Homeಕರ್ನಾಟಕಸುಡುಗಾಡುಸಿದ್ದರಿಗೆ ಅವಮಾನ: ಸಚಿವ ವಿ.ಸೋಮಣ್ಣ ವಿರುದ್ಧ ದೂರು ದಾಖಲು

ಸುಡುಗಾಡುಸಿದ್ದರಿಗೆ ಅವಮಾನ: ಸಚಿವ ವಿ.ಸೋಮಣ್ಣ ವಿರುದ್ಧ ದೂರು ದಾಖಲು

- Advertisement -
- Advertisement -

“ಸುಡುಗಾಡುಸಿದ್ದ ಮಾಡಿದ್ದನ್ನು ನಾವು ಸರಿ ಮಾಡಿದ್ದೇವೆ” ಎಂದು ವಸತಿ ಸಚಿವ ವಿ.ಸೋಮಣ್ಣ ನೀಡಿರುವ ಹೇಳಿಕೆಯ ವಿರುದ್ಧ ಕರ್ನಾಟಕ ರಾಜ್ಯ ಸುಡುಗಾಡುಸಿದ್ಧ ಮಹಾ ಸಂಘವು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗಕ್ಕೆ ದೂರು ನೀಡಿದೆ.

“ಸುಡುಗಾಡುಸಿದ್ದ ಮಾಡಿದ್ದನ್ನು ನಾವು ಸರಿ ಮಾಡಿದ್ದೇವೆ” ಎಂದು ರಾಜ್ಯ ಸರ್ಕಾರದ ವಸತಿ ಸಚಿವ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಅವರು ಯಾರ ಮೇಲೆಯೇ ನೀಡಿರಲಿ ಅಥವಾ ಯಾವ ಕಾರಣಕ್ಕೆ ನೀಡಿರಲಿ ಅದು ಸುಡುಗಾಡುಸಿದ್ದ ಸಮುದಾಯದ ಮೇಲೆ ಕಳಂಕ ನೀಡುವಂತಹ ಹೇಯ ಹೇಳಿಕೆಯಾಗಿದೆ” ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಹನುಮಂತಪ್ಪ ದೂರಿನಲ್ಲಿ ಆರೋಪಿಸಿದ್ದಾರೆ.

ಸುಡುಗಾಡುಸಿದ್ಧ ಸಮುದಾಯ ಈ ನೆಲದ ಅತ್ಯಂತ ಪ್ರಾಚೀನ ಸಮುದಾಯವಾಗಿದೆ. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿದ್ದು, ಪಾರಂಪರಿಕ ಸಿದ್ಧ ಔಷಧಿಯನ್ನು ನೀಡುತ್ತಾ ತಲೆತಲಾಂತರಗಳಿಂದ ಸಮಾಜದ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಬಂದಿದೆ. ನಾಡಿನಲ್ಲಿ ಸುಮಾರು 20 ಲಕ್ಷ ಜನರು ಈ ಪರಂಪರೆಯಿಂದ ಬಂದವರಾಗಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ನನ್ನ ಸಮುದಾಯದ ಕುರಿತು ಅತ್ಯಂತ ನೀಚವಾಗಿ ಮಾತನಾಡಿರುವುದರಿಂದ ನನ್ನ ಇಡೀ ಸಮುದಾಯಕ್ಕೆ ಜಾತಿ ನಿಂದನೆಯಾಗಿದೆ. ಅಪಾರ ಅವಮಾನ, ಮಾನನಷ್ಟ ಹಾಗೂ ಜನಾಂಗಕ್ಕೆ ಕಳಂಕ ಉಂಟಾಗಿದೆ. ಈ ಕಾರಣಕ್ಕೆ ತಪ್ಪಿತಸ್ಥ ವಿ.ಸೋಮಣ್ಣನವರ ವಿರುದ್ಧ ತೀವ್ರ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ವಿನಂತಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡುತ್ತಾ ವಿ.ಸೋಮಣ್ಣ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಹೇಳಿಕೆ ನೀಡಿದ್ದರು. “ಅವರ ಕಾಲದಲ್ಲಿ ಬರೀ ಘೋಷಣೆ ಆಗಿತ್ತು. ನಾವು ಮನೆ ಕಟ್ಟಿಕೊಡುತ್ತಿದ್ದೇವೆ. ಇದು ನಿರಂತರ ಪ್ರಕ್ರಿಯೆಯಾಗಿದೆ. ರಾಜಕಾರಣಕ್ಕಾಗಿ ನನ್ನ ಮೇಲೆ ಆರೋಪ ಮಾಡಬೇಡಿ” ಎನ್ನುತ್ತಾ, ಸುಡುಗಾಡು ಸಿದ್ಧ ಜಾತಿಯನ್ನು ಅಪಮಾನಿಸಿ ಹೇಳಿಕೆ ನೀಡಿದ್ದರು.

