ಕರ್ನಾಟಕದಲ್ಲಿದ್ದ ಕಳೆದ ಅವಧಿಯ ಕೆಟ್ಟ ಸರಕಾರಕ್ಕೆ ಕೊಟ್ಟ ಏಟನ್ನು ಅವಮಾನವಾಗಿ ಪರಿಗಣಿಸಿದ ಮೋದಿ ಸರಕಾರ ತನ್ನ ಮನೋಗತಕ್ಕೆ ತಕ್ಕಂತೆ ನಡೆದುಕೊಂಡಿದೆಯಲ್ಲಾ. ಸಿದ್ದರಾಮಯ್ಯನ ಸರಕಾರ ಬಿಪಿಎಲ್ ಕುಟುಂಬಗಳಿಗೆ ತಲಾ ಹತ್ತು ಕೆ.ಜಿ ಅಕ್ಕಿ ಕೊಡುವ ಭರವಸೆ ಕೊಟ್ಟು ಆರಿಸಿ ಬಂದಿತ್ತು. ಈ ಭರವಸೆ ಹುಸಿಯಾಗಿ ಜನರೆಲ್ಲಾ ಇದು ವಚನಭ್ರಷ್ಟ ಸರಕಾರವೆಂದು ಕೂಗಬೇಕಾದರೆ ಸರಕಾರ ಅಕ್ಕಿ ನಿಲ್ಲಿಸಬೇಕು; ಹಾಗಾಗಬೇಕಾದರೆ ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಮಾರಲು ಸಾಧ್ಯವಿದ್ದ ಅಕ್ಕಿಯನ್ನೂ ಸಿಗದಂತೆ ಮಾಡಬೇಕಿತ್ತು. ಇದಕ್ಕೆ ಬಿಜೆಪಿಗಳು ಸರ್ವಪ್ರಯತ್ನ ಮಾಡುತ್ತಿದ್ದಾರೆ. ಈಗ ಬಡವರಿಗೆ ಕೊಡುತ್ತಿದ್ದ ಅಕ್ಕಿ ಮೋದಿಯದು, ಸಿದ್ದರಾಮಯ್ಯ ಬರಿ ಚೀಲ ಅಷ್ಟೆ ಎಂದವನು ಬಾಯಿ ಹೊಲಿದುಕೊಂಡು ಕೂತಿದ್ದಾನೆ. ಇನ್ನ ದಳ ಮತ್ತು ಬಿಜೆಪಿಗಳೂ ಕೂಡ ಬಾಯಿಮುಚ್ಚಿಕೊಂಡಿವೆ. ಬಿಜೆಪಿಗಳ ಅಜೆಂಡಾದಲ್ಲಿ ಬಡವರ ಉದ್ಧಾರದ ಪ್ರಶ್ನೆಯೇ ಇಲ್ಲ. ಅದರ ಮನಸ್ಸೇ ಬಡವರ ವಿರೋಧಿಯಾದದ್ದು. ಅದಕ್ಕೆ ಇಂದಿರಾ ಕ್ಯಾಂಟೀನ್ ನಿಲ್ಲಿಸಿ ,ಅಕ್ಕಿಯನ್ನು ಕಡಿಮೆ ಮಾಡಿತ್ತು. ಈಗ ಸಿದ್ದರಾಮಯ್ಯನವರ ಪಡಿಪಾಟಲು ನೋಡಿದ ಜನ ಆಯ್ತು ಒಂದೆರಡು ಕೆ.ಜಿ ಕಡಿಮೆ ಕೊಡಿ ಎನ್ನಲು ತಯಾರಾಗಿದ್ದಾರಂತಲ್ಲಾ, ಥೂತ್ತೇರಿ.
