Homeಎಂಟರ್ತೈನ್ಮೆಂಟ್ಮಂಡ್ಯದಲ್ಲೊಂದು ವಿಶಿಷ್ಠ ಸಿನಿಮಾ ಹಬ್ಬ

ಮಂಡ್ಯದಲ್ಲೊಂದು ವಿಶಿಷ್ಠ ಸಿನಿಮಾ ಹಬ್ಬ

- Advertisement -
- Advertisement -

ಸಿನಿಮಾ ಎಂದಾಕ್ಷಣ ಎಲ್ಲರಲ್ಲೂ ಆಸಕ್ತಿ ಇದ್ದೇ ಇರುತ್ತದೆ. ಸಿನಿಮಾ ಬಗ್ಗೆ ತಿಳಿದುಕೊಳ್ಳುವ, ವಿಮರ್ಶಿಸುವ, ಚರ್ಚಿಸುವ ಸಿನಿಮಾಸಕ್ತರಿಗೆ ‘ಮನುಜಮತ ಸಿನಿಯಾನ’ ತಂಡ ನಡೆಸಿಕೊಡುವ ಸಿನಿಮಾ ಪ್ರದರ್ಶನದ ಸಿನಿಹಬ್ಬಗಳು ವಿಶಿಷ್ಟ ಪ್ರಯೋಗಗಳಿಗೆ ಹಿಡಿದ ಕನ್ನಡಿಯಂತಿವೆ. ಈ ತಂಡದಲ್ಲಿ ವಿಶ್ವದ ಸಿನಿಮಾಗಳ ಬಗ್ಗೆ ವಿಭಿನ್ನವಾಗಿ ಚಿಂತಿಸುವ ಹಲವು ಮುಖಗಳು ಸಕ್ರಿಯವಾಗಿ ತೊಡಗಿಸಿಕೊಂಡು, ಸದಾಕಾಲ ಸಿನಿಪ್ರೇಮಿಗಳಿಗೆ ಚಲನಚಿತ್ರ ರಸಗ್ರಹಣದ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಡುವ ಸಫಲ ಪ್ರಯತ್ನಗಳನ್ನು ಮಾಡಿಕೊಂಡು ಬಂದಿದ್ದಾರೆ.

ಸಿನಿಮಾದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹೊಂದಿರುವ ಫಣಿರಾಜ್‍ರಂತಹ ಸಿನಿ ಮೇಧಾವಿಗಳು ತಮ್ಮ ಸಿನಿಮಾ ಜ್ಞಾನವನ್ನು ಹಲವರಿಗೆ ಧಾರೆ ಎರೆಯುತ್ತಾ, ಈ ತಂಡವನ್ನು ಮುನ್ನೆಲೆಗೆ ತಂದಿರುವುದು ಸಂತಸದ ಸಂಗತಿ. ಬರೀ ಮಾಸ್, ಕ್ಲಾಸ್, ಹೊಡೆದಾಟ, ಕಾಮಿಡಿ ಡೈಲಾಗ್‍ಗಳ ಸಿನಿಮಾಗಳಿಗೆ ಮೀಸಲಾದ ಹಲವು ಯುವ ಮನಸ್ಸುಗಳಿಗೆ ಪ್ರಾಪಂಚಿಕ ಸಿನಿಮಾಗಳ ಕಡೆ ಒಲವು ಮೂಡಿಸಿದ ಕೀರ್ತಿ ತಂಡದ ಎಲ್ಲಾ ಸಂಘಟಕರಿಗೂ ಸಲ್ಲುತ್ತದೆ. ಅದರಲ್ಲೂ ಯದುನಂದನ್, ರೋಹಿತ್ ಅಗಸರಹಳ್ಳಿ, ಕುಮಾರ್ ರೈತ, ಮನು ಮೈಸೂರು, ಐವನ್ ಡಿ ಸಿಲ್ವ, ಹರ್ಷ ಕುಮಾರ್ ಕುಗ್ವೆ, ಜಿ.ಟಿ ಸತೀಶ್ ಹಾಗೂ ಹೊನ್ನಾಳಿ ಚಂದ್ರಶೇಖರ್ ಸೇರಿದಂತೆ ಹಲವು ಘಟಾನುಘಟಿ ಸಿನಿ ಸಂಘಟಕರು ಈ ಕೆಲಸಕ್ಕೆ ಕೈಹಾಕಿರುವುದು ಸಿನಿಹಬ್ಬಗಳ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ.

