HomeಮುಖಪುಟExplainer: ಜೀನೋಮ್ ಎಡಿಟಿಂಗ್‌ಗೆ ರಸಾಯನಶಾಸ್ತ್ರದ ನೊಬೆಲ್ ಮತ್ತು ವಿವಾದ

Explainer: ಜೀನೋಮ್ ಎಡಿಟಿಂಗ್‌ಗೆ ರಸಾಯನಶಾಸ್ತ್ರದ ನೊಬೆಲ್ ಮತ್ತು ವಿವಾದ

ನೊಬೆಲ್ ಪ್ರಶಸ್ತಿಯ ಇದುವರೆಗಿನ ಇತಿಹಾಸದಲ್ಲಿ ಪ್ರಶಸ್ತಿ ಪಡೆದಿರುವ 931 ಜನರಲ್ಲಿ 57 ಮಹಿಳೆಯರಿದ್ದಾರೆ. ಕೇವಲ 16 ಕಪ್ಪು ವರ್ಣೀಯರಿದ್ದಾರೆ. ವಿಜ್ಞಾನ ಕ್ಷೇತ್ರದಲ್ಲಂತೂ ಒಬ್ಬ ಕಪ್ಪು ವರ್ಣೀಯರೂ ಇಲ್ಲ.!

- Advertisement -
- Advertisement -

ಇದು ನೊಬೆಲ್ ಪ್ರಶಸ್ತಿಗಳ ಸೀಸನ್ನು. ಕಳೆದ ವಾರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಗಳ ಘೋಷಣೆಯಾಯಿತು. ಅದನ್ನು ಮೊದಲ ಬಾರಿಗೆ ಇಬ್ಬರು ಮಹಿಳೆಯರು ಹಂಚಿಕೊಂಡಿದ್ದರಿಂದ ಅದು ಐತಿಹಾಸಿಕವೆಂದು ಸಂಭ್ರಮಿಸಲಾಗುತ್ತಿದೆ. ಪ್ರಶಸ್ತಿ ಸಮಿತಿಯ ಪ್ರಕಾರ ಅಮೆರಿಕದ ವಿಜ್ಞಾನಿ ಜೆನ್ನಿಫರ್ ಡೋಡುನಾ ಮತ್ತು ಫ್ರೆಂಚ್ ಸಂಶೋಧಕಿ ಇಮ್ಯಾನ್ಯುಯೆಲ್ಲೆ ಚಾರ್ಪೆಂಟಿಯರ್ ಅವರುಗಳು CRISPER-Cas9 ವ್ಯವಸ್ಥೆ ಎಂಬ ‘ಜೀನೋಮ್ ಎಡಿಟಿಂಗ್ ವಿಧಾನವನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ’ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಜೀನ್‍ಗಳನ್ನು ಕತ್ತರಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವ ವಿಧಾನವನ್ನು ಸಂಶೋಧಿಸಿದ ಕೀರ್ತಿ ಅವರದ್ದಾಗಿದೆ.

ಜೀನ್ ಎಡಿಟಿಂಗ್ ಮತ್ತು CRISPER-Cas9 ತಂತ್ರಜ್ಞಾನ

ಜೀನ್‍ಗಳು ಪೀಳಿಗೆಯಿಂದ ಪೀಳಿಗೆಗೆ ಅನುವಂಶಿಕ ಮಾಹಿತಿಯು ವರ್ಗಾವಣೆಯಾಗಲು ವಾಹಕವಾಗಿ ಕೆಲಸ ಮಾಡುವ ಮೂಲ ಅಂಶಗಳಾಗಿವೆ. ಅವುಗಳು ದೇಹದಲ್ಲಿ ಹಲವು ಕಾರ್ಯಗಳನ್ನು ನಿರ್ವಹಿಸುವ ಪ್ರೋಟೀನ್‍ಗಳನ್ನು ಉತ್ಪಾದಿಸುತ್ತವೆ. ಕೆಲವು ಜೀನ್‍ಗಳನ್ನು ಇನ್ನೊಂದರಲ್ಲಿ ಸೇರಿಸುವ, ತೆಗೆಯುವ, ಮ್ಯುಟೇಷನ್ ಮಾಡುವ ಮೂಲಕ ಅವುಗಳನ್ನು ಅಧ್ಯಯನ ಮಾಡುವ ಹಲವು ದಾರಿಗಳ ಕುರಿತು ‘70ರ ದಶಕದಿಂದಲೂ ಕೆಲವು ಬೆಳವಣಿಗೆಗಳು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಲೇ ಇವೆ. CRISPER-Cas9 ಜೀನ್‍ಗಳನ್ನು ಕತ್ತರಿಸಿ ಜೀನ್‍ಗುಚ್ಛದಲ್ಲಿ (ಜೀನೋಮ್) ನಿರ್ದಿಷ್ಟ ಬದಲಾವಣೆಗಳನ್ನು ತರಲು ಬಳಸಲ್ಪಡುವ ಒಂದು ಜೀನ್ ಎಡಿಟಿಂಗ್ ಉಪಕರಣವಾಗಿದೆ.

