ಹರಿಯಾಣದ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ರೈತರ ಮಕ್ಕಳ ಸಾಧನೆ ಇಂದು ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿದೆ. ಹಳ್ಳಿಯಲ್ಲಿ ತಮ್ಮ ಪುಟ್ಟ ಜಮೀನುಗಳಲ್ಲಿ ಕೃಷಿ ಮಾಡುತ್ತಾ ಮಕ್ಕಳ ಕನಸಿಗೆ ನೀರೆರೆದ ಈ ರೈತರು ಭಾರತದ ಹೆಮ್ಮೆ. ಇಂತಹ ಪೋಷಕರ ಕಷ್ಟವನ್ನು ಮತ್ತು ಕನಸನ್ನು ಈ ಮಕ್ಕಳು ಸಾಕಾರಗೊಳಿಸಿದ್ದು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮೂಲಕ. ಟೋಕಿಯೋ ಸಮ್ಮರ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಬೆಳ್ಳಿ ಮತ್ತು ಕಂಚು ಗೆದ್ದು ತಂದ ರವಿ ಕುಮಾರ್ ದಹಿಯಾ ಮತ್ತು ಬಜರಂಗ್ ಪೂನಿಯಾ ಹರಿಯಾಣ ರಾಜ್ಯದ ರೈತರ ಮಕ್ಕಳು.
ರವಿಕುಮಾರ್ ದಹಿಯಾ
ರವಿಕುಮಾರ್ ದಹಿಯಾ ಡಿಸೆಂಬರ್ 12, 1997ರಲ್ಲಿ ಹರಿಯಾಣದ ಸೋನಿಪತ್ ಜಿಲ್ಲೆಯ ನಹ್ರಿ ಗ್ರಾಮದಲ್ಲಿ ಜನಿಸಿದವರು. ತಮ್ಮ 10ನೇ ವಯಸ್ಸಿನಲ್ಲಿಯೇ ದಹಿಯಾ ಉತ್ತರ ದೆಹಲಿಯ ಛತ್ರಸಲ್ ಕ್ರೀಡಾಂಗಣದಲ್ಲಿ ಸತ್ಪಾಲ್ ಸಿಂಗ್ ಅವರಿಂದ ತರಬೇತಿ ಪಡೆಯುತ್ತಿದ್ದರು. ಸಣ್ಣ ರೈತರಾಗಿದ್ದ ರಾಕೇಶ್ ದಹಿಯಾ, ಮಗನಿಗಾಗಿ ತಮ್ಮ ಹಳ್ಳಿಯಿಂದ ಛತ್ರಸಲ್ ಕ್ರೀಡಾಂಗಣಕ್ಕೆ ಪ್ರತಿದಿನ 8ರಿಂದ 10 ಕಿಲೋಮೀಟರ್ ಪ್ರಯಾಣಿಸಿ ರವಿಯವರ ಕುಸ್ತಿ ಆಹಾರದ ಭಾಗವಾದ ತಾಜಾ ಹಾಲು ಮತ್ತು ಹಣ್ಣುಗಳನ್ನು ನೀಡುತ್ತಿದ್ದರು. ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಈ ರೀತಿ ಮಗನಿಗಾಗಿ ಪ್ರಯಾಣ ಮಾಡಿದ್ದಾರೆ ತಂದೆ ರಾಕೇಶ್ ದಹಿಯಾ.
ತಂದೆಯ ಪರಿಶ್ರಮ ಮತ್ತು ದಹಿಯಾ ಅವರ ಹಠಕ್ಕೆ ಪ್ರತಿಫಲವಾಗಿ 2015ರ ಜೂನಿಯರ್ ವರ್ಲ್ಡ್ ರೆಸ್ಲಿಂಗ್ ಚಾಂಪಿಯನ್‌ಶಿಪ್‌ನ 55 ಕಿಲೋಗ್ರಾಂ ಫ್ರೀಸ್ಟೈಲ್ ವಿಭಾಗದಲ್ಲಿ ಬೆಳ್ಳಿ ಪದಕ ಭಾರತದ ಪಾಲಾಯಿತು. ಇಲ್ಲಿಂದ ಶುರುವಾದ ರವಿಕುಮಾರ್ ದಹಿಯಾ ಅವರ ಸಾಧನೆಯ ಪಥ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಡುವವರೆಗೂ ಮುಂದುವರೆದಿದೆ.

