Homeಮುಖಪುಟಹಿಂದುತ್ವದ ಸಿದ್ಧಾಂತವು ಇಷ್ಟಪಡದ ಭಾಷೆಗಳು ಅಸ್ತಿತ್ವದ ಬಿಕ್ಕಟ್ಟಿನಲ್ಲಿ

ಹಿಂದುತ್ವದ ಸಿದ್ಧಾಂತವು ಇಷ್ಟಪಡದ ಭಾಷೆಗಳು ಅಸ್ತಿತ್ವದ ಬಿಕ್ಕಟ್ಟಿನಲ್ಲಿ

- Advertisement -
- Advertisement -

ಹಿಂದಿ, ಸಂಸ್ಕೃತ ಮತ್ತು ಗುಜರಾತಿಯ ಹೊರತಾಗಿ ಭಾರತದ ಎಲ್ಲಾ ಅಧಿಕೃತ ಭಾಷೆಗಳು (Scheduled languages) ಕುಗ್ಗುತ್ತಿವೆ ಎಂದು ೨೦೧೧ರ ಜನಗಣತಿ ನಮಗೆ ತಿಳಿಸುತ್ತದೆ.

ಯಾವುದೇ ವ್ಯಕ್ತಿಗೆ ಪ್ರತಿಯೊಬ್ಬರ ತಾಯಿನುಡಿಯು ಅಥವಾ ಮನೆಮಾತು ಅವರ ತಾಯಿಯಷ್ಟೇ ತೀರಾ ಹತ್ತಿರ. ಒಂದು ಮಗುವು ಭಾಷೆಯ ಕೌಶಲವನ್ನು ಸಾಮಾನ್ಯವಾಗಿ ತನ್ನ ತಾಯಿಯಿಂದ ಕಲಿಯುತ್ತದೆ. ಹೊಸದಾಗಿ ಹುಟ್ಟಿದ ಶಿಶುವಿಗೆ ಯಾವ ತಾಯಿಯೂ ವ್ಯಾಕರಣದ ನಿಯಮಗಳನ್ನು ಕಲಿಸಿಕೊಡುವುದಿಲ್ಲ; ಆದರೂ, ಆ ಎಲ್ಲಾ ಅತ್ಯಂತ ಸಂಕೀರ್ಣವಾದ ನಿಯಮಗಳನ್ನು ಶಿಶುವು ತಾಯಿಯ ತುಟಿಗಳ ಚಲನೆಯನ್ನು ಮತ್ತು ಸಂಕೇತಗಳನ್ನು ಕೇವಲ ಗಮನಿಸುವುದರಿಂದಲೇ ಮತ್ತು ತಾಯಿಯ ಮಾತಿನ ಧ್ವನಿ, ಲಯ ಮತ್ತು ಧಾಟಿಗಳನ್ನು ಅಂತರ್ಗತ ಮಾಡಿಕೊಳ್ಳುವ ಮೂಲಕವೇ ಕಲಿಯುತ್ತದೆ. ಆದರೂ, ಮಕ್ಕಳು ಭಾಷೆಗಳನ್ನು ಶಾಲೆಯಲ್ಲಿ ಕಲಿಯುತ್ತಾರೆ ಎಂಬ ವ್ಯಾಪಕವಾದ ತಪ್ಪು ಅಭಿಪ್ರಾಯ ಚಾಲ್ತಿಯಲ್ಲಿದೆ. ಅದು ತಮ್ಮ ಮನೆಯಲ್ಲಿ ಮಾತನಾಡದ ಬೇರೆ ಭಾಷೆಗಳ ಬಗ್ಗೆ ನಿಜವಾಗಿರಬಹುದು. ಯಾರಾದರೂ ಎರಡನೇ, ಮೂರನೇ ಅಥವಾ ಹೆಚ್ಚು ಭಾಷೆಗಳನ್ನು ವ್ಯಾಕರಣದ ಮೂಲಕ ಮತ್ತು ಅನುವಾದದ ಮೂಲಕ “ಕಲಿ”ಯಬೇಕಾಗುತ್ತದೆ. ಆದರೆ, ಮಾನವ ಮೆದುಳು- ಒಂದು ಮಗು ತನ್ನ ತಾಯಿನುಡಿಯ ಹೆಚ್ಚಿನ ಸಂಕೀರ್ಣತೆಗಳನ್ನು ತನಗೆ ಕೇವಲ ಮೂರು ವರ್ಷಗಳಾಗುವ ಮೊದಲೇ ಕಲಿಯಲು ಅನುವು ಮಾಡಿಕೊಡುತ್ತದೆ. ಬರೆಯಲು ಕಲಿಯುವುದು ಬೇರೆಯೇ ವಿಷಯ. ಏನೇ ಇದ್ದರೂ, ಮಾನವ ಇತಿಹಾಸದ ಕೆಲವು ಲಕ್ಷ ವರ್ಷಗಳಲ್ಲಿ ಬರವಣಿಗೆಯು ಅಭಿವ್ಯಕ್ತಿ, ಸಂವಹನ ಮತ್ತು ನೆನಪುಗಳನ್ನು ದಾಸ್ತಾನು ಮಾಡುವ ಸಾಧನವಾಗಿ ಮೂಡಿಬಂದಿರುವುದು ಕೇವಲ ಏಳು ಸಾವಿರ ವರ್ಷಗಳಿಂದ ಈಚೆಗೆ ಮಾತ್ರ. ಭಾಷೆಯು ಮೂಲತಃ ಮಾತಿನದ್ದು ಮಾತ್ರ; ಬರವಣಿಗೆಯು ಇತ್ತೀಚಿನ ಸೇರ್ಪಡೆಯಾಗಿದ್ದು, ಅದು ದೂರದೂರದ ಮತ್ತು ಅಂತರ್ ಪೀಳಿಗೆಗಳ ಭಾಷಾ ವ್ಯವಹಾರಗಳ ಸಾಧನವಾಗಿದೆ.

