Homeಅಂತರಾಷ್ಟ್ರೀಯಅಮೇರಿಕದ ಜನಪ್ರಿಯ ಫುಟ್‍ಬಾಲ್ ಆಟಗಾರ್ತಿ ಮೇಗನ್ ರೆಪಿನೋ ರಾಷ್ಟ್ರಗೀತೆಯೊಂದಿಗೆ ದನಿಗೂಡಿಸುವುದಿಲ್ಲ ಯಾಕೆ ಗೊತ್ತೆ?

ಅಮೇರಿಕದ ಜನಪ್ರಿಯ ಫುಟ್‍ಬಾಲ್ ಆಟಗಾರ್ತಿ ಮೇಗನ್ ರೆಪಿನೋ ರಾಷ್ಟ್ರಗೀತೆಯೊಂದಿಗೆ ದನಿಗೂಡಿಸುವುದಿಲ್ಲ ಯಾಕೆ ಗೊತ್ತೆ?

- Advertisement -
- Advertisement -

ಮೇಗನ್ ರೆಪಿನೋ, ಅಮೇರಿಕದ ಮಹಿಳಾ ಫುಟ್‍ಬಾಲ್ ತಂಡದ ಸಹನಾಯಕಿ. ಇಷ್ಟು ಹೇಳಿದರೆ ಆಕೆಯ ಬಗ್ಗೆ ಏನೂ ಹೇಳಿದಂತಾಗುವುದಿಲ್ಲ. ಉತ್ತರ-ದಕ್ಷಿಣ ಅಮೇರಿಕ ಮತ್ತು ಯುರೋಪ್ ಖಂಡಗಳ ದೇಶಗಳಲ್ಲಿ ಫುಟ್‍ಬಾಲ್ ಎಂಬುದು ರಾಷ್ಟ್ರಧರ್ಮವೆಂದು ಕರೆಸಿಕೊಳ್ಳುತ್ತದೆ. ಆ ದೇಶಗಳ ಪ್ರತಿಯೊಬ್ಬ ಪ್ರಜೆ ಪ್ರೀತಿಸುವ, ಕಲಿತು ಆಡುವ, ಅಭಿಮಾನಿಸುವ, ಬಹಳಷ್ಟು ಮಂದಿ ಒಂದು ಗೀಳಿನಂತೆ ಆರಾಧಿಸುವ ಫುಟ್‍ಬಾಲ್ ಕ್ರೀಡೆಯ ಸುತ್ತಮುತ್ತ ಏನು ನಡೆದರೂ ಅದೊಂದು ಪ್ರಮುಖ ವಿಚಾರವಾಗುತ್ತದೆ.

ಇಂತಹ ಕ್ರೀಡೆಯನ್ನಾಡುವ ಮಹಿಳಾ ಫುಟ್‍ಬಾಲ್ ತಂಡದ ಅತ್ಯಂತ ಜನಪ್ರಿಯ ಆಟಗಾರ್ತಿಯರಲ್ಲಿ ಪ್ರಮುಖಳು ಮೇಗನ್ ರೆಪಿನೋ. ಈಕೆ, ದೀರ್ಘ ಕಾಲ ಮಹಿಳಾ ಫುಟ್‍ಬಾಲ್ ತಂಡದ ನಾಯಕಿಯಾಗಿ, ಅತ್ಯುತ್ತಮ ಲೀಡ್ ಆಟಗಾರ್ತಿಯಾಗಿ ತಂಡವನ್ನು ತಾನು ಆಡಿದ ಬಹುತೇಕ ಎಲ್ಲ ಪಂದ್ಯಗಳಲ್ಲೂ ವಿಜಯದೆಡೆಗೆ ಸಾಗಿಸಿದ, ಈಗಲೂ ಸಾಗಿಸಬಲ್ಲ ಛಾತಿಯುಳ್ಳವರು. ಈಗ 34 ವರ್ಷ ವಯಸ್ಸಾಗಿದ್ದರೂ, ತಂಡಕ್ಕೆ ಸೇರ್ಪಡೆಯಾಗಿರುವ 20-22 ವರ್ಷದ ಎಳೆಯ ಶಕ್ತಿಶಾಲಿ ಚುರುಕು ಆಟಗಾರ್ತಿಯರಿಗಿಂತಲೂ ಅತ್ಯುತ್ತಮ ಫಾರ್ಮ್‍ನಲ್ಲಿರುವ, ಇದೀಗ ನಡೆಯುತ್ತಿರುವ ಫಿಫಾ ಮಹಿಳಾ ವಿಶ್ವಕಪ್‍ನಲ್ಲಿಯೂ ಪ್ರತಿಯೊಂದು ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿರುವ ಕ್ರೀಡಾಪಟು.

