Homeಬಹುಜನ ಭಾರತಬಹುಜನ ಭಾರತ; ಮಲ ಬಳಿಸುವ ಕ್ರೌರ್ಯಕ್ಕೆ ಕೊನೆಯೆಂದು?

ಬಹುಜನ ಭಾರತ; ಮಲ ಬಳಿಸುವ ಕ್ರೌರ್ಯಕ್ಕೆ ಕೊನೆಯೆಂದು?

- Advertisement -
- Advertisement -

’ವಿಶ್ವಗುರು’ವಿನ ಸ್ಥಾನಕ್ಕೆ ಏರಿರುವ ಭರತ ಖಂಡದಲ್ಲಿ ಮನುಷ್ಯರ ಮಲವನ್ನು ಬಳಿದು ಹೊತ್ತು ಸಾಗಿಸುವ ಮನುಷ್ಯರ ಸಂಖ್ಯೆ 58,098 ಎಂದು ಕೇಂದ್ರ ಸರ್ಕಾರ ಮೊನ್ನೆ ರಾಜ್ಯಸಭೆಯಲ್ಲಿ ಸಾರಿದೆ..

ಮಲ ಬಳಿವ ಮಾನವರು ಕೇವಲ 58 ಸಾವಿರವೇನು ಎಂದು ಸರ್ಕಾರ ಆತ್ಮನಿರೀಕ್ಷಣೆ ಮಾಡಿಕೊಳ್ಳಬೇಕಿದೆ. ಆದರೆ ಮಾನವ ಮಲ ಬಳಿಯುವ ’ದಲಿತ ದರಿದ್ರರ’ ಕಷ್ಟ ಕಣ್ಣೀರು ಸಂಕಟ ಅವಮಾನಗಳ ಅಂದಾಜು ಸರ್ಕಾರಗಳಿಗೂ ಇಲ್ಲ, ಸಮಾಜಕ್ಕೂ ಇಲ್ಲ. ಇವುಗಳ ಆತ್ಮಸಾಕ್ಷಿಯ ಅವಸಾನವಾಗಿ ಶತಮಾನಗಳೇ ಉರುಳಿಹೋಗಿವೆ! ಒಳಗೆ ಅಂತರಾತ್ಮವೇ ಇಲ್ಲದೆ ಹೋದಾಗ ಬರಿದೇ ಎದೆಯ ಮೇಲೆ ಕೈಯಿರಿಸಿಕೊಳ್ಳುವ ಬೂಟಾಟಿಕೆಯಿಂದ ಫಲವೇನು?