ಇದನ್ನೂ ಓದಿರಿ: ಬೆಂಗಳೂರು: ವಿಕಲಾಂಗ ಮಹಿಳೆಯ ಮೇಲೆ ಟ್ರಾಫಿಕ್‌ ಎಎಸ್‌ಐ ಹಲ್ಲೆ; ಮಹಿಳೆಯ ಮೇಲೆಯೇ ಪ್ರಕರಣ ದಾಖಲು!

ಬೈಗುಳಗಳಿಗೂ ಈ ಸಮುದಾಯಗಳೇ ಬೇಕಾ?: ಸಿ.ಎಸ್.ದ್ವಾರಕನಾಥ್‌

ವಿ.ಸೋಮಣ್ಣ ಅವರ ಹೇಳಿಕೆಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು, ಅಲೆಮಾರಿ ಬುಡಕಟ್ಟು ಮಹಾಸಭಾ ಗೌರವಾಧ್ಯಕ್ಷರೂ ಆದ ಸಿ.ಎಸ್.ದ್ವಾರಕನಾಥ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಅವರು, “ಯಾರನ್ನು ಬೈಯಬೇಕಾದರೂ ಸುಡುಗಾಡು ಸಿದ್ದರನ್ನು ತೆಗೆದುಕೊಳ್ಳುತ್ತಾರೆ, ದೊಂಬರನ್ನು ತೆಗೆದುಕೊಳ್ಳುತ್ತಾರೆ, ದರ್ವೇಸಿಗಳನ್ನು ತೆಗೆದುಕೊಳ್ಳುತ್ತಾರೆ, ಸವಿತಾ ಸಮಾಜವನ್ನು ತೆಗೆದುಕೊಳ್ಳುತ್ತಾರೆ. ಬೈಗುಳಗಳಿಗೂ ಇದೇ ಸಮುದಾಯಗಳು ಇವರಿಗೆ ಬೇಕಾ?” ಎಂದು ಪ್ರಶ್ನಿಸಿದರು.

“ಆ ಸಮುದಾಯಗಳ ಬಗ್ಗೆ ಇವರಿಗೆ ಸ್ಪಷ್ಟವಾದ ಅರಿವು ಹಾಗೂ ಗೌರವ ಇರಬೇಕು. ಇಲ್ಲದಿದ್ದರೆ ಜಾತಿ ಅಹಂಕಾರದಿಂದ ಹೀಗೆ ಮಾತನಾಡುತ್ತಾರೆ. ಸೋಮಣ್ಣ ಅವರ ಅವರ ಹೇಳಿಕೆ ಜಾತಿ ನಿಂದನೆಯ ಅಡಿಯಲ್ಲಿ ಬರುತ್ತದೆ” ಎಂದರು.

‘ಸಹಜವಾಗಿ ಸುಡುಗಾಡುಸಿದ್ದರು ತಪ್ಪು ಮಾಡಿತ್ತಾರೆ ನಾವು ಅದನ್ನು ಸರಿಪಡಿಸಿದ್ದೇವೆ’ ಎಂಬ ಅರ್ಥ ಸೋಮಣ್ಣನವರ ಹೇಳಿಕೆಯಲ್ಲಿದೆ. ಇದರ ಮೂಲಾರ್ಥ ‘ಸುಡುಗಾಡುಸಿದ್ದರು ಸದಾ ತಪ್ಪು ಮಾಡುವವರು’ ಎಂದಾಗುತ್ತದೆ. ಹೀಗೆ ಒಂದು ಇಡೀ ಸಮುದಾಯವನ್ನು ತಪ್ಪಿತಸ್ಥರು ಎಂದು ಪರಿಗಣಿಸಿ ಕಟಕಟೆಯಲ್ಲಿ ನಿಲ್ಲಿಸಿರುವ ಸೋಮಣ್ಣನವರ ಹೇಳಿಕೆ ಅಕ್ಷಮ್ಯವಾದುದು ಎಂದು ಅಭಿಪ್ರಾಯಪಟ್ಟಿದ್ದಾರೆ.

“ಒಬ್ಬ ಸಚಿವರಾಗಿ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಸರ್ಕಾರಿ ಆಡಳಿತಕ್ಕೆ ಬಂದಿರುವ ಮಂತ್ರಿಗೆ ಸಂವಿಧಾನದತ್ತವಾಗಿ ಈ ದೇಶದ ಸಭ್ಯ ನಾಗರಿಕರೆಂದು ಪರಿಗಣಿಸಲ್ಪಟ್ಟ ಇಡೀ ಒಂದು ಸಮುದಾಯವನ್ನೇ ತಪ್ಪಿತಸ್ಥರೆಂದು ಅಪಾದಿಸಿ ಹೇಳಿಕೆ ನೀಡಿರುವುದು ಆ ವ್ಯಕ್ತಿಯ ಅರಿವುಗೇಡಿತನ ಮತ್ತು ದುಷ್ಟತನವನ್ನು ತೋರುತ್ತದೆ” ಎಂದು ಟೀಕಿಸಿದ್ದಾರೆ.

