Homeಮುಖಪುಟರೈತರ ಆತ್ಮಹತ್ಯೆ: ವಾಸ್ತವದಿಂದ ದೂರವಿರುವ ಸರಕಾರದ ವರದಿಗಳು

ರೈತರ ಆತ್ಮಹತ್ಯೆ: ವಾಸ್ತವದಿಂದ ದೂರವಿರುವ ಸರಕಾರದ ವರದಿಗಳು

- Advertisement -
- Advertisement -

’ಭಾರತದಲ್ಲಿ ಅಪಘಾತದಿಂದ ಆದ ಸಾವುಗಳು ಮತ್ತು ಆತ್ಮಹತ್ಯೆಯ ಸಾವುಗಳ’ ಬಗ್ಗೆ ಇತ್ತೀಚಿಗೆ ಹೊರಬಂದ ಎನ್‌ಸಿಆರ್‌ಬಿಯ ದತ್ತಾಂಶಗಳು ಭಾರತದಲ್ಲಿ ರೈತರ ಆತ್ಮಹತ್ಯೆಗಳು ಕಡಿಮೆ ಆಗುತ್ತಿವೆ ಎಂದು ಬಿಂಬಿಸುತ್ತಿವೆ. ಮುಖ್ಯವಾಹಿನಿಯ ಮಾಧ್ಯಮವು ರೈತರ ಆತ್ಯಹತ್ಯೆಯ ಸಂಖ್ಯೆ ಕಡಿಮೆಯಾಗಿವೆ ಎಂದು ಗಟ್ಟಿಯಾಗಿ ಪ್ರತಿಪಾದಿಸುತ್ತಿವೆ. ಈ ವರದಿಗಳ ಪ್ರಕಾರ ಕೃಷಿ ಕಾರ್ಮಿಕರು ಮತ್ತು ಇತರ ವಲಯದ ಜನರು ರೈತರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಆತ್ಮಹತ್ಯೆಯ ಸಂಖ್ಯೆಯು 2018ರಲ್ಲಿ 10,356 ಇದ್ದರೆ 2019ರಲ್ಲಿ ಅದು 10,281ಗೆ ಇಳಿಯಿತು, ಹಾಗೂ ಅದೇ ಸಮಯದಲ್ಲಿ ಕೃಷಿ ಕಾರ್ಮಿಕರ ಸಂಖ್ಯೆಯು 30,132ರಿಂದ 32,559ಗೆ ಏರಿದೆ. ಈ ವಿಷಯದ ಆಳಕ್ಕೆ ಹೋಗಿ ಪರಿಶೀಲಿಸಲು, ರೈತರ ಆತ್ಮಹತ್ಯೆಗಳ ಗಂಭೀರ ವಿಷಯವನ್ನು ಉದ್ದೇಶಿಸಲು ಮನೆಮನೆಗೆ ಹೋಗಿ ಸಮೀಕ್ಷೆ ನಡೆಸಲಾಗಿದೆ. ಹಾಗಾಗಿ ಪಂಜಾಬ್ ರಾಜ್ಯದ ರೈತರ ಆತ್ಮಹತ್ಯೆಗಳನ್ನು ವಿಶ್ಲೇಷಿಸುವುದು ಅತ್ಯಗತ್ಯ. ಪಂಜಾಬ್ ಅಗ್ರಿಕಲ್ಚರ್ ಯುನಿವರ್ಸಿಟಿ (ಪಿಎಯು), ಪಂಜಾಬ್ ಯುನಿವರ್ಸಿಟಿ ಪಟಿಯಾಲ ಹಾಗೂ ಗುರು ನಾನಕ್ ದೇವ್ ಯುನಿವರ್ಸಿಟಿ ಅಮ್ರಿತ್‌ಸರ್- ನಡೆಸಿದ ಸಮೀಕ್ಷೆಗಳು ಆತ್ಮಹತ್ಯೆಗಳ ಸಂಖ್ಯೆ ಮತ್ತು ಅವುಗಳ ಕಾರಣವನ್ನು ಸ್ಪಷ್ಟಪಡಿಸುತ್ತವೆ. ಆಶ್ಚರ್ಯಕರವಾಗಿ, 2015ರಲ್ಲಿ ಎನ್‌ಸಿಆರ್‌ಬಿ ಪ್ರಕಟಿಸಿದ ವರದಿಯು ರೈತರ ಆತ್ಮಹತ್ಯೆಗಳಿಗೆ ಕಾರಣಗಳನ್ನು ಮತ್ತು ಆ ಆತ್ಮಹತ್ಯೆಗಳ ವಿವರವಾದ ಅಂಶಗಳನ್ನು ಒಳಗೊಂಡಿತ್ತು, ಆದರೆ ಇತ್ತೀಚಿನ ಎನ್‌ಸಿಆರ್‌ಬಿ ವರದಿಯು ಈ ವರ್ಗೀಕರಣಗಳನ್ನು ಬಹಿರಂಗಪಡಿಸಿಲ್ಲ.

