ಕರ್ನಾಟಕ ರಾಜಕಾರಣದ ಮಟ್ಟಿಗೆ `ಫೀನಿಕ್ಸ್ ಪೊಲಿಟಿಷಿಯನ್’ ಅಂತಲೇ ಹೆಸರಾದ ದೇವೇಗೌಡರು ಈ ಉಪಚುನಾವಣೆಯ ಫಲಿತಾಂಶದ ನಂತರ ಗಂಭೀರ ಆತ್ಮವಿಮರ್ಶೆ ಮಾಡಿಕೊಳ್ಳಲೇಬೇಕಾದ ಸಂದಿಗ್ಧತೆ ಎದುರಾಗಿದೆ. ಜೆಡಿಎಸ್‍ನ ಶೂನ್ಯ ಸಂಪಾದನೆ ತಳ್ಳಿಹಾಕುವಂತಹ ಸಂಗತಿಯಲ್ಲ. ಯಾರು ಏನೇ ಹೇಳಲಿ ದೇವೇಗೌಡರ ಪೊಲಿಟಿಕ್ಸ್ ನಿಂತಿರುವುದೇ ಜಾತಿರಾಜಕಾರಣದ ಬುನಾದಿಯ ಮೇಲೆ. ಪ್ರಧಾನಿ ಹುದ್ದೆಗೇರಿ `ರಾಷ್ಟ್ರೀಯ ನಾಯಕ’ನಾಗುವ ವೈಯಕ್ತಿಕ ಅವಕಾಶ ಒದಗಿಬಂದಾಗಲು ಅವರು ತಮ್ಮ ಪಕ್ಷವನ್ನು `ಜಾತಿ ಕಂಫರ್ಟ್ ಜೋನ್’ನಿಂದ ಆಚೆಗೆ ಹರಡುವ ಪ್ರಯತ್ನವನ್ನೇ ಮಾಡಲಿಲ್ಲ. ಇತ್ತ ಕುಮಾರಸ್ವಾಮಿ ಎರಡೆರಡು ಬಾರಿ ಮುಖ್ಯಮಂತ್ರಿಯಾದರು ಹಳೇ ಮೈಸೂರು ಪ್ರಾಂತ್ಯದಾಚೆಗೆ ಜೆಡಿಎಸ್ ತನ್ನ ಪ್ರಭಾವ ವಿಸ್ತರಿಸಲಿಲ್ಲ. ಕಾರಣ ಸ್ಪಷ್ಟ. ರಾಜ್ಯದ ರಾಜಕಾರಣವನ್ನು ನಿರ್ಧರಿಸಬಲ್ಲ ಎರಡು ಪ್ರಭಾವಿ ಜಾತಿಗಳಲ್ಲಿ ಒಂದಾದ ಒಕ್ಕಲಿಗ ವೋಟ್ ಬ್ಯಾಂಕ್ ದಾಟುವ ಯಾವ ರಿಸ್ಕೂ ದೇವೇಗೌಡರಿಗಾಗಲಿ, ಅವರ ಕುಟುಂಬಕ್ಕಾಗಿ ಬೇಕಾಗಿರಲಿಲ್ಲ. ಏನಿಲ್ಲವೆಂದರೂ 35 ರಿಂದ 40 ಸೀಟುಗಳನ್ನು ಗೆಲ್ಲಿಸಬಹುದಾದ ಆರೇಳು ಜಿಲ್ಲೆಗಳ ಪ್ರಭಾವಿ ಒಕ್ಕಲಿಗ ಸಮುದಾಯದ ಅಧಿಪತ್ಯವನ್ನು ಸಿದ್ಧಿಸಿಕೊಂಡರೆ ರಾಜಕಾರಣದಲ್ಲಿ ಚಲಾವಣೆಗೆ ಬರುವುದು ಕಷ್ಟವೇನಲ್ಲ. ಇದು ಜೆಡಿಎಸ್‍ನ ಲಾಜಿಕ್ಕು. ಇಷ್ಟು ದಿನ ಒಕ್ಕಲಿಗ ಸಮುದಾಯವು ಕೂಡಾ ದೇವೇಗೌಡರು ಮತ್ತು ಜೆಡಿಎಸ್ ಅನ್ನು ತಮ್ಮ ಜಾತಿ ಅಸ್ಮಿತೆಯ ಭಾಗವಾಗಿಯೇ ಕಂಡಿದ್ದರಿಂದ ಜೆಡಿಎಸ್, ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಎಂಥಾ ಪ್ರತಿರೋಧಗಳು ಎದುರಾದರೂ ಗೆಲುವಿನ ದಡ ಮುಟ್ಟುತ್ತಿತ್ತು. ಈ ಲೆಕ್ಕಾಚಾರದ ಅಡಿಯಲ್ಲೆ ದೊಡ್ಡದೊಡ್ಡ ಘಟಾನುಘಟಿ ನಾಯಕರುಗಳನ್ನೂ ಸೈಡ್‍ಲೈನ್ ಮಾಡಿ ತಮ್ಮ ಕುಟುಂಬ ರಾಜಕಾರಣವನ್ನು ವಿಸ್ತರಿಸುತ್ತಾ ಬಂದರು. ಆದರೆ ಫಲಿತಾಂಶ ಅವರ ಜಾತಿ ರಾಜಕಾರಣದ ಅಡಿಪಾಯಕ್ಕೇ ಭರ್ಜರಿ ಏಟು ಕೊಟ್ಟಿದೆ.