ನನ್ನ ಬಾಲ್ಯದ ಗ್ರಾಮೀಣ ವಾತಾವರಣದಲ್ಲಿ ನಾನು ನನ್ನ ಮನೆಯಲ್ಲಿ ಮಾತನಾಡುವ ಭಾಷೆಗೆ ಹೊರತಾದ ಹಲವಾರು ಭಾಷೆಗಳನ್ನು ವಿವಿಧ ಸಮುದಾಯಗಳ ಜನರು ವಾರದ ಸಂತೆಗಳಲ್ಲಿ ಮಾತನಾಡುವುದನ್ನು ಕೇಳಿದ್ದೆ. ನನ್ನ ಗ್ರಾಮದಲ್ಲಿ ರೇಡಿಯೋ ಆ ಹೊತ್ತಿಗೆ ಹೊಸದಾಗಿ ಬಂದ ಸಾಧನವಾಗಿತ್ತು. ಮನೆಗೆ ಒಂದು ಹೊಸ ರೇಡಿಯೋ ಸೆಟ್ಟು ಬಂದ ಮೇಲೆ ನಾನು ವಿವಿಧ ಸ್ಟೇಷನ್ನುಗಳನ್ನು ಹುಡುಕಲು ಭಾರೀ ಕುತೂಹಲದಿಂದ ಅದರ ನಾಬನ್ನು ತಿರುಗಿಸುತ್ತಿದ್ದೆ ಮತ್ತು ನಾನು ವಾರದ ಸಂತೆಗಳಲ್ಲಿ ಕೇಳಿರದ ಹಲವಷ್ಟು ಭಾಷೆಗಳನ್ನು ಅದರಿಂದ ಕೇಳುತ್ತಿದ್ದೆ. ಹಾಗಾದರೆ ಪ್ರಪಂಚದಲ್ಲಿ ಇನ್ನೆಷ್ಟು ಹೆಚ್ಚು ಭಾಷೆಗಳು ಇರಬಹುದು ಎಂಬ ಬಗ್ಗೆ ಅದು ನನ್ನಲ್ಲಿ ಕುತೂಹಲ ಮೂಡಿಸಿತು.

