ಕೊರೊನಾ ಸಾವುಗಳು ಹೆಚ್ಚಾಗುತ್ತಿರುವಂತೆಯೇ ವೈದ್ಯರ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿವೆ. ಗುವಾಹಟಿಯಿಂದ 140 ಕಿಲೋಮೀಟರ್ ದೂರದಲ್ಲಿರುವ ಅಸ್ಸಾಂನ ಹೊಜೈನಲ್ಲಿರುವ ಕೋವಿಡ್ ಆರೈಕೆ ಕೇಂದ್ರದಲ್ಲಿ ವೈದ್ಯರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ಆಮ್ಲಜನಕದ ಕೊರತೆಯಿಂದಾಗಿ ಸಾವನ್ನಪ್ಪಿದ ಕೊರೊನಾ ಸೋಂಕಿತ ರೋಗಿಯ ಸಂಬಂಧಿಕರು, ವೈದ್ಯರ ಮೇಲೆ ಲೋಹದ ಕಸದ ಡಬ್ಬಿ ಮತ್ತು ಇಟ್ಟಿಗೆಗಳಿಂದ ಮನ ಬಂದಂತೆ ಥಳಿಸಿದ್ದಾರೆ. ಮೃತನ ಸಂಬಂಧಿಕರ ಜೊತೆಗೆ ವೈದ್ಯರ ಮೇಲೆ ಸ್ಥಳೀಯರು ಹಲ್ಲೆ ಮಾಡಿದ್ದಾರೆ. ವೈದ್ಯರ ಮೇಲಿನ ಮಾರಣಾಂತಿಕ ಹಲ್ಲೆಯ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಘಟನೆಯಲ್ಲಿ ಮುಖ್ಯ ಆರೋಪಿಗಳು ಸೇರಿದಂತೆ 24 ಜನರನ್ನು ಬಂಧಿಸಲಾಗಿದೆ.
ಹೊಜೈನಲ್ಲಿರುವ ಉದಾಲಿ ಮಾಡೆಲ್ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಡಾ. ಸೆಯೇಜ್ ಕುಮಾರ್ ಸೇನಾಪತಿ ಕರ್ತವ್ಯದಲ್ಲಿದ್ದರು. ಪಿಪಾಲ್ ಪುಖುರಿ ಗ್ರಾಮದ ನಿವಾಸಿ ಗಿಯಾಜ್ ಉದ್ದೀನ್ ಎಂಬ ರೋಗಿಯು ಕೊರೊನಾ ಸಂಬಂಧಿತ ತೊಂದರೆಗಳಿಂದಾಗಿ ಮಂಗಳವಾರ ಮೃತಪಟ್ಟಿದ್ದರು.
ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿಗೂ ಲಸಿಕೆಗೂ ಮುಗಿಯದ ನಂಟು, ಮತ್ತೆ ವಿವಾದದಲ್ಲಿ ಬಿಜೆಪಿ ಶಾಸಕ
“ರೋಗಿಯ ಸ್ಥಿತಿ ಗಂಭೀರವಾಗಿದೆ ಮತ್ತು ಬೆಳಿಗ್ಗೆಯಿಂದ ಮೂತ್ರ ವಿಸರ್ಜಿಸಿಲ್ಲ ಎಂದು ನನಗೆ ಅಟೆಂಡರ್ ತಿಳಿಸಿದರು. ನಾನು ಕೋಣೆಗೆ ಹೋಗಿ ರೋಗಿಯನ್ನು ಪರೀಕ್ಷಿಸಿದೆ. ಆತ ಮೃತಪಟ್ಟಿದ್ದಾನೆ ತಿಳಿಯಿತು. ನಾನು ಸುದ್ದಿ ತಿಳಿಸುತ್ತಿದ್ದಂತೆ, ಮೃತನ ಸಂಬಂಧಿ ನನ್ನನ್ನು ನಿಂದಿಸಲು ಪ್ರಾರಂಭಿಸಿದರು” ಎಂದು ಡಾ.ಸೇನಾಪತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೊರೊನಾ ಸೋಂಕಿತ ರೋಗಿಯ ಸಾವಿನಿಂದ ಬೇಸತ್ತ ಜನಸಮೂಹವು ಆಸ್ಪತ್ರೆಯ ಮೇಲೆ ದಾಳಿ ಮಾಡಿತು. ಹೆಚ್ಚಿನ ವೈದ್ಯಕೀಯ ಅಧಿಕಾರಿಗಳು ಇವರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ, ಡಾ. ಸೇನಾಪತಿ ತನ್ನನ್ನು ಕೋಣೆ ಒಳಗೆ ಸೇರಿಕೊಂಡಿದ್ದರು, ಆದರೆ ಜನರ ಗುಂಪು ಕೊಠಡಿಗೆ ನುಗ್ಗಿ ತೀವ್ರವಾಗಿ ಹಲ್ಲೆ ಮಾಡಿದೆ ಎಂದು ವರದಿಯಾಗಿದೆ.
