ಗಾಝಾದ ಪ್ಯಾಲೆಸ್ತೀನಿಯನ್ ವ್ಯಕ್ತಿಯೊಬ್ಬರಿಂದ ಬಲವಂತವಾಗಿ ತಪ್ಪೊಪ್ಪಿಗೆ ಪಡೆಯಲು, ಅವರ 18 ತಿಂಗಳ ಮಗುವಿಗೆ ಇಸ್ರೇಲಿ ಸೈನಿಕರು ತೀವ್ರ ಚಿತ್ರಹಿಂಸೆ ಕೊಟ್ಟಿರುವ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ಸೋಮವಾರ (ಮಾ.23) ವರದಿ ಮಾಡಿವೆ.
ಮಾರ್ಚ್ 21ರಂದು ಮಧ್ಯ ಗಾಝಾದ ಅಲ್-ಮಘಾಝಿ ನಿರಾಶ್ರಿತರ ಶಿಬಿರದ ಬಳಿ ಕರೀಮ್ ಅಬೂ ನಾಸರ್ ಎಂಬ ಮಗು, ತನ್ನ ತಂದೆ ಒಸಾಮಾ ಅಬೂ ನಾಸರ್ ಅವರೊಂದಿಗೆ ಇದ್ದಾಗ, ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ಸಿಬ್ಬಂದಿ ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅಲ್ ಜಝೀರಾ ವರದಿ ಹೇಳಿದೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ಪ್ಯಾಲೆಸ್ತೀನ್ ಟಿವಿ ಮಾಡಿರುವ ವರದಿಯ ಪ್ರಕಾರ, ಐಡಿಎಫ್ ಸೈನಿಕರು ನಿರಾಶ್ರಿತರ ಶಿಬಿರದ ಮೇಲೆ ದಾಳಿ ಮಾಡಿದ ಬಳಿಕ, ಒಸಾಮಾ ಅಬೂ ನಾಸರ್ ಅವರಿಗೆ ತನ್ನ ಮಗುವನ್ನು ನೆಲದ ಮೇಲೆ ಬಿಟ್ಟು ಹತ್ತಿರದ ಮಿಲಿಟರಿ ಚೆಕ್ಪೋಸ್ಟ್ಗೆ ಬರುವಂತೆ ಸೂಚಿಸಿದ್ದಾರೆ. ಅಲ್ಲಿಗೆ ತೆರಳಿದ ಒಸಾಮಾ ಅವರ ಬಟ್ಟೆ ಬಿಚ್ಚಿಸಿ ತಪಾಸಣೆ ನಡೆಸಿದ್ದಾರೆ. ನಂತರ, ತಂದೆಯಿಂದ ಬಲವಂತವಾಗಿ ತಪ್ಪೊಪ್ಪಿಗೆಯನ್ನು ಪಡೆಯಲು ಮಗುವನ್ನು ಕರೆತಂದು, ಒಸಾಮಾ ಅವರ ಮುಂದೆಯೇ ಮಗುವಿಗೆ ಚಿತ್ರಹಿಂಸೆ ನೀಡಿದ್ದಾರೆ.
ಪ್ಯಾಲೆಸ್ತೀನಿಯನ್ ಪತ್ರಕರ್ತ ಒಸಾಮಾ ಅಲ್-ಕಹ್ಲೂತ್ ಅವರು ಮಗುವಿನ ತಾಯಿಯನ್ನು ಸಂದರ್ಶಿಸಿದ್ದು, ಈ ವೇಳೆ ತಾಯಿ ಮಗುವಿನ ಮೇಲಾದ ಗಾಯಗಳನ್ನು ತೋರಿಸಿದ್ದಾರೆ. ಇಸ್ರೇಲಿ ಸೈನಿಕರು ಮಗುವಿಗೆ ಸಿಗರೇಟಿನಿಂದ ಸುಟ್ಟಿದ್ದಾರೆ ಮತ್ತು ಮಗುವಿನ ಕಾಲಿಗೆ ಮೊಳೆಯನ್ನು ಚುಚ್ಚಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಟಿಆರ್ಟಿ ವರ್ಲ್ಡ್ ಉಲ್ಲೇಖಿಸಿದ ವೈದ್ಯಕೀಯ ವರದಿಯ ಪ್ರಕಾರ, ಮಗುವಿನ ಕಾಲಿನ ಮೇಲೆ ಸಿಗರೇಟಿನಿಂದ ಸುಟ್ಟ ಗುರುತುಗಳು ಮತ್ತು ಮೊಳೆಯಿಂದ ಚುಚ್ಚಿದ ಗಾಯಗಳು ಕಂಡು ಬಂದಿವೆ. ಇಸ್ರೇಲಿ ವಶದಲ್ಲಿ ಸುಮಾರು 10 ಗಂಟೆಗಳ ಕಾಲ ಬಂಧನದಲ್ಲಿದ್ದ ಮಗುವನ್ನು ಕೊನೆಗೆ ಇಂಟರ್ನ್ಯಾಷನಲ್ ಕಮಿಟಿ ಆಫ್ ರೆಡ್ ಕ್ರಾಸ್ (ಐ ಸಿಆರ್ಸಿ) ಮೂಲಕ ಸಂಬಂಧಿಕರಿಗೆ ಒಪ್ಪಿಸಲಾಗಿದೆ.
