ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿನ ಇಬ್ಬರು ವೈದ್ಯರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಇದರಲ್ಲಿ ಒಬ್ಬರು ಪ್ರಕರಣ ಸಂಬಂಧಿಸಿದಂತೆ ವಿಧಿವಿಜ್ಞಾನ (FSL) ವರದಿಯನ್ನು ಪ್ರಶ್ನಿಸಿದ್ದರು.
ಸಿಬಿಐ ತಂಡವು ಆಸ್ಪತ್ರೆಗೆ ಭೇಟಿ ನೀಡಿ, ಡಾ. ಮೊಹಮ್ಮದ್ ಅಜೀಮುದ್ದೀನ್ ಮಲಿಕ್ ಮತ್ತು ಡಾ. ಓಬೈದ್ ಇಮ್ತಿಯಾಜುಲ್ ಹಕ್ ಎಂಬ ಇಬ್ಬರು ವೈದ್ಯರನ್ನು ವಿಚಾರಣೆ ನಡೆಸಿದ ನಂತರ ಅವರನ್ನು ವಜಾಗೊಳಿಸಲಾಗಿದೆ.
“19 ವರ್ಷದ ದಲಿತ ಯುವತಿ ಅತ್ಯಾಚಾರಕ್ಕೊಳಗಾದ 11 ದಿನಗಳ ನಂತರ FSLಗಾಗಿ ಮಾದರಿಗಳನ್ನು ಸಂಗ್ರಹಿಸಲಾಗಿದೆ, ಆದರೆ ಸರ್ಕಾರದ ಮಾರ್ಗಸೂಚಿಗಳು ಘಟನೆಯ 96 ಗಂಟೆಗಳ ಒಳಗೆ ಮಾತ್ರ ವಿಧಿವಿಜ್ಞಾನದ ಪುರಾವೆಗಳನ್ನು ಕಂಡುಹಿಡಿಯಬಹುದು ಎಂದು ಹೇಳುತ್ತದೆ. ಈ ಘಟನೆಯಲ್ಲಿ ಅತ್ಯಾಚಾರವನ್ನು ಈ ವರದಿಯಿಂದ ಖಚಿತಪಡಿಸಲು ಸಾಧ್ಯವಿಲ್ಲ” ಎಂದು ಡಾ.ಮಲಿಕ್ ಹೇಳಿದ್ದರು.
FSL ವರದಿಯನ್ನು ಉಲ್ಲೇಖಿಸಿ ಉತ್ತರ ಪ್ರದೇಶದ ಎಡಿಜಿ (ಕಾನೂನು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ 19 ವರ್ಷದ ದಲಿತ ಯುವತಿ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: ಹತ್ರಾಸ್ ತನಿಖೆಯ ಮೇಲ್ವಿಚಾರಣೆ ಅಲಹಾಬಾದ್ ಹೈಕೋರ್ಟ್ ನಡೆಸಲಿದೆ: ಸುಪ್ರೀಂ
ಅಮಾನತಾಗಿರುವ ಮತ್ತೊಬ್ಬ ವೈದ್ಯ ಡಾ. ಹಕ್, ಎಎಮ್‌ಯು ಆಸ್ಪತ್ರೆಯು ನೀಡಿದ ತಾತ್ಕಾಲಿಕ ಅಭಿಪ್ರಾಯದ ಅಡಿಯಲ್ಲಿ ಎಂಎಲ್‌ಸಿಯನ್ನು ದೃಢಿಕರಿಸಿ, ಸಂತ್ರಸ್ತೆ ಮೇಲೆ ಬಲ ಪ್ರಯೋಗದ ಗುರುತುಗಳಿವೆ ಎಂದಿದ್ದರು.
ಮಂಗಳವಾರ ಬೆಳಿಗ್ಗೆ ಡಾ. ಮಲಿಕ್ ಮತ್ತು ಡಾ. ಹಕ್ ಇಬ್ಬರಿಗೂ ಆಡಳಿತ ಮಂಡಳಿ ಪತ್ರಗಳನ್ನು ಬರೆದು ಹೆಚ್ಚಿನ ಕರ್ತವ್ಯಗಳನ್ನು ನಿರ್ವಹಿಸದಂತೆ ಅವರಿಗೆ ಸೂಚನೆ ನೀಡಿತ್ತು.
