Homeಅಂಕಣಗಳುಕೃಷಿ ಕಥನಕೃಷಿಕಥನ 03: ರೈತರದು ಆತ್ಮಹತ್ಯೆಯಲ್ಲ, ಹತ್ಯೆ

ಕೃಷಿಕಥನ 03: ರೈತರದು ಆತ್ಮಹತ್ಯೆಯಲ್ಲ, ಹತ್ಯೆ

ಸಾಲಗಳನ್ನು "ರೈತರ ಸಾಲಗಳು" ಎಂದು ಕರೆಯದೆ ಅವು ಮಣ್ಣನ್ನು ಅನ್ನವನ್ನಾಗಿ ಪರಿವರ್ತಿಸಲು ಮಾಡಿದ ವೆಚ್ಚಗಳು ಎಂದು ಪರಿಗಣಿಸಿ ಸರ್ಕಾರವೇ ಅವುಗಳನ್ನು ತೀರಿಸಬೇಕು.

- Advertisement -
- Advertisement -

ರೈತರು ಹತ್ಯೆಗೊಳಗಾಗುತ್ತಿದ್ದಾರೆ. ಆದರೆ ಸರ್ಕಾರಿ ಜನ ಮತ್ತು ಜನಮಾಧ್ಯಮಗಳು ರೈತರನ್ನು ಆತ್ಮಹತ್ಯೆ ಅವಮಾನದ ಶಿಲುಬೆಗೇರಿಸುತ್ತಿದ್ದಾರೆ.

ಎಲ್ಲರೂ ಸುಳ್ಳುಗಳನ್ನು ಪ್ರತಿಪಾದಿಸಲೆಂದೇ, ಮಾಧ್ಯಮಗಳನ್ನು ಬಳಸುತ್ತಿರುವಾಗ ಹಸಿವಿನ ನಿಜದ ನೆಲೆಗಳ ಬೆಂಕಿಮಳೆಯನ್ನು ಹಾದು ಬರೆಯುತ್ತಿರುವ ಪತ್ರಕರ್ತ ಜನಚಿಂತಕ ಪಿ.ಸಾಯಿನಾಥ್ ತಮ್ಮ ರೈತರ ಬವಣೆಗಳ ಬಗೆಗಿನ ಲೇಖನಗಳಲ್ಲಿ ಹೀಗೆ ಹೇಳುತ್ತಾರೆ. “ಬಿತ್ತಿದ್ದೀರಿ ಅದಕ್ಕೆ ಅಳುತ್ತಿದ್ದೀರಿ”. ಇದು ರೈತರನ್ನು ಕುರಿತ ಮಾತು. ಹೌದು ಮಣ್ಣಿಗೆ ಬೀಜ ಬಿತ್ತಿ ಆಕಾಶ ನೋಡುವ, ಹೊಟ್ಟೆಯ ಮೇಲೆ ತಣ್ಣೀರ ಬಟ್ಟೆಗೂ ಗತಿ ಇಲ್ಲದ ರೈತರ ಸ್ಥಿತಿ ಅಳುವುದಷ್ಟಕ್ಕೆ ಸೀಮಿತವಾಗಿಲ್ಲ. ಬಂಡವಾಳವೆಂಬುದೇ ಎಲ್ಲಾ ಆಗಿರುವ ಈ ಕಾಲದಲ್ಲಷ್ಟೆ ಅಲ್ಲ, ಕೃಷಿ ಬದುಕು ಆರಂಭವಾದ ಕಾಲದಿಂದಲೂ ಕೃಷಿಕರು ಹಲವು ಬಗೆಯ ನೋವು, ಭಯ ಅವಮಾನಗಳಲ್ಲಿ ಬದುಕುತ್ತ ಬಂದಿದ್ದಾರೆ. ರಾಜರು, ಸಾಮ್ರಾಟರು, ಸುಲ್ತಾನರು, ಪಾಳೇಗಾರರು, ಬ್ರಿಟಿಷರು, ಶಾಸಕರು, ಮಂತ್ರಿಗಳು, ಅಧಿಕಾರಿಗಳು, ಏಜಂಟರು ಹೀಗೆ ರೈತರ ಅವಮಾನಗಳಿಗೆ ಕಾರಣರಾದವರ ಹೆಸರು ಬದಲಾವಣೆಯಾಗಿದೆ ಅಷ್ಟೆ. ಎಲ್ಲೆಲ್ಲೂ ಈಗ ರೈತರ ಆತ್ಮಹತ್ಯೆಯದೇ ಚರ್ಚೆ ಆದರೆ ಈ ಚರ್ಚೆಯೇ ತಪ್ಪು ನೆಲೆಯಲ್ಲಿ ನಡೆಯುತ್ತಿದೆ. ಏಕೆಂದರೆ ರೈತರು ತಾವೇ ಆತ್ಮಹತ್ಯೆ ಮಡಿಕೊಳ್ಳತ್ತಿಲ್ಲ. ಹತ್ಯೆಗೊಳಗಾಗುತ್ತಿದ್ದಾರೆ.

ಮಹಾಯುದ್ಧ, ಮಹಾವಿಜಯ, ಅಶ್ವಮೇಧ, ರಾಜಸೂಯ, ತುಲಾಭಾರ ಆನೆಯ ಮೇಲೆ ಅಂಬಾರಿ, ದರ್ಬಾರು ಸಂಗೀತ, ಕಾವ್ಯ, ವಾಯುವಿಹಾರ, ತೀರ್ಥಯಾತ್ರೆ, ವಿಶ್ವಪ್ರವಾಸ, ವಿಮಾನಯಾನ, ಸ್ಟಾರ್ ಹೋಟೇಲ್ ಕಾರುಬಾರು, ರೆಸಾರ್ಟ್ ಮುಂತಾದ ಯಾವ ಅತಿರೇಕಗಳನ್ನು ಕನಸಿನಲ್ಲೂ ಕಾಣಲೂ ಇಷ್ಟಪಡದ ರೈತರಿಗೆ ಅಂದಿಗೂ ಯಾಕೆ ಈನಾಡಿ ಕಷ್ಟಗಳು. ಒಂದೊಂದೇ ಕಾಳು ಸೇರಿಸಿ ರಾಜರ ಉಗ್ರಾಣಗಳನ್ನು, ಮಂತ್ರಿಗಳ ಗೋದಾಮುಗಳನ್ನು ಖಾಲಿಯಾಗದಂತೆ ನೋಡಿಕೊಂಡು ತುಂಬಿಸುತ್ತಲೇ ಬಂದ ರೈತರೀಗ ಕಳಪೆ ಬೀಜ, ಮೋಸದ ಗೊಬ್ಬರ, ಬರ, ಪ್ರವಾಹ, ಹೊಸ ಹೊಸ ರೋಗ, ಬೆಲೆ ಕುಸಿತ, ಸಾಲಶೂಲಕ್ಕೆ ಸಿಕ್ಕಿ “ಇನ್ನು ಸಾಧ್ಯವಿಲ್ಲ” ಎನ್ನುವ ಸ್ಥಿತಿ ತಲುಪಿದ್ದಾರೆ.

