Homeಮುಖಪುಟಟೀ ಮಾರುವವನಿಗೆ ಬಡವರ ನೋವಿನ ಅರಿವಿರುತ್ತೆ ಎಂಬ ಭ್ರಮೆಯಲ್ಲಿ ಮತ ನೀಡಿದ್ದೆವು!

ಟೀ ಮಾರುವವನಿಗೆ ಬಡವರ ನೋವಿನ ಅರಿವಿರುತ್ತೆ ಎಂಬ ಭ್ರಮೆಯಲ್ಲಿ ಮತ ನೀಡಿದ್ದೆವು!

ಅಂದು ಪ್ರಧಾನಿ ಮೋದಿಯವರು ಪಾಕಿಸ್ತಾನಕ್ಕೆ ಹರಿದುಹೋಗುತ್ತಿರುವ ನೀರನ್ನು ರಾಜಸ್ತಾನಕ್ಕೆ ತರುವ ಬಗ್ಗೆ ಮಾತನಾಡಿದ್ದರು. ಆಗ ಮತ್ತೆ ನನ್ನ ಹೊಲ ಹಸಿರಿನಿಂದ ಕಂಗೊಳಿಸುವ ಕನಸು ಕಂಡಿದ್ದೆ. ಅದು ಮತ್ತೆ ನಿರಾಸೆಯಾಯಿತು...

- Advertisement -

“ಕಾಂಗ್ರೆಸ್ ಪಕ್ಷದ ನಾಯಕರು ಶ್ರೀಮಂತರ ಮನೆಯಲ್ಲಿ ಬೆಳೆದವರು. ಅವರಿಗೆ ಬಡವರು ಹೇಗಿರುತ್ತಾರೆ ಎಂದು ತಿಳಿದಿರುವುದಿಲ್ಲ. ಪ್ರಧಾನಿ ಮೋದಿ ಚುನಾವಣಾ ಪ್ರಚಾರಗಳಲ್ಲಿ ನಾನು ರೈಲು ನಿಲ್ದಾಣದಲ್ಲಿ ಟೀ ಮಾರುತ್ತಿದೆ ಎಂದು ಹೇಳಿದಾಗ, ಅವರು ಮಾರಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಮನಸ್ಸು ಕಾಂಗ್ರೆಸ್‌ನಿಂದ ಮೋದಿ ಕಡೆಗೆ ವಾಲಿತ್ತು. ಬಡತನದಲ್ಲಿ ಬಂದವನಿಗೆ ಬಡವರ ಕಷ್ಟ ತಿಳಿದಿರುತ್ತದೆ. ನಮಗಾಗಿ ಕೆಲಸ ಮಾಡುತ್ತಾರೆ ಎಂದು ಮತ ನೀಡಿದ್ದೆ. ಆದರೆ, ಇಂದು ಅವರೇ ನಮ್ಮ ಜೀವನಕ್ಕೆ ಕೊಳ್ಳಿ ಇಡುತ್ತಿದ್ದಾರೆ”  ಹೀಗೆ ನೋವಿನಲ್ಲಿ ಮನದ ಮಾತುಗಳನ್ನು ಹೊರಹಾಕಿದವರು ರಾಜಸ್ತಾನದ ರೈತ ರೇಖಾರಾಮ್ ಗೋಟಿಯಾ.

61 ವರ್ಷದ , ರಾಜಸ್ತಾನದ ನಾಗೋರ್ ಜಿಲ್ಲೆಯವರು. 12ನೇ ತರಗತಿವರೆಗೆ (ದ್ವಿತೀಯ ಪಿಯುಸಿ) ಶಿಕ್ಷಣ ಪಡೆದಿರುವ ಇವರು ಸರ್ಕಾರಿ ಉದ್ಯೋಗದ ಬದಲು ಆಯ್ಕೆ ಮಾಡಿಕೊಂಡಿದ್ದು ಕೃಷಿ.

