“ಕೈ ಹಿಡಿದ ಮೇಲೆ ಶಿವಣ್ಣನಿಗೆ ಕುಂಕುಮ ಕೂಡ ಹೊರೆಯಾಯ್ತು” ಎಂದು ನಟ ಶಿವರಾಜ್ ಕುಮಾರ್ ಮತ್ತು ಅವರ ಪತ್ನಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
‘Arya Pavan Kumar’ ಎಂಬ ಬಳಕೆದಾರ ಫೇಸ್‌ಬುಕ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಫ್ಯಾಕ್ಟ್‌ಚೆಕ್ : ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಟಿವಿ9 ಕನ್ನಡದ ವಾಟರ್ ಮಾರ್ಕ್ ಇರುವುದರಿಂದ, ಟಿವಿ9 ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ನಾವು ಮೂಲ ವಿಡಿಯೋ ಹುಡುಕಿದ್ದೇವೆ. ಈ ವೇಳೆ ಏಪ್ರಿಲ್ 9, 2024ರಂದು “Geetha Shivarajkumar:ಫೋಟೋಗಾಗಿ ವೇದಿಕೆಗೆ ಬಂದ ಮಕ್ಕಳ ಜೊತೆ ಶಿವಣ್ಣ ಏನ್ ಮಾಡಿದ್ರು ನೋಡಿ?” ಎಂಬ ಶೀರ್ಷಿಕೆಯಲ್ಲಿ ಅಪ್ಲೋಡ್ ಮಾಡಲಾದ 2 ನಿಮಿಷ 53 ಸೆಕೆಂಡ್‌ನ ವಿಡಿಯೋದಲ್ಲಿ 0:34 ಸೆಕೆಂಡ್‌ನಿಂದ ವೈರಲ್ ಕ್ಲಿಪ್‌ನಲ್ಲಿರುವ ದೃಶ್ಯವಿದೆ.
ವಿಡಿಯೋದಲ್ಲಿ ಕಾಣುವಂತೆ ಶಿವರಾಜ್ ಕುಮಾರ್ ಅವರು ಉದ್ದೇಶಪೂರ್ವಕವಾಗಿ ಕುಂಕುಮ ಅಳಿಸಿದಂತೆ ಕಾಣುತ್ತಿಲ್ಲ. ಅವರು ಹಣೆ ಮೇಲಿನ ಬೆವರು ಒರೆಸಿದಾಗ ಕುಂಕುಮ ಸಹ ಅರ್ಧ ಅಳಿಸಿದೆ.
ಇನ್ನು ವಿಡಿಯೋದಲ್ಲಿ 42ನೇ ಸೆಕೆಂಡ್‌ನಲ್ಲಿ ಗೀತಾ ಶಿವರಾಜ್ ಕುಮಾರ್ ಎದುರಿಗೆ ಇದ್ದವರ ಜೊತೆ ಸನ್ನೆ ಮಾಡುತ್ತಾ ಕುಂಕುಮ ಸರಿಪಡಿಸಿಕೊಳ್ಳುವುದನ್ನು ನೋಡಬಹುದು. ಅವರ ಹಣೆಯಲ್ಲಿ ಎರಡು ಕಡೆ ಕುಂಕುಮ ಇದ್ದುದರಿಂದ ಎದುರಿಗಿದ್ದವರ ಸೂಚನೆಯ ಮೇರೆಗೆ ಸರಿಪಡಿಸಿಕೊಳ್ಳಲು ಯತ್ನಿಸಿ ಕುಂಕುಮ ಅಳಿಸಿದ್ದಾರೆ. ಆನಂತರ ಸರಿ ಹೋಯಿತಾ? ಎಂಬರ್ಥದಲ್ಲಿ ಎದುರಿಗೆ ಇದ್ದರಿಗೆ ಸನ್ನೆ ಮಾಡುವುದನ್ನು ಸಹ ವಿಡಿಯೋದ 50 ರಿಂದ 59 ಸೆಕೆಂಡ್‌ವರೆಗೂ ನೋಡಬಹುದು.
