Homeಕರ್ನಾಟಕದೊರೆ ವ್ಯಾಪಾರಿಯಾದರೆ ಪ್ರಜೆಗಳು ಭಿಕಾರಿಯಾಗುತ್ತಾರೆ ಎಂದ ವಿಶಿಷ್ಟ ವ್ಯಕ್ತಿ ಪೊನ್ನಮ್ಮಾಳ್

ದೊರೆ ವ್ಯಾಪಾರಿಯಾದರೆ ಪ್ರಜೆಗಳು ಭಿಕಾರಿಯಾಗುತ್ತಾರೆ ಎಂದ ವಿಶಿಷ್ಟ ವ್ಯಕ್ತಿ ಪೊನ್ನಮ್ಮಾಳ್

- Advertisement -
- Advertisement -

ಹಣಕ್ಕಿರುವ ‘ಖರೀದಿ ಗುಣ’ ವಿಪರೀತವಾಗಿರುವ ಕಾಲವಿದು. ಎಲ್ಲವನ್ನೂ ಖರೀದಿಸುವ ತೆವಲು ರಾಜಕಾರಣವನ್ನು ಬಹುಕೋಟಿ ಹೂಡಿಕೆಯ ವ್ಯವಹಾರವಾಗಿಸಿದೆ. ಜನಸಾಮಾನ್ಯರು ಹಣದ ಹರಿವಿನ ರಭಸಕ್ಕೆ ತತ್ತರಿಸಿದ್ದಾರೆ. ಅಲ್ಲಿಯ ಏರುಪೇರುಗಳನ್ನು ಮನರಂಜನೆಯೆಂಬ ಸಿನಿಕತನದಲ್ಲಿ ನೋಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಕರ್ನಾಟಕದ ರಾಜಕಾರಣ ನಡೆದುಬಂದ ಬಗೆಯನ್ನು, ಅದರಲ್ಲಿ ಬೆರೆತ ಮಹಿಳಾ ಸಂವೇದನೆಯ ಎಳೆಗಳನ್ನು ಕಾಣಬೇಕೆನಿಸಿತು. ಈಗ, ನಾಗರಿಕ ಬದುಕಿನ ಬೇರೆ ಬೇರೆ ಕ್ಷೇತ್ರಗಳಲ್ಲಿಯಂತೆ ರಾಜಕಾರಣದಲ್ಲಿಯೂ ಮಹಿಳೆ ಪಿತೃತ್ವದ ಸ್ಥಾಪಿತ ಮಾದರಿಯಲ್ಲಿ ಸೇರಿಹೋಗಿದ್ದಾಳೆ. ಪ್ರತ್ಯೇಕ ಚಹರೆ ಇಲ್ಲದಂತೆ.

