Homeಮುಖಪುಟಒಂದು ಉಪಚುನಾವಣೆಯ ಫಲಿತಾಂಶ: ಎಷ್ಟೊಂದು ಸೂಚನೆಗಳು! ಎಷ್ಟೊಂದು ಮುನ್ಸೂಚನೆಗಳು!

ಒಂದು ಉಪಚುನಾವಣೆಯ ಫಲಿತಾಂಶ: ಎಷ್ಟೊಂದು ಸೂಚನೆಗಳು! ಎಷ್ಟೊಂದು ಮುನ್ಸೂಚನೆಗಳು!

- Advertisement -
- Advertisement -

ನರವಿಜ್ಞಾನದಲ್ಲಿ “ಸಂಪೂರ್ಣ ಇಲ್ಲವೇ ಅಪೂರ್ಣ” ಎನ್ನುವ ನಿಯಮವೊಂದಿದೆ. ಇಂಗ್ಲಿಷ್ ನಲ್ಲಿ ಇದಕ್ಕೆ Or None Law ಅಂತ ಕರೆಯುತ್ತಾರೆ. ಇದರ ಪ್ರಕಾರ ಮಿದುಳಿಗೆ ಸಂಜ್ಞೆಗಳನ್ನೂ ಹೊತ್ತೊಯ್ಯುವ ದೇಹದ ನರವಾಹಕಗಳು ಅಂತಹ ಸಂಜ್ಞೆಗಳನ್ನು ಅರ್ಧ ಸ್ವೀಕರಿಸುವುದು ಅಂತ ಇಲ್ಲ. ಒಂದು ಮಿತಿಯಾಚೆಗೆ ಅವುಗಳನ್ನು ಸಂಪೂರ್ಣ ಸ್ವೀಕರಿಸುತ್ತವೆ. ಆ ಮಿತಿಯ ಕೆಳಗಿದ್ದರೆ ಸ್ವೀಕರಿಸುವುದೇ ಇಲ್ಲ. ನಮ್ಮ ಮತದಾರರ ನೈತಿಕಪ್ರಜ್ಞೆಯನ್ನೂ ಇದೇ ರೀತಿ ಅರ್ಥಮಾಡಿಕೊಳ್ಳಬೇಕಿದೆ.

ಕರ್ನಾಟಕದ 17 ಮಂದಿ “ಅನರ್ಹ ಮಾಜಿ ಶಾಸಕರ” ಪೈಕಿ 11 ಮಂದಿಯನ್ನು ಮತದಾರರು ಡಿಸೆಂಬರ್ 5ರಂದು ನಡೆದ ಉಪಚುನಾವಣೆಯಲ್ಲಿ ‘ಮಾಜಿ-ಅನರ್ಹ, ಹಾಲಿ ಶಾಸಕರನ್ನಾಗಿ” ಪರಿವರ್ತಿಸಿದ್ದಾರೆ. ಯಥಾಪ್ರಕಾರ, ಜನತಾ ನ್ಯಾಯಾಲಯದ ತೀರ್ಪು ಅರ್ಥಾತ್ ಮತದಾರರ ತೀರ್ಪು ಪವಿತ್ರ ಅಂತ ಎಲ್ಲರೂ ಹೇಳುತ್ತಿದ್ದಾರೆ. ಹೀಗೆ ಹೇಳುವುದು ಸುಳ್ಳು ಅಂತ ಹೇಳುವವರಿಗೂ ಗೊತ್ತು ಕೇಳಿಸಿಕೊಳ್ಳುವವರಿಗೂ ಗೊತ್ತು. ಮತದಾರರ ಎಲ್ಲಾ ತೀರ್ಪುಗಳು ಪವಿತ್ರವಾಗಿ ಏನೂ ಇರುವುದಿಲ್ಲ. ಅದು ಅಂತಿಮ ಅಂತ ಅಂತ ಒಪ್ಪಿಕೊಳ್ಳುವುದು ಮಾತ್ರ ಅನಿವಾರ್ಯ. ಅಷ್ಟೇ.

ನಮ್ಮಲ್ಲಿ ನ್ಯಾಯಾಂಗನಿಂದನೆ ಅಂತ ಒಂದು ಇದೆ. ಅಂದರೆ ನ್ಯಾಯಾಲಯ ನೀಡಿದ ತೀರ್ಪಿನ ಹಿಂದೆ ಯಾವುದೋ ಆಮಿಷ ಇತ್ತು ಅಂತ ಆರೋಪಿಸಬಾರದು. ಹಾಗೆ ಆರೋಪಿಸಿದರೆ ಅದು ಅಪರಾಧವಾಗುತ್ತದೆ. ಅದೃಷ್ಟವಶಾತ್ ಜನತಾ ನ್ಯಾಯಾಲಯ ನೀಡುವ ತೀರ್ಪಿನ ವಿಚಾರದಲ್ಲಿ ಇಂತಹ ನಿರ್ಬಂಧಗಳೇನೂ ಇಲ್ಲದ ಕಾರಣ ಕೆಲ ಅಹಿತವಾದ ಪ್ರಶ್ನೆಗಳನ್ನು ಈ ಉಪಚುನಾವಣೆಯ ಫಲಿತಾಂಶಗಳ ಬಗ್ಗೆ ಎತ್ತಬಹುದು ಅನ್ನಿಸುತ್ತದೆ. ಅದಕ್ಕೆ ಮೊದಲು ದಾಖಲಾತಿಯ ಉದ್ದೇಶದಿಂದ ಈ ಉಪಚುನಾವಣೆಯ ಹಿನ್ನೆಲೆಯನ್ನು ಸ್ಪಷ್ಟವಾಗಿ ನಮೂದಿಸಬೇಕಾಗಿದೆ.