ಫಾರ್ಮರ್‍ಸ್ ಆಂಡ್ ಅಗ್ರಿಕಲ್ಚರ್ ಲೇಬರರ್‍ಸ್ ಸೂಸೈಡ್ಸ್ ಇನ್ ಪಂಜಾಬ್ ಎಂಬ ಅಧ್ಯಯನವನ್ನು ಲುಧಿಯಾನದ ಪಿಎಯು ಮಾಡಿತ್ತು, ಇದನ್ನು ಲುಧಿಯಾನ, ಮೋಗ, ಭಟಿಂಡಾ, ಸಂಗೂರ್, ಬರ್ನಾಲಾ ಮತ್ತು ಮನ್ಸಾಗಳ ಆರು ಜಿಲ್ಲೆಗಳ ಜನಗಣತಿಯ ಮೇಲೆ ಆಧರಿಸಲಾಗಿತ್ತು. ಎನ್‌ಸಿಆರ್‌ಬಿ ವರದಿಯ ಪ್ರಕಾರ 2014ರಿಂದ 2018ರ ಅವಧಿಯಲ್ಲಿ ಇಡೀ ಪಂಜಾಬ್ ರಾಜ್ಯದಲ್ಲಿ ರೈತರ ಮತ್ತು ಕೃಷಿ ಕಾರ್ಮಿಕರ ಆತ್ಮಹತ್ಯೆಗಳ ಸಂಖ್ಯೆ 1082 ಆಗಿತ್ತು, ಆದರೆ ಪಿಎಯು ಅಧ್ಯಯನವು ಬಹಿರಂಗಪಡಿಸುವುದೇನೆಂದರೆ, ಆ ಆರು ಜಿಲ್ಲೆಗಳಲ್ಲಿಯೇ ಅದೇ ಅವಧಿಯಲ್ಲಿ ಆತ್ಮಹತ್ಯೆಗಳ ಸಂಖ್ಯೆ 3740 ಅಂದರೆ 3.5 ಪಟ್ಟು. ಪಂಜಾಬಿನಲ್ಲಿ 2014ರಲ್ಲಿ 64 ಮತ್ತು 2015ರಲ್ಲಿ 124 ಆತ್ಮಹತ್ಯೆಗಳ ಸಂಖ್ಯೆ ಎಂದು ಎನ್‌ಸಿಆರ್‌ಬಿ ಹೇಳಿದರೆ, ಅಲ್ಲಿನ ಕೇವಲ ಆರು ಜಿಲ್ಲೆಗಳಲ್ಲಿ ಆ ವರ್ಷಗಳಲ್ಲಿ 888 ಮತ್ತು 936 ಆತ್ಮಹತ್ಯೆಗಳಾಗಿವೆ ಎಂದು ಪಿಎಯು ಅಧ್ಯಯನ ಹೇಳುತ್ತದೆ. ಅದೇ ರೀತಿಯಲ್ಲಿ, 2016ರಲ್ಲಿ ಎನ್‌ಸಿಆರ್‌ಬಿ ಡೇಟಾ 280 ತೋರಿಸಿದರೆ ಪಿಎಯು ಅಧ್ಯಯನದ ಪ್ರಕಾರ 518, ಹಾಗೇ ಮುಂದುವರೆದು, 2017ರಲ್ಲಿ ಎನ್‌ಸಿಆರ್‌ಬಿ ಪ್ರಕಾರ 291, ಪಿಎಯು ಪ್ರಕಾರ 611, 2018ರಲ್ಲಿ ಎನ್‌ಸಿಆರ್‌ಬಿ ಪ್ರಕಾರ 323 ಆದರೆ ಪಿಎಯು ಅನುಗುಣವಾಗಿ 787. ಪಂಜಾಬಿನ 12,729 ಹಳ್ಳಿಗಳಲ್ಲಿ ಕೇವಲ 2518 ಹಳ್ಳಿಗಳಲ್ಲಿ ಮಾತ್ರ ಪಿಎಯು ಸಮೀಕ್ಷೆ ನಡೆಸಿತ್ತು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ. ಒಂದುವೇಳೆ ಮಿಕ್ಕ 10,211 ಹಳ್ಳಿಗಳಲ್ಲೂ ಸಮೀಕ್ಷೆ ನಡೆಸಿದರೆ ವಾಸ್ತವ ಏನಿದೆ ಎಂಬುದು ಇಡಿಯಾಗಿ ಗೊತ್ತಾಗುತ್ತಿತ್ತು. 