Homeಮುಖಪುಟಬುದ್ಧನ ಹೆಜ್ಜೆ ಗುರುತುಗಳು; ತಿಚ್ ನ್ಹಾತ್ ಹಾನ್ ಬರಹದ ಅನುವಾದ

ಬುದ್ಧನ ಹೆಜ್ಜೆ ಗುರುತುಗಳು; ತಿಚ್ ನ್ಹಾತ್ ಹಾನ್ ಬರಹದ ಅನುವಾದ

- Advertisement -
- Advertisement -

1968ರಲ್ಲಿ ಬೌದ್ಧರ ಶಾಂತಿ ಮಾತುಕತೆಗಾಗಿ ನಾನು ಪ್ಯಾರಿಸ್‌ಗೆ ಹೋಗುವ ಸಂದರ್ಭದಲ್ಲಿ ಭಾರತಕ್ಕೆ ಬಂದಿದ್ದೆ. ಬುದ್ಧ ಜ್ಞಾನೋದಯ ಪಡೆದ ಸ್ಥಳಕ್ಕೆ ನಾನು ಬೇಟಿ ನೀಡುವ ಅವಕಾಶವನ್ನು ಪಡೆದುಕೊಂಡೆ. ಅದಕ್ಕಾಗಿ ನವದೆಹಲಿಯಿಂದ ಪಾಟ್ನಾಗೆ ವಿಮಾನದಲ್ಲಿ ಹೋದೆ. ಪಾಟ್ನಾದಿಂದ ಬುದ್ಧನ ಜ್ಞಾನೋದಯದ ಸ್ಥಳವಾದ ಬೋಧ ಗಯಾಕ್ಕೆ ನಾನು ಹೋಗಬೇಕಿತ್ತು. ಗಂಗಾನದಿಯ ಬಯಲಿನಲ್ಲಿ ಬುದ್ಧನ ಹೆಜ್ಜೆ ಗುರುತುಗಳ ಮೇಲೆ ಆ ವಿಮಾನವು ಹಾದು ಹೋಯಿತು.

ಬುದ್ಧ ತಾನು ಬದುಕಿದ್ದ ಕಾಲದಲ್ಲಿ ಇಂದಿನ ಕಾರು, ವಿಮಾನ ಅಥವಾ ರೈಲುಗಳಿರಲಿಲ್ಲ. ಆತ ಕಾಲ್ನಡಿಗೆಯಲ್ಲಿಯೇ ಸುತ್ತಾಡಿದವನು. ಅನೇಕ ಪಟ್ಟಣಗಳಿಗೆ ನಡೆದುಕೊಂಡು ಹೋದವನು. ಒಮ್ಮೊಮ್ಮೆ ಆತ ದೆಹಲಿಯವರೆಗಿನ ದೂರದಷ್ಟೂ ನಡೆಯುತ್ತಿದ್ದ. ಆತ ಕಾಲ್ನಡಿಗೆಯಲ್ಲಿಯೇ ಹದಿನೈದಕ್ಕೂ ಹೆಚ್ಚು ಸಾಮ್ರಜ್ಯಗಳಿಗೆ ಭೇಟಿ ನೀಡಿದ್ದ. ಇದನ್ನು ತಿಳಿದಿದ್ದ ನನಗೆ ವಿಮಾನದ ಮೂಲಕ ನೋಡಿದಾಗ ಗಂಗಾ ನದಿಯ ಬಯಲಿನಲ್ಲಿ ಎಲ್ಲೆಲ್ಲೂ ಆತನ ಹೆಜ್ಜೆ ಗುರುತುಗಳನ್ನು ಕಂಡವು. ಬುದ್ಧನ ಹೆಜ್ಜೆ ಗುರುತುಗಳು- ಐಕ್ಯತೆ, ಸ್ವಾತಂತ್ರ್ಯ ಮತ್ತು ಶಾಂತಿ ಹಾಗೂ ಎಲ್ಲೆಡೆಯೂ ಸಂತೋಷವನ್ನು ತಂದಿದ್ದವು. ಹದಿನೈದು ನಿಮಿಷಗಳ ಕಾಲ ಬುದ್ಧನನ್ನು ನನ್ನ ಮನಃಪಟಲದ ಮೇಲೆ ಚಿತ್ರಿಸಿಕೊಳ್ಳುವುದು ಸಂತೋಷವೆನಿಸಿತು.

ಬುದ್ಧನ ನಡಿಗೆ, ಆತನ ಜ್ಞಾನೋದಯ, ಆತನ ಶಾಂತತೆ, ಆತನ ಪ್ರೇಮ-ಎಲ್ಲವನ್ನು ಕೂಡ ನನ್ನ ಮನಸ್ಸಿನಲ್ಲಿ ಚಿತ್ರಿಸಿಕೊಂಡೆ. ನಾನು ವಿಮಾನದಲ್ಲಿ ಕುಳಿತುಕೊಂಡು ಕೆಳಗೆ ನೋಡುವುದರ ಮೂಲಕ ಆ ಕ್ಷಣದಲ್ಲಿ ನನ್ನೊಂದಿಗೆ ಬುದ್ಧ ಇರುವುದನ್ನು ಅನುಭವಕ್ಕೆ ತಂದುಕೊಂಡೆ. ಕೆಳಗೆ ನೋಡುತ್ತಿರುವಾಗ ಬುದ್ಧನ ಹೆಜ್ಜೆ ಗುರುತುಗಳನ್ನು ಜಗತ್ತಿನ ಬೇರೆ ಭಾಗಗಳಲ್ಲಿ ನನ್ನ ನಡಿಗೆಯ ಧ್ಯಾನದೊಂದಿಗೆ ಮೂಡಿಸುವ ಪ್ರತಿಜ್ಞೆ ಮಾಡಿದೆ. ನಾವು ಯುರೋಪ್, ಅಮೇರಿಕ, ಆಸ್ಟ್ರೇಲಿಯ, ಆಫ್ರಿಕಾಗಳಲ್ಲಿ ನಡೆದುಕೊಂಡು ಹೋಗಬಹುದು. ಜಗತ್ತಿನ ಈ ಭಾಗಗಳಲ್ಲಿಯೂ ಬುದ್ಧನ ಶಾಂತತೆ, ಐಕೈತೆ, ಸಂತೋಷ ಮತ್ತು ಸ್ವಾತಂತ್ರ್ಯಗಳನ್ನು-ಆತನ ಹೆಜ್ಜೆ ಗುರುತಿನ ಮೂಲಕವೇ ಮೂಡಿಸಬೇಕಿದೆ.