*****
ಹಾಗೆ ನೋಡಿದರೆ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡದಿದ್ದರೂ ಜನ ಕಾಂಗ್ರೆಸ್ಸಿಗೆ ಬಹುಮತ ಕೊಡುವವರಿದ್ದರು. ಏಕೆಂದರೆ ಬೊಮ್ಮಾಯಿ ಸರಕಾರ ಮತ್ತೆ ಆರಿಸಿ ಬರಲಾರದ ಪಾತಾಳ ಮುಟ್ಟಿತ್ತು. ಸ್ವತಃ ಬಸವರಾಜ ಬೊಮ್ಮಾಯಿಯವರಿಗೇ ಇದರ ಅರಿವಿತ್ತು. ಏಕೆಂದರೆ ಮತದಾರರ ಬಳಿ ಹೇಳಲು ಅವರಿಗೆ ತಮ್ಮ ಸರಕಾರದ ಸಾಧನೆಗಳೆಂಬ ಯಾವುದೇ ಸಂಗತಿಗಳು ಇರಲಿಲ್ಲ. ಇದ್ದುದೆಲ್ಲಾ ಬರಿ ಹಗರಣಗಳೇ ಆಗಿದ್ದವು. ಇದನ್ನು ಗ್ರಹಿಸಲಾರದ ಕಾಂಗ್ರೆಸ್ಸಿಗರು, ಈಡೇರಿಸಲು ತಿಣುಕಾಡಬೇಕಿರುವ ಗ್ಯಾರಂಟಿಗಳನ್ನು ಘೋಷಣೆ ಮಾಡಿಬಿಟ್ಟರು. ಈಗಲೂ ಕಾಲ ಮಿಂಚಿಲ್ಲ. ಎಲ್ಲ ಗ್ಯಾರಂಟಿಗಳೂ ಜಾರಿಯಾಗಿಬಿಟ್ಟರೆ ಬಿಜೆಪಿಯ ಕತೆಯೇನು ಎಂಬ ಚಿಂತೆ ಬಿಜೆಪಿಗಿಂತಲೂ ಗೋದಿ ಮೀಡಿಯಾವನ್ನು ಆವರಿಸಿಬಿಟ್ಟಿದೆ. ಅದಕ್ಕೆ ದಿನಪೂರ್ತಿ ಅನ್ನ ಕಾಣದವರಂತೆ ಅಕ್ಕಿ ಅಕ್ಕಿ ಎಂದು ಕೂಗುತ್ತಿವೆ. ಇನ್ನು ಮೋದಿಯವರಿಗೆ ಭಾರತದ ಸಮಸ್ಯೆಗಳು ಕಾಣಿಸಿದ ಉದಾಹರಣೆಗಳು ಇಲ್ಲವೇ ಇಲ್ಲ. ತಮ್ಮ ಮನಮೋಹಕ ಭಾಷಣಗಳನ್ನು ತಾವೇ ಮೆಚ್ಚಿ ಆನಂದ ಪಡುವ ವ್ಯಕ್ತಿಗೆ ಭಾರತದ ರೈತರ ಸಮಸ್ಯೆಗಳು, ನಿರುದ್ಯೋಗಿಗಳ ನಿರುತ್ಸಾಹದ ಕಣ್ಣುಗಳು, ಮಹಿಳೆಯರ ಅಸಹಾಯಕ ಸ್ಥಿತಿಗಳು ಅರಿವಾಗುವುದೇಯಿಲ್ಲ. ಹಸಿವಿನ ಕ್ಷೋಭೆಯಾಗಲಿ, ಜನಾಂಗೀಯ ಹತ್ಯೆಯಾಗಲಿ ಯಾವುದರ ಬಗ್ಗೆಯೂ ಎಂದೂ ತಲೆಕೆಡಿಸಿಕೊಳ್ಳದ ಮೋದಿ ಅಮೆರಿಕಕ್ಕೆ ಹೋಗಿ ಕಣ್ಣುಮುಚ್ಚಿ ಯೋಗಮಾಡಲಿದ್ದಾರಂತಲ್ಲಾ, ಥೂತ್ತೇರಿ.