ಉಪ ಚುನಾವಣೆ ನಡೆದ ಕೆ.ಆರ್.ಪೇಟೆ, ಚಿಕ್ಕಬಳ್ಳಾಪುರ, ಹೊಸಕೋಟೆ ಮತ್ತು ಹುಣಸೂರು ಕ್ಷೇತ್ರಗಳು ಜೆಡಿಎಸ್‍ನ ಭದ್ರ ಬೇರುಗಳಿರುವ ಕ್ಷೇತ್ರಗಳು. ಇಲ್ಲಿ ಒಕ್ಕಲಿಗ ಮತದಾರರೇ ನಿರ್ಣಾಯಕ. ಆದರೆ ಈ ಎಲ್ಲಾ ಕ್ಷೇತ್ರಗಳಲ್ಲಿ ಜೆಡಿಎಸ್ ಸೋತಿದೆ. ಹೊಸಕೋಟೆಯಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡರನ್ನು ಬೆಂಬಲಿಸುವ ಮೂಲಕ ಜೆಡಿಎಸ್ ತನ್ನ ಮತದಾರರನ್ನು ಬೇರೆಯವರತ್ತ ಕೈಚೆಲ್ಲಿ ಕುಳಿತುಕೊಂಡಿದ್ದರೆ, ಹುಣಸೂರು ಮತ್ತು ಚಿಕ್ಕಬಳ್ಳಾಪುರಗಳಲ್ಲಿ ಪಾರ್ಟಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಹೊಸಕೋಟೆ ಹೊರತುಪಡಿಸಿ ಇನ್ನುಳಿದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಇದೇ ಮೊದಲ ಬಾರಿ ಗೆಲುವಿನ ನಗೆ ಬೀರಿದೆ. ನಿರ್ದಿಷ್ಟವಾಗಿ ಕೆ.ಆರ್.ಪೇಟೆಯಲ್ಲಿ ಬಿಜೆಪಿಯ ನಾರಾಯಣ ಗೌಡ ಗೆದ್ದಿರೋದು ಜೆಡಿಎಸ್‍ಗೆ ದೊಡ್ಡ ಆಘಾತವೇ ಸರಿ. ಯಾಕೆಂದರೆ ದೇವೇಗೌಡರ ಕುಟುಂಬ ಈ ಕ್ಷೇತ್ರವನ್ನು ತಮ್ಮ ಪ್ರತಿಷ್ಠೆಯ ಕಣವಾಗಿ ಸ್ವೀಕರಿಸಿತ್ತು. ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಅಭ್ಯರ್ಥಿಯ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸುವಷ್ಟರಮಟ್ಟಿಗೆ ಇಲ್ಲಿ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಒಕ್ಕಲಿಗರು ದೇವೇಗೌಡರ ಮೇಲಿನ ನಿಷ್ಠೆಯಿಂದ ವಿಮುಖರಾದ್ದರಿಂದ ಯಡ್ಯೂರಪ್ಪನವರ ತವರು ಕ್ಷೇತ್ರವಾದ ಇಲ್ಲಿ ಬಿಜೆಪಿ ಚೊಚ್ಚಲ ನಗೆ ಬೀರಿದೆ.
