ಉತ್ತರಪ್ರದೇಶದ ಉನ್ನಾವ್ ಜಿಲ್ಲೆಯ ರೈಲ್ವೆ ಕ್ರಾಸಿಂಗ್ ಬಳಿ ಸ್ಥಳೀಯ ಪತ್ರಕರ್ತ ಸೂರಜ್ ಪಾಂಡೆ ಶವ ಪತ್ತೆಯಾಗಿದೆ. ಕೊಲೆ ಶಂಕೆ ವ್ಯಕ್ತವಾಗಿದ್ದು, ಮಹಿಳಾ ಸಬ್ ಇನ್ಸ್‌ಪೆಕ್ಟರ್ ಮತ್ತು ಪುರುಷ ಕಾನ್‌ಸ್ಟೆಬಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಪತ್ರಕರ್ತ ಸೂರಜ್ ಪಾಂಡೆ ತಾಯಿ ಲಕ್ಷ್ಮಿ ದೇವಿ, ಮಹಿಳಾ ಇನ್ಸ್‌ಪೆಕ್ಟರ್ ಸುನೀತಾ ಚೌರಾಸಿಯಾ ಮತ್ತು ಕಾನ್‌ಸ್ಟೆಬಲ್ ಅಮರ್ ಸಿಂಗ್ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ ನಂತರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 120 ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
‘’ಅವನನ್ನು ಕೊಲೆ ಮಾಡಲಾಗಿದೆ’’ ಎಂದು ಸೂರಜ್ ಪಾಂಡೆಯ ಚಿಕ್ಕಪ್ಪ ಹೇಳಿದ್ದಾರೆ. “ಯಾರೋ ಅವನನ್ನು ಎಲ್ಲೋ ಕರೆದುಕೊಂಡು ಹೋಗಲು ಬಂದಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೆ, ಆತನನ್ನು ಕರೆದೊಯ್ಯುವ ವ್ಯಕ್ತಿ, ಕೊಲೆ ಮಾಡಿದ ವ್ಯಕ್ತಿ ಯಾರು ಎಂದು ತಿಳಿದುಬರುತ್ತದೆ ” ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಸೂರಜ್ ಪಾಂಡೆಗೆ ಇಬ್ಬರು ಬೆದರಿಕೆ ಹಾಕಿದ್ದಾರೆ ಮತ್ತು ಕೊಲೆ ಮಾಡಿದ್ದಾರೆ ಎಂದು ಕುಟುಂಬ ಆರೋಪಿಸಿದ ನಂತರ, ಮಹಿಳಾ ಎಸ್‌ಐ ಸುನೀತಾ ಚೌರಾಶಿಯಾ ಮತ್ತು ಆಕೆಯ ಚಾಲಕ ಕಾನ್‌ಸ್ಟೆಬಲ್ ಅಮರ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ” ಎಂದು ಉನ್ನಾವ್ ಎಸ್‌ಪಿ ಸುರೇಶರಾವ್ ಎ. ಕುಲಕರ್ಣಿ ತಿಳಿಸಿದ್ದಾರೆ. ಜೊತೆಗೆ ಎಸ್‌ಐ ಪತ್ರಕರ್ತರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಕುಲಕರ್ಣಿ ತಿಳಿಸಿದ್ದಾರೆ.
ಇದನ್ನೂ ಓದಿ: ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ತಂದೆ ಕೊಲೆ ಪ್ರಕರಣ: ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸೆಂಗಾರ್‌ಗೆ 10 ವರ್ಷ ಜೈಲು
ಆದರೂ, ಮೇಲ್ನೋಟಕ್ಕೆ ಇದು ಆತ್ಮಹತ್ಯೆಯ ಪ್ರಕರಣವೆಂದು ತೋರುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಶವ ಮರಣೋತ್ತರ ವರದಿಯಲ್ಲಿ ಕಂಡುಬರುವ ಗಾಯಗಳು ರೈಲು ಅಪಘಾತದಲ್ಲಿ ಉಂಟಾಗಿರುವಂತಿವೆ ಎಂದು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಲಲಿತ್‌ಪುರದ ಗ್ರಾಮ ಪ್ರಧಾನ್ ಅವರ ಕುಟುಂಬವು ನರೇಗಾ ಕೆಲಸಕ್ಕೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ಬದಲು ಅಕ್ರಮವಾಗಿ ಯಂತ್ರಗಳನ್ನು ಬಳಸುತ್ತಿರುವ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ಲಲಿತ್‌ಪುರದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ.
ನ್ಯೂಸ್ ಪೋರ್ಟಲ್ ಬುಂದೇಲ್‌ಖಂಡ್ ಟೈಮ್ಸ್ ಟಿವಿಯನ್ನು ನಡೆಸುತ್ತಿರುವ ಮತ್ತು ಇತರ ಪತ್ರಿಕೆಗಳಿಗೆ ಸ್ಟ್ರಿಂಜರ್ ಆಗಿ ಕೆಲಸ ಮಾಡುತ್ತಿರುವ ವಿನಯ್ ತಿವಾರಿ ಅವರ ಮೇಲೆ ಹಲ್ಲೆ ಮಾಡಲಾಗಿದ್ದು, ಹಲ್ಲೆಯಿಂದ ಅವರ ಕೈ ಮತ್ತು ಕಾಲಿನಲ್ಲಿ ಮುರಿತ ಉಂಟಾಗಿದೆ. ಜೊತೆಗೆ ದೇಹದ ತುಂಬಾ ಮೂಗೇಟುಗಳು ಉಳಿದಿವೆ.
ಹಲ್ಲೆ ಮತ್ತು ಕೊಲೆ ಯತ್ನಕ್ಕಾಗಿ ಪೊಲೀಸರು ಸ್ಥಳೀಯ ಗ್ರಾಮ ಪ್ರಧಾನ್, ಅವರ ಪತಿ ಮತ್ತು ಮೂವರು ಗಂಡು ಮಕ್ಕಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.