ಜಗತ್ತಿನ ಎಲ್ಲ ಚಳುವಳಿಗಳಂತೆ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿಯೂ ಮಹಿಳಾ ಪಾಲುದಾರಿಕೆ ಗಣನೀಯವಾಗಿತ್ತು. ಸ್ವಾತಂತ್ರ್ಯಾನಂತರದ ಭಾರತದ ಅಧಿಕಾರ ರಾಜಕಾರಣ ಮಹಿಳೆಯರ ಯೋಗ್ಯತೆಯನ್ನು ನಿರ್ಲಕ್ಷಿಸಿತು. 1952 ರ ಪಾರ್ಲಿಮೆಂಟರಿ ಚುನಾವಣೆಯಲ್ಲಿ ಚುನಾಯಿತರಾದವರು ಕೇವಲ ನಾಲ್ವರು ಮಾತ್ರ. ಈ ಅನುಪಾತದಲ್ಲೀಗ ಏರಿಕೆಯಾಗಿದೆ. ಆದರೆ ಏರಿಕೆ ದಾಖಲಾರ್ಹವಾಗೇನೂ ಇಲ್ಲ. ಕರ್ನಾಟಕದ ಮಟ್ಟಿಗೆ ಮಹಿಳಾ ರಾಜಕಾರಣದ ಮಹತ್ವದ ಹೆಸರು ಪೊನ್ನಮ್ಮಾಳ್. ಗಾಂಧೀ ಚಿಂತನೆಯನ್ನು ಬದುಕಿನ ಆದರ್ಶವಾಗಿಸಿಕೊಂಡು, ಸಮಾಜವಾದಿ ಚಿಂತನೆಯನ್ನು ವಿಚಾರಶಕ್ತಿಯಾಗಿಸಿಕೊಂಡು, ಜನಪರ ಕಾರ್ಯಗಳಲ್ಲಿ ಪಕ್ಕಾ ಎಡಪಂಥೀಯ ಕಾರ್ಯಕರ್ತೆಯಾಗಿದ್ದರು ಪೊನ್ನಮ್ಮಾಳ್. 1923 ರಲ್ಲಿ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಜನಿಸಿದ್ದರು. ಇವರ ತಂದೆ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರೀಯರಾಗಿದ್ದರು. ಇವರು 1928ರಿಂದಲೇ ಶಿವಮೊಗ್ಗೆಯಲ್ಲಿ ಭಾರತ ಸೇವಾದಳವನ್ನು ಸ್ಥಾಪಿಸಿದ್ದರು. ಕೌಟುಂಬಿಕ ಪರಿಸರ, ಸೇವಾದಳದ ತರಬೇತಿ ಅವರನ್ನು ಸಾರ್ವಜನಿಕ ಬದುಕಿಗೆ ತಂದಿತ್ತು. ಎಳೆಯ ಮಗುವಾಗಿದ್ದಾಗಲೇ ಗಾಂಧೀಜಿಯ ತೊಡೆಯೇರಿ ಪಡೆದ ಮಾರ್ದವ ಮಮತೆಯನ್ನು ಮನಸ್ಸಿನಲ್ಲಿ ಸಂಚಿತವಾಗಿಟ್ಟುಕೊಂಡಿದ್ದರು. 1942ರ ಕ್ವಿಟ್ ಇಂಡಿಯಾ ಮೂವಮೆಂಟನಲ್ಲಿ ಪೊನ್ನಮ್ಮಾಳ್ ಬಿ.ಎಸ್.ಸಿ. ವಿದ್ಯಾರ್ಥಿನಿ. ವಿದ್ಯಾರ್ಥಿ ಚಳುವಳಿಯಲ್ಲಿದ್ದರು. ಗಾಂಧೀಜಿ ಬಂಧನವಾದ ನಂತರದ ಚಳುವಳಿಯಲ್ಲಿ ಪೂರ್ತಿ ತೊಡಗಿಸಿಕೊಂಡಿದ್ದರು. ಭೂಗತ ಹೋರಾಟಗಳನ್ನೂ ನಡೆಸಿದರು. ಅಂದಿನ ಬೆಂಗಳೂರಿನ ಬೀದಿ-ಬೀದಿಗಳನ್ನು ಚಳುವಳಿಯ ಕೆಲಸಗಳಿಗಾಗಿ ಸುತ್ತುತ್ತಿದ್ದರು. ಕಮಲಾದೇವಿ ಚಟ್ಟೋಪಾಧ್ಯಾಯರನ್ನು ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಇಟ್ಟಿದ್ದರು. ಪೊನ್ನಮ್ಮಾಳ ಪೋಲಿಸರ ಭಯ ನೀಗಿಕೊಂಡು ಕಮಲಾದೇವಿಯವರನ್ನು ಕದ್ದು ಭೇಟಿಯಾಗುತ್ತಿದ್ದರು. ಅವರ ಹೋರಾಟದ ವ್ಯಾಪ್ತಿ ವಿಸ್ತಾರವಾಗಿತ್ತು. ಆಗ್ರಾ, ಅಹಮದಾಬಾದ್, ಮುಂಬೈ, ದೆಹಲಿಗಳನ್ನು ಸುತ್ತಿದ್ದರು. ಬಾಪೂಜಿಯ ಹತ್ಯೆಯಾದಾಗ, ತಾಯಿಯ ಅನಾರೋಗ್ಯದ ಕಾರಣದಿಂದ ಆಶ್ರಮದಿಂದ ಶಿವಮೊಗ್ಗೆಗೆ ಬಂದು ದಣೀ 2 ತಿಂಗಳಾಗಿತ್ತು. ಪೊನ್ನಮ್ಮಾಳ್ ಕುದ್ದು ಹೋಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದೆಯೂ ಪಿಂಚಣಿ ಪಡೆದ ಜನರಿದ್ದ ಕಾಲದಲ್ಲಿ; ಚಳುವಳಿಯ ಕಾರಣದಿಂದ ಜೈಲುವಾಸ ಅನುಭವಿಸಿಯೂ ಸರ್ಕಾರದ ಪಿಂಚಣಿ ಪಡೆಯಲು ಮನಸ್ಸು ಮಾಡದ ಅಪ್ಪಟ ಗಾಂಧೀವಾದಿಯಾಗಿದ್ದರು. ಅವರು ಉಡುತ್ತಿದ್ದ ಬಿಳಿಯ ಖಾದಿಯಂತೆ ಅವರ ಮನಸ್ಸಿತ್ತು.