ಹೀಗಾಗಿ ಬುದ್ಧ ಗಂಗಾನದಿಯ ಬಯಲಿನಲ್ಲಿ ಮಾತ್ರವಲ್ಲದೆ ಎಲ್ಲ ಕಡೆಯು ಇದ್ದಾನೆ ಎನ್ನಿಸಿತು. ಆ ಸಮಯದಲ್ಲಿ ನನಗೆ ಗ್ರಿದ್ರಕೂಟ ಪರ್ವತವನ್ನು ಏರುವ ಅವಕಾಶವಿತ್ತು. ಮಗದ ಸಾಮ್ರಾಜ್ಯದ ರಾಜಧಾನಿಯಾದ ರಾಜಗೃಹದ ಸಮೀಪದಲ್ಲಿದ್ದ ಈ ಪರ್ವತದಲ್ಲಿ ಬುದ್ಧ ತಂಗುತ್ತಿದ್ದ. ಆ ರಾಜ್ಯವನ್ನು ಬಿಂಬಿಸಾರ ಆಳಿದ್ದ.
ನನ್ನೊಂದಿಗೆ ಅನೇಕ ಸ್ನೇಹಿತರು, ಸಂನ್ಯಾಸಿಗಳು, ಸಂನ್ಯಾಸಿನಿಯರು ಮತ್ತು ಸಾಮಾನ್ಯ ಜನರು ಗ್ರಿದ್ರಕೂಟ ಬೆಟ್ಟವನ್ನು ಹತ್ತಿದ್ದರು. ಅಲ್ಲಿ ನಮ್ಮೊಂದಿಗೆ ಮಹಾಗೋಸಾನಂದ ಎಂಬ ಸಂನ್ಯಾಸಿಯು ಇದ್ದ. ಆತ ಇನ್ನೂ ಯುವಕನಾಗಿದ್ದ. ನಂತರದಲ್ಲಿ ಆತ ಕಾಂಬೋಡಿಯಾದ ಕುಟುಂಬ ಒಂದರ ಅಧಿಪತಿಯಾದ. ನಾವು ಗ್ರಿದ್ರಬೆಟ್ಟವನ್ನು ನಿಧಾನವಾಗಿ ಮನೋಮಗ್ನತೆಯಿಂದ ಹತ್ತಿದ್ದೆವು. ಅದರ ತುದಿಯನ್ನು ನಾವು ತಲುಪಿದಾಗ ಅಲ್ಲಿ ಬುದ್ಧ ಕುಳಿತುಕೊಳ್ಳುತ್ತಿದ್ದ ಜಾಗದ ಮುಂದೆಯೇ ನಾವು ಕೂಡ ಕುಳಿತುಕೊಂಡೆವು. ಬುದ್ಧ ನೋಡುತ್ತಿದ್ದ ಸುಂದರವಾದ ಸೂರ್ಯಾಸ್ತವನ್ನು ನಾವು ನೋಡಿದೆವು. ಅಲ್ಲಿ ಕುಳಿತುಕೊಂಡು ಮನೋಮಗ್ನತೆಯಿಂದ ಧ್ಯಾನಿಸಿದೆವು.

ಬುದ್ಧ ಆ ಬೆಟ್ಟದ ಮೇಲೆ ಹತ್ತಿಕೊಂಡು ಹೋಗಲು ಮತ್ತು ಇಳಿಯಲು ಸುಲಭವಾಗಲೆಂದು ರಾಜ ಬಿಂಬಿಸಾರನು ಕಲ್ಲಿನ ಮೆಟ್ಟಿಲುಗಳನ್ನು ಹಾಕಿಸಿದ್ದ. ಆ ಕಲ್ಲಿನ ಮೆಟ್ಟಿಲುಗಳು ಇಂದಿಗೂ ಇವೆ. ನೀವು ಅಲ್ಲಿಗೆ ಹೋದರೆ ಬುದ್ಧ ತನ್ನ ಹೆಜ್ಜೆಗಳನ್ನು ಇಟ್ಟಿದ್ದ ಆ ಮೆಟ್ಟಿಲುಗಳ ಮೇಲೆ ನಡೆದುಕೊಂಡು ಹೋಗಬಹುದು.

