Homeಮುಖಪುಟಗುಜರಾತ್: ಮೋದಿ-ಶಾ ಜೋಡಿಗೆ ’ಮಾಡು ಇಲ್ಲವೇ ಮಡಿ’ ಚುನಾವಣೆ

ಗುಜರಾತ್: ಮೋದಿ-ಶಾ ಜೋಡಿಗೆ ’ಮಾಡು ಇಲ್ಲವೇ ಮಡಿ’ ಚುನಾವಣೆ

- Advertisement -
- Advertisement -

2017ರ ಚುನಾವಣೆಯಂತೆಯೇ 2022ರ ಗುಜರಾತ್ ವಿಧಾನಸಭಾ ಚುನಾವಣೆ ದೇಶದಾದ್ಯಂತ ತೀವ್ರ ಕುತೂಹಲ ಮೂಡಿಸಿದೆ. ವಿಧಾನಸಭೆಗಳ ಚುನಾವಣೆಯ ಫಲಿತಾಂಶದ ಆಧಾರದಲ್ಲಿ ಲೋಕಸಭೆಯ ಫಲಿತಾಂಶ ನಿರ್ಧಾರವಾಗುತ್ತೆ ಎಂದು ಸಮೀಕರಿಸುವುದು ಬಾಲಿಶವಾಗುತ್ತದೆ ನಿಜ. ಆದರೆ ಪ್ರಧಾನಿ ಮೋದಿಯ ಗೃಹರಾಜ್ಯ ಗುಜರಾತ್‌ನ ಚುನಾವಣೆಯಲ್ಲಿ ಒಂದುವೇಳೆ ಬಿಜೆಪಿ ಸೋತಿದ್ದೇ ಆದರೆ 2024ರ ಚುನಾವಣೆಯಲ್ಲಿ ಮೋದಿ-ಶಾ ಜೋಡಿಯ ರಾಜಕೀಯ ಭವಿಷ್ಯ ಬಹುತೇಕ ಖತಂ ಆದಂತೆ ಎಂಬುದು ಹಲವು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಹೀಗಾಗಿ ಹೇಗಾದರೂ ಮಾಡಿ ಗುಜರಾತನ್ನು ಉಳಿಸಿಕೊಳ್ಳಲೇಬೇಕಾದ ’ಮಾಡು ಇಲ್ಲವೇ ಮಡಿ’ ಹೋರಾಟಕ್ಕೆ ಮೋದಿ-ಶಾ ಜೋಡಿ ಇಳಿದಿದೆ.

ಆದರೆ ತಳಮಟ್ಟದ ರಾಜಕೀಯ ವಾಸ್ತವಗಳು ಬಿಜೆಪಿಗೆ ಪೂರಕವಾಗಿಲ್ಲ. ಅಬಾಧಿತವಾಗಿ ಸತತ 27 ವರ್ಷಗಳ ಕಾಲ ಆಡಳಿತ ನಡೆಸಿರುವ ಪಕ್ಷಕ್ಕೆ ಆಡಳಿತ ವಿರೋಧಿ ಅಲೆ ನಿರೀಕ್ಷಿತವೇ. ದ್ವೇಷ ರಾಜಕಾರಣದ ಪ್ರಯೋಗಶಾಲೆ ಮಾಡಿ ಬಹುಸಂಖ್ಯಾತ ಧರ್ಮೀಯರ ಮತಗಳಿಕೆ ಮೂಲಕ ಗೆದ್ದುಬರುತ್ತಿದ್ದ ಮೋದಿ ಮಾದರಿ ರಾಜಕೀಯಕ್ಕೆ ಈ ಬಾರಿ ಹಲವು ಆಯಾಮಗಳಲ್ಲಿ ತೊಡಕುಗಳು ಕಾಣಿಸಿಕೊಂಡಿವೆ.

ತಥಾಕಥಿತ ’ಹಿಂದುತ್ವ’ ರಾಜಕೀಯದಿಂದ ತಮಗೆ ದಕ್ಕಿದ್ದು ಏನೂ ಇಲ್ಲ ಎಂಬ ಅರಿವು ಬಹಳಷ್ಟು ಸಮುದಾಯಗಳಲ್ಲಿ ಮೂಡಿದೆ. ನಿರುದ್ಯೋಗದ, ಬೆಲೆಯೇರಿಕೆ, ರೈತರ ಬವಣೆ ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚೆ ಮುನ್ನೆಲೆಗೆ ಬಂದಿದೆ. ಹಿಂದೂ-ಮುಸ್ಲಿಂ ಹೆಸರಿನಲ್ಲಿ ನಮ್ಮನ್ನು ವಂಚಿಸಲಾಗುತ್ತಿದೆ ಎಂಬ ಭಾವನೆ ಕೂಡ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ. ಮೊದಲ ಸುತ್ತಿನ ಮತದಾನಕ್ಕೆ ಕೇವಲ ಒಂದು ವಾರವಷ್ಟೇ ಉಳಿದಿದ್ದರೂ ಬಿಜೆಪಿ ನಾಯಕರ ದ್ವೇಷ ಭಾಷಣಗಳು ವರದಿಯಾಗಿಲ್ಲ ಎಂಬ ಅಂಶವನ್ನು ನಾವು ಗಮನಿಸಲೇಬೇಕು.

ಗುಜರಾತ್ ಕಾಂಗ್ರೆಸ್‌ನ ಸ್ಥಿತಿಗತಿ

ಮೋದಿ ಸರ್ಕಾರದ ಒಂದು ಪ್ರಮುಖ ರಣಘೋಷಣೆ ಎಂದರೆ “ಕಾಂಗ್ರೆಸ್ ಮುಕ್ತ ಭಾರತ” ಎಂಬುದು. ಚುನಾವಣೆಗಳ ಸಂದರ್ಭದಲ್ಲಿ ಮಾತ್ರವಲ್ಲದೆ ನಿತ್ಯವೂ ಟಿವಿ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಕ್ತಾರರು ಈ ಬಗ್ಗೆ ಅರಚಾಡುವುದನ್ನು ನಾವೆಲ್ಲ ನೋಡಿದ್ದೇವೆ. ಆದರೆ ವಾಸ್ತವ ಸಂಗತಿಯೇನು?

ಕಳೆದ 2017ರ ಚುನಾವಣೆಯ ಫಲಿತಾಂಶವನ್ನೇ ನೋಡಿ. ಸಾವಿರಾರು ಕೋಟಿಗಳನ್ನು ಸುರಿದು, ಮಾಧ್ಯಮಗಳ ದುರ್ಬಳಕೆ, ಅಧಿಕಾರದ ದುರುಪಯೋಗ ಇತ್ಯಾದಿ ಹೀನ ತಂತ್ರಗಳ ಹೊರತಾಗಿಯೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹೆಚ್ಚಿನ ಅಂತರ ಇರಲಿಲ್ಲ ಎಂಬುದು ವಾಸ್ತವ. ಏದುಸಿರು ಬಿಡುತ್ತಾ ಅಧಿಕಾರ ಹಿಡಿದ ಬಿಜೆಪಿ ಗಳಿಸಿದ್ದು 182 ಸ್ಥಾನಗಳಲ್ಲಿ 99 ಮಾತ್ರ. ಅಂದರೆ ಸರಳ ಬಹುಮತದ 92ಕ್ಕಿಂತ ಕೆಲವೇ ಸ್ಥಾನಗಳು ಹೆಚ್ಚು. ತೀವ್ರ ಪೈಪೋಟಿ ಒಡ್ಡಿದ್ದ ಕಾಂಗ್ರೆಸ್ ಗಳಿಸಿದ್ದ ಸ್ಥಾನಗಳು 77. ಶೇಕಡಾವಾರು ಮತಗಳಿಕೆ ಪ್ರಮಾಣದಲ್ಲೂ ಅಷ್ಟೇನೂ ಅಂತರವಿರಲಿಲ್ಲ. ಬಿಜೆಪಿ ಶೇ.49.1 ರಷ್ಟು ಗಳಿಸಿದ್ದರೆ ಕಾಂಗ್ರೆಸ್ ಶೇ.41.4 ರಷ್ಟು ಮತಗಳನ್ನು ಗಳಿಸಿತ್ತು. 2012ರ ಚುನಾವಣೆಗಿಂತಲೂ ಕಾಂಗ್ರೆಸ್ 16 ಸ್ಥಾನಗಳನ್ನು ಹೆಚ್ಚಾಗಿ ಗಳಿಸಿದ್ದರೆ ಅಷ್ಟೇ ಸ್ಥಾನಗಳನ್ನು ಬಿಜೆಪಿ ಕಳೆದುಕೊಂಡಿತ್ತು. ಅಂದರೆ 115ರಿಂದ 99ಕ್ಕೆ ಕುಸಿದಿತ್ತು. ಇದು ’ಚುನಾವಣಾ ಚಾಣಕ್ಯ’ ಖ್ಯಾತಿಯ ಅಮಿತ್ ಶಾ ರಾಜ್ಯದ ಕಟು ವಾಸ್ತವ. ಹೀಗೇ ’ಕಾಂಗ್ರೆಸ್ ಮುಕ್ತ ಭಾರತ’ ಎಂಬ ಹುಸಿಘೋಷಣೆ ಗುಜರಾತ್ ನೆಲದಲ್ಲೇ ಮಕಾಡೆ ಬಿದ್ದಿದೆ.