ಗಾಂಧೀಹತ್ಯೆಯ ನಂತರದ ಭಾರತ ಅವರನ್ನು ಸಮಾಜವಾದಿ ಚಿಂತನೆಗೆ ಆಕರ್ಷಿಸಿತ್ತು. ಲೋಹಿಯಾ ವಿಚಾರಧಾರೆಯ ಪ್ರಭಾವಕ್ಕೆ ಒಳಗಾದರು. ಪೊನ್ನಮ್ಮಾಳ ಅವರ ರಾಜಕೀಯ ಚಿಂತನೆ ಮತ್ತು ಕಾರ್ಯತತ್ಪರತೆಯನ್ನು ಗಾಂಧೀವಾದ, ಲೋಹಿಯಾವಾದ ಮತ್ತು ಎಡ ಚಿಂತನೆಗಳು ಬೆರೆತು ಎರಕಗೊಂಡು ರೂಪಿಸಿದವು. ಹೆಣ್ಣುಮಕ್ಕಳು ಸಾಮಾಜಿಕವಾಗಿ ಅಷ್ಟಾಗಿ ಕಾಣಿಸಿಕೊಳ್ಳದಿದ್ದ ಕಾಲದಲ್ಲಿ ಪೊನ್ನಮ್ಮಾಳರ ಧೈರ್ಯದ ಓಡಾಟವನ್ನು ಜನ ಪಟಾಕಿ, ಬಜಾರಿ ಎಂದೆಲ್ಲ ಕರೆಯುತ್ತಿದ್ದರಂತೆ. ಆದರೆ ಪೊನ್ನಮ್ಮಾಳ್ ಇಂತಹ ಹಾಸ್ಯಗಳಿಗೆಲ್ಲ ಕಂಗಾಲಾಗಲಿಲ್ಲ. ಅವರು ವೃದ್ಧಾಪ್ಯದಲ್ಲೂ ನೆನೆಯುತ್ತಿದ್ದುದು ಸ್ವತಃ ಚಳುವಳಿಯಲ್ಲಿ ತೊಡಗಿಸಿಕೊಳ್ಳಲಾಗದ ಬಡವರು, ಬೀದಿ ಬದಿ ವ್ಯಾಪಾರಿಗಳು ಕೈಯೆತ್ತಿ ಕೊಡುತ್ತಿದ್ದ ಚಿಲ್ಲರೆ ಕಾಸು- ಚಳುವಳಿಯನ್ನು ಬೆಚ್ಚಗೆ ಪೊರೆಯುತ್ತಿತ್ತು ಎನ್ನುವುದನ್ನು.

ಪೊನ್ನಮ್ಮಾಳ್ ಎಂದೂ ಅಧಿಕಾರದ ಲಾಲಸೆಯನ್ನು ಹಚ್ಚಿಸಿಕೊಳ್ಳಲಿಲ್ಲ. ತಾವು ತುಂಬ ಗೌರವಿಸುತ್ತಿದ್ದ ಡಾಕ್ಟರ್ (ರಾಮಮನೋಹರ ಲೋಹಿಯಾ) ಅವರನ್ನೂ ವಿಮರ್ಶಿಸುವಷ್ಟು ಗಟ್ಟಿತನ ಅವರದ್ದು. ಹಾಗಾಗಿಯೇ ಹೈದ್ರಾಬಾದ್‍ನಲ್ಲಿ ನಡೆದ ಸೋಶಿಯಲಿಸ್ಟ ಕಾನ್‍ಫರೆನ್ಸಿನಲ್ಲಿ ಸಮಾಜವಾದಿಗಳು ಲೋಹಿಯಾ ಅವರನ್ನು ಅಧ್ಯಕ್ಷರನ್ನಾಗಿ ಮಾಡುವಾಗ, ಪೊನ್ನಮ್ಮಾಳ್ ವಿರೋಧಿಸುತ್ತಾರೆ. ಅಧ್ಯಕ್ಷತೆಯ ಭಾರ ಸ್ವತಂತ್ರ ಕೆಲಸಗಳಿಗೆ ತಡೆಯಾದೀತೆಂಬ ಅಭಿಪ್ರಾಯ ಅವರದಾಗಿತ್ತು. ಇಂತಹ ಭಿನ್ನಮತಗಳು ರಾಜಕೀಯ ಬದುಕನ್ನು-ಸಂಬಂಧವನ್ನು ಶುದ್ಧೀಕರಿಸುತ್ತವೆಂಬ ಅಭಿಪ್ರಾಯ ಅವರದಾಗಿತ್ತು. ಶಿವಮೊಗ್ಗೆಯಲ್ಲಿ ನಡೆದ ಕಾಗೋಡು ಸತ್ಯಾಗ್ರಹದಿಂದ ತುಂಗಾಮೂಲ ಉಳಿಸಿ ಚಳುವಳಿಯವರೆಗೂ ಯಾವುದನ್ನೂ ಪೊನ್ನಮ್ಮಾಳರ ಹೆಸರಿಲ್ಲದೆ ಬರೆಯಲು ಸಾಧ್ಯವಿಲ್ಲ.

