ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾಸ್ಕ್ ಧರಿಸದೆ ಭಾಗಿಯಾಗಿದ್ದ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಆಮ್ ಆದ್ಮಿ ಪಕ್ಷವು ಟ್ವಿಟ್ಟರ್‌ನಲ್ಲಿ ಟ್ರೋಲ್ ಮಾಡಿದೆ.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಕಾರ್ಯಕ್ರಮದ 28 ಸೆಕೆಂಡುಗಳ ವಿಡಿಯೋ ಹಂಚಿಕೊಂಡು ‘ಮಾಸ್ಕ್ ಧರಿಸಿ, ಮೋದಿ ಜಿ ಅವರಂತೆ ಆಗಬೇಡಿ’ ಎಂದು ಟ್ರೋಲ್ ಮಾಡಿದ್ದಾರೆ.
ವಿಡಿಯೋದಲ್ಲಿ ಪ್ರಧಾನಿ ಮೋದಿ ಮಾಸ್ಕ್ ಧರಿಸದೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾರೆ. ಆದರೆ ಅವರ ಭದ್ರತಾ ಸಿಬ್ಬಂದಿ ಮತ್ತು ಇತರ ಅಧಿಕಾರಿಗಳು ಮಾಸ್ಕ್‌ಗಳನ್ನು ಧರಿಸಿರುತ್ತಾರೆ. ಪ್ರಧಾನಿ ಮೋದಿ ಮಾಸ್ಕ್ ಧರಿಸದೇ ಒಂದು ಮಾಸ್ಕ್ ಅಂಗಡಿ ಬಳಿ ಬರುತ್ತಾರೆ. ಅಂಗಡಿಯವರು ಮಾಸ್ಕ್ ನೀಡಲು ಮುಂದಾಗುತ್ತಾರೆ. ಆದರೆ, ಮೋದಿ ನಗುಮುಖದಿಂದ ಮಾಸ್ಕ್ ತಿರಸ್ಕರಿಸಿ ಮುನ್ನಡೆಯುತ್ತಾರೆ.
ಇದನ್ನೂ ಓದಿ: ‘PM-CARES’ ಖಾಸಗಿ ನಿಧಿ- ದಾಖಲೆಗಳು ಬಿಚ್ಚಿಟ್ಟ ವೈರುಧ್ಯ!, ದೇಶಕ್ಕೆ ಇಷ್ಟು ದೊಡ್ಡ ಸುಳ್ಳು ಹೇಳಿದರೇ ಮೋದಿ?
Wear a mask. Don't be like Modi ji. pic.twitter.com/lPxdTEdZiI
— AAP (@AamAadmiParty) December 17, 2020
“ಮಾಸ್ಕ್ ಧರಿಸಿ. ಮೋದಿ ಜಿ ಅವರಂತೆ ಆಗಬೇಡಿ” ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಆದರೆ, ವೀಡಿಯೊವನ್ನು ಯಾವಾಗ ಮತ್ತು ಎಲ್ಲಿ ರೆಕಾರ್ಡ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ದೇಶದಲ್ಲಿ ವ್ಯಾಪಿಸಿದಾಗಿನಿಂದಲೂ ಪ್ರಧಾನಿ ಮೋದಿ ತಮ್ಮ ಪ್ರತಿ ಭಾಷಣದಲ್ಲೂ, ದೈಹಿಕ ಅಂತರ ಕಾಪಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ಗಳನ್ನು ಧರಿಸಿ ಎಂದು ಹೇಳುತ್ತಿದ್ದಾರೆ. ಆದರೆ ತಾವೇ ಮಾಸ್ಕ್ ಧರಿಸದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಓಡಾಡಿದ್ದನ್ನು ಟೀಕಿಸಿ ಆಮ್ ಆದ್ಮಿ ಪಾರ್ಟಿ ಟ್ವೀಟ್ ಮಾಡಿದೆ.
ಆಡಳಿತಾರೂಢ ಬಿಜೆಪಿ ಈ ವಿಡಿಯೋ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಆದರೆ ಕಳೆದ ಕೆಲವು ತಿಂಗಳುಗಳಲ್ಲಿ ಎಎಪಿ ಹಿರಿಯ ನಾಯಕರು ಸಾರ್ವಜನಿಕವಾಗಿ ಮಾಸ್ಕ್ ಧರಿಸದೇ ಕಾಣಿಸಿಕೊಂಡಿದ್ದಾರೆ ಎಂದು ಟ್ವಿಟರ್‌ನಲ್ಲಿ ಪ್ರಧಾನಿ ಮೋದಿಯವರ ಬೆಂಬಲಿಗರು ಆರೋಪಿಸಿದ್ದಾರೆ.
ಇದನ್ನೂ ಓದಿ: ಮೋದಿ ಸರ್ಕಾರಕ್ಕೆ ಬಂಡವಾಳಶಾಹಿಗಳೇ ಆಪ್ತ ಸ್ನೇಹಿತರು: ರಾಹುಲ್ ಗಾಂಧಿ


