ಮುಂದೆ ಎದುರಿಸಲಿರುವ ಚುನಾವಣೆಯ ವಿಷಯವಾಗಿ, ಜನರ ಬಳಿಗೆ ತೆಗೆದುಕೊಂಡು ಹೋಗಲು ಗುರುತರದಾದ ಯಾವುದೇ ಸಾಧನೆಯಿಲ್ಲದಿರುವುದನ್ನು ಮನಗಂಡ ಬಿಜೆಪಿಗಳು ರಾಷ್ಟ್ರದಾದ್ಯಂತ ಮುಸ್ಲಿಂ ಸಂಘಟನೆಯ ಮೇಲೆ ದಾಳಿ ಮಾಡಿ ಬೀಗ ಜಡಿದದ್ದೂ ಅಲ್ಲದೆ ಕೆಲವು ಸಂಘಟನೆಗಳ ಮೇಲೆ ನಿಷೇಧವನ್ನು ಹೇರಿಬಿಟ್ಟಿತಲ್ಲಾ. ನಿಷೇಧದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಹಾಗಾದರೆ ಆರೆಸ್ಸೆಸ್ಸನ್ನು ನಿಷೇಧಿಸಿ ಎಂದು ಕರೆಕೊಟ್ಟ ಕೂಡಲೇ ಬಿಜೆಪಿಯ ತಲೆಕೆಟ್ಟ ಲೀಡರುಗಳು ಸಿದ್ದು ಮೇಲೆ ಬಿದ್ದಿವೆಯಂತಲ್ಲಾ. ಈ ಆರೆಸ್ಸೆಸ್ಸಿಗರು ಮತ್ತು ಲೀಡರುಗಳು ಗಾಂಧಿ ಹತ್ಯೆಯ ನಂತರ ಹುಟ್ಟಿದವರು; ಇವರಿಗೆ ಇತಿಹಾಸ ಗೊತ್ತಿರಲಾರದು. ಗಾಂಧಿ ಕೊಲೆಯಲ್ಲಿ ಆರೆಸ್ಸೆಸ್ ಕೈವಾಡ ಇದೆಯೆಂದು ಆರೋಪಿಸಿ ಅಂದಿನ ಕೇಂದ್ರ ಗೃಹಮಂತ್ರಿ ಸರ್ದಾರ್ ವಲ್ಲಬಾಯಿ ಪಟೇಲರೇ ಆರೆಸ್ಸೆಸ್ಸನ್ನು ಬ್ಯಾನ್ ಮಾಡಿದ್ದರೆಂದು ಸಿದ್ದು ಇನ್ನೂ ತಮ್ಮ ವಿರೋಧಿಗಳ ಮುಸುಡಿಗೆ ಹೇಳಿಲ್ಲವಂತಲ್ಲಾ, ಥೂತ್ತೇರಿ.
*****
ಸಂಘ ಪರಿವಾರಿಗಳು ಗಾಂಧಿಯನ್ನು ಕೊಂದ ಗೋಡ್ಸೆ ಪ್ರತಿಮೆಯನ್ನು ಸ್ಥಾಪಿಸುತ್ತಿವೆ, ಇದಷ್ಟೇ ಅಲ್ಲ, ಮುಂದೆ ಮಾಡಬಹುದಾದ ಧ್ವಂಸದ ಕಾರ್ಯಗಳ ಪಟ್ಟಿಯನ್ನು ಮಾಡುತ್ತಿವೆ. ಬಾಬರಿ ಮಸೀದಿ ವಿಷಯದಲ್ಲಿ ತೀರ್ಪು ನೀಡಿದ ಸಮಯದಲ್ಲಿ ಸುಪ್ರೀಂಕೋರ್ಟು ’ಆಯ್ತು ಸಾಕು ಮಾಡಿ, ಮುಂದೆ ದೇಶದ ಶಾಂತಿ ಬಹಳ ಮುಖ್ಯ’ ಎಂದು ಹೇಳಿದ ಮಾತಿಗೆ ಕಿವುಡಾಗಿ ಕುಂತಿವೆಯೆಲ್ಲಾ. ಹೊಸದಾಗಿ ಹುಟ್ಟಿಕೊಂಡ ಗಾದೆ ಮಾತಿನಂತೆ ’ನಳ್ಳಿ ಹೆಚ್ಚಿದ ಕೆರೆ ಹಾಳು, ಆರೆಸ್ಸೆಸ್ ಹೆಚ್ಚಿದ ಊರ್ ಹಾಳು’ ಎಂಬ ಗಾದೆಯಂತೆ ಈಗ ಬ್ರಾಹ್ಮಣ ವಠಾರದಲ್ಲಿದ್ದ ಆರೆಸ್ಸೆಸ್ ಕವಾಯತು ಊರನ್ನೆಲ್ಲಾ ವ್ಯಾಪಿಸುತ್ತಿದೆ. ಅವುಗಳ ದೀರ್ಘಕಾಲದ ಅಜೆಂಡಾ ಪ್ರಕಾರ ಮುಸ್ಲಿಮರನ್ನ ಬಗ್ಗು ಬಡಿಯುವುದು, ನಂತರ ದಲಿತರ ಮೇಲೆ ಶೂದ್ರರ ಕೈಲಿ ದಾಳಿ ಮಾಡಿಸುವುದು, ಆ ನಂತರ ಸಿಖ್ಖರು, ಯಾದವರು ಹೀಗೆ ನಡೆಯಲಿಚ್ಛಿಸಿರುವ ದೊಡ್ಡ ದೊಂಬಿಯನ್ನೇ ಊಹಿಸಬಹುದು. ತಲೆಕೆಟ್ಟವರಿಗೆ ಮತ್ತು ಬರುವ ಔಷಧಿ ಕೊಡಿಸಿ ಜಗಲಿಯ ಮೇಲೆ ಕೂರಿಸುವ ತನಕ ಇವೆಲ್ಲಾ ನಿರಂತರವಾಗಿ ನಡೆಯುವ ಚೇಷ್ಟೆಗಳೆಂದು ಉಗ್ರ ಗಾಂಧಿವಾದಿಗಳು ಗೊಣಗುತ್ತಿದ್ದಾರಲ್ಲಾ, ಥೂತ್ತೇರಿ.

*****
ಭಾರತ್ ಜೋಡೋ ಯಾತ್ರೆ ಕೇರಳದಿಂದ ಕರ್ನಾಟಕ ತಲುಪಾಯ್ತು. ಮಂಡ್ಯದ ಹತ್ತಿರ ಹೋಗುತ್ತಿದೆ. ಕಳೆದ ಎಂಟು ವರ್ಷಗಳಿಂದ ಬಾಲಿಶ ಹುಡುಗ, ಲಾಲಿಪಾಪು ಮತ್ತು ಅಪ್ರಬುದ್ಧ ಬಾಲ ಭಾಷೆಯ ಹುಡುಗ ಎಂದೆಲ್ಲಾ ಚೆಡ್ಡಿಗಳು ತಮ್ಮ ಜಾಲತಾಣದಲ್ಲಿ ಯಾರ ವಿರುದ್ಧ ಅಪಪ್ರಚಾರ ಮಾಡಿದ್ದವೊ ಅಂತಹ ರಾಹುಲಗಾಂಧಿ, ತಂದೆ ತಾಯಿ ಅಜ್ಜಿ ಮುತ್ತಾತರ ಮಾರ್ಗ ಹುಡುಕುತ್ತ ಹೊರಟವನಂತೆ ಬರುತ್ತಿದ್ದಾನಂತಲ್ಲಾ. ಅವನನ್ನು ನೋಡಲು ರಸ್ತೆ ಬದಿಯಲ್ಲಿ ನಿಂತ ಜನ ಮತ್ತು ಆತನ ಹಿಂದೆ ಕಿಲೋಮಿಟರುಗಟ್ಟಲೆ ಹರಿದು ಬರುತ್ತಿರುವ ಜನಸಾಗರ ನೋಡಿದ ಬಿಜೆಪಿಗಳು ಬೆಚ್ಚಿ ಏನು