ಎಷ್ಟು ವಿಚಿತ್ರವೆಂದರೆ, ಸರ್ಕಾರಿ ಇಲಾಖೆಗಳು ರೈತರನ್ನು ಬರಿಗೈ ಮಾಡಿವೆ. ಇದರಲ್ಲಿ ವಿಶ್ವವಿದ್ಯಾಲಯಗಳು, ಖಾಸಗೀ ಕಂಪನಿಗಳು ಮತ್ತು ಸರ್ಕಾರಿ ನೀತಿಗಳು ಬಹು ದೊಡ್ಡ ಪಾತ್ರ ವಹಿಸಿವೆ. ನಿಶ್ಯಸ್ತ್ರಗೊಂಡ ರೈತರ ಬಳಿ ಈಗ ಬೀಜ ಸ್ವಾತಂತ್ರ್ಯವಿಲ್ಲ. ಗೊಬ್ಬರ ಖಾತ್ರಿ ಇಲ್ಲ, ಬೆಳೆ ನಿಗದಿಯ ಸ್ವಾತಂತ್ರ್ಯವೂ ಇಲ್ಲ. ರೈತರಲ್ಲದವರು ರೈತರನ್ನು ನಿರ್ದೇಶಿಸುತ್ತಿದ್ದಾರೆ. ಸಾವಿರಾರು ವರ್ಷಗಳ ರೈತಜ್ಞಾನವನ್ನು ಸಾರಾಸಗಟಾಗಿ ತಿರಸ್ಕರಿಸಿದ ಪರಿಣಾಮ ರೈತರು ಹೆಳವರಾಗಿ, ಕುರುಡರಾಗಿ, ಮೂಢರಾಗಿ ಈ ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ಗುಲಾಮರ ಗುಲಾಮರಾಗಿ ನವೆದು ನೂಲಾಗಿದ್ದಾರೆ.

ಈ ಮಧ್ಯೆ ಹಿಂದೆಂದೂ ಇಲ್ಲದ ಸರ್ಕಾರಿ ಪ್ಯಾಕೆಜುಗಳು ರೈತರನ್ನು ಮುತ್ತುತ್ತಿವೆ. ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ ಮುಂತಾದ ಹತ್ತಾರು ಇಲಾಖೆಗಳು ದುಡ್ಡು ಎಣಿಸುತ್ತಾ ಸಂಭ್ರಮದಿಂದ ರೈತರನ್ನು ವಂಚಿಸುತ್ತಿವೆ. ದೊಡ್ಡ ಜನ ಪ್ರತಿನಿಧಿಗಳು, ಪಂಚಾಯಿತಿ ಅಧ್ಯಕ್ಷರು, ಸದಸ್ಯರೆಲ್ಲಾ ಬಹುತೇಕ ಒಂದು ಪಕ್ಷದ ಗುಂಪಿನ, ಮಠಗಳ ಏಜೆಂಟರಾಗಿ ಹೋಗಿರುವುದರಿಂದ ರೈತರನ್ನು ಕೆಳುವುದಿಲ್ಲ. ಕೇಳಿದರೂ ಇಲಾಖೆಗಳ, ದೇವರ ಪ್ರತಿನಿಧಿಗಳಿಗೆ ಕೇಳುವುದೂ ಇಲ್ಲ.

ಶ್ರಮವಿರೋಧಿ ದಗಾಕೋರ WTO ಮತ್ತು IMFಗಳ ಹಂಬಲದಂತೆ ನಮ್ಮ ಕೃಷಿಕರನ್ನು ಇನ್ನೂ ದುರ್ಬಲಗೊಳಿಸಿ ಅವರ ಸಂಖ್ಯೆಯನ್ನು ಶೇ10 ಅಥವಾ ಅದಕ್ಕಿಂತ ಕೆಳಗೆ ಇಳಿಸುವ ಭರಾಟೆ ನಡೆದಿದೆ.

ಜೀತಗಾರರಾಗಿ ದುಡಿದ ರೈತರೀಗ ಸಾಲಗಾರರಾಗಿ ಜರ್ಜರಿತಗೊಂಡಿದ್ದಾರೆ. ಸಾಂಪ್ರದಾಯಿಕ ಬೆಳೆಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ಬೆಳೆದವರು, ವಾಣಿಜ್ಯ ಬೆಳೆಗಳನ್ನು ವೈಜ್ಞಾನಿಕ ಪದ್ಧತಿಯಲ್ಲಿ ಬೆಳೆದವರು ಎರಡೂ ಬಗೆಯ ರೈತರೂ ಮಗ್ಗ ಮಲಗಿದ್ದಾರೆ. ಸಹಜ, ಸಾವಯವ, ಜೈವಿಕ, ನೈಸರ್ಗಿಕ ಕೃಷಿ ಮಾದರಿಗಳೂ ಈಗ ಕೇವಲ ಶಬ್ಧಗಳಾಗಿ ಕೇಳಿಸುತ್ತಿವೆ. ಆದ್ದರಿಂದ ಇದು ಬೆಳೆಪದ್ಧತಿ, ವಿಧಾನಗಳ ಸಮಸ್ಯೆ ಅಲ್ಲವೆ ಅಲ್ಲ ಎಂಬುದು ಈಗೀಗ ತಿಳಿಯಹತ್ತಿದೆ.

ಕೃಷಿಯು, ಕೃಷಿಯಲ್ಲಿ ನೇರವಾಗಿ ತೊಡಗಿರುವವರನ್ನು ಹೊರತುಪಡಿಸಿ ಎಲ್ಲರ ಲಾಭದ ಮೂಲವಾಗಿರುವುದು ಈ ಕಷ್ಟಪರಂಪರೆಗೆ ಕಾರಣವಗಿದೆ. ಅದಕ್ಕೆ ಪಿ.ಸಾಯಿನಾಥ್ “ಬಿತ್ತಿದ್ದೀರಿ ಅದಕ್ಕೆ ಅಳುತ್ತಿದ್ದೀರಿ” ಎಂದು ಹೇಳುತ್ತಿರುವುದು. ಇದರ ಹಿಂದಿನ ಅಳಲು ಏನೆಂದರೆ, ಅಳುವಿಗೂ, ನೀವು ಆತ್ಮಹತ್ಯೆಗೂ ಕಾರಣವಾಗುವುದಾದರೆ ಬಿತ್ತುವುದೇ ಬೇಡ, ಅಥವಾ ಬಿತ್ತಿರಿ, ಬೆಳೆಯಿರಿ, ತಿನ್ನಿರಿ ಎಂಬುದೇ ಆಗಿದೆ. ಇಲ್ಲದಿದ್ದರೆ ರೈತರು ಕೃಷಿ ಕಾರ್ಮಿಕರೊಂದಿಗೆ ಸೇರಿ ಬಿತ್ತಿ ಬೆಳೆಯುತ್ತಲೇ ಸಾಯುತ್ತಿರುತ್ತಾರೆ. ಇನ್ನೊಂದೆಡೆ ವಿಶ್ವಕಪ್ಪುಗಳು, ಫ್ಯಾಶನ್ ಷೋಗಳು, ಪೀಠಾರೋಹಣಗಳು, ವಜ್ರ ಕಿರೀಟ ಸಮರ್ಪಣೆಗಳು, ಐ.ಎಂ.ಎಫ್. ವಿಶ್ವಬ್ಯಾಂಕುಗಳ ಸಂಭ್ರಮದ ಸಮಿಟ್ಟುಗಳು,ಅಣುಸ್ಫೋಟಗಳು, ಹೊಸ ಹೊಸ ಕಾರು, ರಾಕೆಟ್, ಹೊಸ ಹೊಸ ಯುದ್ಧವಿಮಾನಗಳ ಲಾಂಚಿಂಗ್ ಷೋಗಳು, ಚಂದ್ರಯಾನ ಮಂಗಳಯಾನಗಳು ಅವ್ಯಾಹತವಾಗಿ ಕಿಂಚಿತ್ತು ಅಳುಕಿಲ್ಲದೆ ನೆರವೇರುತ್ತಿರುತ್ತವೆ. ರೈತರ ಆತ್ಮಹತ್ಯೆಗಳು ಸರಮಾಲೆ ವೇಗಗೊಳ್ಳತ್ತದೆ. ಇದನ್ನು ಯಾರು ತಾನೇ ಒಪ್ಪುತ್ತಾರೆ, ಎಲ್ಲಿಯವರೆಗೆ ಸಹಿಸುತ್ತಾರೆ.