ಗಂಡು-ಹೆಣ್ಣು, ಜಾತಿ-ಮತ, ಪ್ರಾಂತ್ಯಗಳ ಭೇದವಿಲ್ಲದೇ ಒಂದೇ ಸ್ಥಳದಲ್ಲಿ ಒಟ್ಟಾಗಿ ಕುಳಿತು ಸಿನಿಮಾಗಳನ್ನು ನೋಡಿ, ಆ ಸಿನಿಮಾದ ಹಲವು ಆಯಾಮಗಳನ್ನು ಚರ್ಚಿಸಿ, ವಿಮರ್ಶಿಸುವ, ಸಿನಿಮಾಗಳ ಬಗ್ಗೆ ಸಲಹೆ, ಮಾಹಿತಿ ವಿನಿಮಯ ಮಾಡಿಕೊಳ್ಳುವ ಉದ್ದೇಶದಿಂದ ನಡೆಯುವ ಇಂತಹ ಸಿನಿಹಬ್ಬಗಳ ಪ್ರಯತ್ನ ನಿಜಕ್ಕೂ ಸಾರ್ಥಕ. ಇದಲ್ಲದೇ ಮನುಜಮತ ಸಿನಿಯಾನ ವಾಟ್ಸಾಪ್ ಗ್ರೂಪಿನಲ್ಲಿ ಹಲವು ಸಿನಿಮಾಗಳ ಬಗ್ಗೆ ಚರ್ಚೆಯಾಗುತ್ತವೆ. ಉತ್ತಮ ಮಾಹಿತಿಗಳು ಪರಸ್ಪರ ಹಂಚಿಕೆಯಾಗುತ್ತಿವೆ.

ಗ್ಲೋರಿ ಸಿನಿಮಾದ ದೃಶ್ಯ

ಸಿನಿಹಬ್ಬಕ್ಕೆ ಸಂಬಂಧಿಸಿದಂತೆ ಮೊದಲು ಸಿನಿಹಬ್ಬ ನಡೆಸುವ ಸ್ಥಳ ನಿಗದಿಯಾಗಿ, ದಿನ ಗೊತ್ತು ಮಾಡಿ, ಥೀಮ್ ಆಯ್ಕೆ ಮಾಡಿ, ಆ ಥೀಮ್‍ಗೆ ಸಂಬಂಧಿಸಿದ ಸಿನಿಮಾಗಳನ್ನು ಹೆಕ್ಕಿ ತೆಗೆದು, ಆ ಸಿನಿಮಾಗಳನ್ನು ವೀಕ್ಷಿಸಿ ಅತ್ಯುತ್ತಮವಾದ ಸಾಕ್ಷ್ಯಚಿತ್ರ, ಕಿರುಚಿತ್ರ ಸೇರಿದಂತೆ ಸುಮಾರು 7-8 ಸಿನಿಮಾಗಳನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿ, ಸಿನಿಹಬ್ಬದಂದು ಪ್ರದರ್ಶಿಸಲಾಗುತ್ತದೆ. ಸಿನಿಹಬ್ಬದ ಮತ್ತೊಂದು ವಿಶೇಷವೆಂದರೆ ಊಟದ ಮೆನು. ಯಾವ ಯಾವ ಭಾಗದಲ್ಲಿ ಸಿನಿಹಬ್ಬ ಜರುಗುತ್ತದೆಯೋ ಆ ಭಾಗದಲ್ಲಿ ವಿಶೇಷ ತಿನಿಸುಗಳನ್ನು ಉಣಬಡಿಸುವುದು ವಿಶೇಷ. ಸಿನಿಮಾಗಳ ಹೂರಣ ಹಾಗೂ ನಿಸರ್ಗದ ಕಡೆ ಚಾರಣ – ಇದು ಸಿನಿಹಬ್ಬದ ಪ್ಲಸ್ ಪಾಯಿಂಟ್.