1970ರ ದಶಕದಿಂದ ವಿಶ್ವವಿದ್ಯಾಲಯದ ಒಬ್ಬ ವಿದ್ಯಾರ್ಥಿಯಾಗಿದ್ದಾಗ ನಾನು ಭಾರತೀಯ ಭಾಷೆಗಳ ಕುರಿತ ಜನಗಣತಿಯ ಮಾಹಿತಿಗಳಿದ್ದ ಒಂದು ಚಿಕ್ಕ ಪುಸ್ತಕವನ್ನು ನೋಡುವ ಸಂದರ್ಭ ಒದಗಿತು. ಅದು 109 ಭಾಷೆಗಳ ಒಂದು ಪಟ್ಟಿಯನ್ನು ಹೊಂದಿತ್ತು. ಕೊನೆಯವೆಲ್ಲಾ “ಇತರ ಭಾಷೆ”ಗಳಾಗಿದ್ದವು; ಅಂದರೆ, 108 ಭಾಷೆಗಳಿಗಿಂತ ಹೆಚ್ಚು ಭಾಷೆಗಳಿರುವುದನ್ನು ಅದು ಸೂಚಿಸಿತ್ತು. ಅದಕ್ಕಿಂತಲೂ ಹಿಂದಿನ ಜನಗಣತಿಯಲ್ಲಿ ಹೆಚ್ಚಿನ ಮಾಹಿತಿ ಸಿಗಬಹುದೇ ಎಂದು ನಾನು ವಿಶ್ವವಿದ್ಯಾಲಯದ ಪುಸ್ತಕ ಭಂಡಾರದಲ್ಲಿ 1961ರ ಜನಗಣತಿಯ ಬಗ್ಗೆ ಹುಡುಕಾಡಿದೆ. ಅಲ್ಲಿ ನಾನು ನೋಡಿದ್ದು ದಂಗುಬಡಿಸುವಂತದ್ದಾಗಿತ್ತು. ಅಲ್ಲಿ ಭಾರತದ ಜನರು ತಮ್ಮ ತಾಯಿನುಡಿ ಎಂದು ಹೇಳಿಕೊಂಡ 1,652 ಭಾಷೆಗಳ ಸ್ಪಷ್ಟವಾದ ಪಟ್ಟಿಯೊಂದಿತ್ತು. ಈ ಎರಡು ಅಂಕಿಸಂಖ್ಯೆಗಳ ಹೋಲಿಕೆಯಿಂದ ಯಾರಾದರೂ ಒಂದು ತೀರ್ಮಾನಕ್ಕೆ ಬರಬಹುದಾದರೆ, 1961 ಮತ್ತು 1971ರ ನಡುವೆ ಭಾರತವು 1544 ಭಾಷೆಗಳನ್ನು ಕಳೆದುಕೊಂಡಿತು ಎಂದಾಗುತ್ತದೆ. ಆದರೆ ಅದು ಸ್ವಲ್ಪಮಟ್ಟಿನ ಅವಸರದ ತೀರ್ಮಾನವಾದೀತು.