ಕೃಷಿ, ಕೃಷಿಕರಿಗೂ ಬದುಕಿನಾಸರೆಯ ಮೂಲವಾಗಬೇಕು (ಬೇಸಾಯ ಮಾಡಿ ಭೀಯಕ್ಕೆ ಭತ್ತವಿಲ್ಲದಿದ್ದಡೆ ಆ ಬೇಸಾಯದ ಘೋರ ಎನಗೆತಕ್ಕಯ್ಯ ಅಲ್ಲಮ). ಬೇಸಾಯ ಮಾಡಿ ಅದಕ್ಕೆ ಕೃಷಿ ಮೂಲದಿಂದ ಚೆಲ್ಲಾಪಿಲ್ಲಿಯಾಗಿ ಹಂಚಿಹೋಗುತ್ತಿರುವ ಸಂಪತ್ತು ಸಮನಾಗಿ ಹಂಚಲ್ಪಡಬೇಕು. ಹೀಗಾಗಬೇಕಾದರೆ ಹಂಚುವವರು ರೈತರೇ ಆಗಬೇಕು. ಇದಕ್ಕೆ ಅರ್ಥಶಾಸ್ತ್ರದ ವ್ಯಾಖ್ಯಾನವೇ ಬದಲಾಗಬೇಕು. ಏಕೆಂದರೇ ಇದು ಬರಡು ಮಾತು ಮತ್ತು ತಿನ್ನಲು ಬಾರದ ಬಂಡವಾಳಗಳೇ ಈ ಅರ್ಥಶಾಸ್ತ್ರದ ಮೂಲಮಂತ್ರವಗಿದೆ. ಹೀಗಾಗಿ “ಶ್ರಮ” ಮೂಲದ ಒಂದು ಶಾಸ್ತ್ರ ಇಂದು ಬೇಕಾಗಿದೆ. ಬೆವರುಶಾಸ್ತ್ರವೆಂದೇ ಕರೆಯಬಹುದಾದ ಈ ಶಾಸ್ತ್ರದ ತತ್ವಗಳನ್ನು ಇಂದು ರೂಪಿಸಬೇಕಾಗಿದೆ.

ಆದರೀಗ ಶ್ರಮಮೂಲ ಸಂಸ್ಕೃತಿಯನ್ನಷ್ಟೇ ಎತ್ತಿ ಹಿಡಿಯುವ ಹೊಸ ಪ್ರಭುತ್ವವೊಂದರ ಕನಸು ಕಾಣುತ್ತಾ ಕಾಯುವುದಕ್ಕೆ ಸಾಧ್ಯವಿಲ್ಲ. ಈಗಿರುವ ಪ್ರಭುತ್ವದೊಳಗೆ ಒಂದು ಹೊಸ ಕಾನೂನು ಜಾರಿಗೊಳ್ಳಬೇಕಾಗಿದೆ. ಅದರ ಒತ್ತಾಯಕ್ಕೆ ರೈತರು ಸೆಟೆದು ನಿಲ್ಲಬೆಕಾಗಿದೆ. ಎಲ್ಲಾ ಅನ್ನತಿನ್ನುವ ಅಂತಂಕರಣ ಜೀವಿಗಳ ಬೆಂಬಲ ಇದಕ್ಕೆ ಸಿಗಬೇಕಾಗಿದೆ.

ಬೆವರುಶಾಸ್ತ್ರ ಆಧಾರಿತ ಕಾನೂನು ತಕ್ಷಣ ಏಕೆ ರೂಪುಗೊಳ್ಳಬೇಕು

ಸರ್ಕಾರಿ ದಾಖಲೆಗಳ ಪ್ರಕಾರ ಈಗ್ಗೆ ಆರೇಳು ವರ್ಷಗಳಿಂದ 3 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಜವಾದ ಲೆಕ್ಕ ದುಪ್ಪಟ್ಟು ಇರಬಹುದು. ಕೃಷಿಯನ್ನು ಮಾಡುತ್ತಿರುವ ವ್ಯಾಪಾರಿಗಳು, ಏಜೆಂಟರು, ಅಧಿಕಾರಿಗಳು, ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ನೌಕರರು, ರಾಜಕಾರಣಿಗಳು ಮುಂತಾದ ಅನೈತಿಕ ಕೃಷಿಕರನ್ನು ಹೊರತುಪಡಿಸಿ ಮಿಕ್ಕ ಅಸಲಿ ಕೃಷಿಕರೆಲ್ಲರೂ  ಆ ಮೂರು ಲಕ್ಷ ಹತರಾದ ರೈತರತ್ತ ನೋಡುತ್ತಿದ್ದಾರೆ. ಯಾಕೆಂದರೇ ಇವರೆಲ್ಲ ತಮ್ಮ ಎಂದೂ ಮುಗಿಯದ ಕಷ್ಟಗಳು ಮತ್ತು ಅವಮಾನಗಳಿಂದ ತಪ್ಪಿಸಿಕೊಂಡರೆ ಮುಂದಿನ ಜನ್ಮದಲ್ಲಿ ಏನಾದರೂ ಮಾಡಿ ಕೃಷಿ ಹೊರತಾದ ಯಾವುದಾದರೂ ಉದ್ಯೋಗ ಹಿಡಿದುಬದುಕುವ ಕನಸು ಹೊತ್ತವರಾಗಿದ್ದಾರೆ. ಮುಂದಿನ ಜನ್ಮದ ಕಲ್ಪನೆಯೇ ಆತ್ಮ ವಂಚನೆಯದು ಮತ್ತು ಹಸೀ ಸುಳ್ಳಿನದು ಎಂಬ ವಿಚಾರ ಸದರಿ ರೈತರಿಗೂ ಗೊತ್ತು. ಏನು ಮಾಡುವುದು, ಹತಾಶೆಯ ಸಂದರ್ಭಗಳು ಅವರನ್ನು ಹೀಗೆ ಯೋಚಿಸುವಂತೆ ಮಾಡುತ್ತಿದೆ.

ಕೃಷಿ ಬದುಕು ಆರಂಭವಾದಾಗಲಿಂದಲೂ ಕೃಷಿಕರು ಬಿತ್ತಿ ಬೆಳೆದು, ಅನ್ನದ ಬೀಜ ಹುಳಿತು ಹಾಳಾಗದಂತೆ, ಸುಟ್ಟು ಕರಕಲಾಗದಂತೆ, ತಿಂದು ಮುಗಿಯದಂತೆ ಕಾಪಾಡಿಕೊಂಡು ತಾವು ಸತ್ತು ಸುಣ್ಣವಾದರೂ ಜಗತ್ತಿನ ಸಂಸ್ಕೃತಿ, ನಾಗರೀಕತೆಗಳ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಈಗ ಮಾತ್ರ ಅವರು ಸುಸ್ತಾಗಿದ್ದಾರೆ. ಹತಾಶರಾಗಿದ್ದಾರೆ. ಸುಸ್ತು ಮತ್ತು ಹತಾಶೆಗಳ ನಿವಾರಣೆಗೇ ತಕ್ಷಣವೆ ಬೇಕು ಬೆವರುಶಾಸ್ತ್ರ ಆಧಾರಿತ ಕಾನೂನು…

ಬೆವರುಶಾಸ್ತ್ರ ಆಧಾರಿತ ಕಾನೂನಿಲ್ಲಿರಬೇಕಾದ ಅಂಶಗಳು

01. ಶ್ರಮ ಎಂದರೆ ಬೆವರುಮಯ ದೈಹಿಕ ಶ್ರಮವೆಂದೇ ಸದರಿ ಕಾನೂನಿನಲ್ಲಿ ಸ್ಥಾಪಿತವಾಗಬೇಕು.

02. ಸಾಲಗಳನ್ನು “ರೈತರ ಸಾಲಗಳು” ಎಂದು ಕರೆಯದೆ ಅವು ಮಣ್ಣನ್ನು ಅನ್ನವನ್ನಾಗಿ ಪರಿವರ್ತಿಸಲು ಮಾಡಿದ ವೆಚ್ಚಗಳು ಎಂದು ಪರಿಗಣಿಸಿ ಸರ್ಕಾರವೇ ಅವುಗಳನ್ನು ತೀರಿಸಬೇಕು.

03. “ಕೃಷಿ” ಪ್ರಧಾನ ಆದ್ಯತೆಯಾಗಿಯೂ ಕೈಗಾರಿಕೆ ಅಧೀನ ಆದ್ಯತೆಯಾಗಿಯು ಪರಿಗಣಿತವಾಗಬೇಕು. “ಕೃಷಿ ಇದ್ದರೆ ಕೈಗಾರಿಕೆ” ಆದ್ದರಿಂದ ಭೂಮಿ, ನೀರು, ಕೃಷಿಕರು, ಕೃಷಿಕಾರ್ಮಿಕರಿಗೆ ಪೂರ್ಣ ರಕ್ಷಣೆ, ಪ್ರೇರಣೆ ಪೋಷಣೆಗಳು ಸಿಗಬೇಕು.

04. ಕೃಷಿ ಉತ್ಪನ್ನಗಳ ಬೆಲೆ ನಿರ್ಧಾರ ಮತ್ತು ಅವುಗಳ ಹಂಚಿಕೆಯನ್ನು ಸರ್ಕಾರದ ಸಹಯೋಗದಲ್ಲಿ ರೈತರೇ ಮಾಡಬೇಕು.

05. ಪ್ರತಿ ಹೋಬಳಿಯಲ್ಲಿಯೂ ಗೋದಾಮುಗಳು, ಸಂಗ್ರಹಾಗಾರಗಳು ಇರಬೇಕು. ಒಂದು ಕಾಳು ಹುಳಿತು ಹಾಳಾಗದಂತೆ ಕಣ್ಗಾವಲಿರಿಸಬೇಕು. ಅನುಭವಿ ರೈತ ಮಹಿಳೆಯರು ಅಲ್ಲಿ ಅಧಿಕಾರಿಗಳಾಗಿರಬೇಕು.

06. ಕೃಷಿ ಕಾರ್ಮಿಕರಿಗೆ ರೈತರು, ಅವರ ಉತ್ತಮ ಬದುಕಿಗೆ ಅಗತ್ಯವಾದಷ್ಟು ವೇತನ ನೀಡಬೆಕು. ಸರ್ಕಾರ ಕೃಷಿಕಾರ್ಮಿಕರಿಗೆ ಉದ್ಯೋಗ ಖಾತರಿ ನೀಡುವುದರ ಜೊತೆಗೆ ಇವರ ಕುಟುಂಬಗಳ ಶಿಕ್ಷಣ, ಆರೋಗ್ಯದ ಪೂರ್ಣ ಹೊಣೆ ಹೊರಬೇಕು. ರೈತರು ಮಾಡುವ ಪಶುಪಾಲನೆಗೆ, ಸರ್ಕಾರಿ ನೌಕರರು ಪಡೆಯುವಂತೆಯೇ ವಿಶೇಷ ಭತ್ಯೆ ಪಡೆಯಬೇಕು.

07. ಎಲ್ಲರಿಗೂ ಕೆಲಸದ ಮಿತಿ ಇದೆ. ಆದರೆ ರೈತರಿಗೆ ಮಾತ್ರ ಇಲ್ಲ ಇವರು ಸರಾಸರಿ ದಿನಕ್ಕೆ 14 ಗಂಟೆಗೂ ಹೆಚ್ಚು ದುಡಿಯುತ್ತಾರೆ. ತಾವು ಬೆಳೆಯುವ ಕಾಳಿನ ಉತ್ಪನ್ನದ ಹಕ್ಕು ಒಡೆತನಗಳಿರುವುದರಿಂದ ಮೊದಲ 8 ಗಂಟೆಗೆ ವೇತನವಿಲ್ಲ. ಆದರೆ ನಂತರದ 6 ಗಂಟೆಗೆ ಕೃಷಿ ಕಾರ್ಮಿಕರಿಗೆ ಸಲ್ಲುವಷ್ಟು ವೇತನ ಇವರಿಗೆ ಸಲ್ಲಬೇಕು

08. ಸರ್ಕಾರ ಎಂದರೆ ಸರ್ಕಾರಿ ನೌಕರರು ಎಂಬ ಅಪಾಯಕಾರಿ ಅರ್ಥ ಬದಲಾಗಿ ಸರ್ಕಾರ ಎಂದರೆ ಜನ ಎನ್ನುವಂತಾಗಬೇಕು. ಸರ್ಕಾರಿ ನೌಕರರು ಒಳ್ಳೆಯವರೇ, ನಮ್ಮಂತವರೇ ಎಂಬ ಭಾವನೆ ಬರಬೇಕು. ಅದಕ್ಕೆ ಈಗಿರುವ ಅವರ ಸಂಖ್ಯೆಯನ್ನು ಕಾಲು ಭಾಗಕ್ಕೆ ಇಳಿಸಬೇಕು. ಇವರನ್ನು ಖಾಯಂ ಆಗಿ ನೇಮಿಸಿಕೊಳ್ಳಲೇಬಾರದು. ಅರ್ಹತೆ, ಜನಸೇವೆ, ಪ್ರೀತಿ ನಡತೆಗನುಣವಾಗಿ ಇವರ ಸೇವೆಯನ್ನು ಗುತ್ತಿಗೆ ಆಧಾರದ ಮೇಲೆ ಬಳಸಿಕೊಳ್ಳಬೇಕು. ಅವರ ವೇತನವೂ ಕೃಷಿಕಾರ್ಮಿಕರು, ರೈತರಿಗೆ ಲಭಿಸುವ ಮಟ್ಟಕ್ಕೆ ಇರಬೇಕು. ಹೆಚ್ಚು ಇಲ್ಲ ಕಡಿಮೆಯೂ ಇಲ್ಲ. ಒಮ್ಮೆ ಲಂಚಪಡೆದು ಸಿಕ್ಕಿದರೆ ಅವರನ್ನು ಕೆಲಸದಿಂದ ವಜಾ ಮಾಡಬೇಕು. ಅಷ್ಟೇ ಅಲ್ಲ ಅವರನ್ನು ಬಯಲು ಜೈಲುಗಳಿಗೆ ಹಾಕಿ ದುಡುಸಬೇಕು.