ಕಸವನ್ನೂ ಮಲವನ್ನೂ ಬಳಿಯುವವರ ಉದ್ಯೋಗಗಳಿಗೆ ನೂರಕ್ಕೆ ನೂರರಷ್ಟು ಮೀಸಲಾತಿ ಇದೆ. ಈ ಮೀಸಲಾತಿಯ ಫಲಾನುಭವಿಗಳು ದಲಿತರು. ಮೀಸಲಾತಿ ವಿರೋಧಿಗಳ್ಯಾರೂ ಈ ಮೀಸಲಾತಿಯನ್ನು ಪ್ರಶ್ನಿಸುವುದಿಲ್ಲ. ವರ್ಷಗಳ ಹಿಂದೆ ಅಹಮದಾಬಾದಿನ ಸ್ವಯಂಸೇವಾಸಂಸ್ಥೆಯೊಂದು ಸಫಾಯಿ ಕರ್ಮಚಾರಿಗಳ ನೇಮಕಕ್ಕೆ ಹೊರಡಿಸಿದ ಜಾಹೀರಾತು ಐತಿಹಾಸಿಕ ಕಟುಸತ್ಯಕ್ಕೆ ಕನ್ನಡಿ ಹಿಡಿದಿತ್ತು. ಬ್ರಾಹ್ಮಣ, ಕ್ಷತ್ರಿಯ, ಪಟೇಲ್, ಜೈನ, ವಣಿಯ, ಪಾರ್ಸಿ, ಸೈಯದ್, ಪಠಾಣ ಹಾಗೂ ಸಿರಿಯನ್ ಕ್ರೈಸ್ತ ಅಭ್ಯರ್ಥಿಗಳಿಗೆ ಆದ್ಯತೆ ನೀಡುವುದಾಗಿ ಹೇಳಿದ ಜಾಹೀರಾತಿಗೆ ಮೇಲ್ಜಾತಿಗಳಿಂದ ಭಾರೀ ಪ್ರತಿಭಟನೆ ವ್ಯಕ್ತವಾಯಿತು. ಜಾಹೀರಾತನ್ನು ವಾಪಸು ಪಡೆಯಬೇಕಾಯಿತು. ಮಲದ ಕೂಪದಲ್ಲಿ ಮುಳುಗೆದ್ದು ಏದುಸಿರು ಬಿಡುತ್ತಿರುವ ಪೀಳಿಗೆಗಳ ಬಿಡುಗಡೆಯ ಚಡಪಡಿಕೆಗೆ ಕುರುಡಾಗಿ, ಕಿವುಡಾಗಿ, ನಾಲಗೆ ಸತ್ತಂತೆ ನಟಿಸಿದ ಆರೋಪವನ್ನು ಸಂಸತ್ತು, ಸಮಾಜ, ನ್ಯಾಯಾಲಯಗಳು, ಸಮೂಹ ಮಾಧ್ಯಮಗಳು, ಕಡೆಗೆ ದಲಿತ ಆಂದೋಲನಗಳು ಸುಲಭವಾಗಿ ಕೊಡವಿಕೊಳ್ಳಲು ಬರುವುದಿಲ್ಲ.

ಮಲ ಬಳಿದು ಸಾಗಿಸುವ ಅಮಾನವೀಯ ಪದ್ಧತಿಯನ್ನು ಭಾರತದಲ್ಲಿ ನಿಷೇಧಿಸಿ 28 ವರ್ಷಗಳಾಯಿತು. ಆದರೂ ದೇಶದಲ್ಲಿ ಮಲ ಬಳಿದು ಸಾಗಿಸುವ ಮಾನವರು ಈಗಲೂ ಇದ್ದಾರೆ ಮತ್ತು ಅವರ ಸಂಖ್ಯೆ ಹತ್ತು ಲಕ್ಷಕ್ಕಿಂತ ಹೆಚ್ಚೇ ವಿನಾ ಸರ್ಕಾರ ಹೇಳುವಂತೆ ಕೇವಲ 58 ಸಾವಿರ ಅಲ್ಲ.