ಅಗತ್ಯವಿರುವ ಪರಿಶೀಲನೆ

ಉಳಿದೆಲ್ಲಾ ಅನೇಕ ಅಂಕಿಅಂಶಗಳಿಗೆ ವ್ಯತಿರಿಕ್ತವಾಗಿ ಭಾಷಾ ಜನಗಣತಿಯ ಅಂಕಿಅಂಶಗಳನ್ನು ಸರಳ ಲೆಕ್ಕಾಚಾರದಿಂದ ಅಂದಾಜು ಮಾಡಲಾಗದು. ಅದಕ್ಕೆ ತರಬೇತಿ ಹೊಂದಿದ ಭಾಷಾಶಾಸ್ತ್ರಜ್ಞರ ಪರಿಶೀಲನೆಯ ಅಗತ್ಯವಿದೆ. ಭಾಷೆಗಳ ಕುರಿತ ದತ್ತಾಂಶವು “ಹೇಳಿಕೊಂಡ” ತಾಯಿನುಡಿಗಳನ್ನು ಬೆಳಕಿಗೆ ತರುತ್ತದೆ. ಆ ದಾವೆಗಳಿಗೆ ಆಧಾರವಾದ ಭಾಷಾ ಮಾದರಿಗಳನ್ನು ಅದು ಒದಗಿಸುವುದಿಲ್ಲ. ಆದುದರಿಂದ ಭಾರತೀಯ ಜನಗಣತಿ ರಿಜಿಸ್ಟ್ರಾರ್‌ಗಾಗಿ ಕೆಲಸಮಾಡುವ ಭಾಷಾಶಾಸ್ತ್ರಜ್ಞರು, ಜನರು ಹೇಳಿಕೊಂಡ ತಾಯಿನುಡಿಗಳು ವಿದ್ವಾಂಸರ ಗ್ರಂಥಗಳಲ್ಲಿ ಇವೆಯೇ ಎಂದು ಲೆಕ್ಕಹಾಕಲು ಗ್ರಂಥಾಲಯಗಳಲ್ಲಿ ಲಭ್ಯ ಮೂಲಗಳನ್ನು ಪರಿಶೀಲಿಸಬೇಕಾಗುತ್ತದೆ. ಸ್ಪಷ್ಟವಾಗಿಯೇ ಇದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದುದರಿಂದಲೇ ಜನಗಣತಿ ಅಂಕಿಅಂಶಗಳ ಘೋಷಣೆ ಪ್ರಕ್ರಿಯೆಯಲ್ಲಿ ಭಾಷಾ ಅಂಕಿಅಂಶಗಳು ಸಾಮಾನ್ಯವಾಗಿ ಕೊನೆಯದಾಗಿ ಘೋಷಣೆಯಾಗುತ್ತವೆ.

ಇದನ್ನೂ ಓದಿ: ಯಹೂದಿಗಳಂತೆ ಎದ್ದುನಿಲ್ಲಬೇಕೆಂದ ಚಕ್ರತೀರ್ಥರನ್ನು ಇಸ್ರೇಲಿಗೆ ಕಳುಹಿಸಿಕೊಟ್ಟರೆ ಹೇಗೆ?!