2017ರಲ್ಲಿ ದಹಿಯಾ ಅವರಿಗಾದ ಗಾಯದ ಸಮಸ್ಯೆ ಒಂದು ವರ್ಷಕ್ಕೂ ಹೆಚ್ಚು ದಿನ ಅವರನ್ನು ಕುಸ್ತಿಯಿಂದ ಹೊರಗಿಟ್ಟಿತ್ತು. ಅದರಿಂದ ಚೇತರಿಸಿಕೊಂಡ ರವಿಕುಮಾರ್ ಮತ್ತೆ ರೊಮ್ಯಾನಿಯಾದ ಬುಚಾರೆಸ್ಟ್‌ನಲ್ಲಿ ನಡೆದ 2018ರ 23 ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 57 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ಇಡೀ ಸ್ಪರ್ಧೆಯಲ್ಲಿ ಭಾರತ ಪಡೆದ ಏಕೈಕ ಪದಕ ಇದು.
2019ರ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚಿಗಾಗಿ ನಡೆದ ಪಂದ್ಯವನ್ನು ಸೋತ ನಂತರ ರವಿ ಕುಮಾರ್ ದಹಿಯಾ ವಿಶ್ವ ಕುಸ್ತಿ ರ್‍ಯಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿದ್ದರು.
2019ರಲ್ಲಿ ತನ್ನ ವಿಶ್ವ ಚಾಂಪಿಯನ್‌ಶಿಪ್‌ನ ಚೊಚ್ಚಲ ಪಂದ್ಯದಲ್ಲಿ ದಾಹಿಯಾ ಯುರೋಪಿಯನ್ ಚಾಂಪಿಯನ್ ಆರ್ಸೆನ್ ಹರುತ್ಯುನ್ಯನ್ (Arsen Harutyunyan) ಅವರನ್ನು 16 ಸುತ್ತುಗಳಲ್ಲಿ ಸೋಲಿಸಿದರು. ಜೊತೆಗೆ 2017ರ ವಿಶ್ವ ಚಾಂಪಿಯನ್ ಯೂಕಿ ತಕಹಶಿ (Yuki Takahashi) ಅವರನ್ನು ಕ್ವಾರ್ಟರ್ ಫೈನಲ್‌ನಲ್ಲಿ ಸೋಲಿಸಿದ್ದರು. ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಮತ್ತು ಚಿನ್ನದ ಪದಕ ವಿಜೇತ ಜೌರ್ ಉಗೆವ್ (Zaur Uguev) ವಿರುದ್ಧ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದರು.
ಕಂಚಿನ ಪದಕ ಗೆಲುವಿನ ಬೆನ್ನಲ್ಲೇ ದಹಿಯಾ ಅವರನ್ನು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್‌ನಲ್ಲಿ (TOPS) ಅಕ್ಟೋಬರ್ 2019 ರಲ್ಲಿ ಸೇರಿಸಿಕೊಳ್ಳಲಾಯಿತು.
ಇಲ್ಲಿಂದ ಮುಂದೆ ರವಿಕುಮಾರ್ ದಹಿಯಾ 2020ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್ ಮತ್ತು 2021ರಲ್ಲಿ ಅಲ್ಮಾಟಿಯಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟು ಚಾಂಪಿಯನ್ ಆದರು.
2020ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ದಹಿಯಾ ತನ್ನ ಪಟ್ಟುಗಳಿಂದ ಮೊದಲ ಎರಡು ಪಂದ್ಯಗಳನ್ನು ಆರಾಮವಾಗಿ ಗೆದ್ದರು. ಒಲಿಂಪಿಕ್ಸ್ ಸೆಮಿಫೈನಲ್ ಪಂದ್ಯದಲ್ಲಿ ದಹಿಯಾ ತನ್ನ ಎದುರಾಳಿ ನುರಿಸ್ಲಾಮ್ ಸನಾಯೆವ್ನಿಂದ ಕಚ್ಚಿಸಿಕೊಂಡಿದ್ದರು. ಆದರೂ ಗಟ್ಟಿ ಹೋರಾಟ ಮಾಡಿ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದಾರೆ. ನಂತರ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ದಹಿಯಾ, ಕೈಗೆ ಕಚ್ಚಿ ಗಾಯಗೊಳಿಸಿದ್ದ ಕಝಕಿಸ್ಥಾನದ ಎದುರಾಳಿ “ಘಟನೆ ನಡೆದ ಮರುದಿನವೇ ನನ್ನ ಕೈ ಕುಲುಕಿ, ಅಪ್ಪಿಕೊಂಡು ಕ್ಷಮೆ ಕೇಳಿದ್ದರು. ನಾನು ಅದನ್ನು ಆಗಲೇ ಮರೆತಿದ್ದೆ,
ನಂತರ ನಾವು ಒಳ್ಳೆ ಸ್ನೇಹಿತರಾದೆವು” ಎಂದು ಹೇಳಿದ್ದರು.
