Homeಚಳವಳಿರೈತ ಹೋರಾಟ: ಸಿಂಘು ಗಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರೈತರ ಮೃತದೇಹ ಪತ್ತೆ

ರೈತ ಹೋರಾಟ: ಸಿಂಘು ಗಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರೈತರ ಮೃತದೇಹ ಪತ್ತೆ

- Advertisement -

ವಿವಾದಿತ ಕೃಷಿ ಕಾಯ್ದೆಗಳ ವಿರುದ್ದ ದೆಹಲಿಯ ಗಡಿಗಳಲ್ಲಿ ರೈತರು ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಬುಧವಾರ ಬೆಳಗ್ಗೆ ದೆಹಲಿ ಸಮೀಪದ ಸಿಂಘು ಗಡಿಯ ಬಳಿ 45 ವರ್ಷದ ರೈತರೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಪ್ರಾಥಮಿಕ ವರದಿಗಳ ಪ್ರಕಾರ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಸಿಆರ್‌ಪಿಸಿಯ ಸೆಕ್ಷನ್ 174 ರ ಅಡಿಯಲ್ಲಿ ವಿಚಾರಣೆ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮೃತ ರೈತನನ್ನು ಪಂಜಾಬ್‌ನ ಫತೇಘರ್ ಸಾಹಿಬ್‌ನ ಅಮ್ರೋಹ್ ಜಿಲ್ಲೆಯ ರೂರ್ಕಿ ಗ್ರಾಮದ ನಿವಾಸಿ ಗುರುಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಅವರು ಭಾರತೀಯ ಕಿಸಾನ್ ಯೂನಿಯನ್ (BKU) ಏಕ್ತಾ ಸಿಧುಪುರ್ ಸಂಘಟನೆಯ ಜೊತೆಗೆ ತೊಡಗಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಲಖಿಂಪುರ್‌ ಖೇರಿ ಹತ್ಯಾಕಾಂಡ: ಆಶಿಶ್ ಮಿಶ್ರಾ, ಅಂಕಿತ್ ದಾಸ್‌ ಗನ್‌ಗಳಿಂದ ಗುಂಡು ಹಾರಿಸಲಾಗಿದೆ- ಪ್ರಯೋಗಾಲಯದ ವರದಿ

ಸೋನಿಪತ್‌ನ ಕಾನೂನು ಮತ್ತು ಸುವ್ಯವಸ್ಥೆಯ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ವೀರೇಂದ್ರ ಸಿಂಗ್, “ಪ್ರಾಥಮಿಕ ಮಾಹಿತಿಯ ಪ್ರಕಾರ ಇದು ಆತ್ಮಹತ್ಯೆ ಎಂದು ತೋರುತ್ತದೆ. ತನಿಖೆಯನ್ನು ಪ್ರಾರಂಭಿಸಲಾಗಿದೆ” ಎಂದಿದ್ದಾರೆ. ಕುಂಡ್ಲಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

“ಸೋಮವಾರ ತಮ್ಮ ಗ್ರಾಮಕ್ಕೆ ಭೇಟಿ ನೀಡಿದ ನಂತರ ಮೃತ ರೈತ ಗುರುಪ್ರೀತ್ ಸಿಂಗ್ ಸಿಂಘು ಗಡಿ ಪ್ರದೇಶಕ್ಕೆ ಮರಳಿದ್ದರು. ಕಳೆದ ಎರಡು ದಿನಗಳಿಂದ ರೈತರೊಂದಿಗೆ ನಡೆಸಿದ ಸಂವಾದದಲ್ಲಿ, ಕೃಷಿ ಕಾನೂನುಗಳ ರದ್ದತಿಗೆ ಸಂಬಂಧಿಸಿದಂತೆ ಅವರು ತೀವ್ರ ಅಸಮಾಧಾನಗೊಂಡಿದ್ದರು. ರೈತರು ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರವು ರೈತರ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಎಂದು  ಪ್ರಸ್ತಾಪಿಸಿದ್ದರು” ಎಂದು ಬಿಕೆಯು ಸಿಧುಪುರ್‌ನ ಜಿಲ್ಲಾ ಸಂಚಾಲಕ ಗುರ್ಜಿಂದರ್ ಸಿಂಗ್ ಹೇಳಿದ್ದಾರೆ.