CRISPR ಎಂದರೆ Clustered regularly interspaced short palindromic repeats ಮತ್ತು Cas9 ಎಂದರೆ CRISPR associated gene. ಇದು ಪುರಾತನವಾದ ಬ್ಯಾಕ್ಟೀರಿಯಾ ನಿರೋಧಕ ವ್ಯವಸ್ಥೆಯ ಸಹಯೋಗಿ ಜೀನ್ ಆಗಿದೆ. ಸರಣಿಗಳು ಬ್ಯಾಕ್ಟೀರಿಯಾದಲ್ಲಿ ಸಮರ್ಥವಾಗಿ ರಕ್ಷಿತವಾಗಿದೆ. ವೈರಸ್‍ಗಳು ಬ್ಯಾಕ್ಟೀರಿಯಾದಲ್ಲಿ ಸೋಂಕು ಉಂಟುಮಾಡಿದರೆ, ಅವು ಅಪಾಯಕಾರಿ ಡಿಎನ್‍ಎಯನ್ನು ಅದರೊಳಗೆ ಕಳಿಸುತ್ತವೆ. ಒಂದು ವೇಳೆ ಬ್ಯಾಕ್ಟೀರಿಯಾವು ಈ ಸೋಂಕಿನಿಂದ ಪಾರಾಗಿ ಉಳಿದುಕೊಂಡರೆ, ವೈರಸ್‍ನ ಡಿಎನ್‍ಎಯ ಒಂದು ಸಣ್ಣ ಭಾಗವು ಬ್ಯಾಕ್ಟೀರಿಯಾದ ಜೀನೋಮ್ (ಒಟ್ಟು ಜೀನ್ ಸಮೂಹ)ನೊಳಗೆ ನೆನಪಾಗಿ ಸೇರಿಸಲ್ಪಡುತ್ತದೆ. ಆ ಡಿಎನ್‍ಎಯು ಬ್ಯಾಕ್ಟೀರಿಯಾವನ್ನು ಹೊಸ ಸೋಂಕಿನಿಂದ ರಕ್ಷಿಸಲು ಬಳಕೆಯಾಗುತ್ತದೆ.

PC : NBC News

ಎಮ್ಯಾನ್ಯುಯೆಲ್ ಚಾರ್ಪೆಂಟಿಯರ್ ಅವರು ಬ್ಯಾಕ್ಟೀರಿಯಾದ ರಕ್ಷಣಾ ವಿಧಾನದ ಕುರಿತು ಕೆಲಸ ಮಾಡುತ್ತಿದ್ದರು ಮತ್ತು ಆಗ ಅವರು ಕಂಡುಹಿಡಿದ ಒಂದು ಸಂಗತಿಯು ಜೆನ್ನಿಫರ್ ಡೋಡುನಾ ಅವರೊಂದಿಗೆ ಜೊತೆ ಸೇರಲು ಕಾರಣವಾಯಿತು. ಅವರಿಬ್ಬರೂ ಒಟ್ಟು ಸೇರಿ ‘ಬ್ಯಾಕ್ಟೀರಿಯಾವು ಈ ಜೀನ್‍ಗಳನ್ನು ವೈರಲ್ ಡಿಎನ್‍ಎಯನ್ನು ಕತ್ತರಿಸಲು’ ಬಳಸುತ್ತದೆಂಬುದನ್ನು ಕಂಡು ಹಿಡಿದರು. ಹಾಗಾಗಿಯೇ ಅದನ್ನು ‘ಜೆನೆಟಿಕ್ ಕತ್ತರಿ’ ಎಂದು ಕರೆಯಲಾಗುತ್ತದೆ.