ಕರ್ನಾಟಕದಲ್ಲಿ ಹೋದವಾರ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದು ನಿನ್ನೆ (ಡಿಸೆಂಬರ್ 9) ಫಲಿತಾಂಶ ಬಂದಿದೆ. ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ(2018) ಯಾವುದೇ ಪಕ್ಷಕ್ಕೆ ಬಹುಮತ ಬಾರದ ಹಿನ್ನೆಲೆಯಲ್ಲಿ ರಚನೆಯಾದ ಕಾಂಗ್ರೆಸ್-ಜೆಡಿ(ಎಸ್) ಸಮ್ಮಿಶ್ರ ಸರಕಾರವನ್ನು ಉರುಳಿಸಿ ಬಿಜೆಪಿಯ ಸರಕಾರವನ್ನು ಪ್ರತಿಷ್ಠಾಪಿಸಲು ಅನುವು ಮಾಡಿಕೊಡುವ ಉದ್ದೇಶದಿಂದ 17 ಮಂದಿ ಕಾಂಗ್ರೆಸ್/ಜೆಡಿಎಸ್ ಶಾಸಕರು ರಾಜೀನಾಮೆ ನೀಡಿ ಪಕ್ಷಾಂತರ ಕಾಯ್ದೆಯಡಿ ಅನರ್ಹಗೊಂಡರು. ಈ ಕಾರಣದಿಂದಾಗಿ ಖಾಲಿಯಾದ ಸ್ಥಾನಗಳಿಗೆ ಉಪಚುನಾವಣೆ ನಡೆದದ್ದು. ಖಾಲಿ ಇರುವ ಇನ್ನೆರಡು ಸ್ಥಾನಗಳಿಗೆ ಹೋದ ಚುನಾವಣೆಯ ಸಂಬಂಧ ತಕರಾರು ಇತ್ಯರ್ಥವಾಗದ ಕಾರಣ ಉಪಚುನಾವಣೆ ನಡೆದಿಲ್ಲ. ರಾಜೀನಾಮೆ ನೀಡಿದ ಶಾಸಕರು ಬಿಜೆಪಿ ಸೇರಿದ್ದಾರೆ. ಅವರಲ್ಲಿ 13 ಮಂದಿ ಬಿಜೆಪಿ ಅಭ್ಯರ್ಥಿಗಳಾಗಿ ತಾವು ರಾಜೀನಾಮೆ ನೀಡಿದ ಸ್ಥಾನಗಳಿಂದ ಸ್ಪರ್ಧಿಸಿದ್ದಾರೆ ಮತ್ತು 11 ಮಂದಿ ಗೆದ್ದಿದ್ದಾರೆ. ಬಿಜೆಪಿ ಈ ಉಪಚುನಾವಣೆಯಲ್ಲಿ ಒಟ್ಟು 12 ಸ್ಥಾನಗಳನ್ನು ಗೆದ್ದುಕೊಂಡಿದೆ. ಉಳಿದ ಮೂರು ಸ್ಥಾನಗಳಲ್ಲಿ ಎರಡು ಕಾಂಗ್ರೆಸ್ ಗೆದ್ದುಕೊಂಡಿದ್ದರೆ, ಇನ್ನೊಂದು ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ 17 ಮಂದಿ (14 ಕಾಂಗ್ರೆಸ್ + 3 ಜೆಡಿಎಸ್) ವಾಸ್ತವದಲ್ಲಿ ತಮ್ಮ ಶಾಸಕ ಸ್ಥಾನವನ್ನು ಬಿಜೆಪಿಗೆ ಮಾರಿಕೊಂಡದ್ದು ಎಂಬ ನಿರ್ಣಯಕ್ಕೆ ಬಂದು ಅಂದಿನ ವಿಧಾನ ಸಭಾಧ್ಯಕ್ಷರು ಅಷ್ಟೂ ಮಂದಿಯನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರು ಮತ್ತು ಅವರು ಈ ವಿಧಾನಸಭೆಯ ಅವಧಿ ಇರುವವರೆಗೆ ಮರುಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೂ ನಿಷೇಧ ಹೇರಿದ್ದರು. ಮುಂದೆ ಸುಪ್ರೀಂಕೋರ್ಟ್ ಕೂಡಾ ಇದು ರಾಜೀನಾಮೆಯಲ್ಲ ಮಾರಾಟ ಎನ್ನುವ ಅಂಶವನ್ನು ಎತ್ತಿ ಹಿಡಿದು ಅನರ್ಹತೆಯನ್ನು ಮಾನ್ಯ ಮಾಡಿತು. ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಅಂತ ನಿಷೇಧ ಹೇರಿದ್ದನ್ನು ತಳ್ಳಿಹಾಕಿತು. ಇದಕ್ಕೆ ಸಂವಿಧಾನ ಮತ್ತು ಕಾನೂನಿನಲ್ಲಿ ಇಂತಹ ನಿಷೇಧಕ್ಕೆ ಅವಕಾಶ ಇಲ್ಲ ಎನ್ನುವ ಕಾರಣ ನೀಡಿತು. ಶಾಶ್ವತವಾಗಿ ನಿಷೇಧ ಹೇರುವ ಅಧಿಕಾರ ಇರುವುದು ಮತದಾರ ದೇವರುಗಳಿಗೆ ಅಂತ ಸುಪ್ರೀಂಕೋರ್ಟ್ ಹೇಳಿತು. ಮತದಾರರು ಮಾತ್ರ ‘ನಮಗೆ ಅನರ್ಹರೇ ದೇವರು” ಎನ್ನುವ ನಿರ್ಧಾರಕ್ಕೆ ಬಂದು 11 ಮಂದಿ ಅನರ್ಹ ಶಾಸಕರುಗಳ ಸ್ಥಾನವನ್ನು ಸಕ್ರಮಗೊಳಿಸಿದ್ದಾರೆ. ಇದಿಷ್ಟು ಈ ಉಪಚುನಾವಣೆಯ ಹಿನ್ನೆಲೆ. ಈಗ ಮುಖ್ಯ ಪ್ರಶ್ನೆಗೆ ಬರೋಣ.

ಈ ಶಾಸಕರು ರಾಜೀನಾಮೆ ನೀಡಿದ್ದಲ್ಲ, ಅವರದ್ದು ಮಾಮೂಲಿ ಪಕ್ಷಾಂತರವಲ್ಲ, ಅವರು ತಮ್ಮನ್ನು ಮಾರಿಕೊಂಡದ್ದು ಎನ್ನುವ ಅರ್ಥದ ತೀರ್ಪು ಸ್ವತಃ ಸುಪ್ರೀಂಕೋರ್ಟ್‍ನಿಂದಲೇ ಬಂದಿತ್ತು. ಆ ಕಾರಣಕ್ಕಾಗಿಯೇ ಅವರನ್ನು ಕೋರ್ಟು ಅನರ್ಹರು ಅಂತ ಪರಿಗಣಿಸಿದ್ದು. ಈ ಮಾರಾಟದ ವ್ಯವಹಾರ ಮತ್ತು ಪ್ರಕ್ರಿಯೆ ಪೂರ್ಣಗೊಂಡದ್ದು ಅವರು ಉಪಚುನಾವಣೆಯಲ್ಲಿ ಬಿಜೆಪಿಯ ಶಾಸಕರುಗಳಾಗಿ ಗೆದ್ದ ನಂತರ. ಮಾರಾಟ ಪ್ರಕ್ರಿಯೆಯ ಕೊನೆಯ ಹಂತ ಸಾಧ್ಯವಾದದ್ದು ಮತದಾರರು ಕೂಡಾ ಈ ವ್ಯವಹಾರಕ್ಕೆ ಕೈಜೋಡಿಸಿದ ಕಾರಣ. ಅಂದರೆ ಅಕ್ರಮ ಎಂದು ಸುಪ್ರೀಂಕೋರ್ಟ್‍ನಿಂದ ಪರಿಗಣಿತವಾದ ಶಾಸಕರ ಮಾರಾಟವನ್ನು ಸಕ್ರಮಗೊಳಿಸಿದ್ದು ಮತದಾರರು ಎಂದಾಯಿತು. ಹೀಗಾಗಿ ಈ ಉಪಚುನಾವಣೆ ಮಾಮೂಲಿ ಉಪಚುನಾವಣೆಯಾಗಿರಲಿಲ್ಲ. ಬದಲಿಗೆ ಅದು