ರಾಹುಲ್ ಗಾಂಧಿ

ಈ ಬಾರಿ ಕಾಂಗ್ರೆಸ್ ಪಕ್ಷ ಅಬ್ಬರದ ಪ್ರಚಾರ ತಂತ್ರವನ್ನು ಬಿಟ್ಟು ತಣ್ಣಗೆ ತಳಮಟ್ಟದಲ್ಲಿ ಕೆಲಸ ಮಾಡಲು ತೊಡಗಿಸಿಕೊಂಡಿದೆ ಎನ್ನುತ್ತಾರೆ ಚುನಾವಣೆಯ ವಿಶ್ಲೇಷಕರು. ಬೂತ್ ಮಟ್ಟದ ಸಂಘಟನೆ ಹಾಗೂ ಮನೆಮನೆ ಪ್ರಚಾರದ ಕಡೆಗೆ ಹೆಚ್ಚು ಒತ್ತುಕೊಟ್ಟಿದ್ದಾರೆ. “ಕಾಂಗ್ರೆಸ್ ಮಾಡಿದ ಕೆಲಸಗಳು ಮಾತಾಡುತ್ತವೆ” ಎಂಬುದನ್ನು ಒಂದು ಘೋಷವಾಕ್ಯದಂತೆ ಪ್ರಚುರಪಡಿಸಲಾಗುತ್ತಿದೆ. 175 ಕ್ಷೇತ್ರಗಳನ್ನು ಒಳಗೊಳ್ಳುವ 5432 ಕಿಲೋಮೀಟರ್ ಉದ್ದದ ವಿವಿಧ ಯಾತ್ರೆಗಳನ್ನು ಆಯೋಜಿಸಲಾಗಿದೆ. ಜೊತೆಗೆ ಕೆಲವು ದಿನಗಳ ಹಿಂದೆ ಚುನಾವಣಾ ರ್‍ಯಾಲಿ ಮಾಡಿದ ರಾಹುಲ್ ಗಾಂಧಿ ಜನರಿಗೆ 8 ಭರವಸೆಗಳನ್ನು ನೀಡಿದ್ದಾರೆ: 500 ರೂಪಾಯಿಗೆ ಗ್ಯಾಸ್ ಸಿಲಿಂಡರ್, 300 ಯುನಿಟ್ ಉಚಿತ ವಿದ್ಯುತ್, ಸರ್ಕಾರಿ ಉದ್ಯೋಗ ಸೃಷ್ಟಿ, ನಿರುದ್ಯೋಗ ಭತ್ಯೆ, ರೈತರ ಸಾಲಮಮನ್ನಾ ಇತ್ಯಾದಿಗಳನ್ನು ಒಳಗೊಂಡಿವೆ. ಕಾಂಗ್ರೆಸ್‌ನ ಮುಖ್ಯಮಂತ್ರಿಗಳಾದ ಭೂಪೇಶ್ ಬಘೇಲ್ (ಛತ್ತೀಸ್‌ಘರ್), ಅಶೋಕ್ ಗೆಹ್ಲೋಟ್ (ರಾಜಾಸ್ಥಾನ) ಕಣಕ್ಕಿಳಿದಿದ್ದಾರೆ. ಯುವ ನಾಯಕರಾದ ಕನ್ನಯ್ಯ ಕುಮಾರ್, ಜಿಗ್ನೇಶ್ ಮೆವಾನಿ, ಪ್ರಿಯಾಂಕಾ ಗಾಂಧಿ ಮುಂತಾದವರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ನೂತನ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ ಮುಂತಾದವರು ತೊಡಗಿಸಿಕೊಳ್ಳಲಿದ್ದಾರೆ.

ಈ ಬಾರಿ ಕಾಂಗ್ರೆಸ್ ಸೋಷಿಯಲ್ ಇಂಜಿನಿಯರಿಂಗ್‌ನ ತಂತ್ರಗಾರಿಕೆಯನ್ನು ಅಳವಡಿಸುವ ಪ್ರಯತ್ನ ಮಾಡಿದೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಠಾಕೂರ್ ಸಮುದಾಯಕ್ಕೆ ಸೇರಿದವರು. ಪ್ರದೇಶ ಅಧ್ಯಕ್ಷರೇ ಸಾಮಾನ್ಯವಾಗಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುತ್ತಾರೆ ಎಂಬುದು ತಿಳಿದ ಸಂಗತಿ. ಜೊತೆಗೆ ಎರಡು ಉಪಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿಸಿ ಒಂದು ಆದಿವಾಸಿ ಸಮುದಾಯಕ್ಕೆ, ಮತ್ತೊಂದು ಕೋಲಿ ಸಮುದಾಯಕ್ಕೆ ಕೊಡುತ್ತೇವೆಂದು ಘೋಷಿಸಿದ್ದಾರೆ. ಒಬಿಸಿಗಳಲ್ಲಿ ಠಾಕೂರ್ ಜನಸಂಖ್ಯೆ ಸುಮಾರು 11% ಇದೆ. ಆದಿವಾಸಿಗಳು 15% ಮತ್ತು ಕೋಲಿ ಸಮುದಾಯ ಸುಮಾರು 9%. ಜೊತೆಗೆ ಮುಸ್ಲಿಂ, ಸಿಖ್, ಕ್ರೈಸ್ತರನ್ನು ಒಳಗೊಂಡ ಅಲ್ಪಸಂಖ್ಯಾತ ಮತಗಳು ಸುಮಾರು 10% ಇವೆ. ಜೊತೆಗೆ ಮಲ್ಲಿಕಾರ್ಜುನ ಖರ್ಗೆಯವರನ್ನು ಕಾಂಗ್ರೆಸ್ ಅಧ್ಯಕ್ಷಗಾದಿಗೆ ಏರಿಸಿರುವುದರಿಂದ ಸುಮಾರು 6%ನಷ್ಟಿರುವ ದಲಿತ ಮತಗಳ ಮೇಲೆ ಪ್ರಭಾವ ಬೀರುತ್ತದೆ ಎಂಬುದು ಆ ಪಕ್ಷದ ಲೆಕ್ಕಾಚಾರ.

ಪೂರ್ವಭಾವಿ ತಯಾರಿಯೊಂದಿಗೆ ಸಂಘಟನಾ ಶಕ್ತಿಯನ್ನು ವಿನಿಯೋಗಿಸಿದ್ದಲ್ಲಿ ಕಾಂಗ್ರೆಸ್‌ನ ಗೆಲುವಿನ ಅವಕಾಶ ಹೆಚ್ಚಾಗಿಯೇ ಇತ್ತು. ಆದರೆ ಕಾಂಗ್ರೆಸ್‌ಗೆ ಅಂಟಿಕೊಂಡಿರುವ ಜಾಢ್ಯಗಳ ಕಾರಣಕ್ಕೆ ಗೆಲುವನ್ನು ಕೈಚೆಲ್ಲುವ ಸಾಧ್ಯತೆಗಳೇ ಹೆಚ್ಚು.