09. ಕೃಷಿ ಅರಂಭವಾದ ದಿನಗಳಿಂದಲೂ ಮೂಗಿಗೆ ಕವಡೆ ಕಟ್ಟಿಕೊಂಡು ಮಳೆ, ಗಾಳಿ, ಬಿಸಿಲು, ಚಳಿಗಳ, ರಾತ್ರಿ ಹಗಲುಗಳ, ಬಾಲ್ಯಮುಪ್ಪುಗಳ ಹೆಣ್ಣುಗಂಡುಗಳ ವ್ಯತ್ಯಾಸವರಿಯದಂತೆ ದುಡಿದರೂ ತಮ್ಮ ಬದುಕು ಹೀಗಾಯಿತಲ್ಲಾ ಎಂದು ಇನ್ನು ಮೇಲೆ ಮರುಗುವಂತಿಲ್ಲ. ಕೃಷಿ ಕೆಲಸ ಬಿಟ್ಟು ನಿರಶನ ಕೈಗೊಳ್ಳುವಂತೆಯೂ ಇಲ್ಲ ಏಕೆಂದರೆ ಭಾರತವೊಂದರಲ್ಲೇ 24 ಕೋಟಿ ಜನ ಹಸಿವಿನಿಂದ ನರಳುತ್ತಿದ್ದಾರೆ. ಶೇಕಡಾ 85ರಷ್ಟು ಹೆಂಗಸರು ಅನೀಮಿಯದಿಂದ ಸೊರಗುತ್ತಿದ್ದಾರೆ. ರೈತರು ಭರವಸೆ ಇಡಬೇಕು. ಮಣ್ಣಿನ ಕಾಲ (ರಾಜರು), ಚಿನ್ನದ ಕಾಲ (ವ್ಯಾಪಾರೀಗಳು) ಹಣದ (ರಾಜಕಾರಣಿ ಮತ್ತು ಅಧಿಕಾರಿಗಳು)  ಕಾಲಗಳು ಮುಗಿದಿವೆ. ಈಗಿನದು ಅನ್ನದ ಕಾಲ (ರೈತರು) ಎಂಬುದನ್ನು ಸಾಬೀತು ಮಾಡಬೆಕು.

10. ಭಾನುವಾರ ನೌಕರಶಾಹಿಗೆ ಸೋಮವಾರ ರೈತರಿಗೆ ರಜೆ ಮಿಕ್ಕಂತೆ ಯಾವ ರಜೆಗಳು ಇಲ್ಲ ರಜೆ ಅನಿರ್ವಾಯವಾದರೆ ಆ ದಿನಕ್ಕೆ ಕೂಲಿ ಇಲ್ಲ.

11. ರೈತರಿಗೆ ಇರುವ ಅನ್ನದಾತ ದೇಶದ ಬೆನ್ನೆಲುಬು, ಜೈಕಿಸಾನ್, ನೇಗಿಲಯೋಗಿ ಮುಂತಾದ ರೈತರ ಹೊಟ್ಟೆಯ ಮೇಲೆ ಹೇರಾಲಾಗಿರುವ ಬಿರುದುಭಾರಗಳನ್ನು ಕಿತ್ತೊಗೆಯಬೇಕು. “ಬೇಸಾಯಮಾಡಿ ಬೆಸಾಯಕ್ಕೆ ಭತ್ತ ಇಲ್ಲದಿದ್ದೊಡೆ ಆ ಬೇಸಾಯದ ಘೋರ ಎನಗೇತಕ್ಕಯ್ಯ” ಎಂಬ ಅಲ್ಲಮನ ಮಾತು ಧ್ಯೇಯ ವಾಕ್ಯವಾಗಬೇಕು.

12. ದಲಿತರನ್ನು ಜಾತಿನಿಂದನೆ ಮಾಡಿದವರಿಗೆ ಆಗುವ ಶಕ್ತಿಯೇ ರೈತರನ್ನು ನಿಂದಿಸಿದವರಿಗೂ (ಸೋಮಾರಿಗಳು, ಮೈಗಳ್ಳರು, ಹಳ್ಳಿಗುಗ್ಗು, ಹಳ್ಳಿಗಮಾರ, ದಡ್ಡರು, ಬಡವರು ಇತ್ಯಾದಿ) ಆಗಬೇಕು. ಏಕೆಂದರೆ ಎಲ್ಲಾ ಕಡೆ ಇಂಥವರು ಇರುತ್ತಾರಾದ್ದರಿಂದ ಹಳ್ಳಿಯ ರೈತರನ್ನಷ್ಟೇ ನಿತ್ಯ ನಿಂದಿಸುವುದು ತಪ್ಪಾಗುತ್ತದೆ.

13. ಭ್ರಷ್ಟಚಾರ, ಲಂಚಕೋರತನ, ಕಾಳಸಂತೆ ಮುಂತಾದ ನೀತಿಗೆಟ್ಟ ರೀತಿಯಲ್ಲಿ ಸಂಪತ್ತಿನ ಕ್ರೋಢಿಕರಣ ಅತಿರೇಕಕ್ಕೆ ಹೋಗಿರುವುದು, ಅಡುವ ಮಕ್ಕಳಿಗೂ ಅರಿವಾಗಿರುವುದರಿಂದ ಈಡೀ ದೇಶದಲ್ಲಿ ಇಂತವರ ಮೇಲೆ ವಾರದ ಯಾವೂದಾರೂ ಒಂದು ದಿನ ಲೋಕಾಯುಕ್ತ ದಾಳಿ ನೆಡೆಸುವುದು. ಇದಕ್ಕೆ ಸೈನ್ಯದ ಸಹಾಯ ಪಡೆಯುವುದಕ್ಕೂ ಸದರಿ ಶ್ರಮ ಶಾಸ್ತ್ರಾಧಾರಿತ ಕಾನೂನಿನಲ್ಲಿ ಅವಕಾಶವಿರತಕ್ಕದ್ದು.

14. ಪತ್ರಿಕೆಗಳು ವಿದ್ಯುನ್ಮಾನ ಮಾಧ್ಯಮಗಳು, ರೇಡಿಯೋ ಮುಂತಾದ ಎಲ್ಲಾ ಮಾಧ್ಯಮಗಳು ಕನಿಷ್ಟ 2 ಗಂಟೆ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಕಾರ್ಯ ಕ್ರಮಗಳನ್ನು ಪ್ರಸಾರಮಾಡಬೇಕು ಯಾವುದೇ ಸಾವುಗಳ ಸುದ್ದಿಗಳನ್ನು ಸರಳಿಕರಸಿ, ಉತ್ಪ್ರೇಕ್ಷೀಸಿ, ತಮಾಷೀಕರಣಗೊಳಿಸಿ ಪ್ರಸಾರಮಾಡಕೂಡದು ಇದು ಸಿನೆಮಾಗಳಿಗೂ ಅನ್ವಯಿಸಬೇಕು.

15. ಎಲ್ಲಾ ಬಗೆಯ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಿಲಬಸ್ ಕೃಷಿ ಬದುಕಿಗೆ ಪೂರಕವಾಗಿ ಬದಲಾಗಬೇಕು. ಶೇಕಡಾ 50ರಷ್ಟು ಪಾಠಗಳು ಕೃಷಿಕ್ಷೇತ್ರಗಳಲ್ಲಿ ನಡೆಯಬೇಕು, ಕೃಷಿಕರು ವಿಶೇಷ ತರಗತಿಗಳನ್ನು ತಗೆದುಕೊಳ್ಳಬೇಕು. ಇತರ ಎಲ್ಲಾ ನೌಕರರು ಇಂಜಿನಿಯರ್ ಡಾಕ್ಟರ್‌ಗಳು, ವ್ಯಾಪಾರಿಗಳು, ಜಡ್ಜ್‌ಗಳು, ಲಾಯರ್‌ಗಳು, ಕ್ರಿಕೆಟ್ ಆಟಗಾರರು, ಪತ್ರಕರ್ತರು, ಸಿನಿಮಾ ನಟರು, ಸಂಗೀತಗಾರರು, ಕಲಾವಿದರು, ಸಾಹಿತಿಗಳು ಎಲ್ಲರೂ ಎಂದರೆ ಎಲ್ಲರೂ ತಮ್ಮ ಕಾರ್ಯಕ್ಷೇತ್ರಕ್ಕೆ ಹೊಂದಿಕೊಂಡ ಹೊಲ, ತೋಟ ಗದ್ದೆಗಳಿಗೆ ತಮ್ಮ ಬುತ್ತಿಯೊಂದಿಗೆ ಹೋಗಿ ವಾರಕ್ಕೆ ಒಂದು ದಿನ ರೈತರ ನಿರ್ದೇಶನದಲ್ಲಿ ದುಡಿದು ಬರಬೇಕು. ಇದು ಅವರ ಆರೋಗ್ಯವೃದ್ದಿಯ ವಿಚಾರವಲ್ಲ. ದೇಶದ ಆರೋಗ್ಯವೃದ್ಧಿಯ ವಿಚಾರ. ಅತಿಯಾದ ಬೊಜ್ಜು. ಡಯಾಬಿಟೀಸ್, ರಕ್ತದ ಒತ್ತಡ ಮುಂತಾದ ಖಾಯಿಲೆಗಳು ಯಾವ ದೇಶಕ್ಕೂ ಒಳ್ಳೆಯದಲ್ಲ. ಇದಕ್ಕೆ ಅವರು ಕೂಲಿ ಕೇಳುವಂತಿಲ್ಲ.