ಮತದಾರರನ್ನು ಒಂದು ಬೃಹತ್ ಅಕ್ರಮ ರಾಜಕೀಯೋದ್ಯಮದಲ್ಲಿ ಭಾಗೀದಾರರನ್ನಾಗಿ ಮಾಡಿದ ಶಾಸನಬದ್ಧ ಹಗರಣ ಎಂಬಂತೆ ಆಗಿ ಹೋಯಿತು! ಹಾಗಾದರೆ ಮತದಾರರು ಈ ಅಕ್ರಮದಲ್ಲಿ ಯಾಕೆ ಮನಸೋಇಚ್ಛೆ ಭಾಗಿಯಾದರು? ಬಿಜೆಪಿಗೆ ಮಾರಿಕೊಂಡ ಮಾಜಿ ಶಾಸಕರುಗಳಿಗೆ ಮತದಾರರು ಕೂಡಾ ತಮ್ಮನ್ನು ತಾವು ಮಾರಿಕೊಂಡರೆ? ಉಪಚುನಾವಣೆಯ ಒಟ್ಟು ಸನ್ನಿವೇಶ ನೋಡಿದರೆ ಅಂತಹದ್ದೊಂದು ತೀರ್ಮಾನಕ್ಕೆ ಯಾರಾದರೂ ಬಂದರೂ ಬರಬಹುದು. ಆದರೆ, ಇದು ಹೀಗೆ ಕೇವಲ ಮಾರುವ, ಮಾರಾಟವಾಗುವ ವ್ಯವಹಾರವಷ್ಟೇ ಆಗಿದ್ದರೆ ಉಪಚುನಾವಣೆಯಲ್ಲಿ ಸ್ಪರ್ಧಿಸಿದ, ಅಷ್ಟೂ ಮಂದಿಯ ಪೈಕಿ ಅತೀಹೆಚ್ಚು ಹಣವಂತನಾಗಿದ್ದ, ಹೊಸಕೋಟೆ ಕ್ಷೇತ್ರದ ಎಂ.ಟಿ.ಬಿ ನಾಗರಾಜ್ ಎಂಬ ಹೆಸರಿನವನಾದ ಅಭ್ಯರ್ಥಿ ಪರಾಭವಗೊಂಡದ್ದು ಹೇಗೆ?

“ಏನೇ ಆಗಲಿ ಮೂರುವರೆ ವರ್ಷ ಸುಭದ್ರ ಸರಕಾರ ಇರಲಿ” ಅಂತ ಭಾವಿಸಿ, ಬಿಜೆಪಿಯಿಂದ ಸ್ಪರ್ಧಿಸಿದ ಮಂದಿಯ ಮುಖ-ಮೂತಿ ನೋಡದೆ ಜನರು ಮತ ನೀಡಿಬಿಟ್ಟರು ಎನ್ನುವ ವಿಶ್ಲೇಷಣೆಗಳು ಹರಿದಾಡುತ್ತಿವೆ. ಹಾಗಾದರೆ, ಸುಭದ್ರ ಸರಕಾರ ಎನ್ನುವುದರ ಮುಂದೆ ಮತದಾರರಿಗೆ ಅನರ್ಹ ಶಾಸಕರು ಮಾಡಿದ ಪಕ್ಷದ್ರೋಹ, ಮತದಾರ ದ್ರೋಹ, ಭ್ರಷ್ಟಾಚಾರ ಎಲ್ಲವೂ ಗೌಣವಾಗಿ ಹೋದವೇ? ಎಷ್ಟೇ ಕೀಳುಮಟ್ಟದ ರಾಜಕೀಯ ವ್ಯಭಿಚಾರಿಗಳಾದರೂ ಅಧಿಕಾರ ಹಿಡಿಯಲಿ, ಸುಭದ್ರ ಸರಕಾರವೊಂದು ಇದ್ದರೆ ಸಾಕು ಎನ್ನುವಷ್ಟರಮಟ್ಟಿಗೆ ಕರ್ನಾಟಕದ ಮತದಾರರು ವ್ಯವಹಾರಚತುರರಾಗಿ ಬಿಟ್ಟರೆ? ಎಲ್ಲವೂ ಪ್ರಮುಖ ಪ್ರಶ್ನೆಗಳೇ ಆಗಿವೆ. ಆದರೆ ಯಾವುದಕ್ಕೂ ಸ್ಪಷ್ಟ ಉತ್ತರ ಹುಡುಕುವುದು ಕಷ್ಟ. ಅದೇರೀತಿ ಅನರ್ಹರನ್ನು ಆಯ್ಕೆ ಮಾಡಿದ್ದಕ್ಕಾಗಿ ಮತದಾರರನ್ನು ಮತ್ತು ಅವರ ನೈತಿಕತೆಯನ್ನು ಇದಮಿತ್ತಂ ಅಂತ ನಿರ್ಧರಿಸಿಬಿಡುವುದು ಕೂಡಾ ಕಷ್ಟ.