ಶಾಂತವೇರಿ ಗೋಪಾಲಗೌಡರು, ಶಂಕರನಾರಾಯಣ ಭಟ್ಟರು, ಕಾಗೋಡು ತಿಮ್ಮಪ್ಪ, ಜೆ.ಎಚ್. ಪಟೇಲ್, ಎಂ.ಪಿ. ಪ್ರಕಾಶ, ಸದಾಶಿವರಾಯರು, ಬಂಗಾರಪ್ಪ ಹೀಗೆ ಅಂದಿನ ಸಮಾಜವಾದಿಗಳೊಂದಿಗೆ ಆತ್ಮೀಯ ಒಡನಾಟ. ತಮ್ಮ ಸಂಗಾತಿ ಗಂಡಸರ ಕುಡಿತದ ಚಟವನ್ನೂ ಎದುರಾಎದುರೇ ಬಯ್ದುಬಿಡುವ ಗುಣ ಇವರದಾಗಿತ್ತಂತೆ. ಎಲ್ಲರನ್ನೂ ತೀಕ್ಷ್ಣವಾಗಿ ಹಂಗಿಸಿಯೂ ಯಾರ ಹಂಗಿಗೂ ಒಳಗಾಗದ ಅಪರೂಪದ ವ್ಯಕ್ತಿಯಾಗಿದ್ದರು. ರಾಜಕೀಯ ಅಧಿಕಾರವನ್ನು ನಿರಂತರ ಅನುಮಾನದಿಂದ ಪರೀಕ್ಷಿಸುತ್ತಿದ್ದರು. ಶಾಂತವೇರಿ ಗೋಪಾಲಗೌಡರು ಒಮ್ಮೆ ಪೊನ್ನಮ್ಮಾಳರನ್ನೇ ಚುನಾವಣೆಗೆ ನಿಲ್ಲಿಸಬೇಕೆಂದು ಪ್ರಸ್ತಾಪಿಸಿದಾಗ “ಕಂಡವರ ಹಣದಿಂದ ಮಾಡುವ ಚುನಾವಣೆ ನನಗೆ ಬೇಡ” ಎಂದುಬಿಟ್ಟಿದ್ದರಂತೆ.

