ಕಳೆದ ವಾರವಷ್ಟೆ ಜಾಮೀನು ಪಡೆದ ಅಂತಾರಾಷ್ಟ್ರೀಯ ಖ್ಯಾತಿಯ ಫ್ಯಾಕ್ಟ್‌ಚೆಕ್ಕರ್, ಪತ್ರಕರ್ತ ಮೊಹಮ್ಮದ್ ಜುಬೇರ್ ಅವರ ಪ್ರಕರಣದ ವಿವರವಾದ ತೀರ್ಪು ಮಂಗಳವಾರ ಹೊರಬಿದ್ದಿದೆ. ಜುಬೇರ್ ಅವರು ಕ್ರಿಮಿನಲ್ ಪ್ರಕ್ರಿಯೆಯ ವಿಷವರ್ತುಲದಲ್ಲಿ ಸಿಕ್ಕಿಬಿದ್ದಿದ್ದಾರೆ. ಅಲ್ಲಿನ ಪ್ರಕ್ರಿಯೆಯೇ ಒಂದು ಶಿಕ್ಷೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, “ಬಂಧನವನ್ನು ದಂಡಿಸುವ ಸಾಧನವಾಗಿ ಬಳಸುವಂತಿಲ್ಲ” ಎಂದು ಎಚ್ಚರಿಸಿದೆ.
ವಿಚಾರಣೆಯ ಸಮಯದಲ್ಲಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು, ತರಾತುರಿ ಮತ್ತು ವಿವೇಚನಾರಹಿತ ಬಂಧನಗಳು, ಜಾಮೀನು ಪಡೆಯುವಲ್ಲಿ ತೊಂದರೆ ಮತ್ತು ವಿಚಾರಣಾಧೀನ ಕೈದಿಗಳ ದೀರ್ಘಾವಧಿಯ ಕಾರಾಗೃಹವಾಸದ ವಿಷಯವನ್ನು ಎತ್ತಿಹಿಡಿದು ಟೀಸಿದ್ದರು. ಇದರ ನಂತರ ಜುಬೇರ್ ಅವರು ಸುಮಾರು 22 ದಿನಗಳ ಬಂಧನದಿಂದ ಜಾಮೀನು ಪಡೆದು ಹೊರ ಬಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಬಂಧನವು ದಂಡಿಸುವ ಸಾಧನವೆಂಬಂತೆ ಆಗಬಾರದು ಮತ್ತು ಅದನ್ನು ಹಾಗೆ ಬಳಸಬಾರದು. ಏಕೆಂದರೆ, ಕ್ರಿಮಿನಲ್ ಕಾನೂನಿನಿಂದ ಉಂಟಾಗುವ ಗಂಭೀರ ಪರಿಣಾಮಗಳಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ನಷ್ಟವು ಒಂದಾಗಿದೆ” ಎಂದು ನ್ಯಾಯಮೂರ್ತಿಗಳಾದ ಡಿ.ವೈ ಚಂದ್ರಚೂಡ್ ಮತ್ತು ಎ.ಎಸ್.ಬೋಪಣ್ಣ ಅವರ ಪೀಠವು ನೀಡಿದ ತೀರ್ಪು ಹೇಳಿದೆ.
ಇದನ್ನೂ ಓದಿ: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯರ ಕೆಲಸವನ್ನು ಮಾಧ್ಯಮಗಳೇ ಮಾಡುತ್ತಿವೆ: ಜುಬೇರ್
“ಕೇವಲ ಆರೋಪಗಳ ಆಧಾರದ ಮೇಲೆ ಮತ್ತು ನ್ಯಾಯಯುತ ವಿಚಾರಣೆಯಿಲ್ಲದೆ ವ್ಯಕ್ತಿಗಳನ್ನು ಶಿಕ್ಷಿಸಬಾರದು…ಬಂಧಿಸುವ ಅಧಿಕಾರವನ್ನು ಮನಸ್ಸಿನ ಅನ್ವಯವಿಲ್ಲದೆ ಮತ್ತು ಕಾನೂನನ್ನು ಪರಿಗಣಿಸದೆ ಚಲಾಯಿಸಿದಾಗ ಅದು ಅಧಿಕಾರದ ದುರುಪಯೋಗವಾಗುತ್ತದೆ” ತೀರ್ಪು ಹೇಳಿದೆ.
