ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ 1,000 ರೂಪಾಯಿ ದೇಣಿಗೆ ನೀಡಲು ನಿರಾಕರಿಸಿದ್ದರಿಂದ ಆರ್‌ಎಸ್‌ಎಸ್ ಸಂಸ್ಥೆ ನಡೆಸುವ ಶಾಲೆಯಿಂದ ನನ್ನನ್ನು ತೆಗೆದುಹಾಕಲಾಗಿದೆ ಎಂದು ಶಿಕ್ಷಕರೊಬ್ಬರು ಆರೋಪಿಸಿರುವ ಘಟನೆ ಉತ್ತರ ಪ್ರದೇಶದ ಬಲಿಯಾದಲ್ಲಿ ನಡೆದಿದೆ.
ಜಗದೀಶ್‌ಪುರದ ಸ್ಥಳೀಯ ಪ್ರದೇಶಲ್ಲಿರುವ ಸರಸ್ವತಿ ಶಿಶು ಮಂದಿರದಲ್ಲಿ ಆಚಾರ್ಯ (ಶಿಕ್ಷಕ) ಆಗಿ ಕೆಲಸ ಮಾಡುತ್ತಿದ್ದ ಯಶ್ವಂತ್ ಪ್ರತಾಪ್ ಸಿಂಗ್ ಈ ಆರೋಪ ಮಾಡಿದ್ದಾರೆ. ಶಾಲೆಯು ತನ್ನ ಎಂಟು ತಿಂಗಳ ಸಂಬಳವನ್ನು ನೀಡದೆ ತಡೆಹಿಡಿದಿದೆ ಎಂದು ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ರಶೀದಿ ಪುಸ್ತಕವನ್ನು ನೀಡಲಾಗಿದೆ. ಇದಕ್ಕಾಗಿ ಸಂಗ್ರಹಿಸಿದ ಸುಮಾರು 80,000 ರೂಗಳನ್ನು ಜಮಾ ಮಾಡಿದ್ದೇನೆ ಎಂದು ಯಶ್ವಂತ್ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಮತದಾನ ಮುಂದೂಡಲು, ರದ್ದುಗೊಳಿಸಲು, ಮರು ನಿಗದಿಗೊಳಿಸಲು ನಮಗೆ ಅಧಿಕಾರವಿದೆ: ಆಂಧ್ರ ಚುನಾವಣಾ ಆಯುಕ್ತ
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಜಿಲ್ಲಾ ಪ್ರಚಾರಕ ಸತ್ಯೇಂದ್ರ ಅವರು ಶಾಲೆಗೆ ಬಂದಾಗ ದೇವಾಲಯಕ್ಕೆ 1,000 ರೂ. ದೇಣಿಗೆ ನೀಡುವಂತೆ ನನ್ನ ಮೇಲೆ ಒತ್ತಡ ಹೇರಲಾಗಿತ್ತು ಎಂದು ಸಿಂಗ್ ಆರೋಪಿಸಿದ್ದಾರೆ.
ದೇಣಿಗೆ ನೀಡಲು ನಿರಾಕರಿಸಿದಾಗ, ಶಾಲೆಯ ಅಧಿಕಾರಿಗಳು ನನ್ನ ಬಳಿ ಕೆಟ್ಟದಾಗಿ ವರ್ತಿಸಿದ್ದಾರೆ ಮತ್ತು ನನ್ನನ್ನು ಶಾಲೆಯಿಂದ ತೆಗೆದುಹಾಕಿದ್ದಾರೆ. ಈ ಘಟನೆಯ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ಲಿಖಿತ ದೂರು ನೀಡಿದ್ದೇನೆ. ನನಗೆ ನ್ಯಾಯ ಸಿಗದಿದ್ದರೆ ನ್ಯಾಯಾಲಯಕ್ಕೆ ಹೋಗುವುದಾಗಿ ಯಶ್ವಂತ್ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಎಲ್ಲಾ ಉದ್ಯೋಗಿಗಳಿಗೆ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಹಣ ಸಂಗ್ರಹಿಸಲು ರಶೀದಿ ಪುಸ್ತಕಗಳನ್ನು ನೀಡಲಾಗಿದೆ ಎಂದು ಶಾಲೆಯ ಪ್ರಾಂಶುಪಾಲ ಧೀರೇಂದ್ರ ಹೇಳಿದ್ದಾರೆ.
“ಸಿಂಗ್ ಮೂರು ಸ್ವೀಕೃತಿ ಪುಸ್ತಕಗಳನ್ನು ಸ್ವಇಚ್ಛೆಯಿಂದ ತೆಗೆದುಕೊಂಡರು. ಆದರೆ ನಂತರ ಅವುಗಳನ್ನು ಠೇವಣಿ ಮಾಡಲಿಲ್ಲ. ಅವರೇ ಸ್ವತಃ ರಾಜೀನಾಮೆ ನೀಡಿದ್ದಾರೆ” ಎಂದು ಶಾಲಾ ಪ್ರಾಂಶುಪಾಲರು ಶಿಕ್ಷಕ ಮಾಡಿರುವ ಆರೋಪಗಳನ್ನು ನಿರಾಕರಿಸಿದ್ದಾರೆ.
ಆರ್‌ಎಸ್‌ಎಸ್ ಜಿಲ್ಲಾ ಪ್ರಚಾರಕ ಸತ್ಯೇಂದ್ರ ಕೂಡ ಹಣ ಸಂಗ್ರಹಿಸಲು ಯಾರ ಮೇಲೂ ಒತ್ತಡ ಹೇರುತ್ತಿಲ್ಲ ಎಂದರು. ಸಿಂಗ್ ಹೆಚ್ಚು ಅಶಿಸ್ತಿನಿಂದ ಇದ್ದಾರೆ. ಅವರು ಪಾಠ ಮಾಡುವ ಆಸಕ್ತಿ ಹೊಂದಿಲ್ಲ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಅಂತರಾಷ್ಟ್ರೀಯ ಪುರುಷರ ದಿನ ಆಚರಿಸಬೇಕು: ಹೇಳಿಕೆ ನೀಡಿ ಟೀಕೆಗೊಳಗಾದ ಬಿಜೆಪಿ ಸಂಸದೆ!