ಬಿಕೆಯು ಏಕ್ತಾ ಸಿಧುಪುರ್‌ನ ಪಂಜಾಬ್ ರಾಜ್ಯ ಅಧ್ಯಕ್ಷರಾದ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಪ್ರತಿಭಟನೆ ಪ್ರಾರಂಭವಾದಾಗಿನಿಂದ ಮೃತ ರೈತರು ತಮ್ಮ ಒಕ್ಕೂಟದೊಂದಿಗೆ ಸಂಬಂಧ ಹೊಂದಿದ್ದರು ಎಂದು ಹೇಳಿದ್ದಾರೆ. “ಅವರು ಸಂಘಟನೆಯ ಸಭೆಗಳಲ್ಲಿ ಸ್ವಯಂಸೇವಕರಾಗಿ ಭಾಗವಹಿಸುತ್ತಿದ್ದರು. ಗ್ರಾಮದಲ್ಲಿ ಪ್ರತಿಭಟನೆಗಳ ಭಾಗವಾಗಿದ್ದರು. ಕಳೆದ ವರ್ಷದಿಂದ ಸಿಂಘು ಗಡಿಯಲ್ಲಿ ಬಿಡಾರ ಹೂಡಿದ್ದರು. ಅವರು ಸಣ್ಣ ಪ್ರಮಾಣದ ಭೂಮಿಯನ್ನು ಹೊಂದಿದ್ದು, ಜೀವನೋಪಾಯಕ್ಕಾಗಿ ಕೋವಿಡ್ ಬರುವ ಮುನ್ನ ಶಾಲಾ ವಾಹನ ಓಡಿಸುತ್ತಿದ್ದರು. ಸರ್ಕಾರ ಕೂಡಲೇ ಕರಾಳ ಕಾನೂನನ್ನು ಹಿಂಪಡೆಯಬೇಕು” ಎಂದು ಆಗ್ರಹಿಸಿದ್ದಾರೆ.

ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಸಾವಿರಾರು ರೈತರು ಕಳೆದ ವರ್ಷ ನವೆಂಬರ್ 26 ರಿಂದ ಸಿಂಘು ಮತ್ತು ಟಿಕ್ರಿ ಸೇರಿದಂತೆ ದೆಹಲಿಯ ಹಲವು ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮೂರು ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಮತ್ತು ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.


ಇದನ್ನೂ ಓದಿ: ಮತ್ತೆ ರೈತ ಮಹಾಪಂಚಾಯತ್‌ಗಳ ಆರಂಭ: ಮುಂಬೈ, ಲಕ್ನೋಗಳಲ್ಲಿ ಅಬ್ಬರಿಸಲಿರುವ ರೈತರು

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯೋಗಿ ವಿರುದ್ಧ ಗೋರಕ್‌ಪುರ ಕ್ಷೇತ್ರದಿಂದ ಭೀಮ್‌ ಆರ್ಮಿಯ ಚಂದ್ರಶೇಖರ್‌ ಆಜಾದ್‌ ಸ್ಪರ್ಧೆ

0
ಉತ್ತರ ಪ್ರದೇಶದ ಗೋರಖ್‌ಪುರದಿಂದ ಕಣಕ್ಕಿಳಿದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಭೀಮ್ ಆರ್ಮಿಯ ಚಂದ್ರಶೇಖರ್ ಆಜಾದ್ ರಾವಣ್‌ ಕಣಕ್ಕಿಳಿಯಲಿದ್ದಾರೆ. ಚಂದ್ರಶೇಖರ್‌ ಆಜಾದ್‌ ಸ್ಪರ್ಧೆಯಿಂದಾಗಿ ಗೋರಕ್‌ಪುರ ವಿಧಾನಸಭಾ ಕ್ಷೇತ್ರ ಉತ್ತರ ಪ್ರದೇಶದ...
Wordpress Social Share Plugin powered by Ultimatelysocial