“ ನಾನು ಶಿಕ್ಷಣ ಮುಗಿಸಿದಾಗ ಸರ್ಕಾರಿ ಉದ್ಯೋಗದ ಅವಕಾಶ ಹೆಚ್ಚಾಗಿತ್ತು. ಆದರೆ, ಸರ್ಕಾರಿ ಉದ್ಯೋಗಕ್ಕಿಂತ ಕೃಷಿಯಲ್ಲಿ ಅಧಿಕ ಲಾಭವಿತ್ತು. ಹಾಗಾಗಿ ಇರುವ ಎರಡು ಎಕರೆ ಜಮೀನಿನಲ್ಲೇ ಉತ್ತಮ ಕೃಷಿಯನ್ನು ಮಾಡುವ ಪಣತೊಟ್ಟು ಸರ್ಕಾರಿ ಉದ್ಯೋಗ ನಿರಾಕರಿಸಿದೆ. ಅಂದು ಸರಿ ಅನಿಸಿದ ನಿರ್ಧಾರ ಈಗ ನನ್ನ ಮಕ್ಕಳನ್ನು ಕಾರ್ಮಿಕರನ್ನಾಗಿಸಿದೆ” ಎಂದು ಅಳಲು ತೋಡಿಕೊಳ್ಳುತ್ತಾರೆ.

ಇದನ್ನೂ ಓದಿ: ಗೆದ್ದೇ ಮನೆಗೆ ತೆರಳುತ್ತೇವೆ, ಇಲ್ಲವೆಂದರೆ ತ್ರಿವರ್ಣ ಧ್ವಜದಲ್ಲಿ ನಮ್ಮ ಮೃತದೇಹ ಹೋಗಲಿವೆ!

ಡಿಸೆಂಬರ್ 13 ರಿಂದ ದೆಹಲಿ- ರಾಜಸ್ತಾನದ ಹೆದ್ದಾರಿ ಶಹಜಾನ್‌ಪುರ ಗಡಿಯಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ರೈತ ರೇಖಾರಾಮ್ ಗೋಟಿಯಾ, ಸುಮಾರು 2 ತಿಂಗಳುಗಳಾದರೂ ಒಂದು ದಿನವೂ ಮನೆಗೆ ಹೋಗಿ ಬಂದಿಲ್ಲ. ಬದಲಿಗೆ ತಮ್ಮ ಹೆಂಡತಿ, ಮೂವರು ಮಕ್ಕಳು, 5 ಮೊಮ್ಮಕ್ಕಳನ್ನು ಇಲ್ಲಿಗೆ ಕರೆಸಿಕೊಂಡು ಹೋರಾಟದಲ್ಲಿ ಪಾಲುದಾರರಾಗುವಂತೆ ಮಾಡಿದ್ದಾರೆ.

ಇರುವ 2 ಎಕರೆ ಜಮೀನಿನಲ್ಲಿ ಬಾಜ್ರಾ (ಜೋಳದ ರೀತಿಯ ಧಾನ್ಯ), ಹೆಸರುಕಾಳು, ಪಶು ಆಹಾರವನ್ನು ಬೆಳೆಯುತ್ತಾರೆ. ಮೂವರು ಮಕ್ಕಳು ಗ್ರಾಮದಲ್ಲಿ, ಪಕ್ಕದ ನಗರಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಇವರು ಮಾತ್ರ ಕೃಷಿ ಭೂಮಿಯನ್ನೇ ನಂಬಿಕೊಂಡಿದ್ದೇನೆ ಎನ್ನುತ್ತಾರೆ.

