Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮಾಲೂರು: ಮೂರು ಪಕ್ಷಗಳ ಸಮಬಲದ ಸ್ಪರ್ಧೆ ಸಾಧ್ಯತೆ; ಬಿಜೆಪಿಯಲ್ಲಿ ಟಿಕೆಟ್‌ಗಾಗಿ...

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮಾಲೂರು: ಮೂರು ಪಕ್ಷಗಳ ಸಮಬಲದ ಸ್ಪರ್ಧೆ ಸಾಧ್ಯತೆ; ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಪೈಪೋಟಿ

- Advertisement -
- Advertisement -

ಬೆಂಗಳೂರಿನ ಪಕ್ಕದಲ್ಲಿರುವ ಕೋಲಾರ ಜಿಲ್ಲೆಗೆ ಸೇರಿರುವ ಮಾಲೂರು ವಿಧಾನಸಭಾ ಕ್ಷೇತ್ರ ಶಿಲ್ಪಕಲಾ ಕೆತ್ತನೆಗೆ ಹೆಸರುವಾಸಿ. ಯಾವುದೇ ದೇವಸ್ಥಾನಕ್ಕೆ ಬೇಕಾದ ದೇವರ ವಿಗ್ರಹ ಸೇರಿದಂತೆ ಇತರ ಕೆತ್ತನೆಗಳಿಗೆ ಮಾಲೂರಿನ ಶಿವಾರಪಟ್ಟಣದ ಮೊರೆಹೋಗಲಾಗುತ್ತದೆ. ಆದರೆ ಈಗ ತಾಲ್ಲೂಕಿನಲ್ಲಿ ಆ ಕೆಲಸಕ್ಕಿಂತಲೂ ರಿಯಲ್ ಎಸ್ಟೇಟ್ ಮತ್ತು ಕೈಗಾರಿಕೆಗಳ ಸದ್ದು ಜೋರಾಗಿ ಕೇಳಿಬರುತ್ತಿದೆ. ಬ್ರಿಕ್ಸ್, ಇಟ್ಟಿಗೆ ಫ್ಯಾಕ್ಟರಿಗಳು ಸಾಕಷ್ಟು ತಲೆಯೆತ್ತಿವೆ. ಅದರೊಟ್ಟಿಗೆ ಎಲ್ಲೆಂದರಲ್ಲಿ ಜಲ್ಲಿ ಕ್ರಷರ್‌ಗಳು ಕೊರೆಯುತ್ತಿದ್ದು ಅಕ್ರಮ ಗಣಿಗಾರಿಕೆಯ ಆರೋಪಗಳು ಕೇಳಿಬರುತ್ತಿವೆ. ಇಂತಹ ಮಾಲೂರಿನಲ್ಲಿ 2023ರ ವಿಧಾನಸಭಾ ಚುನಾವಣೆಗೆ ಮೂರು ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ.

ರಾಜಕೀಯ ಇತಿಹಾಸ

ಮಾಲೂರು ಕಾಂಗ್ರೆಸ್ ಪಕ್ಷದ ಭದ್ರಕೋಟೆ ಆಗಿತ್ತು ಅಂತಲೇ ಹೇಳಬಹುದು. 14 ವಿಧಾನಸಭಾ ಚುನಾವಣೆಗಳಲ್ಲಿ 8 ಬಾರಿ ಕಾಂಗ್ರೆಸ್ ಜಯಗಳಿಸಿದೆ. ಜನತಾಪಕ್ಷ, ಜನತಾದಳ, ಜೆಡಿಎಸ್ ತಲಾ ಒಂದೊಂದು ಬಾರಿ ಗೆಲುವು ಸಾಧಿಸಿದರೆ ಬಿಜೆಪಿ ಎರಡು ಬಾರಿ ಜಯಭೇರಿ ಬಾರಿಸಿದೆ. ಒಮ್ಮೆ ಸ್ವತಂತ್ರ ಅಭ್ಯರ್ಥಿ ಗೆಲುವು ಕಂಡಿದ್ದಾರೆ. ವಿಶೇಷ ಎಂದರೆ ಆರು ಚುನಾವಣೆಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ರನ್ನರ್ ಅಪ್ ಆಗಿದ್ದಾರೆ.