16. ಸಾಯವಯ, ನೈಸರ್ಗಿಕ, ಸಹಜ, ಜೀವಚೈತನ್ಯ ಮುಂತಾದ ಯಾವ ಕೃಷಿ ಪದ್ಧತಿಗಳಿಗೂ ಯಾವ ವಿಶೇಷ ಪ್ಯಾಕೇಜುಗಳು ಬೇಕಿಲ್ಲ. ಈ ಪ್ಯಾಕೇಜುಗಳ ಆಮಿಶಗಳಿಂದ ಸದರಿ ಪದ್ಧತಿಗಳನ್ನು ಜನಪ್ರಿಯಗೊಳಿಸಬೇಕಾದ್ದಿಲ್ಲ. ರೈತಾಪಿ ಜನರ ವಿವೇಕ ವಿಚಾರಗಳನ್ನು ಚುರುಕುಗೊಳಿಸಿದರಷ್ಟೇ ಸಾಕು. ಅವರೇ ಯಾವುದು ನಿಜವಾದ ಅನ್ನ, ಯಾವುದು ವಿಷ ಎಂದು ತೀರ್ಮಾನಿಸುತ್ತಾರೆ

17. ಕೃಷಿ ಭೂಮಿಯು ವಂಶಪಾರ್ಯಂಪರ್ಯವಾಗಿ ಮುಂದುವರಿಯಬೇಕಾದರೆ ಕೃಷಿಯಲ್ಲಿ ತೊಡಗುವುದು ಕಡ್ಡಾಯ, “ಒಬ್ಬರಿಗೆ ಒಂದು ವೃತ್ತಿ” ತತ್ವಕ್ಕನುಗುಣವಾಗಿ ವೃತ್ತಿ ಬದಲಾದರೆ ಭೂಮಿಯ ಬದಲಾಗುತ್ತದೆ. “ದೊಡ್ಡ ಆಸ್ತಿ- ದೊಡ್ಡ ಸಾಲ ಸಂಕಷ್ಟ” ಎಂಬುದಕ್ಕೆ ಅವಕಾಶವೇ ಇಲ್ಲದಂತೆ ಹತ್ತು ಎಕೆರೆಗಿಂತಲೂ ಹೆಚ್ಚಾಗಿ ಯಾರಿಗೂ ಆಸ್ತಿ ಇರಕೂಡದ. ಆಗ ಭೂರಹಿತ ಕೃಷಿ ಕಾರ್ಮಿಕರು, ದಲಿತರು ಆದಿವಾಸಿ ಮತ್ತು ಬುಡಕಟ್ಟು ಜನರೂ ಭೂಮಿಯ ಒಡೆಯರಾಗುತ್ತಾರೆ.

18. ಬೃಹತ್ ಯಂತ್ರಗಳ ಉತ್ಪಾದನೆ ಮತ್ತು ಬಳಕೆ ಕನಿಷ್ಟ ಮಟ್ಟಕ್ಕೆ ಇಳಿಯಬೇಕು. ಎಲ್ಲರಿಗೂ ಎಲ್ಲ ಕಾಲಕ್ಕೂ ಉದ್ಯೋಗ ಸೃಷ್ಟಿಸುತ್ತಲೇ ಇರುವ ಕೃಷಿ ಉದ್ಯೋಗ ಉಳಿಯಬೇಕಾದರೆ ಇದು ಅನಿವಾರ್ಯ. ಕೃಷಿಯನ್ನು ಅವಲಂಬಿಸಿರುವವರ ಸಂಖ್ಯೆಯನ್ನು ಶೇಕಡ 10ಕ್ಕೆ ಇಳಿಸುವ ಖಾಸಗೀಕರಣ ಪ್ರವರ್ತಕರ ಹುನ್ನಾರ, ಬಹುಜನರಿಗೆ ಮಣ್ಣು ತಿನ್ನಿಸುವ ಪ್ರಕ್ರಿಯೆಯ ಭಾಗವಲ್ಲದೇ ಮತ್ತೇನೂ ಅಲ್ಲ.

19. ನದಿ ಮತ್ತು ಅಣೆಕಟ್ಟುಗಳ ಪೂರ್ಣನೀರು ಕೃಷಿಗೆ ಬಳಕೆಯಾಗುವುದು ಅನಿವಾರ್ಯ. ಮಳೆ ನೀರ ಕೊಯ್ಲು ಕೆರೆಗಳ ಪುನರ್ ನಿರ್ಮಾಣ, ನೀರಿನ ಮಿತವ್ಯಯ, ನೀರಿನ ಮರುಬಳಕೆ ಮುಂತಾದ ಹತ್ತಾರು ಕ್ರಮಗಳ ಮೂಲಕ ನಗರ ಮತ್ತು ಪಟ್ಟಣಗಳು ನೀರಿನ ಸ್ವಾವಲಂಬನೆ ಸಾಧಿಸುವುದು ಕಡ್ಡಾಯ. ಕೃಷಿಯಲ್ಲಿಯೂ ನೀರಿನ ಬಳಕೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಬೇಕು. ಸರಿಯಾದ ಬೆಳೆ ಯೋಜನೆ, ಪರ್ಯಾಯ ನೀರಾವರಿ ಪದ್ಧತಿ, ಮಡಗಾಸ್ಕರ್ ವಿಧಾನದಲ್ಲಿ ಭತ್ತರಾಗಿ, ಜೋಳ, ಗೋಧಿ ಕೃಷಿ ಕೈಗೊಳ್ಳುವುದು, ತೋಟಗಾರಿಕೆ ಮೂಲಕ, ವಿಸ್ತರಣೆ ಮುಂತಾದ ವಿಧಾನಗಳ ಮೂಲಕ ಲಭ್ಯವಿರುವ ನೀರನ್ನೇ ಬಳಸಿ ಈಗಿನ ನೀರಾವರಿ ಭೂಮಿಯನ್ನು ನಾಲ್ಕು ಪಟ್ಟು ಹೆಚ್ಚಿಸುವುದು. ತನ್ಮೂಲಕ ಹಸಿ ಮರುಭೂಮಿಗಳ ನಿರ್ಮಾಣವನ್ನು ತಡೆಗಟ್ಟುವುದು. ಆಗ ಸಹಜವಾಗಿಯೇ ಕೃಷಿ ಉತ್ಪನ್ನಗಳ ಪ್ರಮಾಣ ಹೆಚ್ಚುತ್ತದೆ.