ಎರಡು ನಿಮಿಷಗಳ ಶಾಂತಿ

1997ರಲ್ಲಿ ನಾನು ಭಾರತದಲ್ಲಿದ್ದಾಗ ಆಗಿನ ಉಪರಾಷ್ಟಪತಿಗಳಾದ ಕೆ.ಆರ್. ನಾರಯಣ್ ಅವರನ್ನು ಭೇಟಿ ಮಾಡುವ ಅವಕಾಶವು ಒದಗಿತು. ನಮ್ಮ ಚರ್ಚೆಯು ಸಂಸತ್ತಿನಲ್ಲಿ ಬಜೆಟ್ ಅಧಿವೇಶನದ ದಿನದಂದು ನಡೆಯಿತು. ಇಷ್ಟೊಂದು ಕೆಲಸದ ನಡುವೆಯು ಕೆ.ಆರ್. ನಾರಾಯಣನ್‌ರವರು ನನ್ನನ್ನು ಭೇಟಿಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಅವರಿಗೆ ಧನ್ಯವಾದ ಸಲ್ಲಿಸಿದೆ. ಒಬ್ಬ ಆಧ್ಯಾತ್ಮಿಕ ವ್ಯಕ್ತಿಯನ್ನು ಭೇಟಿ ಮಾಡುವುದು ತನಗೆ ಸಂತೋಷದ ವಿಷಯವಾಗಿರುತ್ತದೆ ಎಂದವರು ಹೇಳಿದರು. ನಾವು ಒಟ್ಟಿಗೆ ಕುಳಿತುಕೊಂಡೆವು. ಸಂಸತ್ತಿನ ಸದಸ್ಯರು ಮನೋಮಗ್ನತೆಯ ಅಭ್ಯಾಸವನ್ನು, ಆಳವಾಗಿ ಆಲಿಸುವಿಕೆಯನ್ನು ಮತ್ತು ಅಧಿವೇಶನದಲ್ಲಿ ಪ್ರೀತಿಯಿಂದ ಮಾತನಾಡುವುದರ ಬಗ್ಗೆ ಚರ್ಚಿಸಿದೆವು.

ಪ್ರತಿ ಅಧಿವೇಶನ ಆರಂಭವಾಗುವ ಪೂರ್ವದಲ್ಲಿ ಮನೋಮಗ್ನತೆಯ ಅಭ್ಯಾಸ ನಡೆಸುವುದು ಒಳ್ಳೆಯದು ಎಂದು ನಾನು ಸೂಚಿಸಿದೆ. ನಾನು ಕೆಲವು ಸಾಲುಗಳನ್ನು ಅಲ್ಲಿ ಓದಿದೆ. ಆ ಸಂದರ್ಭದಲ್ಲಿ ನಾನು “ಆತ್ಮೀಯ ಸಹಚರರೇ, ನಿಮ್ಮನ್ನು ಚುನಾಯಿಸಿದ ಜನರು ನಿಮ್ಮಿಂದ ಬಹಳಷ್ಟು ನಿರೀಕ್ಷಿಸುತ್ತಾರೆ. ಅದರಲ್ಲಿಯೂ ಮುಖ್ಯವಾಗಿ ಜನಪ್ರತಿನಿಧಿಗಳು ಜನರೊಂದಿಗೆ ಗೌರವದ ಮಾತುಗಳನ್ನು ಆಡುವ ಮತ್ತು ಜನರ ನೋವುಗಳನ್ನು ಕೇಳಿಸಿಕೊಳ್ಳುವ, ಅವರಿಗೆ ಸೂಕ್ತ ಪರಿಹಾರಗಳನ್ನು ಒದಗಿಸಿ ಕೊಡುವಂತೆ ಬಯಸುತ್ತಾರೆ. ದೇಶದ ಸಂಸತ್ತು ಜನರ ಉಪಯೋಗಕ್ಕಾಗಿ ಅತ್ಯುತ್ತಮ ನಿರ್ಣಯವನ್ನು ತೆಗೆದುಕೊಳ್ಳಬೇಕಾಗುತ್ತದೆ. ಚರ್ಚೆಯ ಸಂದರ್ಭದಲ್ಲಿ ಘರ್ಷಣೆಯಾಗುವ ಅಥವಾ ಪ್ರತಿನಿಧಿಗಳು ಅವಮಾನಿಸುವ ಅಥವಾ ಬೇರೆಯವರ ನಿಲುವುಗಳನ್ನು ನಿರಾಕರಿಸುವ
ಘಟನೆಗಳು ಜರುಗುತ್ತಿರುತ್ತವೆ. ಅಂತಹ ಸಂದರ್ಭದಲ್ಲಿ ಒಂದು ಗಂಟೆಯ ಧ್ವನಿಯನ್ನು ಹೊರಡಿಸಿ ಎಲ್ಲರಿಗೂ ತಮ್ಮ ತಮ್ಮ ವಾದ ವಿವಾದಗಳನ್ನು ನಿಲ್ಲಿಸಿ ಎರಡು ನಿಮಿಷಗಳ ಕಾಲ ಮೌನದಿಂದಿರುವ ಸಲಹೆಯೊಂದನ್ನು ನಾನು ನೀಡಿದೆ. ಈ ಅವಧಿಯಲ್ಲಿ ಎಲ್ಲ ಪ್ರತಿನಿಧಿಗಳು ತಮ್ಮನ್ನು ತಾವು ಶಾಂತಗೊಳಿಸಿಕೊಳ್ಳಲು ಮನೋಮಗ್ನತೆಯ ಅಭ್ಯಾಸದಲ್ಲಿ ತೊಡಗಿರಬೇಕು” ಎಂದು ಹೇಳಿದೆ.

ಕೆ.ಆರ್. ನಾರಯಣ್

ನಾವು ಎರಡು ನಿಮಿಷಗಳ ಮೌನವನ್ನು ಆಚರಿಸೋಣ ಎಂದು ಹೇಳಿದರೆ ಸಾಮಾನ್ಯವಾಗಿ ಏನು ಮಾಡಬೇಕೆಂಬುದರ ಬಗ್ಗೆ ಜನರಿಗೆ ಗೊತ್ತಿರುವುದಿಲ್ಲ. ಆದರೆ ನಮ್ಮಲ್ಲಿ ಮನೋಮಗ್ನತೆಯನ್ನು ಆಭ್ಯಾಸ ಮಾಡುವವರಿಗೆ ಏನು ಮಾಡಬೇಕೆಂಬುದು ಖಚಿತವಾಗಿ ತಿಳಿದಿರುತ್ತದೆ; ನಮಗೆ ಉಸಿರಾಡುವುದು ಮತ್ತು ನಮ್ಮ ಗಮನವನ್ನು ಉಸಿರಾಟದ ಮೇಲೆ ಕೇಂದ್ರಿಕರಿಸುವುದು ಹೇಗೆ ಎಂಬುದು ಗೊತ್ತಿರುತ್ತದೆ. ನಮ್ಮ ದೇಹ ಮತ್ತು ಮನಸ್ಸು ರಿಲಾಕ್ಸ್ ಮಾಡಿಕೊಂಡು ಅಲ್ಲಿ ಕಾರುಣ್ಯವು ಹುಟ್ಟುವಂತಾಗುತ್ತದೆ. ಒಂದು ಕ್ಷಣ ಮೌನವಾಗಿ ಇರುವುದಕ್ಕೆ ಬೆಲೆ ತೆರಬೇಕಾಗಿಲ್ಲ. ಅದಕ್ಕೆ ಯಾವ ಬಜೆಟ್‌ನ ಅಗತ್ಯವೂ ಇರುವುದಿಲ್ಲ. ಒಂದು ಕ್ಷಣದ ಮೌನವು ಶಾಂತಿ, ಅರಿವು ಮತ್ತು ಒಳನೋಟವನ್ನು ನೀಡುತ್ತದೆ. ಇದನ್ನು ಯಾರು ಬೇಕಾದರೂ ಮಾಡಬಹುದು. ಇದಕ್ಕೆ ನೀವು ಬೌದ್ಧರಾಗಿರಲೇಬೇಕು ಎಂದೇನಿಲ್ಲ.

ಕೆ.ಆರ್. ನಾರಾಯಣನ್‌ರವರು ಅತ್ಯಂತ ಜಾಗೃತಶೀಲ ವ್ಯಕ್ತಿಯಾಗಿದ್ದರು. ಭಾರತದ ಸಂಸತ್ತಿನಲ್ಲಿ ಈ ವಿಷಯವನ್ನು ಕುರಿತು ಮಾತನಾಡಲು ನನ್ನನ್ನು ಆಹ್ವಾನಿಸಿದ್ದರು. ಹತ್ತು ದಿನದ ನಂತರದಲ್ಲಿ ನಾನು ಚೆನ್ನೈನಲ್ಲಿ ಧ್ಯಾನ ಶಿಬಿರವನ್ನು ನಡೆಸಿದೆ. ಭಾರತ ಸರ್ಕಾರವು ’ಕಮಿಟಿ ಆನ್ ಎಥಿಕ್ಸ್’ ಅನ್ನು ಸ್ಥಾಪಿಸಿದ್ದರ ಬಗ್ಗೆ ಪತ್ರಿಕೆಯಲ್ಲಿ ವರದಿಯಾಗಿರುವುದನ್ನು ನನಗೆ ಯಾರೋ ತೋರಿಸಿದರು. ಸಂಸತ್ತಿನಲ್ಲಿ ಸಂವಹನದ ಗುಣಮಟ್ಟವನ್ನು ಸುಧಾರಿಸುವ ಉದ್ದೇಶ ಅದರಲ್ಲಿತ್ತು.

ಇಂತಹ ಅಹಿಂಸೆಯ ಅಭ್ಯಾಸವು ಯಾವ ದೇಶದಲ್ಲಿ ಬೇಕಾದರೂ ಸಾಧ್ಯವಿರುತ್ತದೆ. ಸರ್ಕಾರ ಅನುಭವಿಸುವ ಒತ್ತಡವನ್ನು ನೀಗಿಸಿಕೊಳ್ಳುವ ಅಗತ್ಯವಿರುತ್ತದೆ. ನಾವು ಅಸಹಾಯಕರಲ್ಲ. ಅತ್ಯುತ್ತಮವಾದುದನ್ನು ನಾವು ಮಾಡಬೇಕಾಗುತ್ತದೆ; ನಮ್ಮೊಳಗೇ ನಡೆಯುವ ಯುದ್ಧವನ್ನು ತಡೆಯಬೇಕಾಗುತ್ತದೆ. ಇದು ಶಾಂತಿಯ ಅಭ್ಯಾಸವಾಗಿದ್ದು ಪ್ರತಿ ಕ್ಷಣದಲ್ಲಿಯೂ ಇದನ್ನು ಆಚರಿಸಬಹುದು. ನಾವು ನಮ್ಮೊಳಗೆ ಶಾಂತಿಯನ್ನು ಕಂಡುಕೊಳ್ಳದೇ ಹೋದರೆ, ನಮ್ಮೊಳಗೆಯೇ ಯುದ್ಧವು ಪ್ರಾರಂಭವಾಗುತ್ತದೆ.

