Homeಕರ್ನಾಟಕವಾಣಿಜ್ಯ ಬಹಿಷ್ಕಾರ ಮತ್ತು ಭಗ್ನ ಭಾರತ

ವಾಣಿಜ್ಯ ಬಹಿಷ್ಕಾರ ಮತ್ತು ಭಗ್ನ ಭಾರತ

- Advertisement -
- Advertisement -

ಈಚೆಗೆ ಕರ್ನಾಟಕದಲ್ಲಿ ಜಾತ್ರೆಗಳಲ್ಲಿ ಮುಸಲ್ಮಾನರು ಅಂಗಡಿಗಳನ್ನು ತೆರೆಯಕೂಡದೆಂದು ಸಂಘಪರಿವಾರವು ವ್ಯಾಪಾರ ಬಹಿಷ್ಕಾರ ಆರಂಭಿಸಿದೆ. ಭಾರತದಲ್ಲಿ ಬಹಿಷ್ಕಾರ ಪದ್ಧತಿ ಹೊಸತಲ್ಲ. ಬುಡಕಟ್ಟುಗಳಲ್ಲಿ ಸಮುದಾಯದ ಸದಸ್ಯರು ಸಂಪ್ರದಾಯವನ್ನು ಉಲ್ಲಂಘಿಸಿದಾಗ ಅಲ್ಲಿರುವ ಗುರಿಕಾರರು ಅವರನ್ನು ಬಹಿಷ್ಕರಿಸುವ ಪದ್ಧತಿಯಿದೆ. ಮೇಲ್ಜಾತಿಗಳಲ್ಲಿ ಸತಿಪದ್ಧತಿಗೆ ಅಥವಾ ವಿಧವಾಚರಣೆಗೆ ನಿರಾಕರಿಸಿದ, ವಿಧವಾ ವಿವಾಹವಾದ, ಬೇರೆಜಾತಿಗೆ ಮದುವೆಯಾದ, ವಿಧವೆಗೆ ಅಥವಾ ಸನ್ಯಾಸಿಗೆ ಹುಟ್ಟಿದ, ಸಮುದ್ರಯಾನ ಮಾಡಿದ ವ್ಯಕ್ತಿಗಳನ್ನು ಬಹಿಷ್ಕರಿಸುವ ಪದ್ಧತಿಯೂ ಇತ್ತು. ಈಗಲೂ ದಲಿತರನ್ನು ಮಹಿಳೆಯರನ್ನು ಶೂದ್ರರನ್ನು ಕುರಿತು ಆಹಾರ, ಮದುವೆ, ಗುಡಿಯ ಕಾರ್ಯಕ್ರಮಗಳಲ್ಲಿ ಹೊರಗಿಡುವ ಅಥವಾ ನಿರ್ದಿಷ್ಟ ಗೆರೆಯವರೆಗೆ ಮಾತ್ರ ಪ್ರವೇಶ ಕೊಡುವ ಪದ್ಧತಿಯಿದೆ. ಈ ಬಹಿಷ್ಕಾರಗಳು ಸಂಪ್ರದಾಯವಾದದಿಂದ ಪ್ರೇರಿತವಾದವು.