2011ರ ಜನಗಣತಿಯ ಹೊತ್ತಿಗೆಯನ್ನು ತೆರೆದರೆ ಸಾಕು. ಮನುಷ್ಯನ ಮಲವನ್ನು ಮತ್ತೊಬ್ಬ ಮನುಷ್ಯ ಕೈಯಾರೆ ಬಳಿದು ಹೊತ್ತು ಸಾಗಿಸುವ ಅಮಾನವೀಯತೆ ಗಹಗಹಿಸುತ್ತದೆ. ವಾಸ್ತವವನ್ನು ಮರೆಮಾಚಿ ತುಳಿದಿಟ್ಟು ತಿಪ್ಪೆ ಸಾರಿಸಿ ರಂಗೋಲೆ ಹಾಕುವ ಸರ್ಕಾರಿ ವರದಿಯಲ್ಲೇ ಈ ಪೀಡೆ ಕೇಕೆ ಹಾಕುತ್ತಿದೆ.. ಇನ್ನು ಬಚ್ಚಿಡಲಾಗದ ಸತ್ಯದ ವಾಸ್ತವ ರೂಪ ಎಷ್ಟು ಘೋರವಿದ್ದೀತು? ಒಣ ಪಾಯಿಖಾನೆಗಳಾಗಲೀ, ತೆರೆದ ಚರಂಡಿಗಳೇ ಇರಲಿ ಅವುಗಳು ತಮಗೆ ತಾವೇ ಸ್ವಚ್ಛ ಆಗುವುದಿಲ್ಲವಲ್ಲ? ಯಂತ್ರಗಳೂ ಇಲ್ಲದಿರುವಾಗ ಮನುಷ್ಯರು ತಾನೇ ಸ್ವಚ್ಛ ಮಾಡಬೇಕು? ಹಾಗಿದ್ದರೆ ಆ ಮನುಷ್ಯರನ್ನು ಮಾನವ ಮಲವನ್ನು ಬಳಿಯುವವರೆಂದು ಕರೆಯದೆ ಬೇರೆ ಯಾವ ಹೆಸರಿನಿಂದ ಕರೆಯಲು ಬಂದೀತು? ಸತ್ತ ದನಗಳು, ನಾಯಿಗಳನ್ನು ಎತ್ತಿ ಹಾಕುವವರಿದ್ದಾರಲ್ಲ ಅವರು ಯಾರು? ಅವರನ್ನು ಯಾವ ಲೆಕ್ಕಕ್ಕೆ ಸೇರಿಸಲಾಗಿದೆ ಮತ್ತು ಅವರನ್ನು ಯಾವ ಹೆಸರಿಟ್ಟು ಕರೆಯಲಾಗುತ್ತಿದೆಯೆಂದು ತಿಳಿಸುವ ಕೃಪೆ ಮಾಡಬೇಕು ಸರ್ಕಾರ. ಮಲ ಬಳಿವವರು ಎಷ್ಟು ಮಂದಿ ಎಂದು ಗುರುತಿಸದೆ ಹೋದರೆ ಅವರ ಮರುವಸತಿಗೆ ಕ್ರಮ ಕೈಗೊಳ್ಳುವುದೆಂತು?


ಮಲಬಳಿಯಲು ಮನುಷ್ಯರನ್ನು ನೇಮಕ ಮಾಡಿಕೊಳ್ಳುವುದನ್ನು ಮತ್ತು ಒಣಪಾಯಿಖಾನೆಗಳ ನಿರ್ಮಾಣವನ್ನು ನಿಷೇಧಿಸುವ ಕಾಯಿದೆ ಜಾರಿಯಾದದ್ದು 1993ರಲ್ಲಿ. ಈ ಕಾಯಿದೆಯ ದೋಷಗಳನ್ನು ಅರಿತುಕೊಂಡು ಸೆಪ್ಟಿಕ್ ಟ್ಯಾಂಕುಗಳನ್ನು, ತೆರೆದ ಚರಂಡಿಗಳನ್ನು ಹಾಗೂ ರೇಲ್ವೇ ಹಳಿಗಳನ್ನು ಈ ಕಾಯಿದೆಯ ವ್ಯಾಪ್ತಿಗೆ ತರುವ ತಿದ್ದುಪಡಿ ತಂದದ್ದು 2013ರಲ್ಲಿ. ಹಾಗೆಂದು ಮಲದ ಗುಂಡಿಗಳಿಗೆ ಮನುಷ್ಯರನ್ನು ಇಳಿಸುವ ಮತ್ತು ಅವರ ಪ್ರಾಣಗಳನ್ನು ಬಲಿ ತೆಗೆದುಕೊಳ್ಳುವ ಕ್ರೌರ್ಯ ಈಗಲೂ ನಿಂತಿಲ್ಲ.