1957ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ ಲಿಂಗಾರೆಡ್ಡಿಯವರು ಗೆಲುವು ಸಾಧಿಸಿದ್ದರು. ಆದರೆ 1962ರಲ್ಲಿ ಅವರು ಸ್ವತಂತ್ರ ಅಭ್ಯರ್ಥಿ ಎಸ್.ವಿ ರಾಮೇಗೌಡರವರ ಎದುರು ಮಣಿದರು. 1967ರ ಚುನಾವಣೆ ವೇಳೆಗೆ ಮತ್ತೆ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ ಲಿಂಗಾರೆಡ್ಡಿಯವರು ಸ್ವತಂತ್ರ ಅಭ್ಯರ್ಥಿ ಎಂ.ಆರ್ ರಾಮಣ್ಣನವರ ಎದುರು ಆಯ್ಕೆಯಾಗಿ ಎರಡನೇ ಬಾರಿಗೆ ಶಾಸಕರಾಗಿದ್ದರು. 1972ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎ.ವಿ ಮುನಿಸ್ವಾಮಿಯವರಿಗೆ ಟಿಕೆಟ್ ನೀಡಿತು. ಇದರಿಂದ ಅಸಮಾಧಾನಗೊಂಡ ಹೆಚ್.ಸಿ ಲಿಂಗಾರೆಡ್ಡಿಯವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಎ.ವಿ ಮುನಿಸ್ವಾಮಿಯವರನ್ನು ಸೋಲಿಸಲು ಸಾಧ್ಯವಾಗಲಿಲ್ಲ.

1978ರ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷದ ಪಿ.ಎನ್ ರೆಡ್ಡಿಯವರು ಜನತಾಪಕ್ಷದ ಲಕ್ಷ್ಮಿದೇವಿ ರಾಮಣ್ಣನವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದರು. ಆನಂತರದ 5 ಚುನಾವಣೆಗಳು ಎ.ನಾಗರಾಜು ಮತ್ತು ದ್ಯಾವರಪ್ಪನವರ ನಡುವಿನ ಹಣಾಹಣಿಗೆ ಸಾಕ್ಷಿಯಾಯಿತು. ಒಮ್ಮೆ ಅವರು, ಒಮ್ಮೆ ಇವರು ಎಂಬಂತೆ ಶಾಸಕರಾಗಿ ಆಯ್ಕೆಯಾಗಿದ್ದರು. 1983ರಲ್ಲಿ ಕಾಂಗ್ರೆಸ್ ಪಕ್ಷದ ಎ.ನಾಗರಾಜುರವರು ಸ್ವತಂತ್ರ ಅಭ್ಯರ್ಥಿ ದ್ಯಾವರಪ್ಪರನ್ನು ಮಣಿಸಿ ಗೆಲುವು ಸಾಧಿಸಿದರು. ಆದರೆ ಎರಡು ವರ್ಷಗಳಲ್ಲಿ ನಡೆದ 1985ರ ಚುನಾವಣೆಯಲ್ಲಿ ದ್ಯಾವರಪ್ಪನವರು ಜನತಾದಳ ಪಕ್ಷದಿಂದ ಕಣಕ್ಕಿಳಿದು ಕಾಂಗ್ರೆಸ್‌ನ ಎ.ನಾಗರಾಜು ಎದುರು ಜಯಕಂಡರು. 1989ರಲ್ಲಿ ಎ.ನಾಗರಾಜು ಗೆಲುವು ಕಂಡರೆ 1994ರಲ್ಲಿ ದ್ಯಾವರಪ್ಪನವರು ಜಯ ಸಾಧಿಸಿದರು. 1999ರಲ್ಲಿ ಮತ್ತೆ ಎ.ನಾಗರಾಜು ಗೆಲುವು ಸಾಧಿಸಿ ಮೂರನೇ ಬಾರಿಗೆ ಶಾಸಕರೆನಿಸಿಕೊಂಡರು.

