎಂದು ಕರೆದುಬಿಟ್ಟರೆ ನಾಟಕಕ್ಕೆ ಅನ್ಯಾಯವಾಗುತ್ತದೆ. ಮನುಷ್ಯ ಸಹಜ ಪ್ರೀತಿ, ದಾಂಪತ್ಯದ ಏಳುಬೀಳುಗಳು, ದಾಂಪತ್ಯೇತರ ಸಂಬಂಧ, ಇಂತಹ ಸಂಬಂಧಗಳು ಉಂಟುಮಾಡುವ ಕೌಟುಂಬಿಕ ಸಮಸ್ಯೆಗಳು ಎಲ್ಲವನ್ನೂ ನಿರ್ದೇಶಕರು (ನಿ: ಸಾಲಿಯಾನ್ ಉಮೇಶ ನಾರಾಯಣ) ಹದವಾಗಿ ಬೆಸೆದಿದ್ದಾರೆ.

ಆರಂಭದ ಸುಮಾರು ಅರ್ಧತಾಸು ನಾಟಕ ಕುತೂಹಲ ಕೆರಳಿಸದೆ ಮಂದಗತಿಯಲ್ಲಿ ಸಾಗಿದರೆ ನಂತರದ ದೃಶ್ಯಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತೆ ಜೀವಪಡೆಯುತ್ತಾ ಸಾಗುತ್ತದೆ. ನಾಟಕದಲ್ಲಿ ಬಳಸಿದ ಪಾಶ್ಚಾತ್ಯ ವೀಡಿಯೋ ತುಣುಕುಗಳ ಹಿನ್ನೆಲೆ, ಪಾಶ್ಚಾತ್ಯ ಸಂಗೀತ ಕೊಂಚ ಅಬ್ಬರದೆನಿಸಿದರೂ ಆ ದೇಶದ ಆವರಣವನ್ನು ಮೂಡಿಸುವುದರಲ್ಲಿ ಸಹಾಯ ಮಾಡಿತು. ಆದರೆ ಒಟ್ಟು ಸಂಗೀತ ಇನ್ನಷ್ಟು ಸುಧಾರಿಸಬೇಕಿತ್ತು (ಸಂಗೀತ: ವಿಶ್ವಜಿತ್ ಹಂಪಿಹೊಳೆ). ನಾಟಕದ ಅಂತಿಮ ಹಂತದಲ್ಲಿ ಬರುವ ಮೇರಿಕ್ಯೂರಿ ನೊಬೆಲ್ ಸ್ವೀಕಾರ ಸಂದರ್ಭದ ಭಾಷಣದ ಸನ್ನಿವೇಶ ಪೇಲವವಾಗಿದ್ದು ಇದನ್ನು ಪರಿಣಾಮಕಾರಿಯಾಗಿ ತರಬಹುದಿತ್ತು.

ಪಿಯರ್ ಕ್ಯೂರಿ

ನಾಟಕದಲ್ಲಿ ಪ್ರತಿಯೊಬ್ಬ ನಟನಟಿಯರೂ ತಮ್ಮ ಪಾತ್ರಕ್ಕೆ ಜೀವ ತುಂಬುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದರು. ಮೇರಿ ಕ್ಯೂರಿ (ಜ್ಯೋತಿ ಪುರಾಣಿಕ), ಮಾರ್ಗರಿತ ಬೋರೆಲ್ (ಜಯಶ್ರೀ ಜೋಶಿ), ಪಾಲ್ ಲಾಂಗೆವಿನ (ಸುನೀಲ ಗಿರಡ್ಡಿ), ಟಾರ್ನ್ ಬ್ಲಾಡ್ (ಅರವಿಂದ ಕುಲಕರ್ಣಿ) ಪಾತ್ರಗಳು ವಿಶೇಷ ಗಮನ ಸೆಳೆದವು. ತಾಂತ್ರಿಕ ನಿರ್ವಹಣೆ (ನಾಗರಾಜ ಪಾಟೀಲ), ಬೆಳಕು (ಯೋಗೀಶ ಬಿ) ಪ್ರಸಾಧನ (ಸಂತೋಷ ಮಹಾಲೆ), ರಂಗ ನಿರ್ವಹಣೆ (ವಿಜಯೇಂದ್ರ ಅರ್ಚಕ) ನಾಟಕಕ್ಕೆ ಪೂರಕವಾಗಿತ್ತು.

ಪಠ್ಯಗಳಿಂದ ವಿಜ್ಞಾನದ ಸಂಗತಿಗಳನ್ನು ತೆಗೆದು, ಆ ಜಾಗದಲ್ಲಿ ಜ್ಯೋತಿಷ್ಯ, ಮತ- ಸಂಪ್ರದಾಯಗಳನ್ನು ತುಂಬುವ ಕೆಲಸ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿದೆ. ಇದು ನಮ್ಮನ್ನು ಗತಕಾಲಕ್ಕೆ ಕೊಂಡೊಯ್ಯುವ ಪ್ರಯತ್ನ ಎಂದು ದೇಶದ ವಿದ್ವಾಂಸರು ಮತ್ತು ಶಿಕ್ಷಣ ತಜ್ಞರು ಎಚ್ಚರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ತನ್ನದೇ ಹೊಸ ಶಿಕ್ಷಣ ನೀತಿಯನ್ನು ತರಲು ಸಜ್ಜಾಗಿದೆ. ತನ್ನ ನೂತನ ರಾಜ್ಯ ಶಿಕ್ಷಣ ನೀತಿಯ ಭಾಗವಾಗಿ ವಿಜ್ಞಾನ ನಾಟಕಗಳನ್ನು ರಾಜ್ಯದ ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳುವ ಯೋಜನೆಯನ್ನು ಸರ್ಕಾರ ರೂಪಿಸಿ ಜಾರಿಗೆ ತಂದರೆ ಮಕ್ಕಳಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವವನ್ನು ಮೂಡಿಸುವ ಕಾರ್ಯ ಹೆಚ್ಚು ಸುಲಭವಾಗಿ ಸಾಧ್ಯವಾಗುತ್ತದೆ.

ಡಾ. ಸರ್ಜಾಶಂಕರ ಹರಳಿಮಠ

ಡಾ. ಸರ್ಜಾಶಂಕರ ಹರಳಿಮಠ
ಲೇಖಕ, ಕವಿ ಸರ್ಜಾಶಂಕರ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹರಳಿಮಠ ಗ್ರಾಮದವರು. ’ಅಂತರಾಳ’, ’ಬೆಚ್ಚಿ ಬೀಳಿಸಿದ ಬೆಂಗಳೂರು’, ’ಬಾರಯ್ಯ ಬೆಳದಿಂಗಳೇ’, ’ಸುಡುಹಗಲ ಸೊಲ್ಲು’ ಅವರ ಕೆಲವು ಪ್ರಕಟಿತ ಪುಸ್ತಕಗಳು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...