Homeಕರ್ನಾಟಕಕಲಬುರಗಿ ಕೇಂದ್ರೀಯ ವಿವಿಯಲ್ಲಿ ಪ್ರಭಾರಿಗಳ ಕಾರ್ಯಶೈಲಿ: ಭ್ರಷ್ಟಾಚಾರ, ಅಕ್ರಮ ನೇಮಕಾತಿ ಆರೋಪ

ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಪ್ರಭಾರಿಗಳ ಕಾರ್ಯಶೈಲಿ: ಭ್ರಷ್ಟಾಚಾರ, ಅಕ್ರಮ ನೇಮಕಾತಿ ಆರೋಪ

- Advertisement -
- Advertisement -

ಇಲ್ಲಿ ಅನ್ಯಾಯವನ್ನು ಯಾರೂ ಪ್ರಶ್ನೆ ಮಾಡೋ ಹಂಗೇ ಇಲ್ಲ. ಹಾಗೆಲ್ಲ ಪ್ರಶ್ನೆ ಮಾಡಿದ ಸಿಬ್ಬಂದಿಗೆ ಶೋ-ಕಾಸ್ ನೊಟಿಸ್ ನೀಡಿ, ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಲಾಗುತ್ತದೆ.
ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿ.ಸಿ. ಮತ್ತು ರಿಜಿಸ್ಟ್ರಾರ್ ಇಬ್ಬರೂ ನಿಯಮಿತ ಹುದ್ದೆ ಹೊಂದಿದವರಲ್ಲ. ಇಬ್ಬರೂ ಪ್ರಭಾರಿ ಹುದ್ದೆಯಲ್ಲಿರುವವರು. ಒಬ್ಬರು ವಿ.ಸಿ. ಎಂ.ವಿ ಅಳಗವಾಡಿ ಮತ್ತು ಇನ್ನೊಬ್ಬರು ರಿಜಿಸ್ಟ್ರಾರ್ ಬಸವರಾಜ್ ಡೋಣೂರ್. ಇವರಿಬ್ಬರ ಕಾರ್ಯಶೈಲಿ ಹೇಗಿದೆ ಎಂದರೆ ತಮ್ಮ ಮನಸೋ ಇಚ್ಛೆಯಂತೆ ಅವರು ನಿಯಮಗಳನ್ನು ಮುರಿಯುತ್ತಾರೆ. ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಹಣಕಾಸು ವ್ಯವಹಾರ ಮಾಡುತ್ತಾರೆ. ಇದಕ್ಕೆಲ್ಲ ಸಹಕರಿಸುವ ಹಣಕಾಸು ಅಧಿಕಾರಿಯನ್ನು ಡೆಪ್ಯುಟೇಷನ್ ಅವಧಿ ಮುಗಿದರೂ ಮುಂದುವರೆಸುತ್ತಾರೆ ಎಂಬ ಆರೋಪಗಳು ದಟ್ಟವಾಗಿವೆ.

ಕೇಂದ್ರೀಯ ವಿವಿಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಈ ಎಲ್ಲ ಅಪರಾತಪರಾಗಳ ವಿರುದ್ಧ ಆಕ್ಷೇಪ ಸಲ್ಲಿಸಿದ್ದಾರೆ. ಹಲವು ಸಂಘಟನೆಗಳು ರಾಷ್ಟ್ರಪತಿಗೂ ದೂರು ಸಲ್ಲಿಸಿವೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ), ಅಹಿಂದ ಫೋರಂ ಮತ್ತು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಸ್ಥೆ ಸೇರಿದಂತೆ ಕೆಲವು ಸಂಸ್ಥೆಗಳು ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ಉಪಕುಲಪತಿ ಎಂ.ವಿ. ಅಳಗವಾಡಿ ಮತ್ತು ರಿಜಿಸ್ಟ್ರಾರ್ ಬಸವರಾಜ್ ಡೋಣೂರ್ ಅವರು ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಬರೆದ ಪತ್ರದಲ್ಲಿ ದೂರಿದ್ದಾರೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಸ್.ಆರ್. ಕೊಲ್ಲೂರು, ಅಹಿಂದ ಫೋರಂ ರಾಜ್ಯ ಅಧ್ಯಕ್ಷ ಸೈಬಣ್ಣ ಜಮಾದಾರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ವಿಭಾಗೀಯ ಸಂಚಾಲಕ ಶೌಕತ್ ಅಲಿ ಆಲೂರ್ ಮತ್ತು ಸಾಮಾಜಿಕ ಕಾರ್ಯಕರ್ತ ರಮೇಶ್ ನೀಲೂರ್ ಅವರು, ಪ್ರಭಾರಿ ಉಪಕುಲಪತಿ ಮತ್ತು ಪ್ರಭಾರಿ ರಿಜಿಸ್ಟ್ರಾರ್ ಅವರ ವಿವಿಧ ಅಕ್ರಮಗಳನ್ನು ಪಟ್ಟಿ ಮಾಡಿದ್ದಾರೆ. ಇಬ್ಬರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