ಎಸ್.ಎನ್.ಕೃಷ್ಣಯ್ಯ ಶೆಟ್ಟಿ

2004 ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯಿತು. ಎಸ್.ಎನ್.ಕೃಷ್ಣಯ್ಯ ಶೆಟ್ಟಿಯವರು ಕಾಂಗ್ರೆಸ್ ಪಕ್ಷದ ಎ.ನಾಗರಾಜುರವರನ್ನು 26,856 ಮತಗಳ ಅಂತರದಿಂದ ಮಣಿಸಿ ಶಾಸಕರಾದರು. ಅಲ್ಲದೆ 2008ರ ಚುನಾವಣೆಯಲ್ಲಿಯೂ ಜೆಡಿಎಸ್ ಪಕ್ಷದ ಆರ್ ಪ್ರಭಾಕರ್ ಎದುರು 52,401 ಮತಗಳ ಭಾರೀ ಅಂತರದಿಂದ ವಿಜಯಪತಾಕೆ ಹಾರಿಸಿ ಮಾಲೂರು ಕ್ಷೇತ್ರದಲ್ಲಿ ಸತತ ಎರಡನೇ ಬಾರಿಗೆ ಅವರು ಶಾಸಕರಾದರು. ಮುಜರಾಯಿ ಇಲಾಖೆ ಸಚಿವರೂ ಆಗಿದ್ದ ಅವರು ಕೆ.ಆರ್ ಪುರಂ ಬಳಿಯ ರಾಚೇನಹಳ್ಳಿಯಲ್ಲಿ ಬಿಡಿಎ ವಶಪಡಿಸಿಕೊಂಡ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ ಆರೋಪದ ಮೇಲೆ ಯಡಿಯೂರಪ್ಪನವರೊಂದಿಗೆ ಜೈಲು ವಾಸ ಅನುಭವಿಸಿದ್ದರು. ಅಲ್ಲದೆ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಸಾಲ ಪಡೆದ ಆರೋಪವನ್ನು ಸಹ ಎದುರಿಸಿದ್ದರು.

ಜೈಲಿನಿಂದ ಹೊರಬಂದಾಗ ಕೃಷ್ಣಯ್ಯ ಶೆಟ್ಟಿಯವರಿಗೆ 2013ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಲು ಸತಾಯಿಸಿತ್ತು. ಅಂತಿಮ ಕ್ಷಣದಲ್ಲಿ ಬಿ ಫಾರಂ ನೀಡಿದರೂ ಅದನ್ನು ಹರಿದು ಬಿಸಾಕಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಈ ಎಲ್ಲಾ ಎಡವಟ್ಟಿನಿಂದಾಗಿ ಅವರಿಗೆ ಹ್ಯಾಟ್ರಿಕ್ ಗೆಲುವು ಸಾಧ್ಯವಾಗಲಿಲ್ಲ. ಆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಕೆ.ಎಸ್ ಮಂಜುನಾಥ್ ಗೌಡ ಜಯಕಂಡರು. ಇತ್ತೀಚಿನ 2018ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಕೆ.ಎಸ್ ಮಂಜುನಾಥ್‌ಗೌಡರರಿಗೆ ಟಿಕೆಟ್ ನೀಡಿತು. ಕೃಷ್ಣಯ್ಯಶೆಟ್ಟಿಯವರು ಕಾಂಗ್ರೆಸ್ ಪಡಸಾಲೆಗೆ ಹೋಗಿ, ನಂತರ ಬಿಜೆಪಿಗೆ ವಾಪಸಾಗಿ ಟಿಕೆಟ್ ಗಿಟ್ಟಿಸಿಕೊಂಡರು. ಕಾಂಗ್ರೆಸ್ ಪಕ್ಷವು ಕೆ.ವೈ ನಂಜೇಗೌಡರಿಗೆ ಟಿಕೆಟ್ ನೀಡಿತು. ಮೂರು ಪಕ್ಷಗಳ ನಡುವಿನ ಹಣಾಹಣಿಯಲ್ಲಿ ಕಾಂಗ್ರೆಸ್‌ನ ಕೆ.ವೈ ನಂಜೇಗೌಡರವರು ಸುಲಭ ಜಯ ಸಾಧಿಸಿದರು.

ಜಾತಿವಾರು ಅಂದಾಜು ಮತಗಳು

ಮಾಲೂರು ಕ್ಷೇತ್ರದಲ್ಲಿ ಎಸ್‌ಸಿ-ಎಸ್‌ಟಿ ಮತಗಳು ಅಧಿಕವಾಗಿದ್ದು 65,000ದಷ್ಟಿವೆ. ಒಕ್ಕಲಿಗ ಸಮುದಾಯದ್ದು ಕೂಡ 60,000ದಷ್ಟಿವೆ. ಇತರೆ ಹಿಂದುಳಿದ ವರ್ಗದವರ 50,000 ಮತಗಳಿದ್ದರೆ, ಮುಸ್ಲಿಮರು 15,000ಕ್ಕೂ ಹೆಚ್ಚು ಮತಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.