ಇದನ್ನು ಓದಿ: ಮನುಜಮತ ಸಿನೆಮಾ ಹಬ್ಬ : ಹೊಸ ಕಾಲದ ಸಮುದಾಯ ಕಟ್ಟುವ ನಡೆ

ಮಂಡ್ಯ ಸಿನಿಮಾ ಹಬ್ಬ

ಈ ಬಾರಿ ಮನುಜಮತ ಸಿನಿಯಾದ ಸಂಘಟಕರು ಮಂಡ್ಯದಲ್ಲಿ ಸಿನಿಹಬ್ಬವನ್ನು ಆಯೋಜಿಸಿದ್ದರು. ಯಾವುದೇ ಕೊರತೆಗಳು ನುಸುಳದಂತೆ ಅಚ್ಚುಕಟ್ಟಾಗಿ ನಿಭಾಯಿಸಿದ ಸಿನಿಹಬ್ಬದ ಸಂಘಟಕರು ಅಭಿನಂದನಾರ್ಹರು. ಇಲ್ಲಿ ‘ಮಾಧ್ಯಮ ರಾಜಕಾರಣ’ ಎಂಬ ಥೀಮ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಅನುಸರಿಸುತ್ತಿರುವ ಧೋರಣೆಗಳು ಹಾಗೂ ಕೆಲವು ಮಾಧ್ಯಮಗಳ ಕರಾಳ ಮುಖವನ್ನು ತೆರೆದಿಡಲು ಪ್ರಯತ್ನಿಸಿತು. ಮಾಧ್ಯಮಗಳು ತಮ್ಮ ಟಿ.ಆರ್.ಪಿ ಎಂಬ ವ್ಯಾವಹಾರಿಕ ಪ್ರಜ್ಞೆಯಿಂದ ಸಾಮಾಜಿಕ ಪ್ರಜ್ಞೆಯನ್ನು ಮರೆತಿದ್ದಾರೆ. ಮಾಧ್ಯಮಗಳ ಕೆಲವು ಸುಳ್ಳು ಸುದ್ದಿಗಳ ಪ್ರಸಾರದಿಂದ ನಿಜ ಯಾವುದು? ಸುಳ್ಳು ಯಾವುದು? ಎಂಬ ಗೊಂದಲ ಮೂಡುವುದಂತೂ ಸತ್ಯ. ಇದು ಹುಲಿ ಬಂತು ಹುಲಿ ಕಥೆಯ ಹಾಗೇ ಜನರಲ್ಲಿ ಗೊಂದಲ ಸೃಷ್ಟಿಸುತ್ತದೆ.

ಎರಡು ದಿನಗಳ ಕಾಲ ನಡೆದ ಮಂಡ್ಯ ಸಿನಿಹಬ್ಬದಲ್ಲಿ ಮೊದಲಿಗೆ ಫಾಲನ್ ಆರ್ಟ್ ಎಂಬ ಕಿರುಚಿತ್ರದೊಂದಿಗೆ ಪ್ರಾರಂಭವಾಗಿ ಸ್ಪಾಟ್‍ಲೈಟ್, ಪೀಪ್ಲಿಲೈವ್, ದಿ ರೆವಲ್ಯೂಷನ್ ವಿಲ್ ನಾಟ್ ಬಿ ಟೆಲಿವೈಸ್ಡ್, ಈಡಿ ಟಿವಿ ಹಾಗೂ ಗ್ಲೋರಿ ಚಲನಚಿತ್ರ ಪ್ರದರ್ಶನಗಳೊಂದಿಗೆ ಸಿನಿಹಬ್ಬ ಮುಕ್ತಾಯಗೊಂಡಿತು.

ಪೋಲ್ಯಾಂಡಿನ ‘ಫಾಲನ್ ಆರ್ಟ್’ ಕಿರುಚಿತ್ರವು ಪೋಲ್ಯಾಂಡಿನ ರಾಜಕೀಯ ವ್ಯವಸ್ಥೆಯನ್ನು ಹಾಗೂ ಅಲ್ಲಿನ ಮಾಧ್ಯಮಗಳ ಕಠೋರತೆಯನ್ನು ತಿಳಿಸುತ್ತದೆ. 2015ರಲ್ಲಿ ತೆರೆಕಂಡ ಹಾಲಿವುಡ್‍ನ ‘ಸ್ಪಾಟ್‍ಲೈಟ್’ ಚಿತ್ರವು ಪತ್ರಿಕೆಯಲ್ಲಿ ಪ್ರಕಟವಾದ ಸತ್ಯಘಟನೆಯನ್ನು ಆಧರಿಸಿದೆ. ಬೋಸ್ಟನ್ ನಗರದ ಚರ್ಚ್‍ಗಳಲ್ಲಿ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವನ್ನು ಹೊರಗೆಳೆಯುವ ಸಂದರ್ಭದಲ್ಲಿ ಪತ್ರಕರ್ತರು ಅನುಭವಿಸಿದ ನೋವು-ಅವಮಾನಗಳನ್ನು ಚಿತ್ರವು ತೆರೆದಿಡುತ್ತದೆ.