“ಪಂಜಾಬ್, ಹರಿಯಾಣದ ರೈತರಿಗೆ ಉತ್ತಮ ಎಂಎಸ್‌ಪಿ(MSP) ಸಿಗುತ್ತಿದೆ. ಅವರ ಬೆಳೆಗಳಿಗೆ ಕಾಲುವೆಗಳ ಮೂಲಕ ನೀರು ಸಿಗುತ್ತಿದೆ. ಆದರೆ ರಾಜಸ್ತಾನದಲ್ಲಿ ಎಷ್ಟು ಆಳಕ್ಕೆ ಬೋರ್‌ವೇಲ್ ಹಾಕಿದರೂ ನೀರು ಬರುತ್ತಿಲ್ಲ. ಬರುವ ನೀರು ನಮ್ಮ ಪಶುಗಳಿಗೆ ಸಾಕಾಗುತ್ತಿಲ್ಲ. ಹರಿಯಾಣದ ಗಡಿಯಲ್ಲಿ ಇಷ್ಟು ದಿನಗಳಿಂದ ಕುಳಿತಿರುವ ನನಗೆ ಇಲ್ಲಿನ ಹಸಿರು ಕಂಡು ನೋವಾಗುತ್ತಿದೆ. ನಾನು ಮೊದ ಮೊದಲು ಇದೆ ರೀತಿಯಲ್ಲಿ ಬೆಳೆ ಬೆಳೆದಿದ್ದೆ. ಆದರೆ ಈಗ ಅದ್ಯಾವುದು ಸಾಧ್ಯವಾಗುತ್ತಿಲ್ಲ” ಎಂದು ಕಂಬನಿ ಹರಿಸುತ್ತಾರೆ.

ಇದನ್ನೂ ಓದಿ:ಗೆಲ್ಲುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ: ಸಿಂಘು ಗಡಿಯಲ್ಲಿ ಗುರ್ತೇಜ್ ಸಿಂಗ್ ಗುಡುಗು

“ಅಂದು ಪ್ರಧಾನಿ ಮೋದಿಯವರು ಪಾಕಿಸ್ತಾನಕ್ಕೆ ಹರಿದುಹೋಗುತ್ತಿರುವ ನೀರನ್ನು ರಾಜಸ್ತಾನಕ್ಕೆ ತರುವ ಬಗ್ಗೆ ಮಾತನಾಡಿದ್ದರು. ಆಗ ಮತ್ತೆ ನನ್ನ ಹೊಲ ಹಸಿರಿನಿಂದ ಕಂಗೊಳಿಸುವ ಕನಸು ಕಂಡಿದ್ದೆ. ಅದು ಮತ್ತೆ ನಿರಾಸೆಯಾಯಿತು. ಇಲ್ಲಿನ ರೈತರು (ಪಂಜಾಬ್, ಹರಿಯಾಣ) ವರ್ಷಕ್ಕೆ ಮೂರು ಬೆಳೆ ಬೆಳೆಯುತ್ತಾರೆ. ಆದರೆ ನಮ್ಮ ರಾಜಸ್ತಾನದ ರೈತರು 2 ಬೆಳೆ ಬೆಳೆಯಲು ಹರಸಾಹಸ ಪಡುತ್ತಿದ್ದೇವೆ.”

“ಇನ್ನೊಂದು ವಿಷಯ ಗೊತ್ತಾ, ಮೋದಿಯವರ ಮಾತನ್ನು ಅದೆಷ್ಟು ನಿಷ್ಠೆಯಿಂದ ಪಾಲಿಸಿದ್ದೆ ಎಂದರೆ, 15 ಲಕ್ಷ ಹಾಕುವುದಾಗಿ ಅವರು ಹೇಳಿದಾಗ, ಅವರ ಮಾತು ನಂಬಿ ಹೊಸ ಅಕೌಂಟ್ ಮಾಡಿಸಿ, ಅದರಲ್ಲಿ ಯಾರಿಂದಲೂ ಒಂದು ರೂಪಾಯಿ ಹಾಕದಂತೆ ಎಚ್ಚರ ವಹಿಸಿದ್ದೆ. ಅದರಲ್ಲಿ ಮೋದಿಯವರೇ ಹಣ ಹಾಕಬೇಕು ಅದನ್ನು ಎಲ್ಲರಿಗೂ ಹೇಳಬೇಕು ಎಂದುಕೊಂಡಿದ್ದೆ. ಅದು ಕೂಡ ಸುಳ್ಳಾಯಿತು”.