ಮಗುವಿನ ತಂದೆ ತಂದೆ ಒಸಾಮಾ ಅಬು ನಾಸರ್ ಇನ್ನೂ ಇಸ್ರೇಲಿ ವಶದಲ್ಲಿದ್ದಾರೆ.
ಇಸ್ರೇಲಿ ಸೈನಿಕರ ಈ ಕ್ರೂರ ಕೃತ್ಯ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಮಾನವ ಹಕ್ಕುಗಳ ಗುಂಪುಗಳು, ಹೋರಾಟಗಾರರು ಮತ್ತು ವಿವಿಧ ದೇಶಗಳ ನಾಯಕರು ಇದನ್ನು ಖಂಡಿಸಿದ್ದಾರೆ.
ಗಾಝಾದ ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶಗಳ ಕುರಿತಾದ ವಿಶ್ವಸಂಸ್ಥೆಯ ವಿಶೇಷ ವರದಿಗಾರ್ತಿ ಫ್ರಾನ್ಸೆಸ್ಕಾ ಅಲ್ಬನೀಸ್ ಅವರು ಈ ಘಟನೆಯ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಇಸ್ರೇಲ್ ವ್ಯವಸ್ಥಿತವಾಗಿ ಪ್ಯಾಲೆಸ್ತೀನಿಯರ ಮೇಲೆ ದೈಹಿಕ ಮತ್ತು ಮಾನಸಿಕ ಚಿತ್ರಹಿಂಸೆ ನೀಡುತ್ತಿರುವ ಕುರಿತು ಇತ್ತೀಚೆಗಷ್ಟೇ ವರದಿ ಬಿಡುಗಡೆ ಮಾಡಿದ್ದ ಅವರು, ಸಾಮಾಜಿಕ ಜಾಲತಾಣದ ಎಕ್ಸ್ನಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ತಂದೆಯ ಮೇಲೆ ಒತ್ತಡ ಹೇರಲು ಮಗುವಿಗೆ ಚಿತ್ರಹಿಂಸೆ ನೀಡುವ ಇವರು ಎಂತಹ ವಿಕೃತ ಅಪರಾಧಿಗಳು?” ಎಂದು ಅವರು ಬರೆದುಕೊಂಡಿದ್ದಾರೆ.
ಅಮೆರಿಕನ್-ಇಸ್ಲಾಮಿಕ್ ಸಂಬಂಧಗಳ ಮಂಡಳಿಯು (ಸಿಎಐಆರ್) ತನ್ನ ಹೇಳಿಕೆಯಲ್ಲಿ, ಇಸ್ರೇಲಿ ಸೈನಿಕರ ಕೃತ್ಯ “ಸಹಿಸಲಾಗದ ಅನೈತಿಕ ಅತಿರೇಕ” ಎಂದು ಕರೆದಿದೆ ಮತ್ತು ಈ ಕುರಿತು ಅಮೆರಿಕ ಕಾಂಗ್ರೆಸ್ ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
“ಯಾವುದೇ ಮಗು, ವಿಶ್ವದ ಯಾವುದೇ ಭಾಗದಲ್ಲಿ ಇಂತಹ ಕ್ರೌರ್ಯಕ್ಕೆ ಒಳಗಾಗಬಾರದು, ಅದರಲ್ಲೂ ವಿಶೇಷವಾಗಿ ಅಮೆರಿಕದ ತೆರಿಗೆದಾರರ ಹಣದಿಂದ ಇಂತಹ ಕೃತ್ಯಗಳು ನಡೆಯಬಾರದು. ಈ ಕ್ರಮಗಳು ಅಂತಾರಾಷ್ಟ್ರೀಯ ಕಾನೂನಿನ ಗಂಭೀರ ಉಲ್ಲಂಘನೆ ಮತ್ತು ಮೂಲಭೂತ ಮಾನವೀಯತೆಯ ಮೃಗೀಯ ಹನನವಾಗಿದೆ” ಎಂದು ಮಂಡಳಿ ಹೇಳಿದೆ.