ಕಾರುಣ್ಯದ ಹನಿಗಳು

ನ್ಯೂಯಾರ್ಕ್ ನಗರದಲ್ಲಿ ಅವಳಿ ಗೋಪುರಗಳನ್ನು ದ್ವಂಸಗೊಳಿಸಿದ ಸುದ್ದಿ ತಿಳಿದಾಗ ನಾನು ಸೆಪ್ಟಂಬರ್ 11, 2001ರಂದು ಕ್ಯಾಲಿಫೋರ್ನಿಯಾದಲ್ಲಿ ಇದ್ದೆ. ಆಗ ಎಲ್ಲೆಡೆಯು ದೊಡ್ಡ ಪ್ರಮಾಣದಲ್ಲಿ ಆಕ್ರೋಶ ಮತ್ತು ಭಯವೇ ಆವರಿಸಿಕೊಂಡಿತ್ತು. ಒಂದು ಇಡೀ ದೇಶವೇ ದೊಡ್ಡ ಆಕ್ರೋಶ ಮತ್ತು ಭಯವನ್ನು ಅನುಭವಿಸುತ್ತಿರುವಾಗ ವಿನಾಶದ ಕಡೆಗೆ ಹೆಜ್ಜೆ ಹಾಕುವಂತಾಗಬಾರದು. ಇಂತಹ ಸಂದರ್ಭದಲ್ಲಿ ಯುದ್ಧವನ್ನು ಆರಂಭಿಸುವುದು ಸುಲಭ. ಆದರೆ ಇದೇ ಸಂದರ್ಭದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು. ಪರಿಸ್ಥಿತಿಯು ಮತ್ತಷ್ಟು ಹದಗೆಡದಂತೆ ತಪ್ಪ್ಪಿಸಬೇಕಾಗುತ್ತದೆ.

ಮೂರು ದಿನಗಳ ನಂತರ ನಾನು ಬರ್ಕಲಿಯಲ್ಲಿ ನಾಲ್ಕು ಸಾವಿರ ಜನರಿಗೆ ಸಾರ್ವಜನಿಕವಾಗಿ ಒಂದು ಉಪನ್ಯಾಸವನ್ನು ನೀಡಿದೆ. ನಾವು ಎಂಬತ್ತು ಜನ ಸಂನ್ಯಾಸಿಗಳು ಮತ್ತು ಸಂನ್ಯಾಸಿಯರು ಕೇಸರಿ ಬಣ್ಣದ ನೀಳ ಉಡುಪುಗಳನ್ನು ತೊಟ್ಟು ಮಾತನಾಡಿದೆವು. ನಮ್ಮ ಭಾವನೆಯು ಸ್ಪಷ್ಟವಾಯಿತು. ಇದೊಂದು ರಾಷ್ಟೀಯ ಭಾವನೆಯಾಗಿತ್ತು. ಆಕ್ರೋಶದಿಂದ ಉಂಟಾಗುವ ಭಯ ಮತ್ತು ಆತಂಕವನ್ನು ನಿವಾರಿಸಬೇಕಾಗುತ್ತದೆ. ಕಾರುಣ್ಯ ಮತ್ತು ಭ್ರಾತೃತ್ವಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಅಗತ್ಯವಿದೆ. ಭಯವನ್ನು ಶಾಂತಿ ಮತ್ತು ಶಾಂತಚಿತ್ತತೆಯಿಂದ ಎದುರುಗೊಳ್ಳುವುದು ಮುಖ್ಯವಾಗಿರುತ್ತದೆ.

ನಾವು ಮೌನದ ಒಂದು ಅಧಿವೇಶನವನ್ನು ಪ್ರಾಯೋಗಿಕವಾಗಿ ಆಯೋಜಿಸಿದೆವು. ಮನೋಮಗ್ನತೆಯಿಂದ ಕೂಡಿದ ಉಸಿರಾಟದ ಅಭ್ಯಾಸವನ್ನು ಮಾಡಿ ತೋರಿಸಿದೆವು. ಇದರಿಂದ ದೇಹ ಮತ್ತು ಮನಸ್ಸು ಒಂದಾಗಿ ಭಯದ ಇರುವಿಕೆಯನ್ನು ಆಲಂಗಿಸಿಕೊಂಡಂತಾಗುತ್ತದೆ. ನಾನು ಶಾಂತಿಗಾಗಿ ಒಂದು ಪ್ರಾರ್ಥನೆಯನ್ನು ನಿವೇದಿಸಿದೆ. ದ್ವೇಷಕ್ಕೆ ಪ್ರತಿಯಾಗಿ ದ್ವೇಷವನ್ನೇ ಕಾರುವುದರಿಂದ ಮತ್ತಷ್ಟು ದ್ವೇಷ ದ್ವಿಗುಣಗೊಳ್ಳುತ್ತಾ ಹೋಗುತ್ತದೆ. ಕಾರುಣ್ಯವು ದ್ವೇಷ ಮತ್ತು ಆಕ್ರೋಶವನ್ನು ಪರಿವರ್ತಿಸಬಲ್ಲದು. ನಾವು
ಅರ್ಥಮಾಡಿಕೊಂಡರಷ್ಟೇ ಕಾರುಣ್ಯವು ಹುಟ್ಟಿಕೊಳ್ಳುತ್ತದೆ. ನಮ್ಮ ಹೃದಯ ಮತ್ತು ಮನಸ್ಸುಗಳಲ್ಲಿ ಕಾರುಣ್ಯದ ಹನಿಗಳು ಜಿನಿಗಿದರೆ ಒಂದು ಪರಿಸ್ಥಿತಿಯನ್ನು ಮೂರ್ತವಾಗಿ ಹತೋಟಿಗೆ ತಂದುಕೊಳ್ಳಲು ಸಾಧ್ಯವಾಗುತ್ತದೆ.