ಗುರುಪೀರಾ ಖಾದರಿ ಉರುಸಿನಲ್ಲಿ ತತ್ವಪದ ಹಾಡುತ್ತಿರುವ ಗುರುಶಿಷ್ಯರು

ಇದರ ಇನ್ನೊಂದು ಮುಖ ಕ್ರೈಸ್ತರನ್ನು ಮುಸ್ಲಿಮರನ್ನು ವಾಣಿಜ್ಯದಿಂದ ಬಹಿಷ್ಕರಿಸುವ ಪದ್ಧತಿ. ಇದು ಸಂಪ್ರದಾಯದ ರಕ್ಷಣೆಯಿಂದಲ್ಲ, ತಮ್ಮದಲ್ಲದ ಧರ್ಮದ ಜನರನ್ನು ಅಧೀನ ಸ್ಥಿತಿಯಲ್ಲಿಡಬೇಕೆಂಬ ಪೂರ್ವಯೋಜಿತ ಕಾರ್ಯಾಚರಣೆಯ ಭಾಗವಾಗಿದೆ; ಮತೀಯ ನೆಲೆಯ ರಾಷ್ಟ್ರವಾದದ ಪರಿಕಲ್ಪನೆಯಲ್ಲಿ ಮುಸ್ಲಿಮರನ್ನು ಕ್ರೈಸ್ತರನ್ನು ಒಳಗಿನ ಶತ್ರುಗಳು ಎಂದು ಸಂಘಪರಿವಾರದ ಸಿದ್ಧಾಂತಗಳು ಈಗಾಗಲೇ ಮಾಡಿರುವ ಘೋಷಣೆಯ ಭಾಗವಾಗಿದೆ. ಬ್ರಾಹ್ಮಣ ಶೂದ್ರ ದಲಿತ ನುಡಿಗಟ್ಟುಗಳು ಸಂಘಪರಿವಾರದ ಹಿಂದುತ್ವ ಪರಿಕಲ್ಪನೆಯಲ್ಲಿರುವ ಆಂತರಿಕ ಶ್ರೇಣೀಕರಣದ ಬಿರುಕುಗಳನ್ನು ಕಾಣಿಸುವ ಕೆಲಸ ಮಾಡುತ್ತವೆ. ಈ ಬಿರುಕುಗಳನ್ನು ಸಂಭಾಳಿಸಲು ಅದು ಹಿಂದು-ಮುಸ್ಲಿಂ, ಹಿಂದೂ-ಕ್ರೈಸ್ತ ಚೌಕಟ್ಟುಗಳನ್ನು ಬಳಸುತ್ತ ಬಂದಿದೆ. ಈ ಚೌಕಟ್ಟುಗಳು ದಲಿತ ಮತ್ತು ಶೂದ್ರ ಸಮುದಾಯಗಳನ್ನು ಬ್ರಾಹ್ಮಣವಾದದ ಯಜಮಾನಿಕೆಯ ಮುಷ್ಠಿಯೊಳಗೆ ಸಿಲುಕಿಸಲು ನೆರವಾಗುತ್ತ ಬಂದಿವೆ.

ದರ್ಗಾದ ಮುಂದೆ ಕುರುಬ ಸಮುದಾಯದ ಭಕ್ತ.

