Homeಅಂಕಣಗಳುಆತ್ಮಶ್ರೀಗಾಗಿ ಅವಧೂತರ ಬಳಿಹೋದ ಅಲ್ಪರು!

ಆತ್ಮಶ್ರೀಗಾಗಿ ಅವಧೂತರ ಬಳಿಹೋದ ಅಲ್ಪರು!

- Advertisement -
- Advertisement -

ನಮ್ಮ ಜನಪ್ರಿಯ ರಾಜಕಾರಣಿಯಾದ ಎಲ್.ಆರ್ ಶಿವರಾಮೇಗೌಡರು ಮಾದೇಗೌಡರನ್ನು ಕಟುವಾಗಿ ಟೀಕಿಸಿ ಆ ಕಾರಣವಾಗಿ ಕುಮಾರಣ್ಣನವರಿಂದ ನಿಂತ ನಿಲುವಿನಲ್ಲೇ ಪಾರ್ಟಿಯಿಂದ ವಜಾ ಆದ ಘಟನೆ ಈಗ ಹಳೆಯದು. ಆದರೇನು ಶಿವರಾಮೇಗೌಡರು ಇಂತಹ ಪನಿಶ್ಮೆಂಟಿಗೆಲ್ಲಾ ಹೆದರುವವರಲ್ಲ. ಅವರು ಈ ಹಿಂದೆ ಗೆದ್ದಿರುವುದೇ ಪಕ್ಷೇತರರಾಗಿ; ’ಈಗಲೂ ಮುಂಬರುವ ಚುನಾವಣೆಯಲ್ಲಿ ಪಕ್ಷೇತರರಾಗಿ ನಿಲ್ಲುತ್ತೇನೆ. ಚಲುವರಾಯಸ್ವಾಮಿ ಮತ್ತು ಸುರೇಶ್‌ಗೌಡನ ಎದುರು ನನ್ನನ್ನು ಮತದಾರರು ಗೆಲ್ಲಿಸದಿದ್ದರೆ ಕೂಡಲೇ ಶಿರಶ್ಚೇದನ ಮಾಡಿಕೊಳ್ಳುತ್ತೆನೆಂದು’ ಹೆದರಿಸಿದ್ದಾರಲ್ಲಾ! ಸ್ವಾತಂತ್ರ್ಯ ಪಡೆಯುವುದಕ್ಕೇ ಹಲವು ವರ್ಷಗಳ ಮೊದಲು ಈ ದೇಶದಲ್ಲಿ ಸತಿಸಹಗಮನ ನಡಯುತ್ತಿತ್ತು. ಬಂಗಾಳದಲ್ಲಿಯೇ ವರ್ಷಕ್ಕೆ ಎಂಬತ್ತರಿಂದ ನೂರು ಜನ ಮಹಿಳೆಯರನ್ನು ಬೆಂಕಿಗೆ ದೂಡಲಾಗುತ್ತಿತ್ತು. ಜನ ಈ ದೃಶ್ಯವನ್ನು ಪದೇಪದೇ ನೋಡಿ ಮಾನವೀಯತೆಯನ್ನೆ ಕಳದುಕೊಂಡು ಮರುಗಟ್ಟಿಹೋಗಿದ್ದರು. ಆದುದರಿಂದ ಸತಿಸಹಗಮನ ಪದ್ಧತಿಯನ್ನು ನೋಡಲು ಯಾವಾಗಲೂ ಜಮಾಯಿಸುತ್ತಿದ್ದರು. ಅಂತದೇ ಮನಸ್ಥಿತಿಯ ಜನ ಈಗ ಹೆಚ್ಚಾಗಿರುವುದರಿಂದ, ದೇವೇಗೌಡರು ತಾವು ಸೋತಾಗ ಹಾಸನ ಜಿಲ್ಲೆಯನ್ನೇ ಬಹಿಷ್ಕರಿಸಿದಂತೆ, ಶಿವರಾಮೇಗೌಡರು ನಾಗಮಂಗಲದ ಕಡೆ ತಿರುಗಿ ನೋಡುವುದಿಲ್ಲ ಎಂದು ಶಪಥ ಬದಲಾಯಿಸಿಕೊಂಡರೆ ಒಳ್ಳೆಯದಲ್ಲವೆ, ಥೂತ್ತೇರಿ.