ಸದ್ಯದ ಪರಿಸ್ಥಿತಿ

ಕಾಂಗ್ರೆಸ್: ಕೆ.ವೈ ನಂಜೇಗೌಡರು ಜನರ ಕೈಗೆ ಸಿಗುತ್ತಾರೆ ಎಂಬ ಮಾತಿದೆ. ಮಾಲೂರು ಟೌನ್ ಅಭಿವೃದ್ಧಿಗೆ ಅನುದಾನ ತಂದಿದ್ದಾರೆ. ಕೋಲಾರ-ಮಾಲೂರು ರಾಜ್ಯ ಹೆದ್ದಾರಿ ಡಾಂಬರೀಕರಣ ಮತ್ತು ತಮಿಳುನಾಡಿನ ಹೊಸೂರಿಗೆ 4 ಪಥಗಳ ರಸ್ತೆ ರಿಪೇರಿ ಮಾಡಿಸಿದ್ದಾರೆ. ಗಂಗಾ ಕಲ್ಯಾಣ ಯೋಜನೆ ಜಾರಿಯಾಗುತ್ತಿದೆ, ಕೆ.ಸಿ ವ್ಯಾಲಿ ನೀರು ತಂದಿದ್ದರಿಂದ ಒಳ್ಳೆಯ ಅಭಿಪ್ರಾಯವಿದೆ.

ಹಾಲಿ ಶಾಸಕ ಕೆ.ವೈ ನಂಜೇಗೌಡ

ಆದರೆ ಅಂಬೇಡ್ಕರ್ ಭವನ ಉದ್ಘಾಟನೆಯಾಗಿಲ್ಲ, ತಾಲ್ಲೂಕಿನಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ಸಾಧ್ಯವಾಗಿಲ್ಲ, ಹಳ್ಳಿಗಳ ರಸ್ತೆಗಳು ಸಮರ್ಪಕವಾಗಿಲ್ಲ, ನಿರೀಕ್ಷಿಸಿದ ಅಭಿವೃದ್ದಿ ಕಂಡಿಲ್ಲ ಎಂಬ ಟೀಕೆಗಳ ಸಹ ಅವರ ಮೇಲಿದೆ.

ಇದೆಲ್ಲದರ ಹೊರತಾಗಿಯೂ ಶಾಸಕರು ಎಲ್ಲಾ ಕಡೆ ಓಡಾಡುತ್ತಿದ್ದಾರೆ, ದಲಿತರು ಮತ್ತು ಮುಸ್ಲಿಮರೊಟ್ಟಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂಬಿತ್ಯಾದಿ ಕಾರಣಗಳಿಂದ ಮತ್ತೊಂದು ಅವಧಿಗೆ ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡುವ ಯೋಚನೆಯಲ್ಲಿದೆ.

ಜೆಡಿಎಸ್: ಮಾಜಿ ಶಾಸಕ ಮಂಜುನಾಥ್ ಗೌಡರವರು 2019ರಿಂದಲೇ ಜೆಡಿಎಸ್ ಪಕ್ಷದೊಂದಿಗೆ ಮುನಿಸು ಹೊಂದಿದ್ದರು. ಆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿಯವರ ಪರ ಕೆಲಸ ಮಾಡಿದರು. ಕೊನೆಗೆ ಯಾವಾಗ ಪಕ್ಷ ತೊರೆದು ಬಿಜೆಪಿ ಸೇರಿದರೋ ಆಗ ಜೆಡಿಎಸ್ ಪಕ್ಷವು ಜಿ.ಇ ರಾಮೇಗೌಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರಿಗೆ ಟಿಕೆಟ್ ಘೋಷಿಸಿದೆ. ಸ್ಥಳೀಯರಾದ ರಾಮೇಗೌಡರು ಈ ಮುಂಚೆ ಬಿಜೆಪಿಯಲ್ಲಿದ್ದರು. ಮಾಸ್ತಿಯ ಜಿ.ಪಂ ಸದಸ್ಯರಾಗಿದ್ದರು. 2013ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆನಂತರ ಕಾಂಗ್ರೆಸ್ ಸೇರಿದ್ದ ಅವರು ಸದ್ಯ ಜೆಡಿಎಸ್‌ನಲ್ಲಿದ್ದಾರೆ. ಅವರೆ ಅಭ್ಯರ್ಥಿ ಎಂದು ಹೆಚ್.ಡಿ ಕುಮಾರಸ್ವಾಮಿಯವರು ಈಗಾಗಲೇ ಘೋಷಿಸಿದ್ದಾರೆ. ರಾಮೇಗೌಡರು ಸಮಾಜಸೇವೆ, ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆಯಂತಹ ಕೆಲಸಗಳನ್ನು ಮಾಡುತ್ತಾ ಯುವಜನರನ್ನು ಸೆಳೆಯುವತ್ತ ಗಮನ ಹರಿಸಿದ್ದಾರೆ.