ನರವಿಜ್ಞಾನದಲ್ಲಿ “ಸಂಪೂರ್ಣ ಇಲ್ಲವೇ ಅಪೂರ್ಣ” ಎನ್ನುವ ನಿಯಮವೊಂದಿದೆ. ಇಂಗ್ಲಿಷ್ ನಲ್ಲಿ ಇದಕ್ಕೆ Or None Law ಅಂತ ಕರೆಯುತ್ತಾರೆ. ಇದರ ಪ್ರಕಾರ ಮಿದುಳಿಗೆ ಸಂಜ್ಞೆಗಳನ್ನೂ ಹೊತ್ತೊಯ್ಯುವ ದೇಹದ ನರವಾಹಕಗಳು ಅಂತಹ ಸಂಜ್ಞೆಗಳನ್ನು ಅರ್ಧ ಸ್ವೀಕರಿಸುವುದು ಅಂತ ಇಲ್ಲ. ಒಂದು ಮಿತಿಯಾಚೆಗೆ ಅವುಗಳನ್ನು ಸಂಪೂರ್ಣ ಸ್ವೀಕರಿಸುತ್ತವೆ. ಆ ಮಿತಿಯ ಕೆಳಗಿದ್ದರೆ ಸ್ವೀಕರಿಸುವುದೇ ಇಲ್ಲ. ನಮ್ಮ ಮತದಾರರ ನೈತಿಕಪ್ರಜ್ಞೆಯನ್ನೂ ಇದೇ ರೀತಿ ಅರ್ಥಮಾಡಿಕೊಳ್ಳಬೇಕಿದೆ. ಮತದಾರರ ಸಮಷ್ಟಿ ಪ್ರಜ್ಞೆಗೆ ನಿಲುಕುವಷ್ಟು ಪ್ರಬಲವಾಗಿ ಅನೈತಿಕ ರಾಜಕೀಯದ ಬಗ್ಗೆ ವಾದ ಮಂಡಿಸಲು ಬೇಕಾದ ನೈತಿಕ ನೆಲೆಗಟ್ಟು ಯಾವ ರಾಜಕೀಯ ಪಕ್ಷಕ್ಕಾಗಲೀ, ನಾಯಕರಿಗಾಗಲೀ ಇಲ್ಲ. ಈಗ ಇರುವವರಿಂದ ನೈತಿಕತೆಯ ಪಾಠ ಹೇಳಿಸಿಕೊಳ್ಳಲು ಮತದಾರರು ಸುತರಾಂ ಸಿದ್ಧರಿಲ್ಲ. ಕಾಂಗ್ರೆಸ್ಸಿನವರು ಮತ್ತು ಜನತಾದಳದವರು ಹದಿನೇಳು ಜನ ಅನರ್ಹರು ಪಕ್ಷದ್ರೋಹ ಮಾಡಿದರು, ಮತದಾರರಿಗೆ ದ್ರೋಹ ಮಾಡಿದರು ಮತ್ತು ಮಾರಾಟವಾದರು ಎಂಬ ಅಂಶವನ್ನೇ ಪ್ರಧಾನವಾಗಿ ಜನರ ಮುಂದಿಟ್ಟರು. ಇದು ಜನರಿಗೆ ಅರ್ಥವಾಗಿಲ್ಲ ಎನ್ನೋಣವೇ? ಅಥವಾ ಅರ್ಥವಾದರೂ ಅದಕ್ಕೆ ಕ್ಯಾರೇ ಅನ್ನಲಿಲ್ಲ ಎನ್ನೋಣವೇ? ಇಲ್ಲ. ಈ ಚುನಾವಣಾ ಕಣ ಎತ್ತಿರುವ ನೈತಿಕ ಪ್ರಶ್ನೆಗಳು ಮತದಾರರಿಗೆ ಅರ್ಥವಾಗಿಲ್ಲ ಅಂತಲೂ ಹೇಳುವ ಹಾಗಿಲ್ಲ. ಅಂತಹ ಪ್ರಶ್ನೆಗಳನ್ನು ಅವರು ಗಂಭೀರವಾಗಿ ತೆಗೆದುಕೊಳ್ಳಲು ಸಿದ್ಧರಿಲ್ಲ ಎನ್ನುವ ಹಾಗೂ ಇಲ್ಲ.