*****

ಈ ನೆಲದಲ್ಲಿ ಸದ್ಯಕ್ಕೆ ಎಂತಹ ವ್ಯಕ್ತಿಗಳಿಗೂ ಅಭಿಮಾನಿಗಳಿದ್ದಾರೆ. ಹೀಗಿರುವಾಗ ಗೌರಿಗದ್ದೆಯ ಅವಧೂತನಿಗೆ ಸಾವಿರಾರು ಮಂದಿ ಇರುವುದು ಅಚ್ಚರಿಯಲ್ಲ. ಈ ವಯಸ್ಸಿನಲ್ಲಿ ಇನ್ನೇನಾಗಬೇಕು ಎಂದು ಚಿಂತಿಸಬೇಕಾದ ದೇವೇಗೌಡರಿಂದ ಹಿಡಿದು ಹೇಗಾದರೂ ಮಾಡಿ ಮುಖ್ಯಮಂತ್ರಿಯಾಗಿ ಬಿಜೆಪಿಗಳ ಇ.ಡೀ ಈಡಿಯಟ್‌ಗಳಿಗೆ ತಕ್ಕ ಉತ್ತರ ಕೊಡಲು ಕಾದಿರುವ ಡಿ.ಕೆ ಶಿವಕುಮಾರ್ ಜೊತೆಗೆ, ಶಿವಕುಮಾರ್ ಅಭಿಮಾನಿಗಳೂ ಕೂಡ ಅವಧೂತನ ಅಭಿಮಾನಿಗಳಾಗಿರುವುದು ಅಚ್ಚರಿಯಲ್ಲ. ಕಳೆದ ಶತಮಾನದಲ್ಲಿ ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂದು ಕರೆಕೊಟ್ಟು ವಿಚಾರ ಕ್ರಾಂತಿಗೆ ಆಹ್ವಾನ ನೀಡಿದ ಋಷಿಕವಿ ಕುವೆಂಪುರವರ ಸಂಬಂಧಿಗಳು ನಾವೆಂದು ಕಿರೀಟ ಧರಿಸಿ ಮೆರೆಯುತ್ತಿದ್ದ ಮೂರ್ಖರೆಲ್ಲಾ ಗೌರಿಗದ್ದೆ ಅವಧೂತನ ಪಾದಕ್ಕೆ ಬಿದ್ದು ಕುವೆಂಪು ಹೆಸರಿಗೆ ಮಸಿ ಬಳಿದಿವೆಯಂತಲ್ಲಾ. ಹಾಗೆ ನೋಡಿದರೆ ಕುವೆಂಪುರವರ ವಿಚಾರಧಾರೆಗೆ, ಮಂತ್ರ ಮಾಂಗಲ್ಯದ ಕಲ್ಪನೆಗೆ ಈ ಮಲೆನಾಡಿಗರು ತಿಲಾಂಜಲಿಯಿತ್ತು ಬಹಳ ವರ್ಷಗಳಾಗಿವೆ. ಆದ್ದರಿಂದ ಈ ಮಂದಮತಿಗಳು ನಾವು ಕುವೆಂಪು ಪ್ರದೇಶದವರು ಅವರ ಸಂಬಂಧಿಗಳು ಎಂದು ಹೇಳಿಕೊಳ್ಳುವುದನ್ನ ನಿಲ್ಲಿಸಿದರೆ ಅದೇ ಕುವೆಂಪುರವರಿಗೆ ಕೊಡುವ ಗೌರವ ಎಂದು ಕುವೆಂಪುರವರನ್ನು ನಿಜವಾಗಿ ಅನುಸರಿಸುವವರ ಸಲಹೆಯಾಗಿದೆಯಂತಲ್ಲಾ, ಥೂತ್ತೇರಿ.

*****

ಶ್ರೇಷ್ಠ ಸಂವಿಧಾನ ಪಡೆದಿರುವ ನಮ್ಮ ವ್ಯವಸ್ಥೆಯಲ್ಲಿ ಕಾನೂನಿಗಿಂತ ಧರ್ಮವೇ ದೊಡ್ಡದೆಂದು ಪ್ರತಿಪಾದಿಸಿದ ಚಿತ್ರದುರ್ಗ ಪ್ರದೇಶದ ಜಗದ್ಗುರುವೊಬ್ಬರು ಅದನ್ನೇ ಅಧಿಕೃತಗೊಳಿಸುತ್ತ ಹೊರಟಿದ್ದಾರಲ್ಲಾ. ಅದೂ ಕೂಡ ತಾನೇ ನಡೆಸುತ್ತಿರುವ ಅನಧಿಕೃತ ನ್ಯಾಯಾಲಯದ ಉದಾಹರಣೆಗಳನ್ನ ಉದಾಹರಿಸುತ್ತ! ಅದಷ್ಟೇ ಅಲ್ಲ ಅವರ ಮಾತನ್ನು ಅಲ್ಲಗಳೆದವರನ್ನು ನಿಂದಿಸಲು ಭಕ್ತಾದಿಗಳನ್ನ ಪ್ರಚೋದಿಸುತ್ತ. ಇಲ್ಲಿ ಪೊಲೀಸ್ ಠಾಣೆ, ನ್ಯಾಯಾಲಯ, ವಕೀಲರ ಅಗತ್ಯವೇ ಇಲ್ಲ; ಬದಲಿಗೆ ಧರ್ಮದ ಮಾನದಂಡದಿಂದಲೇ ಜಾದೂ ಮಾಡಬಹುದು. ಇರಲಿ ಗುರುಗಳು ಕಾನೂನಿಗೆ ತಿಲಾಂಜಲಿ ಇಟ್ಟ ಫಲವಾಗಿಯೇ ಏನೋ ತರಳಬಾಳು ಕೇಂದ್ರದಲ್ಲಿ ಅಕ್ರಮ ಕಟ್ಟಡ ನಿರ್ಮಿಸುತ್ತಿರವ ಆರೋಪದ ಮೇಲೆ ಬಿಬಿಎಂಪಿ ಆಯುಕ್ತರ ವಿರುದ್ದ ಲೋಕಾಯುಕ್ತಕ್ಕೆ ದೂರು ಹೋಗಿದೆ. ನಾಗರಿಕ ಸೌಲಭ್ಯ ನಿವೇಶನ ಹಂಚಿಕೆ ನಿಯಮಗಳಿಗೆ ವ್ಯತಿರಿಕ್ತವಾಗಿ ತರಳಬಾಳು ಮಠವು ಆರ್.ಟಿ ನಗರದಲ್ಲಿ ಕಾನೂನುಬಾಹಿರ ಮತ್ತು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತರ ವಿರುದ್ಧ ಜಿ.ಬಿ ವೆಂಕಟೇಶ್‌ರವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಮುಂದೆ ಬುದ್ಧಿಯವರು ಪ್ರತಿಪಾದಿಸಿದ ಧರ್ಮದ ಸೆಕ್ಷೆನ್‌ಗಳನ್ನೇ ಬಳಸಿ ಹೋರಾಡುತ್ತಾರೋ ಅಥವಾ ಕಾನೂನು ಸಮರಕ್ಕೆ ತಲೆಬಾಗುತ್ತಾರೋ ಎಂಬುದು ಕುತೂಹಲಕ್ಕೆಡೆಮಾಡಿದೆಯಲ್ಲಾ, ಥೂತ್ತೇರಿ.