2018ರಿಂದ ಈ ವಿಷಯದ ಮೇಲೆ ಯಾವುದೇ ವಿಶ್ವವಿದ್ಯಾಲಯ ಅಥವಾ ಯಾವುದೇ ಸಂಸ್ಥೆಯು ಸಮೀಕ್ಷೆ ನಡೆಸಿಲ್ಲ. ಎನ್‌ಸಿಆರ್‌ಬಿ ಪ್ರಕಾರ 2019ರಲ್ಲಿ ಆತ್ಮಹತ್ಯೆಗಳ ಸಂಖ್ಯೆ 302 ಮತ್ತು 2020ರಲ್ಲಿ ಅದರ ಸಂಖ್ಯೆ 257 ಎಂತಿದೆ. ಈ ಮೂರು ವಿಶ್ವವಿದ್ಯಾಲಯಗಳ ಸಮೀಕ್ಷೆಗಳು ಬಹಿರಂಗಪಡಿಸುವುದೇನೆಂದರೆ, ಪಂಜಾಬಿನಲ್ಲಿ ಈ ಸಮಯದಲ್ಲಿ ಪ್ರತಿವರ್ಷ 900ರಿಂದ 1,000 ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದರು. ಈ ಮೂರು ವಿಶ್ವವಿದ್ಯಾಲಯಗಳ ಗಣತಿಯು ಪಂಜಾಬಿನ ಕೃಷಿ ವಲಯದಲ್ಲಿ 2000ದಿಂದ 2018ರ ಅವಧಿಯಲ್ಲಿ ಸುಮಾರು 16,600 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಅದರಲ್ಲಿ 9300 ಜನರು ರೈತರಾಗಿದ್ದು 7300 ಜನರು ಕೃಷಿ ಕಾರ್ಮಿಕರಾಗಿದ್ದಾರೆ ಎನ್ನುತ್ತದೆ. ಪಂಜಾಬಿನಲ್ಲಿ ಸರಾಸರಿ ಇಬ್ಬರು ರೈತರು ಹಾಗೂ ಒಬ್ಬ ಕೃಷಿ ಕಾರ್ಮಿಕ ಪ್ರತಿದಿನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹೆಚ್ಚುತ್ತಿರುವ ಸಾಲವೇ ಈ ಆತ್ಮಹತ್ಯೆಗಳಿಗೆ ಪ್ರಮುಖ ಕಾರಣವಾಗಿದೆ. ರೈತರ ಆತ್ಮಹತ್ಯೆಯ ವಿದ್ಯಮಾನವು ಒಂದು ನಿರ್ಣಾಯಕ ತಿರುವನ್ನು ಪಡೆದಿದ್ದರೂ, ಮಖ್ಯವಾಹಿನಿಯ ಜನಪ್ರಿಯ ನುಡಿಗಟ್ಟು ವಾಸ್ತವವನ್ನು ಮರೆಮಾಚಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ.

ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಆತ್ಮಹತ್ಯೆಗಳ ಈ ಟ್ರೆಂಡ್‌ಅನ್ನು 90, ದಶಕದ ಕೊನೆಯಲ್ಲಿ ಶುರುವಾಗಿದ್ದನ್ನು ನೋಡಬಹುದು, ಅದೇ ಹೊಸ ಆರ್ಥಿಕ ನೀತಿಯ ಸಮಯವೂ ಆಗಿತ್ತು. ಎನ್‌ಸಿಆರ್‌ಬಿ ಪ್ರಕಾರ 1997ರಿಂದ 2006ರ ಅವಧಿಯಲ್ಲಿ ಭಾರತದಲ್ಲಿ 10,95,219 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಅದರಲ್ಲಿ 1,66,304 ಜನರು ರೈತರಾಗಿದ್ದಾರೆ. 90ರ ದಶಕದ ಮಧ್ಯಭಾಗದಿಂದ ರೈತರ ಆತ್ಮಹತ್ಯೆಯ ಸಂಖ್ಯೆಯು 4 ಲಕ್ಷವನ್ನು ಮೀರಿದೆ. ಕಳೆದ ವರ್ಷದ ವರದಿಯ ಪ್ರಕಾರ, ರೈತರ ಆತ್ಯಹತ್ಯೆಯ ದರವು ಇತರ ಜನರಿಗಿಂತ ಹೆಚ್ಚು ಇದೆ. ಇಡೀ ಜನಸಂಖ್ಯೆಯಲ್ಲಿ ಒಂದು ಲಕ್ಷಕ್ಕೆ ಸರಾಸರಿ 10.6 ಜನರು ಆತ್ಮಹತ್ಯೆ ಮಾಡಿಕೊಂಡರೆ, ರೈತರಲ್ಲಿ ಈ ಪ್ರಮಾಣ 15.8 ಇದೆ. ಆಶ್ಚರ್ಯಕರವಾಗಿ, ’ರೈತ’ ಎಂಬುದರ ವ್ಯಾಖ್ಯಾನವನ್ನೇ ಬದಲಿಸಿ ರೈತರ ಆತ್ಮಹತ್ಯೆಯ ಸಂಖ್ಯೆಯನ್ನು ಕಡಿಮೆ ಮಾಡುವುದಕ್ಕೆ ಉನ್ನತ ಮಟ್ಟದಲ್ಲಿ ಪ್ರಯತ್ನ ನಡೆದಿದೆ. ಎನ್‌ಸಿಆರ್‌ಬಿಯ ವರದಿಗಳು ಪೊಲೀಸರ ದಾಖಲೆಗಳನ್ನು ಆಧರಿಸಿರುತ್ತವೆ, ಅವುಗಳು ನಿಜವಾದ ಸಂಖ್ಯೆಗಳನ್ನು ಪ್ರತಿನಿಧಿಸುವುದಿಲ್ಲ. ಕಾನೂನಾತ್ಮಕ ಸಮಸ್ಯೆಗಳನ್ನು ತಪ್ಪಿಸುವ ಸಲುವಾಗಿ ಆತ್ಮಹತ್ಯೆಗಳಾದಾಗ ಪೊಲೀಸರಿಗೆ ಮಾಹಿತಿ ನೀಡುವುದಿಲ್ಲ ಅಥವಾ ಮರಣೋತ್ತರ ಪರೀಕ್ಷೆ (ಪೋಸ್ಟ್-ಮಾರ್ಟಮ್) ಮಾಡದೆಯೇ ಅವರುಗಳ ಅಂತ್ಯಕ್ರಿಯೆಯನ್ನು ಮಾಡುವುದರಿಂದ ಇವುಗಳು ದಾಖಲಾಗುವುದಿಲ್ಲ. ಹಾಗಾಗಿ, ವಾಸ್ತವದಲ್ಲಿ ಆತ್ಮಹತ್ಯೆಗಳು ಆಗುವುದಕ್ಕಿಂತ ತುಂಬಾ ಕಡಿಮೆ ಸಂಖ್ಯೆಯನ್ನು ತೋರಿಸಲಾಗುತ್ತದೆ. ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ ಕೃಷಿಯ ಮೇಲೆ ಅವಲಂಬಿತವಾದ 28 ಜನರು ಪ್ರತಿದಿನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹಾಗೆಯೇ, ಪಂಜಾಬಿನಲ್ಲಿ ಮಾಡಿದಂತೆ ಇತರ ರಾಜ್ಯಗಳಲ್ಲೂ ಸಮೀಕ್ಷೆ ನಡೆಸಿದ್ದಲ್ಲಿ ರೈತರ ಆತ್ಮಹತ್ಯೆಯ ಸಂಖ್ಯೆಯು ಸರಕಾರಿ ದಾಖಲೆಗಳಿಗಿಂತ ಹೆಚ್ಚಾಗಿ ಕಂಡುಬರಲಿದೆ.