ಹಾಗೆ ನೋಡಿದರೆ, ಕಳೆದ ಲೋಕಸಭಾ ಚುನಾವಣೆಯಲ್ಲೆ ದೇವೇಗೌಡರ `ಜಾತಿ ಬ್ರಹ್ಮಾಸ್ತ್ರ’ ತನ್ನ ಮೊನಚು ಕಳೆದುಕೊಂಡಿದ್ದರ ಸೂಚನೆಗಳು ಲಭಿಸಿದ್ದವು. ಇಪ್ಪತ್ತೆಂಟು ಕ್ಷೇತ್ರಗಳ ಪೈಕಿ ಜೆಡಿಎಸ್ ಗೆಲ್ಲಲು ಸಾಧ್ಯವಾದದ್ದು ಕೇವಲ ಒಂದರಲ್ಲಿ ಮಾತ್ರ. ಸ್ವತಃ ದೇವೇಗೌಡರು ಮತ್ತವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ, ಕ್ರಮವಾಗಿ ತುಮಕೂರು ಹಾಗೂ ಮಂಡ್ಯದಲ್ಲಿ ಸೋಲನುಭವಿಸಿದ್ದರು. ಇವೆರಡೂ ಒಕ್ಕಲಿಗ ಮತದಾರರ ಪ್ರಾಬಲ್ಯವಿರುವ ಕ್ಷೇತ್ರಗಳು ಅನ್ನೋದು ಇಲ್ಲಿ ಗಮನಾರ್ಹ. ಹಾಸನದಲ್ಲಿ ಎಚ್.ಡಿ.ರೇವಣ್ಣ ಮೈಚಳಿ ಬಿಟ್ಟು ತಮ್ಮ ಕಾಂಗ್ರೆಸ್ ವಿರೋಧಿಗಳ ಮನೆಗೂ ಹೋಗಿ ರಾಜಿಸಂಧಾನಕ್ಕೆ ಮುಂದಾಗದಿದ್ದರೆ ಜೆಡಿಎಸ್ ಒಂದೂ ಸ್ಥಾನವಿಲ್ಲದೆ ಭಾರೀ ಮುಖಭಂಗ ಅನುಭವಿಸಬೇಕಾಗುತ್ತಿತ್ತೇನೊ.
ಮಂಡ್ಯದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಷ್‍ರ ಎದುರು ತಮ್ಮ ಕುಟುಂಬದ ನಿಖಿಲ್ ಕುಮಾರಸ್ವಾಮಿಯನ್ನು ಅಖಾಡಕ್ಕಿಳಿಸಿದ್ದು ದೇವೇಗೌಡರು ಮಾಡಿದ ದೊಡ್ಡ ಯಡವಟ್ಟು. ಒಕ್ಕಲಿಗರು ಮೊದಲ ಬಾರಿ ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ದನಿ ಬಿಚ್ಚಲು ಅದು ಅವಕಾಶ ಮಾಡಿಕೊಟ್ಟಿತು. ಅದರ ಪ್ರಭಾವವನ್ನು ಸ್ವತಃ ಗೌಡರು ತುಮಕೂರಿನಲ್ಲೂ ಅನುಭವಿಸಬೇಕಾಗಿ ಬಂದಿತು.
ಈ ಉಪಚುನಾವಣೆಯ ಫಲಿತಾಂಶ ಗೌಡರ ರಾಜಕಾರಣದಿಂದ ಒಕ್ಕಲಿಗರು ಮತ್ತಷ್ಟು ವಿಮುಖರಾಗಿರುವುದನ್ನು ಒತ್ತಿ ಹೇಳುತ್ತಿದೆ. ಅಧಿಕಾರಕ್ಕಾಗಿ ಯಾವ ಪಕ್ಷದ ಜೊತೆಗೆ ಬೇಕಾದರೂ ಮೈತ್ರಿಗೆ ಸಿದ್ಧ ಎಂಬ ದೇವೇಗೌಡರ ಪಾರ್ಟಿಯ ಚಂಚಲ ನಿಲುವುಗಳು ಕೂಡಾ ಒಕ್ಕಲಿಗರು ಜೆಡಿಎಸ್‍ನಿಂದ ದೂರ ಸರಿಯುವಂತೆ ಮಾಡಿರುವ ಸಾಧ್ಯತೆಯುಂಟು. ದೇವೇಗೌಡರು ತಮ್ಮನ್ನು ತಾವು ಒಕ್ಕಲಿಗ ನಾಯಕ ಎಂದು ಬಿಂಬಿಸಿಕೊಂಡಂತೆ, ಅವರ ಮಗ ಕುಮಾರಸ್ವಾಮಿಯವರು ತಮ್ಮನ್ನು ಪ್ರೊಜೆಕ್ಟ್ ಮಾಡಿಕೊಳ್ಳುವಲ್ಲಿ ಎಡವುತ್ತಾ ಬಂದದ್ದು ಕೂಡಾ ಜೆಡಿಎಸ್‍ನ ಈ ಪರಿಸ್ಥಿತಿಗೆ ಮತ್ತೊಂದು ಕಾರಣ.