1971ರ ಜನಗಣತಿ ಮತ್ತು ಭಾಷಾ ಅಂಕಿಅಂಶಗಳ ಘೋಷಣೆಯ ನಡುವೆ ಬಾಂಗ್ಲಾದೇಶದ ಯುದ್ಧ ನಡೆಯಿತು. ನಂತರ ಬಾಂಗ್ಲಾದೇಶವಾದ ಪೂರ್ವ ಪಾಕಿಸ್ತಾನವು ಭಾಷೆಯ ಆಧಾರದಲ್ಲಿ ಪಶ್ಚಿಮ ಪಾಕಿಸ್ತಾನದಿಂದ ಪ್ರತ್ಯೇಕತೆ ಬಯಸಿತ್ತು. ಆದುದರಿಂದ ಭಾರತ ಸರಕಾರವು ಭಾಷಾ ವೈವಿಧ್ಯವನ್ನು ಸ್ವಲ್ಪಮಟ್ಟಿನ ಆತಂಕದಿಂದ ಕಂಡು, ಭಾರತದ ಭಾಷೆಗಳ ಸಂಖ್ಯೆಯನ್ನು ಕಡಿಮೆ ಮಾಡುವುದರ ಮೂಲಕ ಕಡಿಮೆ ಭಾಷಾವೈವಿಧ್ಯತೆ ತೋರಿಸಲು ಹಾದಿಗಳನ್ನು ಹುಡುಕಿದ್ದು ಸಹಜವಾಗಿತ್ತು. ಆದುದರಿಂದ ಭಾರತ ಸರಕಾರವು ಭಾಷೆಯನ್ನು ಗುರುತಿಸಲು ಅಥವಾ ಮಾನ್ಯ ಮಾಡಲು “ಕನಿಷ್ಟ 10,000 ಮಾತನಾಡುವ ಜನರು ಇರಬೇಕು” ಎಂಬ ಹೊಸ ಮಾನದಂಡವನ್ನು ಪರಿಚಯಿಸಿತು. ಈ ಮಾನದಂಡಕ್ಕೆ ಯಾವುದೇ ವೈಜ್ಞಾನಿಕ ತಳಹದಿ ಇರಲಿಲ್ಲ. ವಾಸ್ತವದಲ್ಲಿ ಒಂದು ಭಾಷೆಯನ್ನು ಭಾಷೆ ಎಂದು ಪರಿಗಣಿಸಲು ಅದನ್ನು ಮಾತನಾಡುವ ಕನಿಷ್ಟ ಇಬ್ಬರು ವ್ಯಕ್ತಿಗಳು ಜೀವಂತವಾಗಿ ಇದ್ದರೆ ಸಾಕು. 10,000ದ ಮಿತಿ ಎಂಬುದು ಅಧಿಕಾರಶಾಹಿಯ ಮರ್ಜಿಯಾಗಿತ್ತು. ಆದರೆ ಅದು ನಂತರದ ದಶಕಗಳ ಹಲವಾರು ಜನಗಣತಿಗಳಿಗೆ ಅಂಟಿಕೊಂಡಿತು. 2011ರ ಕೊನೆಯ ಜನಗಣತಿಯ ತನಕ. ಆ ಜನಗಣತಿಯಲ್ಲಿನ ಭಾಷೆಗಳ ಸಂಖ್ಯೆ 1,544 ಆಗಿತ್ತು. ಹಾಗಾದರೆ, 1971ರ ನಂತರದಿಂದ ಅಲ್ಲಿಯತನಕ ಈ ಭಾಷೆಗಳು ಮೌನವಾಗಿದ್ದವೆ? ಸಹಜವಾಗಿಯೇ ಇಲ್ಲ. ಅವು ತಮ್ಮದೇ ಸಣ್ಣ ಜನಸಂಖ್ಯೆಯಲ್ಲಿ, ಸಣ್ಣ ಭೂಪ್ರದೇಶಗಳಲ್ಲಿ ತಮ್ಮ ಬದುಕು ಮುಂದುವರಿಸಿದ್ದವು.