ಪತ್ರದ ಪ್ರತಿಗಳನ್ನು ಶಿಕ್ಷಣ ಸಚಿವಾಲಯ, ವಿಶ್ವವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷರು, ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ, ಕಾರ್ಯಕಾರಿ ಮಂಡಳಿ ಮತ್ತು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿಯ ಸದಸ್ಯರಿಗೆ ಕಳುಹಿಸಲಾಗಿದೆ.

ವ್ಯಾಪ್ತಿ ಮೀರಿ ಹಣಕಾಸು ವ್ಯವಹಾರ

ಈ ಕುರಿತು ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ವಿಭಾಗೀಯ ಸಂಚಾಲಕ ಶೌಕತ್ ಅಲಿ ಆಲೂರ್, ‘ಇಲ್ಲಿ ಹಣಕಾಸು ಭ್ರಷ್ಟಾಚಾರವಷ್ಟೇ ಅಲ್ಲ, ಅಹಿಂದ ನೌಕರರನ್ನು ತುಳಿಯುವ ಕೆಲಸವೂ ನಡೆಯುತ್ತಿದೆ. ಭ್ರಷ್ಟಾಚಾರವನ್ನು ಪ್ರಶ್ನಿಸಿದ ನೌಕರರಿಗೆ ಶೋ-ಕಾಸ್ ನೋಟಿಸ್ ನೀಡುವಂತಹ ಸರ್ವಾಧಿಕಾರಿ ಧೋರಣೆಯನ್ನು ವಿ.ಸಿ. ಮತ್ತು ರಿಜಿಸ್ಟ್ರಾರ್ ಅನುಸರಿಸುತ್ತಿದ್ದಾರೆ. ಇದರಿಂದ ಇಲ್ಲಿನ ಶೈಕ್ಷಣಿಕ ವಾತಾವರಣವೇ ಹದಗೆಟ್ಟು ಹೋಗಿದೆ’ ಎಂದರು.

‘ವಿಶ್ವವಿದ್ಯಾಲಯದ ಅತ್ಯುನ್ನತ ಆಡಳಿತ ಮಂಡಳಿಯಾದ ಕಾರ್ಯನಿರ್ವಾಹಕ ಮಂಡಳಿಯು ಪ್ರಭಾರಿ ರಿಜಿಸ್ಟ್ರಾರ್ ಅವರಿಗೆ 50,000 ರೂ.ವರೆಗೆ ಮಾತ್ರ ಖರ್ಚು ಮಾಡಲು ಅಧಿಕಾರ ನೀಡಿದೆ. ಆದರೆ ರಿಜಿಸ್ಟ್ರಾರ್ 4 ಲಕ್ಷ ರೂವರೆಗೆ ಹಣವನ್ನು ಖರ್ಚು ಮಾಡುವ ಮೂಲಕ ನಿಯಮ ಮುರಿದಿದ್ದಾರೆ’ ಎಂದು ಶೌಕತ್ ಆರೋಪಿಸಿದ್ದಾರೆ.

ಪ್ರೊ.ಅಳಗವಾಡಿ ಮತ್ತು ಪ್ರೊ.ಡೋಣೂರ್ ಉಸ್ತುವಾರಿ ಉಪಕುಲಪತಿ ಮತ್ತು ಉಸ್ತುವಾರಿ ರಿಜಿಸ್ಟ್ರಾರ್ ಆಗಿದ್ದು, ತಮ್ಮ ಸ್ಥಾನಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ಅಧ್ಯಾಪಕರೊಬ್ಬರು ನಾನುಗೌರಿ.ಕಾಂ ಗೆ ತಿಳಿಸಿದರು. ಅಹಿಂದ ವರ್ಗದ ನೌಕರರಿಗೆ ಕಿರುಕುಳ ನೀಡುವ ಮತ್ತು ಅಲ್ಪಸಂಖ್ಯಾತ ನೌಕರರನ್ನು ದ್ವೇಷ ಮಾಡುವ ಕೆಲಸದಲ್ಲಿ ವಿ.ಸಿ ಮತ್ತು ರಿಜಿಸ್ಟ್ರಾರ್ ನಿರತರಾಗಿದ್ದಾರೆ ಎಂದು ಅವರು ತಿಳಿಸಿದರು.