ಜಿ.ಇ ರಾಮೇಗೌಡ

ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಪೈಪೋಟಿ

ಮಾಲೂರಿನಲ್ಲಿ ಟಿಕೆಟ್‌ಗಾಗಿ ಪ್ರಬಲ ಸ್ಪರ್ಧೆಯಿರುವ ಪಕ್ಷವೆಂದರೆ ಅದು ಬಿಜೆಪಿ. ಬಿಜೆಪಿಯಿಂದ ಎರಡು ಭಾರಿ ಶಾಸಕರಾಗಿದ್ದ ಕೃಷ್ಣಯ್ಯಶೆಟ್ಟಿಯವರು ಮಾಲೂರಿನಲ್ಲಿ ಸ್ಪರ್ಧಿಸುವ ಇಚ್ಛೆ ಕೈಬಿಟ್ಟು ಬೆಂಗಳೂರಿನ ಗಾಂಧಿನಗರ ಕ್ಷೇತ್ರದತ್ತ ಮುಖ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಜೆಡಿಎಸ್‌ನಲ್ಲಿದ್ದ ಮಾಜಿ ಶಾಸಕರಾದ ಕೆ.ಎಸ್ ಮಂಜುನಾಥ್ ಗೌಡರು ಬಿಜೆಪಿ ಸೇರಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ತಮ್ಮ ಅಭಿಮಾನಿಗಳು, ಅನುಯಾಯಿಗಳನ್ನು ಕಟ್ಟಿಕೊಂಡು ಕಳೆದ ಒಂದು ವರ್ಷದಿಂದ ಬಿಜೆಪಿ ಸಂಘಟನೆಯ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಕೆ.ಎಸ್ ಮಂಜುನಾಥ್ ಗೌಡ

ಕೋಡಿಹಳ್ಳಿ ಮಂಜುನಾಥ್‌ಗೌಡರು ಬಿಜೆಪಿ ಸೇರುವುದಕ್ಕೆ ಬಿಜೆಪಿ ಮುಖಂಡರಾದ ಪ್ರಭಾಕರ್, ವೆಂಕಟೇಶ್ ಸೇರಿ ಒಂದಷ್ಟು ಮೂಲ ಬಿಜೆಪಿಗರು ವಿರೋಧ ಮಾಡಿದ್ದುಂಟು.

ಹೂಡಿ ವಿಜಯ್ ಕುಮಾರ್‌

ಬಿಜೆಪಿಯ ಯುವ ಮುಖಂಡರಾದ, ಮಾಜಿ ಬಿಬಿಎಂಪಿ ಸದಸ್ಯರಾದ ಹೂಡಿ ವಿಜಯ್ ಕುಮಾರ್‌ರವರು ಸಹ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದು, ಅದಕ್ಕಾಗಿ ಸಮಾಜಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪಕ್ಷ ಕಟ್ಟುತ್ತಿರುವ ಮೂಲ ಬಿಜೆಪಿಗರಾದ ತಮಗೆ ಟಿಕೆಟ್ ನೀಡಬೇಕೆಂಬುದು ಅವರ ಒತ್ತಾಯ. ಹಾಗಾಗಿ ಟಿಕೆಟ್‌ಗಾಗಿ ಮಂಜುನಾಥ್‌ಗೌಡ ಬಣ ಮತ್ತು ಹೂಡಿ ವಿಜಯ್ ಕುಮಾರ್ ಬಣದ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಮಂಜುನಾಥ್ ಗೌಡರ ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದ ವಿಜಯ್ ಕುಮಾರ್‌ರವರು, ಅಂದೇ ಆಯುಷ್ಮಾನ್ ಭಾರತ್ ಕಾರ್ಡುಗಳ ವಿತರಣೆ ಕಾರ್ಯಕ್ರಮ ಏರ್ಪಡಿಸಿ ಸಚಿವರುಗಳಾದ ಶೋಭಾ ಕರಂದ್ಲಾಜೆ, ಎಂಟಿಬಿ ನಾಗರಾಜ್, ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಕರೆಸಿದ್ದರು.

ಕ್ಷೇತ್ರದ ಸಮಸ್ಯೆಗಳು

ಸಮರ್ಪಕ ಕುಡಿಯುವ ನೀರು ದಕ್ಕಿಲ್ಲ. ರಸ್ತೆಗಳು ವ್ಯವಸ್ಥಿತವಾಗಿಲ್ಲ. ಸರ್ಕಾರಿ ಶಾಲಾ ಕಾಲೇಜುಗಳು ಅಭಿವೃದ್ದಿಯಾಗಿಲ್ಲ. ಬಹಳಷ್ಟು ಜನರಿಗೆ ಇನ್ನೂ ಹಕ್ಕುಪತ್ರಗಳು ಸಿಕ್ಕಿಲ್ಲ. ಜಲ್ಲಿ ಕ್ರಶರ್‌ಗಳು ನಿರಂತರ ತಲೆಯೆತ್ತುತ್ತಿದ್ದು ಅವುಗಳಿಂದ ಹೊಮ್ಮುವ ಭಾರಿ ಧೂಳು ಹಾನಿಕಾರಕವಾಗಿದೆ. ಮಾರ್ಕಂಡಯ್ಯ ಡ್ಯಾಮ್ ಸುತ್ತಮುತ್ತಲೇ ಕ್ರಶರ್‌ಗಳ ಕೆಲಸ ನಡೆಯುತ್ತಿದ್ದು ಡ್ಯಾಮ್‌ಗೆ ಅಪಾಯ ಕಾದಿದೆ ಎಂಬ ದೂರುಗಳಿವೆ.

2023ರ ಚುನಾವಣೆ

ಕಾಂಗ್ರೆಸ್‌ನಿಂದ ಹಾಲಿ ಶಾಸಕ ಕೆ.ವೈ ನಂಜೇಗೌಡರವರಿಗೆ ಟಿಕೆಟ್ ದೊರಕುವ ಸಾಧ್ಯತೆಗಳಿವೆ. ಜೆಡಿಎಸ್ ರಾಮೇಗೌಡರಿಗೆ ಟಿಕೆಟ್ ಘೋಷಿಸಿದೆ. ಇನ್ನು ಬಿಜೆಪಿಯಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕೆ.ಎಸ್ ಮಂಜುನಾಥ್ ಗೌಡರು ಟಿಕೆಟ್ ರೇಸ್‌ನಲ್ಲಿ ಮುಂದಿದ್ದಾರೆ. ಹೂಡಿ ವಿಜಯ್ ಕುಮಾರ್ ಜೊತೆಗಿದ್ದಾರೆ. ಎಲ್ಲರೂ ಒಕ್ಕಲಿಗ ಸಮುದಾಯದವರಾಗಿದ್ದಾರೆ. ಟಿಕೆಟ್ ತಪ್ಪಿದವರನ್ನು ಬಿಜೆಪಿ ಹೇಗೆ ಸಮಾಧಾನ ಮಾಡುತ್ತದೆ ಎಂಬುದನ್ನು ನೋಡಬೇಕಿದೆ.

ಎಲ್ಲಾ ಅಭ್ಯರ್ಥಿಗಳು ಒಕ್ಕಲಿಗರೇ ಆಗಿರುವುದರಿಂದ ಒಕ್ಕಲಿಗ ಮತಗಳು ಹಂಚಿಹೋಗುವ ಸಾಧ್ಯತೆಯಿದೆ. ಹಾಗಾಗಿ ದಲಿತರು, ಮುಸ್ಲಿಮರು ಮತ್ತು ಇತರ ಹಿಂದುಳಿದ ಮತಗಳು ಯಾರ ಕೈಹಿಡಿಯಲಿವೆಯೊ ಅವರಿಗೆ ಗೆಲುವಿನ ಸಾಧ್ಯತೆ ಹೆಚ್ಚಾಗಿದೆ.


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕೆಜಿಎಫ್: ಪರ್ಯಾಯ ಪಕ್ಷಗಳ ನೆಲೆಯಲ್ಲೀಗ ಕಾಂಗ್ರೆಸ್ ಮುಂಚೂಣಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...