ಮುಸ್ಲಿಮರನ್ನು ಕುರಿತ ವಾಣಿಜ್ಯ ಬಹಿಷ್ಕಾರಕ್ಕೆ ಈ ಕೆಳಜಾತಿಗಳನ್ನು ತನ್ನ ಅಧೀನತೆಯಲ್ಲಿ ತಂದುಕೊಳ್ಳುವ ಹಿಂದುತ್ವದ ಸಾಮಾಜಿಕ ಇಂಜಿನಿಯರಿಂಗಿನ ಆಯಾಮವೂ ಇದೆ. ಈ ಪ್ರಯೋಗವು ಕೃಷಿಪ್ರಧಾನ ಚಟುವಟಿಕೆಯಲ್ಲಿ ತೊಡಗಿರುವ ಮುಸ್ಲಿಮರಿರುವ ಉತ್ತರ ಕರ್ನಾಟಕಕ್ಕಿಂತ, ವಾಣಿಜ್ಯಪ್ರಧಾನ ಚಟುವಟಿಕೆಯಲ್ಲಿ ತೊಡಗಿರುವ ಬ್ಯಾರಿಗಳು (ಬ್ಯಾರಿ=ವ್ಯಾಪಾರಿ) ಇರುವ ಕರಾವಳಿಯಲ್ಲಿ ಆರಂಭವಾಗಿದೆ. ಮುಸ್ಲಿಮರು ವಾಣಿಜ್ಯಕವಾಗಿ ಮಾತ್ರವಲ್ಲದೆ, ಅಧಿಕಾರಿಗಳಾಗಿಯೂ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಗುಡಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದಂತೆ ತಡೆಯುವ ಪ್ರಯೋಗಗಳು ಕೂಡ ಕರಾವಳಿಯಲ್ಲೇ ಆರಂಭವಾದವು. ಕೆಲವು ವರ್ಷಗಳ ಹಿಂದೆ ಮುಜರಾಯಿ ಇಲಾಖೆಗೆ ಸೇರಿದ ಪುತ್ತೂರು ಮಹಾಲಿಂಗೇಶ್ವರ ಗುಡಿಯ ಜಾತ್ರೆಯಲ್ಲಿ, ಆಡಳಿತಾಧಿಕಾರದ ಭಾಗವಾಗಿ ಸೇರ್ಪಡೆಯಾಗಿದ್ದ ಮುಸ್ಲಿಂ ಸಮುದಾಯದಿಂದ ಬಂದ ಜಿಲ್ಲಾಧಿಕಾರಿಯ ಹೆಸರಿದ್ದ ಕರಪತ್ರವನ್ನು ಬಹಿಷ್ಕಾರ ಮಾಡಲಾಯಿತು. ಆದ್ದರಿಂದ, ವಾಣಿಜ್ಯ ಬಹಿಷ್ಕಾರವು, ತನ್ನದಲ್ಲದ ಧರ್ಮಗಳನ್ನು ಪರಕೀಯಗೊಳಿಸುವ ಮತ್ತು ದೈನಿಕ ಬದುಕಿನಲ್ಲಿ ಜನರ ಸಹಜ ಸಂಬಂಧಗಳನ್ನು ನಂಜುಗೊಳಿಸುವ ಧಾರ್ಮಿಕ- ಸಾಮಾಜಿಕ ಆಯಾಮಗಳ ತಾರ್ಕಿಕ ವಿಸ್ತರಣೆಯಾಗಿದೆ.

ದೈವದ ಹರಕೆಯೊಪ್ಪಿಸುತ್ತಿರುವ ಮುಸ್ಲಿಂ ಮಹಿಳೆ

ಆದರೆ ಭಾರತದಲ್ಲಿ ಮುಸ್ಲಿಂ-ಹಿಂದು ಎಂದು ವಿಭಜಿಸಲಾಗಿರುವ ಎರಡು ಲೋಕಗಳ ನಡುವೆ ಸಂಘರ್ಷದ ಚರಿತ್ರೆ ಇರುವಂತೆಯೇ, ಜನ ತಮ್ಮ ದೈನಿಕ ವ್ಯವಹಾರಗಳನ್ನು, ಸೇವಿಸುವ ಆಹಾರ ಪಾನೀಯಗಳು, ಮಾಡುವ ಕೆಲಸಗಳನ್ನು, ಹಮ್ಮಿಕೊಳ್ಳುವ ಮದುವೆ-ಉರುಸು-ಜಾತ್ರೆ-ಹಬ್ಬಗಳನ್ನು ಕೂಡಿ ನಡೆಸುವ ಪರಂಪರೆಯೂ ಇದೆ. ಈ ಕೂಡುತನವು ಸೇನೆಯ ಮತ್ತು ಆಡಳಿತದ ವಿಷಯದಲ್ಲಿಯೂ ನಿಜ. ಶಿವಾಜಿಯ ಸೇನೆಯಲ್ಲಿ ಪ್ರಮುಖ ಸ್ಥಾನಗಳಲ್ಲಿ ಮುಸ್ಲಿಮ ಸರದಾರರೂ ಅಂಗರಕ್ಷಕರೂ ಇದ್ದರು. ವಿಜಯನಗರದ ಸೇನೆಯಲ್ಲಿ ಕುದುರೆ ಸವಾರರು ಮತ್ತು ಬಿಲ್ಲಾಳುಗಳು ಟರ್ಕಿ ಮೂಲದ ಮುಸ್ಲಿಮರಾಗಿದ್ದರು. ಎರಡನೇ ದೇವರಾಯನು ದೊರೆಗಳು ಅವರಿಗಾಗಿ ಮಸೀದಿಯನ್ನು ಕಟ್ಟಿಕೊಟ್ಟು ತುರ್ಕವಾಡಿ ಎಂಬ ಬಡಾವಣೆಯಲ್ಲಿ ಮನೆ ಕಟ್ಟಿಸಿಕೊಟ್ಟಿದ್ದನ. ಹೈದರ್-ಟಿಪ್ಪು ಆಳಿಕೆಯಲ್ಲಿ ಪೂರ್ಣಯ್ಯನನ್ನು ಒಳಗೊಂಡಂತೆ ಪ್ರಧಾನ ಅಧಿಕಾರದಲ್ಲಿ ಮುಸ್ಲಿಮೇತರರಿದ್ದರು. ನಾಲ್ವಡಿಯವರ ಸುದೀರ್ಘ ಆಳಿಕೆಯಲ್ಲಿ ದಿವಾನರಾಗಿದ್ದವರು ಮಿರ್ಜಾ ಇಸ್ಮಾಯಿಲ್. ಪ್ರಜಾಪ್ರಭುತ್ವದ ಆಳಿಕೆಯಲ್ಲಿಯೂ ಎಲ್ಲ ಧರ್ಮಗಳಿಗೆ ಸೇರಿದ ಶಾಸಕರು ಮಂತ್ರಿಗಳು ಅಧಿಕಾರಿಗಳು ಶಿಕ್ಷಕರು ಇದ್ದಾರೆ. ಇದು ಭಾರತದ ಧರ್ಮಾತೀತವಾದ ಕೂಡುಬದುಕಿನ ಸಹಜವಾದ ಲಯವಾಗಿದೆ.