ಒಲಿಂಪಿಕ್ಸ್‌ನಲ್ಲಿ ಪುರುಷರ ಫ್ರೀಸ್ಟೈಲ್ ಕುಸ್ತಿಯ 57 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ರವಿ ಕುಮಾರ್ ದಹಿಯಾ, ರಷ್ಯಾ ಒಲಿಂಪಿಕ್ಸ್ ಸಮಿತಿಯ ಜೌರ್ ಉಗುವ್ ಅವರ ವಿರುದ್ದ 4-7 ಅಂತರದಲ್ಲಿ ಸೋತು ಬೆಳ್ಳಿಗೆ ಸಮಾಧಾನ ಪಟ್ಟುಕೊಂಡರು. ಈ ಮೂಲಕ ಕುಸ್ತಿಪಟು ಸುಶೀಲ್ ಕುಮಾರ್ ನಂತರ ಒಲಿಂಪಿಕ್ಸ್ ಬೆಳ್ಳಿ ಗೆದ್ದ ಭಾರತದ ಎರಡನೇ ಕುಸ್ತಿಪಟು ಆಗಿದ್ದಾರೆ ದಹಿಯಾ.
ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಎರಡನೇ ಭಾರತೀಯ ಕುಸ್ತಿಪಟು ಎನಿಸಿಕೊಂಡಿರುವ ದಹಿಯಾ ಅವರು “ನಾನು ಚಿನ್ನದ ಪದಕ ಬಯಸಿದ್ದರಿಂದ ಸ್ವಲ್ಪ ನಿರಾಶೆಗೊಂಡಿದ್ದೇನೆ, ಆದರೆ ನನಗೂ ಸಂತೋಷವಾಗಿದೆ. ನಾನು ನನ್ನ ಕೋಚ್ ಸತ್ಪಾಲ್ ಸಿಂಗ್ ಅವರನ್ನು ಭೇಟಿ ಮಾಡಲು ಛತ್ರಸಲ್ ಕ್ರೀಡಾಂಗಣಕ್ಕೆ ಹೋಗಬೇಕು” ಎಂದಿದ್ದಾರೆ.
“ನಾನು ದೆಹಲಿಯಲ್ಲಿ ತರಬೇತಿ ಪಡೆಯುತ್ತಿದ್ದಾಗ, ನನ್ನ ತಂದೆ ಪ್ರತಿದಿನ ನನ್ನ ಆಹಾರವಾಗಿದ್ದ ಹಣ್ಣು ಮತ್ತು ಹಾಲು ತಲುಪಿಸಲು ಬಹಳ ದೂರ ಪ್ರಯಾಣಿಸುತ್ತಿದ್ದರು. ಇದನ್ನು 10ಕ್ಕೂ ಹೆಚ್ಚು ವರ್ಷಗಳ ಕಾಲ ಮಾಡಿದ್ದಾರೆ. ನನ್ನ ತಂದೆ ಒಬ್ಬ ರೈತ. ಈಗ ನಾವು ಸೆಟಲ್ ಆಗಿದ್ದೇವೆ, ಆದರೂ, ಅವರಿಗೆ ಕೃಷಿಯನ್ನು ಬಿಡಲು ನಾನು ಹೇಳುವುದಿಲ್ಲ ಎಂದು ರವಿಕುಮಾರ್ ದಹಿಯಾ ಹೇಳಿದ್ದಾರೆ.