ದೆಹಲಿ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಪರಿಹಾರ ಕೋರಿದ್ದ ಮೊಹಮ್ಮದ್ ಜುಬೇರ್ ಅವರನ್ನು ಶೀಘ್ರ ಬಿಡುಗಡೆ ಮಾಡಲು ಜುಲೈ 20 ರಂದು ನ್ಯಾಯಾಲಯವು ತೀರ್ಪಿನ ಆಪರೇಟಿವ್ ಭಾಗವನ್ನು ಬಿಡುಗಡೆ ಮಾಡಿತ್ತು.
ನಾಲ್ಕು ವರ್ಷಗಳ ಹಿಂದೆ ಜುಬೇರ್ ಹಂಚಿಕೊಂಡಿದ್ದ ಜನಪ್ರಿಯ ಹಿಂದಿ ಚಲನಚಿತ್ರದ ಸ್ಕ್ರೀನ್‌ಶಾಟ್ ವಿಚಾರದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗುವುದರೊಂದಿಗೆ ಅವರ ವಿರುದ್ಧ ಸರಣಿ ಪ್ರಕರಣಗಳ ನಾಟಕೀಯ ಘಟನೆ ಪ್ರಾರಂಭವಾಯಿತು. ಇದರ ಜೊತೆಗೆ ಇತರ ದೂರುಗಳ ಮೇಲೂ ಜುಬೇರ್ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಯಿತು.
ಇದನ್ನೂ ಓದಿ: ಜುಬೇರ್‌ಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್; ನ್ಯಾಯಾಲಯದಲ್ಲಿ ಏನಾಯಿತು? | ಸಂಕ್ಷಿಪ್ತ ವಿವರಣೆ
ಬಂಧನಕ್ಕೆ ಕೆಲವು ದಿನಗಳ ಮೊದಲು, ಮೊಹಮ್ಮದ್ ಜುಬೈರ್ ಅವರು ಪ್ರವಾದಿ ಮುಹಮ್ಮದ್ ಕುರಿತು ಬಿಜೆಪಿಯ ನೂಪುರ್ ಶರ್ಮಾ ಅವರ ಹೇಳಿಕೆಗಳನ್ನು ಹಂಚಿಕೊಂಡಿದ್ದರು. ಅದು ವಿಶ್ವದ ಗಮನ ಸೆಳೆದು ವಿಶ್ವದಾದ್ಯಂತ ಆಕ್ರೋಶಕ್ಕೆ ಕಾರಣವಾಗಿ, ಆಡಳಿತರೂಢ ಬಿಜೆಪಿ ಸರ್ಕಾರ ತೀವ್ರ ಮುಜುಗರಕ್ಕೆ ಈಡಾಗಿತ್ತು.
ಜುಲೈ 20 ರಂದು, ಸುಪ್ರೀಂಕೋರ್ಟ್ ಅವರಿಗೆ ಜಾಮೀನು ನೀಡಿ, ಯುಪಿಯ ವಿಶೇಷ ತನಿಖೆಯನ್ನು ರದ್ದುಗೊಳಿಸಿತು ಮತ್ತು ಎಲ್ಲಾ ಯುಪಿ ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸಿತು. ಮೊಹಮ್ಮದ್ ಜುಬೇರ್ ಟ್ವೀಟ್ ಮಾಡುವುದನ್ನು ನಿಲ್ಲಿಸಬೇಕು ಎಂಬ ಉತ್ತರ ಪ್ರದೇಶ ಸರ್ಕಾರದ ಮನವಿಯನ್ನು ನ್ಯಾಯಮೂರ್ತಿಗಳು ತಿರಸ್ಕರಿಸಿದರು.