ಜೆ.ಎಚ್. ಪಟೇಲರು ಮುಖ್ಯಮಂತ್ರಿಗಳಾಗಿ ಅಧಿಕಾರಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಬಂದ ಸ್ನೇಹಿತರಿಗೆ, ‘ಏನು, ಸಮಾಜವಾದಿಗಳ ಪಟ್ಟಾಭಿಷೇಕ ಪೂರೈಸಿಕೊಂಡು ಬಂದಿರಾ?’ ಎಂದು ವ್ಯಂಗ್ಯವಾಗಿ ಕೇಳಿದ್ದರಂತೆ ಪೊನ್ನಮ್ಮಾಳ್. ವಿಶ್ವಸುಂದರಿ ಸ್ಪರ್ಧೆಯನ್ನು ಬೆಂಗಳೂರಿನಲ್ಲಿ ಆಯೋಜಿಸಿದ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪೊನ್ನಮ್ಮಾಳ್ ಭಾಗವಹಿಸಿದ್ದರು. ಜೆ.ಎಚ್. ಪಟೇಲರು ಮುಖ್ಯಮಂತ್ರಿಗಳಾಗಿದ್ದಾರೆ ಎಂಬ ಮುಲಾಜೇನೂ ಅವರಿಟ್ಟುಕೊಳ್ಳಲಿಲ್ಲ. ಒಮ್ಮೆ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಸ್ಲಂ ಏರಿಯಾ ಜನರಿಗಾಗಿ ಒಂದು ಮನವಿಪತ್ರ ಹಿಡಿದು ಪೊನ್ನಮ್ಮಾಳ್ ವಿಧಾನಸಭೆಯ ಮೆಟ್ಟಿಲು ಹತ್ತಿದ್ದರು. ದೂರದಿಂದ ಪೊನ್ನಮ್ಮಾಳರನ್ನು ಕಂಡ ಬಂಗಾರಪ್ಪನವರು, ಮುಖ್ಯಮಂತ್ರಿತನದ ಸಂಪ್ರದಾಯವನ್ನು ಮೀರಿ ಸ್ವತಃ ಬಂದರಂತೆ. ‘ಬನ್ನಿ, ಬನ್ನಿ ಏನಾಗಬೇಕು?’ ಎಂದರೆ- ‘ನನಗೇನೂ ಆಗಬೇಕಿಲ್ಲ ಈ ಜನರಿಗೆ…’ ಎಂದರಂತೆ. “ನನ್ನ ಜನಕ್ಕೆ ಅಗತ್ಯ ಬಿದ್ದರೆ ನಾನು ಮತ್ತೆ ಬರುವವಳೇ” ಎಂದು ನಗುತ್ತ ಮರಳಿದ್ದರಂತೆ.

ಹಡಗಲಿಯ ರಂಗಭಾರತಿ ಟ್ರಸ್ಟನ ಎಂ.ಪಿ. ಪ್ರಕಾಶ ಅವರು ತಮ್ಮ ತಂದೆಯ ಹೆಸರಿನಲ್ಲಿ ಕೊಡುತ್ತಿದ್ದ ಪ್ರಶಸ್ತಿಗೆ ಪೊನ್ನಮ್ಮಾಳರನ್ನು ಒಪ್ಪಿಸುವುದು ಹರಸಾಹಸವೇ ಆಗಿಬಿಟ್ಟಿತ್ತಂತೆ. ಆಗ ಗೃಹಮಂತ್ರಿಯಾಗಿದ್ದ ಎಂ.ಪಿ. ಪ್ರಕಾಶ ಅವರು ಪೊನ್ನಮ್ಮಾಳರ ಕಾಲಿಗೆ ನಮಸ್ಕರಿಸಿದ್ದಕ್ಕೆ ಆ ದಿನ ಸಾಕ್ಷಿಯಾಗಿತ್ತು. ಅಧಿಕಾರ ಲೋಭಕ್ಕಿಳಿಯದ ರಾಜಕೀಯ ದೃಢ ವ್ಯಕ್ತಿತ್ವ ಪೊನ್ನಮ್ಮಾಳರದು. ಸರ್ವಾಧಿಕಾರಿ ಕೂಡ ಜನರ ಮನಸ್ಸಿನ ಇಂಗಿತವನ್ನು ಗಮನಿಸುತ್ತಾನೆ. ಪ್ರಜಾಪ್ರಭುತ್ವದ ಗೆಲುವು ಜನರ ವಿಚಾರಶೀಲ ನಡೆಯಲ್ಲಿದೆ- ಎನ್ನುವುದನ್ನು ನಂಬಿದ್ದರು ಪೊನ್ನಮ್ಮಾಳ್.