2010ರಲ್ಲಿ ಭಾರತದಲ್ಲಿ ತೆರೆಕಂಡ ಅನುಷ್ಕ ರಿಜ್ವಿ ನಿರ್ದೇಶನದ ‘ಪೀಪ್ಲಿ ಲೈವ್’ ಚಿತ್ರವು ಒಬ್ಬ ಸಾಮಾನ್ಯ ಬಡರೈತನ ಬದುಕನ್ನು ಮಾಧ್ಯಮಗಳು ಹೇಗೆ ಬಿಂಬಿಸುತ್ತವೆ ಎಂಬುದನ್ನು ತೋರಿಸುತ್ತದೆ. ಭೂಮಿ ಕಳೆದುಕೊಂಡು ಸಾಲ ತೀರಿಸಲಾಗದೇ, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿ, ಸರ್ಕಾರದಿಂದ ತನ್ನ ಕುಟುಂಬಕ್ಕೆ ಪರಿಹಾರಧನ ಕೊಡಿಸಲು ಹೆಣಗಾಡುವ ನಾಥೂದಾಸ್ ಎಂಬ ಬಡರೈತ ಒಂದು ಕಡೆ, ಅದನ್ನೇ ದುರುಪಯೋಗ ಪಡಿಸಿಕೊಂಡು ರೈತನ ಆತ್ಮಹತ್ಯೆಯನ್ನು ಲೈವ್ ಆಗಿ ತೋರಿಸುವ ಪ್ರಯತ್ನಿಸುವ ಮಾಧ್ಯಮಗಳ ಕೆಟ್ಟ ಮನಸ್ಥಿತಿಯನ್ನು ಈ ಚಿತ್ರವು ಬಿಚ್ಚಿಡುತ್ತದೆ.

2003ರಲ್ಲಿ ತಯಾರಾದ ‘The Revolution will not be televisied’ ಎಂಬ ಸಾಕ್ಷ್ಯಾಚಿತ್ರವು ವೆನಿಜುವೆಲಾದ ಅಧ್ಯಕ್ಷ ಹ್ಯುಗೋ ಚಾವೆಝ್‍ರ ಪರ, ವಿರೋಧಗಳ ಜನತೆ ನಡೆಸಿದ ಪ್ರತಿಭಟನೆಯನ್ನು ತೆರೆದಿಡುತ್ತದೆ. ಮಿಲಿಟರಿ ಮತ್ತು ನಿರಂಕುಶ ಆಡಳಿತದ ತಾರ್ಕಿಕ ಸಂಘರ್ಷಗಳ ಬಗ್ಗೆ ಹಾಗೂ ಅಲ್ಲಿನ ಜನರಿಗೆ ಚಾವೆಝ್ ಮೇಲಿದ್ದ ಅಭಿಮಾನವನ್ನು ಚಿತ್ರವು ಸಾರಿ ಹೇಳುತ್ತದೆ. ನೈಜವಾಗಿ ಚಿತ್ರೀಕರಿಸಿರುವ ಈ ಸಾಕ್ಷ್ಯಾಚಿತ್ರವು ತುಂಬಾ ಅದ್ಭುತವಾಗಿ ಮೂಡಿಬಂದಿದೆ.