ಇಡೀ ಉಪಚುನಾವಣೆಯಲ್ಲಿ ಅತ್ಯಂತ ಅಚ್ಚರಿಯ ಫಲಿತಾಂಶವನ್ನು ನೀಡಿದ್ದು ಮಂಡ್ಯದ ಕೆ. ಆರ್. ಪೇಟೆ ಕ್ಷೇತ್ರ. ಚುನಾವಣೆಗೆ ಎರಡು ಮೂರು ದಿನಗಳಿರುವಾಗ ಈ ಕ್ಷೇತ್ರದಲ್ಲಿ ತಿರುಗಾಡಿ ಜನರ ಬಳಿ ಮಾತನಾಡುತಿದ್ದರೆ ಅಲ್ಲಿನ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಎಂಬ ಹೆಸರಿನವನಾದ ಜೆಡಿಎಸ್‍ನ ಅನರ್ಹ ಮಾಜಿ ಶಾಸಕ, ಗೆಲ್ಲುವ ಮತ್ತು ಆ ಮೂಲಕ ಚರಿತ್ರೆಯಲ್ಲೇ ಮೊದಲಿಗೆ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಖಾತೆ ತೆರೆಯುವ ಯಾವ ಮುನ್ಸೂಚನೆಯೂ ದೊರೆಯುತ್ತಿರಲಿಲ್ಲ. ಆದರೆ ಕ್ಷೇತ್ರದ ಯಾವುದೋ ಹಳ್ಳಿಯ ಮೂಲೆಯಲ್ಲಿ ಮಾತಿಗೆ ಸಿಕ್ಕ ಹಿರಿಯರೊಬ್ಬರು ಮಂಡಿಸಿದ ಚುನಾವಣಾ-ನೈತಿಕತೆಯ ಮೀಮಾಂಸೆ ಹೀಗೆ ಸಾಗಿತು: “ಈ ನಾರಾಯಣ ಗೌಡ, ಜನತಾದಳದಲ್ಲಿದ್ದವ ಈಗ ಬಿಜೆಪಿಗೆ ಮಾರಾಟವಾಗಿದ್ದಾನೆ ಎನ್ನುತ್ತಾರೆ. ಏನೋಪ್ಪ. ನಾವು ನೋಡಿಲ್ಲ, ನೀವು ನೋಡಿಲ್ಲ. ನೋಡಿ… ಒಂದೈದಾರು ವರ್ಷಗಳ ಹಿಂದಿನ ಕತೆ. ಆಗ ನಮ್ಮ ಕ್ಷೇತ್ರದಲ್ಲಿ ಒಬ್ಬ ಉತ್ತಮ ಅಭ್ಯರ್ಥಿ ಇದ್ರು… ಅವರೂ ಆಗ ಜನತಾದಳದಲ್ಲಿದ್ದರು. ದಳದವರು ಆ ಅಭ್ಯರ್ಥಿಗೆ ಟಿಕೆಟ್ ಕೊಡ್ಲಿಲ್ಲ. ಇದೇ ನಾರಾಯಣ ಗೌಡ ಅಭ್ಯರ್ಥಿ ಅಂತ ಆಯ್ತು. ಆಗ್ಲೂ ಇದೇ ಕಂಪ್ಲೈನ್ಟ್ ಇತ್ತು. ಆವಾ ದುಡ್ಡುಕೊಟ್ಟು ಅಭ್ಯರ್ಥಿ ಆದ ಅಂತ. ಆಗ ಅವನಿಗೆ ನಾವೆಲ್ಲಾ ಓಟು ಹಾಕಿದ್ವಾ? ಆವಯ್ಯ ಗೆದ್ನಾ?.. ಇದು ಮಾರಾಟ ಆದ್ರೆ ಅದೂನೂ ಮಾರಾಟ ಅಲ್ವಾರಾ, ಅದು ಮಾರಾಟ ಆದ್ರೆ ಇದೂನೂ ಮಾರಾಟ ಅಲ್ವಾರಾ. ಆ ಮಾತು ಬೇಡಾ. ಒಟ್ಟು ಆ ದಿನ ದೇವ್ರು ಯಾರಿಗೆ ಹಾಕುದು ಅಂತ ಬುದ್ಧಿ ಕೊಡ್ತಾನೋ ಅವರಿಗೆ ಹಾಕುವುದು”.

ಎಲ್ಲವನ್ನೂ ಬಹುಕಾಲದಿಂದ ತೂಗಿ ಅಳೆದು ನೋಡುತ್ತಿರುವ ಮತದಾರನಿಗೆ ಇನ್ನೊಬ್ಬರ ಅನೈತಿಕ ವಿಧಾನಗಳನ್ನು ಎತ್ತಿ ಹೇಳುವಷ್ಟು ನೈತಿಕತೆ ಯಾವ ಪಕ್ಷದಲ್ಲೂ, ಯಾವ ನಾಯಕನಲ್ಲೂ ಉಳಿದಿಲ್ಲ ಅಂತ ಅನ್ನಿಸಲು ಪ್ರಾರಂಭವಾಗಿದೆ. ರಾಜಕೀಯ ಪಕ್ಷಗಳಿಂದಾಗಿ ಮತದಾರರು ಕೆಟ್ಟರೋ, ಮತದಾರರಿಂದಾಗಿ ರಾಜಕೀಯ ಪಕ್ಷಗಳು ಕೆಟ್ಟವೋ ಗೊತ್ತಾಗುವುದಿಲ್ಲ. ಆದರೆ ಒಟ್ಟು ಕಲುಷಿತಗೊಂಡ ಇಂದಿನ ಚುನಾವಣಾ ಕಣದಲ್ಲಿ ಭಾರತೀಯ ಮತದಾರ ತನ್ನ ಅನುಕೂಲ ಅಥವಾ ಲಾಭವನ್ನು ಹೆಚ್ಚಿಸಿಕೊಳ್ಳಲು ಏನೇನು ಮಾಡಬೇಕೋ ಅದನ್ನೆಲ್ಲಾ ಮಾಡಲು ಸದಾ ಸಿದ್ಧನಾಗಿದ್ದಾನೆ. ನವ-ಉದಾರೀಕರಣೋತ್ತರ ಕಾಲದಲ್ಲಿ ಪಕ್ವವಾಗಿರುವ ಭಾರತೀಯ ಮನಸ್ಸುಗಳಲ್ಲಿ ಆರ್ಥಿಕವಾಗಿ ಲಾಭ-ನಷ್ಟದ ಲೆಕ್ಕಾಚಾರ ನಡೆಯುವಂತೆ ರಾಜಕೀಯ ಅನುಕೂಲ-ಅನಾನುಕೂಲಗಳ ಲೆಕ್ಕಾಚಾರಗಳೂ ನಡೆಸುತ್ತಿವೆ. ಇಲ್ಲಿ ಜಾತಿ ಲೆಕ್ಕಾಚಾರವೂ ನಡೆಯುತ್ತದೆ, ನೀತಿ ಲೆಕ್ಕಾಚಾರವೂ ನಡೆಯುತ್ತದೆ, ನೋಟು ಲೆಕ್ಕಾಚಾರವೂ ನಡೆಯುತ್ತದೆ. ಯಾವ ದಾಳವನ್ನು ಎಲ್ಲಿ ಹೇಗೆ ಉರುಳಿಸಬೇಕು ಎನ್ನುವುದು ಅಭ್ಯರ್ಥಿಗೂ ಗೊತ್ತು, ಮತದಾರನಿಗೂ ಗೊತ್ತು. ಒಟ್ಟು ಲೆಕ್ಕಾಚಾರದಲ್ಲಿ ಸದ್ಯಕ್ಕೆ ಬಿಜೆಪಿಯ ಜತೆಗಿರುವುದು ಜಾಣತನ ಅಂತ ಉಪಚುನಾವಣೆಯಲ್ಲಿ ಮತ ಹಾಕಿದ ಮಂದಿ ಕಂಡುಕೊಂಡಿದ್ದಾರೆ. ಗೆದ್ದ ಅನರ್ಹರಲ್ಲಿ ಬಹುತೇಕರಿಗೆ ಪಕ್ಷ ಕಾಲ ಕಸ. ಅವರು ಪಕ್ಷಾತೀತವಾಗಿ ಯಾವುದೇ ಪಕ್ಷದಿಂದ ಗೆದ್ದು ಬೀಗಲು ಸಾಧ್ಯವಾಗುವಂತೆ ತಮ್ಮ ತಮ್ಮ ಸಾಮ್ರಾಜ್ಯಗಳನ್ನು ನಿರ್ಮಿಸಿಕೊಂಡವರು. ಇಂತವರಿಗೆ ಸಡ್ಡು ಹೊಡೆಯುವಷ್ಟು ಬಲಿಷ್ಠವಾಗಿ ಪಕ್ಷಗಳು ಬೆಳೆಯದೆ, ಇಂತವರನ್ನು ದೈನೇಸಿ ಬೇಡಿಕೊಂಡು ರಾಜಕೀಯ ನಡೆಸುವ ಅನಿವಾರ್ಯತೆ ರಾಜಕೀಯ ಪಕ್ಷಗಳಿಗೆ ಇದ್ದಷ್ಟು ಕಾಲ ಇಂತಹ ಫಲಿತಾಂಶಗಳನ್ನು ನಾವು ಅಸಹಾಯಕರಾಗಿ ನೋಡುತ್ತಿರಬೇಕಾಗುತ್ತದೆ. ಕೆಲ ಅನರ್ಹರಿಗೆ ಸ್ವಂತ ಬಲ ಅಷ್ಟೊಂದು ಇರಲಿಲ್ಲ, ಅವರಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಉಳಿಯಬೇಕೆಂದು ದೀಕ್ಷೆ ತೊಟ್ಟ ಜಾತಿಯ ಮತಗಳ ಬಲ ಸಹಾಯಕ್ಕೆ ಬಂತು. ಲಿಂಗಾಯತರ ಮತ ಬೆಂಬಲ ಬಿಜೆಪಿಗೆ ಯಥಾವತ್ತಾಗಿ ಮುಂದುವರಿದಿದೆ. ದಕ್ಷಿಣ ಭಾಗದ ಒಕ್ಕಲಿಗರಿಗೆ ಜನತಾ ದಳದ ಮೇಲಿನ ಭ್ರಮನಿರಸನ ಶಮನವಾದಂತಿಲ್ಲ. ನಮ್ಮ ಜಾತಿಯ ಆಸ್ತಿ ಅಂತ ಅವರು ಬೆಂಬಲಿಸಿದ ಪಕ್ಷ ಕೇವಲ ಒಂದು ಕುಟುಂಬದ ‘ಕುಟುಂಬ ಆಸ್ತಿ’ಯಾಗಿ ಹೋದ ವಿದ್ಯಮಾನವನ್ನು ಅವರಿಗೆ ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ ಅನ್ನಿಸುತ್ತದೆ. ಕಾಂಗ್ರೆಸ್ಸಿಗೆ ಅಲ್ಪಸಂಖ್ಯಾತರನ್ನು