ಒಬ್ಬ ಮಹಿಳಾ ಫುಟ್‍ಬಾಲ್ ಕ್ರೀಡಾಪಟುವಾಗಿ, ಈಕೆಯ ಕೌಶಲ್ಯ, ಶಕ್ತಿ, ಸಾಮರ್ಥ್ಯ, ಮತ್ತು ಕ್ರೀಡೆಯ ಬಗೆಗಿನ ಈಕೆಯ ಅದಮ್ಯ ಪ್ರೀತಿ ಮತ್ತು ಬದ್ಧತೆ ಪ್ರಶ್ನಾತೀತ. ಇದು, ಆ ದೇಶದ ಮಹಿಳಾ ಫುಟ್‍ಬಾಲ್ ತಂಡಕ್ಕೂ ಮತ್ತು ಎಲ್ಲ ಕ್ರೀಡಾಭಿಮಾನಿಗಳಿಗೂ ಅನುಮಾನಕ್ಕೆ ಎಡೆಯಿಲ್ಲದಂತೆ ಗೊತ್ತಿರುವ ಸಂಗತಿ. ಈಗ ಫ್ರಾನ್ಸ್ ನಲ್ಲಿ ನಡೆಯುತ್ತಿರುವ ‘ಫಿಫಾ ಮಹಿಳಾ ಫುಟ್‍ಬಾಲ್ ವಿಶ್ವಕಪ್’ನಲ್ಲಿ ಅಮೇರಿಕದ ತಂಡ ಈವರೆಗೆ ಆಡಿ ಗೆದ್ದಿರುವ 8 ಪಂದ್ಯಗಳಲ್ಲಿ ದೊರೆತಿರುವ ಎಲ್ಲ ಗೋಲುಗಳಲ್ಲೂ ಗಳಿಸಿದಾಕೆ ಇದೇ ಮೇಗನ್ ರೆಪಿನೋ.

ಅಂತಹ ಅದ್ವಿತೀಯ ಆಟಗಾರ್ತಿಯ ಬಗ್ಗೆ ಇಲ್ಲಿ ಬರೆಯುತ್ತಿರುವುದು ಇವಿಷ್ಟು ಕಾರಣಗಳಿಗಾಗಿ ಮಾತ್ರವಲ್ಲ! ಇತ್ತೀಚೆಗೆ ಆಕೆ ತಾನೊಬ್ಬ ನಾಗರೀಕಳಾಗಿ, ಜವಾಬ್ದಾರಿಯುಳ್ಳ ಒಬ್ಬ ಪ್ರಜೆಯಾಗಿ ತೋರಿದ ಅದ್ವಿತೀಯವಾದ ಮಾನವೀಯ ಸ್ಪಂದನಕ್ಕಾಗಿ; ದಿಟ್ಟ, ಧೀರ ನಡವಳಿಕೆಗಾಗಿ. ತನ್ನ ದೇಶದ ಬಿಳಿಯ ನಾಗರೀಕರು- ವಿಶೇಷವಾಗಿ ಪೊಲೀಸರು ಕಪ್ಪು ಜನರು ಮತ್ತು ಇನ್ನಿತರ ವರ್ಣೀಯ ಜನರ ವಿರುದ್ಧ ತೋರುತ್ತಿರುವ ಅಸಹಿಷ್ಣುತೆ, ಅವರ ಮೇಲೆ ನಡೆಸುತ್ತಿರುವ ಹಲ್ಲೆ ಮತ್ತು ಅಮಾಯಕರ ಕೊಲೆಗಳ ವಿರುದ್ಧ ಧೈರ್ಯದಿಂದ ದನಿಯೆತ್ತಿರುವುದಕ್ಕಾಗಿ ಮೇಗನ್ ರೆಪಿನೋ ಬಗ್ಗೆ ತಿಳಿಯಬೇಕಾಗಿದೆ ಮತ್ತು ಮಾತಾಡಬೇಕಾಗಿದೆ.

ಕಳೆದ ವರ್ಷ ಅಮೇರಿಕದಲ್ಲಿ ನಡೆದ ಆಂತರಿಕ ಮಹಿಳಾ ಫುಟ್‍ಬಾಲ್‍ನ ಲೀಗ್ ಪಂದ್ಯಗಳು ಅಮೇರಿಕದ ಸಾಮಾನ್ಯ ನಾಗರೀಕರಿಗೆ ಶಾಕ್ ಟ್ರೀಟ್‍ಮೆಂಟ್ ಕೊಟ್ಟವು. ಯಾಕೆಂದರೆ, ಪ್ರತಿಯೊಂದು ಪಂದ್ಯಕ್ಕೂ ಮೊದಲು ನುಡಿಸಲಾಗುವ ಅಮೇರಿಕದ ರಾಷ್ಟ್ರಗೀತೆಗೆ ಹೆಮ್ಮೆಯಿಂದ ಹೃದಯದ ಮೇಲೆ ಕೈಯಿಟ್ಟುಕೊಂಡು ದನಿಗೂಡಿಸಬೇಕಾದ ತಮ್ಮ ನೆಚ್ಚಿನ ಮಹಿಳಾ ಕ್ರೀಡಾಪಟು ಮೇಗನ್ ರೆಪಿನೋ, ರಾಷ್ಟ್ರಗೀತೆ ಹಾಡುವುದನ್ನು ನಿರಾಕರಿಸಿ, ಪ್ರತಿಭಟನಾಸೂಚಕವಾಗಿ ಮಂಡಿಯೂರಿ ನಿಂತಿದ್ದಳು!! ಪಂದ್ಯಗಳ ನಂತರದ ಸಂದರ್ಶನಗಳಲ್ಲಿ, ‘ಅಮೇರಿಕದ ಸರ್ಕಾರ ಪೊಲೀಸ್ ಪಡೆ ಮತ್ತು ನಾಗರೀಕರು ತಮ್ಮದೇ ದೇಶದ ಪ್ರಜೆಗಳಾದ ಕಪ್ಪುಜನರು ಮತ್ತು ವರ್ಣೀಯ ಜನರನ್ನು (ಕಂದು ಮತ್ತಿತರ ಮೈಬಣ್ಣ ಹೊಂದಿರುವ ಇತರ ದೇಶಗಳ ವಲಸಿಗರು) ಅಸಮಾನತೆಯಿಂದ ನಡೆಸಿಕೊಳ್ಳುತ್ತಾ, ಅತ್ಯಂತ ಬರ್ಬರವಾಗಿ ಕೊಲೆಗಳನ್ನೂ ಮಾಡುತ್ತಿರುವಾಗ, ತಾನು ಹೇಗೆ ರಾಷ್ಟ್ರಗೀತೆಗೆ ದನಿಗೂಡಿಸಲು ಸಾಧ್ಯ’ ಎಂದಾಕೆ ಮಾಧ್ಯಮಗಳನ್ನು ಪ್ರಶ್ನಿಸಿದರು.