ಕೃತಕ ಮಿತಿ

ಸರಕಾರವು ಭಾಷೆಗಳ ಅಸ್ತಿತ್ವವನ್ನೇ ಅಲ್ಲಗಳೆಯುವ ಕೃತಕವಾದ ಮಿತಿಯನ್ನು ಹೇರಿದುದರಿಂದ ಎಷ್ಟು ಭಾಷೆಗಳು ಮರೆಯಾದವು ಎಂಬುದನ್ನು ತಿಳಿದುಕೊಳ್ಳಲು 1971ರ ಜನಗಣತಿ ಮತ್ತು 2011ರ ಜನಗಣತಿಯ ಭಾಷಾ ಅಂಕಿಅಂಶಗಳನ್ನು ತಾಳೆಹಾಕಬೇಕು. ಯಥಾವತ್ತಾಗಿ ಅದೇ ವಿಧಾನವನ್ನು ಬಳಸಿ 2011ರಲ್ಲಿ ಸೇರಿಸಲಾದ ಭಾಷೆಗಳ ಸಂಖ್ಯೆಯನ್ನು 1961ರ ಸಂಖ್ಯೆಯನ್ನು ಹೋಲಿಸುವುದರ ಮೂಲಕ ಜನರು ತಮ್ಮ ತಾಯಿನುಡಿಯೆಂದು ಹೇಳಿಕೊಂಡ ಭಾಷೆಗಳ ಸಂಖ್ಯೆ ಮತ್ತು ನಿಜವಾಗಿಯೂ ನಾಶವಾದ ಭಾಷೆಗಳ ಸಂಖ್ಯೆಯನ್ನು ಲೆಕ್ಕಹಾಕಬಹುದು. (1,652-1,369=283). ಎಂದರೆ, 1961ರಿಂದ 2011ರ ನಡುವಿನ ಐವತ್ತು ವರ್ಷಗಳಲ್ಲಿ 283 ಭಾಷೆಗಳು- ಸರಾಸರಿಯಲ್ಲಿ ಪ್ರತೀ ವರ್ಷ ನಾಲ್ಕು ಅಥವಾ ಐದು ಭಾಷೆಗಳು (ಅಥವಾ ಪ್ರತೀ ಎರಡು ಅಥವಾ ಮೂರು ತಿಂಗಳುಗಳಲ್ಲಿ ಒಂದು ಭಾಷೆ) ನಾಶವಾದವು ಎಂದಾಗುತ್ತದೆ. ಅಷ್ಟೊಂದು ಸಂಖ್ಯೆಯ “ಮೃತ ಭಾಷೆ”ಗಳು ಸಹಸ್ರಮಾನಗಳಿಂದ ಭಾರತದಲ್ಲಿ ಬದುಕಿದ್ದವು ಎಂಬುದನ್ನು ಪರಿಗಣಿಸಿದರೆ, ಭಾರತದಲ್ಲಿ ಭಾಷೆಗಳ ಮರಣ ದರ ಆಘಾತಕಾರಿಯಾಗಿದೆ.