20. ರೈತರು ಮತ್ತು ಕೃಷಿಕಾರ್ಮಿಕರು ಎಷ್ಟೇ ಅನುಭವಿಗಳೂ, ಬುದ್ಧಿವಂತರೂ, ಲೋಕಜ್ಞಾನಿಗಳು ಆಗಿದ್ದರೂ ದಿಢೀರನ್ನೇ ಡಿ.ಸಿ., ತಹಶೀಲ್ದಾರ್. ಸಬ್ ರಿಜಿಸ್ಟ್ರಾರ್, ಪೋಲೀಸ್ ಇನ್ಸ್‍ಪೆಕ್ಟರ್ ಮುಂತಾದವರ ಕಛೇರಿಗಳಿಗೆ ನುಗ್ಗಿ ಅಧಿಕಾರ ನಡೆಸಲು ಹೇಗೆ ಅವಕಾಶವಿಲ್ಲವೋ ಹಾಗೇ ಡಿ.ಸಿ., ತಹಶೀಲ್ದಾರ್, ಸಬ್ ರಿಜಿಸ್ಟ್ರಾರ್, ಪೊಲೀಸ್ ಇನ್ಸ್‍ಪೆಕ್ಟರ್ ಸೇರಿದಂತೆ ವ್ಯಾಪಾರಿಗಳು, ಎಲ್ಲಾ ನೌಕರರಿಗೆ, ದಲ್ಲಾಳಿ, ವ್ಯಾಪಾರಿಗಳಿಗೂ ದಿಢೀರನೇ ಕೃಷಿಭೂಮಿಗೆ ನುಗ್ಗಿ ಯದ್ವಾ ತದ್ವಾ ಕೃಷಿ ಮಾಡಲು ಅವಕಾಶ ಇರಬಾರದು. ಕೃಷಿಗೆ ಇಳಿಯಲೇ ಬೇಕೆಂಬ ಉಮೇದು ಇದ್ದರೆ ತಮ್ಮ ಸದರಿ ಕೆಲಸಗಳನ್ನು ಬಿಟ್ಟು ಕೈಕಾಲು ಮುಖ ಮನಸ್ಸುಗಳನ್ನು ತೊಳೆದುಕೊಂಡು ಶ್ರದ್ದಾಭಕ್ತಿಯಿಂದ ಬರಬೇಕು. ಒಬ್ಬರಿಗೆ ಒಂದೇ ಉದ್ಯೋಗದ ನೀತಿ ಕಟ್ಟುನಿಟ್ಟಾಗಿ ಜಾರಿಯಾಗಬೇಕು.

21. ಶಾಸನಸಭೆ ಸದಸ್ಯರು ಜಿಲ್ಲೆಗೊಬ್ಬರು ಸಾಕು, ಜಿಲ್ಲಾಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯತಿಗಳಲ್ಲಿ ಮುಲುಗುಟ್ಟುತ್ತಿರುವ ಸದಸ್ಯ ಸಂಖ್ಯೆಯೂ ಅರ್ಧಕ್ಕಿಳಿಯಬೇಕು. ಇವೆರೆಲ್ಲಾ ಸ್ವಂತ ಖರ್ಚಿನಲ್ಲಿ ರಾಜಕಾರಣ ಮಾಡಬೇಕು. ಚುನಾವಣೆ ಹತ್ತು ವರ್ಷಕ್ಕೊಮ್ಮೆ ಆಗಬೇಕು. ಚುನಾವಣಾ ಸಂದರ್ಭದಲ್ಲಿ 6 ದಿನ ಭಾರತ ಬಂದ್ ಆಗುತ್ತದೆ. ಅಗತ್ಯ ಸರಕು ಸಾಗಣೆ ವಾಹನಗಳ ಹೊರತಾಗಿ ಎಲ್ಲಾ ಸಂಚಾರ ಬಂದ್. ಚುನಾವಣಾ ಪ್ರಚಾರ ಕೇವಲ ಮಾಧ್ಯಮಗಳ ಮೂಲಕ ಮಾತ್ರ. ಜನರು ಆಗ ಮನೆಯ ಒಳಗೆ ಕಲೆ, ಸಾಹಿತ್ಯ, ಮನರಂಜನಾ ಚಟುವಟಿಕೆ, ವಿಶೇಷ ಊಟ ಆಟಗಳಲ್ಲಿ ನಿರತರಾಗಬಹುದು. ಅದು “ಬಿಡುವಿನ ಹಬ್ಬ”ವನ್ನು ಆಚರಿಸುವಂತಾಗಬೇಕು. ಇದಕ್ಕೆ ಆರು ದಿನಗಳಿಗೆ ಮೊದಲೇ ಎಲ್ಲ ತಯಾರಿಯನ್ನೂ ಮಾಡಿಕೊಳ್ಳವುದು ಅನಿವ್ಯಾರ. ಚುನಾವಣಾ ಭ್ರಷ್ಠಾಚಾರವನ್ನು ಕೊನೆಗಾಣಿಸಲು ಪ್ರಜಾಫ್ರಭುತ್ವವನ್ನು ಬಲಪಡಿಸಲು ಇರುವ ಏಕೈಕ ಮಾರ್ಗವಿದು. ಸಿನಿಮಾ ಕಲಾವಿದರು, ಕ್ರಿಕೆಟಿಗರು, ಸರ್ಕಾರಿ ಅಧಿಕಾರಿಗಳು, ಮತ್ತಿತರರು, ತಮ್ಮ ಕಸುಬಿನಿಂದ ನಿವೃತ್ತಿ ಹೊಂದಿದ ಹತ್ತು ವರ್ಷಗಳ ನಂತರ ಚುನಾವಣಾ ರಾಜಕೀಯಕ್ಕಿಳಿಯಬಹುದೇ ಹೊರತು ಅದಕ್ಕೂ ಮುಂಚೆ ಅಲ್ಲ. ಏಕೆಂದರೇ ತಮ್ಮ ಕ್ಷೇತ್ರದಲ್ಲಿ ಪಡೆದ ಜನಪ್ರಿಯತೆಯನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳುವುದು ಪ್ರಜಾಪ್ರಭುತ್ವದ ಅಣಕಕ್ಕೆ ಕಾರಣವಾಗುತ್ತದೆ. ಸದರೀ ಕಸುಬುಗಳ ಜನ ಹಣ ಮತ್ತು ಅಧಿಕಾರದ ಹತ್ತಿರ ಸುಳಿಯದೇ ಗಾಂಧಿಪ್ರಣೇತ ಸಮಾಜಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಯಾವ ನಿರ್ಬಂಧಗಳು ಇಲ್ಲ. ಎಷ್ಟು ಬೇಕಾದರೂ ದುಡಿದು ಮೋಕ್ಷ ಕಾಣಬಹುದು.

22. ಲಕ್ಷಾಂತರ ಜನರನ್ನು ಅವರ ಕೆಲಸ ಕೆಡಸಿ ಕರೆತಂದು ಒಂದೆಡೆ ಗುಡ್ಡೆ ಹಾಕಿಕೊಂಡು ಸಮಾವೇಶ ಮಾಡುವ ಹಕ್ಕು ಇನ್ನುಮೇಲೆ ಯಾವ ರಾಜಕೀಯ ಧಾರ್ಮಿಕ, ಸಮಾಜಿಕ ಮುಖಂಡರಿಗೂ ಇರುವುದಿಲ್ಲ. ಇದು ಕ್ರಿಮಿನಲ್ ಅಪರಾಧವಾಗುತ್ತದೆ. ಏನಿದ್ದರೂ ಚಿಕ್ಕ ಚಿಕ್ಕ ಗುಂಪುಗಳಲ್ಲಿ ಅವರೊಂದಿಗೆ ಮಾತಾಡಬಹುದು. ಆ ಸಂಖ್ಯೆ ಸಾವಿರಕ್ಕೆ ಮೀರಬಾರದು. ಭಾನುವಾರ, ಸೊಮವಾರಗಳಂದು ಮಾತ್ರ ಸದರಿ ಸಭೆಗಳು ನಡೆಯುವಂತಾಗಬೇಕು.