ಮಾಡಲೂ ತೋಚದೆ ಜಾಥಾದಲ್ಲಿ ಪೇಸಿಎಂ ಟಿಶರ್ಟ್ ಧರಿಸಿದ್ದ ಹುಡುಗರನ್ನ ಹಿಡಿದು ಶರ್ಟ್ ಬಿಚ್ಚಿಕೊಂಡು ಬರಲು ಹೇಳಿವೆಯಂತಲ್ಲಾ. ಒಂದು ಟೀಶರ್ಟ್ ಬಿಚ್ಚಿದರೇನು ಹತ್ತು ಟೀಶರ್ಟ್ ಕೊಡಿಸುತ್ತೇನೆ ಎಂದು ಡಿಕೆಶಿ ಹೇಳಿದ ಕೂಡಲೇ ಮಾಧ್ಯಮದೊಳಗಿರುವ ಶಾನುಭೋಗರ ಹುಡುಗರು ತಮ್ಮ ಕ್ಯಾಮರಾ ಚುರುಕುಗೊಳಿಸಿ ಹೆಜ್ಜೆ ಹಾಕುವಲ್ಲಿ ಹಿಂದೆ ಬಿದ್ದ ಡಿಕೆಶಿ, ಸಿದ್ದರಾಮಯ್ಯನಿಗೆ ಎಡಗೈ ತಾಕಿಸಿದ ಡಿಕೆಶಿ, ರಾಹುಲ್ ಕಾರಿನಲ್ಲಿ ಜಾಗವಿಲ್ಲದೆ ಹಿಂದಿನ ಕಾರಿನಲ್ಲಿ ಹೊರಟ ಡಿಕೆಶಿ ಎಂದು ಅರಚುತ್ತಲೇ ತಮ್ಮ ಚೇಷ್ಟೆಗಳನ್ನು ಮೆರೆಯುತ್ತಿವೆಯಂತಲ್ಲಾ. ನಗು ಕಳೆದುಕೊಂಡ ಜನಕ್ಕೆ ಇನ್ನು ಏನೇನು ಹಾಸ್ಯ ಪ್ರಸಂಗವನ್ನು ಈ ದಸರಾ ಸಮಯದಲ್ಲಿ ಮಾಧ್ಯಮಗಳು ತೋರುತ್ತವೊ ಎಂಬುದು ಮನರಂಜನೆಗೆ ಹಾತೊರೆಯುವ ಜನರ ಮನದಾಳದ ಮಾತಾಗಿದೆಯಂತಲ್ಲಾ, ಥೂತ್ತೇರಿ.
ಇದನ್ನೂ ಓದಿ: ಪೇಸಿಎಮ್ಮಲ್ಲೂ ಜಾತಿ ಬಂತಲ್ಲಾ, ನೋಡಿದಿರಾ..!



ಸತ್ಯ ಮತ್ತು ಸತ್ವದ ಹುಡುಕಾಟ ಗೌರಿ. ಕಾಂ ಧ್ಯೇಯೋದ್ದೇಶ.ಹೆಮ್ಮೆಯಾಗುತ್ತದೆ…ಪತ್ರಿಕಾ ಧರ್ಮವನ್ನೇ ಮರೆತ ಮೈಮನ ಮಾರಿಕೊಂಡ ಅದೆಷ್ಟೋ ಮಾಧ್ಯಮಗಳ ನಡುವೆ ಕೆಸರಲ್ಲಿ ಕಮಲ ಅರಳಿದಂತೆ ಅರಳಿ ಮಾಧ್ಯಮ ಅಂದರೆ ಇದಲ್ಲಾ ಇದು ಎಂದು ಅರಹುತ್ತಿರುವ ನಿಷ್ಕಲ್ಮಷ ನಿಷ್ಕಪಟ ಈ ಮಾಧ್ಯಮ ಕಂಡು.ಹೃದಯಾಂತರಾಳದ ಸಲಾಂ ಬಸವ ಶರಣು.
ಗುಡಿಬಂಡೆ ಫಯಾಜ್ ಅಹಮದ್ ಖಾನ್
ರಾಜ್ಯಾಧ್ಯಕ್ಷರು. ಕಸಾಪ
ಕರುನಾಡು ಸಾಹಿತ್ಯ ಪರಿಷತ್ತು.