“ಶಿವಮೊಗ್ಗ: ಮತದಾರರ ನಡುವೆ ಯುಗಾದಿ ಆಚರಿಸಿದ ಕಾಂಗ್ರೆಸ್ ಅಭ್ಯರ್ಥಿ ಗೀತಾ, ಶಿವರಾಜ್ಕುಮಾರ್” ಎಂಬ ಶೀರ್ಷಿಕೆಯಲ್ಲಿ ‘ಈಟಿವಿ ಭಾರತ್ ಕನ್ನಡ’ ಏಪ್ರಿಲ್ 9, 2024ರಂದು ವರದಿಯೊಂದನ್ನು ಪ್ರಕಟಿಸಿದೆ. ಈ ಸುದ್ದಿಯಲ್ಲಿ ‘ನವ ಸಂವತ್ಸರ ಸಂಭ್ರಮದಲ್ಲಿ ಗೀತಕ್ಕ ಶಿವಣ್ಣ ನಮ್ಮೊಂದಿಗೆ’ ಎಂಬ ಯುಗಾದಿ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಮತ್ತು ಗೀತಾ ಅವರು ಇಬ್ಬರೂ ಪೂಜೆ ಮಾಡುವುದು ಸೇರಿದಂತೆ ಹಲವು ಫೋಟೊ ಮತ್ತು ವಿಡಿಯೋಗಳನ್ನು ನಾವು ಕಾಣಬಹುದು. ಅದರಲ್ಲಿ ಅಭಿಮಾನಿಗಳು ಬೆಳ್ಳಿ ಕಡಗ ಹಾಕಿ ಪೂಜೆ ಮಾಡಿದ್ದಾರೆ. ಕುಂಕುಮ ಸಹ ಇಟ್ಟಿದ್ದಾರೆ.

ನಾವು ಮೇಲೆ ಉಲ್ಲೇಖಿಸಿದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ‘ಏಪ್ರಿಲ್ 9, 2024ರಂದು ನ್ಯೂಸ್ ಫಸ್ಟ್ ಕನ್ನಡ “Geetha Shivarajkumar:ಬೆಳ್ಳಿ ಕಡಗ ಹಾಕಿದ ಫ್ಯಾನ್ಗೆ ಧನ್ಯವಾದ ಹೇಳಿದ ಗೀತಕ್ಕ..” ಎಂಬ ಶೀರ್ಷಿಕೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿದೆ. ಈ ವಿಡಿಯೋದಲ್ಲಿ ಗೀತಾ ಶಿವರಾಜ್ ಕುಮಾರ್ ಸಂಪೂರ್ಣವಾಗಿ ಕುಂಕುಮ ಇಟ್ಟಿರುವುದನ್ನು ಕಾಣಬಹುದು.
ನಾವು ನಡೆಸಿದ ಪರಿಶೀಲನೆಯಲ್ಲಿ ಶಿವರಾಜ್ ಕುಮಾರ್ ಮತ್ತು ಅವರ ಪತ್ನಿ ಗೀತಾ ಅವರು ಉದ್ದೇಶಪೂರ್ವಕವಾಗಿ ಹಣೆ ಮೇಲಿನ ಕುಂಕುಮ ಅಳಿಸಿದಂತೆ ಕಾಣುತ್ತಿಲ್ಲ. ಇದಕ್ಕೆ ಪುರಾವೆಯಾಗಿ ನಾವು ವಿಡಿಯೋಗಳನ್ನು ಲಗತ್ತಿಸಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಪಾದನೆ ಮಾಡಿದಂತೆ ಅಲ್ಪ ಸಂಖ್ಯಾತರನ್ನು ಓಲೈಸಲೋ ಅಥವಾ ಕಾಂಗ್ರೆಸ್ ಸೇರಿದ ಕಾರಣಕ್ಕೆ ಕುಂಕುಮ ಅಳಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳು ನಮಗೆ ದೊರೆತಿಲ್ಲ.
ಇದನ್ನೂ ಓದಿ : Fact Check : ದೋಸೆ ಕುರಿತ ರಾಹುಲ್ ಗಾಂಧಿಯ ಭಾಷಣದ ವಿಡಿಯೋ ಎಡಿಟೆಡ್