ಕಡಿಮೆಯಾಗುತ್ತಿರುವ ಲಾಭವೇ ರೈತರ ಮತ್ತು ಕೃಷಿ ಕಾರ್ಮಿಕರ ಆತ್ಮಹತ್ಯೆಯ ಹಿಂದಿರುವ ಪ್ರಮುಖ ಕಾರಣವಾಗಿದೆ. ಸಾಗುವಳಿಗೆ ತಗಲುವ ವೆಚ್ಚದಲ್ಲಿ ಹೆಚ್ಚಳ ಹಾಗೂ ತುಲನಾತ್ಮಕವಾಗಿ ಬೆಳೆಗಳಿಗೆ ಕಡಿಮೆ ಬೆಲೆ ಸಿಗುತ್ತಿರುವುದರಿಂದ ಆದಾಯ ಮತ್ತು ಖರ್ಚಿನ ನಡುವೆ ಅಂತರ ಹೆಚ್ಚಿದೆ, ಇದು ಕೃಷಿ ಕುಟುಂಬಗಳನ್ನು ಆರ್ಥಿಕ ಬಿಕ್ಕಟ್ಟಿಗೆ ದೂಡುತ್ತಿದೆ. ಇಂತಹ ಸನ್ನಿವೇಶದಲ್ಲಿ ರೈತರು ಮತ್ತು ಕಾರ್ಮಿಕರು ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಇದರಿಂದ ಬಹಳಷ್ಟು ಸಣ್ಣ ಮತ್ತು ಅಂಚಿನಲ್ಲಿರುವ ರೈತರು ಕೃಷಿಯನ್ನು ತೊರೆಯುವಂತೆ ಮಾಡಲಾಗುತ್ತದೆ. ಈಗ ಬಂದಿರುವ (ಈಗ ಹಿಂಪಡೆದಿರುವ) ಹೊಸ ಮೂರು ಕೃಷಿ ಕಾನೂನುಗಳಿಂದ ದೊಡ್ಡ ರೈತರನ್ನೂ ಕೃಷಿಯಿಂದ ಹೊರಗೆ ದೂಡಲಾಗುವುದು. ಭಾರತದಲ್ಲಿ ಪ್ರತಿದಿನ 2,500 ಜನರು ಕೃಷಿಯಿಂದ ಹೊರಗೆ ತಳ್ಳಲ್ಪಡುತ್ತಿದ್ದಾರೆ. ಅನಿವಾರ್ಯವಾಗಿ, ಈ ಸಾಮಾನ್ಯ ಜನರು ಕೃಷಿಯಿಂದ ಹೊರಹೋಗುವ ಪ್ರಕ್ರಿಯೆಯು ಸಂಪೂರ್ಣಗೊಂಡು, ಕಾರ್ಪೊರೆಟ್ ವಲಯಕ್ಕೆ ದಾರಿ ಮಾಡಿಕೊಡಲಾಗುವುದು.

ಕೃಷಿ ವಲಯದಲ್ಲಿ ಜನರ ಉದ್ಯೋಗದ ಸಂಖ್ಯೆಯು ನಿರಂತರವಾಗಿ ಕುಸಿಯುತ್ತಿದೆ. ಭಾರತದಲ್ಲಿ, ಕೃಷಿ ವಲಯವು 1972-73ರ ಸಮಯದಲ್ಲಿ ದೇಶದ 74% ಜನರಿಗೆ ಉದ್ಯೋಗ ನೀಡಿತ್ತು, 93-94 ರಲ್ಲಿ ಅದು 64%ಗೆ ಇಳಿಯಿತು ಹಾಗೂ ಈಗ ಒಟ್ಟು ಕಾರ್ಮಿಕರಲ್ಲಿ 54% ಕಾರ್ಮಿಕರಿಗೆ ಮಾತ್ರ ಉದ್ಯೋಗ ನೀಡಿದೆ. ಹಾಗೆಯೇ, ಜಿಡಿಪಿಯಲ್ಲಿ 1972-73ಯಲ್ಲಿ ಕೃಷಿಯ ಪಾಲು 41% ಇದ್ದರೆ, 1993-94ರಲ್ಲಿ ಅದು 30%ಗೆ ಇಳಿಯಿತು ಹಾಗೂ ಈಗ ಕೇವಲ 14% ಇದೆ. ಕೃಷಿ ಕಾರ್ಮಿಕರ ಉತ್ಪಾದಕತೆಯು ಇತರ ವಲಯಗಳಲ್ಲಿ ಕೆಲಸ ಮಾಡುವ ಜನರಿಗಿಂತ ಕಡಿಮೆಯಾಗಿದೆ. ಆರೋಗ್ಯ ಸೇವೆ ಮತ್ತು ಶಿಕ್ಷಣದ ಖಾಸಗೀಕರಣ ಹಾಗೂ ಹೆಚ್ಚುತ್ತಿರುವ ಜೀವನವೆಚ್ಚವು ರೈತರ ಮತ್ತು ಕಾರ್ಮಿಕರ ಜೀವನಗಳನ್ನು ದುಃಸ್ಥಿತಿಗೆ ತಂದಿದೆ. ತಮ್ಮ ಮಕ್ಕಳಿಗೆ ದುಬಾರಿ ಶಿಕ್ಷಣವನ್ನು ಕೊಡಲು ಹೆಣಗಾಡುತ್ತಿರುವಾಗ, ಉದ್ಯೋಗದ ಅವಕಾಶಗಳು ಇಲ್ಲದಿರುವ ಕಾರಣದಿಂದ ಇಡೀ ಕೃಷಿ ವಲಯವನ್ನು ಒಂದು ಅಸಹಾಯಕ ಸ್ಥಿತಿಗೆ ದೂಡಲಾಗಿದೆ. ಈ ಪರಿಸ್ಥಿತಿಗಳು ಪಂಜಾಬ್ ರಾಜ್ಯದಿಂದ ವಲಸೆಹೋಗುವ ಪ್ರಕ್ರಿಯೆಯನ್ನು ವೇಗಗೊಳಿಸಿವೆ.

ನವಉದಾರೀಕರಣದ ಈ ಸಮಯದಲ್ಲಿ ಕೃಷಿ ವಲಯಕ್ಕೆ ನೀಡುತ್ತಿದ್ದ ಸಬ್ಸಿಡಿಗಳನ್ನು ಮತ್ತು ರಿಯಾಯಿತಿಗಳನ್ನು ಹಿಂಪಡೆದುಕೊಂಡಿದ್ದನ್ನು ನಾವು ನೋಡಿದ್ದೇವೆ, ಅದರಲ್ಲೂ ಡಬ್ಲುಟಿಒ ರಚನೆಯಾದ ನಂತರ ಈ ಪ್ರಕ್ರಿಯೆ ಹೆಚ್ಚಿದೆ. ಹೆಚ್ಚಿನ ಬಂಡವಾಳ ಹೂಡಿಕೆಯ ಕೃಷಿ ಮತ್ತು ಜಾಗತೀಕರಣದ ಜೊತೆಗೆ ಸ್ವಾಭಾವಿಕವಾಗಿ ಹೊಂದಿಕೊಂಡಿರುವ ಅದರ ನೀತಿಗಳು, ಅದರೊಂದಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಪ್ರಭಾವದಿಂದ, ಬೆಳೆಗಳಿಗೆ ನ್ಯಾಯಯುತವಾದ ಬೆಲೆಯನ್ನು ರೈತರಿಗೆ ವ್ಯವಸ್ಥಿತವಾಗಿ ನಿರಾಕರಿಸಲಾಗಿದೆ. ಇದರಿಂದ ರೈತರ ನಿವ್ವಳ ಲಾಭ ಕುಸಿದು, ಅವರು ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಸಾಲದಲ್ಲಿ ಆದ ಹೆಚ್ಚಳಕ್ಕೆ ಪ್ರಮುಖ ಕಾರಣ ರೈತರ ನಿಜವಾದ ಆದಾಯದಲ್ಲಿ ಕುಸಿತವಾಗಿದ್ದು. ಇಂದು, ಪಂಜಾಬಿನ ಕೃಷಿ ವಲಯವು 1 ಲಕ್ಷ ಕೋಟಿಯ ಸಾಲವನ್ನು ಹೊಂದಿದೆ, ಅದು ಸರಾಸರಿ ಒಂದು ಕುಟುಂಬಕ್ಕೆ 10 ಲಕ್ಷ ರೂಪಾಯಿಗಳ ಸಾಲ ಎಂತಾಗುತ್ತದೆ. ಇದಕ್ಕೆ ತಗಲುವ ವಾರ್ಷಿಕ ಬಡ್ಡಿ, 1.25 ಲಕ್ಷ ರೂಪಾಯಿಗಳು. ಕೃಷಿ ಸಾಲವು ಅವರ ಆದಾಯಕ್ಕಿಂತ 200ರಿಂದ 250% ಹೆಚ್ಚಿದೆ. ಈ ಪರಿಸ್ಥಿತಿಯನ್ನು ದಿವಾಳಿ ಹಂತ ಎಂದು ಕರೆಯಲಾಗುತ್ತದೆ. ಹೆಚ್ಚಿನ ಸಂಖ್ಯೆಯ ಸಣ್ಣ ರೈತರು ತಮ್ಮ ಸಾಲಗಳ ಮೇಲಿನ ಬಡ್ಡಿಯನ್ನೂ ಕಟ್ಟಲು ಅಸಮರ್ಥರಾಗಿದ್ದಾರೆ. ಅದರ ಪರಿಣಾಮವಾಗಿ, ಸಾಲದ ಸುಳಿ ಮತ್ತು ಆತ್ಮಹತ್ಯೆಗಳು ಹೆಚ್ಚುತ್ತಿವೆ ಆದರೆ ಸರಕಾರದ ಅಂಕಿಅಂಶಗಳು ಆತ್ಮಹತ್ಯೆಗಳ ವಾಸ್ತವವನ್ನು ಮರೆಮಾಚುತ್ತಿವೆ.