ಕುಟಿಲ ನೀತಿಗಳನ್ನೇ ಅಸ್ತ್ರವಾಗಿಸಿಕೊಂಡಿರುವ ಬಿಜೆಪಿ 2017ರ ಚುನಾವಣೆಯ ನಂತರದ ದಿನಗಳಲ್ಲಿ ಕಾಂಗ್ರೆಸ್‌ನ ಹಲವು ಶಾಸಕರನ್ನು ’ಸೆಳೆದುಕೊಂಡ’ ಪರಿಣಾಮ ಕಾಂಗ್ರೆಸ್ ಸಂಖ್ಯಾಬಲ ವಿಧಾನಸಭೆಯಲ್ಲಿ 60ಕ್ಕೆ ಕುಸಿದಿದೆ. ಹೀಗೆ ಕಾಂಗ್ರೆಸ್ಸಿಗರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಆಟ ಚುನಾವಣೆ ಘೋಷಣೆಯಾಗುವ ಕೆಲದಿನಗಳವರೆಗೂ ಮುಂದುವರಿದಿತ್ತು. ಈ ಬಾರಿ ಇದು ಬಿಜೆಪಿಗೆ ವರವಾಗಿಯೂ ಇದೆ. ಶಾಪವಾಗಿಯೂ ಇದೆ.

ಬಿಜೆಪಿಯಲ್ಲಿ ಬಂಡಾಯದ ಬಿಸಿ

’ಮೋದಿ ಒಂದು ಮಾತು ಹೇಳಿದರೆ ಟ್ರಂಪ್, ಬೈಡನ್‌ಗಳೂ ಒಪ್ಪಿಕೊಳ್ಳುತ್ತಾರೆ. ಮೋದಿ ಕೆಂಗಣ್ಣು ಬಿಟ್ಟರೆ ಚೀನಾದ ಅಧ್ಯಕ್ಷ ಥರಥರಾ ನಡುಗುತ್ತಾನೆ. ಮೋದಿಯ ಮನವಿಗೆ ಓಗೊಟ್ಟು ರಷ್ಯಾ-ಉಕ್ರೇನ್ ಯುದ್ಧಕ್ಕೆ ರಜೆ ಘೋಷಿಸಲಾಗಿದೆ’ ಎಂಬಿತ್ಯಾದಿ ಪ್ರಚಾರ ವಾಟ್ಸಪ್, ಫೇಸ್‌ಬುಕ್‌ಗಳಲ್ಲಿ ಪ್ರವಾಹೋಪಾದಿಯಲ್ಲಿ ಹರಿಯುತ್ತಿದೆ. ಆದರೆ ತನ್ನದೇ ಪಕ್ಷದ ವಿರುದ್ಧ ಬಂಡೆದ್ದಿರುವ ಅಭ್ಯರ್ಥಿಗಳು ಮಾತ್ರ ಮೋದಿಯ ಮಾತು ಕೇಳುತ್ತಿಲ್ಲ. 32 ಕ್ಷೇತ್ರಗಳಲ್ಲಿ ಹೀಗೆ ಟಿಕೆಟ್ ವಂಚಿತ ಬಂಡಾಯ ಅಭ್ಯರ್ಥಿಗಳು ಈ ಬಾರಿ ಮೋದಿಗೆ ದೊಡ್ಡ ತಲೆನೋವು ತಂದಿದ್ದಾರೆ.

ಆಡಳಿತ ವಿರೋಧಿ ಅಲೆಯನ್ನು ನಿಭಾಯಿಸಲು ಬಿಜೆಪಿ ಅಳವಡಿಸಿಕೊಂಡಿರುವ ಒಂದು ತಂತ್ರವೆಂದರೆ ಒಂದಷ್ಟು ಶಾಸಕರಿಗೆ ಟಿಕೆಟ್ ನಿರಾಕರಿಸಿ ಹೊಸಮುಖಗಳಿಗೆ ಅವಕಾಶ ಕೊಡುವುದು. ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಆಡಳಿತ ವಿರೋಧಿ ಅಲೆಯಿರುವುದರಿಂದ ಸುಮಾರು 50 ಜನ ಶಾಸಕರ ಟಿಕೆಟ್‌ಗೆ ಕತ್ತರಿ ಹಾಕಲಾಗಿದೆ. ಅದರಲ್ಲಿ ಐದು ಮಂದಿ ಮಂತ್ರಿಗಳೂ ಹಾಗೂ ಅಸೆಂಬ್ಲಿ ಸ್ಪೀಕರ್ ಆಗಿದ್ದ ನಿಮಾಬೆನ್ ಆಚಾರ್ಯ ಕೂಡ ಸೇರಿದ್ದಾರೆ.

ಇದನ್ನೂ ಓದಿ: ಗುಜರಾತ್‌: 2036ರ ಒಲಂಪಿಕ್ಸ್‌ ಆಯೋಜನೆ ಕನಸು ಕಂಡ ಬಿಜೆಪಿ ಪ್ರಣಾಳಿಕೆ

ವಡೋದರ ಜಿಲ್ಲೆಯ ವಘೋಡಿಯಾ ಕ್ಷೇತ್ರವನ್ನು ಆರು ಬಾರಿ ಪ್ರತಿನಿಧಿಸಿದ್ದ ಮಧು ಶ್ರೀವಾಸ್ತವ ಬಂಡಾಯದ ಬಾವುಟ ಹಾರಿಸಿ ಬಹಳ ಸುದ್ದಿ ಮಾಡಿದ್ದಾರೆ. ಲ್ಯಾಂಡ್ ಡೆವಲಪರ್, ಸಿನಿಮಾ ನಟ ಹಾಗೂ ಪ್ರಭಾವಿ ರಾಜಕಾರಣಿ ಎನಿಸಿಕೊಂಡಿದ್ದ ಮಧು ಶ್ರೀವಾಸ್ತವ ಅವರನ್ನು ಪಕ್ಕಕ್ಕೆ ಸರಿಸಿ ಪಟೇಲ್ ಜಾತಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. “1996ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ಬಂದಿದ್ದ ನನ್ನನ್ನು ತಾವೇ ಆಹ್ವಾನಿಸಿ ಬಿಜೆಪಿಗೆ ಸೇರಿಸಿಕೊಂಡಿದ್ದರು. ಈಗ ನನ್ನನ್ನು ಮೂಲೆಗೆ ತಳ್ಳುತ್ತಿದ್ದಾರೆ. ನನ್ನನ್ನು ಆರು ಬಾರಿ ಗೆಲ್ಲಿಸಿದ ಜನರ ಒತ್ತಾಯಕ್ಕಾಗಿ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ” ಎಂದು ಘೋಷಿಸಿದ್ದಾರೆ. ಹೈಕಮಾಂಡ್‌ನಿಂದ ನಿಯುಕ್ತಿಗೊಂಡಿದ್ದ ರಾಜ್ಯ ಮಂತ್ರಿ ಹರ್ಷ ಸಂಘವಿ, ಅವರ ಮಾತನ್ನು ಕೇಳುವುದಿರಲಿ, ಭೇಟಿಯಾಗಲಿಕ್ಕೇ ನಿರಾಕರಿಸಿದರು. ಕೊನೆಗೆ ಮಧು ಅವರನ್ನು ಅಮಿತ್ ಶಾ ಜೊತೆ ಭೇಟಿ ಮಾಡಿಸಲು ಸ್ಥಳೀಯ ನಾಯಕರು ಹರಸಾಹಸ ಮಾಡಬೇಕಾಯ್ತು. ಮುಚ್ಚಿದ ಕೋಣೆಯಲ್ಲಿ ಅಮಿತ್ ಶಾ ನಡೆಸಿದ ಮಾತುಕತೆ ಫಲ ನೀಡದೆಹೋಗಿದೆ.