ಪೊನ್ನಮ್ಮಾಳ್ ಈ ನೆಲದ ಬದುಕಿಗೆ ತಮ್ಮ ಶ್ರಮ ಸಾಧನೆಯ ರಂಗೋಲಿ ಬಿಡಿಸಿದರು. ತಳಮಟ್ಟದ ಕಾರ್ಯಕರ್ತೆಯಾಗಿ ನಿರಂತರ ದುಡಿದರು. ಜಿಲ್ಲೆಯಾದ್ಯಂತ ಮಹಿಳಾಸಂಘ, ಶಿಶುವಿಹಾರ, ಪುರಸಭೆ, ನೌಕರ ಸಂಘ, ಕ್ರೀಡಾ ಸಂಸ್ಥೆಗಳು, ಸಕ್ಕರೆ ಕಾರ್ಖಾನೆಗಳಂತಹ ಸಂಘಟನಾತ್ಮಕ ಕೆಲಸಗಳಲ್ಲಿ; ಬಾಲಭವನ, ಮಕ್ಕಳ ಪುಸ್ತಕ ಭಂಡಾರ, ರಿಮ್ಯಾಂಡ ಹೋಂ ಇಂತಹ ನೂರೆಂಟು ಕಾರ್ಯಕ್ರಮಗಳಲ್ಲಿ ಪೊನ್ನಮ್ಮಾಳ್ ತಮ್ಮ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಂಡಿದ್ದರು. ಕರ್ನಾಟಕ ಏಕೀಕರಣ ಚಳುವಳಿ, ಭೂ ದಾನ ಚಳುವಳಿ, ಸಮಾಜವಾದಿ ಹೋರಾಟ, ಗಣಿಗಾರಿಕೆ ವಿರೋಧಿ ಹೋರಾಟ, ತುಂಗಭದ್ರೆ ಹೋರಾಟ… ಇಂತಹ ನೂರಾರು ಹೋರಾಟಗಳ ಭಾಗವಾಗಿದ್ದರು.

87 ವರ್ಷಗಳ ಬಾಳಿನಲ್ಲಿ ನಿಸ್ವಾರ್ಥರಾಗಿದ್ದ ಪೊನ್ನಮ್ಮಾಳ್ ನೆನಪು ಮ್ಯಾಕ್ಸಿಂಗಾರ್ಕಿಯ ತಾಯಿಯ ಪಾತ್ರವನ್ನು ನೆನಪಿಸುವಂಥದ್ದು. ಸ್ವಲ್ಪ ಮನಸ್ಸು ಮಾಡಿದ್ದರೂ ರಾಜಕೀಯ ಅಧಿಕಾರವನ್ನು ಪಡೆಯಬಹುದಿತ್ತು. ಆದರೆ ಹಾಗೆ ಅಧಿಕಾರ ಪಡೆದವರು ‘ಅರ್ಧರ್ಧ ಶಿವಮೊಗ್ಗೆಯನ್ನೇ ಖರೀದಿಸಿ’ ಭ್ರಷ್ಟರಾಗಿದ್ದನ್ನು ನಿಷ್ಠುರ ವಿಷಾದದಿಂದ ನೋಡಿದ್ದರು. ಕಡೆಯ ದಿನಗಳಲ್ಲಿ ಗಾಂಧೀಜಿಯ ಅಹಿಂಸೆಯನ್ನು ನಕ್ಸಲ ಹಿಂಸೆಯನ್ನು ತಾತ್ವಿಕವಾಗಿ ಒರೆಹಚ್ಚುತ್ತಿದ್ದರು. “ಪಾರ್ವತಿ ಬಹು ಒಳ್ಳೆಯ ಹುಡುಗಿ ಹಾಗಿದ್ದರೆ ನಕ್ಸಲರೂ ಒಳ್ಳೆಯವರಿದ್ದಿರಬಹುದು” ಎನ್ನುತ್ತಿದ್ದರು. “ದೊರೆ ವ್ಯಾಪಾರಿಯಾದರೆ ಪ್ರಜೆಗಳು ಭಿಕಾರಿಗಳಾಗುತ್ತಾರೆ” ಎಂಬ ಎಚ್ಚರದ ಪೊನ್ನಮ್ಮಾಳರನ್ನು ಈ ಕೆಟ್ಟಕಾಲದಲ್ಲಿ ನೆನೆಯಬೇಕು. ಸ್ವಾಭಿಮಾನ, ಆತ್ಮಗೌರವ, ಜನಹಿತ, ತಾತ್ವಿಕತೆ ಎಂಬ ಪದಗಳೆಲ್ಲ ಮೈಲಿಗೆಯಾಗುತ್ತಿರುವಾಗ ಪೊನ್ನಮ್ಮಾಳರಂಥವರ ಸ್ಮರಣೆಯ ಜಲದಿಂದ ಅದನ್ನು ಶುದ್ಧೀಕರಿಸಿಕೊಳ್ಳುವ ಅಗತ್ಯವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಪೊನ್ನಮ್ಮಾಳ್ ರವರ ಚಿತ್ರದ ಹಾಕುವ ಬದಲು ಬಂಗಾರಪ್ಪ ಚಿತ್ರ ಏಕೆ ಹಾಕಿದೆ ಇಲ್ಲಿ?

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...