ರಾಜಕೀಯ ಪಕ್ಷಗಳ ರಾಜಕೀಯ ಘೋಷಣೆಗಳಿಂದ ಅಥವಾ ಸರಕಾರದಿಂದ ಅಂಕಿಅಂಶಗಳನ್ನು ತಿರುಚುವುದರಿಂದ, ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳ ಘಟನೆಗಳು ನಿಲ್ಲುವುದಿಲ್ಲ. ಇದನ್ನು ನಿಲ್ಲಿಸಬೇಕಾದರೆ, ಕೃಷಿ ಬಿಕ್ಕಟ್ಟನ್ನು ಒಪ್ಪಿಕೊಳ್ಳುವುದು ಹಾಗೂ ಅದನ್ನು ಬಗೆಹರಿಸುವುದು ಮುಖ್ಯವಾಗಿದೆ. ಆತ್ಮಹತ್ಯೆಗಳಿಗೆ ಸಾಲವೇ ಪ್ರಮುಖ ಕಾರಣವಾಗಿರುವುದರಿಂದ, ರೈತರು ಮತ್ತು ಕೃಷಿ ಕಾರ್ಮಿಕರಿಗೆ ಸಾಲ ಪರಿಹಾರ ಅಥವಾ ಸಾಲ ಮನ್ನಾದ ಯೋಜನೆಗಳನ್ನು ಮತ್ತೆ ಪ್ರಾರಂಭಿಸಬೇಕಿದೆ. ಪಂಜಾಬಿನಲ್ಲಿ, ರೈತರ ಆತ್ಮಹತ್ಯೆಯ ಪ್ರಕರಣಗಳಲ್ಲಿ ಮುಕ್ಕಾಲು ಭಾಗ ಕುಟುಂಬಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯೇ ಆ ಕುಟುಂಬದ ಏಕೈಕ ಆದಾಯ ತರುವ ವ್ಯಕ್ತಿಯಾಗಿದ್ದಾನೆ ಹಾಗೂ ಕೃಷಿ ಕಾರ್ಮಿಕರ ವಿಷಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯು ಅರ್ಧದಷ್ಟು ಕುಟುಂಬಗಳಲ್ಲಿ ಆ ಮೃತ ವ್ಯಕ್ತಿಯೇ ಏಕೈಕ ಆದಾಯ ತರುವ ವ್ಯಕ್ತಿಯಾಗಿದ್ದರಿಂದ, ಸಾಲ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಆತ್ಮಹತ್ಯೆಗೆ ಶರಣಾದ ವ್ಯಕ್ತಿಗಳ ಕುಟುಂಬಕ್ಕೆ ಒಂದು ನ್ಯಾಯಯುತವಾದ ಪರಿಹಾರ ಒದಗಿಸಬೇಕು. ಕಳೆದ ಒಂದು ವರ್ಷದಿಂದ ಹೊಸ ಕೃಷಿ ಕಾನೂನುಗಳ ವಿರುದ್ಧ ಹೋರಾಡುತ್ತಿರುವ ರೈತರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆ ಇದೆ. ಈ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು (ಮುಂದಿನ ಸಂಸತ್ ಅಧಿವೇಶನದಲ್ಲಿ ಹಿಂತೆಗೆದುಕೊಳ್ಳುವುದಾಗಿ ಪ್ರಧಾನಿ ಘೋಷಿಸಿದ್ದಾರೆ) ಹಾಗೂ ಕನಿಷ್ಠ ಬೆಂಬಲ ಬೆಲೆಗೆ ಮಾತ್ರವಲ್ಲದೇ ಎಂಎಸ್‌ಪಿ ಘೋಷಿಸಿದ ಎಲ್ಲಾ 23 ಬೆಳೆಗಳಿಗೆ ಲಾಭದಾಯಕವಾದ ಬೆಲೆಗೆ ಖರೀದಿ ಮಾಡುವ ಕಾನೂನಾತ್ಮಕ ಗ್ಯಾರಂಟಿ ನೀಡಬೇಕು. ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಸರಕಾರಿ ಸಂಸ್ಥೆಗಳಲ್ಲಿ ನೀಡಬೇಕು.