ಎರಡು ಬಾರಿ ಎಸ್ಟಿ ಮೀಸಲು ಕ್ಷೇತ್ರ ನಾಂದೊಡ್‌ನಲ್ಲಿ ಆರಿಸಿ ಬಂದಿದ್ದ, ಬಿಜೆಪಿಯ ಎಸ್ಟಿ ಮೋರ್ಚಾದ ಅಧ್ಯಕ್ಷರಾಗಿದ್ದ ಹರ್ಷದ್ ವಾಸ್ವಾ ಟಿಕೆಟ್ ಕೈತಪ್ಪಿದ್ದರಿಂದ ಮೋರ್ಚಾದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸ್ವತಂತ್ರವಾಗಿ ಸ್ಪರ್ಧಿಸಿದ್ದಾರೆ. ಪಡ್ರಾ ಕ್ಷೇತ್ರದ ಶಾಸಕ ದಿನೇಶ್ ಪಟೇಲ್ ಜಾತಿ ಲೆಕ್ಕಾಚಾರದಿಂದ ಟಿಕೆಟ್ ಕೈತಪ್ಪಿ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ಕರ್ಜನ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಪಕ್ಷಾಂತರ ಮಾಡಿದ ಶಾಸಕ ಅಕ್ಷಯ್ ಪಟೇಲ್‌ಗೆ ಟಿಕೆಟ್ ನೀಡಿದ್ದರಿಂದ ಸ್ಥಳೀಯ ಬಿಜೆಪಿ ಅಭ್ಯರ್ಥಿ ಸತೀಶ್ ನಿಶಾಲಿಯ ಬಂಡೆದ್ದಿದ್ದಾರೆ. ಹೀಗೆ ಸುಮಾರು 32 ಕ್ಷೇತ್ರಗಳಲ್ಲಿ ಬಿಜೆಪಿಯ ವಿರುದ್ಧದ ಬಂಡಾಯ ಕಂಡುಬಂದಿದೆ.

ನಿಮಾಬೆನ್ ಆಚಾರ್ಯ

ಕಳೆದ ಸೋಮವಾರ ಗಾಂಧಿನಗರದಲ್ಲಿರುವ ಬಿಜೆಪಿ ಮುಖ್ಯಕಚೇರಿ ’ಶ್ರೀ ಕಮಲಂ’ ಮುಂಭಾಗದಲ್ಲಿ ದಿನವಿಡೀ ಬಂಡಾಯ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಪ್ರದರ್ಶನ ನಡೆಸಿದರು. ಅವರನ್ನು ಸಮಾಧಾನಪಡಿಸುವ ಯಾವ ತಂತ್ರಗಳೂ ಫಲಿಸಲಿಲ್ಲ. ಕೊನೆಗೆ ದೆಹಲಿಯಿಂದ ಅಮಿತ್ ಶಾ ನೇರವಾಗಿ ಅಖಾಡಕ್ಕೆ ಇಳಿಯಬೇಕಾಯ್ತು. ಆದರೂ ಪರಿಸ್ಥಿತಿ ಪೂರ್ತಿ ತಣ್ಣಗಾಗಿಲ್ಲ.

ಕಾಂಗ್ರೆಸ್‌ನಿಂದ ಸೆಳೆದುಕೊಂಡ ಹೆಚ್ಚಿನ ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟು ಕಣಕ್ಕಿಳಿಸಲಾಗಿದೆ. ಮತ್ತೊಂದು ಕಡೆ ತನ್ನದೆ ಪಕ್ಷದ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾಣಿ ಹಾಗೂ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್‌ರಂತಹ ನಾಯಕರು ಚುನಾವಣಾ ಕಣದಿಂದ ಪರಾರಿಯಾಗುತ್ತಿದ್ದಾರೆ. ಇದು ಬಿಜೆಪಿಯ ಅಸಲಿ ಸ್ಥಿತಿ.

ಮೋದಿ-ಶಾ ಜೋಡಿಗೆ ಅಳಿವು ಉಳಿವಿನ ಪ್ರಶ್ನೆಯಾಗಿರುವ ಈ ಚುನಾವಣೆ ಗೆಲ್ಲಲು ಬಿಜಪಿ ತನ್ನೆಲ್ಲಾ ಶಕ್ತಿ ಸಾಮರ್ಥ್ಯವನ್ನು ವಿನಿಯೋಗಿಸುತ್ತಿದೆ. ನಿತಿನ್ ಗಡ್ಕರಿ, ಜೆಪಿ ನಡ್ಡಾ ಮಾತ್ರವಲ್ಲದೆ ಯೋಗಿ ಆದಿತ್ಯನಾಥ್, ಶಿವರಾಜ್ ಸಿಂಗ್ ಚೌಹಾಣ್ ಒಳಗೊಂಡಂತೆ ಆರು ಮಂದಿ ಬಿಜೆಪಿ ಮುಖ್ಯಮಂತ್ರಿಗಳು, ಸುಮಾರು ನೂರು ಜನ ಎಂಪಿಗಳು, ಜೊತೆಗೆ ಬಿಜೆಪಿ-ಆರೆಸ್ಸೆಸ್‌ನ ಸಾವಿರಾರು ಕಾರ್ಯಕರ್ತರು ಬೀದಿಗಿಳಿದಿದ್ದಾರೆ. ಅಂದರೆ ಅಕ್ಷರಶಃ ಬೀದಿಗಿಳಿದಿದ್ದಾರೆ. ಮನೆಮನೆಗೆ ತೆರಳಿ ಕರಪತ್ರ ಹಂಚುತ್ತಿದ್ದಾರೆ! ಈ ಕಾರ್ಯಕ್ಕೆ ಸ್ವತಃ ಪ್ರಧಾನಿ ಮೋದಿಯೂ ಜೊತೆಗೂಡಿದ್ದು ವಿಶೇಷವೇ ಸರಿ. ಸದಾ ಹೈಫೈ ರ್‍ಯಾಲಿಗಳನ್ನು ನಡೆಸಿ ಚುನಾವಣೆಗಳನ್ನು ಗೆಲ್ಲುತ್ತಿದ್ದ ಮೋದಿ ಪಟಾಲಂ ಬೀದಿಗಿಳಿದು ಮನೆಮನೆಗೆ ಕರಪತ್ರ ಹಂಚುತ್ತಿದ್ದಾರೆಂದರೆ ಅದು ಭಾರತ್ ಜೋಡೋ ಯಾತ್ರೆಯ ಪರಿಣಾಮವೂ ಹೌದು.

ಅಷ್ಟು ಮಾತ್ರವಲ್ಲ, ತನ್ನ ಸಂಪುಟದ ಮಂತ್ರಿಗಳಿಗೆ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಕೈಗೇ ಎಟುಕದಂತೆ ದರ್ಬಾರ್ ನಡೆಸುತ್ತಿರುವ ಮೋದಿ ಮಹಾಶಯ ಗಾಂಧಿನಗರದ ಪಕ್ಷದ ಕಚೇರಿಯಲ್ಲಿ ಸಾಧಾರಣ ಬೆಂಚ್ ಮೇಲೆ ಕುಳಿತು ನಭೂತೋ ನಭವಿಷ್ಯತಿ ಎಂಬಂತೆ ಕಚೇರಿ ಸಿಬ್ಬಂದಿ ಮತ್ತು ಕಾರ್ಯಕರ್ತರ ಯೋಗಕ್ಷೇಮ ವಿಚಾರಿಸುವ ಮಾತುಕತೆ ನಡೆಸಿದ್ದಾರೆ. ರಾಹುಲ್ ಗಾಂಧಿಯ ಪರಿಶ್ರಮ ಮೋದಿಯಂಥವರನ್ನು ಕೆಳಕ್ಕಿಳಿಯುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.

ಸಂಪನ್ಮೂಲಗಳ ವಿಷಯಕ್ಕೆ ಬರೋಣ.

ಕಳೆದ ಕೆಲವಾರು ವರ್ಷಗಳಿಂದ ಕಾರ್ಪೊರೆಟ್ ಕುಳಗಳಿಂದ ಚುನಾವಣಾ ದೇಣಿಗೆ ಏಕಮುಖವಾಗಿ ಬಿಜೆಪಿ ಪಕ್ಷಕ್ಕೆ ಹರಿದುಬರುತ್ತಿದೆ ಎಂಬುದು ಇದೀಗ ಜಗಜ್ಜಾಹೀರಾಗಿರುವ ಸಂಗತಿ. ಸಾಲದ್ದಕ್ಕೆ ಗುಜರಾತ್ ಮೂಲದ ಕುಖ್ಯಾತ ಉದ್ಯಮಿಗಳಾದ ಅದಾನಿ, ಅಂಬಾನಿ ಮತ್ತಿತರರಿಂದ ದಂಡಿಯಾಗಿ ಹಣ ಹರಿದುಬರುತ್ತದೆ ಎಂಬುದು ನಿರೀಕ್ಷಿತ. ಪ್ರಚಾರದಲ್ಲಿ, ಹಣ ಹಂಚುವುದರಲ್ಲಿ ಈ ಅಬ್ಬರವನ್ನು ಕಾಣಬಹುದು. ಮಾಧ್ಯಮಗಳಲ್ಲಿ ಈಗಾಗಲೇ ಬಿಜೆಪಿ ಭರ್ಜರಿ ಗೆಲುವು ಸಾಧಿಸಿರುವುದಕ್ಕೂ ಹಣದ ಥೈಲಿಯೇ ನೇರ ಹೊಣೆ.