“ಈ ಕೃಷಿ ಕಾನೂನುಗಳ ಮೂಲಕ ಇರುವ ಎಲ್ಲಾ ಆದಾಯವನ್ನು, ಭೂಮಿಯನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ನಮ್ಮನ್ನು ದೊಡ್ಡ ದೊಡ್ಡ ಖಾಸಗಿ ಕಂಪನಿಗಳ ಗುಲಾಮರನ್ನಾಗಿಸಲು ಸರ್ಕಾರ ಪ್ರಯತ್ನ ಪಡುತ್ತಿದೆ. ಇರುವ ಎಂಎಸ್‌ಪಿ ಸರಿಯಾಗಿ ನೀಡದೆ ಸರ್ಕಾರ ನಮ್ಮನ್ನು ಆಟ ಆಡಿಸುತ್ತಿದೆ. ಅಂತಹದರಲ್ಲಿ ಈ ಕಾನೂನುಗಳು ನಮ್ಮ ಜೀವನವನ್ನೇ ಬಲಿ ತೆಗೆದುಕೊಳ್ಳಲು ಹೊರಟಿವೆ. ಇವು ರದ್ದಾಗುವವರೆಗೆ ನಾವು ಹೋರಾಟ ಮುಂದುವರೆಸುತ್ತವೇ ಇರುತ್ತೇವೆ. ಮನೆಯಲ್ಲಿ ಈಗಾಗಲೇ ಹೇಳಿ ಬಂದಿದ್ದೇನೆ. ನನ್ನನ್ನು ಮನೆಗೆ ಕರೆಯಬೇಡಿ ನಾನು ಸತ್ತು ಹೋದೆ ಎಂದು ಭಾವಿಸಿಕೊಳ್ಳಿ. ಗೆದ್ದ ಮೇಲೆ ಮಾತ್ರ ಇಲ್ಲಿಂದ ಮನೆಗೆ ಬರುತ್ತೇನೆ ಎಂದಿದ್ದೇನೆ. ಇರುವ ಜಮೀನು ಹೋದರೆ, ಇನ್ನೊಬ್ಬರ ಗುಲಾಮನಾಗಲಾರೆ” ಎಂದು ರೇಖಾರಾಮ್ ಗೋಟಿಯಾ ಹೇಳುತ್ತಾರೆ.

ಇದನ್ನೂ ಓದಿ: ಆರ್ಥಿಕ ಸ್ವಾತಂತ್ರ್ಯ & ಸಂವಿಧಾನ ರಕ್ಷಣೆಗಾಗಿ ಮತ್ತೊಂದು ಬೃಹತ್ ಹೋರಾಟದತ್ತ ದೇಶ ಸಾಗುತ್ತಿದೆ

“ಅಂದು ರೈತರು ಎಂದರೆ ಸಂತೋಷದಿಂದ ಹೆಣ್ಣು ಕೊಡುತ್ತಿದ್ದರು. ಈಗ ರೈತರಿಗೆ, ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೆ ಮುಂದೆ ನೋಡುತ್ತಾರೆ. ಕೃಷಿ ಕ್ಷೇತ್ರವನ್ನು ಲಾಭದಾಯಕವನ್ನಾಗಿಸಿದರೇ ಬೇರೆ ಉದ್ಯೋಗಕ್ಕೆ ಜನ ಯಾಕೆ ಹೋಗುತ್ತಾರೆ..? ಇದರಿಂದ ನಿರುದ್ಯೋಗ ಕೂಡ ಕಡಿಮೆಯಾಗಲಿದೆ. ಆದರೆ ಸರ್ಕಾರ ಇರುವ ಕೃಷಿ ಕ್ಷೇತ್ರವನ್ನು ಖಾಸಗಿಯವರಿಗೆ ನೀಡಲು ಹೊರಟಿದೆ. ನಾವು ಇನ್ನೆಷ್ಟು ವರ್ಷ ಬದುಕಬಲ್ಲವು..? ಸರ್ಕಾರದ ಈ ಕಾನುನೂಗಳ ಪ್ರಭಾವ ಬೀರುವುದು ಈಗಿನ ಯುವಜನತೆ ಮೇಲೆ’ ಎನ್ನುತ್ತಾರೆ ರೇಖಾರಾಮ್.