ರವಿಕುಮಾರ್ ದಹಿಯಾ ಅವರಿಗೆ ಹರಿಯಾಣ ಸರ್ಕಾರ 4 ಕೋಟಿ ರೂಪಾಯಿ ಧನಸಹಾಯದ ಬಹುಮಾನ ಘೋಷಿಸಿದೆ. ಸರ್ಕಾರಿ ಉದ್ಯೋಗ ಮತ್ತು ರಿಯಾಯಿತಿ ದರದಲ್ಲಿ ಪ್ಲಾಟ್ ನೀಡಲಿದ್ದೇವೆ ಎಂದು ಘೋಷಿಸಿದೆ. ಜೊತೆಗೆ ದಹಿಯಾ ವಿಜಯದ ಗೌರವಾರ್ಥವಾಗಿ, ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಒಳಾಂಗಣ ಕುಸ್ತಿ ಕ್ರೀಡಾಂಗಣವನ್ನು ನಹರಿಯಲ್ಲಿ ನಿರ್ಮಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ದಹಿಯಾ “ನನ್ನ ಹಳ್ಳಿಯ ಯುವಜನತೆ ಒಳ್ಳೆಯ ಅವಕಾಶಗಳನ್ನು ಪಡೆಯುತ್ತಾರೆ” ಎಂದು ಹರ್ಷವ್ಯಕ್ತಪಡಿಸಿದ್ದಾರೆ.
ಬಜರಂಗ್ ಪುನಿಯಾ
ರೈತ ಹೋರಾಟದಲ್ಲಿ ಮುನ್ನಲೆಗೆ ಬಂದ ಕ್ರೀಡಾಪಟುಗಳ ಹೆಸರುಗಳಲ್ಲಿ ಬಜರಂಗ್ ಪುನಿಯಾ ಕೂಡ ಸೇರುತ್ತಾರೆ. ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಬೆಂಬಲಿಸಿ ಟ್ವೀಟ್ ಮಾಡಿ ತಾನು ರೈತನ ಮಗ ಎಂಬುದನ್ನು ಘೋಷಿಸಿಕೊಂಡಿದ್ದರು. ಈಗ ಮತ್ತೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಗೆಲ್ಲುವ ಮೂಲಕ ಭಾರತೀಯರ ಮನೆಮಾತಾಗಿದ್ದಾರೆ.

ಫೆಬ್ರವರಿ 26, 1994ರಂದು ಜನಿಸಿದ ಪುನಿಯಾ ಹರಿಯಾಣದ ಜಜ್ಜರ್ ಜಿಲ್ಲೆಯ ಖುದಾನ್ ಗ್ರಾಮಕ್ಕೆ ಸೇರಿದ ರೈತ ಕುಟುಂಬದವರು. ತಮ್ಮ 7ನೇ ವಯಸ್ಸಿನಲ್ಲಿ ಕುಸ್ತಿ ಅಭ್ಯಾಸ ಮಾಡಲು ಪ್ರಾರಂಭಿಸಿದ್ದರು. ರೈತ ಮತ್ತು ಕುಸ್ತಿಪಟುವಾಗಿದ್ದ ಅವರ ತಂದೆ ಕ್ರೀಡೆಯಲ್ಲಿ ಮುಂದುವರಿಸಲು ಮಗನನ್ನು ಪ್ರೋತ್ಸಾಹಿಸಿದರು. 2015ರಲ್ಲಿ, ಸೋನಿಪತ್‌ಗೆ ಬಜರಂಗ್ ಪುನಿಯಾ ಕುಟುಂಬ ಸ್ಥಳಾಂತರಗೊಂಡಿತು. ಇದರಿಂದ ಪುನಿಯಾ ಅವರಿಗೆ ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ಕೇಂದ್ರಕ್ಕೆ ಸೇರಿಕೊಳ್ಳಲು ಸುಲಭವಾಯಿತು.
ಪ್ರಸ್ತುತ ಭಾರತೀಯ ರೈಲ್ವೆಯಲ್ಲಿ ಉದ್ಯೋಗದಲ್ಲಿರುವ ಬಜರಂಗ್ ಪುನಿಯಾ ಭಾರತೀಯ ಫ್ರೀಸ್ಟೈಲ್ ಕುಸ್ತಿಪಟು. ಪ್ರಸ್ತುತ 65 ಕೆಜಿ ತೂಕ ವಿಭಾಗದ ರ್‍ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿದ್ದಾರೆ. ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಮೂರು ಪದಕಗಳನ್ನು ಗೆದ್ದ ಏಕೈಕ ಭಾರತೀಯ ಕುಸ್ತಿಪಟು ಪುನಿಯಾ.