ಇದನ್ನೂ ಓದಿ: 2002 ಗುಜರಾತ್‌ ಗಲಭೆಕೋರರಿಗೆ ಪಾಠ ಕಲಿಸಿದ್ದೇವೆ ಎಂದ ಅಮಿತ್‌ ಶಾ; ಓವೈಸಿ ತಿರುಗೇಟು

ಇನ್ನು ಜಾಲತಾಣಗಳ ವಿಷಯ ನೋಡೋಣ. ಗುಜರಾತ್ ಬಿಜೆಪಿ ಐಟಿಸೆಲ್‌ನ ಮುಖ್ಯಸ್ಥ ಡಾ. ಪಂಕಜ್ ಶುಕ್ಲ ಅವರೇ ಕೊಟ್ಟಿರುವ ಮಾಹಿತಿಯ ಪ್ರಕಾರ “ನೂರಕ್ಕಿಂತ ಹೆಚ್ಚು ಪೂರ್ಣಾವಧಿ ’ಸೋಷಿಯಲ್ ಮೀಡಿಯಾ ಯೋಧರು’ ಕೇಂದ್ರ ಸ್ಥಾನದಲ್ಲಿ ಚುನಾವಣೆಯ ಪ್ರಚಾರದ ಕೆಲಸ ಮಾಡುತ್ತಿದ್ದಾರೆ. ಇವರ ಜೊತೆಗೆ ರಾಜ್ಯದಾದ್ಯಂತ ಸುಮಾರು 10,000 ಕಾರ್ಯಕರ್ತರು ಸೋಷಿಯಲ್ ಮೀಡಿಯಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಉದ್ದೇಶಕ್ಕಾಗಿ ಸುಮಾರು 50,000 ವಾಟ್ಸಪ್ ಗ್ರೂಪ್‌ಗಳನ್ನು ರಚಿಸಲಾಗಿದೆ.”

ಆದಿವಾಸಿ ಪ್ರದೇಶದ ಮೇಲೆ ಕಣ್ಣು

ಗುಜರಾತಿನಲ್ಲಿ ಆದಿವಾಸಿಗಳು ಶೇಕಡ 15ರಷ್ಟಿದ್ದಾರೆ. ದೇಶದ ಆದಿವಾಸಿ ಜನಸಂಖ್ಯೆಯಲ್ಲಿ 5ನೇ ಸ್ಥಾನದಲ್ಲಿರುವ ರಾಜ್ಯ ಗುಜರಾತ್. ಗ್ರಾಮೀಣ ಪ್ರದೇಶದ ಐದನೇ ಒಂದು ಭಾಗ, ಅಂದರೆ ಸುಮಾರು 20% ಜನಸಂಖ್ಯೆ ಆದಿವಾಸಿಗಳಿದ್ದರೆ ನಗರ ಪ್ರದೇಶಗಳಲ್ಲಿ ಅವರ ಸಂಖ್ಯೆ ಕೇವಲ 2% ಮಾತ್ರ.

ಅದರಲ್ಲೂ ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳಿಗೆ ಅಂಟಿಕೊಂಡಿರುವ ಪೂರ್ವಭಾಗದ ಜಿಲ್ಲೆಗಳಲ್ಲಿ ಈ ಆದಿವಾಸಿ ಜನರು ಹೆಚ್ಚಾಗಿ ಕೇಂದ್ರೀಕೃತಗೊಂಡಿದ್ದಾರೆ. ಇಲ್ಲಿ ಒಟ್ಟು 26 ಎಸ್ಟಿ ಮೀಸಲು ಕ್ಷೇತ್ರಗಳಿವೆ.

ಮಧು ಶ್ರೀವಾಸ್ತವ

1980ರಲ್ಲಿ ಕಾಂಗ್ರೆಸ್ ಪಕ್ಷ ಎಸ್ಟಿ ಮೀಸಲು ಕ್ಷೇತ್ರಗಳಲ್ಲಿ ಸುಮಾರು 60% ಮತಗಳನ್ನು ಗಳಿಸಿತ್ತು. ಬಿಜೆಪಿ ಅಧಿಕಾರದ ಈ ಎರಡೂವರೆ ದಶಕಗಳಲ್ಲಿ ಕ್ರಮೇಣ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿದೆ. ಆದರೆ ಇಂದಿಗೂ ಕೂಡ ರಾಜ್ಯದ ಒಟ್ಟು 26 ಎಸ್ಟಿ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿಗಿಂತ ಶೇಕಡಾವಾರು ಹೆಚ್ಚಿನ ಮತಗಳನ್ನು ಮತ್ತು ಹೆಚ್ಚಿನ ಸೀಟುಗಳನ್ನು ಗಳಿಸಿರುವುದು ಕಾಂಗ್ರೆಸ್‌ನ ವಿಶೇಷ ಸಾಧನೆಯೇ ಸರಿ. 2017ರ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 47ಮತಗಳೊಂದಿಗೆ ಅದು 17 ಸ್ಥಾನಗಳನ್ನು ಗಳಿಸಿತ್ತು. ಬಿಜೆಪಿ ಮತಗಳಿಕೆಯಲ್ಲಿ ಕೇವಲ ಶೇಕಡ 1ರಷ್ಟು ಮಾತ್ರ ಕಡಿಮೆ, ಅಂದರೆ 46% ಗಳಿಸಿದ್ದರೂ ಸ್ಥಾನಗಳನ್ನು ಗೆದ್ದದ್ದು ಮಾತ್ರ ಕೇವಲ 9. ಹೀಗಾಗಿ ಈ ಬಾರಿ ಆದಿವಾಸಿ ಕ್ಷೇತ್ರಗಳ ಮೇಲೆ ವಿಶೇಷವಾಗಿ ಕಣ್ಣಿಟ್ಟು ಕೆಲಸ ಮಾಡುತ್ತಿದೆ.

ದ್ರೌಪದಿ ಮುರ್ಮುರನ್ನು ರಾಷ್ಟ್ರಪತಿ ಮಾಡಿದ್ದರಲ್ಲಿ ಆದಿವಾಸಿ ಮತಗಳ ಮೇಲೆ ಕಣ್ಣಿಟ್ಟಿದ್ದೂ ಒಂದು ಕಾರಣ ಎನ್ನುವ ಮಾತು ಕೇಳಿ ಬಂದಿತ್ತು. ಈ ವಾದಕ್ಕೆ ಪುಷ್ಠಿ ಕೊಡುವಂತೆ ಬಿಜೆಪಿ ತನ್ನ ಪ್ರಚಾರವನ್ನು ಆದಿವಾಸಿ ಪ್ರದೇಶಗಳ ಮೇಲೆ ವಿಶೇಷವಾಗಿ ಕೇಂದ್ರೀಕರಿಸಿರುವುದು ಕಂಡುಬರುತ್ತಿದೆ. ಹೀಗಾಗಿಯೇ ಅನುಸೂಚಿತ ಪ್ರದೇಶಗಳ ಪಂಚಾಯ್ತಿಗಳಿಗೆ ವಿಶೇಷ ಅಧಿಕಾರ ಕೊಡುವ ಕೇಂದ್ರದ ಕಾಯ್ದೆಯನ್ನು ಗುಜರಾತ್‌ನಲ್ಲಿ ಜಾರಿ ಮಾಡುವ ಭರವಸೆಯನ್ನೂ ಎರಡೂ ಪಕ್ಷಗಳು ಕೊಡುತ್ತಿವೆ.

