ಕೊರೊನಾ ಸಾಂಕ್ರಾಮಿಕವನ್ನು ತಡೆಗಟ್ಟಲು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮಾಸ್ಕ್ ಧರಿಸುವುದು ಅಗತ್ಯವಿದ್ದರೂ ಕೂಡ, ಕಡ್ಡಾಯವಲ್ಲ ಎಂದು ಕೇಂದ್ರ ಸಚಿವಾಲಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನದಲ್ಲಿರುವ ಆರೋಗ್ಯ ಸೇವೆಗಳ ನಿರ್ದೇಶನಾಲಯ (DGHS) ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಹೊಸ ಮಾರ್ಗಸೂಚಿಯ ಪ್ರಕಾರ 6 ರಿಂದ 11 ವರ್ಷದೊಳಗಿನ ಮಕ್ಕಳು ಪೋಷಕರು ಮತ್ತು ಸಲಹಾ ವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ಮಾಸ್ಕ್ ಧರಿಸಬಹುದು ಎಂದು ಹೇಳಲಾಗಿದೆ. 18 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಕೊರೊನಾ ಬಂದರೆ ಏನು ಮಾಡಬೇಕು, ಏನು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂಬುದಕ್ಕೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
“ಡೈರೆಕ್ಟರೇಟ್ ಜನರಲ್ ಆಫ್ ಹೆಲ್ತ್ ಸರ್ವೀಸಸ್ (DGHS) ಮಾರ್ಗಸೂಚಿಗಳ ಪ್ರಕಾರ, 5 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮಾಸ್ಕ್ ಧರಿಸುವುದನ್ನು ಶಿಫಾರಸು ಮಾಡುವುದಿಲ್ಲ. 6 ರಿಂದ 11 ವರ್ಷ ವಯಸ್ಸಿನ ಮಕ್ಕಳು ಪೋಷಕರು ಮತ್ತು ವೈದ್ಯರ ಮೇಲ್ವಿಚಾರಣೆಯಲ್ಲಿ ಮುಖವಾಡ ಧರಿಸಬಹುದು” ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕೊರೋನಾ ಲಾಕ್‌ಡೌನ್ ಹೊಡತಕ್ಕೆ ಬಾಗಿಲು ಮುಚ್ಚಿದ 8000 PGಗಳು
According to the guidelines issued by the Directorate General of Health Services (DGHS) for the management of #COVID19 among children below 18 years of age, Remdesivir has not been recommended and rational use of HRCT imaging has been suggested. pic.twitter.com/Ysv8ooxD0Y
— ANI (@ANI) June 10, 2021
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆಂಟಿವೈರಲ್ ಔಷಧಿ ರೆಮ್‌ಡೆಸಿವಿರ್ ಬಳಕೆ ಮಾಡುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಕೊರೊನಾವೈರಸ್ ಕಾಯಿಲೆಗೆ ಸಂಬಂಧಿಸಿದಂತೆ ಡಿಜಿಹೆಚ್ಎಸ್ ತನ್ನ ಕ್ಲಿನಿಕಲ್ ಮ್ಯಾನೇಜ್ಮೆಂಟ್ ಮಾರ್ಗಸೂಚಿಗಳನ್ನು ಪರಿಷ್ಕರಿಸಿದ್ದು, ಇದರ ಪ್ರಕಾರ ಜ್ವರ ಮತ್ತು ಶೀತವನ್ನು ಹೊರತುಪಡಿಸಿ, ಲಕ್ಷಣರಹಿತ ಮತ್ತು ಸೌಮ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಗ್ಯ ಸಚಿವಾಲಯದ ಅಡಿಯಲ್ಲಿರುವ ಎಲ್ಲಾ ಔಷಧಿಗಳನ್ನು ಕೈಬಿಡಲಾಗಿದೆ. ಸೌಮ್ಯ ಲಕ್ಷಣಗಳಿರುವ ಹಾಗೂ ಲಕ್ಷಣರಹಿತ ಸೋಂಕಿನ ಪ್ರಕರಣದಲ್ಲಿ ಸ್ಟೆರಾಯ್ಡ್‌ಗಳ ಬಳಕೆ ಹಾನಿಕಾರಕವಾಗಬಹುದು ಎಂದು ತಿಳಿಸಿದೆ.
ಗಂಭೀರ ಪ್ರಕರಣಗಳಲ್ಲಿ ಮಾತ್ರ, ಆಸ್ಪತ್ರೆಗೆ ಸೇರಿದ ಮಕ್ಕಳಿಗೆ ಸ್ಟೆರಾಯ್ಡ್ ಬಳಸಬಹುದು. ಪೋಷಕರು ತಾವೇ ಮಕ್ಕಳಿಗೆ ಔಷಧಿಗಳನ್ನು ನೀಡುವಂತಿಲ್ಲ. ಮಕ್ಕಳಿಗೆ ಬೇಕಾಬಿಟ್ಟಿ ಸಿಟಿ ಸ್ಕ್ಯಾನ್ ಮಾಡಿಸಬಾರದು. ಗಂಭೀರ ಪ್ರಕರಣದಲ್ಲಿ ಎಚ್‌ಆರ್‌ಸಿಟಿ ಸ್ಕ್ಯಾನ್ ಬಳಸಬಹುದು ಎನ್ನಲಾಗಿದೆ.
18 ವರ್ಷಕ್ಕಿಂತ ಮೇಲ್ಪಟ್ಟವರು ಕೋವಿಡ್ ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸಲೇ ಬೇಕು ಎಂದು ಸಚಿವಾಲಯ ತಿಳಿಸಿದೆ. ಮಾಸ್ಕ್ ಧರಿಸುವುದು, ದೈಹಿಕ ಅಂತರ, ಕೈ ನೈರ್ಮಲ್ಯ ಮತ್ತು ಕೆಮ್ಮು ಬಂದಾಗ ಅಂತರ ಪಾಲನೆಯನ್ನು ಲಕ್ಷಣರಹಿತ, ಸೌಮ್ಯ, ಮಧ್ಯಮ ಮತ್ತು ತೀವ್ರ ರೋಗಿಗಳು ಕಡ್ಡಾಯವಾಗಿ ಅನುಸರಿಸಬೇಕು ಎಂದು ಹೇಳಲಾಗಿದೆ.
ಇದನ್ನೂ ಓದಿ: ಹೈದರಾಬಾದ್: 3 ವರ್ಷದ ಮಗುವಿಗೆ ಮನಸೋ ಇಚ್ಚೆ ಥಳಿಸಿದ ಪೋಷಕರು- ಮೃತಪಟ್ಟ ಮಗು