ಟೋಕಿಯೋ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಎಂಟು ಭಾರತೀಯ ಕುಸ್ತಿಪಟುಗಳಲ್ಲಿ ಕಂಚಿನ ಪದಕ ಗೆದ್ದು ಬಜರಂಗ್ ಪುನಿಯಾ ತಮ್ಮ ಪದಕಗಳ ಪಟ್ಟಿಗೆ ಈಗ ಒಲಿಂಪಿಕ್ ಪದಕವನ್ನು ಸೇರಿಸಿಕೊಂಡಿದ್ದಾರೆ. ಪುನಿಯಾ ಮೊದಲ ಒಲಿಂಪಿಕ್ ಪದಕವನ್ನು ಖಚಿತಪಡಿಸಿಕೊಳ್ಳಲು ಪ್ಲೇ-ಆಫ್‌ನಲ್ಲಿ ತನ್ನ ಎದುರಾಳಿಯನ್ನು 8-0 ಅಂತರದಿಂದ ಸೋಲಿಸಿ ದಾಖಲೆ ಮಾಡಿದ್ದರು.
ಬಜರಂಗ್ ಪುನಿಯಾ ಕಳೆದ ಮೂರು ವರ್ಷಗಳಿಂದ ಪ್ರಮುಖ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 2018 ರ ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದಾರೆ. 2018 ಮತ್ತು 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಮತ್ತು ಕಂಚು ತಮ್ಮದಾಗಿಸಿಕೊಂಡಿದ್ದಾರೆ.
2013ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್ ಅವರ ಮೊದಲ ಪ್ರಮುಖ ಪಂದ್ಯವಾಗಿದೆ. ಪುರುಷರ ಫ್ರೀಸ್ಟೈಲ್ 60 ಕೆಜಿ ವಿಭಾಗದಲ್ಲಿ ಉತ್ತರ ಕೊರಿಯಾದ ಹ್ವಾಂಗ್ ರ್ಯೊಂಗ್-ಹಾಕ್ ವಿರುದ್ಧ ಸೋತ ನಂತರ ಕಂಚಿನ ಪದಕ್ಕೆ ತೃಪ್ತಿಪಟ್ಟರು.
2013ರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 60 ಕೆಜಿ ವಿಭಾಗದಲ್ಲಿ ಮತ್ತೊಂದು ಕಂಚಿನ ಪದಕವನ್ನು ಪುನಿಯಾ ತಮ್ಮದಾಗಿಸಿಕೊಂಡಿದ್ದರು. 2014ರಲ್ಲಿ, ಪುರುಷರ 61 ಕೆಜಿ ವಿಭಾಗದಲ್ಲಿ ಕಾಮನ್‌ವೆಲ್ತ್ ಮತ್ತು 2014ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪುನಿಯಾ ಬೆಳ್ಳಿಯ ಪದಕ ಪಡೆದಿದ್ದಾರೆ.
2015ರಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲಾಗಿರಲಿಲ್ಲ. ಆನಂತರ ಕಂಚು, ಬೆಳ್ಳಿ ಪದಕಗಳನ್ನು ಬಿಟ್ಟು ಚಿನ್ನದ ಪದಕಗಳತ್ತ ತಮ್ಮ ಲಕ್ಷ್ಯ ಹರಿಸಿದ್ದಾರೆ. ದೆಹಲಿಯಲ್ಲಿ ನಡೆದ 2017ರ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಎರಡು ವರ್ಷಗಳ ನಂತರ ಬಜರಂಗ್ ಪುನಿಯಾ ಮೊದಲ ಚಿನ್ನದ ಪದಕವನ್ನು ಪಡೆದಿದ್ದಾರೆ. 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪುರುಷರ ಫ್ರೀಸ್ಟೈಲ್ 65 ಕೆಜಿ ವಿಭಾಗದಲ್ಲಿ ಮತ್ತೊಂದು ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. 2018ರ ಏಷ್ಯನ್ ಗೇಮ್ಸ್‌ನಲ್ಲಿ ತಮ್ಮ 3ನೇ ಚಿನ್ನದ ಪದಕವನ್ನು ಗಳಿಸಿದರು.