ಮನುಷ್ಯರೇ ಪ್ರತ್ಯಕ್ಷವಾಗಿ ಕೈಯಿಂದ ಬಾಚಿ ಹೊತ್ತು ಸಾಗಿಸಬೇಕಿರುವ ಒಣ ಪಾಯಿಖಾನೆಗಳು (ನೀರಿನ ಒತ್ತಡದಿಂದ ಗುಂಡಿಯೊಳಕ್ಕೆ ತಳ್ಳುವ ವ್ವವಸ್ಥೆ ಇಲ್ಲದ ಪಾಯಿಖಾನೆಗಳು) ಈಗಲೂ ಭಾರತದಲ್ಲಿವೆ. ಜನಗಣತಿಯಲ್ಲಿ ಅದುಮಿಟ್ಟ ಅಂಕಿಅಂಶಗಳ ಪ್ರಕಾರವೇ ಇವುಗಳ ಸಂಖ್ಯೆ 26 ಲಕ್ಷ. ಇನ್ನು ಒಳಚರಂಡಿ ವ್ಯವಸ್ಥೆಗೆ ಜೋಡಣೆ ಆಗದೆ ನೇರವಾಗಿ ತೆರೆದ ಚರಂಡಿಗಳಿಗೆ ಮಾನವ ಮಲವನ್ನು ಹರಿಸುವ ಕಚ್ಚಾ ಪಾಯಿಖಾನೆಗಳು ಎಂಟು ಕೋಟಿ ಎಂಬತ್ತೆರಡು ಲಕ್ಷದ ಇನ್ನೂರ ಎಪ್ಪತ್ತೊಂದು.. 80ರಷ್ಟು ಒಣ ಪಾಯಿಖಾನೆಗಳು ಉತ್ತರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಜಮ್ಮು-ಕಾಶ್ಮೀರದಲ್ಲಿವೆ ಎನ್ನುತ್ತದೆ ರೀಹ್ಯಾಬಿಲಿಟೇಷನ್ ರೀಸರ್ಚ್ ಇನಿಶಿಯೇಟಿವ್ ಎಂಬ ಸಂಸ್ಥೆಯ ಅಂಕಿಅಂಶ. ಈ ಅಂಕಿಅಂಶ-ಅಧ್ಯಯನವೂ ಪರಿಪೂರ್ಣ ಅಲ್ಲ. ನಗರಗಳಾಚೆಗಿನ ಜನವಸತಿಗಳ ಲೆಕ್ಕ ಇವುಗಳಲ್ಲಿ ಸೇರಿಲ್ಲ. ಈ ಸಮೀಕ್ಷೆ ಕೂಡ ಕೇವಲ 194 ನಗರಗಳಿಗೆ ಸೀಮಿತವಾದದ್ದು. ಹೀಗಾಗಿ ದೇಶದಲ್ಲಿ ಮನುಷ್ಯ ಮಲವನ್ನು ಬಳಿಯುವ ಮನುಷ್ಯರ ಸಂಖ್ಯೆ ಖಚಿತವಾಗಿ ತಿಳಿಯಬೇಕಾದರೂ ಹೇಗೆ?

ಭಾರತೀಯ ರೇಲ್ವೆ ಮನುಷ್ಯರಿಂದ ಮಲ ಬಳಿಸುವ ಮತ್ತೊಂದು ಮಹಾ ಅಪರಾಧಿ. ಆರು ವರ್ಷಗಳಷ್ಟು ಹಳೆಯ ಅಂಕಿಅಂಶಗಳ ಪ್ರಕಾರವೇ 12 ಸಾವಿರ ರೈಲುಗಾಡಿಗಳ 59,279 ಪ್ಯಾಸೆಂಜರ್ ಕೋಚುಗಳ ಪಾಯಿಖಾನೆಗಳ ಮಲ ಸೀದಾ ಹಳಿಗಳ ಮೇಲೆ ಬೀಳುತ್ತಲಿತ್ತು. ಬಳಿಯುವವರನ್ನು ಗುತ್ತಿಗೆದಾರನ ಮೂಲಕ ನೇಮಿಸಿಕೊಂಡಿದೆ. ತನ್ನ ದಾಖಲೆ ದಸ್ತಾವೇಜುಗಳಲ್ಲಿ ಮಲ ಬಳಿಯುವವರು ಇಲ್ಲ ಎಂದು ಜಾಣ ಸಮಜಾಯಿಷಿ ನೀಡುತ್ತದೆ.