ಸಂಬಂಧಿತ ಕೃಷಿ-ಹವಾಮಾನ ವಲಯಗಳಲ್ಲಿ ಸೂಕ್ತ ಬೆಳೆಗಳನ್ನು ಗುರುತಿಸುವುದು ಮತ್ತು ಅಭಿವೃದ್ದಿಪಡಿಸುವುದು ಹಾಗೂ ಅವುಗಳ ಮೌಲ್ಯ ವರ್ಧನೆ ಮಾಡುವುದು ಕೃಷಿ ಆದಾಯ ಹೆಚ್ಚುವಂತೆ ಮಾಡಬಹುದು. ಜನರನ್ನು ಹಳ್ಳಿಗಳಿಂದ ನಗರಕ್ಕೆ ಸ್ಥಳಾಂತರಿಸುವ ಬದಲಿಗೆ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಆಧಾರಿತ ಘಟಕಗಳನ್ನು ಸ್ಥಾಪಿಸಬೇಕು. ಭಾರತದ ಈ ದೊಡ್ಡ ಜನಸಂಖ್ಯೆಯನ್ನು ಕೃಷಿಯಲ್ಲಿ ಮಾತ್ರ ತೊಡಗಿಸಬಹುದಾಗಿದೆ ಏಕೆಂದರೆ ಇತರ ವಲಯಗಳ ಆರ್ಥಿಕತೆಯಲ್ಲಿ ಇಡೀ ಜನಸಮೂಹವನ್ನು ತೊಡಗಿಸಲು ಸಾಧ್ಯವಿಲ್ಲ. ಕೃಷಿ ವಲಯವನ್ನು ಲಾಭದಾಯಕವಾಗಿ ಮಾಡುವುದು ತುರ್ತು ಅಗತ್ಯವಾಗಿದೆ ಹಾಗೂ ಕಾರ್ಮಿಕ ಶಕ್ತಿಗೆ ಅವರ ಮನೆಬಾಗಿಲುಗಳ ಬಳಿಯೇ ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದೂ ಅಗತ್ಯವಾಗಿದೆ. ಈ ಹೊತ್ತಿನಲ್ಲಿ ಕೃಷಿಗೆ ಅಂಟಿಕೊಂಡಿರುವ ಆತ್ಮಹತ್ಯೆಯ ಕಳಂಕವನ್ನು ಕೇವಲ ಕಾಗದದ ಮೇಲಷ್ಟೇ ಅಲ್ಲದೇ ವಾಸ್ತವದಲ್ಲೂ ನಿರ್ಮೂಲನೆ ಮಾಡಿ ಅದರೊಂದಿಗೆ ಇಡೀ ಶ್ರಮಿಕ ವರ್ಗಕ್ಕೆ ಉತ್ತಮ ಗುಣಮಟ್ಟದ ಜೀವನವನ್ನು ಒದಗಿಸಬೇಕಿದೆ.

(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಸುಖಪಾಲ್ ಸಿಂಗ್

ಸುಖಪಾಲ್ ಸಿಂಗ್
ಲೇಖಕರು ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಮುಖ್ಯ ಆರ್ಥಿಕತಜ್ಞರು.


ಇದನ್ನೂ ಓದಿ: ರೈತ ಹೋರಾಟಕ್ಕೆ ಒಂದು ವರ್ಷ: ಗಡಿಗಳಲ್ಲಿ ಹೆಚ್ಚಿದ ರೈತರ ಸಂಖ್ಯೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...