‘ಟೆಂಡರ್‌ಗಳನ್ನು ಕರೆಯದೇ 5 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಖರೀದಿಸುವ ಮೂಲಕ ಖರೀದಿ ಪ್ರಕ್ರಿಯೆಗಳನ್ನು ಉಲ್ಲಂಘಿಸಿದ್ದಾರೆ’ ಎಂದು ಡಿಎಸ್‌ಎಸ್ ಮತ್ತು ಅಹಿಂದ ಫೋರಂ ಕಾರ್ಯಕರ್ತರು ಆರೋಪಿಸಿದ್ದಾರೆ.

ಶಿವಾನಂದಂ ಮುಂದುವರಿಕೆ ಏಕೆ?

ಮೂರನೆಯ ಪ್ರಮುಖ ಆರೋಪವೆಂದರೆ, ವಿ.ಸಿ ಮತ್ತು ರಿಜಿಸ್ಟ್ರಾರ್ ಅವರು ವಿಶ್ವವಿದ್ಯಾನಿಲಯದಲ್ಲಿ ಹಣಕಾಸು ಅಧಿಕಾರಿಯಾಗಿ ಡೆಪ್ಯುಟೇಷನ್‌ನಲ್ಲಿದ್ದ ಶಿವಾನಂದಂ ಅವರನ್ನು ಡೆಪ್ಯುಟೇಷನ್ ಅವಧಿ ಮುಗಿದ ನಂತರವೂ ಮುಂದುವರೆಸಿದ್ದಾರೆ. ‘ಹೈದರಾಬಾದ್ ವಿವಿಯಿಂದ ಶಿವಾನಂದಂ ಇಲ್ಲಿಗೆ ಡೆಪ್ಯೂಟ್ ಆಗಿದ್ದಾರೆ. ಅವರ ಡೆಪ್ಯುಟೇಷನ್ ಅವಧಿ ಮುಗಿದರೂ ಕೂಡ ಅವರನ್ನು ಇಲ್ಲಿ ಉಳಿಸಿಕೊಂಡಿರುವುದು ನಿಯಮಬಾಹಿರ. ಅವರು ಪ್ರಭಾರಿ ವಿ.ಸಿ ಮತ್ತು ಪ್ರಭಾರಿ ರಿಜಿಸ್ಟ್ರಾರ್ ಅವರ ಜೊತೆ ಅಕ್ರಮಗಳಲ್ಲಿ ಹೊಂದಾಣಿಕೆಯಾಗಿದ್ದೆ ಇದಕ್ಕೆ ಕಾರಣ. ಸದ್ಯ ಶಿವಾನಂದಂ ಹೈದರಾಬಾದ್ ವಿವಿಯ ತಮ್ಮ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಹೀಗಾಗಿ, ಅಲ್ಲಿಯ ಉದ್ಯೋಗಿಯೇ ಅಲ್ಲದ ಅವರು ಇಲ್ಲಿ ಡೆಪ್ಯುಟೇಷನ್ ಮೇಲೆ ಕೆಲಸ ಮಾಡುವುದೇ ನಿಯಮಬಾಹಿರ’ ಎಂದು ಶೌಕತ್ ಅಲಿ ಆಲೂರು ವಿವರಿಸಿದರು.