ಅದರ ನಂತರ ಒಂದೇ ವರ್ಷದಲ್ಲಿ CRISPR ಮೇಲಿನ ಸಂಶೋಧನೆಯು ವಿಪರೀತ ಬೆಳವಣಿಗೆಯಾಯಿತು. ಮುಂಚೆ ಜೆನೆಟಿಕ್ ಇಂಜಿನಿಯರಿಂಗ್ ಮಾಡುವುದು ಸಿಕ್ಕಾಪಟ್ಟೆ ಸಮಯ ತೆಗೆದುಕೊಳ್ಳುತ್ತಿತ್ತು ಮತ್ತು ತ್ರಾಸದಾಯಕವಾಗಿತ್ತು. ಆದರೆ CRISPR ಅದನ್ನು ಮಾಡಲು ಸುಲಭ, ಶೀಘ್ರ ಮತ್ತು ಖಚಿತವಾಗಿ ಮಾಡಲು ಅವಕಾಶ ಮಾಡಿಕೊಟ್ಟಿತು. ಕೇವಲ 8 ವರ್ಷಗಳಲ್ಲಿ ಅದನ್ನು ಜೀನ್‍ಗಳ ಅಧ್ಯಯನ, ಮನುಷ್ಯರ ಕಾಯಿಲೆಗಳ ಮಾದರಿ ಮತ್ತು ಸಸ್ಯಗಳ ಬೆಳವಣಿಗೆಯ ವಿಚಾರದಲ್ಲಿ ಸಾಕಷ್ಟು ವಿಸ್ತೃತವಾಗಿ ಬಳಸಲಾಗುತ್ತಿದೆ.
ನೊಬೆಲ್ ಪ್ರಶಸ್ತಿ ಸಮಿತಿಯು ‘CRISPR ವಿಧಾನವು ಅನುವಂಶೀಯವಾಗಿ ಬರುವ ಸಿಕಲ್ ಸೆಲ್ ರಕ್ತಹೀನತೆ, ಸ್ನಾಯು ಕ್ಷಯಿಸುವಿಕೆ ಮತ್ತು ಹಂಟಿಂಗ್‍ಟನ್ ಕಾಯಿಲೆಗಳಂತಹವನ್ನು ಗುಣಪಡಿಸಲು ಸಹಾಯ ಮಾಡುತ್ತದೆ’ ಎಂದು ಹೇಳಿದೆ. ಆದರೆ, ಈ ತಂತ್ರಜ್ಞಾನವನ್ನು ಮನುಷ್ಯರ ಮೇಲೆ ಪರೀಕ್ಷಿಸುವ ಮುಂಚೆ ಸಾಕಷ್ಟು ಸುಧಾರಿಸಬೇಕಾಗುತ್ತದೆ.

ಮಾಲೀಕತ್ವ, ಪೇಟೆಂಟ್ ಯುದ್ಧ ಮತ್ತು ವಾಣಿಜ್ಯ ಬಳಕೆಗಳು

CRISPR ಮಾಲೀಕತ್ವ ಮತ್ತು ಯಾರು ಮೊದಲು ಕಂಡುಹಿಡಿದರು ಎಂಬುದು ಒಂದೊಳ್ಳೆ ಸಿನೆಮಾ ಅಥವಾ ಟಿವಿ ಸರಣಿಗೆ ವಸ್ತುವಾಗಬಲ್ಲದು. 2012ರ ಆರಂಭದಿಂದಲೂ ನಾಲ್ಕು ಗುಂಪುಗಳ ಮಧ್ಯೆ ಯಾರು ಮೊದಲು ಕಂಡುಹಿಡಿದರು ಎಂಬ ಬಗ್ಗೆ ಸ್ಪರ್ಧಾತ್ಮಕವಾದ ದಾವೆಗಳಿವೆ. ಚಾರ್ಪೆಂಟಿಯರ್ ಮತ್ತು ಡುಡೊನಾ ಅವರುಗಳು ಅವರಲ್ಲಿ ಎರಡು ಗುಂಪುಗಳವರು.

ಈ ವಿಚಾರದಲ್ಲಿ ಅಂಚಿಗೆ ತಳ್ಳಲ್ಪಟ್ಟಿರುವ ಲಿಥುವೇನಿಯಾದ ವರ್ಜಿನಿಜುಸ್ ಶಿಕ್ಷ್‍ನಿಸ್ ಮತ್ತು ಅವರ ತಂಡವು CRISPR ಹೇಗೆ ಕೆಲಸ ಮಾಡುತ್ತದೆ ಹಾಗೂ ಹೇಗೆ ಅದನ್ನು ನಿಯಂತ್ರಿಸಬಹುದು ಎಂಬುದನ್ನು ಸ್ವತಂತ್ರವಾಗಿ ತೋರಿಸಿಕೊಟ್ಟ ಸಂಶೋಧಕರಲ್ಲಿ ಒಬ್ಬರು. ಆದರೆ ಅವರ ಸಂಶೋಧನಾ ಪ್ರಬಂಧವನ್ನು ತಿರಸ್ಕರಿಸಲಾಯಿತು ಮತ್ತು ಎರಡು ತಿಂಗಳ ನಂತರ ಸಲ್ಲಿಸಲಾದ ಡುಡೊನಾ ಅವರ ಪ್ರಬಂಧವನ್ನು ಯಾವುದೇ ಪರಿಶೋಧನೆಗೆ ಒಳಪಡಿಸದೇ ವಿಜ್ಞಾನ ಪತ್ರಿಕೆಗಳಲ್ಲಿ ಪ್ರಕಟಿಸಿದ್ದರಿಂದ ಆಕೆಗೆ ಈ ಕ್ಷೇತ್ರದಲ್ಲಿ ಸಾಕಷ್ಟು ಖ್ಯಾತಿಯು ಲಭ್ಯವಾಯಿತು.

