ಯುದ್ಧಕ್ಕೆ ಬಲಿಯಾದ ಪ್ಯಾಲೆಸ್ತೀನ್ ನಾಗರಿಕರ ಮೃತದೇಹಗಳಿಂದ ಇಸ್ರೇಲ್ ಸೇನೆ ಅಂಗಾಂಗಳನ್ನು ಕದಿಯುತ್ತಿದೆ ಎಂದು ಗಾಝಾದ ಸ್ಥಳೀಯ ಅಧಿಕಾರಿಗಳು ಆರೋಪಿಸಿದ್ದು, ಅಂತಾರಾಷ್ಟ್ರೀಯ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ.
ಅನೇಕ ಮಂದಿ ಪ್ಯಾಲೆಸ್ತೀನ್ ನಾಗರಿಕರ ಮೃತದೇಹಗಳ ಆಕಾರ ಬದಲಾಗಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಅಂಗಾಂಗ ಕಳವು ಮಾಡಿರುವುದು ಬಯಲಾಗಿದೆ ಎಂದು ಗಾಝಾ ಮೂಲದ ಸರ್ಕಾರಿ ಮಾಧ್ಯಮ ಕಚೇರಿಯೊಂದು ಹೇಳಿರುವುದಾಗಿ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
Israeli forces have been accused by Gaza's gov't media office of stealing organs from Palestinian bodies that were handed over by Israel's military on Tuesday ⤵️ pic.twitter.com/K12FQnDzmp
— Al Jazeera English (@AJEnglish) December 28, 2023
ಇಸ್ರೇಲ್ ಸೇನೆಯು ಮೃತರ ಹೆಸರನ್ನು ಮತ್ತು ಎಲ್ಲಿ ಮೃತದೇಹಗಳು ದೊರೆತಿದೆ ಎಂಬುವುದರ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಹೂತಿಟ್ಟ ಮೃತದೇಹಗಳನ್ನೂ ಅವರು ಹೊರ ತೆಗೆದಿದ್ದಾರೆ ಎಂದು ಮಾಧ್ಯಮ ಸಂಸ್ಥೆ ಆರೋಪಿಸಿದೆ.
ಇಸ್ರೇಲ್ ಇಂತಹ ಭಯಾನಕ ಅಪರಾಧ ನಡೆಸುತ್ತಿದ್ದರೂ ಗಾಝಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೆಡ್ ಕ್ರಾಸ್‌ನ ಅಂತಾರಾಷ್ಟ್ರೀಯ ಸಮಿತಿ ಮೌನ ತಾಳಿದೆ ಎಂದು ಕಿಡಿಕಾರಿದೆ. ಈ ಆರೋಪಗಳ ಬಗ್ಗೆ ಇಸ್ರೇಲ್ ಸೇನೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಗಾಝಾದಲ್ಲಿ ವೈಮಾನಿಕ ದಾಳಿ ಮಾತ್ರವಲ್ಲದೆ, ನಗರದ ಮನೆ ಮನೆಗೆ ನುಗ್ಗಿ ಇಸ್ರೇಲ್ ಸೇನೆ ಆಕ್ರಮಣ ನಡೆಸುತ್ತಿದೆ. ಕಳೆದ ಮಂಗಳವಾರ ಈ ರೀತಿಯ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ ಹಲವು ಮಂದಿಯ ಮೃತದೇಹಗಳನ್ನು ಹಸ್ತಾಂತರಿಸಿದೆ.
ಗಾಝಾದ ಆರೋಗ್ಯ ಸಚಿವಾಲಯ ದಕ್ಷಿಣ ಗಾಝಾ ಪಟ್ಟಿಯಲ್ಲಿರುವ ಕೆರೆಮ್ ಶಾಲೋಮ್ ಗಡಿಯಲ್ಲಿ ಮೃತದೇಹಗಳನ್ನು ಸ್ವೀಕರಿಸಿದೆ. ಗಾಝಾದ ಧಾರ್ಮಿಕ ವ್ಯವಹಾರಗಳ ಸಚಿವಾಲಯ ಎಲ್ಲಾ ಮೃತದೇಹಗಳನ್ನು ಸಾಮೂಹಿಕ ಅಂತ್ಯ ಸಂಸ್ಕಾರ ಮಾಡಿದೆ.
ಗಾಝಾ ಪಟ್ಟಿಗೆ ಹಲವು ಮೃತದೇಹಗಳನ್ನು ಇಸ್ರೇಲ್ ಹಸ್ತಾಂತರಿಸಲಿದೆ ಎಂದು ನಮಗೆ ವಿಶ್ವಸಂಸ್ಥೆಯ ಪ್ರತಿ ನಿಧಿಗಳು ಮಾಹಿತಿ ನೀಡಿದ್ದರು. ಸುಮಾರು 80 ಮಂದಿಯ ಮೃತದೇಹಗಳನ್ನು ಸ್ವೀಕರಿಸಲಾಗಿದೆ ಎಂದು ರಾಫಾ ನಗರದ ಮೊಹಮ್ಮದ್ ಯೂಸುಫ್ ಅಲ್-ನಝರ್ ಆಸ್ಪತ್ರೆಯ ನಿರ್ದೇಶಕ ಮರ್ವಾನ್ ಅಲ್-ಹಮ್ಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಂಟೇನರ್‌ನಲ್ಲಿ ಮೃತದೇಹಗಳನ್ನು ನಮಗೆ ಹಸ್ತಾಂತರಿಸಲಾಗಿದೆ. ಅವುಗಳಲ್ಲಿ ಹಲವು ಮೃತದೇಹಗಳು ತುಂಡು ತುಂಡಾಗಿದ್ದವು, ಇನ್ನೂ ಹಲವು ಕೊಳೆತಿದ್ದವು. ಪ್ಯಾಲೆಸ್ತೀನ್ ಆರೋಗ್ಯ ಮತ್ತು ನ್ಯಾಯ ಇಲಾಖೆ ಇದನ್ನು ಇಸ್ರೇಲಿ ಯುದ್ಧಪರಾಧ ಎಂದು ಪರಿಗಣಿಸುವುದಾಗಿ ಯುದ್ಧದ ಭೀಕರತೆಯನ್ನು ಮರ್ವಾನ್ ಅಲ್-ಹಮ್ಸ್ ವಿವರಿಸಿದ್ದಾರೆ.
ಇದನ್ನೂ ಓದಿ : ಲೆಬನಾನ್‌ಗೂ ವ್ಯಾಪಿಸಿದ ಇಸ್ರೇಲ್ ಆಕ್ರಮಣ: ವೈಮಾನಿಕ ದಾಳಿಯಲ್ಲಿ ಮೂವರು ಸಾವು