ಕುಮಾರಸ್ವಾಮಿಯವರ ವೈಖರಿಗೆ ಪಕ್ಷದೊಳಗೇ ಆಂತರಿಕ ಬಂಡಾಯವೂ ಭುಗಿಲೆದ್ದಿದೆ. ಉಪಚುನಾವಣೆಗೆ ಕೆಲ ದಿನ ಮೊದಲು ಬಸವರಾಜ ಹೊರಟ್ಟಿ, ಟಿ.ಎ.ಶರವಣ ಮೊದಲಾದ ನಾಯಕರ ನಿಯೋಗವೊಂದು ದೇವೇಗೌಡರನ್ನು ಭೇಟಿಯಾಗಿ ಕುಮಾರಸ್ವಾಮಿ ವಿರುದ್ಧ ದೂರು ಹೇಳಿಕೊಂಡಿದ್ದರು. ಅವರೆಲ್ಲ ರೆಸಾರ್ಟ್ ಬಂಡಾಯಕ್ಕೂ ಅಣಿಯಾಗಿದ್ದರು. ಕೊನೇಕ್ಷಣದಲ್ಲಿ ಅದು ರದ್ದಾಯ್ತು. ಆದರೆ ಜಿ.ಟಿ.ದೇವೇಗೌಡ, ಸಿ.ಎಸ್.ಪುಟ್ಟರಾಜು ಥರದ ನಾಯಕರಿಗೆ ಇವತ್ತಿಗೂ ಬೇಗುದಿ ಶಮನವಾಗಿಲ್ಲ. ಬೈ ಎಲೆಕ್ಷನ್ ಹೊರಬಿದ್ದ ಬೆನ್ನಿಗೇ ಜೆಡಿಎಸ್‍ನ ವೈಎಸ್‍ವಿ ದತ್ತ, “ಪಕ್ಷವನ್ನು ಉಳಿಸೋದು ದಿನೇದಿನೆ ಕಷ್ಟವಾಗುತ್ತಿರೋದ್ರಿಂದ ಈಗ ಕೆಲ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯ ಬಂದಿದೆ. ಈ ಕಠಿಣ ನಿರ್ಧಾರ ತಗೋಳದಿದ್ರೆ ಪಕ್ಷಕ್ಕೆ ಉಳಿಗಾಲವಿಲ್ಲ ಅಂತ ದೇವೇಗೌಡರಿಗೆ ನಾನೇ ಹೇಳ್ತೀನಿ” ಎಂದು ಹೇಳಿರುವುದು ಜೆಡಿಎಸ್ ಒಳಗಿನ ಬೇಗುದಿಯನ್ನು ಸೂಚಿಸುತ್ತದೆ. ಈ ಫಲಿತಾಂಶವು ಈಗಾಗಲೇ ಪಕ್ಷದಿಂದ ಒಂದು ಕಾಲು ಹೊರಗಿಟ್ಟು ಕೂತಿರುವ ನಾಯಕರ ಸಂಖ್ಯೆಯನ್ನು ಮತ್ತು ಅವರ ಧೈರ್ಯವನ್ನು ಹಿಗ್ಗಿಸಿದರೆ ಅಚ್ಚರಿಯಿಲ್ಲ.
ದೇವೇಗೌಡರಿಗೆ ಇಂತಹ ಆಂತರಿಕ ಬಂಡಾಯಗಳೇನು ಹೊಸದಲ್ಲ. ಆದರೆ ಒಕ್ಕಲಿಗ ಸಮುದಾಯವೇ ತಮ್ಮ ಕುಟುಂಬದಿಂದ ನಿಧಾನಕ್ಕೆ ಹಿಂದೆ ಸರಿಯುತ್ತಿರುವುದು ಮಾತ್ರ ಅವರ `ಫೀನಿಕ್ಸ್’ ಮನಸ್ಸನ್ನು ಕಂಗೆಡಿಸದೇ ಇರಲಾರದು.



ಒಬ್ಬ ವ್ಯಕ್ತಿ ಎಲ್ಲಾ ಕಾಲಕ್ಕೂ, ಎಲ್ಲಾ ಜನರನ್ನೂ ಮೂರ್ಖರನ್ನಾಗಿಸುವುದು ಸಾಧ್ಯವಿಲ್ಲ.