ನ್ಯೂಸ್ ಕ್ಲಿಕ್‌ಗೆ ಸಂಬಂಧಿಸಿದ ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ವಿಶೇಷ ಕೋಶವು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ.
ಚೀನಾ ಪರ ಪ್ರಚಾರಕ್ಕಾಗಿ ನ್ಯೂಸ್ ಪೋರ್ಟಲ್ ಭಾರೀ ಹಣವನ್ನು ಪಡೆದಿದೆ ಎಂಬ ಆರೋಪದ ನಂತರ ದೆಹಲಿ ಪೊಲೀಸರ ವಿಶೇಷ ಘಟಕವು ನ್ಯೂಸ್‌ಕ್ಲಿಕ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ-1967ರ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿ ನ್ಯೂಸ್‌ಕ್ಲಿಕ್ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಕೆ ಮಾಡಿದೆ.
ಪಟಿಯಾಲ ಹೌಸ್ ಕೋರ್ಟ್‌ನಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಡಾ ಹರ್ದೀಪ್ ಕೌರ್ ಅವರ ಮುಂದೆ ಆರೋಪಪಟ್ಟಿ ಸಲ್ಲಿಕೆ ಮಾಡಲಾಗಿದೆ. ನ್ಯೂಸ್ ಪೋರ್ಟಲ್ ನ್ಯೂಸ್‌ಕ್ಲಿಕ್ ಮತ್ತು ಅದರ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.
ನ್ಯೂಸ್‌ಕ್ಲಿಕ್ ವಿರುದ್ಧ ಚೀನಾ ಪರ ಪ್ರಚಾರ ನಡೆಸಲು ಹಣ ಪಡೆದಿದೆ ಎಂಬ ಆರೋಪ ಮಾಡಲಾಗಿತ್ತು. ಈ ಬಗ್ಗೆ ದೆಹಲಿ ಪೊಲೀಸರ ವಿಶೇಷ ಕೋಶವು ಕಳೆದ ವರ್ಷ ಯುಎಪಿಎಯ ವಿವಿಧ ಸೆಕ್ಷನ್ ಹಾಗೂ ಭಾರತೀಯ ದಂಡ ಸಂಹಿತೆಯ 120B ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು. ಭಾರತದ ಸಾರ್ವಭೌಮತೆಗೆ ಧಕ್ಕೆ ತರಲು ಮತ್ತು ನಾಗರಿಕರ ನಡುವೆ ವೈಷಮ್ಯವನ್ನು ಬಿತ್ತಲು ಪೋರ್ಟಲ್ ಮುಂದಾಗಿದೆ ಎಂದು ಆರೋಪಿಸಲಾಗಿತ್ತು.
ಪ್ರಕರಣ ಸಂಬಂಧ ನ್ಯೂಸ್‌ಕ್ಲಿಕ್‌ನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು 2023ರ ಅಕ್ಟೋಬರ್ 3ರಂದು ಬಂಧಿಸಲಾಗಿತ್ತು. ನ್ಯೂಸ್‌ಕ್ಲಿಕ್ ಕಚೇರಿ ಮತ್ತು ಸಂಸ್ಥೆಗೆ ಸಂಬಂಧಿಸಿದ ಪತ್ರಕರ್ತರ ನಿವಾಸಗಳಿಂದ 300ಕ್ಕೂ ಹೆಚ್ಚು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಎಲೆಕ್ಟ್ರಾನಿಕ್ ಸಾಧನಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ (ಫೊರೆನ್ಸಿಕ್ ಸೈನ್ಸ್ ಲ್ಯಾಬ್)ಗೆ ಕಳುಹಿಸಲಾಗಿತ್ತು.
ನ್ಯೂಸ್ ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಮತ್ತು ಹೆಚ್‌ಆರ್(HR) ಅಮಿತ್ ಚಕ್ರವರ್ತಿ ಅವರು ಯುಎಪಿಎಯಡಿ ಬಂಧನ ಮತ್ತು ಬಂಧನಕ್ಕೆ ತಡೆ ನಿರಾಕರಿಸಿರುವ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಅ.4ರಂದು ಪುರ್ಕಾಯಸ್ಥ ಮತ್ತು ಚಕ್ರವರ್ತಿಯವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ದೆಹಲಿ ಪೊಲೀಸರು ಸಲ್ಲಿಸಿದ ಮಾಹಿತಿ ಪ್ರಕಾರ, ನೆವಿಲ್ಲೆ ರಾಯ್ ಸಿಂಗಮ್, ಪ್ರಬೀರ್ ಪುರ್ಕಾಯಸ್ಥ ಮತ್ತು ಅಮಿತ್ ಚಕ್ರವರ್ತಿ ಪರಸ್ಪರ ನೇರ ಸಂಪರ್ಕದಲ್ಲಿದ್ದರು ಮತ್ತು ಕಾಶ್ಮೀರವಿಲ್ಲದೆ ಭಾರತದ ನಕ್ಷೆಯನ್ನು ಹೇಗೆ ರಚಿಸುವುದು ಮತ್ತು ಅರುಣಾಚಲ ಪ್ರದೇಶವನ್ನು ವಿವಾದಿತ ಪ್ರದೇಶವೆಂದು ತೋರಿಸುವುದು ಹೇಗೆ ಎಂದು ಇವರು ಚರ್ಚಿಸುತ್ತಿರುವುದು ಕಂಡುಬಂದಿದೆ. ಈ ಉದ್ದೇಶವನ್ನು ಸಾಧಿಸಲು ಆರೋಪಿಗಳು ವಿದೇಶಿ ನಿಧಿಯ ಹೆಸರಿನಲ್ಲಿ ಪಿಪಿಕೆ ನ್ಯೂಸ್‌ಕ್ಲಿಕ್, ಜಿಸ್ಪಾನ್ ಇಂಡಿಯಾ, ಜೆಜೆ ಎಂಟರ್‌ಪ್ರೈಸಸ್, ವರ್ಚುನೆಟ್ ಸಿಸ್ಟಮ್ ಹೆಸರಿನ ಕಂಪನಿಗಳಲ್ಲಿ 115 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು.
ಇದನ್ನು ಓದಿ: ಕಾಂಬೋಡಿಯಾದಲ್ಲಿ ಸಿಲುಕಿಕೊಂಡಿರುವ 5,000 ಭಾರತೀಯರು: ಸೈಬರ್ ವಂಚನೆಗೆ ಬಲವಂತ