ಉಳಿದರೆ ಇನ್ಯಾವ ಸಮೂಹಗಳ ಬೆಂಬಲವೂ ಉಳಿದಿಲ್ಲ ಎಂದು ಮತ್ತೊಮ್ಮೆ ಸಾಬೀತಾಗಿದೆ. ಪಕ್ಷವನ್ನು ಮೂರನೆಯ ಬಾರಿ ಸೋಲಿನತ್ತ ಮುನ್ನಡೆಸಿರುವ ಸಿದ್ದರಾಮಯ್ಯ ಅವರ ಯುಗ ರಾಜ್ಯ ಕಾಂಗ್ರೆಸ್ಸಿನಲ್ಲಿ ಅಂತ್ಯವಾಗುವ ಮುನ್ಸೂಚನೆ ಇದೆ. ಜನತಾದಳದ ಎದುರು ಅಸ್ತಿತ್ವದ ಪ್ರಶ್ನೆಯೇ ದುತ್ತೆಂದು ಅವತರಿಸಿದೆ. ಬಿಜೆಪಿಯ ಪಾಲಿಗೆ ಯಡಿಯೂರಪ್ಪ ಅನಿವಾರ್ಯ ಎನ್ನುವ ಸಂದೇಶ ಮತ್ತೊಮ್ಮೆ ರವಾನೆಯಾಗಿದೆ. ವಿಧಾನಸಭೆಯಲ್ಲಿ ಈಗ ಬಿಜೆಪಿಗೆ ಸ್ಪಷ್ಟ ಬಹುಮತ ಬಂದಿದೆ. 2018ರ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಒಟ್ಟು ಸೇರಿ ಮಾಡಲಾಗದ್ದನ್ನು ಯಡಿಯೂರಪ್ಪ ಮಾಡಿ ತೋರಿಸಿದ್ದಾರೆ ಎನ್ನುವ ಸತ್ಯವನ್ನು ಅಲ್ಲಗಳೆಯಲಾದೀತೇ? ಮಾತ್ರವಲ್ಲ, ಅಭೇದ್ಯವಾಗಿದ್ದ ಮಂಡ್ಯದ ಮಣ್ಣಿನಲ್ಲಿ ಬಿಜೆಪಿಯ ಚಾರಿತ್ರಿಕ ಗೆಲುವಿನ ರೂವಾರಿಯಾಗಿ ಯಡಿಯೂರಪ್ಪ ಅವರ ಪುತ್ರ ದೊಡ್ಡ ಸುದ್ದಿ ಮಾಡುತ್ತಿರುವುದು ನೋಡಿದರೆ ರಾಜ್ಯ ಬಿಜೆಪಿಯಲ್ಲೊಂದು ವಂಶ ರಾಜಕಾರಣದ ಬೀಜಾಂಕುರವೂ ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಒಂದು ಸುತ್ತಿನ ಉಪಚುನಾವಣೆ. ಎಷ್ಟೊಂದು ಸೂಚನೆಗಳು, ಎಷ್ಟೊಂದು ಮುನ್ಸೂಚನೆಗಳು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನಮ್ಮ ಇಂದಿನ ಚುನಾವಣೆಯ ವಿಶ್ಲೇಷಣೆಯನ್ನು ಕೇವಲ ಯಾವುದೋ ಒಂದು ಸಂಭವನೀಯತೆ ಸಿದ್ಧಾಂತದ ( Probability theory) ಮಾಡಿದರೆ ದಾರಿ ತಪ್ಪುತ್ತೇವೆ ಅನ್ನಿಸುತ್ತದೆ. ಇದರ ಬದಲು, ಎಕ್ಸಿಟ್ ಪೋಲ್ ನಲ್ಲಿ ಭಾಗವಹಿಸಿದವ ಮತವನ್ನು ಯಾರಿಗೆ ಮತ್ತು ಯಾಕೆ ಹಾಕಲು ತೀರ್ಮಾನ ಮಾಡಿದ್ದಾನೆ ಎಂಬುದನ್ನು ತುಲನೆ ಮಾಡುವುದು ಅವಶ್ಯಕ ಅನ್ನಿಸುತ್ತದೆ. ನಾನು ಮಾತಾಡಿಸಿದ ಸಾಮಾನ್ಯರು ಅಂದರೆ, ಹೆಚ್ಚು ಅಕ್ಷರ ಕಲಿಯದ, ಬಡವರು – ಕೂಲಿಕಾರರು, ರಾಜಕೀಯದ ನೈತಿಕತೆ-ಅನೈತಿಕತೆ ಬಗ್ಗೆ ಚಿಂತಿಸುವುದೇ ಇಲ್ಲ. ಮತ ಯಾರಿಗೆ ಅಂತ ಮೊದಲೇ ನಿರ್ಧರಿಸಿದ್ದರು.

    ಇದನ್ನು ಹೇಗೆ ವಿಶ್ಲೇಷಿಸುವುದು?

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...