1999ರಲ್ಲಿ ತೆರೆಕಂಡ ಹಾಲಿವುಡ್‍ನ ‘ಈಡಿ ಟಿವಿ’ ಚಿತ್ರದಲ್ಲಿ ಮಾಧ್ಯಮಗಳ ಮತ್ತೊಂದು ಮುಖವನ್ನು ಅನಾವರಣ ಮಾಡಲಾಗಿದೆ. ಭಾರತದಲ್ಲಿ ಪ್ರಸ್ತುತವಾಗಿ ರಿಯಾಲಿಟಿ ಷೋಗಳದ್ದೇ ಕಾರುಬಾರು. ಈ ರಿಯಾಲಿಟಿ ಷೋಗಳಿಂದ ವ್ಯಕ್ತಿಗಳ ವೈಯಕ್ತಿಕ ಬದುಕು ಹರಣವಾಗುತ್ತಿದೆ ಎಂಬುದನ್ನು ಈ ಚಿತ್ರವು ತಿಳಿಸುತ್ತದೆ. ಕೆಲವು ವರ್ಷಗಳ ಹಿಂದೆ ನಡೆದ ಸಿದ್ದಿ ಜನಾಂಗದ ಆದಿವಾಸಿ ಹುಡುಗ ರಾಜೇಶ್‍ನ ದುರಂತ ಅಂತ್ಯವನ್ನು ಈ ಚಿತ್ರವು ನೆನಪಿಸುತ್ತದೆ. ಪ್ರೇಕ್ಷಕರ ಮನೋರಂಜನಾ ದೌರ್ಬಲ್ಯವನ್ನು ದುರುಪಯೋಗಪಡಿಸಿಕೊಂಡು ಟಿ.ಆರ್.ಪಿ ತೆವಲಿಗಾಗಿ ಮಾಧ್ಯಮಗಳು ಏನೇನೆಲ್ಲಾ ಪ್ರಸಾರ ಮಾಡುತ್ತವೆ ಎಂಬುದನ್ನು ತಿಳಿಸುತ್ತದೆ.

ಇನ್ನೂ 2016ರಲ್ಲಿ ತೆರೆಕಂಡ ಬಲ್ಗೇರಿಯಾದ ‘ಗ್ಲೋರಿ’ ಚಿತ್ರವು ಒಬ್ಬ ಸಾಮಾನ್ಯ ರೈಲ್ವೆ ಕಾರ್ಮಿಕನ ಮುಗ್ಧತೆ, ಪ್ರಾಮಾಣಿಕತೆಯನ್ನು ಹೇಗೆ ಸಮಾಜ ದುರುಪಯೋಗಪಡಿಸಿಕೊಳ್ಳುತ್ತದೆ ಎಂಬುದನ್ನು ತಿಳಿಸುತ್ತದೆ. ಪೆಟ್ರೋವ್ ಅನುಭವಿಸುವ ನೋವು-ಯಾತನೆ, ಅವನಿಗಿರುವ ಮುಗ್ಧತೆ, ಪ್ರಾಮಾಣಿಕತೆ, ಸಮಯಪ್ರಜ್ಞೆ, ಪ್ರಾಣಿಪ್ರಜ್ಞೆಯನ್ನು ಈ ಚಿತ್ರದಲ್ಲಿ ಅದ್ಭುತವಾಗಿ ಸೆರೆಹಿಡಿಯಲಾಗಿದೆ. ಸಾರಿಗೆ ಮಂತ್ರಿಯ ಭ್ರಷ್ಟಾಚಾರವನ್ನು ಹೊರಗೆಳೆಯಲು ಹೋಗಿ ಸಂಕಷ್ಟಕ್ಕೆ ಸಿಲುಕಿಕೊಳ್ಳುವ, ಕಳೆದುಕೊಂಡ ವಾಚನ್ನು ಹುಡುಕಲು ಕಷ್ಟ ಪಡುವ ಪೆಟ್ರೋವ್‍ನ ಚಿತ್ರಣ ಈ ಚಿತ್ರದಲ್ಲಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಮಾಧ್ಯಮಗಳು ಸಕಾರಾತ್ಮಕ ಸಂಗತಿಗಳಿಗಿಂತ ನಕಾರಾತ್ಮಕ ಅಂಶಗಳನ್ನೇ ಹೆಚ್ಚು ಪ್ರಸಾರ ಮಾಡುತ್ತಿರುವುದು ದುರಂತದ ಸಂಗತಿ. ಈ ಬಗ್ಗೆ ಜನ ಸಮುದಾಯ ಜಾಗೃತ ಆಗಬೇಕೆಂದು ಈ ಥೀಮ್‍ನ ಆಶಯವಾಗಿದೆ.

ನಿಮ್ಮ ಓದಿಗಾಗಿ ಮತ್ತಷ್ಟು

ಪಾಲ್ ಥಾಮಸ್ ಆಂಡರ್ಸನ್ – ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿಯವರ ಬರಹ

ಏನಿದು ಫಿಲ್ಮ್ ಡೈರೆಕ್ಷನ್?

ಇದು ನಮ್ಮ ಚಿಂತನಾ ವಲಯದ ಸೋಲೂ ಹೌದು – ರಾಜಶೇಖರ್ ಅಕ್ಕಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’; ಪಂಜಾಬ್‌ ಸಿಎಂ ಭಗವಂತ್ ಮಾನ್

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...