ಇದಕ್ಕೂ ಮೊದಲು ಪ್ರಖ್ಯಾತ ರಾಷ್ಟ್ರೀಯ ಫುಟ್‍ಬಾಲ್ ಲೀಗ್ ಆಟಗಾರ ಕೊಲಿನ್ ಕೇಪರ್‍ನಿಕ್ ಕೂಡಾ ಇದೇ ರೀತಿಯ ಪ್ರತಿಭಟನೆಯನ್ನು ದಾಖಲಿಸಿ, ರಾಷ್ಟ್ರಗೀತೆಯ ಸಂದರ್ಭದಲ್ಲಿ ನೆಲದ ಮೇಲೆ ಕುಳಿತುಕೊಳ್ಳುವ ಮೂಲಕ ತನ್ನ ದೇಶದ ತುಳಿಯಲ್ಪಟ್ಟ ಜನರ ಬಗ್ಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದ್ದರು. “ಅವರ ಮಾತುಗಳು ತನ್ನನ್ನು ಪ್ರೇರೇಪಿಸಿದವು, ಏಕೆಂದರೆ ಕೊಲಿನ್ ಕೇಪರ್‍ನಿಕ್ ಅವರು ಯಾರನ್ನೂ ಮೆಚ್ಚಿಸುವುದಕ್ಕಾಗಿ ಹೀಗೆ ಮಾಡಲಿಲ್ಲ, ‘ಅಮೇರಿಕಾ ದೇಶವೆಂದರೆ ಅದು ಬಿಳಿಯರು ಮಾತ್ರವಲ್ಲ, ಕರಿಯರು ಮತ್ತು ವರ್ಣೀಯರು ಎಲ್ಲರೂ ಸೇರಿ ಕಟ್ಟಿದ ದೇಶ, ತಾನು ಈ ದೇಶದ ರಾಷ್ಟ್ರೀಯ ಕ್ರೀಡೆಯನ್ನು ಪ್ರತಿನಿಧಿಸುತ್ತೇನಾದರೆ, ಅದು ಅವರೆಲ್ಲರನ್ನೂ ಒಳಗೊಂಡ ಪ್ರತಿನಿಧಿತ್ವವೇ ಆಗಿರುತ್ತದೆ. ಹಾಗಿರುವಾಗ ಅವರುಗಳ ಮೇಲೆ ನಡೆಯುವ ಅಮಾನವೀಯ ದೌರ್ಜನ್ಯವನ್ನು ಸುಮ್ಮನೆ ನೋಡುತ್ತಾ ಸಹಿಸಲು ಸಾಧ್ಯವಿಲ್ಲವಾದ ಕಾರಣ ನನ್ನ ಪ್ರತಿಕ್ರಿಯೆ ಕೊಡುತ್ತಿದ್ದೇನೆ’ ಎಂದು ಹೇಳಿದ ಮಾತುಗಳು ಅತ್ಯಂತ ಪ್ರಾಮಾಣಿಕವಾಗಿದ್ದವು ಮತ್ತು ನನ್ನನ್ನು ತಟ್ಟಿದವು” ಎಂದು ಮೇಗನ್ ಅವರು ಹೇಳಿಕೊಂಡಿದ್ದಾರೆ.

ಅಮೇರಿಕದಲ್ಲಿ ಕಪ್ಪುಜನರು ಮತ್ತು ಬಿಳಿ ವರ್ಣೀಯರ ಮೇಲಿನ ಹಿಂಸಾಚಾರಕ್ಕೆ ಸಾಕಷ್ಟು ಸುದೀರ್ಘ ಕರಾಳ ಇತಿಹಾಸವಿದೆ. ಇಂದಿನವರೆಗೂ ಎಲ್ಲ ಕಾನೂನುಗಳನ್ನೂ ಮೀರಿ ನಡೆಯುತ್ತಿರುವ ಈ ಅನ್ಯಾಯವನ್ನು ಪ್ರತಿಭಟಿಸುತ್ತಾ 2015ರಲ್ಲಿ ಹುಟ್ಟಿಕೊಂಡ ಚಳವಳಿ-‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ (ಕಪ್ಪು ಬದುಕುಗಳಿಗೂ ಬೆಲೆಯಿದೆ). ಈ ಚಳವಳಿಯ ಪರವಾಗಿ ಅನೇಕಾನೇಕ ಕಪ್ಪು ಮತ್ತು ವರ್ಣೀಯ ಸಲೆಬ್ರಿಟಿಗಳು ಹೇಳಿಕೆಗಳನ್ನು, ಹಣಸಹಾಯವನ್ನು, ತಮ್ಮ ಕಲೆಗಳ ಪ್ರದರ್ಶನವನ್ನು ನೀಡುತ್ತಲೇ ಬಂದಿದ್ದಾರೆ.

