ದೇಶದಲ್ಲಿ ಚಾಲ್ತಿಯಲ್ಲಿರುವ ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿಯ ಬಗ್ಗೆ ಅರಿವು ಮೂಡಿಸಿ, ಆಮ್ಲಜನಕ, ಚಿಕಿತ್ಸೆಗೆ ಬೇಕಾದ ಅಗತ್ಯ ಔಷಧಗಳು ಮತ್ತು ವ್ಯಾಕ್ಸಿನೇಷನ್ ವಿಧಾನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ರಾಷ್ಟ್ರೀಯ ನೀತಿಯನ್ನು ಜಾರಿಗೆ ತರಲು ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರವನ್ನು ಕೇಳಿದೆ.
ಕೊರೊನಾ ಲಾಕ್‌ಡೌನ್ ಘೋಷಿಸಲು ಹೈಕೋರ್ಟ್‌ಗಳ ನ್ಯಾಯಾಂಗ ಅಧಿಕಾರವನ್ನು ಪರಿಶೀಲಿಸುವುದಾಗಿ ವಿಚಾರಣೆಯ ವೇಳೆ ನ್ಯಾಯಾಲಯ ಹೇಳಿದೆ. ಇದಕ್ಕೂ ಮುನ್ನ ಮಂಗಳವಾರದಂದು ಸುಪ್ರೀಂಕೋರ್ಟ್, ಉತ್ತರ ಪ್ರದೇಶದ ಐದು ಪ್ರಮುಖ ನಗರಗಳಲ್ಲಿ ಸಂಪೂರ್ಣ ಲಾಕ್‌ಡೌನ್ / ಕರ್ಫ್ಯೂ ವಿಧಿಸಿದ್ದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ತಡೆಹಿಡಿದಿತ್ತು.
ಇದನ್ನೂ ಓದಿ: ಸರ್ಕಾರದ ಪ್ರಚಾರದ ಹುಚ್ಚು ನಾಚಿಕೆಗೇಡಿನದ್ದು: ಕುಮಾರಸ್ವಾಮಿ ಆಕ್ರೋಶ
ನ್ಯಾಯಮೂರ್ತಿಗಳಾದ ಎಲ್.ಎನ್. ರಾವ್ ಮತ್ತು ಎಸ್.ಆರ್. ಭಟ್ ಅವರನ್ನೂ ಒಳಗೊಂಡ, ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ನ್ಯಾಯಪೀಠವು ಕೇಂದ್ರಕ್ಕೆ ನೋಟಿಸ್ ಜಾರಿಗೊಳಿಸಿದ್ದು, ಶುಕ್ರವಾರ ಈ ವಿಷಯವನ್ನು ಆಲಿಸುವುದಾಗಿ ತಿಳಿಸಿದೆ.
ದೇಶಾದ್ಯಂತ ಆರು ಹೈಕೋರ್ಟ್‌ಗಳು ಆಸ್ಪತ್ರೆಗಳಲ್ಲಿನ ಆಮ್ಲಜನಕ, ಹಾಸಿಗೆಗಳು ಮತ್ತು ಆಂಟಿ-ವೈರಲ್ ಔಷಧ ರೆಮ್‌ಡೆಸಿವಿರ್ ಬಿಕ್ಕಟ್ಟನ್ನು ಒಳಗೊಂಡ ಸಂಬಂಧಿತ ಅರ್ಜಿಗಳನ್ನು ಆಲಿಸುತ್ತಿರುವ ಸಮಯದಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಕೈಗೆತ್ತಿಕೊಂಡಿದೆ.
ಕೊರೊನಾ ನಿರ್ವಹಣೆಯ ಸ್ವಯಂ ಪ್ರೇರಿತ ಪ್ರಕರಣದಲ್ಲಿ ಸಹಾಯ ಮಾಡಲು ಇದು ಹಿರಿಯ ವಕೀಲ ಹರೀಶ್ ಸಾಲ್ವೆ ಅವರನ್ನು ಅಮಿಕಸ್ ಕ್ಯೂರಿಯಾಗಿ ಸುಪ್ರೀಂಕೋರ್ಟ್ ನೇಮಿಸಿದೆ. ಒಂದೇ ದಿನದಲ್ಲಿ ಅತೀ ಹೆಚ್ಚು ಸೋಂಕು ಪತ್ತೆಯಾಗಿ ಭಾರತ ಜಾಗತಿಕ ದಾಖಲೆಯನ್ನು ನಿರ್ಮಿಸಿದ ದಿನ ನ್ಯಾಯಾಲಯವು ಈ ವಿಚಾರಣೆಗಳನ್ನು ಮಾಡುತ್ತಿದೆ.
ದೇಶದಲ್ಲಿ ಒಂದೇ ದಿನಕ್ಕೆ 3 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿದ್ದು, ಕೊರೊನಾ ಪ್ರಕರಣಗಳಲ್ಲಿ ವಿಶ್ವದ ಅತಿದೊಡ್ಡ ಉಲ್ಬಣವಾಗಿ ಭಾರತ ದಾಖಲೆ ಮಾಡಿದೆ.
ಇದನ್ನೂ ಓದಿ: ಭಿಕ್ಷೆ ಬೇಡಿ, ಸಾಲ ತನ್ನಿ ಇಲ್ಲವೇ ಕದ್ದುಕೊಂಡು ಬನ್ನಿ: ಆಮ್ಲಜನಕ ವಿಷಯವಾಗಿ ಕೇಂದ್ರದ ವಿರುದ್ಧ ಕೋರ್ಟ್ ಆಕ್ರೋಶ