ರಾಹುಲ್ ಗಾಂಧಿ ಇತ್ತೀಚೆಗೆ ಆದಿವಾಸಿ ಪ್ರದೇಶದ ಸಭೆಯೊಂದರಲ್ಲಿ ಮಾತಾಡುತ್ತಾ “ಬಿಜೆಪಿಯವರು ನಿಮ್ಮನ್ನು ಆದಿವಾಸಿಗಳು ಎಂದು ಒಪ್ಪುತ್ತಿಲ್ಲ, ಹಾಗೆ ಒಪ್ಪಿಕೊಂಡರೆ ನಿಮಗೆ ಕಾಡಿನ ಮೇಲಿನ ಹಕ್ಕನ್ನು ಕೊಡಬೇಕಾಗುತ್ತದೆ. ನಿಮ್ಮನ್ನು ಒಕ್ಕಲೆಬ್ಬಿಸಿ ನಿಮ್ಮ ಭೂಮಿಯನ್ನು ಕಸಿದು ತಮ್ಮ ಕಾರ್ಪೊರೆಟ್ ಮಿತ್ರರಿಗೆ ಕೊಡುವುದೇ ನರೇಂದ್ರ ಮೋದಿಯವರ ಉದ್ದೇಶ. ಅವರಿಗೆ ನಿಮ್ಮ ಅಭಿವೃದ್ಧಿ ಬೇಕಿಲ್ಲ. ಆದ್ದರಿಂದಲೇ ನಿಮ್ಮನ್ನು ವನವಾಸಿ ಎಂದು ಕರೆಯುತ್ತಾರೆ” ಎಂದು ನೇರವಾಗಿ ದಾಳಿ ನಡೆಸಿದ್ದಾರೆ. ಈ ನೇರ ವಾಗ್ದಾಳಿ ರಾಜಕೀಯ ವಲಯದಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ. ಯಾಕೆಂದರೆ ಇಷ್ಟು ವರ್ಷಗಳ ಕಾಲ ಮೋದಿಯ ಆಡಳಿತ ಮಾಡಿದ್ದು ಅದನ್ನೇ.

ಮೋದಿಗೆ ಮಾತಾಡಲಿಕ್ಕೆ ಇಷ್ಯೂಗಳೇ ಇಲ್ಲ!

ಈ ಮಾತು ವಿಚಿತ್ರವಾದರೂ ಸತ್ಯ. ಕಳೆದ 27 ವರ್ಷಗಳಿಂದ ತಮ್ಮ ಆಡಳಿತದಲ್ಲಿ ಮಾಡಿದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತ ಕೇಳಲು ಮುಖ ಇಲ್ಲದಂತಾಗಿದೆ. ದೇಶಾದ್ಯಂತ ಭಾರೀ ಪ್ರಚಾರದಲ್ಲಿರುವ ’ಗುಜರಾತ್ ಮಾಡೆಲ್’ ಎಂಬುದು ಗುಜರಾತ್ ಚುನಾವಣೆಯಲ್ಲಿ ಎಲ್ಲಿಯೂ ಕೇಳಿಬರುವುದಿಲ್ಲ. ಇದು ಅಸಲಿಯತ್ತು. ಹೋಗಲಿ, ಕಳೆದ 8 ವರ್ಷಗಳಿಂದ ಪ್ರಧಾನಿಯಾಗಿ ತನ್ನ ಸಾಧನೆಯೇನು ಎಂಬುದನ್ನಾದರೂ ಮತದಾರರ ಮುಂದಿಡಬೇಕಿತ್ತಲ್ಲಾ?! ಉಹೂಂ, ಅಂಥಾ ಯಾವ ಸಣ್ಣ ಮಾತೂ ಹೊರಡುತ್ತಿಲ್ಲ. ಯಾಕೆ?

ಬದಲಿಗೆ ಭಾವನಾತ್ಮಕ ವಿಷಯಗಳ ಮೇಲೆ ಮತ ಪ್ರಚಾರ ನಡೆಸುತ್ತಿದ್ದಾರೆ. “ನಾನು ಬೆಳಿಗ್ಗೆ ಎದ್ದ ಕೂಡಲೇ ನಿಂದನೆ, ದೂಷಣೆಗಳನ್ನೇ ಉಣ್ಣುತ್ತಿದ್ದೇನೆ, ಪ್ರತಿನಿತ್ಯ ಎರಡರಿಂದ ನಾಲ್ಕು ಕೆಜಿಯಷ್ಟು ಬೈಗುಳಗಳನ್ನು ಉಣ್ಣಬೇಕಾಗಿದೆ” ಎಂದು ಅಲವತ್ತುಕೊಂಡಿದ್ದಾರೆ. ಜೊತೆಜೊತೆಗೆ ಗುಜರಾತಿ ಅಸ್ಮಿತೆ ಇತ್ಯಾದಿಗಳನ್ನು ಮುಂದುಮಾಡಲಾಗುತ್ತಿದೆ.

ಇಂತಹ ಭಾವನಾತ್ಮಕ ವಿಷಯಗಳ ಜೊತೆಗೆ ಹಲವು ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡುವ ನಾಟಕ ನಡೆಸಿದ್ದಾರೆ. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸಚಿವ ಸಂಪುಟ ಅಂತಿಮ ಒಪ್ಪಿಗೆ ಸೂಚಿಸಿದ್ದ ಹೂಡಿಕೆಯ ಒಪ್ಪಂದಗಳನ್ನು ಏಕಾಏಕಿ ರದ್ದುಗೊಳಿಸಿ ಅವನ್ನು ಗುಜರಾತ್‌ಗೆ ವರ್ಗಾಯಿಸಲಾಗಿದೆ. ಈ ಬಗ್ಗೆ ಮಹಾರಾಷ್ಟ್ರದ ವಿರೋಧ ಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿವೆ. ಹೀಗಿದ್ದರೂ ಮೋದಿ ಮಹಾಶಯರಿಗೆ ಈ ಹೂಡಿಕೆ ಸ್ಥಳಾಂತರ ತೀರಾ ಅನಿವಾರ್ಯವಾಗಿತ್ತು. ಯಾಕೆಂದರೆ ಅಲ್ಲಿ ಜನರ ಮುಂದೆ ತೋರಿಸಲು ಹೆಚ್ಚೇನೂ ಉಳಿದಿಲ್ಲ. ಗುಜರಾತ್‌ನ ಕಟು ವಾಸ್ತವಗಳು ಹೀಗಿವೆ.

ಇದನ್ನೂ ಓದಿ: ಗುಜರಾತ್‌: BJP ವಿರುದ್ಧ ಮತ ಚಲಾಯಿಸಲು ನಿರ್ಧರಿಸಿದ 60 ಲಕ್ಷ ಜನಸಂಖ್ಯೆಯ ಮಾಲ್ಧಾರಿ ಸಮುದಾಯ!

ಏನೇ ಪ್ರತಿಕೂಲ ಪರಿಸ್ಥಿತಿಗಳಿದ್ದಾಗ್ಯೂ ಬಿಜೆಪಿಯ ಮೇಲ್ಜಾತಿ ಮತಬ್ಯಾಂಕ್ ಈಗಲೂ ಸ್ಥಿರವಾಗಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಬ್ರಾಹ್ಮಣ, ಬನಿಯಾ, ಜೈನ, ಪಟೇಲ್, ರಜಪೂತ್ ಜಾತಿಗಳ ಸುಮಾರು 35 ರಿಂದ 40% ಮತಗಳು ಈಗಲೂ ಬಿಜೆಪಿ ತೆಕ್ಕೆಯಲ್ಲಿವೆ. ಇನ್ನು ಅಡ್ಡಗೋಡೆಯ ಮೇಲೆ ಕುಳಿತಿರುವ 12-15% ಮತದಾರರನ್ನು ಯಾರು ಒಲಿಸಿಕೊಳ್ಳುತ್ತಾರೆ ಎಂಬುದು ಯಕ್ಷಪ್ರಶ್ನೆ.

ಥರ್ಡ್ ಅಂಪೈರ್ ಎಎಪಿ

ಪಂಜಾಬಿನ ಗೆಲುವಿನ ನಂತರ ಭಾರೀ ಉತ್ಸಾಹದಲ್ಲಿರುವ ಕೇಜ್ರಿವಾಲ್‌ರ ಆಮ್ ಆದ್ಮಿ ಪಕ್ಷ ಈ ಬಾರಿ ಗುಜರಾತಿನಲ್ಲಿ ಭಾರೀ ಸಂಚಲನವನ್ನೇ ಮೂಡಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಬಾರಿ ಪರಿವರ್ತನೆಗಾಗಿ ಓಟು ಎಂಬುದು ಅವರ ಘೋಷಣೆ. ಬಿಜೆಪಿಯ ಸುದೀರ್ಘ ದುರಾಡಳಿತದಿಂದ ಬೇಸತ್ತಿರುವ ಜನರು ಆಮ್ ಆದ್ಮಿ ಕಡೆಗೆ ಒಲವು ತೋರುತ್ತಿರುವುದು ಒಂದು ಹೊಸ ವಿದ್ಯಮಾನ. ಹೀಗಾಗಿ ಈ ಬಾರಿ ಎಎಪಿ ಪಡೆದುಕೊಳ್ಳುವ ಮತಗಳು ಚುನಾವಣಾ ಲೆಕ್ಕಾಚಾರಗಳನ್ನೇ ಅದಲುಬದಲು ಮಾಡಿಬಿಡುವ ಸಾಧ್ಯತೆಯಿದೆ.