“ನಮ್ಮ ರಾಷ್ಟ್ರವು ಈ ಅಪರಾಧಗಳಲ್ಲಿ ತನ್ನ ಪಾಲುದಾರಿಕೆಯನ್ನು ಕೊನೆಗೊಳಿಸಬೇಕು. ಅಮೆರಿಕದ ತೆರಿಗೆದಾರರ ಹಣವು ಇನ್ನು ಮುಂದೆ ಮಕ್ಕಳ ಮೇಲಿನ ಚಿತ್ರಹಿಂಸೆ ಅಥವಾ ಹತ್ಯಾಕಾಂಡಕ್ಕೆ ಬಳಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕಾಂಗ್ರೆಸ್ ಮೇಲಿದೆ. ಆತ್ಮಸಾಕ್ಷಿಯಿರುವ ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಗಳು ನಿಯಂತ್ರಣ ತಪ್ಪಿದ ಇಸ್ರೇಲ್ ಆಡಳಿತಕ್ಕೆ ನೀಡಲಾಗುವ ಮಿಲಿಟರಿ ನೆರವನ್ನು ನಿಲ್ಲಿಸಲು ಮತ ಚಲಾಯಿಸಬೇಕು” ಎಂದು ಮಂಡಳಿಯು ಒತ್ತಾಯಿಸಿದೆ.
ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗೇರ್ ಗಾಲಿಬಾಫ್ ಅವರು ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸುತ್ತಾ, “ಇರಾನ್ ಮಾನವೀಯತೆಗಾಗಿ ಹೋರಾಡುತ್ತಿದೆ. ಇಡೀ ಜಗತ್ತು ಈಗ ಎರಡರಲ್ಲಿ ಒಂದನ್ನು ಆರಿಸಿಕೊಳ್ಳಬೇಕು: ಒಂದೋ ಗಾಝಾದ ಪರವಾಗಿ ನಿಂತು ಈ ಕ್ರೂರ ಆಡಳಿತವನ್ನು ವಿರೋಧಿಸಬೇಕು, ಇಲ್ಲವೇ ಮಕ್ಕಳ ಮೇಲೆ ದೌರ್ಜನ್ಯ ಎಸಗುವವರ ಪರವಾಗಿ ನಿಲ್ಲಬೇಕು. ಇಲ್ಲಿ ತಟಸ್ಥವಾಗಿರಲು ಸಾಧ್ಯವೇ ಇಲ್ಲ” ಎಂದು ಹೇಳಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ‘ಚಿತ್ರಹಿಂಸೆ ಮತ್ತು ಜನಾಂಗೀಹತ್ಯೆ’ ಎಂಬ ವಿಶ್ವಸಂಸ್ಥೆಯ ವರದಿಯ ಪ್ರಕಾರ, ಅಕ್ಟೋಬರ್ 7, 2023ರಿಂದ ಇಸ್ರೇಲಿ ವಶದಲ್ಲಿರುವ ಪ್ಯಾಲೆಸ್ತೀನಿಯರು ‘ಅತ್ಯಂತ ಕ್ರೂರವಾದ ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ’ ಒಳಗಾಗಿದ್ದಾರೆ.
ಫ್ರಾನ್ಸೆಸ್ಕಾ ಅಲ್ಬನೀಸ್ ಅವರು ಸಿದ್ಧಪಡಿಸಿದ ಈ ವರದಿಯು, “ಬಂಧನದಲ್ಲಿರುವವರ ಮೇಲೆ ನೀಡಲಾಗುತ್ತಿರುವ ಚಿತ್ರಹಿಂಸೆಯನ್ನು ಹಿಂದೆಂದೂ ಕಾಣದ ಮಟ್ಟಿಗೆ ಒಂದು ಶಿಕ್ಷೆಯಾಗಿ ಮತ್ತು ಸಾಮೂಹಿಕ ಸೇಡಿನ ರೂಪದಲ್ಲಿ ಬಳಸಲಾಗುತ್ತಿದೆ” ಎಂದು ಪ್ರತಿಪಾದಿಸಿದೆ.