PC : Science

ಉಳಿದ ದೇಶದವರಿಗೆ ಹೋಲಿಸಿದರೆ ಅಮೆರಿಕದ ವಿಜ್ಞಾನಿಗಳಿಗೆ ವೈಜ್ಞಾನಿಕ ಪ್ರಕಟಣಾ ಸಂಸ್ಥೆಗಳನ್ನು ತಲುಪುವುದು ಮತ್ತು ಮಾನ್ಯತೆಯನ್ನು ಪಡೆಯುವುದು ಸುಲಭ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ ಮತ್ತು ಶಿಕ್ಷ್‍ನಿಸ್ ಲಿಥುವೇನಿಯಾದವರಾಗಿದ್ದರಿಂದ ಅವರ ಪ್ರಬಂಧವು ತಿರಸ್ಕೃತಗೊಂಡಿರಬಹುದು ಎಂತಲೂ ಹೇಳಬಹುದು. ಹಾಗಾಗಿಯೇ ಸಂಶೋಧನೆ ಮಾತ್ರವಲ್ಲದೇ, ಯಾರಿಗೆ ಯಾವುದು ಹತ್ತಿರ, ಯಾವುದು ಬೇಗನೇ ಪರಿಶೋಧನೆಗೆ ಒಳಪಡುತ್ತದೆ, ಯಾವುದು ಗಮನಕ್ಕೆ ಬರುವುದಿಲ್ಲ ಎಂಬುದೂ ವಿಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ.

ಫೆಂಗ್ ಝಾಂಗ್ ಎಂಬ ಇನ್ನೊಬ್ಬ ಅಮೆರಿಕದ ವಿಜ್ಞಾನಿಯು CRISPR-Cas9ಅನ್ನು ಬ್ಯಾಕ್ಟೀರಿಯಾ ಕೋಶಗಳಾಚೆ ಜೀನ್ ಬದಲಾವಣೆಗಾಗಿ ಅಳವಡಿಸಿದ ಮೊದಲಿಗರು. ರೋಗಗಳ ಚಿಕಿತ್ಸೆಗೆ ಈ ವಿಧಾನದ ಬಳಕೆ ಮಾಡಿಕೊಳ್ಳುವ ಅಪಾರ ಸಾಧ್ಯತೆ ತೆರೆದಿದ್ದು ಅದು. ಡುಡೊನಾ ಪೇಟೆಂಟ್ ಪಡೆದುಕೊಂಡಿರುವ ಸಂಶೋಧನೆಯು ಜನರಲ್ ಆದ ವಿಧಾನವಾಗಿದ್ದರೆ ಝಾಂಗ್ ಪೇಟೆಂಟ್ ಪಡೆದುಕೊಂಡಿರುವ ಶೋಧನೆಯು ಇದನ್ನು ಸಸ್ತನಿಗಳ ಕೋಶದಲ್ಲೂ ಬಳಸಬಹುದು ಎಂಬುದನ್ನು ಮೊದಲ ಬಾರಿಗೆ ತೋರಿಸಿತು.

2013ರ ನಂತರ ಝಾಂಗ್ ಮತ್ತು ಡುಡೋನಾ ಅವರ ಗುಂಪುಗಳು CRISPR-Cas9 ವ್ಯವಸ್ಥೆಯ ಬೌದ್ಧಿಕ ಆಸ್ತಿಯ ಮೇಲೆ ಮಾಲೀಕತ್ವ ಹಕ್ಕುಗಳನ್ನು ಯಾರು ಪಡೆಯಬೇಕೆಂಬ ಪೇಟೆಂಟ್ ಯುದ್ಧದಲ್ಲಿ ತೊಡಗಿದ್ದರು; ಏಕೆಂದರೆ ಇದರ ನಂತರದ ಬಳಕೆಯು ಬಿಲಿಯನ್‍ಗಟ್ಟಲೇ ಬೆಲೆಬಾಳುವಂಥದ್ದಾಗಿದೆ. ಇಲ್ಲಿಯವರೆಗೆ ಝಾಂಗ್ ಅತ್ಯಂತ ಹೆಚ್ಚು ಪೇಟೆಂಟ್‍ಗಳನ್ನು ಪಡೆದುಕೊಂಡಿದ್ದಾರೆ ಮತ್ತು ಕಳೆದ 5 ವರ್ಷಗಳಲ್ಲಿ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಪೇಟೆಂಟ್ ಯುದ್ಧವು ವೈಜ್ಞಾನಿಕ ವಲಯಗಳಲ್ಲಿ ಸಾಕಷ್ಟು ಸುದ್ದಿಗೆ ಕಾರಣವಾಗಿದೆ.