ಅಮಾನತಿನ ಕುರಿತು ಎಎಂಯು ಆಡಳಿತವು “ಹತ್ರಾಸ್ ಘಟನೆಗೆ ಸಂಬಂಧಿಸಿದ ಯಾವುದೇ ವೈದ್ಯರನ್ನು ಆಡಳಿತ ಅಮಾನತುಗೊಳಿಸಿಲ್ಲ. ಎರಡು ತಿಂಗಳ ಹಿಂದೆ, ಕೆಲವು ವೈದ್ಯರು ಕೊರೊನಾ ಸೋಂಕಿಗೆ ಒಳಗಾಗಿದ್ದರಿಂದ ಈ ಹುದ್ದೆಗಳು ಖಾಲಿ ಇದ್ದವು. ತುರ್ತು ಪರಿಸ್ಥಿತಿ ಇದ್ದ ಕಾರಣ ಮತ್ತು ಡಾ. ಮಲಿಕ್ ಮತ್ತು ಡಾ.ಹಕ್ ಎಂಬ ಇಬ್ಬರು ವೈದ್ಯರನ್ನು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮಾತ್ರ ನೇಮಿಸಲಾಯಿತು. ಈಗ ಸಿಎಮ್‌ಒಗಳು ಹಿಂತಿರುಗಿದ್ದಾರೆ, ಆದ್ದರಿಂದ ಅವರ ಸೇವೆಗಳು ಅಗತ್ಯವಿಲ್ಲ” ಎಂದಿದೆ.
ನಂತರ “ಈ ನಿರ್ಧಾರಕ್ಕೆ ವೈದ್ಯರು ಅಸಮಾಧಾನ ಹೊಂದಿದ್ದಾರೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ನಾವು ಅವರ ಕುಂದುಕೊರತೆಗಳನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಆಸ್ಪತ್ರೆಯಲ್ಲಿ ಬೇರೆಲ್ಲಿಯಾದರೂ ಅವರಿಗೆ ಕೆಲಸ ನೀಡಬಹುದು” ಎಂದಿದ್ದಾರೆ.
ಇದನ್ನೂ ಓದಿ: ನಿಮ್ಮ ಸ್ವಂತ ಮಗಳ ಅಂತ್ಯಕ್ರಿಯೆ ಹೀಗೆ ಮಾಡುತ್ತೀರಾ..? ಹತ್ರಾಸ್ ಡಿಸಿಗೆ ಲಕ್ನೋ ಪೀಠ ಪ್ರಶ್ನೆ
ಇಬ್ಬರು ವೈದ್ಯರಿಗೂ ಆಗಸ್ಟ್ ತಿಂಗಳಿನಿಂದ ಸಂಬಳ ನೀಡಿಲ್ಲ. ಸಂಬಳ ಮಾಧ್ಯಮಗಳಿಗೆ ತಮ್ಮ ವೈಯಕ್ತಿಕ ಅಭಿಪ್ರಾಯ ನೀಡಿದ ಕಾರಣ ಮುಂದಿಟ್ಟು ಹಿರಿಯ ಅಧಿಕಾರಿಗಳಿಂದ ಗದರಿಸಲ್ಪಡುತ್ತಿದ್ದರು ಎಂದು ವರದಿಯಾಗಿದೆ. ಹಿರಿಯ ವೈದ್ಯರ ಹೇಳಿಕೆಯಂತೆ ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ ಅವರಿಗೆ ಸಂಬಳ ನೀಡಬಹುದು ಎಂದಿದ್ದಾರೆ.
ಇಬ್ಬರು ವೈದ್ಯರು ಹತ್ರಾಸ್‌ನ 19 ವರ್ಷದ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯಲ್ಲಿ ಭಾಗವಹಿಸಿದ್ದರು. ಸೆಪ್ಟೆಂಬರ್ 14 ರಂದು ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 19 ವರ್ಷದ ಯುವತಿಯ ಮೇಲೆ ನಾಲ್ವರು ಮೇಲ್ಜಾತಿಯ ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಸೆಪ್ಟೆಂಬರ್ 29 ರಂದು ಯುವತಿ ಸಾವನ್ನಪ್ಪಿದರು, ಮೃತ ಯುವತಿಯ ದೇಹವನ್ನು ಕುಟುಂಬಕ್ಕೆ ಒಪ್ಪಿಸದೇ ಪೊಲೀಸರು ಸುಟ್ಟುಹಾಕಿದ್ದರು. ತಮ್ಮ ಒಪ್ಪಿಗೆಯಿಲ್ಲದೇ ಶವಸಂಸ್ಕಾರ ಬಲವಂತವಾಗಿ ಮಾಡಲಾಯಿತು ಎಂದು ಕುಟುಂಬವು ಆರೋಪಿಸಿದೆ. ಕುಟುಂಬದ ಆರೋಪವನ್ನು ಪೊಲೀಸರು ತಳ್ಳಿ ಹಾಕಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಈ ವಿಷಯದಲ್ಲಿ ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ.