ಇದಾದಬಳಿಕ 2018ರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದು, 65 ಕೆಜಿ ವಿಭಾಗದ ರ್‍ಯಾಂಕಿಂಗ್‌ನಲ್ಲಿ ವಿಶ್ವ ನಂಬರ್ 1 ಸ್ಥಾನಕ್ಕೆ ಏರಿದರು. 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಡೆದ ಕಂಚಿನ ಪದಕ 2020ರ ಬೇಸಿಗೆ ಒಲಿಂಪಿಕ್ಸ್‌ಗೆ ಬಾಗಿಲು ತೆರೆಯಿತು.
ಬಜರಂಗ್ ಪುನಿಯಾ ಪ್ರಸಿದ್ಧ ಪೋಗಾಟ್ ಸಹೋದರಿಯರು ಎಂದೇ ಹೆಸರಾದ ಮತ್ತು ಸ್ವತಃ ಕುಸ್ತಿಪಟು ಕೂಡ ಆಗಿರುವ ಸಂಗೀತಾ ಪೋಗಾಟ್ ಅವರನ್ನು ವಿವಾಹವಾಗಿದ್ದಾರೆ.
ಬಜರಂಗ್ ಪುನಿಯಾ ರೈತ ಆಂದೋಲನ ತೀವ್ರವಾಗಿದ್ದ ಸಮಯದಲ್ಲಿ “ಭಾರತ ಒಂದು ಕೃಷಿ ಪ್ರಧಾನ ದೇಶ, ದೇಶದ ಆರ್ಥಿಕತೆಯು ಕೂಡ ಕೃಷಿಯ ಮೇಲೆ ಅವಲಂಬಿತವಾಗಿದೆ. ಸರ್ಕಾರದ ಧೋರಣೆಯಿಂದಾಗಿ ರೈತರು ಬೀದಿಗೆ ಬರುವಂತಾಗಿದೆ. ನಾವು ರೈತರ ಮಕ್ಕಳು. ದೇಶದ ಪ್ರತಿಯೊಬ್ಬ ಪ್ರಜೆಯೂ ರೈತ ಚಳವಳಿಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ” ಎಂದು ಟ್ವೀಟ್ ಮಾಡಿದ್ದರು.
ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರಲ್ಲಿ ಬಹುಪಾಲು ಕ್ರೀಡಾಪಟುಗಳು ರೈತರ ಮಕ್ಕಳು. ಇವರ ಗೆಲುವನ್ನು ಪ್ರತಿಭಟನಾ ಸ್ಥಳಗಳಲ್ಲಿಯೂ ಸಂಭ್ರಮಿಸಲಾಗಿದೆ. ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಸಾಮಾಜಿಕ ಜಾಲತಾಣಗಳಲ್ಲಿ ರೈತರ ಮಕ್ಕಳಿಗೆ ಅಭಿನಂದನೆಗಳು ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಟ್ರೆಂಡ್ ಮಾಡಿದ್ದಾರೆ. ಒಕ್ಕೂಟ ಸರ್ಕಾರ ರೈತರನ್ನು ಬೀದಿಯಲ್ಲಿ ನಿಲ್ಲಿಸಿದ್ದರೂ ಕೂಡ ರೈತರ ಮಕ್ಕಳು ದೇಶದ ಕೀರ್ತಿ ಪತಾಕೆಯನ್ನು ವಿಶ್ವದಲ್ಲಿ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಈ ಒಲಿಂಪಿಕ್ಸ್ ಗೆಲುವಿನ ಹಿನ್ನೆಲೆಯಲ್ಲಾದರೂ ಒಕ್ಕೂಟ ಸರ್ಕಾರ ಕ್ರೀಡಾಸ್ಪೂರ್ತಿ ಮೆರೆದು ರೈತರ ಬೇಡಿಕೆಗಳನ್ನು ಈಡೇರಿಸಲಿ ಎಂಬುದು ನಮ್ಮ ಆಶಯ.


