ವಿವಾದಿತ ಕೃಷಿ ಮಸೂದೆಗಳನ್ನು ವಾಪಾಸ್ ಪಡೆಯಲು ಆಗ್ರಹಿಸಿ ದೇಶಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ನಡುವೆ ಆಡಳಿತ ಪಕ್ಷ ಬಿಜೆಪಿ ರೈತರಿಗೆ ವಿರೋಧ ಪಕ್ಷಗಳು ಕಾಯಿದೆ ವಿರುದ್ಧ ತಪ್ಪು ಮಾಹಿತಿ ನೀಡುತ್ತಿವೆ ಎಂದು ಆರೋಪಿಸಿ, ರೈತರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದು ಮನೆ ಮನೆಗೆ ತೆರಳಲು ಹೊರಟಿದೆ.
ಈ ನಡುವೆ ಪಶ್ಚಿಮ ಬಂಗಾಳ ಬಿಜೆಪಿ ಮುಖಂಡ ದಿಲೀಪ್ ಘೋಷ್ ಅಕ್ಟೋಬರ್ 6 ರಂದು ಒಂದು ಚಿತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, “ಪಶ್ಚಿಮ ಬಂಗಾಳದ ರೈತರು ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ” ಎಂದು ಪ್ರತಿಪಾದಿಸಿದ್ದಾರೆ.

ವಾಸ್ತವದಲ್ಲಿ ಈ ಚಿತ್ರ ಇತ್ತೀಚಿನದಲ್ಲ ಅಥವಾ ಪಶ್ಚಿಮ ಬಂಗಾಳದ್ದಲ್ಲ. ಇದನ್ನು ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ತೆಗೆದ ಚಿತ್ರವಾಗಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಯುವತಿಯ ಅಪಹರಣದ ವೀಡಿಯೋ ವೈರಲ್; ಇದು ಉತ್ತರಪ್ರದೇಶದ್ದೇ?
ಈ ಚಿತ್ರವು ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್‌ಪುರದ ಪಂತೋರ್ ಗ್ರಾಮದಿಂದ ಬಂದಿದೆ ಎಂದು ಘೋಷ್ ಹೇಳಿದ್ದಾರೆ. “ಕುಮಾರ್ಗಂಜ್ ಅಸೆಂಬ್ಲಿಯ (ದಕ್ಷಿಣ ದಿನಾಜ್‌ಪುರ) ಪಂತೋರ್ ಗ್ರಾಮದಲ್ಲಿ ತೆಗೆದ ಚಿತ್ರ. ಬಂಗಾಳದ ರೈತರು, ಗೌರವಾನ್ವಿತ ಪ್ರಧಾನ ಮಂತ್ರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಈ ಚಿತ್ರವನ್ನು ಹಲವು ಮಂದಿ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಚಿತ್ರ ಹಂಚಿಕೊಂಡಿರುವ ಬಿಜೆಪಿ ಮುಖಂಡ ದಿಲೀಪ್ ಘೋಷ್ ಅವರ ಟ್ವೀಟ್ ಅನ್ನು 355 ಮಂದಿ ರಿಟ್ವೀಟ್ ಮಾಡಿದ್ದಾರೆ.


ಈ ಚಿತ್ರವನ್ನು ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಹುಡುಕಾಟ ಮಾಡಿದಾಗ ಔಟ್‌ಲುಕ್ ಫೋಟೋ ಗ್ಯಾಲರಿಯಲ್ಲಿ ಈ ಚಿತ್ರ ಬಿಹಾರದಲ್ಲಿ ಜುಲೈ 12 ರಂದು ತೆಗೆದ ಚಿತ್ರವಾಗಿದೆ ಎಂಬುದನ್ನು ತೋರಿಸಿದೆ.

“ಕೃಷಿ ಕಾರ್ಮಿಕರು ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಬಿಹಾರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ” “ಬಿಜೆಪಿ ಮೋದಿ” ಎಂದು ಭತ್ತದ ಸಸಿಗಳಲ್ಲಿ ಬರೆದಿದ್ದಾರೆ ಎಂದು ಶೀರ್ಷಿಕೆ ನೀಡಿದೆ.
ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಯ ಫೋಟೋ ಆರ್ಕೈವ್‌ನಲ್ಲಿ ‘ಕೈಮೂರ್’ ಕೀವರ್ಡ್ ಆಗಿ ಹುಡುಕಾಡಿದಾಗ ಅದೇ ಚಿತ್ರವನ್ನು ಜುಲೈ 12 ರಂದು ಪೋಸ್ಟ್ ಮಾಡಿರುವುದು ಕಂಡು ಬಂದಿದೆ.

ಈ ಎಲ್ಲಾ ವಿವರಗಳು ಸ್ಪಷ್ಟವಾಗಿ ಹೇಳುವುದು ಬಿಜೆಪಿ ನಾಯಕ ಬಿಹಾರದ ಹಳೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅದು ಪಶ್ಚಿಮ ಬಂಗಾಳ ರಾಜ್ಯದ ರೈತರದ್ದು, ಅವರು ಮೋದಿಯನ್ನು ಬೆಂಬಲಿಸಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ.