“ಪ್ರೊ. ಅಳಗವಾಡಿ ಮತ್ತು ಪ್ರೊ. ಡೋಣೂರ್ ಪೂರ್ಣಪ್ರಮಾಣದ ಉಪಕುಲಪತಿ ಮತ್ತು ರಿಜಿಸ್ಟ್ರಾರ್ ಅಲ್ಲ. ಅವರು ಪ್ರಮುಖ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಇಬ್ಬರೂ ದೈನಂದಿನ ವಿಷಯಗಳಲ್ಲಿ ಮಾತ್ರ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ, ಅವರು ನೇಮಕಾತಿಗಳು ಮತ್ತು ಹಣಕಾಸಿನ ವಿಷಯಗಳಂತಹ ಪ್ರಮುಖ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ನಮ್ಮ ಪತ್ರಕ್ಕೆ ಕೇಂದ್ರ ವಿಶ್ವವಿದ್ಯಾಲಯದ ಸಂದರ್ಶಕರಾಗಿರುವ ರಾಷ್ಟ್ರಪತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಭಾವಿಸಿದ್ದೇವೆ. ಪ್ರಭಾರಿ ಉಪಕುಲಪತಿ ಮತ್ತು ಪ್ರಭಾರಿ ರಿಜಿಸ್ಟ್ರಾರ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ನಾವು ದೊಡ್ಡ ಹೋರಾಟ ನಡೆಸಲಿದ್ದೇವೆ” ಎಂದು ಶೌಕತ್ ಆಲೂರು ನಾನುಗೌರಿ.ಕಾಂಗೆ ತಿಳಿಸಿದರು.

ಸಿಬ್ದಂದಿ ಮೇಲೆ ಸರ್ವಾಧಿಕಾರ!

ಕೆಲವು ದಿನಗಳ ಹಿಂದೆ, ಶಿವಾನಂದಂ ಅವರ ಡೆಪ್ಯುಟೇಶನ್ ಅವಧಿ ಮುಗಿದ ನಂತರವೂ ವಿಶ್ವವಿದ್ಯಾಲಯದಲ್ಲಿ ಹಣಕಾಸು ಅಧಿಕಾರಿಯಾಗಿ ಮುಂದುವರಿಸುವ ಕಾನೂನು ಬದ್ಧತೆಯನ್ನು ವಿಶ್ವವಿದ್ಯಾಲಯದ ಸಿಬ್ಬಂದಿ ಪ್ರಶ್ನಿಸಿದ್ದಾರೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ 26 ಸದಸ್ಯರು ಇತ್ತೀಚೆಗೆ ಈ ನಿರ್ಧಾರವನ್ನು ಆಕ್ಷೇಪಿಸಿ ಪ್ರಭಾರಿ ಉಪಕುಲಪತಿ ಅಳಗವಾಡಿಯವರಿಗೆ ಪತ್ರ ಬರೆದಿದ್ದಾರೆ. ಆದರೆ, ಅಳಗವಾಡಿಯವರು ಹೀಗೆ ಆಕ್ಷೇಪ ಸಲ್ಲಿಸಿದ 26 ನೌಕರರ ಪೈಕಿ 12 ಜನರಿಗೆ ಶೋ-ಕಾಸ್ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಿರುವ ಗೋರಖ್‌ಪುರ ವಿಶ್ವವಿದ್ಯಾಲಯದ ಉಪಕುಲಪತಿ ರಾಜೇಶ್ ಸಿಂಗ್ ಗುರುವಾರ ಪ್ರಭಾರಿ ರಿಜಿಸ್ಟ್ರಾರ್‌ಗೆ ಬರೆದ ಪತ್ರದಲ್ಲಿ ಇದೇ ರೀತಿಯ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಡೆಯಬೇಕಿದ್ದ 54 ನೇ ಕಾರ್ಯಕಾರಿ ಮಂಡಳಿ ಸಭೆಯನ್ನು ಮುಂದೂಡಲು ಅವರು ಪ್ರಭಾರಿ ರಿಜಿಸ್ಟ್ರಾರ್ ಅವರಿಗೆ ರಾಜೇಶ್ ಸಿಂಗ್ ಸೂಚಿಸಿದರು. ಆ ಸಭೆಯಲ್ಲಿ ಶಿವಾನಂದಂ ಅವರನ್ನು ಹಣಕಾಸು ಅಧಿಕಾರಿಯಾಗಿ ಮುಂದುವರೆಸುವ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳಬೇಕಾಗಿತ್ತು. ಅಂತಹ ಮಹತ್ವದ ವಿಷಯವನ್ನು ಸಾಮಾನ್ಯ ಉಪಕುಲಪತಿ ಮತ್ತು ಸಾಮಾನ್ಯ ರಿಜಿಸ್ಟ್ರಾರ್ ಮಾತ್ರ ಚರ್ಚಿಸಬಹುದಾಗಿದೆ, ತಾತ್ಕಾಲಿಕ ಆಧಾರದ ಮೇಲೆ ಸ್ಥಾನಗಳನ್ನು ಅಲಂಕರಿಸಿದ ಪ್ರಭಾರಿಗಳಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದರು.
ಆದರೆ, ಕಾರ್ಯಕಾರಿ ಮಂಡಳಿ ಸಭೆ ಶುಕ್ರವಾರ ನಡೆಯಿತು. ಸಭೆಯಲ್ಲಿನ ಚರ್ಚೆಗಳ ವಿವರಗಳನ್ನು ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪ್ರಭಾರಿ ರಿಜಿಸ್ಟ್ರಾರ್ ಡೋಣೂರ್ ಹೇಳಿದ್ದಾರೆ. “ಸಭೆಯಲ್ಲಿ ಹಾಜರಿರುವ ಎಲ್ಲ ಸದಸ್ಯರ ಅನುಮೋದನೆಯ ನಂತರವೇ ಮಿನಟ್‌ಗಳನ್ನು ಅಂತಿಮಗೊಳಿಸಲಾಗುತ್ತದೆ ಮತ್ತು ಇದು ಸಮಯ ತೆಗೆದುಕೊಳ್ಳುತ್ತದೆ. ಅಂತಹ ವಿವರಗಳನ್ನು ಅದಕ್ಕೂ ಮೊದಲು ಬಹಿರಂಗಪಡಿಸಲಾಗುವುದಿಲ್ಲ” ಎಂದು ಡೋಣೂರ್ ತಿಳಿಸಿದ್ದಾರೆ.

ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿರುವ ಪ್ರೊ. ಡೋಣೂರ್, ‘ಆರೋಪಗಳು ಆಧಾರರಹಿತ’ ಎಂದು ಹೇಳಿದ್ದಾರೆ. ಶಿವಾನಂದಂ ಅವರ ಮುಂದುವರಿಕೆಯ ಕಾನೂನುಬದ್ಧತೆಯನ್ನು ಪ್ರಶ್ನಿಸಿದ ನೌಕರರಿಗೆ ಅವರು ನೀಡಿದ ನೋಟಿಸ್‌ಗಳನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

* ಪಿ.ಕೆ. ಮಲ್ಲನಗೌಡರ್


ಇದನ್ನೂ ಓದಿ: ಕಲಬುರಗಿ ಕೇಂದ್ರೀಯ ವಿವಿ ನೇಮಕಾತಿ ಹಗರಣ: ನಾನುಗೌರಿ, ದಿ ಹಿಂದೂ ವರದಿ ಆಧರಿಸಿ ತನಿಖೆಗೆ ಒತ್ತಾಯಿಸಿ ಪತ್ರ ಬರೆದ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈ ಭಾಗದ ಅತ್ಯಂತ ಗುಣಮಟ್ಟದ ಶಿಕ್ಷಣ ನೀಡುವ ಪ್ರಮುಖ ವಿಶ್ವವಿದ್ಯಾಲಯವಾಗಿರುವ ಇಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯವನ್ನು ಈ ರೀತಿ ಹಾಳುಗೆಡವುತ್ತಿರುವ ಇಂತಹ ನೀಚರಿಗೆ ಶಿಕ್ಷೆ ಆಗಲೇಬೇಕು.

LEAVE A REPLY

Please enter your comment!
Please enter your name here

- Advertisment -

Must Read

ಗಾಳಿಪಟ-2: ಯೋಗರಾಜ ಭಟ್ರ ಲಾಜಿಕ್‌ಗಳನ್ನು ‘ದೇವ್ಲೆ’ ಬಲ್ಲ!

ನೀವು ಬರಹಗಾರರಾಗಿದ್ದೀರಾ? ಹೌದಾದರೆ, ನೀವು ಆರಂಭಿಕ ದಿನಗಳಲ್ಲಿ ಬರೆದ ಒಂದು ಬರಹವನ್ನು ಮತ್ತೆ ಓದಿ ನೋಡಿ. ಎಷ್ಟೊಂದು ಪೇವಲವಾಗಿ ಬರೆದಿದ್ದೇನಲ್ಲ ಅಂತ ನಿಮಗೆಯೇ ಅನಿಸಲೂಬಹುದು. ಕಾಲ ಉರುಳಿದಂತೆ, ನಮ್ಮ ಅನುಭವಗಳು ದಟ್ಟವಾದಂತೆ ಬರವಣಿಗೆಯೂ...