ಈ ಮಲ ಬಳಿಸುವ ಈ ಅಮಾನುಷತೆಯನ್ನು ಶಿಕ್ಷಾರ್ಹ ಅಪರಾಧ ಎಂದು ನಿಷೇಧಿಸಿದ್ದು 1993ರಲ್ಲಿ. 1993ರಿಂದ ಇಲ್ಲಿಯತನಕ ಈ ಕಾಯಿದೆಯ ಅಡಿಯಲ್ಲಿ ಅಪರಾಧಿಗಳನ್ನು ಬಂಧಿಸಿ ಶಿಕ್ಷೆ ವಿಧಿಸಿರುವ ಉದಾಹರಣೆಗಳಾದರೂ ಎಷ್ಟಿವೆ? ಮಲ ಬಳಿವವರ ಮರುವಸತಿಗಾಗಿ ತಲಾ 40 ಸಾವಿರ ರುಪಾಯಿಯ ನಗದು ನೆರವು, ಅವರು ಮತ್ತು ಅವರ ಕುಟುಂಬದವರಿಗೆ ಕೌಶಲ್ಯ ತರಬೇತಿಗಾಗಿ ತಲಾ ಮಾಸಿಕ 3000 ರುಪಾಯಿಯ ಸ್ಟೈಫೆಂಡ್, ಇವರ ಪೈಕಿ ಸ್ವಉದ್ಯೋಗಕ್ಕೆಂದು ಸಾಲ ಪಡೆದವರಿಗೆ ಐದು ಲಕ್ಷ ರುಪಾಯಿಯ ಸಬ್ಸಿಡಿ, ಮಲ ಬಳಿವವರು ಮತ್ತು ಅವರ ಕುಟುಂಬದ ಸದಸ್ಯರಿಗೆ ಆಯುಷ್ಮಾನ್ ಭಾರತ ಯೋಜನೆಯ ಅಡಿಯಲ್ಲಿ ಆರೋಗ್ಯ ವಿಮೆ ನೀಡಲಾಗುತ್ತಿದೆ. ಅವರನ್ನು ನಡೆಸಿಕೊಂಡಿರುವ ಪರಿಗೆ ಅವರು ಅನುಭವಿಸಿದ ನೋವು ಅವಮಾನ ಸಂಕಟಗಳಿಗೆ ಈ ಪರಿಹಾರ ಸಾಕೇನು?

ದುರಂತದೊಳಗಿನ ದುರಂತವೆಂದರೆ ಇವರ ಪೈಕಿ ನೂರಕ್ಕೆ 98ರಷ್ಟು ಮಂದಿ ಹೆಣ್ಣುಮಕ್ಕಳೇ. ಮನುವಾದಿ ಮೇಲ್ಜಾತಿಗಳ ’ನಾಗರಿಕ’ರ ಪಾಲಿಗೆ ಇವರೆಲ್ಲ ಮುಟ್ಟಿಸಿಕೊಳ್ಳಬಾರದವರು. ಮನೆ ತುಂಬಿಸಿಕೊಳ್ಳುವ ಹೊಸ ಸೊಸೆಗೆ ಎಲ್ಲಕ್ಕಿಂತ ಮೊದಲು ತನ್ನ ಯಜಮಾನಿಕೆ ಹಿಸ್ಸೆ ನೀಡುತ್ತಾಳೆ ಅತ್ತೆ. ತಾನು ಕೈಯಾರೆ ಬಾಚಿ ನಂತರ ತಲೆ ಮೇಲೆ ಹೊತ್ತು ಸಾಗಿಸಿ ಸ್ವಚ್ಛ ಮಾಡುವ ಪಾಯಿಖಾನೆಗಳು ಎಂಬ ಪೂರ್ವಾರ್ಜಿತ ಆಸ್ತಿಯನ್ನು ಹಂಚಿಕೊಡುತ್ತಾಳೆ. ಮಲ ಬಾಚುವ ತಗಡಿನ ಚೌಕಗಳು, ಬುಟ್ಟಿ ಹಾಗೂ ಪೊರಕೆಯನ್ನು ಕೈಗಿರಿಸುತ್ತಾಳೆ.