ದೈವವನ್ನು ಸ್ವಾಗತಿಸಲು ಕಟ್ಟೆಯ ಮೇಲೆ ಕೂತಿರುವ ಹಿಂದೂಮುಸ್ಲಿಮರು ನಾಯಕರು

ಉರುಸು-ಜಾತ್ರೆಗಳ ವಿಷಯದಲ್ಲಿಯೂ ಧರ್ಮಾತೀತವಾದ ಈ ಚಹರೆಯಿದೆ. ಇದಕ್ಕೆ ಕಾರಣ, ಧರ್ಮಗಳ ಜನಪ್ರಿಯ ಆಯಾಮವಾಗಿರುವ ಜಾತ್ರೆ ಉರುಸು ಹಬ್ಬಗಳು, ಎಲ್ಲ ಧರ್ಮದ ಜನರು ನಾನಾ ಕಾರಣಗಳಿಂದ ಕೂಡುವ ಸಾರ್ವಜನಿಕ ಸ್ಪೇಸುಗಳೂ ಆಗಿರುವುದು. ಹೀಗಾಗಿಯೇ ಇವು ಕೇವಲ ಧಾರ್ಮಿಕವಾಗಿರದೆ, ವಾಣಿಜ್ಯ ವಿನಿಮಯದ ಮತ್ತು ಕಲಾಪ್ರದರ್ಶನದ ವೇದಿಕೆಗಳೂ ಆಗಿವೆ. ಸೇರುವ ಜನರಾದರೂ ಈ ಉರುಸು-ಜಾತ್ರೆಗಳಲ್ಲಿ ಧಾರ್ಮಿಕ ಎನ್ನಬಹುದಾದ ಸೇವೆಗಳಿಗೆ ಕೊಡುವ ಸಮಯ ಅತ್ಯಲ್ಪ. ಹೆಚ್ಚಿನ ವೇಳೆಯನ್ನು ವಸ್ತುಗಳನ್ನು ಮಾರುವ-ಕೊಳ್ಳುವ, ಬಂಧುಗಳನ್ನು ಭೇಟಿಮಾಡುವ, ಮನರಂಜನೆಗಾಗಿ ನಡೆಯುವ ಕುಸ್ತಿ, ಟಗರು ಕಾಳಗ, ಖವಾಲಿ, ಸಂಗೀತ ಕಛೇರಿ, ನಾಟಕ-ಯಕ್ಷಗಾನ ನೋಡುವ ಉದ್ದೇಶಕ್ಕೆ ವಿನಿಯೋಗಿಸುತ್ತಾರೆ. ಇದಕ್ಕೆ ಪೂರಕವಾಗಿ ಗುಡಿ ಮತ್ತು ದರ್ಗಾಗಳನ್ನು ಕಟ್ಟಿಕೊಡುವಲ್ಲಿ ಬೇರೆಬೇರೆ ಧರ್ಮದ ಜನರ ಸೇವೆ ಇರುತ್ತದೆ. ಬಪ್ಪನಾಡು ದುರ್ಗಾ ಪರಮೇಶ್ವರಿಯ ಗುಡಿಯನ್ನು ಬಪ್ಪಬ್ಯಾರಿ ಕಟ್ಟಿಸಿಕೊಟ್ಟ ಪುರಾಣವಿದೆ. ಇದನ್ನು ಅದೇ ಗುಡಿಯು ನಡೆಸುತ್ತ ಬಂದಿರುವ ಯಕ್ಷಗಾನದಲ್ಲಿ ಪ್ರದರ್ಶಿಸಿಕೊಂಡೂ ಬರಲಾಗಿದೆ. ಬಪ್ಪನ ಪಾತ್ರವನ್ನು ಶ್ರೇಣಿಯವರು ಅದ್ಭುತವಾಗಿ ಮಾಡುತ್ತಿದ್ದರು. ಕರ್ನಾಟಕದ ಅನೇಕ ದರ್ಗಾಗಳು ಮಸೀದಿಗಳು ಸ್ಥಳೀಯ ರಚನೆಯನ್ನು ಹೊಂದಿವೆ. ಕೊಡಗಿನ ಎಮ್ಮೆಮಾಡು ದರ್ಗಾವು, ಕರಾವಳಿಯ ಭೂತಸ್ಥಾನದ ವಿನ್ಯಾಸದಲ್ಲಿದೆ. ಬಂದೇನವಾಜರ ಜತೆ ಸ್ನೇಹವಿದ್ದ ಸಾವಳಗಿ ಶಿವಲಿಂಗೇಶ್ವರರ ಸಮಾಧಿಯು ದರ್ಗಾಕಾರದಲ್ಲಿದೆ. ಬಹಳಷ್ಟು ಜಾತ್ರೆ-ಉರುಸು ಕಮಿಟಿಗಳಲ್ಲಿ ಎಲ್ಲ ಧರ್ಮದವರೂ ಇರುತ್ತಾರೆ. ಇಳಕಲ್ ಮುರ್ತುಜಾ ಖಾದಿ ದರ್ಗಾ ಕಮಿಟಿಯಲ್ಲಿ ಹಿಂದುಗಳೇ ಇದ್ದಾರೆ. ಗದುಗಿನ ತೋಂಟದಾರ್ಯರು ಇದ್ದಾಗ, ಡಂಬಳ ಮಠದ ಜಾತ್ರಾಸಮಿತಿಗೆ ಒಬ್ಬ ಮುಸ್ಲಿಮ ವ್ಯಕ್ತಿಯನ್ನು ನೇಮಿಸಿದ್ದರು. ಅದನ್ನು ಸಂಸದ ವಿಜಯ ಸಂಕೇಶ್ವರರು ವಿರೋಧಿಸಿದರು. ಆಗ ಸ್ವಾಮೀಜಿಯವರು ಹೀಗೆ ವಿರೋಧಿಸುವುದು ಭಾರತೀಯ ಪರಂಪರೆಯಲ್ಲ ಎಂದು ಬುದ್ಧಿ ಹೇಳಿದ್ದರು.

