ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ವಿರುದ್ಧ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಶನಿವಾರ ಮತ್ತೊಮ್ಮೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದೂರು ನೀಡಿದ್ದಾರೆ.
ರಾಷ್ಟ್ರಪತಿ ಮುರ್ಮು ಅವರಿಗೆ ಪತ್ರ ಬರೆದಿರುವ ಸ್ಟಾಲಿನ್ ಅವರು, ”ರಾಜ್ಯಪಾಲ ಆರ್‌ಎನ್ ರವಿ ಅವರು ರಾಜ್ಯದಲ್ಲಿ ರಾಜಕೀಯ ಎದುರಾಳಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯ ಸರ್ಕಾರವನ್ನು ಉರುಳಿಸಲು ಕಾಯುತ್ತಿದ್ದಾರೆ ಮತ್ತು ಅಕಾಶಗಳನ್ನು ಹುಡುಕುತ್ತಿದ್ದಾರೆ. ಹಾಗಾಗಿ ಅವರು ಸಾಂವಿಧಾನಿಕ ಹುದ್ದೆಯಲ್ಲಿ ಮುಂದುವರಿಯಲು ಯೋಗ್ಯರಲ್ಲ. ಅವರನ್ನು ಕೇವಲ ಕೇಂದ್ರ ಸರ್ಕಾರದ ಏಜೆಂಟ್ ಎಂದು ಪರಿಗಣಿಸಬಹುದು” ಎಂದು ಬರೆದಿರುವುದಾಗಿ ಪಿಟಿಐ ವರದಿ ಮಾಡಿದೆ.
“ರಾಜ್ಯಪಾಲರ ಈ ಕ್ರಮವು ಒಕ್ಕೂಟ ವ್ಯವಸ್ಥೆಯನ್ನು ಹಾನಿ ಮಾಡುತ್ತದೆ. ಈ ಮೂಲಕ ಭಾರತೀಯ ಪ್ರಜಾಪ್ರಭುತ್ವದ ಮೂಲ ತತ್ವಗಳನ್ನು ನಾಶಪಡಿಸುತ್ತದೆ. ರವಿ ಅಂತಹ ನಡವಳಿಕೆಗೆ ಒಳ್ಳೆಯ ಉದಾಹರಣೆ” ಎಂದು ಸ್ಟಾಲಿನ್ ಹೇಳಿದರು.
”ರಾಜ್ಯಪಾಲರು ಕೋಮು ದ್ವೇಷವನ್ನು ಪ್ರಚೋದಿಸುವ ಮೂಲಕ ತಮಿಳುನಾಡಿನ ಶಾಂತಿಗೆ ಧಕ್ಕೆ ತಂದಿದ್ದಾರೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ.
”ರಾಜ್ಯಪಾಲರು ತಮ್ಮ ರಾಜಕೀಯ ಮತ್ತು ಧಾರ್ಮಿಕ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವುದು ಸೂಕ್ತವಲ್ಲ. ಇಂತಹ ಭಾಷಣಗಳು ಸರ್ಕಾರಕ್ಕೆ ಮುಜುಗರದ ಪರಿಸ್ಥಿತಿಯನ್ನು ಸೃಷ್ಟಿಸುವುದಲ್ಲದೆ ಚುನಾಯಿತ ಸರ್ಕಾರದ ವಿರುದ್ಧ ದ್ವೇಷದ ವಾತಾವರಣವನ್ನು ಸೃಷ್ಟಿಸುತ್ತವೆ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
”ಸಚಿವ ವಿ ಸೆಂಥಿಲ್ ಬಾಲಾಜಿ ಅವರನ್ನು ಏಕಪಕ್ಷೀಯವಾಗಿ ಸಂಪುಟದಿಂದ ವಜಾಗೊಳಿಸಿ ಕೆಲವೇ ಗಂಟೆಗಳಲ್ಲಿ ಅಮಾನತುಗೊಳಿಸಿರುವ ರಾಜ್ಯಪಾಲರ ಕ್ರಮ ಅವರ ರಾಜಕೀಯ ಒಲವನ್ನು ತೋರಿಸುತ್ತದೆ. ಸಚಿವರನ್ನು ಸಂಪುಟಕ್ಕೆ ಸೇರಿಸುವುದು ಅಥವಾ ಅವರನ್ನು ತೆಗೆದುಹಾಕುವುದು ರವಿ ಅವರ ಕೆಲಸವಲ್ಲ, ಇದು ಸಾಂವಿಧಾನಿಕ ನಿಬಂಧನೆಗಳ ಗಂಭೀರ ಉಲ್ಲಂಘನೆಯಾಗಿದೆ” ಎಂದು ಸ್ಟಾಲಿನ್ ಕಿಡಿಕಾರಿದ್ದಾರೆ.
ಮಾಜಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಮಂತ್ರಿಗಳನ್ನು ವಿಚಾರಣೆಗೆ ಒಳಪಡಿಸಲು ಅನುಮತಿಯನ್ನು ರಾಜ್ಯಪಾಲರು ಅನಗತ್ಯವಾಗಿ ವಿಳಂಬ ಮಾಡುತ್ತಾರೆ ಎಂದು ಸ್ಟಾಲಿನ್ ಪತ್ರದಲ್ಲಿ ಬರೆದಿದ್ದಾರೆ.
”ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡಲು ವಿಳಂಬ ಮಾಡುವ ಮೂಲಕ ರವಿ ಅವರು ರಾಜ್ಯ ಸರ್ಕಾರದ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತಾರೆ” ಎಂದು ಆರೋಪ ಮಾಡಿದ್ದಾರೆ.
”ರವಿ ಅವರು ನಾಗಾಲ್ಯಾಂಡ್ ಗವರ್ನರ್ ಆಗಿದ್ದ ವೇಳೆ, ಅವರ ಅಧಿಕಾರಾವಧಿಯೂ ತೃಪ್ತಿಕರವಾಗಿಲ್ಲ. ಅವರು ಅಲ್ಲಿಂದ ನಿರ್ಗಮಿಸಿದ ನಂತರವೇ ರಾಜ್ಯದಲ್ಲಿ ಶಾಂತಿ ನೆಲೆಸಿದೆ ಎಂದು ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ ಹೇಳಿರುವುದಾಗಿ” ಸ್ಟಾಲಿನ್ ಪತ್ರದಲ್ಲಿ ಬರೆದಿದ್ದಾರೆ.
”ತಮ್ಮ ನಡವಳಿಕೆ ಮತ್ತು ಕೆಲಸದಿಂದ ರಾಜ್ಯಪಾಲರು ಪಕ್ಷಪಾತಿ ಎನ್ನುವುದು ಸ್ಪಷ್ಟವಾಗಿದೆ ಹಾಗಾಗಿ ಅವರು ರಾಜ್ಯಪಾಲರ ಹುದ್ದೆಯಲ್ಲಿ ಮುಂದುವರೆಯಲು ಅನರ್ಹರು ಎಂದು ಸಾಬೀತುಪಡಿಸಿದ್ದಾರೆ. ರವಿಯನ್ನು ಉನ್ನತ ಹುದ್ದೆಯಿಂದ ಕೆಳಗಿಳಿಸಲು ಯೋಗ್ಯರಾಗಿದ್ದಾರೆ” ಎಂದು ಸ್ಟಾಲಿನ್ ಮುರ್ಮು ಅವರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡು: ನಮ್ಮ ಸಚಿವರನ್ನು ವಜಾ ಮಾಡಲು ನೀವು ಯಾರು?; ರಾಜ್ಯಪಾಲರಿಗೆ ಸ್ಟಾಲಿನ್ ನೇರ ಪ್ರಶ್ನೆ