ನಮ್ಮ ವೈಯಕ್ತಿಕ ಪ್ರಜ್ಞೆಯು ಸಮಷ್ಟಿ ಪ್ರಜ್ಞೆಯಾಗಿ ಪ್ರತಿಫಲಿಸುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರು ಕೂಡ ನಮ್ಮ ಆಕ್ರೋಶವನ್ನು ಪ್ರಶಾಂತಗೊಳಿಸಲು ಈಗಲೇ ಧ್ಯಾನವನ್ನು ಆರಂಭಿಸಬಹುದು; ಈ ಜಗದೊಳಗಿರುವ ದ್ವೇಷ ಹಾಗೂ ಹಿಂಸೆಯ ಬೇರುಗಳನ್ನು ಆಳವಾಗಿ ನೋಡುವಂತಾಗಬೇಕು. ನಮ್ಮಲ್ಲಿ ಪ್ರತಿಯೊಬ್ಬರು ಕೂಡ ಇಲ್ಲಿಯವರೆಗೆ ಕೇಳಿಸಿಕೊಳ್ಳದೇ ಇರುವುದನ್ನು ಹಾಗೂ ಅರ್ಥವಾಗದಿರುವುದನ್ನು ಕಾರುಣ್ಯದೊಂದಿಗೆ ಆಳವಾಗಿ ಆಲಿಸುವುದನ್ನು ಅಭ್ಯಾಸ ಮಾಡಬೇಕಾಗುತ್ತದೆ. ನಾವು ಹೀಗೆ ಆಳವಾಗಿ ನೋಡುವುದರಿಂದ ಮತ್ತು ಆಲಿಸುವುದರಿಂದ ಎಲ್ಲ ದೇಶಗಳ ನಡುವೆ ಸಹೋದರತ್ವ ಹಾಗೂ ಸಹೋದರಿಯತ್ವ ಭಾವದಿಂದ ಕಾಣುವ ಶಕ್ತಿಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ; ಇದರಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗಳ ಅಧ್ಯಾತ್ಮಿಕ ಚೈತನ್ಯವನ್ನು ಐಕ್ಯಗೊಳಿಸಿದಂತಾಗುತ್ತದೆ. ಇದರಿಂದ ಶಾಂತಿ ಮತ್ತು ಅರಿವು ಈ ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತ ಹೋಗುತ್ತದೆ. ದ್ವೇಷ ಮತ್ತು ಹಿಂಸೆಗೆ ತೋರುವ ಏಕೈಕ ಪರಿಣಾಮಕಾರಿ ಅಧ್ಯಾತ್ಮಿಕ ಸ್ಪಂದನೆಯೆಂದರೆ ನಮ್ಮ ಹೃದಯದಲ್ಲಿ ಕಾರುಣ್ಯದ ಮಕರಂದವನ್ನು ತುಂಬಿಕೊಳ್ಳುವುದೇ ಆಗಿದೆ.

 

ದಿ ಟೈಮ್ಸ್ ಆಫ್ ಇಂಡಿಯಾ

ನಾನು ಮತ್ತೊಮ್ಮೆ 2008ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದೆ. ಆಗ ನನ್ನನ್ನು ಒಂದು ದಿನದ ಮಟ್ಟಿಗೆ ’ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯ ಅತಿಥಿ ಸಂಪಾದಕನಾಗುವಂತೆ ಆಹ್ವಾನಿಸಲಾಯಿತು. ಅಂದು ಮಹಾತ್ಮ ಗಾಂಧಿಜಿಯವರ ಸಂಸ್ಮರಣೆಯ ದಿನವಾಗಿತ್ತು. ಪತ್ರಿಕೆಯವರು ’ಶಾಂತಿ ಕಾಯ್ದುಕೊಳ್ಳುವಿಕೆ’ ಎಂಬ ವಿಷಯದ ಕುರಿತು ವಿಶೇಷ ಸಂಚಿಕೆಯನ್ನು ರೂಪಿಸಲು ಒಬ್ಬ ಬೌದ್ಧ ಸಂನ್ಯಾಸಿಯು ಅತಿಥಿ ಸಂಪಾದಕನಾಗುವುದು ಸೂಕ್ತವೆಂದು ಆಲೋಚಿಸಿತ್ತು. ನಾನು ಆಶ್ರಮದ ಸಹೋದರ ಮತ್ತು ಸಹೋದರಿಯರೊಂದಿಗೆ ಈ ಆಹ್ವಾನವನ್ನು ಒಪ್ಪಿಕೊಂಡೆ. ನಾವು ಬೆಳಿಗ್ಗೆ ಪತ್ರಿಕೆಯ ಸುದ್ದಿ ಕೊಠಡಿಗೆ ಬಂದು ತಲುಪುತ್ತಿದ್ದಂತೆಯೇ ಒಂದು ಆಘಾತಕಾರಿ ಸುದ್ದಿಯ ಸ್ಫೋಟವಾಯಿತು. ಮಂಬಯಿಯಲ್ಲಿ ಒಬ್ಬ ಭಯೋತ್ಪಾದಕನ ದಾಳಿ ನಡೆಯಿತು. ಅನೇಕ ಜನರು ಹತ್ಯೆಯಾಗಿದ್ದರು. ವಾತಾವರಣವು ಟೆನ್ಶನ್‌ನಿಂದ ಕೂಡಿತ್ತು. ಹಾಗಾಗಿ ನಾನು ತಟ್ಟನೇ ಎಲ್ಲ ಸಂಪಾದಕರ ಸಭೆಯನ್ನು ಕರೆದೆ. ಒಂದು ದೊಡ್ಡ ಮೇಜಿನ ಸುತ್ತ ಎಲ್ಲರೂ ಮೌನವಾಗಿ ಕುಳಿತುಕೊಂಡರು.