ಬದ್ರಿಯಾ ಮಸೀದಿಗೆ ಗೌರವ ಸ್ವೀಕಾರಕ್ಕೆ ಹೋಗುತ್ತಿರುವ ದೈವ.

ಕರ್ನಾಟಕದ ನೂರಾರು ಗುಡಿ-ದರ್ಗಾ-ಮಸೀದಿಗಳು, ತಮ್ಮ ಜಾತ್ರೆ-ಉರುಸುಗಳಲ್ಲಿ ಹಲವು ಧಾರ್ಮಿಕ ಸಮುದಾಯಗಳನ್ನು ಒಳಗೊಳ್ಳುವ ಸ್ವರೂಪವನ್ನು ಹೊಂದಿವೆ. ಇವತ್ತಿಗೂ ಚಿಕ್ಕನಾಯಕನಹಳ್ಳಿಯ ತಾತಯ್ಯನ ದರ್ಗಾದಲ್ಲಿ ಪ್ರತಿ ಅಮಾವಾಸ್ಯೆಯಂದು ಗೋರಿಯ ಸುತ್ತಲೂ ಕೂತು ಎಲ್ಲ ಜಾತಿಯ ಜನರು ತತ್ವಪದ ಹಾಡುವ ಪದ್ಧತಿಯಿದೆ. ದರ್ಗಾಗಳಲ್ಲಿ ಸಕ್ಕರೆ ಓದಿಸುವ ಆಚರಣೆಯಲ್ಲಿ ಮುಸ್ಲಿಮರಿಗಿಂತ ಹೆಚ್ಚಾಗಿ ಹಿಂದುಗಳು ಇರುವುದನ್ನು ಕಲಬುರ್ಗಿಯ ಬಂದೇನವಾಜ್ ದರ್ಗಾದಲ್ಲಿ ಕಾಣಬಹುದು. ಈ ದರ್ಗಾಕ್ಕೆ ಹರಕೆ ಹೊರುತ್ತಿದ್ದ ರಾಯಚೂರಿನ ಒಬ್ಬ ಲಿಂಗವಂತ ಜಮೀನುದಾರಿಗೆ ಖಾಜನಗೌಡ ಎಂದೇ ಹೆಸರಿತ್ತು. ಅನೇಕ ದರ್ಗಾಗಳಿಗೆ ಆಯಾ ಊರಿನ ದೇವರ ಮೆರವಣಿಗೆಗಳು ಭೇಟಿಕೊಡುವ ಪದ್ಧತಿಯಿದೆ. ಬೆಂಗಳೂರಿನ ಚಿಕ್ಕಪೇಟೆಯ ತವಕ್ಕಲ ಮಸ್ತಾನ್ ದರ್ಗಾಕ್ಕೆ ಧರ್ಮರಾಯನ ಕರಗದ ಮೆರವಣಿಗೆಯು ಭೇಟಿಕೊಡುತ್ತದೆ. ಕರಾವಳಿಯಲ್ಲಿ ಮಂಜೇಶ್ವರ ಮುಂತಾದ ಅನೇಕ ಕಡೆ ಸ್ಥಳೀಯ ದೈವ(ಭೂತ)ಗಳು, ತಮ್ಮ ಊರ ಪಳ್ಳಿಗೆ ಹೋಗಿ ಪ್ರಸಾದ ಕೊಟ್ಟು ಮರ್ಯಾದೆ ಸ್ವೀಕರಿಸುತ್ತವೆ. ಅನೇಕ ಜಾತ್ರೆಗಳಲ್ಲಿ ಸೂಫಿಸಂತರ ಹೆಸರಿನ ದೀನನ್ನು ಘೋಷಿಸಲಾಗುತ್ತದೆ. ಸಾವಳಗಿ ಜಾತ್ರೆಯಲ್ಲಿ ‘ಬಂದೇನವಾಜ್ ಕಿ ದೋಸ್ತಾರ ದೀನ್’ ಹೇಳಲಾಗುತ್ತದೆ. ತಿಂತಿಣಿ ಮೋನಪ್ಪನ ಜಾತ್ರೆಯಲ್ಲಿ ‘ಏಕಲಾಕ ಐಸೀ ಹಜಾರ ಪಾಂಚೋ ಪೀರ ಪೈಗಂಬರ್, ಜಿತಾಪೀರ್ ಕಾಶೀಪತಿ ಹರಹರ ಮಹಾದೇವ’ ಘೋಷವನ್ನು ಹಾಕಲಾಗುತ್ತದೆ. ಉರುಸಿನ ಅಥವಾ ಜಾತ್ರೆಯ ಪ್ರಧಾನ ವೇದಿಕೆಯ ಕಾರ್ಯಕ್ರಮಗಳಲ್ಲೂ ಸರ್ವಧರ್ಮೀಯತೆ ಇರುತ್ತದೆ. ಮಳಖೇಡದ ಉರುಸಿನಲ್ಲಿ ವೇದಿಕೆಯ ಮೇಲೆ, ದರ್ಗಾದ ಸಜ್ಜಾದನಶೀನರು, ಬೇರೆಬೇರೆ ಧರ್ಮಗಳ ಗುರುಗಳ ಜತೆಗೇ ದರ್ಬಾರು ನಡೆಸುತ್ತಾರೆ.

ಬೀಚನಹಳ್ಳೀ ಮೊಹರಮ್ಮಿನಲ್ಲಿ ಮುಸ್ಲಿಮ ಕಲಾವಿದ ಆಂಜನೇಯನಾಗಿ.