ಮಾಸ್ಟರ್‌ಸ್ಟ್ರೋಕ್

ರಾಜಸ್ತಾನದಲ್ಲಿ ಬೆಳೆಗಳಿಗಿರುವ ಎಂಎಸ್‌ಪಿ ಬಗ್ಗೆ ಮಾತನಾಡುತ್ತಾ, ನಮ್ಮ ರಾಜ್ಯದಲ್ಲೂ ಉತ್ತಮ ಎಂಎಸ್‌ಪಿ ಇದೆ. ಆದರೆ ಅವುಗಳೆಲ್ಲ ಕಾಗದದಲ್ಲಿ ಮಾತ್ರ ಎನ್ನುತ್ತಾರೆ. ಹೆಸರುಕಾಳಿಗೆ ಪ್ರತಿ ಕ್ವಿಂಟಾಲ್‌ಗೆ 7,300 ರೂಪಾಯಿ ಸರ್ಕಾರಿ ಎಂಎಸ್‌ಪಿ ಇದೆ ಆದರೆ ಸರ್ಕಾರಿ ಮಂಡಿಗಳಲ್ಲಿ ನಮ್ಮ ಬೆಳೆಯನ್ನು ಖರೀದಿಸುತ್ತಿಲ್ಲ. 5 ಸಾವಿರ ರೈತರು ಸರ್ಕಾ‌ರಿ ಮಂಡಿಗೆ ಹೋದರೆ ಅದರಲ್ಲಿ ಕೇವಲ 20 ರೈತರ ಮಾಲನ್ನು ಮಾತ್ರ ಖರೀದಿಸಲಾಗುತ್ತಿದೆ. ಅನಿವಾರ್ಯವಾಗಿ ನಾವು ಖಾಸಗಿ ಮಂಡಿಗೆ ಹೋಗಬೇಕಾಗಿದೆ, ಅಲ್ಲಿ ನಮಗೆ 5,000 ರೂಪಾಯಿ ದೊರೆಯುತ್ತದೆ. ಹಾಗೆ ಬಾಜ್ರಾ ಬೆಳೆಗೆ ಸರ್ಕಾರಿ ಎಂಎಸ್‌ಪಿ 2,160 ರೂಪಾಯಿ ಇದೆ. ಅದು ಕೂಡ ನಮಗೆ ಸಿಗುತ್ತಿಲ್ಲ, ಖಾಸಗಿ ಮಂಡಿಯಲ್ಲಿ 1,200 ರೂಪಾಯಿಗೆ ಮಾರಾಟ ಮಾಡುತ್ತಿದ್ದೇವೆ. ಇಂತಹ ಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಇನ್ನೂ ದೊಡ್ಡ ದೊಡ್ಡ ಖಾಸಗಿ ಕಂಪನಿಗಳಿಗೆ ನಮ್ಮನ್ನು ಮಾರಾಟ ಮಾಡುತ್ತಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ದೇಶ ಭಕ್ತರು ಯಾರು? ದೇಶ ದ್ರೋಹಿಗಳು ಯಾರು? – ನಟ ಚೇತನ್ ಹೇಳುತ್ತಾರೆ ಕೇಳಿ

