ಜಂಗಲ್ ಬಚಾವೋ (ಕಾಡನ್ನು ಉಳಿಸಿ) ಎಂಬುದು ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ 100 ಮಹಿಳೆಯರ ಧ್ಯೇಯವಾಕ್ಯ. ಆಧುನೀಕರಣದ ಹೆಸರಿನಲ್ಲಿ ನಡೆಯುತ್ತಿರುವ ಕ್ಷಿಪ್ರ ಅರಣ್ಯನಾಶದಿಂದ ಆತಂಕಕ್ಕೊಳಗಾಗಿರುವ ಈ ಮಹಿಳೆಯರು ತಮ್ಮ ಪ್ರದೇಶದಲ್ಲಿ ಸುಮಾರು ಒಂಬತ್ತು ಎಕರೆ ಅರಣ್ಯ ಭೂಮಿಯನ್ನು ರಕ್ಷಿಸಲು ಹೋರಾಟಕ್ಕಿಳಿದಿದ್ದಾರೆ.
ಈ ಮಹಿಳೆಯರು ತಮ್ಮ ಸುತ್ತಲಿನ ಪ್ರದೇಶಗಳಲ್ಲಿ ಮರಗಳನ್ನು ಕಡಿಯದಂತೆ, ಕಾಡನ್ನು ಉಳಿಸುವಂತೆ ಜಾಗೃತಿ ಅಭಿಯಾನವನ್ನು ಸಹ ನಡೆಸುತ್ತಿದ್ದಾರೆ. ಇದರಿಂದ, ಹೆಚ್ಚಿನ ಜನರು ಅವರೊಂದಿಗೆ ಸೇರಿಕೊಳ್ಳುತ್ತಿದ್ದಾರೆ. ಇದನ್ನು ಜಂಗಲ್ ಬಚಾವೋ ಅಭಿಯಾನ ಎಂದು ಕರೆಯಲಾಗುತ್ತದೆ.
ಏಳು ಸ್ವಸಹಾಯ ಗುಂಪುಗಳಿಗೆ (ಎಸ್‌ಎಚ್‌ಜಿ) ಸೇರಿದ ಒಟ್ಟು 104 ಮಹಿಳೆಯರು ಈ ಅಭಿಯಾನದ ಭಾಗವಾಗಿದ್ದಾರೆ. ಇವರೆಲ್ಲರೂ ಆನಂದಪುರ ಬ್ಲಾಕ್‌ನ ಮಹಿಷಗೆಡ ಗ್ರಾಮದವರು. ಇವರು ತಮ್ಮ ಆಂದೋಲನವನ್ನು ಜಾರ್ಖಂಡ್ ಸ್ಟೇಟ್ ಲೈವ್ಲಿಹುಡ್ ಪ್ರಮೋಷನ್ ಸೊಸೈಟಿಯ ಜೊತೆಗೆ ನಡೆಸುತ್ತಿದ್ದಾರೆ.
ಕಾಡು ಮತ್ತು ಪರಿಸರವನ್ನು ರಕ್ಷಿಸುವುದು ಜಂಗಲ್ ಬಚಾವೋ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ನಾಲ್ಕು ತಂಡಗಳಾಗಿ ಕಾರ್ಯನಿರ್ವಹಿಸುತ್ತಿರುವ ಈ ಮಹಿಳೆಯರು ಬೆಳಿಗ್ಗೆ 6 ರಿಂದ 9 ರವರೆಗೆ ಮತ್ತು ಸಂಜೆ 4 ರಿಂದ 6 ರವರೆಗೆ ಕಾಡಿನಲ್ಲಿ ಕಾವಲು ಕಾಯುತ್ತಾರೆ. ಬಿದಿರಿನ ಕೋಲುಗಳಿಂದ ಶಸ್ತ್ರಸಜ್ಜಿತವಾದ ಅವರು ಮರಗಳ ಎಣಿಕೆಯನ್ನು ಇಟ್ಟುಕೊಂಡು ಮರಗಳನ್ನು ಕಡಿಯುವುದರ ಮೇಲೆ ನಿಗಾ ಇಡುತ್ತಾರೆ.
