‘ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಆಹ್ವಾನ ನೀಡಿದ್ದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಅವರು, ‘ಅತಿದೊಡ್ಡ ಕಾರ್ಯಕ್ರಮಕ್ಕಾಗಿ ಅಯೋಧ್ಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಆದ್ದರಿಂದ, ಜನವರಿ 22ರ ನಂತರ ಅಯೋಧ್ಯೆಗೆ ಭೇಟಿ ನೀಡಿ ದರ್ಶನ ಪಡೆಯಲು ಸುಲಭವಾಗುತ್ತದೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಭಗವಾನ್ ರಾಮನು ಪ್ರಪಂಚದಾದ್ಯಂತ ಕೋಟ್ಯಂತರ ಜನರ ನಂಬಿಕೆ ಮತ್ತು ಭಕ್ತಿಯ ಸಂಕೇತವಾಗಿದೆ’ ಎಂದು ಅವರು ಹೇಳಿದರು. “ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮಕ್ಕಾಗಿ ರಾಮ ಭಕ್ತರಲ್ಲಿ ಅಪಾರ ಉತ್ಸಾಹವಿದೆ ಮತ್ತು ಅವರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ತಲುಪುತ್ತಿದ್ದಾರೆ. ಈ ಐತಿಹಾಸಿಕ ಘಟನೆಯ ಸಂತೋಷವು ಅವರ ಮೂಲಕ ನನ್ನನ್ನು ತಲುಪುತ್ತದೆ. ಜನವರಿ 22ರ ಕಾರ್ಯಕ್ರಮದ ನಂತರ ದರ್ಶನವನ್ನು ಪಡೆಯುವುದು ಸುಲಭವಾಗುತ್ತದೆ’ ಎಂದು ಪವಾರ್ ವಿಡಿಯೋ ಹೇಳಿಕೆ ನೀಡಿದ್ದಾರೆ.
ಮುಂದೆ ಅಯೋಧ್ಯೆಗೆ ಭೇಟಿ ನೀಡುವಷ್ಟರೊಳಗೆ ರಾಮಮಂದಿರ ನಿರ್ಮಾಣವೂ ಪೂರ್ಣವಾಗಲಿದೆ. ಆಗ ರಾಮ್ ಲಲ್ಲಾಗೆ ಪ್ರಾರ್ಥಿಸುವುದಾಗಿ’ ಎನ್‌ಸಿಪಿ ಮುಖ್ಯಸ್ಥರು ತಿಳಿಸಿದ್ದಾರೆ.
ಹಿಂದೂ ಧಾರ್ಮಿಕ ನಾಯಕರೆಂದು ಪರಿಗಣಿಸಲ್ಪಟ್ಟಿರುವ ನಾಲ್ವರು ಶಂಕರಾಚಾರ್ಯ ಮಠಗಳ ಮುಖಸ್ಯಸ್ಥರು ಕಾರ್ಯಕ್ರಮವನ್ನು ಬಹಿಷ್ಕರಿಸಿರುವ ವರದಿಗಳ ನಡುವೆಯೇ ಪ್ರಾಣ ಪ್ರತಿಷ್ಠಾ ಸಮಾರಂಭವು ಗದ್ದಲ ಹುಟ್ಟುಹಾಕಿದೆ. ಸಮಾರಂಭದಲ್ಲಿ ಪಾಲ್ಗೊಳ್ಳುವ ಬಗ್ಗೆ ಇಬ್ಬರು ಮೌನವಾಗಿದ್ದರೆ, ಇನ್ನಿಬ್ಬರು ಕಾರ್ಯಕ್ರಮ ಆಯೋಜಿಸುತ್ತಿರುವ ರೀತಿಯನ್ನು ಟೀಕಿಸಿದ್ದಾರೆ. ದೇವಾಲಯವನ್ನು ಸಂಪೂರ್ಣವಾಗಿ ನಿರ್ಮಿಸುವ ಮೊದಲು ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಜನವರಿ 22ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಪ್ರಮುಖ ಸಾರ್ವಜನಿಕ ವ್ಯಕ್ತಿಗಳನ್ನು ಆಹ್ವಾನಿಸಲಾಗಿದೆ. ಜನವರಿ 23 ರಿಂದ ದೇವಾಲಯವು ಸಾರ್ವಜನಿಕರ ದರ್ಶನಕ್ಕೆ ತೆರೆದಿರುತ್ತದೆ.
ಇದನ್ನೂ ಓದಿ; ಸರ್ಕಾರಿ ಬಂಗಲೆ ತೆರವುಗೊಳಿಸುವಂತೆ ಟಿಎಂಸಿ ಮಾಜಿ ಸಂಸದೆಗೆ ಮತ್ತೊಂದು ನೋಟಿಸ್