ನಸುಕು ಹರಿಯುವ ಮೊದಲೇ ಮೇಲು ಜಾತಿಗಳವರ ಕೇರಿಗಳ ಒಣ ಪಾಯಿಖಾನೆಗಳ ಮಲ ಬಾಚಲು ತೆರಳುವ ಹೆಣ್ಣುಮಕ್ಕಳು ತಿಂಗಳಿಗೆ ಸಾವಿರ, ಎರಡು ಸಾವಿರ ರುಪಾಯಿ ಗಳಿಸಿದರೆ ಅದೇ ಅಷ್ಟೈಶ್ವರ್ಯ. ದಿನಬಿಟ್ಟು ದಿನ ಮಲ ಬಳಿಸಿಕೊಳ್ಳುವವರು ಎಸೆಯುವ ಹಳಸಿದ ತಂಗಳು ಕೂಳು. ಆಗಾಗ ಬಿಸುಡುವ ಹಳೆಯ ಹರಕು ಹಚ್ಚಡ. ಹಲವು ಬಗೆಯ ಚರ್ಮರೋಗಗಳು, ಕ್ಷಯರೋಗ, ತಲೆಶೂಲೆ, ನಿರಂತರ ವಾಕರಿಕೆ, ಹುಣ್ಣು ಹೊಪ್ಪಳೆಗಳು, ಇವರ ಪಾಲಿಗೆ ಮುಫತ್ತು ಬಳುವಳಿಗಳು. ಹೆರುವ ವಯಸ್ಸಿನ ಹಲವರು ಗರ್ಭಪಾತಕ್ಕೆ ಈಡಾದ ಮತ್ತು ಅಂಗವಿಕಲ ಕೂಸುಗಳನ್ನು ಹೆಡೆದಿರುವ ಉದಾಹರಣೆಗಳು ಹೇರಳ.

ಎಷ್ಟು ಸಲ ಜಳಕ ಮಾಡಿದರೇನಂತೆ? ಮೈ ಮನಸ್ಸಿನ ಅಣುಅಣುವಿನಿಂದ ಮಲದ ಗಬ್ಬುನಾಥವೇ ಹೊಮ್ಮುವ ಭಾವ ಹಗಲಿರುಳೂ. ಕಾಲಮೇಲೆ ಕೀತುಕೊಂಡ ಕಪ್ಪು ಹಳದಿ ಬೊಬ್ಬೆಗಳು. ಔಷಧಿಗೆ ಕಾಸಿಲ್ಲ. ಬೆಳ್ಳಂಬೆಳಿಗ್ಗೆ ಖಾಲಿ ಹೊಟ್ಟೇಲಿ ಮಲ ಬಳಿಯಲು ಹೋಗುತ್ತಾರೆ ಈ ಹೆಣ್ಣುಮಕ್ಕಳು. ವಾಪಸು ಬರೋ ಹೊತ್ತಿಗೆ ವಾಂತಿ ವಾಕರಿಕೆ. ತಿನ್ನಬೇಕು ಅನ್ಸಲ್ಲ. ಮಲದ ಮೇಲೆ ಕುಳಿತು ಹಾರುವ ನೊಣಗಳು ಕೀಟಗಳು ಅವರ ಮೈಯ ಮೇಲೆ, ಉಣ್ಣುವ ಅನ್ನದ ಮೇಲೆ… ಎಲ್ಲೆಂದರಲ್ಲಿ ಕಂಡು ಕಾಡುತ್ತವಂತೆ.