ಜನಗಣತಿಯು “ತಾಯಿ ನುಡಿ” ಅಥವಾ “ಮಾತೃಭಾಷೆ” ಎಂಬ ಪದವನ್ನು ಬಳಸಿದಾಗ ಅದು ಕೇವಲ ಸಣ್ಣ ಮತ್ತು ಅತಿಸಣ್ಣ ಭಾಷೆಗಳನ್ನು ಮಾತ್ರವಲ್ಲದೇ, ಅದು ಎಲ್ಲ ಪ್ರಮುಖ ಭಾಷೆಗಳನ್ನೂ ಒಳಗೊಳ್ಳುತ್ತದೆ ಎಂದು ಸುಲಭವಾಗಿ ಅರ್ಥವಾಗುವುದಿಲ್ಲ. ವಿವಿಧ ಭಾಷೆಗಳನ್ನು ಮಾತನಾಡುವ ಭಾಷೆಯ ದಶಕವಾರು ಪ್ರಮಾಣವನ್ನು ಇಡೀ ಭಾರತದ ಜನಸಂಖ್ಯೆಯ ಪ್ರಮಾಣಕ್ಕೆ ಹೋಲಿಸಿದರೆ, 1961ರಲ್ಲಿ ಬಂಗಾಳಿ ಮಾತನಾಡುವ ಜನರು ಒಟ್ಟು ಜನಸಂಖ್ಯೆಯ ಶೇ.8.17ರಷ್ಟು ಇದ್ದರೆ, ಅರ್ಧ ಶತಮಾನದ ನಂತರ ಅದು ಶೇ.8.03ಕ್ಕೆ ಕುಸಿದಿದೆ. ಇದೇ ಅವಧಿಯಲ್ಲಿ ಮರಾಠಿ ಮಾತನಾಡುವವರ ಪ್ರಮಾಣ ಶೇ.7.62ರಿಂದ ಶೇ.6.86ಕ್ಕೆ, ತೆಲುಗು ಮಾತನಾಡುವರ ಪ್ರಮಾಣ ಶೇ.8.16ರಿಂದ ಶೇ.6.70ಕ್ಕೆ ಇಳಿದಿದ್ದರೆ, ತಮಿಳು ಮಾತನಾಡುವವರ ಪ್ರಮಾಣ ಇನ್ನಷ್ಟು ಕೆಟ್ಟದಾಗಿ ಶೇ.6.88ರಿಂದ ಶೇ.5.70ಕ್ಕೆ ಇಳಿದಿದೆ. ಮೊದಲ ಎಂಟು ಅತೀಹೆಚ್ಚು ಜನರು ಮಾತನಾಡುವ ಹಿಂದಿಯೇತರ ಭಾಷೆಗಳಾದ ಬಂಗಾಳಿ, ಮರಾಠಿ, ತೆಲುಗು, ತಮಿಳು, ಗುಜರಾತಿ, ಉರ್ದು, ಕನ್ನಡ ಮತ್ತು ಒಡಿಯಾ ಭಾಷೆಗಳ ಪ್ರಮಾಣ ಒಟ್ಟಾಗಿ 2011ರ ಜನಸಂಖ್ಯೆಯ ಶೇ.42.37ದಷ್ಟಿದ್ದರೆ, ಹಿಂದಿ ಒಂದರ ಪ್ರಮಾಣವೇ ಶೇ.43.63ದಷ್ಟಿದೆ. ಹಿಂದಿ ಮಾತೃಭಾಷೆ ಎಂದು ಹೇಳಿಕೊಳ್ಳುವವರ ಪ್ರಮಾಣ ನಿರಂತರ ಏರಿಕೆ ಕಂಡಿದ್ದು, 1961ರಲ್ಲಿ ಇದು ಶೇ.36.99 ಇದ್ದದ್ದು 2011ರಲ್ಲಿ ಶೇ.43.63ಕ್ಕೆ ಏರಿದೆ. ಒಟ್ಟಾರೆಯಾಗಿ 2011ರ ಸರಳ ಅಂಕಿಅಂಶಗಳು ತೋರಿಸುವ ಪ್ರಕಾರ ಹಿಂದಿ, ಗುಜರಾತಿ, ಸಂಸ್ಕೃತದ ಹೊರತಾಗಿ ಎಲ್ಲಾ ಇತರ ಅಧಿಕೃತ ಭಾಷೆಗಳು ನಿರಂತರವಾಗಿ ಕುಗ್ಗುತ್ತಾ ಬಂದಿವೆ. 1961ರಲ್ಲಿ ಸಂಸ್ಕೃತ ತಮ್ಮ ಮಾತೃಭಾಷೆ ಎಂದು ಹೇಳಿಕೊಂಡವರ ಸಂಖ್ಯೆ 2,212 ಇದ್ದರೆ, 2011ರಲ್ಲಿ ಅದು ಹನ್ನೊಂದು ಪಟ್ಟು ಹೆಚ್ಚಿ, 24,821 ಆಗಿದೆ. 2011ರ ಜನಗಣತಿಯ ಭಾಷಾ ಅಂಕಿಅಂಶಗಳನ್ನು 2018ರಲ್ಲಷ್ಟೇ ಬಿಡುಗಡೆಗೊಳಿಸಲಾಯಿತು.