ಒಬ್ಬ ಸಂಪಾದಕರು ನನ್ನನ್ನು ಹೀಗೆ ಪ್ರಶ್ನಿಸಿದರು “ಇಂತಹ ದಿನವೇ ಭಯಾನಕ ಸುದ್ದಿಯೊಂದನ್ನು ನಾವು ನೋಡುವಂತಾದರೆ ಏನು ಮಾಡುವುದು?” ಇದಕ್ಕೆ ಉತ್ತರಿಸುವುದು ತುಂಬ ಕಷ್ಟವೇ ಆಯಿತು. ಒಂದು ಕ್ಷಣ ನಾನು ಮನೋಮಗ್ನತೆಯಿಂದ ಧ್ಯಾನಿಸಿದೆ. ಆಗ “ಆತ್ಮೀಯರೇ, ನಾವು ಸುದ್ದಿಯನ್ನು ವರದಿ ಮಾಡಬೇಕಾಗುತ್ತದೆ. ಆದರೆ ಸುದ್ದಿಯನ್ನು ಪರಸ್ಪರ ಅರಿತುಕೊಳ್ಳಲು ಮತ್ತು ಕಾರುಣ್ಯವನ್ನು ಉತ್ತೇಜಿಸುವ ರೀತಿಯಲ್ಲಿ ವರದಿ ಮಾಡಬೇಕಾಗುತ್ತದೆ; ಅದು ಆಕ್ರೋಶ ಮತ್ತು ಹಿಂಸೆಯನ್ನು ಉದ್ದೀಪಿಸುವಂತಾಗಬಾರದು. ಇದು ನಿಮ್ಮನ್ನು ಅವಲಂಬಿಸಿದೆ. ನೀವು ಆ ಘಟನೆಯನ್ನು ವರದಿ ಮಾಡುವ ವಿಧಾನವನ್ನು ಅವಲಂಬಿಸಿದೆ” ಎಂದು ಹೇಳಿದೆ.

ಇಂತಹದೊಂದು ದುರಂತ ಘಟಿಸಿದರೆ ನಾವು ಆಳವಾಗಿ ನೋಡಬೇಕು ಮತ್ತು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು: “ಇಂತಹ ದುರಂತವನ್ನು ಎಸಗಲು ಭಯೋತ್ಪಾದಕರೇಕೆ ಉದ್ದೀಪಿತರಾದರು? ತಮ್ಮದೇ ದೇಶದ ಜನರ ಮೇಲೆ ಇಂತಹ ಭಯಾನಕ ಕೃತ್ಯವನ್ನು ಕೈಗೊಳ್ಳಬೇಕಾದರೆ, ಯಾವ ಬಗೆಯ ದೃಷ್ಟಿಕೋನಗಳು ಮತ್ತು ಧೋರಣೆಗಳು ಅವರನ್ನು ರೂಪಿಸಿವೆ?” ಅವರಲ್ಲಿ ಸಾಕಷ್ಟು ಆಕ್ರೋಶ ಮತ್ತು ದ್ವೇಷ ಇದ್ದಿರಲೇಬೇಕು; ಸಾಕಷ್ಟು ತಪ್ಪು ಗ್ರಹಿಕೆಗಳೂ ಇರುತ್ತವೆ. ತಪ್ಪು ಮಾಡಿದ್ದರ ಬಗ್ಗೆ, ಸರಿಯಾಗಿ ನೋಡಿಕೊಳ್ಳದಿರುವ ಮತ್ತು ತಪ್ಪಾಗಿ ಅರ್ಥೈಸಿಕೊಂಡಿದ್ದರ ಬಗ್ಗೆ ಅವರು ವೇದನೆ ಪಡಬಹುದು. ಅವರು ನ್ಯಾಯದ ಹೆಸರಿನಲ್ಲಿ
ಅಥವಾ ದೇವರ ಹೆಸರಿನಲ್ಲಿ ಇಂತಹ ಕಾರ್ಯವನ್ನು ಎಸಗುತ್ತಿದ್ದೇವೆ ಎಂದು ನಂಬಿರಬಹುದು. ನಾವು ಹೀಗೆ ಹಿಂಸೆಯ ಕೃತ್ಯಗಳನ್ನು ಮತ್ತು ಅವುಗಳ ಹಿಂದಿರುವ ಪ್ರೇರಣೆಗಳನ್ನು ಸೂಕ್ಷ್ಮವಾಗಿ ನೋಡಬೇಕಾಗುತ್ತದೆ. ನಾವು ಕೆಲವು ಒಳನೋಟಗಳನ್ನು ಪಡೆದುಕೊಂಡ ಮೇಲೆ ಸುದ್ದಿಯನ್ನು ವರದಿ ಮಾಡಿದರೆ ಅದರಲ್ಲಿ ನಮ್ಮ ತಿಳಿವಳಿಕೆ ಮತ್ತು ಕಾರುಣ್ಯವು ಒಳಗೊಂಡಿರುತ್ತದೆ.