ಈಚೆಗೆ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸಿದ ಕಾಪುವಿನ ಗುಡಿಯನ್ನು ಒಳಗೊಂಡಂತೆ, ಬಹಳಷ್ಟು ಗುಡಿಗಳಲ್ಲಿ ವಾದ್ಯಸೇವೆ ಮುಸ್ಲಿಮರದು. ಇದರಂತೆ ದರ್ಗಾಗಳ ವಾದ್ಯಸೇವೆಗಳಲ್ಲಿ ಆಯಾ ಊರಿನ ಭಜಂತ್ರಿಗಳು ಶಹನಾಯಿ ನುಡಿಸುವರು. ಪ್ರಸಿದ್ಧ ಸಂಗೀತಗಾರರಾಗಿದ್ದ ಅಲ್ಲದಿಯಾಖಾನರು ಕೊಲ್ಹಾಪುರದ ಮಹಾಲಕ್ಷ್ಮೀಗುಡಿಯಲ್ಲೂ, ಬಿಸ್ಮಿಲ್ಲಾಖಾನರು ಕಾಶಿಯ ವಿಶ್ವನಾಥ ಮಂದಿರದಲ್ಲೂ ಸಂಗೀತ ಸೇವೆ ಮಾಡುತ್ತಿದ್ದರು. ಮಳಖೇಡದ ಉರುಸಿನಲ್ಲಿ ನಡೆಯುವ ಶಿವಹೆಚ್ಚೊ ಶಕ್ತಿಹೆಚ್ಚೊ ಎಂಬ ವಾಗ್ವಾದವುಳ್ಳ ಹರದೇಶಿ ನಾಗೇಶಿ ಹಾಡುಗಾರಿಕೆ ನೋಡಲು ನಾನು ಹೋಗಿದ್ದೆ. ಬಿಜಾಪುರದ ಅಮೀನುದ್ದೀನ್ ದರ್ಗಾದಲ್ಲಿ ಕೃಷ್ಣಪಾರಿಜಾತವು ಏರ್ಪಡುತ್ತದೆ. ಜನಪದ ರಂಗಭೂಮಿಯಲ್ಲಿ ಮುಸ್ಲಿಂ ಕಲಾವಿದರು ಅತಿಹೆಚ್ಚು ತೊಡಗಿಕೊಂಡಿದ್ದ ಪ್ರಕಾರವೆಂದರೆ ಪಾರಿಜಾತ. ಕರಾವಳಿಯ ಜಾತ್ರೆಗಳಲ್ಲಿ ಹುಲಿವೇಷ, ಗರ್ನಾಲು ಹಾರಿಸುವುದನ್ನು ಮುಸ್ಲಿಮರೇ ಮಾಡಿಕೊಂಡು ಬಂದಿರುವರು.

ಮೊಹರಂ ದೇವರನ್ನು ಹೊರುವ ಆಚಾರಪೈಕಿ ವ್ಯಕ್ತಿ

ಇದಕ್ಕೆ ಪೂರಕವಾಗಿ ಜಾತ್ರೆ-ಉರುಸುಗಳ ಆಹಾರ ಪದ್ಧತಿಯೂ ಕೂಡು ಸಂಸ್ಕೃತಿಯದು. ಕೊಡೇಕಲ್ ಬಸವಣ್ಣ ಮತ್ತು ತಿಂತಿಣಿ ಮೋನಪ್ಪನವರ ಜಾತ್ರೆಗಳಲ್ಲಿ ಮುಖ್ಯ ಆಹಾರವು ಮಾಲ್ದಿಯಾಗಿದ್ದು, ಇದು ದರ್ಗಾ ಸಂಸ್ಕೃತಿಯ ಪ್ರಭಾವದಿಂದ ಬಂದುದಾಗಿದೆ. ಇದಕ್ಕೆ ಪ್ರತಿಯಾಗಿ ಬಾಬಾಬುಡನಗಿರಿಯಲ್ಲಿ ತೆಂಗಿನಕಾಯಿ ಒಡೆಯುವ ಪದ್ಧತಿಯಿದೆ. ಜಾತ್ರೆ-ಉರುಸಿಗೆ ಬರುವ ಭಕ್ತರು ತಮ್ಮ ಮನೆದೇವರ ಆಚರಣೆಗಳನ್ನೇ ಇಲ್ಲಿಯೂ ಅನುಸರಿಸಲು ಯತ್ನಿಸುತ್ತಾರೆ.