ತಮಿಳು ಪ್ರಪಂಚದಲ್ಲೇ ಅತ್ಯಂತ ಪುರಾತನವಾದ ಜೀವಂತ ಉಳಿದಿರುವ ಭಾಷೆಯಾಗಿದೆ. ಕನ್ನಡ ಮತ್ತು ಮರಾಠಿ ಹೆಚ್ಚು ಕಡಿಮೆ ಎರಡು ಸಹಸ್ರಮಾನಗಳಿಂದ ಇವೆ. ಮಲಯಾಳಂ, ಬಂಗಾಳಿ ಮತ್ತು ಒಡಿಯಾ ಕೂಡಾ ಹೆಚ್ಚು ಕಡಿಮೆ ಒಂದು ಸಾವಿರ ವರ್ಷಗಳಿಂದ ಇವೆ. ಸಂಸ್ಕೃತವು ಸುಮಾರು ಸಾವಿರ ವರ್ಷಗಳಿಂದ ಜೀವಂತ ಭಾಷೆಯಾಗಿ ಉಳಿದಿಲ್ಲ. ಇದಕ್ಕೆ ತೀವ್ರ ವ್ಯತಿರಿಕ್ತವಾಗಿ 17ನೇ ಶತಮಾನದಲ್ಲಿ ಭಾರತಕ್ಕೆ ಬಂದ ಇಂಗ್ಲಿಷ್ ವ್ಯಾಪಕವಾದ ಸ್ವೀಕಾರಾರ್ಹತೆಯನ್ನು ಪಡೆದಿದ್ದು, ಜನಗಣತಿಯ ಅಂಕಿಅಂಶಗಳ ಪ್ರಕಾರ ಅದನ್ನು ಮೊದಲ ಭಾಷೆಯಾಗಿ ಮಾತನಾಡುವವರು 2,59,878 ಮಂದಿ ಇದ್ದಾರೆ. ಭಾರತದ 7,00,000 ಹಳ್ಳಿಗಳು, 2,000 ನಗರ, ಪಟ್ಟಣಗಳಲ್ಲಿ ಇರುವ ಇಂಗ್ಲಿಷ್ ಮಾಧ್ಯಮ ಶಾಲೆಗಳು, ಇಂಗ್ಲಿಷ್ ಪತ್ರಿಕೆಗಳ ಪ್ರಸಾರ ಸಂಖ್ಯೆ, ಇಂಗ್ಲಿಷ್ ಟಿವಿ ಚಾನೆಲ್‌ಗಳ ಟಿಆರ್‌ಪಿ ಇತ್ಯಾದಿಗಳನ್ನು ತ್ವರಿತ ಲೆಕ್ಕಾಚಾರ ಹಾಕಿ ನೋಡಿ: (ಸಂಸ್ಕೃತ ಮಾತನಾಡುವವರೆಂದು ಹೇಳಿಕೊಳ್ಳುವವರ ಹೋಲಿಕೆಯಲ್ಲಿ) ಇಂಗ್ಲಿಷ್ ಮಾತನಾಡುವವರ ಸಂಖ್ಯೆ ಅಸಲಿ ಎಂಬಂತೆ ಕಾಣುವುದೆ?

ಇದರಿಂದ ಯಾರಾದರೂ ಮಾಡಬಹುದಾದ ದುಃಖಕರ ತೀರ್ಮಾನ ಎಂದರೆ, ಹಿಂದುತ್ವದ ಸಿದ್ಧಾಂತವು ಇಷ್ಟಪಡುವ ಭಾಷೆಗಳನ್ನು ಹೊರತುಪಡಿಸಿದರೆ, ಭಾರತೀಯ ಜನರು ಮಾತನಾಡುವ ಎಲ್ಲಾ ದೊಡ್ಡ ಚಿಕ್ಕ ಭಾಷೆಗಳು ತಮ್ಮ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿವೆ. ಸಂವಿಧಾನವು ಘೋಷಿಸಿರುವಂತೆ ಬಹುಭಾಷಾ ಗಣರಾಜ್ಯವಾಗಿರುವ ಭಾರತಕ್ಕೆ ಇದು ಒಳ್ಳೆಯ ವರ್ತಮಾನವಲ್ಲ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಪ್ರೊ. ಜಿ ಎನ್ ದೇವಿ

ಜಿ.ಎನ್. ದೇವಿ
ಜಿ.ಎನ್. ದೇವಿಯವರು ಟಾಟಾ ಇನ್‌ಸ್ಟ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ- ನ್ಯಾಷನಲ್ ಸೆಂಟರ್ ಫಾರ್ ಬಯಾಲಾಜಿಕಲ್ ಸೈನ್ಸಸ್‌ನ ಒಬೈದ್ ಸಿದ್ದಿಕಿ ಪೀಠದ ಪ್ರಾಧ್ಯಾಪಕರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...