ಪ್ರಯಾಗರಾಜದ ತ್ರಿವೇಣಿ ಸಂಗಮದ ತಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಸ-ಹೇಸಿಗೆ ಬಳಿದ ಕರ್ಮಚಾರಿಗಳ ಪಾದಗಳನ್ನು ಕೈಮುಟ್ಟಿ ತೊಳೆದು ಇನ್ನೂ ಎರಡು ವರ್ಷಗಳು ತುಂಬಿಲ್ಲ. ಶುಭ್ರವಸ್ತ್ರದಿಂದ ಒರೆಸಿ ಕೃತಜ್ಞತೆ ಸಲ್ಲಿಸಿದರು. ವಿನಮ್ರತೆ- ಕೃತಜ್ಞತೆಯೇ ಮೋದಿ ರೂಪದಲ್ಲಿ ಮೈದಳೆದ ದೃಶ್ಯಾವಳಿ. ದೇಶ ನಿಬ್ಬೆರಗಾಗಿ ನೋಡಿದೆ. ಅಭಿಮಾನಿಗಳು-ಭಕ್ತರು ತಮ್ಮ ಕಣ್ಮಣಿಯನ್ನು ಕೊಂಡಾಡಿದ್ದಾರೆ. ಮಹಾಮಾನವ ಎಂದು ಉದ್ಗರಿಸಿದ್ದರು.

Photo Courtesy: Deccan Herald

ಮೊದಲೇ ಉಜ್ಜಿ ತೊಳೆದಿದ್ದ ಸ್ವಚ್ಛ ಪಾದಗಳನ್ನು ತೊಳೆವ ಬದಲು ಮಲದ ಗುಂಡಿಗಳಲ್ಲಿ ಮೂಗಿನ ಮಟ್ಟ ಮುಳುಗಿದವರನ್ನು ಹಿಡಿದೆತ್ತಿ ಅವರ ಮೈ ತೊಳೆಯಬೇಕಿತ್ತು. ಇನ್ನು ಇಳಿಯಲು ಬಿಡೆನು ಎಂದು ಸಾರಬೇಕಿತ್ತು. ಮಲದ ಗುಂಡಿಗಳಲ್ಲಿ ವಿಷಾನಿಲ ಕುಡಿದು ಸಂಭವಿಸುವ ಸಾವಿರ ಸಾವಿರ ಸಾವುಗಳಿಗೆ ಪೂರ್ಣವಿರಾಮ ಹಾಕುವುದಾಗಿ ಪಣತೊಡಬೇಕಿತ್ತು. ಒಣಪಾಯಿಖಾನೆಗಳನ್ನು ಒಡೆದುಹಾಕಲು, ಅಂತಹ ಪಾಯಿಖಾನೆಯೊಂದನ್ನು ಸಾಂಕೇತಿಕವಾಗಿ ಒಡೆಯಲು ಹಾರೆ-ಗುದ್ದಲಿ-ಪಿಕಾಸಿಯನ್ನು ಕೈಗೆ ಎತ್ತಿಕೊಳ್ಳಬೇಕಿತ್ತು.

’ತೊಳೆದುಕೊಳ್ಳಬೇಕಾದದ್ದು ನಿಮ್ಮ ಮಿದುಳನ್ನೇ ವಿನಾ ನಮ್ಮ ಪಾದಗಳನ್ನಲ್ಲ ಪ್ರಧಾನಿಯವರೇ. ನೀವು ಮಾಡಿರುವುದು ಅತಿ ದೊಡ್ಡ ಅಪಮಾನ. 1.6ಲಕ್ಷ ಮಹಿಳೆಯರಿಂದ ಹೇಲು ಬಾಚಿಸಲಾಗುತ್ತಿದೆ. ಐದು ವರ್ಷಗಳಲ್ಲಿ ಚಕಾರ ಎತ್ತಿಲ್ಲ ನೀವು. ಎಂತಹ ನಾಚಿಕೆಗೇಡು’ ಎಂದು ಬೆಜವಾಡ ವಿಲ್ಸನ್ ಸಿಡಿನುಡಿಗಳನ್ನು ಆಡಿದ್ದರು.