ನೊಬೆಲ್ ಪ್ರಶಸ್ತಿ ಸಮಿತಿಯು ವಿವಾದವನ್ನು ಬಯಸದಿರುವುದರಿಂದ, ಇದೇ 2015 ಮತ್ತು 2016ರಲ್ಲಿ CIRSPR ಸಂಶೋಧನೆಯು ನೊಬೆಲ್ ಪಡೆಯದೇ ಇದ್ದುದಕ್ಕೆ ಕಾರಣವೆಂದು ಹಲವರು ಹೇಳುತ್ತಾರೆ. ಹೀಗಿದ್ದರೂ, ಎಲ್ಲಾ ನಾಲ್ಕೂ ವಿಜ್ಞಾನಿಗಳು 2014ರಿಂದ ವೇದಿಕೆಗಳನ್ನು ಹಂಚಿಕೊಂಡಿದ್ದಾರೆ ಮತ್ತು ಒಟ್ಟಿಗೆ ಹಾಗೂ ಪ್ರತ್ಯೇಕವಾಗಿ ಹಲವು ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದಾರೆ. ಇದು ವಿಜ್ಞಾನವೆಂಬುದು ಜೊತೆಗೂಡಿ ಮಾಡುವ ಪ್ರಯತ್ನವೆಂಬುದನ್ನೇ ತೋರಿಸುತ್ತದೆ. ಈಗ ಕೆಲವರ ಬಳಿ ಪೇಟೆಂಟ್‍ಗಳಿವೆ, ಕೆಲವರ ಬಳಿ ಬಿಲಿಯನ್ ಡಾಲರ್ ಮೌಲ್ಯದ ಹೂಡಿಕೆಗಳಿರುವ ಕಂಪೆನಿಗಳಿವೆ ಮತ್ತು ಕೆಲವರು ಮಿಲಿಯನ್‍ಗಟ್ಟಲೇ ಬಾಳಲುವ ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದಾರೆ.

PC : Science News

ಚಾರ್ಪೆಂಟಿಯರ್ ಮತ್ತು ಡುಡೊನಾ ಇಬ್ಬರೂ CIRSPR ಆಧರಿಸಿದ ವೈದ್ಯಕೀಯ ಕಂಪೆನಿಗಳನ್ನು ಹೊಂದಿದ್ದಾರೆ. 2020ರ ಹೊತ್ತಿಗೆ ಕನಿಷ್ಠ 25 CIRSPR ಆಧರಿಸಿದ ಬಯೋಟೆಕ್ ಕಂಪೆನಿಗಳಿದ್ದು, ಚಿಕಿತ್ಸೆ ಮತ್ತು ಚಿಕಿತ್ಸೇತರ ತಂತ್ರಜ್ಞಾನಿಕ ಅಂಶಗಳನ್ನು ಆಧರಿಸಿವೆ ಹಾಗೂ ಅವುಗಳಲ್ಲಿ ಬಿಲಿಯನ್ ಡಾಲರ್ ಹೂಡಿಕೆಗಳಿವೆ.

ತಂತ್ರಜ್ಞಾನದ ದುರ್ಬಳಕೆ ಮತ್ತು ನಿಯಂತ್ರಣದ ಅಗತ್ಯ

ಸ್ಪೈಡರ್‌ಮನ್‍ನ ಅಂಕಲ್ ಪೀಟರ್‌ದ್ದೆಂದು ಹೇಳಲಾಗುವ (ಆದರೆ ಮೂಲ ಹೇಳಿಕೆಯು ವಾಲ್ಟೈರ್‌ದಾಗಿರುವ) ಪ್ರಸಿದ್ಧ ಹೇಳಿಕೆಯು ಹೀಗೆ ಹೇಳುತ್ತದೆ – ಬಹಳ ದೊಡ್ಡ ಅಧಿಕಾರವು ಬಹು ದೊಡ್ಡ ಜವಾಬ್ದಾರಿಯೊಂದಿಗೆ ಬರುತ್ತದೆ.

ಇದು ವಿಜ್ಞಾನದ ವಿಚಾರದಲ್ಲಿ ಇನ್ನೂ ಹೆಚ್ಚು ಸತ್ಯವಾಗಿರುವಂಥದ್ದು. ಆಟಂಬಾಂಬಿನಿಂದ ಬಹುದೊಡ್ಡ ವೈದ್ಯಕೀಯ ಸಂಶೋಧನೆಗಳವರೆಗೆ, ತಂತ್ರಜ್ಞಾನವು ದುರ್ಬಳಕೆಯಾಗಬಹುದೆಂಬ ಆತಂಕ ಯಾವಾಗಲೂ ಇದ್ದೇ ಇದೆ. ಮನುಷ್ಯರು ಯಾವಾಗಲೂ ಅತಿಮಾನವರಾಗಲು ಹಾತೊರೆಯುತ್ತಿರುತ್ತಾರೆ. ಈಗ ಕಂಡುಹಿಡಿಯಲ್ಪಟ್ಟ ಜೆನೆಟಿಕ್ ಕತ್ತರಿಗಳಿಂದ ಡಿಎನ್‍ಎದ ಕೆಲವು ಭಾಗಗಳನ್ನು ತೆಗೆಯುವ ಅಥವಾ ಸೇರಿಸುವ ಸಾಮರ್ಥ್ಯವು ಜೀನ್ ತಂತ್ರಜ್ಞಾನದಿಂದ (ಜಿಎಂ) ಬದಲಿಸಲ್ಪಟ್ಟ ಮಕ್ಕಳನ್ನು ರೂಪಿಸಬಹುದಾದ ಸಾಧ್ಯತೆಯು ಅದರ ಸಂಶೋಧಕರಲ್ಲೂ ಆತಂಕ ಹುಟ್ಟಿಸಿದೆ.