ನಾನುಗೌರಿ.ಕಾಂ ಜೊತೆ ಮಾತನಾಡಿದ ಸುಡುಗಾಡುಸಿದ್ದ ಸಮುದಾಯದ ಸಾಮಾಜಿಕ ಕಾರ್ಯಕರ್ತ ಮಂಜುನಾಥ ಕಡೂರು, “ಸೋಮಣ್ಣ ಅವರ ಮೇಲೆ ಗೌರವವಿದೆ. ಅತ್ಯಂತ ಶೋಷಿತ ಸಮುದಾಯದ ಕುರಿತು ಯಾಕೆ ಹೀಗೆ ಮಾತನಾಡುತ್ತಾರೆ. ಇದು ನೋವು ತಂದಿದೆ. ಸೋಮಣ್ಣ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದೆವು. ಆದರೆ ನಮ್ಮ ಆಗ್ರಹಕ್ಕೆ ಬೆಲೆಯನ್ನೇ ನೀಡಲಿಲ್ಲ. ಹೀಗಾಗಿ ಆಯೋಗಕ್ಕೆ ದೂರು ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗಳನ್ನು ನಡೆಸಲಿದ್ದೇವೆ” ಎಂದು ಎಚ್ಚರಿಸಿದ್ದಾರೆ.


ಇದನ್ನೂ ಓದಿರಿ: ಗುಜರಾತ್: ಮದುವೆಯಲ್ಲಿ ಸಾಂಪ್ರದಾಯಿಕ ಪೇಟ ಧರಿಸಿದ ದಲಿತರ ಮೇಲೆ ಸವರ್ಣೀಯರಿಂದ ಹಲ್ಲೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ರಾಜಕೀಯ ವೆಕ್ತಿಗಳಿಗೆ ಇಂತಹ ಸಮುದಾಯದ ಬಗ್ಗೆ ಮಾತಿಗೂ ಹೀಯಾಳಿಸುವ ನೀಚ ರಾಜಕಾರಣಿ ಗೇ ಧಿಕ್ಕಾರ ಚುನಾವಣೆ ಸಮಯದಲ್ಲಿ ಜನಸಾಮಾನ್ಯರು ಮತದಾರರು ದೇವರು ಎನ್ನುತ್ತಾರೆ ಗೆದ್ದಮೇಲೆ ಜಾತಿ ನಿಂದಿಸುತ್ತಾರೆ ಇಂತಹವರನ್ನು ಸುಮ್ಮನೆ ಬಿಡಬಾರದು 🙏🌹🌹🌹🙏ಜೈ ಸುಡುಗಾಡು ಸಿದ್ದ ಜೈ ಅಲೆಮಾರಿ ಇಂತಿ ಧನಂಜಯ ಎಸ್ ಕಲ್ಯಾಣದವರ್ ಜಿಲ್ಲಾ ಅಧ್ಯಕ್ಷರು ಕರ್ನಾಟಕ ರಾಜ್ಯ ಸುಡುಗಾಡು ಸಿದ್ದ ಮಹಾ ಸಂಘ ಬೆಂಗಳೂರು ಜಿಲ್ಲಾ ಶಾಖೆ

  2. ಸಚಿವ ವಿ ಸೋಮಣ್ಣನವರು ಸುಡುಗಾಡು ಸಿದ್ಧ ಸಮುದಾಯದ ಬಗ್ಗೆ ಅತಿ ಕೀಳಾಗಿ ಮಾತನಾಡಿ ಆ ಸಮುದಾಯದ ಜನರಿಗೆ ತುಂಬಾ ನೋವುಂಟು ಮಾಡಿದ್ದಾರೆ ಹೀಗಾಗಿ ಅವರು ಅತಿ ಶೀಘ್ರದಲ್ಲಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಇಲ್ಲವಾದರೆ ರಾಜ್ಯದ ತಾಲೂಕು ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಇಂತಿ ಹನುಮಂತ ಒಂಟೆತ್ತನವರ ರಾಜ್ಯ ಸಂಘಟನಾ ಕಾರ್ಯದರ್ಶಿ ಕರ್ನಾಟಕ ರಾಜ್ಯ ಸುಡುಗಾಡು ಸಿದ್ದ ಮಹಾಸಂಘ ಬೆಂಗಳೂರು

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...