ಘೋರ ಹಲ್ಲೆಗಳು, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಮಾರಣಾಂತಿಕ ಕಿರುಕುಳ, ಹಸಿವು ಮತ್ತು ಕನಿಷ್ಠ ಮಾನವೀಯ ಸೌಲಭ್ಯಗಳಿಂದ ವ್ಯವಸ್ಥಿತವಾಗಿ ವಂಚಿಸಿರುವುದು ಹತ್ತಾರು ಸಾವಿರ ಪ್ಯಾಲೆಸ್ತೀನಿಯನ್ನರ ಮತ್ತು ಅವರ ಸಂಬಂಧಿಕರ ದೇಹ ಹಾಗೂ ಮನಸ್ಸಿನ ಮೇಲೆ ಆಳವಾದ ಮತ್ತು ಶಾಶ್ವತವಾದ ಗಾಯಗಳನ್ನು ಉಂಟುಮಾಡಿದೆ” ಎಂದು ವರದಿಯು ತಿಳಿಸಿದೆ.
“ಬಂಧನದಲ್ಲಿರುವಾಗ ನೀಡುವ ಚಿತ್ರಹಿಂಸೆ ಮತ್ತು ಅದರ ಜೊತೆಗೆ ನಿರಂತರವಾಗಿ ನಡೆಸುತ್ತಿರುವ ಬಲವಂತದ ಒಕ್ಕಲೆಬ್ಬಿಸುವಿಕೆ, ಸಮೂಹ ಹತ್ಯೆಗಳು, ಮೂಲಭೂತ ಸೌಲಭ್ಯಗಳ ವಂಚನೆ ಹಾಗೂ ಜೀವನೋಪಾಯದ ಮಾರ್ಗಗಳ ನಾಶದ ಮೂಲಕ ಪುರುಷರು, ಮಹಿಳೆಯರು ಮತ್ತು ಮಕ್ಕಳ ಮೇಲೆ ದಬ್ಬಾಳಿಕೆ ನಡೆಸುವುದು ಹಾಗೂ ಶಿಕ್ಷಿಸುವುದು ಈ ಆಡಳಿತದ ಅವಿಭಾಜ್ಯ ಅಂಗವಾಗಿದೆ. ಇವೆಲ್ಲವೂ ದೀರ್ಘಕಾಲದ ಸಾಮೂಹಿಕ ನೋವು ಮತ್ತು ಸಂಕಟವನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿವೆ” ಎಂದು ವರದಿಯು ಹೇಳಿದೆ.
ಅಲ್ಬನೀಸ್ ಅವರು ಕನಿಷ್ಠ 300 ಸಾಕ್ಷ್ಯಗಳು ಸೇರಿದಂತೆ ಲಿಖಿತ ಸಲ್ಲಿಕೆಗಳನ್ನು ಸಂಗ್ರಹಿಸಿರುವುದಾಗಿ ತಿಳಿಸಿದ್ದಾರೆ. ಅವರ ಪ್ರಕಾರ, ಅಕ್ಟೋಬರ್ 2023ರಿಂದ ಆಕ್ರಮಿತ ಪ್ರದೇಶದಲ್ಲಿ ಪ್ಯಾಲೆಸ್ತೀನಿಯರ ಬಂಧನವು ಭೀಕರವಾಗಿ ಹೆಚ್ಚಾಗಿದೆ. ಈ ಅವಧಿಯಲ್ಲಿ ಕನಿಷ್ಠ 1,500 ಮಕ್ಕಳು ಸೇರಿದಂತೆ ಒಟ್ಟು 18,500ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
ವರದಿಯ ಪ್ರಕಾರ ಸುಮಾರು 9,000 ಪ್ಯಾಲೆಸ್ತೀನಿಯನ್ನರು ಇನ್ನೂ ಬಂಧನದಲ್ಲಿದ್ದಾರೆ ಮತ್ತು 4,000ಕ್ಕೂ ಹೆಚ್ಚು ಜನರನ್ನು ಬಲವಂತವಾಗಿ ನಾಪತ್ತೆ ಮಾಡಲಾಗಿದೆ. ಇಸ್ರೇಲ್ನ ಬಂಧನ ವ್ಯವಸ್ಥೆಯು ವ್ಯವಸ್ಥಿತ ಮತ್ತು ವ್ಯಾಪಕವಾದ ಅವಮಾನ, ಬಲವಂತ ಹಾಗೂ ಭಯೋತ್ಪಾದನೆಯ ಆಡಳಿತವಾಗಿ ಅಧಃಪತನಗೊಂಡಿದೆ ಎಂದು ಅಲ್ಬನೀಸ್ ಹೇಳಿದ್ದಾರೆ.