ಸಾವಳಗಿ ಶಿವಲಿಂಗೇಶ್ವರರ ಗದ್ದುಗೆ

ಹೀಗೆ ಗುಡಿ/ದರ್ಗಾದ ಕಟ್ಟಡ, ಉಸ್ತುವಾರಿ ಕಮಿಟಿ, ಉರುಸು-ಜಾತ್ರೆಗಳ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮ, ಆಹಾರಪದ್ಧತಿ-ಹೀಗೆ ಸರ್ವ ಸ್ತರಗಳಲ್ಲೂ ಬಹುಧರ್ಮೀಯತೆಯ ಲಕ್ಷಣಗಳನ್ನು ಲಾಗಾಯ್ತಿನಿಂದ ಪಾಲಿಸಿಕೊಂಡು ಬರಲಾಗಿದೆ. ಇದರ ಭಾಗವಾಗಿಯೇ ಎಲ್ಲ ಧರ್ಮೀಯರು ನಡೆಸುವ ವಾಣಿಜ್ಯ ಚಟುವಟಿಕೆಗಳಿವೆ. ಪ್ರತಿ ಜಾತಿ ಮತ್ತು ಧರ್ಮದ ಸಮುದಾಯಗಳಲ್ಲಿ ಒಂದೊಂದು ಬಗೆಯ ಕುಶಲತೆ ಉತ್ಪಾದನ ಪ್ರತಿಭೆ ಇರುತ್ತದೆ. ನಮ್ಮ ಜಾತ್ರೆ ಉರುಸುಗಳು ಈ ಪ್ರತಿಭೆ ಕುಶಲತೆಗಳ ಪ್ರದರ್ಶಕ ವೇದಿಕೆಗಳು. ಆಯಾ ಸೀಮೆಯ ಸೀಜನಲ್ ಮಾರುಕಟ್ಟೆಗಳು. ಅಲ್ಲಿ ರೈತರು ಕೃಷಿಗೆ ಬೇಕಾದ ದನ, ಉಪಕರಣ ಕಂಬಳಿ ಕತ್ತೆ ಕೊಳ್ಳುವರು. ಮಹಿಳೆಯರು ಗೃಹಕೃತ್ಯಕ್ಕೆ ಬೇಕಾದ ಸಾಮಾನು ಖರೀದಿಸುವರು. ಸಿನಿಮಾ ನಾಟಕ ನೋಡುವರು. ನಾಲಗೆಗೆ ರುಚಿಕರವಾದನ್ನು ತಿನ್ನುವರು.

ಹಸಿರುಪೇಟಧಾರಿಯಾದ ಕೊಡೇಕಲ್ ಸ್ವಾಮಿಜಿ.

ಈ ಜಾತ್ರೆ ಉರುಸುಗಳು, ಸಮಾಜವನ್ನು ವಿಭಜಿಸುವ ನೂರಾರು ತತ್ವ ಮತ್ತು ಯತ್ನಗಳ ನಡುವೆ, ಸಮಾಜವನ್ನು ಸೀಳಿಹೋಗದಂತೆ ಹಿಡಿದಿಟ್ಟಿರುವ ಸಾಂಸ್ಕೃತಿಕ ಸೇತುವೆಗಳು. ಈ ಸೇತುವೆಗಳನ್ನು ಸಂಘಪರಿವಾರವು ವ್ಯಾಪಾರ ಬಹಿಷ್ಕಾರದೊಂದಿಗೆ ಭಗ್ನಗೊಳಿಸಲು ಶುರುಮಾಡಿದೆ. ಇದರಿಂದ ನಮ್ಮ ಕೂಡು ಪರಂಪರೆ ಮಾತ್ರವಲ್ಲ, ದೈನಿಕ ಬದುಕಿನಲ್ಲಿರುವ ಮಾನವೀಯ ಸಂಬಂಧ ಮತ್ತು ಉಪಯುಕ್ತ ಕೊಳುಕೊಡೆಗಳೂ ಭಗ್ನವಾಗುವವು. ಇದು ನಾಡನ್ನು ಎಲ್ಲರೂ ತಮ್ಮ ಪ್ರತಿಭೆ ಶ್ರಮ ಬುದ್ಧಿಮತ್ತೆ ಕುಶಲತೆಗಳಿಂದ ಕೂಡಿ ಕಟ್ಟುವ ಪರಿಕಲ್ಪನೆಗೆ ಬಗೆವ ದ್ರೋಹವಾಗಿದೆ.

ಹಸ್ಮಕಲ್ ಉರುಸಿನ ಕರಪತ್ರದಲ್ಲಿ ಹಿಂದೂ ಸ್ವಾಮೀಜಿಗಳ ಹೆಸರುಗಳು

 

ಹಾಲಪ್ಪನವರು ಕಟ್ಟಿಸಿದ ಜಮಖಂಡಿಯ ಶಂಸುದ್ದೀನ್ ದರ್ಗಾದ ನಗಾರಖಾನೆ

 

ಹಾಲಪ್ಪನವರು ಕಟ್ಟಿಸಿದ ಜಮಖಂಡಿಯ ಶಂಸುದ್ದೀನ್ ದರ್ಗಾದ ನಗಾರಖಾನೆ

 

 

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

 


ಇದನ್ನೂ ಓದಿ: ಕೋಮುದ್ವೇಷಕ್ಕೆ ಪೊಳ್ಳು ’ಸಮರ್ಥನೆ’ಯೂ ಬೇಡವಾಗಿರುವ ವಿಷಮ ಹಂತದಲ್ಲಿ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...