ಈ ಬಡಪಾಯಿಗಳಿಗೆ ಮೋದಿಯವರು ಹುಸಿ ದೈವತ್ವ ಕರುಣಿಸಿದ್ದು ಇದೇ ಮೊದಲೇನೂ ಅಲ್ಲ. “ಸಮಾಜದ ಸಂತೋಷಕ್ಕಾಗಿ ದೇವರೇ ವಹಿಸಿದ ಕೆಲಸವಿದು ಎಂದು ಸಫಾಯಿ ಕರ್ಮಚಾರಿಗಳಿಗೆ ಯಾವುದೋ ಒಂದು ಹಂತದಲ್ಲಿ ಜ್ಞಾನೋದಯ ಆಗಿರಬೇಕು. ಶತಮಾನಗಳ ಆಂತರಿಕ ಆಧ್ಯಾತ್ಮಿಕ ಚಟುವಟಿಕೆಯಿದು. ಬೇರೆ ಕೆಲಸ ಮಾಡುವ ಆಯ್ಕೆ- ಅವಕಾಶ ಅವರ (ಸಫಾಯಿ ಕರ್ಮಚಾರಿಗಳ) ಪೂರ್ವಜರಿಗೆ ಇರಲಿಲ್ಲವೆಂದು ನಂಬುವುದು ಕಷ್ಟ” ಎಂದು ಮೋದಿಯವರು 2007ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಹೇಳಿದ ಮಾತುಗಳು ’ಕರ್ಮಯೋಗಿ’ ಹೆಸರಿನ ಪುಸ್ತಕದಲ್ಲಿ ಅಚ್ಚಾಗಿ ಅಜರಾಮರ ಆಗಿವೆ.

“…ರೇಷ್ಮೆ ಹುಳ ಗೂಡು ಕಟ್ಟುತ್ತೆ. ಆ ಹುಳಗಳ ಬೇಯಿಸಿ ಗೂಡಿನ ನೂಲನ್ನು ಮಡಿ ಬಟ್ಟೆಗಾಗಿ ಬಳಸಲಾಗುತ್ತದೆ. ನಗರದ ಮಡಿ ಸ್ವಚ್ಛತೆಗಾಗಿ ಪೌರಕಾರ್ಮಿಕರು ಬೇಯಿಸಲ್ಪಡುತ್ತಿದ್ದಾರೆ…” ಎಂಬ ದೇವನೂರ ಮಹಾದೇವರ ಮಾತಿನ ಆಯಸ್ಸು ಕೊನೆಯಾಗುವುದು ಎಂದಿಗೆ?


ಇದನ್ನೂ ಓದಿ: Manual Scavenging: ಮಲದ ಗುಂಡಿ ಸ್ವಚ್ಛಗೊಳಿಸುವವರಲ್ಲಿ 73.31% ಪರಿಶಿಷ್ಟ ಜಾತಿಯವರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2025ಕ್ಕೆ ಬಿಜೆಪಿ ಸಂಪೂರ್ಣ ಮೀಸಲಾತಿಯನ್ನು ರದ್ದುಗೊಳಿಸಲಿದೆ: ರೇವಂತ್ ರೆಡ್ಡಿ

0
ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಮೀಸಲಾತಿಯನ್ನು ರದ್ದುಗೊಳಿಸುವ ಉದ್ದೇಶದಿಂದ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂವಿಧಾನದ ವಿರುದ್ಧ ಸಮರ ಸಾರಿವೆ ಎಂದು ಆರೋಪಿಸಿರುವ ತೆಲಂಗಾಣದ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ, ಮೀಸಲಾತಿ ರದ್ದುಗೊಳಿಸುವ...