ವರದಿ ಮಾಡುವುದರಲ್ಲಿ ಹಲವು ವಿಧಾನಗಳಿರುತ್ತವೆ. ದಿನಪತ್ರಿಕೆಗಳಲ್ಲಿ, ಆಕಾಶವಾಣಿಯಲ್ಲಿ, ದೂರದರ್ಶನದಲ್ಲಿ ಅಥವಾ ಅಂತರ್ಜಾಲದಲ್ಲಿ ಬರುವ ಬಹಳಷ್ಟು ಸುದ್ದಿಗಳು ಹಿಂಸೆಯನ್ನು ಒಳಗೊಂಡಿರುತ್ತವೆ; ಅದರ ಜೊತೆಯಲ್ಲಿ ಭಯ, ದ್ವೇಷ, ತಾರತಮ್ಯ ಮತ್ತು ಹತಾಶೆಗಳಂತಹ ಸುದ್ದಿಗಳೇ ತುಂಬಿಕೊಂಡಿರುತ್ತವೆ. ಬಹಳಷ್ಟು ಸುದ್ದಿಗಳು ಅಪಾಯಕಾರಿಯೇ ಆಗಿರುತ್ತವೆ; ಅವು ನಮ್ಮ ಮನಸ್ಸು ಮತ್ತು ಹೃದಯಗಳಿಗೆ ವಿಷ ತುಂಬುತ್ತವೆ; ನಮ್ಮ ಮಕ್ಕಳ ಮನಸ್ಸು ಮತ್ತು ಹೃದಯಗಳಿಗೂ ವಿಷವನ್ನು ತುಂಬುತ್ತಿವೆ. ಪತ್ರಕರ್ತರಾಗಿ ನಾವು ಘಟನೆಗಳನ್ನು ಸತ್ಯವಾಗಿಯೇ ವರದಿ ಮಾಡಬೇಕು; ಅದೇ ಸಮಯದಲ್ಲಿ ಓದುಗರಲ್ಲಿ ಅರಿವಿನ ಮತ್ತು ಕಾರುಣ್ಯದ ಬೀಜಗಳಿಗೆ ನೀರನ್ನು ಎರೆಯಬೇಕಾಗುತ್ತದೆ. ನಾವು ಗ್ರಾಹಕರಾಗಿ, ನಮ್ಮ ಆಲೋಚನೆಗಳು, ಭಾವನೆಗಳು ಮತ್ತು ಗ್ರಹಿಕೆಗಳ ಬಗ್ಗೆಯು ನಾವು ಮನೋಮಗ್ನತೆಯಿಂದ ಜಾಗೃತತೆಯನ್ನು ಪಡೆಯುವ ಅಗತ್ಯವಿರುತ್ತದೆ. ಆಗ ನಾವು ಎಂತಹ ಸುದ್ದಿಗಳನ್ನು ಮತ್ತು ಎಷ್ಟನ್ನು ಅನುಭೋಗಿಸಬೇಕು ಎಂಬುದರ ಪ್ರಜ್ಞೆಯನ್ನು ಪಡೆಯಲು ಸಹಾಯಕವಾಗುತ್ತದೆ. ಮನೋಮಗ್ನತೆಯು ನಮ್ಮ ಮನಸ್ಸು ಮತ್ತು ಹೃದಯಗಳ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳಲು ನೆರವು ನೀಡುತ್ತದೆ; ನಮ್ಮ ಪ್ರಜ್ಞೆಗೆ ನೀರೆರೆದು ಪೋಷಿಸಲಾಗುವ ಋಣಾತ್ಮಕ ಬೀಜಗಳಿಂದಲೂ ರಕ್ಷಣೆ ಒದಗುತ್ತದೆ.

ನಾವು ಮತ್ತೊಬ್ಬರೊಂದಿಗೆ ಸಂವಾದಿಸುವ ಮತ್ತು ಮಾತನಾಡುವ ವಿಧಾನವು ಬಹಳ ಮುಖ್ಯವಾಗಿರುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರು ಕೂಡ ಹಿಂಸೆ, ದ್ವೇಷ, ತಾರತಮ್ಯದ ಬೀಜಗಳಿಗೆ ನೀರನ್ನು ಉಣಿಸದಿರಲು ಬದ್ಧರಾಗಿರಬೇಕು; ಅವು ನಮ್ಮೊಳಗೆ ಮತ್ತು ನಮ್ಮ ಸಂಬಂಧಗಳಲ್ಲಿಯೂ ಕಾಣಿಸಿಕೊಳ್ಳಬಾರದು. ಇದರ ಜೊತೆಯಲ್ಲಿಯೇ ನಾವು ಅರಿವು, ಸಹಿಷ್ಣುತೆ ಮತ್ತು ಸಮಾನತೆಯ ಬೀಜಗಳಿಗೆ ನಿರಂತರವಾಗಿ ನೀರುಣಿಸುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ; ಇದರಿಂದ ನಮ್ಮ ಸಮಾಜವು ಕೂಡ ಸಾಮರಸ್ಯವನ್ನು ಪಡೆಯುತ್ತದೆ.

(ತಿಚ್ ನ್ಹಾತ್ ಹಾನ್ ಅವರ “ಅಟ್ ಹೋಮ್ ಇನ್ ದಿ ವರ್ಲ್ಡ್” ಕೃತಿಯ ಅನುವಾದದ ಆಯ್ದ ಭಾಗಗಳು. ಸುಭಾಷ್ ಅನುವಾದಿಸಿರುವ ಅವರ ಎರಡು ಪುಸ್ತಕಗಳು ಶೀಘ್ರದಲ್ಲೇ ಪ್ರಕಟಗೊಳ್ಳಲಿವೆ)

ಮೂಲ: ತಿಚ್ ನ್ಹಾತ್ ಹಾನ್

ಅನು: ಸುಭಾಷ್ ರಾಜಮಾನೆ


ಇದನ್ನೂ ಓದಿ: ತಿಚ್ ನ್ಹಾತ್ ಹಾನ್ ’ಮನೋಮಗ್ನತೆಯ ಹರಿಕಾರ’ನಿಗೆ ವಿದಾಯ

ಇದನ್ನೂ ಓದಿ: ‘gandhi’s assassin’: ಇತಿಹಾಸದ ತಾಯಿ ಸತ್ಯದ ಶೋಧನೆಯಲ್ಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...