23. ಮದುವೆ, ಮುಂಜಿ, ತಿಥಿ, ನಾಮಕರಣ, ಆರಂಭೋತ್ಸವಗಳು, ಮಹೋತ್ಸವಗಳು, ಪೀಠಾರೋಹಣಗಳು, ಜಯಂತಿಗಳು ಮುಂತಾದ ಸಾವಿರಾರು ಸಂಭ್ರಮಗಳು ತಮ್ಮ ಅಧಿಕಾರದ, ಸಂಪತ್ತಿನ ಪ್ರದರ್ಶನವಾಗಕೂಡದು ಇವು ಏನಿದ್ದರೂ ನಾಲ್ಕು ಗೋಡೆಯ ಮಧ್ಯದಲ್ಲಿ ಸಂತೋಷದಿಂದ ನೆರವೇರಬೇಕು. ಬಟಾಬಯಲಿನಲ್ಲಿ ಯಾರಿಗೂ ಅನಗತ್ಯ ಕಿರಿಕಿರಿ ಉಂಟು ಮಾಡಬಾರದು. ದುಂದುಗಾರಿಕೆಯ ಅಟ್ಟಹಾಸ ಪ್ರರ್ದಶನಕ್ಕೆ ಯಾರಿಗೂ ಅವಕಾಶವಿರುವುದಿಲ್ಲ. ಈ ಸಮಾರಂಭಗಳಲ್ಲಿ ಒಂದು ಅಗುಳು ಅನ್ನವೂ ಸದ್ವಿನಿಯೋಗವಾಗಬೇಕು. ಏಕೆಂದರೆ ಇದು ಶ್ರಮಶಾಸ್ತ್ರದ ಆದಿಮ ನಿಯಮ.

24. ಪ್ರಕೃತಿದತ್ತ ಮನರಂಜನಾ ಪ್ರವೃತ್ತಿಗಳಾದ ಪದ ಹಾಡುವುದು, ನೃತ್ಯ ಮಾಡುವುದು, ಚಿತ್ರ ಬರೆಯುವುದನ್ನು ಎಲ್ಲರಿಗೂ ಕಡ್ಡಾಯಗೊಳೊಸಬೇಕು. ಒಬ್ಬರಿಗೆ ಒಂದೇ ಉದ್ಯೋಗ, ಒಂದೇ ಮನೆಯ ಅವಕಾಶವಾದ್ದರಿಂದ ಹೆಚ್ಚಿನ ಸಾಂಸ್ಕೃತಿಕ ಶ್ರೀಮಂತಿಕೆಗಾಗಿ ಸಾಹಿತ್ಯ, ಸಂಗೀತ, ನಾಟಕ, ಆಟ, ಮುಂತಾದವನ್ನು ಆಶ್ರಯಿಸಬಹುದು. ಸಾಮಾಜಿಕ ಶೈಕ್ಷಣಿಕ ಚಟುವಟಿಕೆಗಳಲ್ಲಿಯೂ ತೊಡಗಬಹುದು.

25. ಗಾಂಧಿದೇಶದಲ್ಲಿ ಗಾಂಧಿಮಾತಿಗೆ ಬೆಲೆ ಇಲ್ಲದಂತಾಗಬಾರದು. ಅವರು ಹೇಳುತ್ತಾರೆ. “ಭಾರತದಂತ ಕೃಷಿ ಪ್ರಧಾನ ದೇಶದಲ್ಲಿ (ಎಲ್ಲ ದೇಶಗಳು ಕೃಷಿ ಪ್ರಧಾನವಾದರೆ ಯುದ್ಧಗಳಿಗೆ, ಇತರ ದೇಶಗಳ ಶೋಷಣೆಗೆ, ಭೂಮಿಯ ಬಿಸಿ ಏರಿಕೆಗೆ ಅವಕಾಶವೇ ಇರುವುದಿಲ್ಲ) ಮನುಷ್ಯರ ಕಕ್ಕಸ್ಸಿನ ಬಳಕೆ ಸರಿಯಾಗಿ ಆಗಬೇಕು. ಅದು ಅತ್ಯುತ್ತಮ ಗೊಬ್ಬರ. ದುರದೃಷ್ಠವೆಂದರೆ ಅದರ ಸದ್ವಿನಿಯೋಗದ ಕಡೆ ಯಾರೂ ಗಮನಹರಿಸುತ್ತಿಲ್ಲ”. ಗಾಂಧಿಜಿಯವರ ಈ ಮಾತನ್ನು ತತ್‍ಕ್ಷಣವೇ ಎಲ್ಲರೂ ಮನನ ಮಾಡಿಕೊಳ್ಳಬೇಕು. ಕಕ್ಕಸಿಗೆ ಬೆರೆ ಹೆಸರು ಕೊಡಬೆಕು. ಕೆಲಸಕ್ಕೆ ಬಾರದ ಚಿನ್ನವನ್ನು ಕಕ್ಕಸ್ಸು ಎಂದೂ, ಅನ್ನದ ಉತ್ವಾದನೆಯಲ್ಲಿ ಮಣ್ಣಿಗೆ ಶಕ್ತಿ ತುಂಬುವ ಕಕ್ಕಸ್ಸನ್ನು ಚಿನ್ನವೆಂದೂ ಮರುನಾಮಕರಣಮಾಡಿ ಆರೋಗ್ಯಕರವಾಗಿ, ಶುಚಿತ್ವದ ಅಂಶಗಳನ್ನು ಪರಿಗಣಿಸಿ ಬಳುಸುವ ಸರಳ ವಿಧಾನಗಳನ್ನು ವಿಜ್ಞಾನಿಗಳು ಕಂಡುಹಿಡಿಯಬೇಕು. ಇಲ್ಲದಿದ್ದರೆ ಏನು ಮಾಡಿದರೂ ಆಹಾರದ ಕೊರೆತೆಯನ್ನು ನಿಗಿಸಲಾಗುವುದಿಲ್ಲ. ರಾಸಾಯನಿಕ ಗೊಬ್ಬರಕ್ಕೆ ನೇತು ಬೀಳುವುದು ಸಾಧ್ಯವಿಲ್ಲ. ಆಪ್ರಯೋಗವೂ ಮುಗಿದು ಹೋಗಿದೆ.

26. ಹೆಚ್ಚುವರಿ ಭೂಮಿಯ ಮರುಹಂಚಿಕೆಯ ಸಂದರ್ಭದಲ್ಲಿ ಭೂಮಿಯ ಒಡೆತನವಿಲ್ಲದ ದಲಿತರು, ಬುಡಕಟ್ಟು ಮತ್ತು ಹಿಂದುಳಿದ ವರ್ಗಗಳ ಕೃಷಿ ಕಾರ್ಮಿಕರಿಗೆ ಫಲವತ್ತಾದ ನೀರಾವರಿ ಭೂಮಿಯನ್ನು ಹಂಚಿಕೊಡಬೇಕು. ಅಂತಿಮವಾಗಿ ಭೂಮಿ ಇಲ್ಲದವರು ಯಾರು ಇಲ್ಲದಂತಾಗಬೇಕು. ಸಹಕಾರಿ ತತ್ವದ ಮೇಲೆ ಕೃಷಿ ಕೆಲಸಗಳು ನಡೆಯುವಂತಾಗಬೇಕು. ಒಡೆಯರು, ಕೂಲಿಕಾರ್ಮಿಕರು ಎಂಬ ಭಿನ್ನತೆ ಇಲ್ಲದಂತಾದಾಗಲೇ ಶ್ರಮತತ್ವದ ನಿಜವಾದ ಯಶಸ್ಸು.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-4: ಸಹಜ ಕೃಷಿ ಅಲ್ಲ, ಉಳುಮೆ ಇಲ್ಲದ ತೋಟ ನಮ್ಮದು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...