ಪ್ರಖ್ಯಾತ ಕಲಾವಿದ ದಂಪತಿ ಕ್ರಿಸ್ ತೇಗನ್ ಮತ್ತು ಜಾನ್ ಲೆಜೆಂಡ್, ಹಾಡುಗಾರ ವೀಕನ್ಡ್, ಕಲಾವಿದೆ ಕಿಮ್ ಕರ್ದಶಿಯನ್ ವೆಸ್ಟ್, ಕೆರ್ರಿ ವಾಷಿಂಗ್ಟನ್, ಖ್ಯಾತ ಅಥ್ಲೀಟುಗಳಾದ ಕಾರ್ಮೆಲೋ ಆಂಥನಿ, ಕ್ರಿಸ್ ಪಾಲ್, ಡ್ವೇನ್ ವೇಡ್ ಮತ್ತು ಲೆಬ್ರಾನ್ ಜೇಮ್ಸ್ ಮೊದಲಾದ ಕಪ್ಪು ವರ್ಣೀಯ ಸೆಲೆಬ್ರಿಟಿಗಳು ‘ಬ್ಲಾಕ್ ಲೈನ್ಸ್ ಮ್ಯಾಟರ್’ ಪರವಾಗಿ ಸಾಕಷ್ಟು ಗಟ್ಟಿಯಾಗಿಯೇ ಮಾತನಾಡಿದ್ದಾರೆ. ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದಾರೆ, ಸಾಕ್ಷ್ಯಚಿತ್ರಗಳನ್ನು ತೆಗೆದಿದ್ದಾರೆ ಮತ್ತು ಚಾರಿಟಿ ಶೋಗಳ ಮೂಲಕ ಹಣ ಸಂಗ್ರಹಿಸಿ ಕೊಟ್ಟಿದ್ದಾರೆ. ಅವರ ಜೊತೆಗೆ ಈಗ ಕೊಲಿನ್ ಕೊಪರ್‍ನಿಕ್ ಮತ್ತು ಮೇಗನ್ ಕೂಡಾ ಸೇರಿಕೊಂಡಿದ್ದಾರೆ.

‘ಬ್ಲಾಕ್ ಲೈವ್ಸ್ ಮ್ಯಾಟರ್’ ಚಳುವಳಿಯನ್ನು ಈ ಇಬ್ಬರು ಬೆಂಬಲಿಸುವುದಕ್ಕೆ ಹೆಚ್ಚು ಮಹತ್ವ ಸಿಕ್ಕಿರುವುದು ಈ ಇಬ್ಬರೂ ಬಿಳಿಯ ಪ್ರಜೆಗಳಾದ ಕಾರಣಕ್ಕೂ ಕೂಡಾ. ಕಪ್ಪು ಮತ್ತು ವರ್ಣೀಯರ ಆಂದೋಲನವನ್ನು ಬೆಂಬಲಿಸಿದ ಮೊದಲ ಬಿಳಿ ಮಹಿಳಾ ಕ್ರೀಡಾಪಟುವೆನ್ನಿಸಿಕೊಂಡಿರುವ ಮೇಗನ್ ರೆಪಿನೋ ಇದನ್ನೂ ಕೂಡಾ ಗುರುತಿಸಿದ್ದಾರೆ.