****
ಬಿಜೆಪಿಗಳ ಮನಸ್ಸು ಹೇಗಿರುತ್ತದೆ ಎಂಬುದಕ್ಕೆ ನಮ್ಮ ಮಕ್ಕಳ ಪಠ್ಯಪುಸ್ತಕ ಹಾಳು ಮಾಡಿದ್ದ ಚಕ್ರತೀರ್ಥ ಎಂಬ ’ಯಹೂದಿ’ ಆರಾಧಕನ ಮಾತುಗಳು ಉದಾಹರಣೆ. ಆತ ಆಡಿದ ’ಬ್ರಾಹ್ಮಣರು ಯಹೂದಿಗಳಂತೆ ಎದ್ದುನಿಲ್ಲಬೇಕು’ ಎನ್ನುವ ಮಾತು ಕನ್ನಡದ ನಾಗರಿಕರನ್ನು ಬೆಚ್ಚಿಬೀಳಿಸಿಲ್ಲವಂತಲ್ಲಾ. ಏಕೆಂದರೆ ಈ ದೇಶದಲ್ಲಿದ್ದ ಬ್ರಾಹ್ಮಣರು ಚಕ್ರತೀರ್ಥನ ಮಾತಿಗಿಂತ ಮೊದಲೇ, ಅಂದರೆ ಶತಮಾನಗಳ ಹಿಂದೆಯೇ ಇಲ್ಲಿಂದ ಬುದ್ದನನ್ನು ಹೊರಮಾಡಿದ್ದಾರೆ. ಬಸವಣ್ಣನನ್ನು ನೀರಲ್ಲಿ ಮುಳುಗಿಸಿದ್ದಾರೆ. ಈಚೆಗೆ ನಮ್ಮ ಕಣ್ಣು ಮುಂದೆ ನಡೆದ ವಿದ್ಯಮಾನ ಯಾವುದೆಂದರೆ ಮಂಡ್ಯ ಜಿಲ್ಲೆಯ ಬೂಕನಕೆರೆ ಎಡೂರಪ್ಪರನ್ನು ಸಂಘಕ್ಕೆ ಸೇರಿಸಿಕೊಂಡು, ಅವರ ಮುಖಾಂತರ ಅಧಿಕಾರ ಹಿಡಿದು ಬೇಕಾದಷ್ಟು ಪಡೆದು ಇಷ್ಟು ಸಾಕು ಎಂದು ತೀರ್ಮಾನಿಸಿದ ನಂತರ ಸಂತೋಷ್ ಎಂಬ ಮತ್ತೊಬ್ಬ ’ಯಹೂದಿ ಆರಾಧಕ’ ವ್ಯಕ್ತಿಯ ಮೂಲಕ ಕರ್ನಾಟಕದ ಸಿಂಹಾಸನಕ್ಕೆ ಪ್ರಹ್ಲಾದ ಜೋಷಿಯನ್ನು ತರಲು ಯತ್ನಿಸಿದ್ದು ಎಂತಹ ಕೆಲಸವೆಂಬುದು ಕೆಲವರಿಗಾದರೂ ಗೊತ್ತಾಗಿದೆಯಲ್ಲಾ, ಥೂತ್ತೇರಿ.
ಇದನ್ನೂ ಓದಿ: ‘ಬಿಟ್ಟಿ ಸವಲತ್ತಿ’ನ ಬಗ್ಗೆ ಬುದ್ದಿಯವರು ಸಿಟ್ಟಾಗಿದ್ದಾರಲ್ಲಾ!