*****

ದೆಹಲಿಯಿಂದ ಇಲ್ಲಿಯವರೆಗೆ ಈ ದೇಶದ ವ್ಯವಸ್ಥೆಯೇ ಹಾಳಾಗಿಹೋಗಿದೆ. ಆದರೂ ಬಿಜೆಪಿಗಳು ಮತ್ತೆ ಚುನಾವಣೆಯಲ್ಲಿ ಗೆದ್ದುಬರುವ ಆತ್ಮವಿಶ್ವಾಸಕ್ಕೆ ಕಾರಣವೇನು ಎಂಬುದಕ್ಕೆ ಸಾಕ್ಷಾಧಾರವಾಗಿ ಬೆಂಗಳೂರಲ್ಲಿ ನಡೆದಿರುವ ಮತಪೆಟ್ಟಿಗೆ ಕನ್ನದ ಹಗರಣ ಹೊರಬಿದ್ದಿದೆಯಲ್ಲಾ. ಯಾವುದೇ ಸರ್ಕಾರ ಬರಲಿ ಆಪರೇಷನ್ ಕಮಲದ ಮೂಲಕ ಶಾಸಕರನ್ನು ಖರೀದಿಸಿ ಸರಕಾರ ರಚನೆ ಮಾಡುವ ಸಂಚಿನ ಭರವಸೆಯಿಂದ ಬೀಗುತ್ತಿರುವ ಬಿಜೆಪಿಗಳ ತಮಗೆ ಮತಹಾಕದವರನ್ನು ಮತದಾರರ ಪಟ್ಟಿಯಿಂದಲೇ ಕಿತ್ತು ಬಿಸಾಡುವ ಷಡ್ಯಂತ್ರ ರೂಪಿಸಿದ್ದಾರಂತಲ್ಲಾ. ಇಂತಹ ಯಾವ ಸಂಚೂ ಇಲ್ಲದೆ ಈ ದೇಶ ಇರುವವರೆಗೂ ನಾವು ಅಧಿಕಾರದಲ್ಲಿರುತ್ತೇವೆಂದು ಭಾವಿಸಿ ಆರಾಮವಾಗಿದ್ದ ಕಾಂಗೈಗಳಿಗೆ ಬಿಜೆಪಿ ಸಂಚಿಗೆ ಪ್ರತಿತಂತ್ರವೇ ಹೊಳೆಯದೆ ಪ್ರತಿಭಟನೆಗೆ ಸ್ಪಷ್ಟ ಕಾರಣವೂ ಹೊಳೆಯದೆ ಕಂಗಾಲಾಗಿ ಕೂತಿವೆಯಂತಲ್ಲಾ, ಥೂತ್ತೇರಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕಲ್ಕತ್ತಾ ಹೈಕೋರ್ಟ್ ಮಾರಾಟ ಆಗಿದೆ’ ಎಂದ ಮಮತಾ ಬ್ಯಾನರ್ಜಿ ವಿರುದ್ಧ ಕ್ರಮಕ್ಕೆ ವಕೀಲರ ಗುಂಪು...

0
‘ಹೈಕೋರ್ಟ್ ಮಾರಾಟ ಆಗಿದೆ' ಎಂದು ಹೈಕೋರ್ಟ್‌ ವಿರುದ್ಧ ಟೀಕೆಯನ್ನು ಮಾಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಬೇಕೆಂದು ವಕೀಲರ ಗುಂಪು ಗುರುವಾರ ಕಲ್ಕತ್ತಾ ಹೈಕೋರ್ಟ್‌ಗೆ ಒತ್ತಾಯಿಸಿದೆ. ಶಾಲಾ ಉದ್ಯೋಗಿಗಳ...