2018ರಲ್ಲಿ ಚೀನಾದ ಹಿ ಜಿಯಾಂಕ್ವಿ ಇಡೀ ವಿಜ್ಞಾನ ಲೋಕವನ್ನೇ ಬೆಚ್ಚಿಸಿದ ಘೋಷಣೆಯೊಂದನ್ನು ಮಾಡಿದ್ದರು. ಅವರು ಎಚ್‍ಐವಿ ಸೋಂಕಿಗೆ ನಿರೋಧಕತೆ ಹೊಂದಿದ ಜೀನ್ ಬದಲಾವಣೆಗೊಂಡ ಅವಳಿಗಳನ್ನು ಸೃಷ್ಟಿಸಲು CRISPR ಬಳಸಿದ್ದೇನೆಂದು ಘೋಷಿಸಿದ್ದರು. ಅವರ ಸಂಶೋಧನೆಯ ಇನ್ನೊಂದು ವಿವಾದಾತ್ಮಕ ಭಾಗವೆಂದರೆ, ಅವರು ಬಯಸಿದ ನಿರ್ದಿಷ್ಟು ಮ್ಯುಟೇಷನ್ನುಗಳನ್ನು ಮಾಡುವುದು ಸಾಧ್ಯವಾಗಿರಲಿಲ್ಲ; ಬದಲಿಗೆ ಅವರು ಉದ್ದೇಶಿಸಿರದ ಮ್ಯುಟೇಷನ್ನುಗಳು ಆಗಿಬಿಟ್ಟಿದ್ದವು. ಆ ಮ್ಯುಟೇಷನ್ನುಗಳು ಮಕ್ಕಳ ಜೀವಿತಾವಧಿಯಲ್ಲಿ ಏನೇನಕ್ಕೆ ದಾರಿ ಮಾಡಿಕೊಡಬಹುದೆಂಬುದರ ಕುರಿತು ಗೊತ್ತಿರಲಿಲ್ಲ. ಅವರನ್ನು ವ್ಯಾಪಕವಾಗಿ ಖಂಡಿಸಲಾಯಿತು, ಅವರ ಹುದ್ದೆಯಿಂದ ಇಳಿಸಿದ್ದಲ್ಲದೇ 2 ವರ್ಷಗಳ ಜೈಲು ಶಿಕ್ಷೆ ಹಾಗೂ 1 ಮಿಲಿಯನ್ ಯುವಾನ್‍ಗಳ ದಂಡ ವಿಧಿಸಲಾಗಿತ್ತು.

ಹಲವು ವಿಮರ್ಶಕರ ಪ್ರಕಾರ CRISPR ಅನ್ವಯಿಸಿ ಮನುಷ್ಯರ ಖಾಯಿಲೆಗಳನ್ನು ಗುಣಪಡಿಸಬಹುದಾದ ಸಾಧ್ಯತೆಗಳ ಉತ್ಪ್ರೇಕ್ಷೆ ನಡೆದಿದೆ ಮತ್ತು ಅದರಿಂದುಂಟಾಗಬಹುದಾದ ಡಿಎನ್‍ಎ ಹಾನಿಯ ಕುರಿತಾಗಿ ಕಡಿಮೆ ಅಂದಾಜು ಮಾಡಲಾಗಿದೆ. 2018ರಲ್ಲಿ ಸೈಂಟಿಫಿಕ್ ಅಮೆರಿಕನ್ ನಿಯತಕಾಲಿಕದಲ್ಲಿ ಬಂದ ಒಂದು ಲೇಖನವು ಹಲವು ಪ್ರಯೋಗಗಳನ್ನು ಉಲ್ಲೇಖಿಸಿ ಮುಂದಿಟ್ಟ ಸಂಗತಿಯೆಂದರೆ, ಆದ CRISPR ಜೀನ್‍ಗಳು ಮಾಡಿದ ಮ್ಯುಟೇಷನ್ನುಗಳು ಕ್ಯಾನ್ಸರ್‌ಅನ್ನೂ ತರಬಲ್ಲವಾಗಿವೆ. ಇನ್ನೊಂದು ಪ್ರಕಟಣೆಯ ಪ್ರಕಾರ, CRISPR ಜೀನ್ ತೆಗೆದುಹಾಕುವುದನ್ನು ಕರಾರುವಾಕ್ಕಾಗಿ ಮಾಡುತ್ತದಾದರೂ, ಅದರಿಂದ ಒಂದು ಸರಣಿ ಜೀನ್ ಪ್ರಕ್ರಿಯೆ ಆರಂಭವಾಗಿ ಗುರಿಯನ್ನು ದಾಟಿ ಡಿಎನ್‍ಎ ಹಾನಿಯನ್ನು ಅದು ಮಾಡಬಲ್ಲುದು.