“ನಾನು ಈ ಹೆಜ್ಜೆಯನ್ನಿಟ್ಟು ಸಾಕಷ್ಟು ನಷ್ಟಗಳಿಗೆ ತುತ್ತಾಗಿದ್ದೇನೆ, ದಾಳಿಗಳಿಗೆ ಗುರಿಯಾಗಿದ್ದೇನೆ; ಆದರೆ, ಆಗೆಲ್ಲ ನಾನು ಅಂದುಕೊಳ್ಳುವುದು ಇಷ್ಟೆ, ಬಿಳಿಯಳಾಗಿ ಸಾಕಷ್ಟು ಅನುಕೂಲತೆಗಳನ್ನು ಈಗಲೂ ಪಡೆದಿರುವ ನನಗೇ ಇಷ್ಟು ಕಷ್ಟವೆನಿಸಿದರೆ, ಈ ಚಾರಿತ್ರಿಕ ಅಸಮಾನತೆಯ ವಿರುದ್ಧ ದನಿಯೆತ್ತಿರುವ ನಮ್ಮ ಕಪ್ಪು ಮತ್ತು ವರ್ಣೀಯ ಸಹೋದರ ಸಹೋದರಿಯರಿಗೆ ಇನೆಷ್ಟು ಕಷ್ಟನಷ್ಟಗಳು ಎದುರಾಗಿರಬಹುದು? ಏನನ್ನಾದರೂ ಬದಲಾಯಿಸಬೇಕೆಂದರೆ, ಇರುವಂತೆಯೇ ಇರಲು ಬಿಡದೆ ಪರಿವರ್ತಿಸಬೇಕೆಂದರೆ ಇಷ್ಟಾದರೂ ಆಗಲೇಬೇಕು; ಇಷ್ಟನ್ನು ನಾನು ಸಹಿಸಲೇಬೇಕು”. ಹೀಗೆ ಹೇಳುತ್ತಾ, ತನ್ನ ಪ್ರತಿಭಟನೆಯ ಹಾದಿಯಲ್ಲಿ ಅವರು ಮುನ್ನಡೆದಿದ್ದಾರೆ.

ಆಂತರಿಕ ಲೀಗ್ ಪಂದ್ಯಗಳಲ್ಲಿ ಮಂಡಿಯೂರಿದ್ದ ರೆಪಿನೋ ಪ್ರತಿಭಟನೆಗೆ ಬೆದರಿದ ಫುಟ್‍ಬಾಲ್ ಮಂಡಳಿ, ಆಟಗಾರರ ನಿಯಮಾವಳಿಗೇ ಏಕಪಕ್ಷೀಯ ತಿದ್ದುಪಡಿ ತಂದು, ರಾಷ್ಟ್ರಗೀತೆಯ ಸಂದರ್ಭದಲ್ಲಿ ಯಾರೂ ಮಂಡಿಯೂರುವಂತಿಲ್ಲ ಎಂದು ಆದೇಶಿಸಿದೆ. ಅದಾದ ಮೇಲೆ ನಡೆಯುತ್ತಿರುವ ಫಿಫಾ ವಿಶ್ವಕಪ್‍ನಲ್ಲಿ ರೆಪಿನೋ ಮಂಡಿಯೂರುತ್ತಿಲ್ಲ, ಆದರೆ ರಾಷ್ಟ್ರಗೀತೆಯನ್ನು ಹಾಡುತ್ತಲೂ ಇಲ್ಲ. ಧೀರ ಗಂಭೀರ ನಿಲುವಿನೊಂದಿಗೆ ತನ್ನ ವಿರೋಧ ದಾಖಲಿಸುತ್ತಲೇ ಇದ್ದಾರೆ.

ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೆಪಿನೋ ಅವರನ್ನು ‘ಬಿಚ್’ (ಸೂಳೆ) ಎಂದು ಕರೆದು, “ಆಕೆಯನ್ನು ಮೈದಾನದಿಂದ ಎಳೆದು ಹೊರಕ್ಕೆಸೆಯಿರಿ” ಎಂದು ಕರೆಕೊಟ್ಟರೆ, ಮೇಗನ್ ರೆಪಿನೋ ಜೊತೆಗಾರ್ತಿ ಆಟಗಾರ್ತಿಯರು ಮತ್ತು ಕೋಚ್ ಆಕೆಯ ಹೋರಾಟಕ್ಕೆ ಪರೋಕ್ಷ ಬೆಂಬಲ ನೀಡಿದ್ದಾರೆ. ‘ಆಕೆಯೊಬ್ಬ ಅತ್ಯುತ್ತಮ ಕ್ರೀಡಾಪಟು ಮತ್ತು ತಂಡಕ್ಕೆ ಅಮೂಲ್ಯ ಆಸ್ತಿ, ಒಳ್ಳೆಯ ಗೆಳತಿ ಮತ್ತು ಸಹ ಆಟಗಾರ್ತಿ. ಇದನ್ನು ಬಿಟ್ಟು ಉಳಿದ ಆಕೆಯ ನಿಲುವುಗಳು ಆಕೆಯ ಇಷ್ಟ, ಆ ಬಗ್ಗೆ ನಾವು ಚರ್ಚಿಸುವುದಿಲ್ಲ’ ಎಂದು ತಂಡ ಹೇಳಿದ್ದರೆ, ಕೋಚ್ ಪ್ರತಿಕ್ರಿಯಿಸಿ ‘ರೆಪಿನೋ ಯಾವಾಗಲೂ ದಿಟ್ಟವಾದ ನಿಲುವು ಮತ್ತು ಮಾತುಗಳನ್ನು ಹೊಂದಿರುವವರು. ಅದಕ್ಕಾಗಿ ಆಕೆಯನ್ನು ಗೌರವಿಸಬೇಕೇ ಹೊರತು ತೆಗಳಬೇಕಿಲ್ಲ’ ಎಂದಿದ್ದಾರೆ.

ಮೇಗನ್ ರೆಪಿನೋ ಈ ಹಿಂದೆಯೂ ಮಹಿಳಾ ಅಸಮಾನತೆಯ ಬಗ್ಗೆ, ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಗಟ್ಟಿದನಿಯಲ್ಲಿ ಮಾತನಾಡಿದವರು. ತಾನು ಸ್ವತಃ ಒಬ್ಬ ಲೆಸ್ಬಿಯನ್ ಆಗಿರುವುದನ್ನು ಯಾವ ಮುಚ್ಚುಮರೆಯಿಲ್ಲದೆ ಚರ್ಚಿಸಿದವರು. ಇಂತಹ ಅವರ ಕಾಳಜಿಗಳ ವಿಸ್ತರಣೆಯಾಗಿ ಈಗಿನ ಅವರ ಪ್ರತಿಭಟನೆಯೂ ಇದೆ. ನಿಜಕ್ಕೂ ಮೇಗನ್ ರೆಪಿನೋ ಅಭಿನಂದನಾರ್ಹರು. ಹಾದಿಬೀದಿಗಳಲ್ಲಿ ಅಮಾಯಕ ಅಲ್ಪಸಂಖ್ಯಾತರನ್ನು, ದಲಿತರು, ಮಹಿಳೆಯರು, ಆದಿವಾಸಿಗಳನ್ನು ಕಟ್ಟಿಹಾಕಿ ಥಳಿಸಿ ಕೊಂದರೂ ತುಟಿಪಿಟಕ್ಕೆನ್ನದ ಭಾರತದ ಸೆಲೆಬ್ರಿಟಿ ಕೋಟ್ಯಾಧಿಪತಿಗಳ ನಡುವೆ ಅಮೇರಿಕದ ಹೆಸರಾಂತರ ಈ ಸಾಮಾಜಿಕ ಜವಾಬ್ದಾರಿಯ ನಡವಳಿಕೆ ಇನ್ನಷ್ಟು ತಟ್ಟುತ್ತದೆ; ಮುಖ್ಯವೆನ್ನಿಸುತ್ತದೆ.

ಕೃಪೆ: ‘ಮುನ್ನಡೆ’ ಮಹಿಳಾ ಪತ್ರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...