“ಉದ್ರಿಕ್ತ ಗುಂಪು ಆಸ್ಪತ್ರೆಯನ್ನು ದರೋಡೆ ಮಾಡಿದರು, ನಾವು (ಸಿಬ್ಬಂದಿ) ಸುರಕ್ಷತೆಗಾಗಿ ಓಡಿದೆವು. ನಾನು ಒಂದು ಕೊಠಡಿಗೆ ಸೇರಿಕೊಂಡು ಬಚಾವಾಗಲು ಪ್ರಯತ್ನಿಸಿದೆ. ಆದರೆ, ಅವರು ನನ್ನನ್ನು ಕಂಡು ನನ್ನ ಮೇಲೆ ಹಲ್ಲೆ ನಡೆಸಿದರು. ಅವರು ನನ್ನ ಚಿನ್ನದ ಸರ, ನನ್ನ ಉಂಗುರ ಮತ್ತು ನನ್ನ ಮೊಬೈಲ್ ಕಸಿದುಕೊಂಡರು. ಅವರು 30 ಜನರಿದ್ದರು” ಎಂದು ಡಾ.ಸೇನಾಪತಿ ಹೇಳಿದ್ದಾರೆ.
ವೈದ್ಯರ ಮೇಲಿನ ಹಲ್ಲೆ ವ್ಯಾಪಕ ಖಂಡನೆಗೆ ಕಾರಣವಾಗಿದ್ದು, ಈ ಘಟನೆಯನ್ನು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಜೆ.ಜಯಲಾಲ್ ಖಂಡಿಸಿದ್ದಾರೆ. ಅಸ್ಸಾಂ ವೈದ್ಯಕೀಯ ಸೇವೆಗಳ ಸಂಘದ (ಎಎಂಎಸ್ಎ) ಅಸ್ಸಾಂ ಅಧ್ಯಾಯದ ಸದಸ್ಯರು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಸರ್ಕಾರಿ ಎಲ್ಲಾ ವೈದ್ಯಕೀಯ ಸೌಲಭ್ಯಗಳಲ್ಲಿ ಅವರು ಇಂದು ಹೊರರೋಗಿ ವಿಭಾಗ (ಒಪಿಡಿ) ಸೇವೆಗಳನ್ನು ಬಹಿಷ್ಕರಿಸಿದ್ದಾರೆ.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ದಾಳಿಯ ಬಗ್ಗೆ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸುವಂತೆ ಅಸ್ಸಾಂನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜಿ.ಪಿ.ಸಿಂಗ್‌ಗೆ ನಿರ್ದೇಶನ ನೀಡಿದ್ದಾರೆ., ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ದಾಳಿಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಬಂಧಿಸಲಾಗಿದೆ.
Such barbaric attacks on our frontline workers won't be tolerated by our administration. @gpsinghassam @assampolice Ensure that the culprits brought to justice. https://t.co/HwQfbWwYmn
— Himanta Biswa Sarma (@himantabiswa) June 1, 2021
ಭಾರತೀಯ ವೈದ್ಯಕೀಯ ಸಂಘಟನೆ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದೆ. ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ತಡೆಯಲು ಕಠಿಣ ಮತ್ತು ಪರಿಣಾಮಕಾರಿ ಕಾಯ್ದೆ ಜಾರಿಗೆ ತರಬೇಕು ಎಂದು ಗೃಹ ಸಚಿವ ಅಮಿತ್ ಶಾ ಅವರಲ್ಲಿ ಮನವಿ ಮಾಡಿದೆ.
ಇದನ್ನೂ ಓದಿ: ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಪ್ರಭಾರಿಗಳ ಕಾರ್ಯಶೈಲಿ: ಭ್ರಷ್ಟಾಚಾರ, ಅಕ್ರಮ ನೇಮಕಾತಿ ಆರೋಪ