2000ದ ಆಸುಪಾಸಿನಲ್ಲಿ ಹಲವು ಜೆನೆಟಿಕ್ ಕಾಯಿಲೆಗಳು ಮತ್ತು ಕ್ಯಾನ್ಸರ್‌ಅನ್ನು ಗುಣಪಡಿಸಲು ಜೀನ್ ಚಿಕಿತ್ಸೆಯು ಮುಂದಿನ ಸಾಧ್ಯತೆಯೆಂದು ಬಹುವಾಗಿ ಹೇಳಲಾಗುತ್ತಿತ್ತು. ಆದರೆ, 2003ರಲ್ಲಿ, ಫ್ರಾನ್ಸ್‌ನಲ್ಲಿ ನಡೆದ ಚಿಕಿತ್ಸಾ ಪ್ರಯೋಗದಲ್ಲಿ ಹುಡುಗನೊಬ್ಬನಿಗೆ ನೀಡಿದ ಜೀನ್ ಚಿಕಿತ್ಸೆಯಿಂದ ರಿಪೇರಿ ಜೀನ್ ತಪ್ಪಾದ ಜಾಗದಲ್ಲಿ ಕೂತು ಕ್ಯಾನ್ಸರ್ ಕಾರಕ ಜೀನ್‍ಅನ್ನು ಉತ್ತೇಜಿಸಿ ರಕ್ತ ಕ್ಯಾನ್ಸ್‌ರ್ಗೆ ಕಾರಣವಾಗಿಬಿಟ್ಟಿತು. ಜೀನ್ ಚಿಕಿತ್ಸೆಯೆಂಬುದು ಈಗ ನಿರುಪಯೋಗ ವಿಜ್ಞಾನವಾಗಿದೆ.

ಹೌದು, ಇದು ಸೀದಾ ವೈಜ್ಞಾನಿಕ ಕಾದಂಬರಿಯೊಂದರ ಸರಕೇ

ಭಾರೀ ಪ್ರಮಾಣದ ವಾಣಿಜ್ಯ ಲಾಭವನ್ನು ತರುವ ಮತ್ತು ‘ದೇವರಿಗೆ ಮಾತ್ರ ಸಾಧ್ಯವಾಗುವ ಬದಲಾವಣೆ’ಗಳಿಗೆ ಕಾರಣವಾಗುವ ಸಾಧ್ಯತೆಗಳೆಲ್ಲಾ ಇದ್ದಾಗ್ಯೂ ಹೊಸ ತಂತ್ರಜ್ಞಾನವು ಹಲವು ನೀತಿ ಸಂಹಿತಾತ್ಮಕ ಪ್ರಶ್ನೆಗಳನ್ನೂ ಎಬ್ಬಿಸುತ್ತದೆ. ಅದೇನೆಂದರೆ ನಾವಿನ್ನೂ ಜೀನ್ ತಂತ್ರಜ್ಞಾನವು ವಿಕಾಸವಾಗುತ್ತಿರುವ ಮತ್ತು ಜೀನ್‍ಗಳು ಅಭಿವ್ಯಕ್ತವಾಗುವ ಹಾಗೂ ಅನುದ್ದೇಶಪೂರ್ವಕ ಮ್ಯುಟೇಷನ್‍ಗಳಿಗೆ ಕಾರಣವಾಗುವ ಸಂಗತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವ ಹಂತದಲ್ಲೇ ಇದ್ದೇವೆ.

ಇವೆಲ್ಲವೂ ವಿವಾದಾಸ್ಪದ ವಿಧಾನವೊಂದಕ್ಕೆ ಪ್ರಶಸ್ತಿಯನ್ನು ಕೊಡುವ ನೊಬೆಲ್ ಪ್ರಶಸ್ತಿ ಸಮಿತಿಯ ಉದ್ದೇಶವನ್ನು ಪ್ರಶ್ನಿಸುವಂತೆ ಮಾಡುತ್ತವೆ. ನೊಬೆಲ್ ಪ್ರಶಸ್ತಿ ಪುರಸ್ಕೃತರಲ್ಲಿ ಬಹುತೇಕರು ವಯಸ್ಸಾದ ಬಿಳಿ ಗಂಡಸರೇ ಆಗಿರುವುದಕ್ಕೆ, ಲಿಂಗ ತಾರತಮ್ಯಕ್ಕೆ ಹೊರತಾದ ಕಾರಣಗಳಿವೆ. ಸಂಶೋಧನೆ/ಆವಿಷ್ಕಾರಗಳು ಸಂಶೋಧನೆಯಿಂದ ದೀರ್ಘಕಾಲಿಕ ಅನುಕೂಲಗಳು ಮತ್ತು ಪರಿಣಾಮಗಳು ಏನಾಗಿರಬಹುದೆಂಬುದರ ಕುರಿತು ಕೆಲವು ವರ್ಷಗಳಲ್ಲದೇ, ದಶಕಗಳ ಕಾಲದ ಪ್ರಯತ್ನವನ್ನು ಪರಿಶೋಧನೆಯನ್ನು ಕೇಳುತ್ತದೆ. ಹಾಗಿದ್ದ ಮೇಲೆ ನೊಬೆಲ್ ಪ್ರಶಸ್ತಿ ಸಮಿತಿಯು ಆ ನಿಯಮವನ್ನೇಕೆ ಮುರಿಯಿತು?