ಕೇಜ್ರಿವಾಲ್‌

ಆದರೆ ಎಎಪಿಯ ಪ್ರಭಾವ ಇರುವುದು ಹೆಚ್ಚಾಗಿ ನಗರಪ್ರದೇಶಗಳಲ್ಲಿ. ಅಹಮದಾಬಾದ್, ಗಾಂಧಿನಗರ್, ಸೂರತ್, ರಾಜಕೋಟ್ ಮುಂತಾದ ಕಡೆಗಳಲ್ಲಿ. ಗ್ರಾಮೀಣ ಪ್ರದೇಶಗಳಲ್ಲಿ ಎಎಪಿ ಪ್ರಭಾವ ಅಷ್ಟಾಗಿ ಕಂಡುಬರುತ್ತಿಲ್ಲ. ವಿಶೇಷವೆಂದರೆ ಬಿಜೆಪಿಯ ಬೇಸ್ ಇರುವುದು ಕೂಡ ನಗರಪ್ರದೇಶಗಳಲ್ಲೇ. ಸತತವಾಗಿ ಬಿಜೆಪಿ ಗೆದ್ದು ಬರುತ್ತಿರುವುದು ನಗರಗಳಲ್ಲಿನ ಕ್ಷೇತ್ರಗಳ ಬಲದಿಂದಲೇ. ಹೀಗಾಗಿ ಈ ಬಾರಿ ಎಎಪಿಯ ಪೈಪೋಟಿ ಬಿಜೆಪಿಗಳ ಮತಗಳನ್ನು ಕತ್ತರಿಸಲಿದೆ ಎಂಬ ಮಾತೂ ಕೇಳಿ ಬರುತ್ತಿದೆ.

ಆದರೆ ಕೇಜ್ರಿವಾಲ್ ತಮ್ಮ ಪ್ರಚಾರವನ್ನು ಕಾಂಗ್ರೆಸ್ ವಿರುದ್ಧ ಕೇಂದ್ರೀಕರಿಸಿದ್ದು ’ಕಾಂಗ್ರೆಸ್‌ಗೆ ಮತಹಾಕಿ ನಿಮ್ಮ ಮತವನ್ನು ವ್ಯರ್ಥ ಮಾಡಿಕೊಳ್ಳಬೇಡಿ’ ಎಂಬ ಕ್ಯಾಂಪೇನ್ ನಡೆಸುತ್ತಿದ್ದಾರೆ. ದೆಹಲಿ ಮತ್ತು ಪಂಜಾಬ್ ರಾಜ್ಯಗಳ ಸರ್ಕಾರಿ ಜಾಹಿರಾತು ಗುಜರಾತಿ ಮಾಧ್ಯಮಗಳಲ್ಲಿ ದಂಡಿಯಾಗಿ ಅಚ್ಚಾಗುತ್ತಿವೆ. ಎಎಪಿಯ ಬ್ರಾಂಡ್ ಐಟಂಗಳಾದ ಉಚಿತ ನೀರು, ಉಚಿತ ವಿದ್ಯುತ್, ಉತ್ತಮ ಸರ್ಕಾರಿ ಶಾಲೆ, ಉಚಿತ ಆರೋಗ್ಯ ವ್ಯವಸ್ಥೆ ಘೋಷಣೆಗಳು ಒಂದಷ್ಟು ಮತದಾರರನ್ನು ಖಂಡಿತ ಸೆಳೆಯುತ್ತವೆ. ಆದರೆ ಎಷ್ಟು ಸ್ಥಾನಗಳಾಗಿ ಅವು ಪರಿವರ್ತನೆ ಹೊಂದಲಿವೆ ಎಂಬುದರ ಬಗ್ಗೆ ವಿಶ್ಲೇಷಕರಲ್ಲಿ ಭಿನ್ನವಿಭಿನ್ನವಾದ ಅಭಿಪ್ರಾಯಗಳಿವೆ. ಕೇಜ್ರಿವಾಲ್ ಮುಂದಿನ ಸರ್ಕಾರ ನಮ್ಮದೇ ಎಂದು ಬಹಳ ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಿದ್ದರೂ ವಸ್ತುಸ್ಥಿತಿ ಹಾಗಿಲ್ಲ.

ಈ ಹಿನ್ನೆಲೆಯಲ್ಲಿ ಎಎಪಿ-ಬಿಜೆಪಿ ಸಂಘರ್ಷ ತಾರಕಕ್ಕೇರಿದೆ. ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಯನ್ನು ಬಲವಂತವಾಗಿ ಎಳೆದೊಯ್ದು ರಾಜೀನಾಮೆ ಕೊಡಿಸಿದ ಘಟನೆ ನಡೆದಿದೆ. ಬಿಜೆಪಿಯ ಗೂಂಡಾಗಿರಿಗೆ ಹೆದರಿ ಕೆಲವು ಎಎಪಿ ಅಭ್ಯರ್ಥಿಗಳು ಕಿಡ್ನಾಪ್ ಆಗುವ ಭಯದಿಂದ ಅಜ್ಞಾತವಾಸಕ್ಕೆ ಹೋಗಬೇಕಾದ ಸ್ಥಿತಿ ಬಂದಿದೆ.

ಇದನ್ನೂ ಓದಿ: ಗುಜರಾತ್‌: ಬಂಡಾಯವೆದ್ದ 12 ನಾಯಕರಿಗೆ ಬಿಜೆಪಿಯಿಂದ ಗೇಟ್‌ಪಾಸ್‌

ಸಾಲದ್ದಕ್ಕೆ ದೆಹಲಿಯ ನಗರ ನಿಗಮಗಳ ಚುನಾವಣೆಯನ್ನು ಗುಜರಾತ್ ಚುನಾವಣೆಯ ಜೊತೆಜೊತೆಗೆ ನಡೆಯುವಂತೆ ನಿಗದಿ ಮಾಡಿದ್ದು ಕೂಡ ಕೇಜ್ರಿವಾಲ್‌ರನ್ನು ಕಟ್ಟಿಹಾಕುವ ಪ್ರಯತ್ನ ಎಂಬ ಮಾತೂ ಕೇಳಿಬಂದಿದೆ. ಏನೇ ಇದ್ದರೂ ಈ ಬಾರಿ ಗುಜರಾತಿನ ಚುನಾವಣೆಯ ಫಲಿತಾಂಶವನ್ನು ಅಂತಿಮವಾಗಿ ನಿರ್ಧರಿಸುವ ಥರ್ಡ್ ಅಂಪೈರ್ ಸ್ಥಾನದಲ್ಲಿ ಎಎಪಿ ಕೂತಿದೆ.