ಮೋದಿಯವರಲ್ಲಿ ಒಂದು ಪ್ರಶ್ನೆ ಕೇಳಬೇಕು. ಟೀ ಮಾರುತ್ತಿದ್ದೆ ಎನ್ನುವ ನೀವು ಬಡವರು ಎಂದು ಕೊಂಡಿದ್ದೆ. ನೀವು ಹೇಳಿದ ಎಲ್ಲಾ ಮಾತುಗಳನ್ನು ನಾನು ನಂಬಿಕೊಂಡಿದ್ದೆ. ಆದರೆ ನಿಮ್ಮ ಮಾತುಗಳನ್ನು, ವಾಗ್ದಾನಗಳನ್ನು ಹೇಗೆ ಮರೆತಿರಿ..? ನಾವು ಕಾಂಗ್ರೆಸ್ ಅವರನ್ನು ಶ್ರೀಮಂತರು ಎಂದುಕೊಂಡಿದ್ದೇವು. ಆದರೆ ನೀವು ಬಡವರಲ್ಲ. ನಿಮಗೆ ಬಡತನದ ಬಗ್ಗೆ ಕೊಂಚವು ಅರಿವಿಲ್ಲ. ನೀವು ಶ್ರೀಮಂತರ ಹಿಂದೆ ಬಿದ್ದಿರಿ. ಅಂದು ಸಿಹಿ ಸಿಹಿ ಮಾತನಾಡಿ ಮತ ಪಡೆದ ಮೋದಿ ಬೇರೆ. ಇಂದಿನ ಮೋದಿಯೇ ಬೇರೆ.  ನಮ್ಮ (ರೈತರ) ಆದಾಯವನ್ನು ದ್ವಿಗುಣಗಿಳಿಸುವ ಮಾತನಾಡಿದ್ದಿರಿ. ಈಗ ಪಶು ಆಹಾರವನ್ನು ಕೊಳ್ಳುವುದನ್ನು ಬಂದ್ ಮಾಡಿಸಿದ್ದೀರ. ಬಿಜೆಪಿಯ ಬೈರೋಗ್ ಸಿಂಗ್ ಸರ್ಕಾರ ನಮ್ಮ ಬೆಳೆ ತೆಗೆದುಕೊಳ್ಳುವುದನ್ನು ನಿಲ್ಲಿಸಿತು. ಇಂತಹದರಲ್ಲಿ ನಮ್ಮ ಆದಾಯ ಹೇಗೆ ದ್ವಿಗುಣಗೊಳಿಸುವಿರಿ….?” ಎಂದು ಪ್ರಶ್ನಿಸಿದ್ದಾರೆ.

“ಇದು ಸರ್ವಾಧಿಕಾರಿ ಸರ್ಕಾರವಾಗಿದೆ. ಇದೇನು ರಾಜರಿಂದ ಬಂದ ಸರ್ಕಾರವಲ್ಲ. ಇದು ನಾವು ಮತ ನೀಡಿ ಹುಟ್ಟು ಹಾಕಿದ ಸರ್ಕಾರ. ಆದರೆ ನಮ್ಮನ್ನೇ ಆತಂಕವಾದಿ ಎನ್ನುತ್ತಾರೆ. ದೇಶದ್ರೋಹಿ ಎನ್ನುತ್ತಾರೆ. ನಮಗೆ ತುಂಬಾ ನೋವಾಗುತ್ತದೆ ನಮ್ಮನ್ನು ದೇಶದ್ರೋಹಿ ಎಂದಾಗ. ಇವರು ದೇಶದ್ರೋಹಿಗಳು, ದೇಶದ ಬಾವುಟವನ್ನು ಅವಮಾನ ಮಾಡಿದ ಇವರ ಚೇಲಾಗಳು ದೇಶದ್ರೋಹಿಗಳು. ನಮ್ಮ ರೈತರನ್ನು ದೇಶದ್ರೋಹಿಗಳು ಎನ್ನುತ್ತಾರೆ ಇವರನ್ನು ರೈತರು ಎಂದಿಗೂ ಕ್ಷಮಿಸುವುದಿಲ್ಲ. ನಾವು ನಮ್ಮ ಊರಿನಲ್ಲಿ ಮನೆ ಮನೆಗೆ ತೆರಳಿ ಹೇಳಿದ್ದೇವೆ ಬಿಜೆಪಿಗೆ ಎಂದಿಗೂ ಮತ ನೀಡಬೇಡಿ ಎಂದ್ದಿದ್ದೇವೆ” ಎಂದು ರೈತ ರೇಖಾರಾಮ್ ಗೋಟಿಯಾ ಹೇಳುತ್ತಾರೆ.

ಮಮತ.ಎಂ


ಇದನ್ನೂ ಓದಿ; 3 ತಿಂಗಳಿನಿಂದ ಒಂದು ದಿನವೂ ರಜೆಯಿಲ್ಲ: ಪ್ರತಿದಿನವೂ ರೈತ ಹೋರಾಟದ ಕ್ಷಣ ಕ್ಷಣದ ಮಾಹಿತಿ ನೀಡುತ್ತಿರುವ ಯುವಕ!

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial