ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಸಿಡಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ನೀಡಿದ್ದ ದೂರನ್ನು ಆಧರಿಸಿ FIR ದಾಖಲಿಸಲು ವಿಫಲರಾಗಿದ್ದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಡಿಸಿಪಿ ಅನುಚೇತನ್ ಮತ್ತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಅಧಿಕಾರಿ ಮಾರುತಿ.ಬಿ ವಿರುದ್ಧ ಜನಾಧಿಕಾರ ಸಂಘರ್ಷ ಪರಿಷತ್ ಮತ್ತೆ ಖಾಸಗಿ ದೂರು (ಪಿಸಿಆರ್) ನೀಡಿದೆ.
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ, ಕೆಲಸ ಕೇಳಿಕೊಂಡು ಬಂದಿದ್ದ ಯುವತಿಯ ಮೇಲೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಕಬ್ಬನ್ ಪಾಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಸಂತ್ರಸ್ತೆ ಪರ ವಕೀಲ ಜಗದೀಶ್ ದೂರು ನೀಡಿದ ನಂತರ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಈಗ ದಿನೇಶ್ ಕಲ್ಲಹಳ್ಳಿ ದೂರನ್ನು ಆಧರಿಸಿಕೊಂಡು ಜನಾಧಿಕಾರ ಸಂಘರ್ಷ ಪರಿಷತ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಡಿಸಿಪಿ ಅನುಚೇತನ್ ಮತ್ತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಅಧಿಕಾರಿ ಮಾರುತಿ.ಬಿ ವಿರುದ್ಧ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ದೂರು ದಾಖಲಿಸಿದೆ. ಈಗಾಗಲೇ ಕಳೆದ ಮಾರ್ಚ್ 17 ರಂದು ಕಬ್ಬನ್ ಪಾರ್ಕ್ ಠಾಣೆಯಲ್ಲಿ ಒಮ್ಮೆ ದೂರು ದಾಖಲಿಸಿದ್ದರು.
ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಕೊರೊನಾ ಎಂದ ಭೈರತಿ ಬಸವರಾಜ್, ಎಸ್‌ಐಟಿ ವಿಚಾರಣೆಗೆ ಗೈರು ಸಾಧ್ಯತೆ
ಈ ಕುರಿತು ನಾನುಗೌರಿ.ಕಾಂ ಜೊತೆಗೆ ಮಾತನಾಡಿರುವ ಜನಾಧಿಕಾರ ಸಂಘರ್ಷ ಪರಿಷತ್ ಸಹ ಅಧ್ಯಕ್ಷ ಆದರ್ಶ ಐಯರ್, “ದಿನೇಶ್ ಕಲ್ಲಹಳ್ಳಿ ಅವರು ದೂರು ನೀಡಿದ ಕೂಡಲೇ ನಿರ್ಭಯಾ ಆಕ್ಟ್ ಪ್ರಕಾರ ತಕ್ಷಣ ಎಫ್‌ಐಆರ್ ದಾಖಲಿಸಬೇಕಿತ್ತು. ಆದರೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಡಿಸಿಪಿ ಅನುಚೇತನ್ ಮತ್ತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಅಧಿಕಾರಿ ಮಾರುತಿ.ಬಿ ಅವರು ಈ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ. ಸಿಆರ್‌ಪಿಸಿ ಸೆಕ್ಷನ್ 36 ಪ್ರಕಾರ ಆಯುಕ್ತರಿರಲಿ, ಡಿಸಿಪಿ ಇರಲಿ ಅವರಿಗೆ FIR ದಾಖಲಿಸುವ ಭಾದ್ಯತೆ ಇದೆ. ಆದರೆ ಇವರು ಈ ಸೆಕ್ಷನ್ ಅನ್ನು ಉಲ್ಲಂಘಿಸಿದ್ದಾರೆ” ಎಂದರು.

ಮುಂದುವರೆದು “ಪ್ರಕರಣದ ಕತೆ ಏನೇ ಇರಲಿ. ಆದರೆ ದೂರು ನೀಡಿದ ತಕ್ಷಣ ಎಫ್‌ಐಆರ್ ದಾಖಲಿಸುವುದು ಅವರ ಭಾದ್ಯತೆ. ಅದಲ್ಲಿ ವಿಫಲರಾದರೆ ಸೆಕ್ಷನ್ 166 (ಎ) ಪ್ರಕಾರ ಕ್ರಿಮಿನಲ್ ಆಕ್ಷನ್ ತೆಗೆದುಕೊಳ್ಳಬಹುದು. ಹಾಗಾಗಿ ನಾವು ಇದರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದೇವೆ” ಎಂದಿದ್ದಾರೆ.
“ದಿನೇಶ್ ಕಲ್ಲಹಳ್ಳಿ ದೂರು ನೀಡಿ 25 ದಿನಗಳಾಗಿದ್ದೂ ಅವರು FIR ದಾಖಲಿಸಿರಲಿಲ್ಲ. ಹೀಗಾಗಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಮಾರ್ಚ್ 17 ರಂದು ದೂರು ದಾಖಲಿಸಿದ್ದೇವು. ಅವರು ಅದನ್ನು ತೆಗೆದುಕೊಂಡಿರಲಿಲ್ಲ. ನಂತರ ಪೋಸ್ಟ್, ಈ-ಮೇಲ್ ಮೂಲಕ ಕಳಿಸಿದ್ದೆವು. ಕಳೆದ ತಿಂಗಳು ಈ ದೂರು ಸರಿಯಿಲ್ಲ ಎಂದು ಹೇಳಿ ತಮ್ಮ ಮೇಲಿನ ಪ್ರಕರಣವನ್ನು ಅವರೇ ಮುಕ್ತಾಯಗೊಳಿಸಿದ್ದಾರೆ. ಹೀಗಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ (ನೃಪತುಂಗಾ ರಸ್ತೆಯ 8 ನೇ ಎಸಿಎಂಎಂ) ಮತ್ತೆ ದೂರು ದಾಖಲಿಸಿದೆ. ಮುಂದಿನ ವಿಚಾರಣೆ ಏಪ್ರಿಲ್ 16 ರಂದು ನಡೆಯಲಿದೆ” ಎಂದು ಪರಿಷತ್ ಸಹ ಅಧ್ಯಕ್ಷ ಆದರ್ಶ ಐಯರ್ ತಿಳಿಸಿದ್ದಾರೆ.
ಇದನ್ನೂ ಓದಿ: ಸಿಡಿ ಪ್ರಕರಣ: ನಗರ ಪೊಲೀಸ್ ಆಯುಕ್ತ ಕಮಲ್ ಪಂತ್‌ಗೆ ಪತ್ರ ಬರೆದ ಸಂತ್ರಸ್ತೆ
ಪ್ರಕರಣದ ತನಿಖೆಗೆ ವಿಷೇಶ ತನಿಖಾ ತಂಡ ರಚಿಸಲಾಗಿದ್ದು, ಸಂತ್ರಸ್ತೆ ಕೂಡ ಬಹಿರಂಗವಾಗಿ ಕಾಣಿಸಿಕೊಂಡು ತನಿಖೆಗೆ ಸಹಕರಿಸುತ್ತಿದ್ದಾರೆ. ಆದರೆ ಪ್ರಕರಣದಲ್ಲಿ ಅತ್ಯಾಚಾರ ಆರೋಪಿಯಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೊರೊನಾ ಸೋಂಕಿಗೆ ಒಳಗಾಗಿದ್ದೇನೆ ಎಂದು ತಿಳಿಸಿ ವಿಚಾರಣೆಗೆ ಗೈರಾಗಿದ್ದಾರೆ. ಈ ನಡುವೆ ಪೊಲೀಸ್ ಅಧಿಕಾರಿಗಳ ವಿರುದ್ಧ ಜನಾಧಿಕಾರ ಸಂಘರ್ಷ ಪರಿಷತ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ದೂರು ದಾಖಲಿಸಲು ಹೊರಟಿರುವುದು ಸಿಡಿ ಪ್ರಕರಣಕ್ಕೆ ಮತ್ತೊಂದು ಸ್ವರೂಪ ನೀಡಿದೆ.
ಜನಾಧಿಕಾರ ಸಂಘರ್ಷ ಪರಿಷತ್ ನೀಡಿರುವ ದೂರಿನ ಪ್ರತಿ ಓದಲು ಇಲ್ಲಿ ಕ್ಲಿಕ್ ಮಾಡಿ.
PCR CoP DCP PI 166AIPC Annexures PresentationIndex by naanugauri on Scribd
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಮಹಾನಾಯಕ ಪದ ಬಳಕೆಗೆ ಪ್ರಜ್ಞಾವಂತರ ವಿರೋಧ