ಏನೆಲ್ಲಾ ಕಸರತ್ತು ನಡೆಸಿ, ಕೊನೆಗೆ ಅಸಾಂವಿಧಾನಿಕ ವಿಧಾನಗಳ ಮೂಲಕವಾದರೂ ಬಿಜೆಪಿ ಅಧಿಕಾರ ಹಿಡಿಯಲೇಬೇಕಾದ ’ಅನಿವಾರ್ಯತೆ’ ಮೋದಿ-ಶಾ ಜೋಡಿಗಿದೆ. ಅಷ್ಟು ಸುಲಭವಾಗಿ ಅವರು ಗುಜರಾತ್ ಕೈಜಾರಿ ಹೋಗಲು ಬಿಡಲಾರರು ಎಂಬುದೇ ಎಲ್ಲ ವಿಶ್ಲೇಷಕರ ಅಭಿಪ್ರಾಯ. ಒಂದುವೇಳೆ ಬಹುಮತಕ್ಕೆ ಕೆಲವು ಸ್ಥಾನಗಳ ಕೊರತೆ ಬಿದ್ದಲ್ಲಿ ಬಿಜೆಪಿ ಬಳಿ ಹೇಗೂ ಇದ್ದೇ ಇದೆಯಲ್ಲಾ ಕುದುರೆ ವ್ಯಾಪಾರದ ಅಸ್ತ್ರ

ಹಾರ್ದಿಕ್ ಪಟೇಲ್

ಹಾರ್ದಿಕ್ ಪಟೇಲ್ ಫ್ಯಾಕ್ಟರ್

ಮೂಲತಃ ಕೃಷಿಕರಾದ ಹಾಗೂ ವ್ಯಾಪಾರ ವಹಿವಾಟಿನಲ್ಲೂ ಗಣನೀಯ ಪಾಲು ಹೊಂದಿರುವ ಪಟೇಲ್ ಜಾತಿ ಆಗಲೂ, ಈಗಲೂ ಬಿಜೆಪಿಯ ಭದ್ರಕೋಟೆ. ಪಟೇಲ್ ಜಾತಿಗೆ ಮೀಸಲಾತಿ ಬೇಕೆಂಬ ಹೋರಾಟದಲ್ಲಿ ಮುಂಚೂಣಿಗೆ ಬಂದಿದ್ದ ಯುವನಾಯಕ ಹಾರ್ದಿಕ್ ಪಟೇಲ್ ಕಟ್ಟಾ ಬಿಜೆಪಿ ವಿರೋಧಿಯಾಗಿದ್ದವರು. 2020ರಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದ್ದರು. ಆತನಿಗೆ ಕಾರ್ಯಾಧ್ಯಕ್ಷ ಪಟ್ಟ ಕೂಡ ಕೊಡಲಾಗಿತ್ತು. ಪಟೇಲ್ ಯುವಜನರ ಕಣ್ಮಣಿಯಾಗಿ ಬೆಳೆಯುತ್ತಿದ್ದ ಹಾರ್ದಿಕ್ ಕಾಂಗ್ರೆಸ್ ಸೇರಿದ್ದು ಬಿಜೆಪಿಗೆ ನುಂಗಲಾರದ ತುತ್ತಾಗಿತ್ತು. ಆತನ ಮೇಲೆ ಹತ್ತಾರು ಕೇಸುಗಳನ್ನು ಜಡಿದು ಹಲವು ಬಾರಿ ಬಂಧಿಸಿ ಜೈಲಿಗಟ್ಟಲಾಯ್ತು. ಒಂದು ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯ ಶಿಕ್ಷೆ ಕೂಡಾ ವಿಧಿಸಿತ್ತು. ಪರಿಣಾಮವಾಗಿ ಆತ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಾಗಲಿಲ್ಲ. ಹಾರ್ದಿಕ್‌ಗೆ ಶಿಕ್ಷೆ ವಿಧಿಸಿದ್ದ ಆದೇಶಕ್ಕೆ ಇದೇ ಏಪ್ರಿಲ್ 12ರಂದು ಸುಪ್ರಿಂಕೋರ್ಟ್ ತಡೆಯಾಜ್ಞೆ ಕೊಟ್ಟಿದೆ. ಮೇ 9ರಂದು ಸೆಷನ್ ಕೋರ್ಟ್ ಈತನ ಮೇಲಿನ ಕೇಸೊಂದನ್ನು ವಾಪಸ್ ಪಡೆಯಲು ಅನುಮತಿ ಕೊಟ್ಟಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಹಾರ್ದಿಕ್ ಪಟೇಲ್ ಬಿಜೆಪಿಯನ್ನು ಬಹಿರಂಗವಾಗಿ ಹೊಗಳಲು, ಕಾಂಗ್ರೆಸ್ ನಾಯಕರನ್ನು ಹಿಗ್ಗಾಮುಗ್ಗಾ ಟೀಕಿಸಲು ಶುರುವಿಟ್ಟ. ಕಾಂಗ್ರೆಸ್ ಪಕ್ಷ ಆತನನ್ನು ಪಕ್ಷದಿಂದ ಉಚ್ಛಾಟಿಸಿತು. ಎರಡೇ ವಾರದಲ್ಲಿ ಬಿಜೆಪಿ ಸೇರಿದ ಹಾರ್ದಿಕ್ ಈ ಬಾರಿ ವೀರಂಗಾಮ್ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಅಲ್ಲಿಗೆ ಪಟೇಲ್ ಸಮುದಾಯದ ಬಿಜೆಪಿ ಮತಬ್ಯಾಂಕಿನಲ್ಲಿ ಉಂಟಾಗುತ್ತಿದ್ದ ಬಿರುಕು ನಿವಾರಣೆಯಾದಂತಾಯ್ತು. ತನ್ನ ತವರು ಜಿಲ್ಲೆಯಾದ ಮೆಹಸಾನಗೆ ಪ್ರವೇಶಿಸಬಾರದೆಂಬ ಷರತ್ತಿಗೆ ಒಂದು ವರ್ಷಕಾಲ ವಿನಾಯ್ತಿ ನೀಡಿ ಗುಜರಾತ್ ಹೈಕೋರ್ಟ್ ಎರಡು ವಾರಗಳ ಹಿಂದಷ್ಟೇ ಆದೇಶ ಹೊರಡಿಸಿ ಆತನ ಚುನಾವಣಾ ಪ್ರಚಾರಕ್ಕೆ ಇದ್ದ ಅಡಚಣೆಯನ್ನು ನಿವಾರಿಸಿದೆ. ಹಾರ್ದಿಕ್ ಪಟೇಲ್‌ನ ಈ ವೃತ್ತಾಂತದಲ್ಲಿ ಬಿಟ್ಟುಹೋಗಿರುವ ಬಿಂದುಗಳನ್ನು ಜೋಡಣೆ ಮಾಡಿ ನೋಡಿ. ’ಗುಜರಾತ್ ಮಾಡೆಲ್’ ರಾಜಕೀಯದ ಒಂದು ಝಲಕ್ ಇಲ್ಲಿದೆ. ಈಗ ದೇಶಾದ್ಯಂತ ಅನ್ವಯಿಸುತ್ತಿರುವುದು ಈ ಮಾದರಿಯನ್ನೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ (82 ವರ್ಷ) ಅವರು ಬುಧವಾರ (ಜನವರಿ 7, 2026) ತಡರಾತ್ರಿ ಪುಣೆಯಲ್ಲಿರುವ ತಮ್ಮ ಮನೆಯಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದರು. ಈ ಕುರಿತು ಗಾಡ್ಗೀಳ್ ಅವರ...

ಅಪರಾಧದ ಸ್ವರೂಪ ಏನೇ ಇರಲಿ, ತ್ವರಿತ ವಿಚಾರಣೆಯ ಹಕ್ಕು ಅನ್ವಯಿಸುತ್ತದೆ: ಸುಪ್ರೀಂ ಕೋರ್ಟ್

ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯ ಹಕ್ಕು ಅಪರಾಧದ ಗಂಭೀರತೆ ಅಥವಾ ಸ್ವರೂಪವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪುನರುಚ್ಚರಿಸಿದೆ. 2002 ರ ಹಣ ವರ್ಗಾವಣೆ ತಡೆ ಕಾಯ್ದೆಯ...

ಬಾಂಗ್ಲಾದೇಶ: ಗುಂಪು ದಾಳಿಯಿಂದ ತಪ್ಪಿಸಿಕೊಳ್ಳಲು ಕಾಲುವೆಗೆ ಹಾರಿದ ಹಿಂದೂ ವ್ಯಕ್ತಿ ಸಾವು

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಸುದ್ದಿಗಳು ನಿರಂತರವಾಗಿ ವರದಿಯಾಗುತ್ತಿರುವ ನಡುವೆಯೇ, ನೌಗಾಂವ್ ಜಿಲ್ಲೆಯ ಮೊಹದೇವ್‌ಪುರ ಉಪಜಿಲ್ಲಾದಲ್ಲಿ ದರೋಡೆ ಆರೋಪ ಹೊರಿಸಿದ ಗುಂಪಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ 25 ವರ್ಷದ ಹಿಂದೂ ವ್ಯಕ್ತಿ ಕಾಲುವೆಗೆ ಹಾರಿ...