ಕಾಳಜಿಯುಳ್ಳ ನಾಗರಿಕರು ಮತ್ತು ನೀತಿಬದ್ಧ ವಿಜ್ಞಾನಿಗಳಾಗಿ ನಾವು ಎಲ್ಲಾ ಬಗೆಯ ಜನರ ವಿಶಾಲ ಹಿತಾಸಕ್ತಿಗೆ ನೆರವಾಗುವ ವಿಜ್ಞಾನವನ್ನು ಬೆಂಬಲಿಸಬೇಕೇ ಹೊರತು, ಕೆಲವರ ಹಿತವನ್ನು ಮಾತ್ರ ಕಾಯುವ ತಂತ್ರಜ್ಞಾನವನ್ನಲ್ಲ. ಇಲ್ಲದಿದ್ದರೆ ನಾವು ಬಹುಬೇಗ ಈ ಭೂಮಿಯು ಕುಬೇರರ ಸ್ವರ್ಗ ಮಾತ್ರವಾಗಿ ಉಳಿಯುವುದನ್ನು ನೋಡಲಿದ್ದೇವೆ.

ನೊಬೆಲ್ ಪ್ರಶಸ್ತಿಯ ಇದುವರೆಗಿನ ಇತಿಹಾಸದಲ್ಲಿ ಪ್ರಶಸ್ತಿ ಪಡೆದಿರುವ 931 ಜನರಲ್ಲಿ 57 ಮಹಿಳೆಯರಿದ್ದಾರೆ. ಮಹಿಳಾ ಸಾಧಕಿಯರನ್ನು ಉಪೇಕ್ಷಿಸುತ್ತಿರುವುದರ ಕುರಿತ ವಿಮರ್ಶೆಗೆ ನೊಬೆಲ್ ಪ್ರಶಸ್ತಿ ಸಮಿತಿಯು ಪದೇ ಪದೇ ಗುರಿಯಾಗಿದೆ. ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗುತ್ತಿರುವ ರೀತಿ ನೋಡಿದರೆ ಅದರಲ್ಲಿ ವೈವಿಧ್ಯವೂ ಇಲ್ಲ. ಪ್ರಶಸ್ತಿ ಶುರುವಾದ್ದಲ್ಲಿಂದ ಇಲ್ಲಿಯವರೆಗೆ ಕೇವಲ 16 ಕಪ್ಪು ವರ್ಣೀಯರಿದ್ದಾರೆ. ವಿಜ್ಞಾನ ಕ್ಷೇತ್ರದಲ್ಲಂತೂ ಒಬ್ಬ ಕಪ್ಪು ವರ್ಣೀಯರೂ ಇಲ್ಲ. ವಿಪರ್ಯಾಸವೆಂದರೆ ಈ ಸಾರಿ ಇಬ್ಬರು ಮಹಿಳೆಯರಿಗೆ ಒಟ್ಟಿಗೇ ಸಂಶೋಧನೆಯೊಂದಕ್ಕೆ ನೊಬೆಲ್ ಸಿಕ್ಕಿರುವಾಗ, ಅದನ್ನು ಮಹಿಳಾ ಲೋಕಕ್ಕೆ ಸಿಕ್ಕ ಗೆಲುವು ಎಂದು ಸಂಭ್ರಮಿಸಲಾಗದಂತೆ ಈ ಸಂಶೋಧನೆಯ ಸುತ್ತ ವಿವಾದಗಳಿವೆ.

ಡಾ.ಸ್ವಾತಿ ಶುಕ್ಲಾ

ದೆಹಲಿ ವಿವಿಯಲ್ಲಿ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಉ.ಪ್ರದೇಶ ಮೂಲದ ಸ್ವಾತಿ, ಜರ್ಮನಿಯಲ್ಲಿ `ರೋಗನಿರೋಧಕ ಶಾಸ್ತ್ರ’ದಲ್ಲಿ ಪಿಎಚ್‍ಡಿಯನ್ನು ಮುಗಿಸಿದ್ದಾರೆ. ಸ್ವೀಡನ್‍ನಲ್ಲಿ ಪೋಸ್ಟ್ ಡಾಕ್ಟೋರಲ್ ಸಂಶೋಧನೆಯನ್ನೂ ಮುಗಿಸಿ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಪ್ರಸ್ತುತ ಗೌರಿಲಂಕೇಶ್‍ನ್ಯೂಸ್.ಕಾಂ ಇಂಗ್ಲಿಷ್ ಪೋರ್ಟಲ್‍ನ ಸಹಸಂಪಾದಕರಾಗಿದ್ದಾರೆ.


ಇದನ್ನೂ ಓದಿ: ನೂತನ ಹೆಪಟೈಟಿಸ್‌ ‘ಸಿ’ ವೈರಸ್‌ ಬಗೆಗಿನ ಸಂಶೋಧನೆಗೆ 2020ರ ನೊಬೆಲ್‌ ಪ್ರಶಸ್ತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...