*****
ಬ್ರಾಹ್ಮಣರೆ ಯಹೂದಿಗಳಂತೆ ಎದ್ದೇಳಿ ಎಂದು ಚಕ್ರತೀರ್ಥ ಕರೆಕೊಟ್ಟ ಸಭೆಯಲ್ಲಿ, ಈಗಾಗಲೇ ನಾಜಿಗಳನ್ನು ಮೀರಿಸುವಂತೆ ಸಿದ್ದರಾಮಯ್ಯನವರ ತಲೆ ಕಡಿಯುವ ಮಾತನಾಡಿದ್ದ ಚೆನ್ನಬಸಪ್ಪ ಎಂಬುವವರಿದ್ದರು ಕೂಡ! ಈಗ ಈತ ಶಾಸಕ ಬೇರೆ. ಕರ್ನಾಟಕದ ಜನ ಮುಗ್ದರೆಂದು ಭಾವಿಸಿದ್ದ ಚಕ್ರತೀರ್ಥ ವಕ್ರವಾಗಿ ಪಠ್ಯಪುಸ್ತಕಗಳನ್ನು ತಿದ್ದಿದ ಕಾರಣಗಳು ಈಗ ಆತನ ಬಾಯಿಂದ ಹೊರಬರುತ್ತಿವೆ. ಆತನ ಕರೆಯಂತೆ ಕರ್ನಾಟಕದ ಬ್ರಾಹ್ಮಣರು ಯಹೂದಿಗಳಾಗಲು ಸಾಧ್ಯವಿಲ್ಲ. ಕೆಲವರು ಮಾತ್ರ ರಾಜಕಾರಣದಲ್ಲಿದ್ದರೆ, ಉಳಿದ ಬಹುತೇಕರೆಲ್ಲರೂ ಸರಕಾರದ ಕರ್ಮಚಾರಿಗಳು, ಹೋಟೆಲು, ಬೇಕರಿ, ಬ್ಯಾಂಕು, ಟಿ.ವಿ, ಪತ್ರಿಕೆಯೊಳಗಿವೆ. ತಮ್ಮ ಬದುಕಿಗೆ ಶೂದ್ರ ಸಮೂಹವನ್ನು ಆಶ್ರಯಿಸಿರುವ ಅವರಿಗೆ ಈ ಚಕ್ರತೀರ್ಥ ಇಸ್ರೇಲಿಗೆ ಹೋಗುವುದೇ ಒಳ್ಳೆಯದೆನ್ನಿಸಿದ್ದರೆ ಆಶ್ಚರ್ಯವಿಲ್ಲವಂತಲ್ಲಾ, ಥೂತ್ತೇರಿ.
****
ಚಕ್ರತೀರ್ಥನ ಮಾತನ್ನು ತಳ್ಳಿಹಾಕುವಂತಿಲ್ಲ. ಕನ್ನಡದ ನೆಲದಲ್ಲಿ ನಿಂತು ಬ್ರಾಹ್ಮಣರೆ ಯಹೂದಿಗಳಂತಾಗಿ ಎಂದು ಕರೆಕೊಡಬೇಕಾದರೆ ಅದಕ್ಕೆ ಐತಿಹಾಸಿಕ ಕಾರಣಗಳುಂಟು. ನಮ್ಮ ನಡುವಿನ ಅಸಂಖ್ಯಾತ ಜಾತಿಯ ಜನ ಒಂದೇ ಕಡೆಯಲ್ಲಿ ಸಿಗಲು ಸಾಧ್ಯವಿದೆ. ಅದಕ್ಕೆ ಎಷ್ಟೇ ಭಿನ್ನಾಭಿಪ್ರಾಯಗಳು, ಭಿನ್ನ ಆಚರಣೆಗಳಿದ್ದರೂ ಹೆಚ್ಚಿನ ಬಾರಿ ಅನುಸರಿಸಿಕೊಂಡುಂ ಸಹಬಾಳ್ವೆ ನಡೆಸಿದ್ದಿದೆ. ಆದರೆ ಯಾರೂ ಬ್ರಾಹ್ಮಣರನ್ನು ಅಣ್ಣತಮ್ಮನ ಭಾವದಲ್ಲಿ ಆಲಂಗಿಸಿದ್ದೂ ಇಲ್ಲ; ನಡೆದುಕೊಂಡಿದ್ದು ಇಲ್ಲ. ಕಾರಣ ಕೆದಕಿದರೆ ಅವರು ಆಚರಿಸಿರುವ ಅಸ್ಪೃಶ್ಯತೆ ಎದೆ ನಡುಗಿಸುವಂತದ್ದು; ಕೇರಳದ ನಂಬೂದರಿಗಳು ಗಾಂಧಿಯವರನ್ನೇ ಮನೆಯೊಳಗೆ ಸೇರಿಸಲಿಲ್ಲ. ಕಾರಣ ಕೇಳಲಾಗಿ, ಗಾಂಧಿ ಅಸ್ಪೃಶ್ಯರನ್ನು ಮುಟ್ಟಿಸಿಕೊಂಡಿದ್ದಾರೆ ಎಂಬ ಕಾರಣ ನೀಡಿದರವರು. ಇಂತಹ ಅಸ್ಪೃಶ್ಯಾಚರಣೆಯ ಹಿನ್ನೆಲೆಯಿರುವ ಚಕ್ರತೀರ್ಥನನ್ನು ಆದಷ್ಟು ಬೇಗ ಇಸ್ರೇಲಿಗೆ ಕಳುಹಿಸುವುದು ಒಳ್ಳೆಯದಲ್ಲವೆ, ಥೂತ್ತೇರಿ.
*****
ಬಿಜೆಪಿಯ ಹೀನಾಯ ಸೋಲು ಮತ್ತು ಕಾಂಗ್ರೆಸ್‌ನ ದಿಗ್ವಿಜಯದ ವಿಷಯವಾಗಿ ನಮ್ಮ ಜನ ಮಾಡುವ ತಮಾಷೆಯ ವ್ಯಾಖ್ಯಾನ ಇಲ್ಲಿ ದಾಖಲಿಸಲು ಯೋಗ್ಯ ಅನ್ನಿಸುತ್ತೆ. ಸೋಲಿನ ಭೀತಿಯಲ್ಲಿ ಕೆಲವು ಬಿಜೆಪಿಗಳು ಕರೆದಲ್ಲಿಗೆ ಮೋದಿಯವರು ಹೋದುದಲ್ಲದೆ ಹತ್ತಾರು ಬಾರಿ ಕರ್ನಾಟಕ್ಕ ದಾಳಿಯಿಟ್ಟು ರೋಡ್‌ಶೋ ಮಾಡಿದ ಸಂದರ್ಭದಲ್ಲಿ ರಸ್ತೆ ಬದಿ ನಿಂತ ಜನಗಳಿಗೆ ’ಕೈ’ ಬೀಸಿ ಬೀಸಿ ಕಾಂಗ್ರೆಸ್ ಚಿಹ್ನೆಯನ್ನೆ ಪ್ರಚಾರ ಮಾಡಿದರು. ಮೋದಿಗೆ ಗೌರವ ಕೊಡಲೋಸ್ಕರ ಜನಸ್ತೋಮ ಹಸ್ತದ ಚಿಹ್ನೆಗೆ ವೋಟು ಒತ್ತಿ ಭಾರಿ ಬಹುಮತದಿಂದ ಕಾಂಗ್ರೆಸ್ ಆರಿಸಿ ಬರುವಂತೆ ಮಾಡಿದರಂತಲ್ಲಾ. ಇದು ತಮಾಷೆಯಾದರೂ ಮೋದಿಯವರ ಕರ್ನಾಟಕದ ದಂಡಯಾತ್ರೆ ಆಡಿಕೊಳ್ಳುವವರಿಗೆ ಹಿತ ನೀಡಿದೆಯಂತಲ್ಲಾ, ಥೂತ್ತೇರಿ.