ಇದನ್ನೂ ಓದಿ: Hijab Live | ಹಿಜಾಬ್ ಲೈವ್ | ಮತ್ತೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಕಾಡಿನಲ್ಲಿ ಯಾರಾದರೂ ಮರಗಳನ್ನು ಕಡಿಯುವುದು ಅಥವಾ ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವಾಗ ಸಿಕ್ಕಿಬಿದ್ದರೆ, ಮಹಿಳೆಯರು ಅವರಿಗೆ ದಂಡ ವಿಧಿಸುತ್ತಾರೆ. ಹೀಗಾಗಿ, ಅನಗತ್ಯವಾಗಿ ಮರಗಳನ್ನು ಕಡಿಯುವುದು ಕಡಿಮೆಯಾಗುತ್ತಿದ್ದು, ಅವರ ಕೆಲಸ ಫಲಿತಾಂಶವನ್ನು ನೀಡುತ್ತಿದೆ.
’ನಾವು ಕಾಡಿನ ರಕ್ಷಣೆಗಾಗಿ ನಮ್ಮನ್ನು ತೊಡಗಿಸಿಕೊಂಡಿದ್ದೇವೆ. ಗ್ರಾಮದ ಬಳಿ ಮರಗಳನ್ನು ಮನಬಂದಂತೆ ಕಡಿಯುತ್ತಿರುವುದನ್ನು ನಾವು ಗಮನಿಸಿದೆವು. ನಂತರ, ಮರಗಳನ್ನು ಉಳಿಸುವುದಕ್ಕಾಗಿ ಈ ನಿರ್ಧಾರ ತೆಗೆದುಕೊಂಡೆವು” ಎಂದು ಅಭಿಯಾನದ ನೇತೃತ್ವ ವಹಿಸಿರುವ ಸರೋಜ್ ಸೂರಿನ್ ಹೇಳುತ್ತಾರೆ.
“ಆಶ್ಚರ್ಯಕರವಾಗಿ, ಅಭಿಯಾನ ಆರಂಭವಾದ ಒಂದು ವರ್ಷದಲ್ಲಿ, ಮರಗಳನ್ನು ಕಡಿಯುವುದನ್ನು ಬಹುತೇಕ ನಿಲ್ಲಿಸಲಾಗಿದೆ. ಏಕೆಂದರೆ, ಮರಗಳನ್ನು ಕಡಿಯುವದನ್ನು ತಡೆಯಲು ನಾವು ಇರುತ್ತೇವೆ ಎಂದು ಎಲ್ಲರೂ ಅರಿತುಕೊಂಡಿದ್ದಾರೆ. ಸಾಮಾನ್ಯವಾಗಿ, ನಾವು ವಿವಿಧ ಪಾಳಿಗಳಲ್ಲಿ 25 ಗುಂಪುಗಳಲ್ಲಿ ಕಾರ್ಯ ನಿರ್ವಹಿಸುತ್ತೇವೆ” ಎಂದು ಹೇಳಿದ್ದಾರೆ.
“ಮರ ಕಡಿಯುವವರಿಗೆ 5 ಸಾವಿರ ದಂಡ ವಿಧಿಸುತ್ತೇವೆ. ಆಂತರಿಕ ಶಿಸ್ತು ಕಾಪಾಡುವುದಕ್ಕಾಗಿ, ಅರಣ್ಯವನ್ನು ಕಾಯಲು ತಮ್ಮ ಸರದಿಯನ್ನು ಬಿಟ್ಟು ಬಿಡುವ ಮಹಿಳೆಯರಿಗೆ 200 ರೂಪಾಯಿ ದಂಡವನ್ನೂ ಸಹ ವಿಧಿಸಲು ನಾವು ಒಮ್ಮತದಿಂದ ನಿರ್ಧರಿಸಿದ್ದೇವೆ. ದಂಡದ ಮೂಲಕ ಸಂಗ್ರಹಿಸಿದ ಹಣವನ್ನು ಮರಗಳನ್ನು ನೆಡಲು ಬಳಸಲಾಗುತ್ತದೆ” ಎಂದು ಅಭಿಯಾನದ ಸದಸ್ಯೆ ಸಬೀನಾ ಕಂದುಲ್ನಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಾತ್ರಿ ವೇಳೆ ಅಪರಿಚಿತರಿಂದ ಫೋನ್ ಕಾಲ್: ನಟಿ ಸಂಜನಾ ತರಾಟೆ


