ಗುಜರಾತ್‌ನ ಪೋರಬಂದರ್‌ನಲ್ಲಿ ನಡೆದ ಗರ್ಬಾ ಕಾರ್ಯಕ್ರಮವೊಂದರಲ್ಲಿ ಜನರ ಗುಂಪು ವ್ಯಕ್ತಿಯನ್ನು ಥಳಿಸಿ ಕೊಲೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ.
ಗರ್ಬಾ ಕಾರ್ಯಕ್ರಮದ ಬಹುಮಾನದ ವಿಚಾರಕ್ಕೆ ಸಂಬಂಧಿಸಿ ನಡೆದ ಗಲಾಟೆ ಕಾರ್ಯಕ್ರಮದ ಆಯೋಜಕರು ಸೇರಿದಂತೆ ಜನರ ಗುಂಪು ವ್ಯಕ್ತಿಯನ್ನು ಹೊಡೆದು ಕೊಲೆ ಮಾಡುವ ಮೂಲಕ ಕೊನೆಗೊಂಡಿದೆ.
ಗರ್ಬಾ ನೃತ್ಯಗಾರ್ತಿ ಕೃಪಾಲಿ ಒಡೆದರಾ ವಿವಿಧ ವಿಭಾಗಗಳಲ್ಲಿ ಎರಡು ಬಹುಮಾನಗಳನ್ನು ಗೆದ್ದುಕೊಂಡಿದ್ದರು. ಆದರೆ ಸಂಘಟಕರು ಒಂದೇ ಬಹುಮಾನವನ್ನು ನೀಡಿದ್ದರು. ಈ ಬಗ್ಗೆ ಬಾಲಕಿ ತನ್ನ ತಾಯಿ ಮಾಲಿಬೆನ್ ಬಳಿ ಹೇಳಿದ್ದರು.
ಬಾಲಕಿಯ ತಾಯಿ ಮಾಲಿಬೆನ್ ಸ್ಥಳೀಯ ಗರ್ಬಾ ಸಂಘಟಕ ರಾಜುಭಾಯಿ ಕೇಸ್ವಾಲಾ ಎಂಬಾತನನ್ನು ಸಂಪರ್ಕಿಸಿದ್ದು, ತನ್ನ ಪುತ್ರಿಯ ಇನ್ನೊಂದು ಬಹುಮಾನವನ್ನು ನೀಡುವಂತೆ ಕೋರಿದ್ದರು. ಇದಕ್ಕೆ ನಿರಾಕರಿಸಿದ್ದ ಕೇಸ್ವಾಲಾ, ಬೇಕಿದ್ದರೆ ಒಂದು ಬಹುಮಾನ ಪಡೆಯಿರಿ, ಇಲ್ಲದಿದ್ದರೆ ಅದೂ ಸಿಗುವುದಿಲ್ಲ ಎಂದು ಹೇಳಿದ್ದ. ಈ ವೇಳೆ ಅವರ ನಡುವೆ ಜಗಳ ನಡೆದಿದೆ.
ಈ ವೇಳೆ ಇನ್ನೋರ್ವ ಸಂಘಟಕ ರಾಮದೇವ ಬೊಖಿರಿಯಾ ಕೂಡ ಸೇರಿಕೊಂಡಿದ್ದು ಜಗಳ ತಾರಕಕ್ಕೇರಿ ಮಾಲಿಬೆನ್‌ಗೆ ಕೊಲೆ ಬೆದರಿಕೆಯೊಡ್ಡಲಾಗಿತ್ತು. ತೀವ್ರ ವಾಗ್ವಾದದ ನಂತರ ಮಾಲಿಬೆನ್ ಮನೆಗೆ ಮರಳಿದ್ದಾರೆ.
ನಂತರ ಕೇಶ್ವಾಲಾ ಸೇರಿದಂತೆ ಒಂದು ಗುಂಪು ರಾತ್ರಿ ಮಾಲಿಬೆನ್ ಅವರ ಮನೆಗೆ ಬಂದು ಮಾಲಿಬೆನ್ ಮತ್ತು ಆಕೆಯ ಪತಿ ಸರ್ಮಾನ್ ಒಡೆಡಾರ ಮೇಲೆ ಕ್ರೂರವಾಗಿ ಥಳಿಸಿದೆ. ಥಳಿತದಿಂದ ಗಂಭೀರವಾಗಿದ್ದ ಸರ್ಮಾನ್‌ಗೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃಪಟ್ಟಿದ್ದಾರೆ.
ಪೋರಬಂದರ್ ಉಪ ಪೊಲೀಸ್ ವರಿಷ್ಠಾಧಿಕಾರಿ ರಿತು ರಾಬಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಎರಡು ಗುಂಪುಗಳ ನಡುವೆ ಯಾವುದೇ ಪೂರ್ವ ದ್ವೇಷ ಇರಲಿಲ್ಲ. ಗರ್ಬಾ ಸ್ಪರ್ಧೆಯಲ್ಲಿ ಉಡುಗೊರೆಗಾಗಿ ನಡೆದ ಸಣ್ಣ ಜಗಳವು ಕೊಲೆಗೆ ತಲುಪಿದೆ ಎಂದು ಹೇಳಿದ್ದಾರೆ.
ಘಟನೆಯಲ್ಲಿ ಭಾಗಿಯಾಗಿದ್ದ ಒಂಬತ್ತು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈವರೆಗೆ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.
ಇದನ್ನು ಓದಿ: ಅಮೆರಿಕಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ 8,076 ಭಾರತೀಯರ ಬಂಧನ


